X

‘MODI’ಫಿಕೇಷನ್’ನ 3ನೇ ‘ವರ್ಷ’ನ್

ಕೇಂದ್ರದಲ್ಲಿ ‘ನಮೋ’ ಘೋಷ ಮೊಳಗಿ ಮೂರು ವರುಷ ಕಳೆಯಿತು. ಪ್ರಧಾನಿ ಪಟ್ಟಕ್ಕೆ ‘ನಮೋ’ ಹೆಸರು ಘೋಷಣೆಯಾಗುತ್ತಿದ್ದಂತೆ ಕೆಲವರು ವಿವಿಧ ನಮೂನೆಯ ಟೀಕೆಯ ಕೇಕೆ ಹಾಕಲಾರಂಭಿಸಿದ್ದರು. ಇತ್ತ ಜನರು ಮಾತ್ರ ಪ್ರಧಾನಿಯಾಗಿ ನಮಗೆ ನರೇಂದ್ರ ಮೋದಿಯೇ ಬೇಕೆಂಬ ಆಶಯದೊಂದಿಗೆ ಕಮಲ ಅರಳಿಸುವ ಮೂಲಕ ಮೋದಿ ಆಡಳಿತಕ್ಕೆ ಭದ್ರ ಪೀಠಿಕೆ ಹಾಕಿಬಿಟ್ಟಿದ್ದರು. ಆದಾಗ್ಯೂ ವ್ಯಕ್ತಿಗತ ದ್ವೇಷದ ತಮ್ಮ ನವೆಯನ್ನು ತೀರಿಸಿಕೊಳ್ಳಲೋಸುಗ ಇಲ್ಲದ ನೆವಗಳನ್ನೆಲ್ಲಾ ಹುಡುಕಿ ಕೇಂದ್ರ ಸರಕಾರದ ಮೇಲೆ ಮುಗಿಬೀಳುವ ಪ್ರಯತ್ನಗಳೂ ನಡೆದವು.

ಅಯ್ಯೋ ಮೋದಿ ಪ್ರಧಾನಿಯಾದರೆ ದೇಶದಲ್ಲೆಲ್ಲಾ ಗಲಭೆಯೇಳುತ್ತದೆಂಬ ಭೀತಿಯೆಬ್ಬಿಸಿ ಲಬೋ ಲಬೋ ಎಂದು ಅರಚಾಡಿದವರು ಹಾಗೂ ದಳ್ಳುರಿ ಎದ್ದೀತೆನ್ನುತ್ತಾ ತಮ್ಮ ಹೊಟ್ಟೆಯುರಿಯನ್ನು ತೋಡಿಕೊಂಡವರೆಲ್ಲಾ ಈಗ ತಾವೇ ತೋಡಿದ ಗುಂಡಿಗೆ ಬಿದ್ದು ತಡವರಿಸುತ್ತಿದ್ದಾರಷ್ಟೇ! ಏಕೆಂದರೆ ಒಳಗೇ ಇದ್ದು ತಮ್ಮ ಬಳಗವನ್ನೆಲ್ಲಾ ಎತ್ತಿಕೊಟ್ಟುವ ಇಂಥ ಯಾವುದೇ ಮಾನವ ವೈರಸ್’ನ ದಾಳಿಗೂ ಆಡಳಿತದ ಸಿಸ್ಟಮ್ ಮಾತ್ರ ಫೇಲ್ಯೂರ್ ಆಗಿಲ್ಲ. ಎನ್ನುವುದೇ ಸಮಾಧಾನ. ಜನತೆಯ ವಿಶ್ವಾಸ, ಭರವಸೆ ಹಾಗೂ ನಂಬಿಕೆಗಳೆಂಬ anti virusನ ಮುಂದೆ ಇವುಗಳ ಆಟ ನಡೆಯದು. ಆದ್ದರಿಂದಲೇ ವರ್ಷದಿಂದ ವರ್ಷಕ್ಕೆ ಆಡಳಿತದ ವೈಖರಿ ಹೊಸ ಹೊಸ ವರ್ಷನ್’ಗೆ ಅಪ್ಡೇಟ್ ಆಗುತ್ತಲೇ ಇದೆ. ಜೊತೆ ಜೊತೆಗೆ ಹೊಸ ಹೊಸ ಫೀಚರ್’ಗಳು ಜನರಿಗೆ ಲಭ್ಯವಾಗುತ್ತಿದೆ. ಸದ್ಯ ಇದನ್ನು ‘MODI’ಫಿಕೇಷನ್’ನ ಮೂರನೇ ‘ವರ್ಷ’ನ್ ಎನ್ನಬಹುದು.

ಜನರು ‘ಅಚ್ಛೇ ದಿನ್’ದ ನಿರೀಕ್ಷೆಯಲ್ಲಿದ್ದರೆ, ಕೆಲವರು ಅಚ್ಛೇ ದಿನ್ ಬಂದೇ ಬಿಟ್ಟಿತು ಎನ್ನುತ್ತಾ ಎಲ್ಲದಕ್ಕೂ ತುಸು ಹೆಚ್ಚೇ ಅಚ್ಚರಿಯಿಂದ ಸಂಭ್ರಮಿಸುತ್ತಿದ್ದಾರೆ. ಇನ್ನು ಕೆಲವರು ಎಲ್ಲಿದೆ ‘ಅಚ್ಛೇ ದಿನ್’ ಎನ್ನುತ್ತಾ ಪೆಚ್ಚು ಮೋರೆಯೊಂದಿಗೆ ಕೇಂದ್ರ ಸರ್ಕಾರದೆಡೆಗೆ ಚುಚ್ಚು ಮಾತುಗಳ ಈಟಿಯನ್ನೆಸೆಯುತ್ತಿದ್ದಾರೆ. ಅದರಲ್ಲಿ ಒಂದಷ್ಟು ಸತ್ಯಾಂಶವೂ ಇಲ್ಲದಿಲ್ಲ ಬಿಡಿ. ಹೇಗಂತೀರಾ… ಇಲ್ಲಿ ಕೇಳಿ.

ಕೆಲವು ಮಾಧ್ಯಮಗಳದ್ದು ಒಂದೇ ಗೋಳು. ಒಂದೇ ಒಂದು ಭಿನ್ನಮತದ ಕ್ಷಿಪ್ರ ಬೆಳವಣೆಗೆಗಳಿಲ್ಲ, ವಾರ ತಿಂಗಳು ಪೂರ್ತಿ ಅದದೇ ಚರ್ಚೆ ಮಾಡೋಕೆ ಅಂತ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ಇಲ್ಲವೇ ಇಲ್ಲ. ನಾವೂ ಎಷ್ಟು ದಿನ ಅಂತ ವಿಪಕ್ಷಗಳ ಹುಚ್ಚಾಟವನ್ನೇ ಬಿತ್ತರಿಸುವುದು. ಇನ್ನು ನಮಗೆಲ್ಲಿಯ ಅಚ್ಛೇ ದಿನ್ ಎನ್ನುವುದು ಅವುಗಳ ಪ್ರಶ್ನೆ.

ಅ(ಲ್ಪ)ಸಂಖ್ಯಾತರ ನಾಯಕರೆಂದು ಫೋಸು ಹೊಡೆಯುತ್ತಾ ಮುಗ್ಧ ಮುಸ್ಲಿಂರನ್ನು ವಂಚಿಸುತ್ತಲೇ ಬಂದವರದ್ದು ಇನ್ನೊಂದು ರೋಧನೆ. ಉಚಿತ ಕೊಡುಗೆ ಹಾಗೂ ಸೌಲಭ್ಯಗಳ ಬಳುವಳಿಯನ್ನಷ್ಟೇ ಬಯಸಿದ್ದವರಿಗೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್’ಗೇ ತಲಾಖ್ ನೀಡಲು ಮುಂದಾಗಿದ್ದು ಬವಳಿ ಬಂದಂತಾಗಿದೆ. ನಮ್ಮ ಕಾನೂನೇ ನಮಗೆ ಮೇಲು ಎನ್ನುವ ಇಂಥ ಕೆಲವು ಹುಸಿ ನಾಯಕರು ಹಾಗೂ ಅವರ ಹಿಂಬಾಲಕರ ಪಾಲಿಗೆ ಅಚ್ಛೆ ದಿನದ ಹಚ್ಚೆ ಅಸ್ಪಷ್ಟವೇ ಸರಿ. ಮೊಸರಲ್ಲಿ ಕಲ್ಲು ಹುಡುಕುವ ಜಾಯಮಾನದ ಕೆಲವರು ಕಲ್ಲುತೂರುತ್ತಲೇ ಕಾಶ್ಮೀರದ ನೆಮ್ಮದಿಗೆ ಕೆಸರು ಕಲ್ಲು ಹಾಕುತ್ತಿದ್ದೇವೆಂಬ ಭ್ರಮೆಯಲ್ಲಿದ್ದರು. ಅವರು ಕಲ್ಲೆಸೆದದ್ದು ಭಾರತದ ಶಾಂತಿಯ ಕೊಳಕ್ಕೆ ಎನ್ನುವುದನ್ನು ಅರಿತ ಸರ್ಕಾರ, ಅವರು ಇಲ್ಲಿ ಎಸೆದ ಕಲ್ಲಿಗೆ ಪ್ರತಿಯಾಗಿ ಪಾಕಿಸ್ಥಾನದಿಂದ ಹಣ್ಣು ಬಂದು ಬೀಳುತ್ತಿರುವ ಸತ್ಯಾಂಶವನ್ನು ಹೊರಗೆಡಹಿದ ಮೇಲೆ ನಮಗೆಲ್ಲಿಯ ಅಚ್ಛೇ ದಿನ್ ಎನ್ನುವುದು ಆ ಹೋ(ತೂ)ರಾಟಗಾರರ ವರಾತ.

ಇನ್ನು ಇಂಥ ಎಷ್ಟೇ ‘ವರ್ಷ’ನ್ ಹೋದರೂ ನಮ್ಮ ಪಾಲಿಗೆ ಅಚ್ಛೇ ದಿನ್ ಬರದೇನೋ ಎಂಬ ಗಾಢ ಚಿಂತೆ ಕಾಂಗ್ರೆಸ್’ನದ್ದು. ಮನಮೋಹನ್ ಸಿಂಗ್ ಮಾತನಾಡಿದ್ದಷ್ಟೇ ಸದ್ಯಕ್ಕೆ ಕಾಂಗ್ರೆಸ್ ಪಾಲಿನ ಅಚ್ಛೇ ದಿನ್ ಎನ್ನಬಹುದು.

ಓವರ್ ಡೋಸ್: ಬೈಕಿನ ಮೇಲೆ ಕುಳಿತೇ ಕಸವನ್ನು ಬುಟ್ಟಿಯ ಕಡೆಗೆ ಎಸೆದು ಅದು ಎಲ್ಲಿ ಬಿತ್ತೆಂದೂ ನೋಡದೇ ಮುನ್ನಡೆದವನು, ರಸ್ತೆಯ ಪಕ್ಕದಲ್ಲಿದ್ದ ಕಸದ ರಾಶಿಯನ್ನು ನೋಡಿ ” ‘ಅಚ್ಛೇ ದಿನ್’ ಅಂತೆ, ಸ್ವಚ್ಛ ಭಾರತ್ ಅಂತೆ, ಎಲ್ಲಿದೆ” ಎಂದು ಮೂಗುಮುರಿದ.

ಚಿತ್ರಕೃಪೆ: ಇಂಟರ್’ನೆಟ್

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post