X

“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ” ಕಣ್ಮರೆ ಆಗುತ್ತಿರುವ ಬೋರ್ಡುಗಳು…!

ಮೊನ್ನೆ ನಮ್ಮ ಮನೆಗೆ ಯಾರೋ ಅತಿಥಿಗಳು ಬಂದಿದ್ದರು. ಅವರ ಜೊತೆ ಒಂದು ಸಣ್ಣ ಮಗು ಕೂಡ ಬಂದಿತ್ತು. “ಏನ್ ಪುಟ್ಟ,ಎಷ್ಟನೇ ಕ್ಲಾಸು” ಅಂತಾ ಕೇಳಿದೆ. “ಎಲ್.ಕೆ.ಜಿ,ಅಂಕಲ್” ಅಂತಾ ಹೇಳ್ತು. ಇಷ್ಟು ಸಣ್ಣ ಪ್ರಾಯದಲ್ಲೇ ಅಂಕಲ್ ಮಾಡ್ತಲಾ ಅನ್ನೋ ಬೇಜಾರಲ್ಲೇ, “ಒಂದು ಹಾಡು ಹೇಳು ನೋಡೋಣ” ಅಂತಾ ಕೇಳಿದೆ. ಅದಕ್ಕೇ “ರೈನ್,ರೈನ್ ಗೋ ಅವೇ” ಅಂತಾ ಶುರುಮಾಡಿ “ಟ್ವಿಂಕಲ್, ಟ್ವಿಂಕಲ್ ಲಿಟ್ಲ ಸ್ಟಾರ್” ಹೇಳಿ ನಿಲ್ಲಿಸ್ತು. ನಾವು ಸಣ್ಣವರಿದ್ದಾಗ “ಹುಯ್ಯೋ, ಹುಯ್ಯೋ ಮಳೆರಾಯ ಮಾವಿನ ತೋಪಿಗೆ ನೀರಿಲ್ಲಾ” ಅಂತಾ ಮಳೆಯನ್ನು ಕರೆಯುತ್ತಾ ಇದ್ವಿ, ಆದ್ರೆ ಇವಾಗಿನ ಮಕ್ಕಳ “ರೈನ್, ರೈನ್ ಗೋ ಅವೇ” ಪದ್ಯ ಕೇಳಿ ಮಳೆರಾಯ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣ ಸಿಗ್ತಾ ಇಲ್ಲ.

“ಬಂದ, ಬಂದ ಸಂತಮ್ಮಣ್ಣ”, “ತಿರುಕನೋರ್ವ ಊರಮುಂದೆ, ಮುರುಕು ಧರ್ಮಶಾಲೆಯಲ್ಲಿ ಓರಗಿರುತ್ತಲ್ಲೊಂದ ಕನಸ ಕಂಡನಂತೆಯೇ”, “ಧರಣಿ ಮಂಡಲ ಮಧ್ಯದೊಳಗೆ,ಮೆರೆಯುತಿಹ ಕರ್ನಾಟ ದೇಶದಿ”, ಎನ್ನುವ ಪಾಠಗಳನ್ನು ನಾವು ಓದುತ್ತಿರಬೇಕಾದ್ರೆ, ನಮ್ಮ ತಂದೆ ತಾಯಿಗಳು ಅವರ ಶಾಲಾ ಜೀವನವನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಇವೆಲ್ಲಾ ಮೆರೆದಿದ್ದು 20 ನೆಯ ಶತಮಾನದಲ್ಲಿ. 21ನೇಯ ಶತಮಾನದ ಆರಂಭದಲ್ಲೇ ಇಂಗ್ಲೀಷ್ ಮೀಡಿಯಂಗಳ ಅಟ್ಟಹಾಸದೆದುರು ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕನ್ನಡ ಶಾಲೆಗಳು ಮಂಕಾದವು. ಕನ್ನಡ ಶಾಲೆಯಲ್ಲಿ ಶಿಕ್ಷಣವನ್ನು ಪಡೆದು, ಉನ್ನತ ಸ್ಥಾನಕ್ಕೆ ಏರಿದವರೇ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂಗೆ ಕಳುಹಿಸುವ ಸಂಪ್ರದಾಯವನ್ನು ಶುರುಮಾಡಿಕೊಂಡರು. “ಅಂಗನವಾಡಿ” ಎನ್ನುವ ಪದವನ್ನು ಮುಂದಿನ ಪೀಳಿಗೆ ಪದಕೋಶದಲ್ಲಿ ಹುಡುಕುವ ಕಾಲ ಹೆಚ್ಚೆನು ದೂರವಿಲ್ಲ.

ನಾನು ಆಫೀಸ್ಗೆ ತೆರಳುವ ದಾರಿಯಲ್ಲಿ ಮಕ್ಕಳ ತಾಯಂದಿರು,ಮಕ್ಕಳ ಬ್ಯಾಗುಗಳನ್ನು ತಾವೇ ಹಾಕಿಕೊಂಡು,ಶಾಲಾವಾಹನದ ತನಕ ಕರೆದುಕೊಂಡು ಹೋಗಿ ವ್ಯಾನ್ ಹತ್ತಿಸಿ, ಸಂಜೆ ಅದೇ ವ್ಯಾನಿನಿಂದ ಮಕ್ಕಳನ್ನು ಕರೆದುಕೊಂಡು ಬರೋದು ನೋಡುತ್ತಿದ್ದರೆ,ನಮಗೆ ಇಂತಹ ದೌರ್ಭಾಗ್ಯ ಬಂದಿರಲಿಲ್ಲ ಬಚಾವ್ ಅನಿಸುತ್ತದೆ.

ನಾವು ಶಾಲೆಗೆ ಹೋಗುವಾಗ “ಅಮ್ಮ ಇವತ್ತು ಹೊಟ್ಟೆ ನೋಯಿತ್ತೋ, ಶಾಲೆಗೆ ರಜಿ ಹಾಕ್ತೆ” ಅಂದ್ರೆ “ಮತ್ತ್ಯೆಂತ ಇಲ್ಯಾ ಗಡ, ಅಪ್ಪಯ್ಯನಿಗೆ ಹೇಳ್ತಿ ಕಾಣ ಈಗ” ಅಂದ ಕೂಡ್ಲೆ, ಎಲ್ಲೋ ಮುದ್ದೆಯಾಗಿ ಬಿದ್ದಿದ್ದ ಶಾಲಾ ಸಮವಸ್ತ್ರವನ್ನು ಹಾಕಿಕೊಂಡು, ಎರಡು ಪುಸ್ತಕ ಬ್ಯಾಗಿಗೆ ತುಂಬಿಕೊಂಡು, ಶಾಲಾ ದಾರಿ ಹಿಡಿಯುತ್ತಿದ್ದೆವು. ಶಾಲೆಗೆ ಹೋಗೋ ದಾರಿಯಲ್ಲಿ ಕಾಯಿಕಳ್ಳ (ಒಂದು ಜಾತಿಯ ಹಲ್ಲಿ) ನೋಡಿದರೆ, ದುಡ್ಡು ಸಿಕ್ಕತ್ತೆ ಅಂತಾ ಅದನ್ನು ಸಾಯಿಸಲಿಕ್ಕೆ ಹೋಗಿದ್ದು, ಗೋಯ್ (ಗೇರು), ಮಾವಿನ ಮರಕ್ಕೆ ಕಲ್ಲು ಹೊಡೆದು ಹಣ್ಣು ಬೀಳಿಸಿದ್ದು, ಗದ್ದೆಯಲ್ಲಿ ನೆಲಗಡಲೆ ಕದ್ದಿದ್ದು ಎಲ್ಲಾ ಇವಾಗ ನೆನಪು.

ಹಾಗಂತಾ ನಾನೇನು ಇಂಗ್ಲೀಷ್ ಮಾಧ್ಯಮ ಶಾಲೆಗಳ ವಿರೋಧಿ ಅಲ್ಲಾ, ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿಕೊಂಡಿರುವಂತಹ ಶಾಲೆಗಳಿಗೆ ಬಿಸಿ ಮುಟ್ಟಿಸಿ ಅನ್ನೋದು ನನ್ನ ಸಂದೇಶ. ಇತ್ತೀಚಿನ ದಿನಗಳಲ್ಲಿ, ಮಕ್ಕಳ ಹೋಮ್ ವರ್ಕಗಳನ್ನು ತಂದೆ ತಾಯಿಗಳು ಮಾಡುವ ಕಾಲ ಬಂದಿದೆ. ಹೀಗೆ ಒಂದು ದಿನಾ, ಒಂದು ಚಿಟ್ಟೆ ಮರಿ ಮೊಟ್ಟೆಯಿಂದ ಹೊರಬರಲು ಕಷ್ಟ ಪಡುತ್ತಿದ್ದುದ್ದನ್ನು ನೋಡಿದ ಒಬ್ಬ ಹುಡುಗ ಮೊಟ್ಟೆಯ ಸಿಪ್ಪೆಯನ್ನು ಬಿಡಿಸಿ ಅದಕ್ಕೆ ಸಹಾಯ ಮಾಡಿದ, ಆದರೆ ಹೊರಗೆ ಬಂದ ಸ್ವಲ್ಪ ಸಮಯದಲ್ಲೇ ಅದು ಅಸುನೀಗಿತು. ಪ್ರಾಥಮಿಕ ಶಿಕ್ಷಣ ಅನ್ನುವುದು ದುಂಬಿ ಚಿಟ್ಟೆಯಾಗಿ ಪರಿವರ್ತನೆ ಆಗುವ ಕಾಲ. ಇಂತಹ ಸಮಯದಲ್ಲಿ ಮಕ್ಕಳಿಗೆ ಕುತೂಹಲ ಹೆಚ್ಚು, ಹಾಗೂ ಕಲಿಯುವ ವಿಷಯಗಳು ಸಹ ಹೆಚ್ಚು. ಇಂತಹ ಕಾಲಘಟ್ಟದಲ್ಲಿ, ಹೆಚ್ಚು ಹೆಚ್ಚು ಸ್ವಾತಂತ್ರ್ಯವನ್ನು ಮಕ್ಕಳಿಗೆ ನೀಡಿದಾಗ, ಅವುಗಳು ಅನೇಕ ವಿಷಯಗಳನ್ನು ಕಲಿಯುತ್ತವೆ, ಮುಂದೆ ಜೀವನದ ದಾರಿಯಲ್ಲಿ ಬರುವ ಸಮಸ್ಯೆಗಳನ್ನು ಯಾರ ಸಹಾಯವಿಲ್ಲದೇ ಎದುರಿಸುತ್ತವೆ.

ನಮ್ಮ ರಾಜ್ಯದಲ್ಲಿ ಮಾತ್ರ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಗಮನವನ್ನು ನಮ್ಮ ಸರ್ಕಾರ ನೀಡುತ್ತಿಲ್ಲ ಅನ್ನುವುದು ವಿಪರ್ಯಾಸ. ನಮ್ಮ ರಾಜ್ಯದ ಹೆಚ್ಚಿನ ಅಂಗನವಾಡಿಗಳಿಗೆ ಸ್ವಂತ   ಕಟ್ಟಡವಿಲ್ಲ, ಅಧ್ಯಾಪಕರು ನಿವೃತ್ತಿ ಹೊಂದುತ್ತಿದ್ದರೂ, ಮಕ್ಕಳ ಸಂಖ್ಯೆ ಕಡಿಮೆಯಿದೆ ಎನ್ನುವ ನೆಪವೊಡ್ಡಿ ಹೊಸ ಅಧ್ಯಾಪಕರ ನೇಮಕಾತಿಗೆ ಗಮನ ಕೊಡುತ್ತಿಲ್ಲ. ಅನೇಕ ಶಾಲೆಗಳಲ್ಲಿ ಅತಿಥಿ ಅಧ್ಯಾಪಕರನ್ನು ಶಾಲೆಯ ಮುಖ್ಯೋಪಾಧ್ಯಾಯರೇ ನೇಮಿಸಿಕೊಂಡು, ಅವರಿಗೆ ಸಂಬಳವನ್ನು ಮುಖ್ಯೋಪಾಧ್ಯಾಯರ ಕೈಯಿಂದ ನೀಡುತ್ತಿದ್ದಾರೆ. ಅನೇಕ ಶಾಲೆಗಳು ಐವತ್ತು ವರ್ಷಕ್ಕಿಂತಲೂ ಹಳೆಯದಾದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಂತಹ ಹಳೆಯದಾದ ಮಾಡಿನ ಕೆಳಗೆ ತಮ್ಮ ಮಕ್ಕಳು ಸುರಕ್ಷಿತವಾಗಿ ಹೇಗೆ ಕಲಿತಾರು ಎನ್ನುವ ಭಯ ಕೂಡ ಪೋಷಕರಲ್ಲಿದೆ. ಕುಡಿಯುವ ನೀರಿನ ಸಮಸ್ಯೆ, ಶೌಚಾಲಯದ ಸಮಸ್ಯೆ, ಮಧ್ಯಾಹ್ನದ ಬಿಸಿ ಊಟದ ಸಮಸ್ಯೆ ಇನ್ನೂ ಅನೇಕ ಸಮಸ್ಯೆಗಳಿಂದ ಕನ್ನಡ ಶಾಲೆಗಳು ನಲುಗುತ್ತಿದ್ದರೂ ಸರ್ಕಾರ ಮೂಕ ಮೌನವಾಗಿದೆ. ಮಕ್ಕಳಿಗೆ ಮೊಟ್ಟೆ ಕೊಡಬೇಕೋ, ಬಾಳೆಹಣ್ಣು ಕೊಡಬೇಕೋ ಎನ್ನುವ ಅಧಿಕಾರ ಹಾಗೂ ವಿರೋಧ ಪಕ್ಷದ ನಡುವಿನ ಜಗಳ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಕಡೆಗೆ ವಾಲಿದರೆ ತುಂಬಾ ಒಳಿತು.

ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸಿದ ನಮ್ಮ ಸರ್ಕಾರದ ಒಂದು ಉತ್ತಮ ಯೋಜನೆ “ಪ್ರತಿಭಾ ಕಾರಂಜಿ” ಇದರಿಂದ ಉದಯಿಸಿದ ಪ್ರತಿಭೆಗಳಲ್ಲಿ ನಾನು ಒಬ್ಬ ಅಂತಾ ಹೇಳಿಕೊಳ್ಳಲಿಕ್ಕೆ ಹೆಮ್ಮೆ ಇದೆ. ಮಕ್ಕಳ ಕ್ರೀಯಾ ಶೀಲತೆಗೆ ಒಂದು ಒತ್ತನ್ನು ಕೊಡುವ ಕೆಲಸ ಕನ್ನಡ ಮಾಧ್ಯಮ ಶಾಲೆಗಳಿಂದ ಅನೇಕ ನಡೆಯುತ್ತಿದೆ. ಇದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಕೆಲಸ ನಮ್ಮೆಲ್ಲರಿಂದ ನಡೆಯಬೇಕಿದೆ. ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಎನ್ನುವುದು ಮಕ್ಕಳನ್ನು ಸ್ವಂತ ಉದ್ಯೋಗಿಗಳಾಗುವ ಬದಲು,      ಇನ್ನೊಬ್ಬರ ಕೈ ಕೆಳಗೆ ದುಡಿಯುವವರನ್ನಾಗಿ ರೂಪಿಸುತ್ತಿದೆ.

ಬೆಂಗಳೂರಿನಲ್ಲಿರುವ ನನ್ನ ದೂರದ ಸಂಬಧಿಯೊಬ್ಬರ ಮಗುವಿನ ಒಂದನೇ ಕ್ಲಾಸಿನ ಫೀಸ್ 34000 ಅಂತಾ ಕೇಳಿ ನನಗೆ ಒಂದು ನಿಮಿಷ ಶಾಕ್ ಆಯ್ತು. ಏಕೆಂದರೆ ಅಷ್ಟು ಹಣದಲ್ಲಿ ನಾನು ನನ್ನ ಪದವಿ ಶಿಕ್ಷಣ ಮುಗಿಸಿದ್ದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಪಟ್ಟಣಗಳಲ್ಲಿ ಹೆಬ್ಬಾವಿನಂತೆ ಬಾಯಿ ಕಳೆದುಕೊಂಡಿರುವ ಸ್ಕೂಲ್ ಮಾಫಿಯಾಗಳ ಹೊಟ್ಟೆ ತುಂಬಿಸಲು ಅನೇಕ ಪೋಷಕರು ಸಾಲ ಮಾಡಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದಾರೆ,ಇಂತಹವರಿಗೆ ಒಂದು ಕಿವಿಮಾತು “ಕಲಿಯುವ ಮನಸ್ಸಿದ್ದರೆ, ಎಲ್ಲಿದ್ದರೂ ಮಕ್ಕಳು ಕಲಿಯುತ್ತಾರೆ, ಅದೇ ಹಾಳಾಗುವ ಮನಸ್ಸಿದ್ದರೆ, ಎಲ್ಲಿದ್ದರೂ ಹಾಳಾಗ್ತಾರೆ. ಕನ್ನಡ ಶಾಲೆ ಇಂಗ್ಲೀಷ ಶಾಲೆ ಎನ್ನುವ ಪ್ರಶ್ನೆ ಬರುವುದಿಲ್ಲ”.

ಕನ್ನಡ ಶಾಲೆಗಳನ್ನು ಇಂಗ್ಲೀಷ ಶಾಲೆಗಳಿಗೆ ಸ್ಪರ್ಧೆ ಒಡ್ಡುವಂತೆ ಅಭಿವೃದ್ಧಿ ಪಡಿಸಿ, ಸ್ಕೂಲ್ ಮಾಫಿಯಾಗಳಿಗೆ ಕಡಿವಾಣ ಹಾಕುವುದು ಸರ್ಕಾರಕ್ಕೆ ಸುಲಭದ ಕೆಲಸ. ಆದರೆ ಮಂತ್ರಿಗಳ ಕೃಪಾಪೋಷಿತರೇ ಇಂತಹ ಸಂಸ್ಥೆಗಳನ್ನು ನಡೆಸುತ್ತಿರುವುದರಿಂದ ಇದು ಸಾಧ್ಯವಾಗುತ್ತಿಲ್ಲ.

ನಮ್ಮ ಭಾಷೆಯನ್ನು ನಾವು ಬೆಳೆಸದಿದ್ದರೆ,ಹೊರಗಿನಿಂದ ಬಂದ ಬೇರೆ ಯಾರೋ ಬೆಳೆಸುವುದಿಲ್ಲ. ಕನ್ನಡ ಶಾಲೆಗಳಲ್ಲಿ ಓದಿ, ಒಳ್ಳೆಯ ಉದ್ಯೋಗದಲ್ಲಿರುವ ಹೆಮ್ಮೆಯ ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿ, ಹಾಗೆಯೇ ನೀವು ಕಲಿತಿರುವ ಶಾಲೆಗೆ ವರ್ಷಕ್ಕೆ ಒಮ್ಮೆಯಾದರೂ ಭೇಟಿ ನೀಡಿ…

ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ

ಹೋರಾಡು ಕನ್ನಡಕೆ ಕಲಿಯಾಗಿ ರನ್ನ

ಕನ್ನಡಕೆ ಹೋರಾಡು ಕನ್ನಡದ ಕಂದ

ಕನ್ನಡವ ಕಾಪಾಡು ನನ್ನ ಆನಂದ

                    —ಕುವೆಂಪು

-ಗಣೇಶ ಬರ್ವೆ ಮಣೂರು

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post