X

ಏನಾದರಾಗಲಿ ಆ ಒಂದು ಪಂದ್ಯ ನಮ್ಮದಾಗಲಿ!

ಆ ಒಂದು ಪಂದ್ಯಕ್ಕಾಗಿ ವಿಶ್ವದೆಲ್ಲೆಡೆ ಇರುವ ಭಾರತೀಯ ಕ್ರಿಕೆಟ್ ಪ್ರೇಮಿಗಳು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಮೈದಾನದಲ್ಲಿ ಆ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಅದೆಷ್ಟೇ ದೊಡ್ಡ ಮೊತ್ತವನ್ನೂ ನೀಡಲು ತಯಾರಾಗಿರುತ್ತಾರೆ. ಸದಾ ಧಾರವಾಹಿಗಳನ್ನು ತೋರಿಸಿ ಬೇಸೆತ್ತ ಮನೆಯ ಟಿವಿಗಳು ಆ ಪಂದ್ಯವನ್ನು ವೀಕ್ಷಕರಿಗೆ ತೋರಿಸಲು ಹಾತೊರೆಯುತ್ತಿರುತ್ತವೆ. ಹಳ್ಳಿ ಮತ್ತು ನಗರಗಳಲ್ಲಿ ಜನಸಂದಣಿ ಇರೋ ಕಡೆಗಳಲ್ಲಿ ದೊಡ್ದ ಪರದೆಯಲ್ಲಿ ಪಂದ್ಯದ ನೇರ ಪ್ರಸಾರ ಮಾಡಲು ಸಿದ್ಧತೆಯೂ ಮಾಡಲಾಗುತ್ತದೆ. ಪಂದ್ಯವನ್ನು ವೀಕ್ಷಿಸಲು ಶಾಲಾ, ಕಾಲೇಜಿನ ಮಕ್ಕಳು ಮಾಸ್ ಬಂಕ್ ಮಾಡುತ್ತಾರೆ. ರಾಜಕೀಯ ಮುಖಂಡರುಗಳೂ ತಮ್ಮ  ರಾಜಕೀಯ ಚಟುವಟಿಕೆಗಳನ್ನು ಆ ಒಂದು ದಿನದ ಮಟ್ಟಿಗೆ ಮೊಟಕುಗೊಳಿಸಿ ಪಂದ್ಯವನ್ನು ನೋಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಕೆಲವು ಕಾರ್ಪೋರೇಟ್ ಕಂಪನಿಗಳ ಕೆಫೆಟೇರಿಯಾಗಳಲ್ಲಿರುವ ಟಿವಿಗಳಲ್ಲಿ ಮ್ಯಾಚ್ ಹಾಕುತ್ತಾರೆ. ದೇಶದ ಗಡಿಯನ್ನು ಹಗಲಿರುಳೂ ಕಾಯುತ್ತಿರುವ ಯೋಧರೂ ಭಾರತ ಆ ಒಂದು ಪಂದ್ಯದಲ್ಲಿ ಜಯಶಾಲಿಯಾಗಲಿ ಎಂದು ಹಾರೈಸುತ್ತಾರೆ. ಭಾರತ ಗೆಲ್ಲಲಿ ಎಂದು ಹೋಮ ಹವನಗಳು ನಡೆಯುತ್ತವೆ. ಟಿವಿಯಲ್ಲಿ ಪಂದ್ಯವನ್ನು ನೋಡಲಾಗದವರು ರೇಡಿಯೋದಲ್ಲಿ ಬರುವ ಕಾಮೆಂಟರಿ ಕೇಳಲು ಹಾತೊರೆಯುತ್ತಿರುತ್ತಾರೆ. ಕ್ರಿಕ್ ಇನ್ಫೋ, ಕ್ರಿಕ್ ಬಜ್ ಮುಂತಾದ ಲೈವ್ ಸ್ಕೋರ್ ಕೊಡೋ ವೆಬ್ಸೈಟ್ ಗಳ ಟ್ರಾಫಿಕ್ ಗಗನಕ್ಕೇರುತ್ತದೆ. ಟ್ವಿಟರ್, ಫೇಸ್‌ಬುಕ್‌ ಪಂದ್ಯದ ಕುರಿತಾದ ಪೋಸ್ಟ್‌ಗಳಿಂದ ಗಿಜಿಗುಡುತ್ತಿರುತ್ತದೆ‌. ಕೆಲವೊಂದು ಹೋಟೆಲ್‌ಗಳು ಮ್ಯಾಚ್ ಇರುವುದರಿಂದ ಗ್ರಾಹಕರನ್ನು ಆಕರ್ಷಿಸಲು ಊಟದ ಜೊತೆ ಕ್ರಿಕೆಟ್ ವ್ಯವಸ್ಥೆಯನ್ನೂ ಮಾಡುತ್ತವೆ. ಪಂದ್ಯಕ್ಕಾಗಿ ದೊಡ್ದ ಮಟ್ಟದ ಬೆಟ್ಟಿಂಗ್ ಕೂಡಾ ಎಗ್ಗಿಲ್ಲದೇ ನಡೆಯುತ್ತದೆ. ಕ್ರಿಕೆಟ್ ಬಗ್ಗೆ ಗೊತ್ತಿರುವ ಮೂರರ ಕಂದಮ್ಮನಿಂದ ಹಿಡಿದು ತೊಂಬತ್ತರ ಅಜ್ಜಂದಿರ ವರೆಗೆ ಎಲ್ಲರೂ ಬಹಳ ಉತ್ಸಾಹದಿಂದ ಕಾಯುತ್ತಿರುವ ಪಂದ್ಯ ಅದು.!!

ಹೌದು…. ಇಂಡೋ ಪಾಕ್ ಕ್ರಿಕೆಟ್ ಅಂದರೆ ಕ್ರಿಕೆಟ್ ಪ್ರೇಮಿಗಳ ಮನಸ್ಸಲ್ಲಿ ಉಂಟಾಗುವ ಉನ್ಮಾದ ಮತ್ತು ಢವ ಢವ ಅಷ್ಟಿಷ್ಟಲ್ಲ. ಪಾಕಿಸ್ತಾನದ ಜೊತೆ ಮ್ಯಾಚ್ ಅಂದರೆ ಕ್ರಿಕೆಟ್ ಅಭಿಮಾನಿಗೆ ಆ ದಿನ ಹಬ್ಬದಂತೆ. ಕಳೆದ ವರ್ಷದ ಟಿ20 ವಿಶ್ವಕಪ್ ಪಂದ್ಯಾವಳಿಯವರೆಗೂ ಹಲವು ಬಾರಿ ಭಾರತ ಪಾಕಿಸ್ತಾನ ಪರಸ್ಪರ ಸೆಣೆಸಾಡಿವೆ. ಭಾರತ ಪಾಕಿಸ್ತಾನ ಪಂದ್ಯ ಎಂದರೆ, ಕೊನೇ ಕ್ಷಣದ ವರೆಗೂ ರೋಚಕ ಕದನವಾಗುವುದು ಪಕ್ಕಾ! ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಕುರ್ಚಿಯ ತುದಿಯಲ್ಲಿ ಕುಳಿತು ಒಂದು ಎಸೆತವೂ ಬಿಡದಂತೆ ವೀಕ್ಷಿಸುವ ಗಮ್ಮತ್ತೇ ಬೇರೆ! ಸಧ್ಯದ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹಳಸಿರುವುದರಿಂದ ಕೇವಲ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗಳಂತಹ ಪಂದ್ಯಾವಳಿಗಳಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ಎದುರು ಬದುರಾಗಲು ಸಾಧ್ಯ. ಇದೀಗ ಚಾಂಪಿಯನ್ಸ್ ಟ್ರೋಫಿಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ಪಾಕ್ ಭಾನುವಾರ ಸೆಣೆಸಾಡಲಿದೆ. ಮತ್ತೊಂದು ಹೈ ವೋಲ್ಟೇಜ್ ಕದನಕ್ಕೆ ವೇದಿಕೆ ಸಜ್ಜಾಗಿದೆ.

ಭಾರತ ಮತ್ತು ಪಾಕ್ ನಡುವಿನ ಪಂದ್ಯವೆಂದರೆ ಮೈದಾನದಲ್ಲಿ ಕೇವಲ ಬಾಲ್ ಮತ್ತು ಬ್ಯಾಟ್ ಗಳ ನಡುವೆ ಮಾತ್ರ ಸಂಘರ್ಷವಲ್ಲ. ಎರಡೂ ದೇಶದ ಕ್ರಿಕೆಟಿಗರು  ಸ್ಲೆಡ್ಜಿಂಗ್ ನಲ್ಲಿ ಪ್ರವೀಣರು. ಆಟದಲ್ಲಷ್ಟೇ ಅಲ್ಲ ಸ್ಲೆಡ್ಜಿಂಗ್ನಲ್ಲಿ ನಮ್ಮವರು ಒಂದು ಕೈ ಮೇಲೇ! ವೆಂಕಟೇಶ್ ಪ್ರಸಾದ್- ಅಮೀರ್ ಸೋಹೈಲ್, ಗಂಭೀರ್- ಉಮರ್ ಅಕ್ಮಲ್, ಗಂಭೀರ್-ಆಫ್ರಿದಿ, ಹರ್ಭಜನ್ ಮತ್ತು ಅಖ್ತರ್, ಇಶಾಂತ್ ಶರ್ಮಾ ಮತ್ತು ಕಮ್ರಾನ್ ಅಕ್ಮಲ್ ನಡುವಿನ ಜಗಳ ನೆನಪಿನಲ್ಲಿ ಉಳಿಯುವಂತದ್ದು. ಹಳಬರಾರೂ ಈಗ ಟೀಮಿನಲ್ಲಿ ಇಲ್ಲವಾದರೂ ಕೊಹ್ಲಿ ನೇತೃತ್ವದ ಬಿಸಿ ರಕ್ತದ ಹುಡುಗರು ಪಾಕಿಗೆ ಎಲ್ಲಾ ವಿಭಾಗಗಳಲ್ಲೂ ಟಾಂಗ್ ಕೊಡಲು ಸಶಕ್ತರು.‌ ಮಿಯಾಂದಾದ್ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆದು ಪಾಕಿಸ್ತಾನವನ್ನು ಗೆಲ್ಲಿಸಿದ್ದು, ಅದೇ ಮಿಯಾಂದಾದ್ ಕಿರಣ್ ಮೊರೆಯನ್ನು ವಿಚಿತ್ರವಾಗಿ ಕಿಚಾಯಿಸಿದ್ದು, ಭಾರತದ ವಿರುದ್ಧ ಸಯೀದ್ ಅನ್ವರ್ 196 ರನ್ ಹೊಡೆದದ್ದು, ಅಫ್ರಿದಿ ವೇಗದ ಶತಕ ಬಾರಿಸಿದ್ದು, ಶೋಯಬ್ ಆಖ್ತರ್ನ ಬೆಂಕಿಯುಂಡೆಯಂತಹ ಎಸೆತಗಳಿಗೆ ಸೆಹ್ವಾಗ್ ಮತ್ತು ಸಚಿನ್ ಅಟ್ಟಾಡಿಸಿ ಹೊಡೆಯುತ್ತಾ ಇದ್ದದ್ದು, ಅನಿಲ್ ಕುಂಬ್ಳೆ ಹತ್ತು ವಿಕೆಟ್ ಪಡೆದದ್ದು, ಸೆಹ್ವಾಗ್ 309. ರನ್ ಚಚ್ಚಿದ್ದು, ಧೋನಿ 148 ರನ್ ಹೊಡೆದದ್ದು, ಶತಕಗಳ ಮೇಲೆ ಶತಕಗಳನ್ನು ಸಿಡಿಸಿ ಪಾಕಿಸ್ತಾನಕ್ಕೆ ಕನಸಿನಲ್ಲಿಯೂ ಕಾಡುತ್ತಿದ್ದ ಸಚಿನ್ ತೆಂಡೂಲ್ಕರ್ ಅತ್ಯಧ್ಭುತ ಬ್ಯಾಟಿಂಗ್  ಮಾಡುತ್ತಿದ್ದದ್ದು, ಮತ್ತು ಈಗಿನ ನಾಯಕ ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಪಾಕಿನ ವಿರುದ್ಧ ಉತ್ತಮ ಪ್ರದರ್ಶನ ತೋರಿಸಿದ್ದು ಇವೆಲ್ಲಾ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ನ ಕೆಲವು ಹೈಲೈಟ್ಸ್‌ಗಳು.

1986ರಲ್ಲಿ ಶಾರ್ಜಾದಲ್ಲಿ ನಡೆಯುತ್ತಿದ್ದ ಏಷ್ಯಾ ಕಪ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು ಬೇಕಾಗಿದ್ದದ್ದು ೪ ರನ್. ಚೇತನ್ ಶರ್ಮಾ ಹಾಕಿದ ಫುಲ್ ಟಾಸ್ ಎಸೆತವನ್ನು ಜಾವೇದ್ ಮಿಯಂದಾದ್ ಬೌಂಡರಿಯಾಚೆಗೆ ಸಿಕ್ಸ್ ಆಗಿ ಹೊಡೆಯುತ್ತಾನೆ. ಭಾರತೀಯ ಅಭಿಮಾನಿಗಳು  ದುಃಖದ ಮಡುವಿನಲ್ಲಿ ಮುಳುಗುತ್ತಾರೆ! 1996ರ ವಿಶ್ವಕಪ್‌ನ ಪಂದ್ಯದಲ್ಲಿ ವೆಂಕಟೇಶ್ ಪ್ರಸಾದ್ ಎಸೆತವನ್ನು ಬೌಂಡರಿಗಟ್ಟಿದ ಸೊಹೈಲ್ ಹೋಗಿ ಚೆಂಡನ್ನು ತೆಗೆದುಕೊಂಡು ಬಾ ಎನ್ನುವಂತೆ ಸನ್ನೆ ಮಾಡಿದ್ದ. ಆದರೆ ಪ್ರಸಾದ್  ಮರು ಎಸೆತದಲ್ಲಿ ಸೊಹೈಲ್ ಲೆಗ್ ಸ್ಟಂಪ್ ಕಿತ್ತು ಹೋಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು.! ಭಾರತ ಆ ಪಂದ್ಯವನ್ನು ಗೆದ್ದಿತ್ತು! 2007ರ ಟಿ20 ವಿಶ್ವಕಪ್ ನ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾದಾಗ ಪಂದ್ಯ ಟೈ ಆಗಿತ್ತು. ರೋಚಕ ಬಾಲ್ ಔಟ್ನಲ್ಲಿ ಭಾರತ ಗೆದ್ದಿತ್ತು. ಅದೇ ಪಂದ್ಯಾವಳಿಯ ಫೈನಲಿನಲ್ಲಿಯೂ ಪಾಕ್ ಭಾರತದ ಮುಂದೆ ಮಂಡಿಯೂರಿತ್ತು. ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿತ್ತು! 2011ರ ವಿಶ್ವಕಪ್ ಸೆಮಿಫೈನಲ್‌ ನಲ್ಲಿ ಭಾರತ ಪಾಕ್ ಮುಖಾಮುಖಿಯಾಗಿದ್ದವು. ಮೊಹಾಲಿಯಲ್ಲಿ ನಡೆದಿದ್ದ ಆ ಪಂದ್ಯಕ್ಕೆ ಇಡೀ ಭಾರತವೇ ಎದುರು ನೋಡುತ್ತಿತ್ತು. ಶಾಲಾ ಕಾಲೇಜು, ಕಛೇರಿಗಳಲ್ಲಿ ಅಘೋಷಿತ ರಜೆಯ ವಾತಾವರಣ ಇತ್ತು. ಭಾರತ ಮತ್ತು ಪಾಕಿಸ್ತಾನದ ಪ್ರಧಾನಿಗಳು ಖುದ್ದು ಮೈದಾನದಲ್ಲಿ ಹಾಜರಿದ್ದು ಪಂದ್ಯ ವೀಕ್ಷಿಸಿದ್ದರು. ವಹಾಬ್ ರಿಯಾಜ್ ಮಾರಕ ದಾಳಿಗೆ ಭಾರತದ ಮಧ್ಯಮ ಕ್ರಮಾಂಕ ಕುಸಿದರೂ ಸಚಿನ್ ತೆಂಡೂಲ್ಕರ್ 85 ರನ್ ಮಾಡಿ ಭಾರತದ ಮೊತ್ತ 260 ಆಗುವಂತೆ ಮಾಡಿದ್ದರು. ಭಾರತದ ಬೌಲರ್‌ಗಳ ಸಾಂಘಿಕ ಪ್ರಯತ್ನ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿತ್ತು. ಅದರಲ್ಲೂ ಅಫ್ರಿದಿ ವಿಕೆಟ್ ಕಿತ್ತಾಗ ಹರ್ಭಜನ್ ಘರ್ಜನೆಯ ರೂಪದಲ್ಲಿ ಮಾಡಿದ ಸಂಭ್ರಮಾಚರಣೆ ಈಗಲೂ ಕಣ್ಣಮುಂದಿದೆ. ಹೀಗೆ ಹೇಳುತ್ತಾ ಹೋದರೆ ಭಾರತ ಪಾಕ್ ಕ್ರಿಕೆಟ್ ಇತಿಹಾಸದ ರೋಚಕ ಮಜಲುಗಳು ಒಂದೊಂದೇ ಹೊರಬರುತ್ತಾ ಹೋಗುತ್ತದೆ.

ಭಾರತ ಪಾಕಿಸ್ತಾನದ ವಿರುದ್ಧ ಪಂದ್ಯ ಗೆದ್ದಾಗ ಭಾರತೀಯರಾದ ನಾವುಗಳು ಸಂಭ್ರಮಿಸುವ ಪರಿ ಬೇರೆಯದೇ. ಪಾಕಿಸ್ತಾನ ಯಾವಾಗಲೂ ಕಾಲು ಕೆರೆದುಕೊಂಡು ನಮ್ಮ ತಂಟೆಗೆ ಬರುವುದು ಮತ್ತು ವಿನಾಕಾರಣ ಗೋಳುಹೊಯ್ದುಕೊಳ್ಳುವುದು ಇದರ ಬಹುಮುಖ್ಯ ಕಾರಣಗಳಲ್ಲೊಂದು. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿನ ವಿರುದ್ಧ ಭಾರತದ ಸಾಧನೆ ಅಷ್ಟೇನೂ ಚೆನ್ನಾಗಿಲ್ಲ. ಹಾಲಿ ಚಾಂಪಿಯನ್ ಮತ್ತು ಬ್ಯಾಲಾನ್ಸೆಡ್ ತಂಡವಾದ್ದರಿಂದ ಈ ಸಲದ ಹಣಾಹಣಿಯಲ್ಲಿ ಭಾರತವೇ ಹಾಟ್ ಫೇವರಿಟ್! ಆದರೆ ಪಾಕಿಸ್ತಾನ ತಂಡವನ್ನು ಕಡೆಗಣಿಸುವಂತಿಲ್ಲ. ತುಂಬಾ ಜನ ಹೊಸಬರನ್ನು ಹೊಂದಿರುವ ಪಾಕ್ ಭಾರತಕ್ಕೆ ತಿರುಗೇಟು ನೀಡಲೂಬಹುದು. ಒತ್ತಡವನ್ನು ನಿಭಾಯಿಸಿ ಆಡಿದರೆ ಕೊಹ್ಲಿ ಪಡೆಗೆ ಗೆಲುವು ಕಟ್ಟಿಟ್ಟ ಬುತ್ತಿ! ವಾಟ್ಸಾಪಿನಲ್ಲಿ ಒಂದು ಮೆಸೇಜ್ ಬಂದಿತ್ತು. ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಯೊಬ್ಬ ಟಿವಿ ಕೊಳ್ಳಲು ಅಂಗಡಿಗೆ ಹೋಗಿದ್ದ‌. ದುಬಾರಿಯ ಟಿವಿ ಕೊಡಲೇ, ಅಥವಾ ಕಡಿಮೆ ಬೆಲೆಯದ್ದು ಕೊಡಲೇ ಎಂದು ಅಂಗಡಿಯವನು ಕೇಳುತ್ತಾನೆ. ಕಡಿಮೆ ಬೆಲೆಯದ್ದೇ ಕೊಡು, ಪಾಕಿಸ್ತಾನ ಸೋತರೆ ಟಿವಿ ಒಡೆದು ಹಾಕುವುದು ಪಕ್ಕಾ ಅಂತ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿ ಹೇಳುತ್ತಾನೆ. ಅವನು ಟಿವಿ ಒಡೆದು ಹಾಕುವಂತೆಯೇ ಆಗಲಿ. ಭಾರತ ಗೆಲ್ಲಲಿ.!! ಕ್ರಿಕೆಟ್‌ ನೋಡೋ ಎಲ್ಲಾ ದೇಶವಾಸಿಗಳು ಆಶಿಸೋದು ಕೂಡಾ ಏನಾದರಾಗಲಿ ಪಾಕಿಸ್ತಾನದ ಮೇಲಿನ ಪಂದ್ಯವೊಂದು ನಮ್ಮದಾಗಲಿ ಅಂತ!

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post