X

೬೦. ಜಗವೊಂದೆ ಬೊಮ್ಮನ ಶ್ವಾಸ, ದೇಶ-ಕಾಲ ಮನುಕುಲ ವಿನ್ಯಾಸ..

ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ |

ಕಾಶಿಯಾ ಶಾಸ್ತ್ರಗಳನಾಕ್ಸ್ ಫರ್ಡಿನವರು ||

ದೇಶಕಾಲವಿಭಾಗ ಮನದ ರಾಜ್ಯದೊಳಿರದು |

ಶ್ವಾಸವದು ಬೊಮ್ಮನ ದು – ಮಂಕುತಿಮ್ಮ || ೬೦ ||

ಜ್ಞಾನಕ್ಕೆ ದೇಶ, ಕಾಲಗಳ ಸೀಮೆಯಾಗಲಿ, ಗಡಿಯಾಗಲಿ ಇಲ್ಲವೆನ್ನುವುದನ್ನು ಪ್ರತಿಬಿಂಬಿಸುವ ಈ ಪದ್ಯ ಜ್ಞಾನಾರ್ಜನೆಯ ಪ್ರಕ್ರಿಯೆ ಪುರಾತನ ಕಾಲದಿಂದಲು ಜಗದೆಲ್ಲೆಡೆ ಹರಡಿಕೊಂಡಿರುವ ಬಗೆಯತ್ತ ಕುತೂಹಲದ ನೋಟ ಬೀರುತ್ತದೆ. ಇಲ್ಲೆ ದೆಹಲಿಯಲ್ಲಿ ಕೂತು ಗ್ರೀಸಿನ ಕಥೆ, ಕಾವ್ಯಗಳನ್ನೋದುವ ಜನರಿರುವ ಹಾಗೆ, ಆಕ್ಸ್ಫರ್ಡಿನಲ್ಲಿ ಕೂತು ಕಾಶಿಯ ಶಾಸ್ತ್ರಗ್ರಂಥಗಳನ್ನೋದುವ ಜನರು ಉಂಟು. ಎರಡೂ ಮಾನವನ ಅದಮ್ಯ ಕುತೂಹಲ, ಜ್ಞಾನದಾಹಕ್ಕೆ ಉದಾಹರಣೆಯಾಗಿ ನಿಲಬಲ್ಲ ಸಂಕೇತಗಳು. ಆದರೆ ಆ ಸಂಕೇತವನ್ನು ಮೀರಿದ ಮತ್ತೊಂದು ಪ್ರಮುಖ ತುಡಿತ, ಎಲ್ಲಾ ಮನುಜರಲ್ಲೂ ಜೀವಂತವಾಗಿರುವುದನ್ನು ಈ ಪದ್ಯದ ಆಶಯದಲ್ಲಿ ಕಾಣಬಹುದು. ಭೌತಿಕವಾಗಿ ನಾವೆಷ್ಟೆ ದೇಶ, ಕಾಲದ ನಕ್ಷೆಯಡಿ ವಿಭಾಗಿಸಿ ಗುಂಪುಗಟ್ಟಿಕೊಂಡರು ಎಲ್ಲರ ಅಂತರಾಳದ ಮನಸಿನ ಮಿಡಿತ ಒಂದೇ ರೀತಿಯದು. ಆ ಸ್ವಚ್ಛಮನದ ರಾಜ್ಯದಲ್ಲಿ ಈ ರೀತಿಯ ಬೇಧ ಭಾವಗಳಿರಲು ಎಲ್ಲಿ ಸಾಧ್ಯ? ಅದರಲ್ಲೂ ಆ ಬ್ರಹ್ಮನಿತ್ತ ಮಾನವ ಜನ್ಮದ ಪ್ರತಿಯೊಂದು ತುಣುಕು ಕಾಲದೇಶಗಳನ್ನಧಿಗಮಿಸಿದ ಒಂದೇ ಉಸಿರಿನ, ಒಂದೇ ಶ್ವಾಸದ ಮೂಲದಿಂದ ಬಂದಿದ್ದೆಂದ ಮೇಲೆ, ಅವುಗಳ ನಡುವೆ ಮೂಲಭೂತ ವ್ಯತ್ಯಾಸವಾದರು ಇರಲು ಹೇಗೆ ಸಾಧ್ಯ? ಈ ಭಾಗ, ವಿಭಾಗಗಳೆಲ್ಲ ನಾವು ಕೃತಕವಾಗಿ ನಿರ್ಮಿಸಿಕೊಂಡ ಗೋಡೆಗಳೆ ಹೊರತು ಪರಬ್ರಹ್ಮ ಸೃಷ್ಟಿಯಲ್ಲಿ ಎಲ್ಲರು ಒಂದೆ ಎನ್ನುವ ವಿಶ್ವ ಮಾನವ ಸಂದೇಶದ ಬಿನ್ನಣೆ, ಒಕ್ಕಣೆ ಇಲ್ಲಿ ಕಾಣುತ್ತದೆ.

ಇತ್ತೀಚಿನ ಜೀನೋಮ್ ಪ್ರಯೋಗಗಳ ಫಲಿತವಾಗಿ ಹೊರಬಿದ್ದ ಕುತೂಹಲಕರ ಅಂಶವೊಂದು ಗಮನಾರ್ಹ. ಮಾನವ ಜನಾಂಗ ಭೂಮಿಯ ಯಾವ ಭಾಗದಲ್ಲಿಯಾದರು ವಾಸಿಸಿಕೊಂಡಿರಲಿ, ಯಾವುದೇ ವರ್ಣ, ವರ್ಗ, ಸಂಕುಲಕ್ಕೆ ಸೇರಿರಲಿ – ಪ್ರತಿಯೊಬ್ಬರ ಡಿ.ಏನ್.ಎ ಪ್ರತಿಯನ್ನು ಹೋಲಿಸಿ ನೋಡಿದಾಗ ಕಂಡುಬರುವ ಸಾಮ್ಯತೆ ಅಸಾಧಾರಣವಾದದ್ದು. ಆ ಊಹಾತೀತವಾದ ಸಾಮ್ಯತೆಯನ್ನು ಪರಿಗಣಿಸಿ, ಇಡೀ ಮನುಕುಲ ಒಂದೇ ಬೇರಿನಿಂದ ಹೊರಟು ಹಲವು ಕವಲಾಗಿ ಹರಡಿಕೊಂಡ ರೋಚಕ ಪಯಣವೆಂದು ತರ್ಕಿಸಿದ್ದಾರೆ. ಅಂದರೆ ಮೂಲದಲ್ಲಿ ಅಸ್ತಿತ್ವದಲ್ಲಿದ್ದ ಒಂದೇ ಮನುಕುಲ ಧಾತು ವಿಕಾಸದ ವೈವಿಧ್ಯಮಯ ಪ್ರಯೋಗ ಶಾಲೆಯಲ್ಲಿ ತನ್ನ ಹಲವು ಛಾಪುಗಳನ್ನು ಒತ್ತಿಕೊಂಡಿದೆಯಷ್ಟೆ. ಹೀಗಿರುವಾಗ ಇಡೀ ಮನುಕುಲವೇ ಸೃಷ್ಟಿಮೂಸೆಯ ಒಂದೇ ಎರಕದ ಹಲವು ವಿಕಸಿತ ರೂಪ ಎನ್ನುವ ಕಲ್ಪನೆ ಸತ್ಯಕ್ಕೆ ಹತ್ತಿರವಾದದ್ದೇ. ಆ ವಿಕಾಸದ ಯಾತ್ರೆಯಲ್ಲಿ ಸೃಷ್ಟಿಯಾದ ದೇಶ, ಕಾಲ, ಆಚಾರ, ವಿಚಾರಗಳ ವಿಭಜಿತ ಸ್ವರೂಪ ಕೇವಲ ಬಾಹ್ಯರೂಪವಷ್ಟೇ. ಮಾನಸಿಕ ಸ್ತರದಲ್ಲಿರುವ ಅಂತರಂಗಿಕ ತುಡಿತಗಳು, ಭಾವನೆಗಳು, ಅವಶ್ಯಕತೆಗಳು, ವಿಚಾರಗಳು, ಸಾಮರ್ಥ್ಯಗಳು, ದೌರ್ಬಲ್ಯಗಳು – ಎಲ್ಲವು ಹೆಚ್ಚುಕಡಿಮೆ ಪ್ರತಿಯೊಬ್ಬರಲ್ಲೂ ಒಂದೇ ತರದಲ್ಲಿರುತ್ತವೆ. ಆ ಕಾರಣದಿಂದಲೇ ಕಾಣದ, ಕೇಳದ, ಅರಿಯದ ವಿಷಯಗಳು ಕೂಡ ಮೊದಲ ನೋಟದಲ್ಲೇ ಆಪ್ಯಾಯವಾಗಿ, ಆತ್ಮೀಯವೆನಿಸಿಬಿಡುವುದು. ಯಾಕೆಂದರೆ ಅಲ್ಲಿ ಕೇವಲ ಮನದ ಸಾಮ್ರಾಜ್ಯವಷ್ಟೇ ಪ್ರಸ್ತುತವೇ ಹೊರತು, ಮಿಕ್ಕಿದ್ದೆಲ್ಲ ನಗಣ್ಯ.

ಈ ಮಾನಸಿಕ ಸಾಮೀಪ್ಯ ದೇಶ ಕಾಲಗಳ ಗಡಿ ದಾಟಿಸಿ ಕುತೂಹಲದಿಂದ ಇಣುಕುವಂತೆ ಮಾಡುತ್ತದೆ. ಆ ಪ್ರಕ್ರಿಯೆಯಲ್ಲಿ ಗಳಿಸಿದ ತಿಳುವಳಿಕೆ, ಅರಿವು, ಜ್ಞಾನವನ್ನು ಗಡಿಯಾಚೆಯೂ ಹಂಚಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುತ್ತದೆ. ಹೀಗಾಗಿ ಗ್ರೀಸಿನ ಕಾವ್ಯವಾಚನವನ್ನು ದೆಹಲಿಯಲೆಲ್ಲೋ ಓದುವ ಜನರು ಕಾಣಿಸಿಕೊಳ್ಳುವಷ್ಟೇ ಸಹಜವಾಗಿ ಭಾರತೀಯ ಶಾಸ್ತ್ರಗ್ರಂಥಗಳನ್ನು ಪಾಂಡಿತ್ಯಪೂರ್ಣವಾಗಿ ಮಂಡಿಸಿ ಚರ್ಚಿಸಬಲ್ಲ ವಿದ್ವಾಂಸರು ಆಕ್ಸ್ ಫರ್ಡಿನಲ್ಲಿ ಹುಟ್ಟಿಕೊಳ್ಳುತ್ತಾರೆ. ಮೂಲಭೂತ ಸತ್ವ, ತತ್ತ್ವಗಳ ವಿಚಾರಕ್ಕೆ ಬಂದಾಗ ಅಲ್ಲಿ ಯಾವ ಕಾಲದೇಶಗಳ ಗಣನೆ ಬರುವುದಿಲ್ಲ. ಎಲ್ಲರನ್ನು , ಎಲ್ಲವನ್ನು ಸೃಜಿಸಿದ ಪರಬ್ರಹ್ಮನ ಅದೇ ಮೂಲ ಪ್ರಾಣವಾಯು ಸರ್ವರಲ್ಲೂ ಹಂಚಿಕೆಯಾಗಿರುವುದರಿಂದ, ಇದರಲ್ಲಿ ಅಚ್ಚರಿ ಪಡುವಂತದ್ದೇನು ಇಲ್ಲ. ಬದಲಿಗೆ ಎಲ್ಲದರ ಮೂಲಕಾರಣಪುರುಷ ಒಬ್ಬನೇ ಎನ್ನುವ ವಾದಕ್ಕೆ ಪುಷ್ಟಿ ನೀಡುತ್ತದೆ ಎನ್ನುತ್ತಿದ್ದಾನಿಲ್ಲಿ ಮಂಕುತಿಮ್ಮ. ಸೋಜಿಗವೆಂದರೆ ಅದಾವ ವೈಜ್ಞಾನಿಕ ವಿವರಣೆ, ವಿಶ್ಲೇಷಣೆಯ ಅಗತ್ಯವೇ ಇಲ್ಲದೆ, ಕೇವಲ ಪ್ರರಬ್ರಹ್ಮತ್ವದ ಒಕ್ಕಣೆಯಡಿಯಲ್ಲಿ ಅದೇ ಅಂಶವನ್ನು ಸಾಮಾನ್ಯರಿಗೆಟುಕುವ ತರದಲ್ಲಿ ಹೇಳಿರುವ ವಿಚಾರ. ಅದರ ಸಾರವನ್ನು ಕೇವಲ ಕೆಲವೇ ಪದಗಳ ಮಿತಿಯಲ್ಲಿ ಹಿಡಿದಿಡುವ ಕಗ್ಗದ ಸಾಲುಗಳು ಅದಕ್ಕೂ ಮೀರಿದ ಅದ್ಭುತ.

 

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post