X

 ವಿಂಡೀಸ್ ಕ್ರಿಕೆಟ್ :  ಹಣವೆಂಬ ಸುಳಿಯಲ್ಲಿ ಪ್ರತಿಭೆಯ ಹುಡುಕಾಟ !!

ವಿಶ್ವ ಕ್ರಿಕೆಟ್ ನನ್ನೇ ದಶಕಗಳ ಕಾಲ ನಲುಗಾಡಿಸಿಬಿಟ್ಟಿದ್ದ ತಂಡವದು. ಆಡುವುದು ದೂರದ ಮಾತು, ಆ ತಂಡದ ಆಟಗಾರರನ್ನು ನೋಡಿಯೇ ಎದುರಾಳಿಯ ಮುಖದ ಬೇವಳಿಯುತಿತ್ತು. ಬ್ಯಾಟ್ ಹಿಡಿದು ಪಿಚ್ ಗೆ ಬಂದವನಿಗೆ  ರನ್ ಗಳಿಸುವುದಕಿಂತ ಹೆಚ್ಚಾಗಿ ಜಿಂಕೆಯಂತೆ ಜಿಗಿಸಲ್ಪಡುತ್ತಿದ್ದ ಗುಂಡಿನ ವೇಗದ ಬೌಲ್ ಗಳಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಆ ತಂಡದ ವಿರುದ್ಧ ಪಂದ್ಯ ಡ್ರಾ ಆದರೂ ಎದುರಾಳಿ ತಂಡಕ್ಕೆ ಗೆದ್ದಷ್ಟೇ ಸಂಭ್ರಮ! ಬೇರೆ ತಂಡಗಳಿಂದ ರಚಿಸಲ್ಪಟ್ಟರೆ ಮುನಿಸಿಕೊಳ್ಳುವಂತೆ ದಾಖಲೆಗಳು ಅಂದು ಆ ತಂಡದಿಂದಲೇ ಮೂಡುತಿದ್ದವು. ಎಪ್ಪತ್ತರ ನಂತರದ ಎರಡು ದಶಕಗಳಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡವೆಂಬ ದಾಖಲೆಯಾಗಲಿ, ವಿಶ್ವಕಪ್ ನ ಮೊದಲ ಮೂರು ಆವೃತಿಯಲ್ಲಿ ಸತತವಾಗಿ ಫೈನಲ್ನವರೆಗೂ ಬಂದು ಎರಡು ಬಾರಿ  ವಿಶ್ವಕಪ್ ಅನ್ನು ಗೆದ್ದ ಮೊದಲ ತಂಡವೆಂಬ ದಾಖಲೆ,  1980 ರಿಂದ 1995 ನಡುವೆ ಒಂದೂ ಟೆಸ್ಟ್ ಸರಣಿಯನ್ನು ಸೋಲದ ಹೆಗ್ಗಳಿಕೆ,  ಅತಿ ಹೆಚ್ಚಿನ ರನ್ ಗಳಿಕೆ, ಮಹೋತ್ತಮವಾದ ಬೌಲಿಂಗ್ ಏಕಾನಮಿ ಹಾಗು ಸರಾಸರಿಯನ್ನು ಹೊಂದಿದ್ದ ಆ ತಂಡ ಆಡುತಿದ್ದ  ಭಾಗಶಃ ಪಂದ್ಯಗಳ ಫಲಿತಾಂಶ  ವಿಶ್ವಕಪ್ ನಲ್ಲಿ  ಭಾರತ  ಹಾಗು ಪಾಕಿಸ್ತಾನದ ನಡುವಿನ ಫಲಿತಾಂಶದಂತೆ ‘ಪಾರದರ್ಶಕ’ವಾಗಿರುತ್ತಿತ್ತು!  ಎಪ್ಪತ್ತರ ದಶಕದ ಆ ತಂಡವನ್ನು ಒಮ್ಮೆ ನೆನೆಸಿಕೊಂಡರೆ ಯು-ಟ್ಯೂಬಿನಲ್ಲಿ ತಕ್ಷಣ ಅಂದಿನ ಒಂದೆರೆಡು ಪಂದ್ಯಗಳನ್ನು ನೋಡಬೇಕೆಂಬ ಬಯಕೆ ಮೂಡದೇ ಇರುವುದಿಲ್ಲ.

ಇಂದು ಹೇಳ ಹೊರಟಿರುವುದು ಒಂದು ಕಾಲಕ್ಕೆ ಬೆಟ್ಟದಷ್ಟು ಪ್ರಸಿದ್ದಿಯನ್ನು ಹೊಂದಿ ಇಂದು ಆಟಕುಂಟು ಲೆಕ್ಕಕಿರದಂತೆ ಮೂಲೆಗುಂಪಾಗಿರುವ  ಕ್ರಿಕೆಟ್ ತಂಡದ ಬಗ್ಗೆ. ವೆಸ್ಟ್ ಇಂಡೀಸ್ ಅಥವಾ ವಿಂಡೀಸ್. ಮೊದಲು ಹೇಳಿದಂತೆ ಅಂದು ಯಶಸ್ಸಿನ ಶಿಖರದಲ್ಲಿದ್ದ ಈ ತಂಡ ಗೆದ್ದು ತೋರಿಸದ ಸರಣಿಗಳಿಲ್ಲ ಮಾಡದೆ ಇರುವ ದಾಖಲೆಗಳಿಲ್ಲ. ಸರ್ ಗಾರ್-ಫೀಲ್ಡ್ ಸೋಬರ್ಸ್, ಜಾರ್ಜ್ ಹೆಡ್ಲಿ, ಕ್ಲೆಯ್ವ್ ಲಾಯ್ಡ್, ವಿವ್ ರಿಚರ್ಡ್ಸ್, ಮೈಕಲ್ ಹೋಲ್ಡಿಂಗ್ ಹೀಗೆ ಹೇಳುತ್ತಾ ಹೋದರೆ ವಿಂಡೀಸ್ ಎಂಬ ದೈತ್ಯ ತಂಡವನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ದಂತಕಥೆಗಳಂತೆ ಅಂದಿನ ಒಬ್ಬೊಬ್ಬ ಆಟಗಾರನೂ ಪರಿಚಯವಾಗುತ್ತಾನೆ.

ಅಂತಹ ತಂಡವೊಂದು ಇಂದು ಏನಾಗಿದೆ? ನೀರು ಕುಡಿದಷ್ಟೇ ಸರಾಗವಾಗಿ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ತಂಡವಿಂದು ನಕ್ಷತ್ರಗಳಿರದ ಆಗಸದಂತಾಗಿರುವು ಎಲ್ಲರಿಗೂ ಸ್ಪಷ್ಟ. (1976 ರಿಂದ 2000 ನೇ ಇಸವಿಯವರೆಗೂ ಆಡಿದ ಟೆಸ್ಟ್ ಪಂದ್ಯಗಳಲ್ಲಿ 71 ನ್ನು ಗೆದ್ದು 20 ಪಂದ್ಯಗಳನ್ನು ಸೋತರೆ ಅದೇ 2000 ದಿಂದ ಈಚೆ ಮುಂದಿನ ಹದಿನೈದು ವರ್ಷಗಳಲ್ಲಿ ಆಡಿದ ಪಂದ್ಯಗಳಲ್ಲಿ 78 ಅನ್ನು ಸೋತು ಗೆದ್ದಿರುವುದು ಕೇವಲ 17 ಪಂದ್ಯಗಳು!!) ಈ ಮಟ್ಟಿನ ಭಾರಿ ಮುಗ್ಗರಿಸುವಿಕೆಗೆ ನಿಜವಾದ ಕಾರಣವೇನು? ಅಂದಿನ ವಿಂಡೀಸ್  ಆಟಗಾರರಿಗೂ, ಇಂದಿನ ‘ಪಾರ್ಟಿ ಡ್ಯೂಡ್ಸ್’ ಗಳಿಗೂ ಆಟದಲ್ಲಿ ಕೊಂಚ ಅಂತರವಿರುವುದು ನಿಜವಾದರೂ ಈ ರೀತಿಯ ಮೂಲೆಗುಂಪಾಗುವಿಕೆ ಮೊಘಲ್ ಸಾಮ್ರಾಜ್ಯದಂತೆ ಎಲ್ಲವನ್ನು ಗೆದ್ದು  ಮದ, ಅಸೂಯೆ, ಒಳಜಗಳಗಳೆಂಬ ಕಾರಣಗಳಿಂದ ಹೇಳಹೆಸರಿಲ್ಲದಂತಾದ ಸಾಮ್ರಾಜ್ಯದಂತೆ ಈ ತಂಡ ಗೋಚರಿಸುತ್ತದೆ. . ಇದರ ಶ್ರೇಯ ಆಟಗಾರಿಗೆ ಕೊಡಬೇಕೋ ಅಥವಾ ವಿಂಡೀಸ್ ಕ್ರಿಕೆಟ್ ಮಂಡಳಿಯ ಮುಡಿಗೆ ಅರ್ಪಿಸಬೇಕೋ ಎರಡೂ ಗೋಜಲು.

ಈ ವಿಷಯವನ್ನು ಹೆಚ್ಚು ಹೆಚ್ಚು ಕೆದಕುತ್ತಾ ಹೋದಷ್ಟೂ ಬೆಳಕಿಗೆ ಬರುವುದು ಕ್ರಿಕೆಟ್ ಮಂಡಳಿ ಹಾಗು ಆಟಗಾರರ ನಡುವೆ ಇರುವ ಸಂಘರ್ಷ. ಇದು ವಿಶ್ವದ ಬಾಗಶಃ ದೇಶಗಳ ಕತೆಯೇ ಆದರೂ ಯಾವ ಮಂಡಳಿಗಳೂ ಸಹ ದೇಶವನ್ನು ಪ್ರತಿನಿಧಿಸುವ ತಂಡವನ್ನು/ಆಟಗಾರರನ್ನು ಇಂತಹ ಅಧೋಗತಿಗೆ ತಂದು ನಿಲ್ಲಿಸುವುದಿಲ್ಲ. ಅಲ್ಲಿ ಮೊದಲ ಬಾರಿಗೆ ವಿವಾದ ಬುಗಿಲೆದ್ದಿದ್ದು 2005 ರಲ್ಲಿ,  ಸೌತ್ ಆಫ್ರಿಕಾದ ವಿರುದ್ಧದ ಪಂದ್ಯಕ್ಕೆ ಏಳು ಜನ ಆಟಗಾರರು ಗೈರಾಗಲು ತೀರ್ಮಾನಿಸಿದಾಗ. ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಕೂಡ ಅವರಲ್ಲಿ ಒಬ್ಬರಾಗಿದ್ದರು.  ಕ್ರಿಕೆಟ್ ನ ದಂತಕಥೆಯೇ ಅಂದು ಮಂಡಳಿಯ ವಿರುದ್ಧ ಸಿಡಿದೆದ್ದರೆ ಯಾರಿಗೆ ತಾನೇ ಸಂಶಯ ಮೂಡುವುದಿಲ್ಲ? ಅದು ಒಂತರಾ ಗ್ರೇಗ್ ಚಾಪೆಲ್ ನ ನಿಜ ಬಣ್ಣವನ್ನು ಬಯಲು ಮಾಡಲು ಅಂದು ಪ್ರೆಸ್ ನ ಮುಂದೆ ಸಚಿನ್  ಬಂದಂತಿತ್ತು. ಒಟ್ಟಿನಲ್ಲಿ ಬೆಳೆಯಬೇಕಿದ್ದ ಎರಡನೆಯ ತಲೆಮಾರಿನ ವಿಂಡೀಸ್ ಆಟಗಾರಿಗೆ ಅಂದು ತಮ್ಮ ಅಧಿಕಾರಿಗಳ ಜೊತೆಯೇ ಬಿರುಕು ಮೂಡಿತ್ತು. ಈ ಬಿರಕು ಮಾತ್ರ ಮುಂದೆಂದೂ ಮುಚ್ಚದ ರೀತಿ ಬೆಳೆಯ ತೊಡಗಿತು. ಅಂದೊಮ್ಮೆ ವಿಂಡೀಸ್ ಕ್ರಿಕೆಟ್ ನ ದಂತಕಥೆ ಕಾರ್ಟ್ಲಿ ಆಂಬ್ರೋಸ್ ನ ಮನೆ ಸೈಕ್ಲೋನ್ ನಿಂದ ನುಚ್ಚು ನೂರಾದಾಗ ಆತ ವಿದೇಶದ ಪ್ರವಾಸದಲ್ಲಿದ್ದ. ವಿಷಯ ತಿಳಿದವನೇ ತಕ್ಷಣ ವಿಂಡೀಸ್ ಕ್ರಿಕೆಟ್ ಮಂಡಳಿಗೆ ಫೋನಾಯಿಸಿ ತನ್ನ ಕುಟುಂಬಕ್ಕೆ ತಾತ್ಕಾಲಿಕವಾಗಾದರೂ ಏನಾದರೂ ವ್ಯವಸ್ಥೆಯನ್ನು ಮಾಡಿಕೊಡಿ ಎಂದು ಬೇಡಿಕೊಂಡ.  ಮಂಡಳಿ ಮಾತ್ರ ಮಾನವೀಯತೆಯ ದೃಷ್ಟಿಯಿಂದಲೂ ಸಹ ಒಂದಿಷ್ಟೂ ಸ್ಪಂಧಿಸಲಿಲ್ಲ. ಬೇರೆ ದಾರಿ ಕಾಣದೆ ಆತ ಕ್ರಿಕೆಟ್ ಪ್ರವಾಸವನ್ನು ಅರ್ಧಕ್ಕೆ ಬಿಟ್ಟು ಅಂದು  ಮನೆಯ ದುರಸ್ತಿಗೆಂದು ವಾಪಾಸ್ ಬರುತ್ತಾನೆ. ಇಂತಹ ಹಲವಾರು ಘಟನೆಗಳು ವಿಂಡೀಸ್ ಆಟಗಾರರಲ್ಲಿ ಮಂಡಳಿಯ ವಿರುದ್ಧವಾಗಿ ದಟ್ಟ ಅಲೆಗಳನ್ನು ಒಳಗೊಳಗೇ ಸೃಷ್ಟಿಸತೊಡಗಿರುತ್ತವೆ. ಹೊರಬರಲು ಅವಕಾಶವನ್ನಷ್ಟೇ ಇದಿರು ನೋಡುತ್ತಿರುತ್ತವೆ.  ಹೀಗೆ ಇಪ್ಪತ್ತೊಂದನೇ ಶತಮಾನದ ಆದಿಯಲ್ಲಿ ಶುರುವಾದ ವಿಂಡೀಸ್ ತಂಡದ ಬೀಳುವಿಕೆ ಇಂದು ಪಾತಾಳವನ್ನು ಮುಟ್ಟುವ ಸನಿಹದಲ್ಲಿದೆ.

ಆ ಕದಂಬ ಬಾಹುಗಳು, ಚಚ್ಚಿದರೆ ಚಂಡೇ ಚೂರಾಗುವುದೇನೋ ಎಂಬ ಹೊಡೆತಗಳು, ಮುಡಿಯೆತ್ತರಕ್ಕೆ ಜಿಗಿಯುವ ಬೌಲಿಂಗ್ ದಾಳಿ, ಹೀಗೆ ನೋಡುಗ ಕುಣಿದು ಕುಪ್ಪಳಿಸುವಂತೆ ಮಾಡುವ ವಿಶ್ವಪ್ರಸಿದ್ಧ ಆಟಗಾರರಿದ್ದರೂ ನಷ್ಟದ ನೆಪವೊಡ್ದಿ ತಂಡವನ್ನು ಹೀಗೆ ಸತಾಯಿಸುವುದು ಎಷ್ಟರ ಮಟ್ಟಿಗೆ ಸರಿ?

ಇಂದಿಗೆ ಸರಿಯಾಗಿ ಒಂದು ದಶಕದ ಹಿಂದೆ ಶುರುವಾದ ಟಿ-ಟ್ವೆಂಟಿ  ಕ್ರಿಕೆಟ್ ಉಸಿರುಗಟ್ಟಿದ ಈ ತಂಡಕ್ಕೆ ಆಕ್ಸಿಜೆನ್ ನಂತೆ ಪರಿಣಮಿಸಿತ್ತು. ನವ ಮಾದರಿಯ ಈ ಹೊಡಿ ಬಡಿ ಆಟದಲ್ಲಿ ಮೆರೆಯತೊಡಗಿದ್ದು  ಹೆಚ್ಚಾಗಿ ಇಲ್ಲಿನ ದೈತ್ಯರೇ! ಡ್ಯಾರೆನ್ ಸ್ಯಾಮಿ, ಕ್ರೈಸ್ ಗೈಲ್,  ಮರ್ಲೊನ್ ಸ್ಯಾಮ್ಯುಲ್ಸ್, ಡೇವೆನ್ ಸ್ಮಿಥ್, ಆಂಡ್ರೇ ರುಸ್ಸೇಲ್, ಸುನಿಲ್ ನಾರೈನ್, Dwayne ಬ್ರಾವೊ, ಕೆರಿನ್ ಪೊಲ್ಲಾರ್ಡ್  ಹೀಗೆ ಕಟ್ಟಿಕೊಂಡ ವಿಂಡೀಸ್ ಪಡೆ ಶರವೇಗದಲ್ಲಿ ವಿಶ್ವ ಕ್ರಿಕೆಟ್ ನಲ್ಲಿ ಮೇಲೇರತೊಡಗಿತ್ತು. ಕೇವಲ ಒಂದೇ ದಶಕದೊಳಗೆ  ಎರಡು ಬಾರಿ ವಿಶ್ವ ಚಾಂಪಿಯನ್ ಆಗಿ ಮೆರೆಯಿತು. ಗತಿಸಿದ ವಿಂಡೀಸ್ ನ ಇತಿಹಾಸ ಇನ್ನೇನೂ  ಮರುಕಳಿಸಬೇಕು ಎನ್ನುವಷ್ಟರಲ್ಲಿ ಮತ್ತದೇ ಅಸಮಾಧಾನದ ಹೊಗೆ ತಂಡವನ್ನು ಉಸಿರುಗಟ್ಟಿಸಿತು. ಒಗ್ಗಟ್ಟಾಗಿ ಸಾಗುವ ಕಾಡುಕೋಣಗಳ ಗುಂಪು ನರಭಕ್ಷಕವೊಂದನ್ನು ಕಂಡು ದಿಕ್ಕಾಪಾಲಾಗಿ ಓಡಿ ಕಣ್ಮರೆಯಾಗುವಂತೆ ಆಯಿತು.

ಇಂದು ಆಟವಾಡು, ನಾಳೆ ಪಾರ್ಟಿ ಮಾಡು, ನಾಡಿದ್ದು ನಿದ್ದೆ ಮಾಡು ನಂತರ ಮತ್ತೆ ಆಟವಾಡು ಎಂಬಂತೆ ತಂಡ ಮೋಜಿನ ಅಡ್ಡವನ್ನಾಗಿ ಟಿ-ಟ್ವೆಂಟಿ  ಪಂದ್ಯಗಳನ್ನು ಪರಿಗಣಿಸಿತು.ದುಡ್ಡಿನ್ನ ಸಾಗರವೇ ಇಲ್ಲಿ ಈಜಲು ಸಿಗುವಾಗ ಊರಿನ ಹೊಲಸು ಕೆರೆಗೆ ನೆಗೆದು ಮೈಯನ್ನೇಕೆ ಕೊಳಕು ಮಾಡಿಕೊಂಡಾರು? ಪರಿಣಾಮ ವಿಶ್ವದ ಯಾವುದೇ ಮೂಲೆಯಲ್ಲಿಯಾದರು ಸರಿ, ಟಿ-ಟ್ವೆಂಟಿ ಪಂದ್ಯಗಳೆಂದರೆ ಇರುವೆಗಳಂತೆ ಈ ಆಟಗಾರರು ಮುತ್ತಿಕೊಳ್ಳುತ್ತಾರೆ. ಪಂದ್ಯಗಳನ್ನು ನಡೆಸುವ ಫ್ರಾಂಚೈಸಿಗಳಿಗೂ ಬೇಕಿರುವುದು ಅಬ್ಬರಿಸಿ ಬೊಬ್ಬಿಕ್ಕುವ ಇಂತಹ ಆಟಗಾರರೇ. ಹಣ ಹಾಗು ಮೋಜಿನ ರಂಗಿನಲ್ಲಿ ದೇಶ, ದೇಶದ ಕೀರ್ತಿ, ದೇಶದ ಭವಿಷ್ಯ ಎಂಬೆಲ್ಲ ಜವಾಬ್ದಾರಿಗಳನ್ನು ಕಾಲ ದೂಳಿನಂತೆ ಕೊಡವಿ ನಡೆಯುವ ಇಂತಹ ಆಟಗಾರರೇನು ಮುಗ್ದರೇನಲ್ಲ. ಮನೆಯಲ್ಲಿ ಕಷ್ಟವಿದ್ದ ಮಾತ್ರಕ್ಕೆ ಪೋಷಕರನ್ನೇ ಧಿಕ್ಕರಿಸಿ ಹೊರ ಬರುವುದು ಎಷ್ಟರ ಮಟ್ಟಿಗೆ ಸರಿ? ಅಂದೊಮ್ಮೆ ಜಮೈಕಾದ ವೇಗಿ ಮೈಕಲ್ ಹೋಲ್ಡಿಂಗ್ ‘ನನ್ನ ದೇಶದ 5 ಮಿಲಿಯನ್ ಕ್ರೀಡಾಪ್ರೇಮಿಗಳಿಗೆ ನಾನು ಉತ್ತಮವಾಗಿ ಆಡುವುದು ಬಹು ಮುಖ್ಯ, ಏಕೆಂದರೆ ನಾಳೆ ಅವರು ಹೊಡೆದೆಯಲ್ಲ ತಲೆಯೆತ್ತಿ ಗರ್ವದಿಂದ  ನಡೆಯಬೇಕು’ ಎಂದಿದ್ದ. ಇಡೀ ವಿಶ್ವವನ್ನೇ ತನ್ನ ಮಾರಕ ಬೌಲಿಂಗ್ ನಿಂದ ಚೆಂಡಾಡಿಬಿಟ್ಟಿದ್ದ ಆತನ ಮಾತುಗಳು ಮುಂಬಂದ ಅದೆಷ್ಟೋ ಆಟಗಾರರಿಗೆ ಪ್ರೇರಣೆಯಾಯಿತು. ಆದರೆ ಒಬ್ಬರನ್ನೊಬ್ಬರು ದೋಷಿಸುವ ಕಿಚ್ಚಿನಲ್ಲಿ ಮಂಡಳಿ ಹಾಗು ಆಟಗಾರ ಮಾನವೆಂಬುದು ಇಂದು  ಸಂತೆಯಲ್ಲಿ ಮಾರುವ ಕೊಳೆತ ತರಕಾರಿಯಂತಾಗಿದೆ. ಇನ್ನು ಇಂತಹ ದೇಶಪ್ರೇಮದ ಮಾತುಗಳೆಲ್ಲ ಇವರನ್ನು ಒಟ್ಟುಗೂಡಿಸಬಲ್ಲವೆಂಬ ಆಶಾವಾದ ಒಂದು ಮೂರ್ಖತನವೇ ಸರಿ.

ತೊಂಬತ್ತರ ದಶಕದ ಲೆಜೆಂಡರಿ ಆಟಗಾರರೆಲ್ಲ ನಿವೃತ್ತಿ ಹೊಂದಿದಾಗ ಆಸ್ಟ್ರೇಲಿಯಾದ ತಂಡವೂ ಸಹ ಹೀಗೆ ಮೂಲೆ ಸರಿಯುತ್ತದೆ ಎಂದುಕೊಂಡಿದ್ದ ಕ್ರೀಡಾಸಕ್ತರ ಲೆಕ್ಕಾಚಾರವನ್ನೆಲ್ಲ 2015 ರ ವಿಶ್ವಕಪ್ ನಲ್ಲಿ ಮೈಕಲ್ ಕ್ಲಾರ್ಕ್  ಹಾಗು ಆತನ ಪಡೆ  ಪಡೆ ಸುಳ್ಳಾಹಿಸಿತು. ತಂಡದ ಆಟಗಾರರ ಮದ್ಯೆ, ತಂಡ ಹಾಗು ಮಂಡಳಿಯ ಮದ್ಯೆ ತಿಳಿಯಾದ ಸಂಬಂಧವಿದ್ದರೆ ಜಗತ್ತನ್ನು ಗೆಲ್ಲಲು ಮೀಸೆ ಚಿಗುರದ ಹುಡುಗರೂ ಸಾಕು ಎಂಬುದನ್ನು ಅದು ಸಾಧಿಸಿ ತೋರಿಸಿತು. ಈ ನಿಟ್ಟಿನಲ್ಲಿ ವಿಂಡೀಸ್ ನ ಆಟಗಾರರು ಹಾಗು ಮಂಡಳಿ ಇಬ್ಬರಿಗೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಮಯ. ಕಾಲ ಕೈ ಜಾರುವ ಮುನ್ನ ಹೆಚ್ಚೆತ್ತುಕೊಳ್ಳಲು ಇನ್ನು ಸಮಯವಿದೆ.

ಇಂದು ಕ್ರಿಕೆಟ್ ಎಂದರೆ ಹಣ, ಹಣವೆಂದರೆ ಕ್ರಿಕೆಟ್ ನಂತಾಗಿರುವ ಕಾಲದಲ್ಲಿ ದೇಶದ ಕೀರ್ತಿಯ ಜವಾಬ್ದಾರಿಯನ್ನು ಹೊತ್ತು ಆಡುವ ಆಟಗಾರರು ವಿರಳವಾಗುತ್ತಿದ್ದಾರೆ. ಈ ವಿರಳತೆ ತಂಡ, ಮಂಡಳಿ ಹಾಗು ದೇಶವನ್ನೇ ಹಿಂಬದಿಗೆ ತಳ್ಳುತ್ತಿದೆ ಎಂಬುದು ಸುಳ್ಳಲ್ಲ. ಇವರುಗಳ ಕಚ್ಚಾಟ ಹಾಗು ಕೆಸರಾಟದಲ್ಲಿ ದೇಶದ ಕ್ರೀಡಾ ಪ್ರೇಮಿ ನಷ್ಟ ಅನುಭುವಿಸುತ್ತಿರುವುದು ಸಹ ದಿಟ. ಮಂಡಳಿ ಹಾಗು ಆಟಗಾರರ ನಡುವಿನ ಹೊಂದಾಣಿಗೆ ಸರಿ ಹೊಂದದಿದ್ದಾಗ ಆಗುವ ಅನಾಹುತಕ್ಕೆ ವೆಸ್ಟ್ ಇಂಡೀಸ್ ಒಂದು ಜ್ವಲಂತ  ಉದಾಹರಣೆಯಷ್ಟೇ. ಕೊಂಚವೂ ದಾರಾಳವಾಗದ ಮಂಡಳಿ ಹಾಗು ಹಣವನ್ನೇ ಆಟವೆಂದು ಪರಿಗಣಿಸಿರುವ ಆಟಗಾರರು ಇವರಿಬ್ಬರನ್ನೂ ಸಮತಕ್ಕಡಿಯಲ್ಲಿ ಕೂರಿಸುವ ಕೈಗಳು ಬೇಕಾಗಿದೆ. ಮೈಕಲ್ ಹೋಲ್ಡಿಂಗ್ ನ ಮಾತುಗಳು ಮತ್ತೊಮ್ಮೆ ಆಟಗಾರರನ್ನು ಪ್ರೇರೇಪಿಸಬೇಕಿದೆ. ಗತಿಸಿ ಹೋದ ವಿಂಡೀಸ್ ನ ವೈಭವವನ್ನು ಮಗದೊಮ್ಮೆ ಚಿಗುರೊಡೆಸಬೇಕಿದೆ.

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post