X

ಸಾವಿರಾರು ಗೋವುಗಳ ಜೀವ ಉಳಿಸುತ್ತಿರುವ ಗೋಪ್ರಾಣಭಿಕ್ಷೆ

ತೀವ್ರ ಬರದಿಂದ ಕಂಗೆಟ್ಟಿರುವ ಸಾವಿರಾರು ಗೋವುಗಳಿಗೆ ಸರ್ಕಾರ ಮಲೆಮಹದೇಶ್ವರ ಬೆಟ್ಟದ ಸುತ್ತಲೂ ಹಾಕಿರುವ ಬೇಲಿ, ಬರವೆಂಬ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕಾಡಿನೊಳಗೆ ಮೇಯಲು ಹೋಗಲಾಗದೆ,‌‌ ಗ್ರಾಮಗಳಲ್ಲಿ‌ ಮೇವಿಲ್ಲದೆ ಅಲ್ಲಿನ ಗೋವುಗಳು ಸಾವಿನಂಚಿಗೆ ತಲುಪಿದೆ. ನೂರಾರು ಗೋವುಗಳು ಹಸವಿನಿಂದ ಈಗಾಗಲೇ ಪ್ರಾಣ ಬಿಟ್ಟಿವೆ.‌ ಕೆಲವಷ್ಟಕ್ಕೆ ನಡೆಯುವ ಶಕ್ತಿಯೂ ಇಲ್ಲ, ಇನ್ನೂ ಕೆಲವು ಗೋವುಗಳಿಗೆ ಎದುರು ಮೇವನ್ನು ಇಟ್ಟರೂ, ಅವಕ್ಕೆ ಅಗಿಯುವಷ್ಟು ಶಕ್ತಿ ಇಲ್ಲ. ಇಂತಹ ಗೋವುಗಳಿಗೆ ಕೇವಲ ಮೇವು ಪೂರೈಸಿದರೆ ಸಾಲದು ಅದರೊಟ್ಟಿಗೆ ಅಸ್ವಸ್ಥ ಗೋವುಗಳಿಗೆ ಉಚಿತ ವೈದ್ಯಕೀಯ ನೆರವಿನ ಅವಶ್ಯಕತೆ ಇದ್ದು ಶ್ರಿರಾಮಚಂದ್ರಶಪುರ ಉಚಿತವಾಗಿ ಮೇವು ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ಪೂರೈಸುತ್ತಿದೆ.

ಕಳೆದ ಎರಡು ದಶಕಗಳಿಂದ ಭಾರತೀಯ ಪಾರಂಪರಿಕ ಗೋತಳಿಗಳ ಉಳಿವಿಗಾಗಿ ಅವಿಶ್ರಾಂತ ಹೋರಾಟ ನಡೆಸುತ್ತಿರುವ ಶಂಕರಾಚಾರ್ಯ ಪರಂಪರೆಯ ಪೂಜ್ಯ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಹಸಿವಿನಿಂದ ಇಲ್ಲಿನ ಯಾವುದೇ ಗೋವುಗಳು ಸಾಯಬಾರದು ಎಂದು ಪಣತೊಟ್ಟರು. ಆ ಕೂಡಲೆ‌ ನಾಡಿನ‌ ಜನತೆಗೆ ಅದರಲ್ಲೂ ವಿಶೇಷವಾಗಿ ಗೋಕಿಂಕರರಿಗೆ ಸರಳ ಜೀವನ ~ ಸರಳ‌ ಭೋಜನ,‌‌ ವಾರಕ್ಕೆ ಒಂದು ದಿನ ಒಪ್ಪತ್ತು‌ ಮಾಡಬೇಕೆಂದೂ, ಇವುಗಳಿಂದ ಉಳಿಸಿದ ಹಣವನ್ನು ಗೋವುಗಳ ಜೀವ ಉಳಿಸುವ ಮೇವಿವಾಗಿ ಸಮರ್ಪಿಸಿ ಎಂದು ಕರೆ ನೀಡಿದರು.

ಇದರಿಂದ ಪ್ರೇರಣೆ‌ ಪಡೆದ ಸಹಸ್ರಾರು ಗೋಭಕ್ತರು ವಾರಕ್ಕೆ ಒಂದು ದಿ‌ನ (ಸೋಮವಾರ) ಒಪ್ಪತ್ತು ಅಂದರೆ ಒಂದು ಹೊತ್ತು ಉಪವಾಸ ಮಾಡಲು ಪ್ರಾರಂಭಿಸಿದರು. ‌ಕೆಲವರು ಪ್ರತಿದಿನವೂ ಒಪತ್ತು‌‌ ಮಾಡಲಾರಂಭಿಸಿದರು.‌ ವಿಶೇಷ ಭಕ್ಷ್ಯಗಳನ್ನು ಮಾಡದೆ‌ ಸರಳ‌ ಭೋಜನ ಮಾಡತೊಡಗಿದರು. ಕುಟುಂಬದ ಕಾರ್ಯಕ್ರಮಗಳನ್ನು ಆದಷ್ಟು ಸರಳವಾಗಿಸಲು ಪ್ರಯತ್ನಿಸಿದರು.‌ ಚಿಕ್ಕಚಿಕ್ಕ ಮಕ್ಕಳು ತಮಗೆ ಅತ್ಯಂತ ಪ್ರಿಯವಾದ ಐಸ್ ಕ್ರೀಂ, ಚಾಕೊಲೇಟ್ ಗಳನ್ನು ಮೂರು ತಿಂಗಳುಗಳ ಕಾಲ ತ್ಯಜಿಸುವುದಾಗಿ‌ ಘೋಷಿಸಿದರು. ನೂರಾರು ಜನ ತಾವು ಧರಿಸಿದ್ದ ಆಭರಣಗಳನ್ನು ಸಮರ್ಪಿಸಿದರು.‌ ತಮಗೆ ‌ಉದ್ಯೋಗದಲ್ಲಿ‌‌‌ ದೊರೆತ ಬಡ್ತಿಯ‌‌ ಹಣವನ್ನು ಸಮರ್ಪಿಸಿದರು.‌ ಹೀಗೆ ಸಾಧ್ಯವಾದ ವಿಧಾನದಲ್ಲೆಲ್ಲ‌ ಗೋಭಕ್ತರು ಹಣವನ್ನು ಉಳಿಸಿ ಸಮರ್ಪಣೆ ಮಾಡತೊಡಗಿದರು.

ದಿನಕ್ಕೆ ಎರಡು ಕೇಂದ್ರಗಳಲ್ಲಿ , ಒಂದು ಲಾರಿ ಲೋಡ್ ಮೇವನ್ನು ಹಂಚುವುದರ ಮೂಲಕ ಪ್ರಾರಂಭವಾದ ಮೇವು ವಿತರಣೆ, ದಿನ ಕಳೆದಂತೆ ಮೇವಿಗೆ ಬೇಡಿಕೆ ಇನ್ನಿಲ್ಲದಂತೆ ಅಧಿಕವಾಗತೊಡಗಿತು, ಅಷ್ಟು ಹೊತ್ತಿಗೆ ಈ #ಗೋಪ್ರಾಣಭಿಕ್ಷೆ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲೂ ಮಾಡುವ ಉದ್ದೇಶದಿಂದ #GiveUpAMeal campaign ದೊಡ್ಡಮಟ್ಟದಲ್ಲಿ ಕಾರ್ಯರೂಪಕ್ಕೆ ಬಂದಿತು. ಒಪ್ಪತ್ತು ಮಾಡುವ ದಿನವಾದ ಪ್ರತಿ ಸೋಮವಾರ ಫೇಸ್ಬುಕ್ ಮತ್ತು ಟ್ವಿಟ್ಟರಿನಲ್ಲಿ ನಡೆಯುತ್ತಿದ್ದ ಜಾಗೃತಿ ಅಭಿಯಾನಕ್ಕೆ ವ್ಯಾಪಕವಾಗಿ ಸ್ಪಂದನೆ ದೊರೆಯಲಾರಂಭಿಸಿತು. ದೇಶ ವಿದೇಶಗಳಿಂದ ಗೋಭಕ್ತರು ಕೈಜೋಡಿಸಲರಾಂಭಿಸಿದರು. ತಮ್ಮ ಬೆಂಬಲದ ಸೂಚಕವಾಗಿ ನೂರಾರು ಟ್ವೀಕರ್ತರುಗಳು, ರಾಷ್ಟ್ರ ಮಟ್ಟದಲ್ಲಿ ಪರಿಣಾಮಬೀರಬಲ್ಲಂಥಹ ಅನೇಕರು ತಮ್ಮ ಖಾತೆಯ ಹೆಸರಿನಲ್ಲಿ #GiveUpAMeal ಎಂಬುದನ್ನು ಜೋಡಿಸಿಕೊಂಡಿದ್ದರು. ಸಮಾಜ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೊರೆತ ಅದ್ಭುತ ಯಶಸ್ಸನ್ನು ಗಮನಿಸಿ ಮೇವು ವಿತರಣಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಇನ್ನೂ ಹೆಚ್ಚಿನ ಮೇವು ವಿತರಿಸುವ ನಿರ್ಧಾರಕ್ಕೆ ಬರಲಾಯಿತು‌‌. ಅದರಂತೆ ಪ್ರಸಕ್ತ ೧೫ ಮೇವು ವಿತರಣೆಯ ಕೇಂದ್ರಗಳಲ್ಲಿ ಪ್ರತಿದಿನ ಎರಡೂವರೆ ಲಕ್ಷಕ್ಕೂ ಅಧಿಕ‌ ವೆಚ್ಚದಲ್ಲಿ ೫-೬ ಲೋಡ್ ಲಾರಿಯ ಸುಮಾರು ೮೦ಟನ್ ಮೇವನ್ನು ೨೦-೨೫ ಸಾವಿರ ಹಸುಗಳಿಗೆ ಮೇವನ್ನು ಪೂರೈಸಲಾಗುತ್ತಿದೆ. ‌ಈವರೆಗೆ ೩೨ ದಿನಗಳಲ್ಲಿ ಒಟ್ಟು ೧೫೨೫.೯೭೫ ಟನ್ ಮೇವು ವಿತರಿಸಲಾಗಿದ್ದು, ೨,೭೩,೭೦೦ ಗೋಗ್ರಾಸಗಳನ್ನು ಸಮರ್ಪಿಸಲಾಗಿದೆ.
ಇದರೊಟ್ಟಿಗೆ ಹಲವು ಗೋಭಕ್ತರು ಶ್ರೀಗಳ‌ ಆದೇಶದಂತೆ ಭಿಕ್ಷಾಟನೆಗೆ‌ ಇಳಿದಿದ್ದಾರೆ. ರಾಜ್ಯಾದ್ಯಂತ ಪ್ರಮುಖ ಬೀದಿಗಳಲ್ಲಿ, ಅಂಗಡಿ-ಮನೆಗಳಿಗೆ ತೆರಳಿ‌ ಅವರಿಗೆ ಗೋವುಗಳ ಕರಾಳ‌ ಪರಿಸ್ಥಿತಿಯನ್ನು ವಿವರಿಸಿ ಅವರಿಂದ ಗೋವುಗಳ ಜೀವ ಉಳಿಸಲು ಸಹಕಾರ ಕೋರುವ ಕಾರ್ಯ ನಡೆದಿದೆ.

ಈಗಾಗಲೇ ಪೂರೈಸುತ್ತಿರುವುದನ್ನು ಹೊರತುಪಡಿಸಿ ಇನ್ನೂ ಸುಮಾರು ೨೫,೦೦೦ ಗೋವುಗಳಿಗೆ ಮೇವು ಪೂರೈಸಬೇಕಾಗಿದ್ದು, ಕನಿಷ್ಠ ಇನ್ನೂ ೫೫-೬೦ ದಿನಗಳ‌ ಕಾಲ‌ ಮೇವು ಪೂರೈಕೆಯ ಅಗತ್ಯ ಇದೆ.‌ ‘ಸಮಾಜ ಪೂರಕವಾಗಿ ಸ್ಪಂದಿಸಿದರೆ‌‌ ಅಲ್ಲಿಯ ಒಂದು ಗೋವು ಕೂಡ ಹಸಿವಿನಿಂದ ಸಾಯಲು ಬಿಡುವುದಿಲ್ಲ’ ಎಂದು ಕೈ ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ. ಅದೇ ರೀತಿ ನಾವು ನೀವೆಲ್ಲ‌ ಗೋಪ್ರಾಣಭಿಕ್ಷೆ ಯಲ್ಲಿ ತೊಡಗಿಕೊಳ್ಳುವ ಮೂಲಕ,‌ಅನಗತ್ಯ ವಸ್ತುಗಳನ್ನು / ಅಭ್ಯಾಸಗಳನ್ನು ತ್ಯಾಗ ಮಾಡುವ ಮೂಲಕ ನಮ್ಮ ಕೈಲಾದಷ್ಟು ಸಂಪತ್ತನ್ನು ಗೋವುಗಳ ಮೇವಿಗಾಗಿ ಸಮರ್ಪಿಸೋಣ..
ಗೋಮಾತೆಯ ಹೊಟ್ಟೆ ತಣಿದರೆ ಭೂಮಾತೆಯ ಒಡಲು ತಣಿಯಲಿದೆ.

ಗೋವುಗಳ ಜೀವ ಉಳಿಸಲು ಸಹಾಯ ಮಾಡಲಿಚ್ಛಿಸಿದವರು ಸಂಪರ್ಕಿಸಿ: 9483484074 ಶಿಶಿರ್

-ಶಿಶಿರ್ ಅಂಗಡಿ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post