X

ಭಾರತ ಸಾಧಿಸಿದ ಸಂಪರ್ಕ!

ಸಂವಹನ ಎಂಬುವುದಕ್ಕೆ ಹುಟ್ಟಿಲ್ಲ. ಅದು ಜೀವದೊಂದಿಗೇ ಹುಟ್ಟಿದ ಕಲೆ. ಹುಟ್ಟಿದ ಮಗು ಜೋರಾಗಿ ಅಳುತ್ತದಲ್ಲ? ಅದು ಮಗು ಸಂವಹಿಸಲು ಉಪಯೋಗಿಸುವ ವಿಧಾನವೇ. ಶಿಲಾಯುಗದ ಗೊರಿಲ್ಲಾದಿಂದ ಹಿಡಿದು ಸರ್ವ ಪ್ರಾಣಿಗಳೂ ಸಂವಹಿಸಲು ಒಂದಿಲ್ಲೊಂದು ವಿಧಾನವನ್ನು ಅನುಸರಿಸುತ್ತಿದ್ದವು. ಶಿಳ್ಳೆ, ಕೇಕೆ, ಕೈಸನ್ನೆ ಹೀಗೆ… ನಂತರ ಮನುಷ್ಯ ಭಾಷೆ ಕಲಿತ, ಬರವಣಿಗೆ ಕಲಿತ.  ಬರುಬರುತ್ತ ಹುಟ್ಟಿದ ನಾಗರೀಕತೆಗಳಲ್ಲಿ, ಸಾಂಪ್ರದಾಯಿಕ ವಿಧಾನಗಳಾದ ಪತ್ರ ಬರೆಯುವಿಕೆ, ಪಾರಿವಾಳ ಹಾರಿ ಬಿಡುವುದು ಮುಂತಾದವು ಚಾಲ್ತಿಯಲ್ಲಿದ್ದವು. ತೀರಾ ಇತ್ತೀಚಿನವರೆಗೂ ಅಂದರೆ ಎಲೆಕ್ಟ್ರಿಕ್ ಸಂವಹನ ಸಾಧನಗಳು ಜನ್ಮ ತಾಳುವುದಕ್ಕೂ ಮೊದಲು ಸಾಂಪ್ರದಾಯಿಕ ವಿಧಾನಗಳೇ ಬಳಕೆಯಲ್ಲಿದ್ದವು. ಕೊನೆಗೆ ಈ ಸಹಸ್ರಮಾನ ಮುಕ್ಕಾಲು ಪಾಲು ಮುಗಿಯುತ್ತಾ ಬಂದಾಗ ಸೀಮಾಫೋರ್ ಟೆಲಿಗ್ರಾಫ್, ಹಿಲಿಯೋಗ್ರಾಫ್(ಕನ್ನಡಿಗಳನ್ನು ಬಳಸಿ ದೂರದವರೆಗೂ ನಿರ್ದಿಷ್ಟ ಪ್ರಮಾಣದಲ್ಲಿ ಸೂರ್ಯನ ಬೆಳಕನ್ನು ಪ್ರತಿಫಲಿಸಿ ಸಂದೇಶ ಮುಟ್ಟಿಸಬಲ್ಲ ಸಾಧನ) ಮುಂತಾದ ಉಪಕರಣಗಳು ತೆರೆಗೆ ಬಂದವು. ಏನನ್ನೋ ಸೂಚಿಸಲು ಎತ್ತರದಲ್ಲಿ ನಿರ್ದಿಷ್ಟ ಸಂಕೇತವನ್ನೋ, ಧ್ವಜವನ್ನೋ ಸ್ಥಾಪಿಸುವುದು, ಅಥವಾ ಡ್ರಮ್ ಬೀಟ್’ಗಳನ್ನೋ, ದೊಡ್ಡ ಶಿಳ್ಳೆಯನ್ನೋ ಪ್ರಸರಿಸುವುದು ಹೀಗೆ ಅನೇಕ ತಂತ್ರಗಳು ಬಳಕೆಯಲ್ಲಿದ್ದವು. ಆದರೆ ಇವೆಲ್ಲದರಿಂದ ಶುರುವಾದ “ಸಂವಹನ”, ಇವತ್ತು ಟೆಲಿಗ್ರಾಫ್, ದೂರವಾಣಿ, ದೂರದರ್ಶನ, ಆಕಾಶವಾಣಿ,  ಫೈಬರ್ ಆಪ್ಟಿಕ್ಸ್, ಉಪಗ್ರಹಗಳವರೆಗೆ ಬಂದು ನಿಂತಿದೆ. ಮನುಷ್ಯನ ತಲೆ ಅಂತಿಥದ್ದಲ್ಲ ಅಂತ ತೋರಿಸಿಕೊಟ್ಟ ಈ “ಸಂವಹನ ವ್ಯವಸ್ಥೆ”ಯ ಜರ್ನಿ, ಇದೋ ನಿಮ್ಮ ಮುಂದೆ!

ಜಗತ್ತಿನಲ್ಲಿ ಆಧುನಿಕ ಸಂಪರ್ಕ ಸಾಧನಗಳ ಹುಟ್ಟು:

ಸೀಮಾಫೊರ್ ಸ್ಥಾವರಗಳನ್ನು ಕಟ್ಟಿಕೊಂಡು ತಂತ್ರಜ್ಞರು ಚಿಕ್ಕ ಮಾಹಿತಿಯನ್ನು ಕಳಿಸಲೂ ಒದ್ದಾಡಬೇಕಾಗಿದ್ದ ಕಾಲ ಅದು. ಸಂಪರ್ಕ ಸಾಧನಗಳ ಅಭಿವೃದ್ಧಿಯ ಮಹಾಪರ್ವಕ್ಕೆ ಒಂದು ಜರ್ಕ್ ಕೊಟ್ಟ ಕೀರ್ತಿ, ಮಾರ್ಕೋನಿಯ “ರೇಡಿಯೋ ತರಂಗ ಪ್ರಸರಣ”ದ ಆವಿಷ್ಕಾರಕ್ಕೆ ಹೋಗಬೇಕು. ಮಾರ್ಕೋನಿಗೆ 1909 ನೋಬೆಲ್ ತಂದುಕೊಟ್ಟ ಸಂಶೋಧನೆಯದು. ಈ ನಿಟ್ಟಿನಲ್ಲಿ ಭಾರತೀಯರೇ ಆದ ಜಗದೀಶ್ ಚಂದ್ರ ಬೋಸ್ ರನ್ನು ಸ್ಮರಿಸಲೇಬೇಕು. 1901ರಲ್ಲಿ ಮಾರ್ಕೋನಿ, ರೇಡಿಯೋ ಸಿಗ್ನಲ್ ಗಳನ್ನು ಮೊದಲ ಬಾರಿಗೆ ಎರಡು ಸಾವಿರ ಮೈಲುಗಳಷ್ಟು ದೂರ ಅಟ್ಲಾಂಟಿಕ್ ಸಾಗರವನ್ನು ದಾಟುವಂತೆ ಪ್ರಸರಿಸಿ, ನಂತರ ಸ್ವೀಕರಿಸಲು ಉಪಯೋಗಿಸಿದ್ದು ಜೆ. ಸಿ ಬೋಸ್ ಕಂಡು ಹಿಡಿದಿದ್ದ ರಿಸೀವರನ್ನು! ಅನೇಕ ಸಂಶೋಧನೆಗಳಲ್ಲಿ ಭಾರತೀಯರ ಸಾಧನೆಗಳು ನಿರ್ಲಕ್ಷಕ್ಕೊಳಪಟ್ಟಿರುವುದು ದುರಂತ. ರೇಡಿಯೋದೊಂದಿಗೆ, ಗ್ರಹಾಂಬೆಲ್ ಆವಿಷ್ಕರಿಸಿದ ದೂರವಾಣಿ ಕೂಡ ಮುಂದಾಗಲಿರುವ ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿತು. ಅದೇ ಸಮಯಕ್ಕೆ ಎಡೋರ್ಡ್ ಎಂಬ ಫ್ರೆಂಚ್ ಕಾದಂಬರಿಕಾರ, “ಟೆಲಿ-ಕಮ್ಮ್ಯುನಿಕೇಶನ್” ಅನ್ನುವ ಶಬ್ದವೊಂದನ್ನ ಬಳಸಿದ್ದ. ‘ಟೆಲಿ’ ಅಂದರೆ ಗ್ರೀಕ್ನಲ್ಲಿ ದೂರ ಅಂತರ್ಥ. ಕಮ್ಮ್ಯುನಿಕೇಶನ್ ಪದದ ಮೂಲವಾದ “ಕಮ್ಯುನಿಕೇರ್” ಎಂಬ ಪದಕ್ಕೆ ಲ್ಯಾಟಿನ್ ನಲ್ಲಿ “ಹರಡು” ಎಂದರ್ಥ.

ಭಾರತದಲ್ಲಿ ಸಂವಹನ ಕ್ರಾಂತಿ:

ಭಾರತದಲ್ಲಿ ಸಂವಹನ ವ್ಯವಸ್ಥೆ ಟಿಸಿಲೊಡೆಯಲು ಶುರು ಮಾಡಿದ್ದು ಬ್ರಿಟೀಶ್ ಆಡಳಿತದಲ್ಲೇ. 1851ರಲ್ಲೇ ಕೊಲ್ಕತ್ತಾ ಮತ್ತು ಅದರಿಂದ 58 ಕಿಲೋಮೀಟರ್ ದೂರವಿರುವ ಡೈಮಂಡ್ ಹಾರ್ಬರ್ ನಡುವೆ ಮೊದಲ ಟೆಲಿಗ್ರಾಫ್(ದೂರತಂತು) ಲೈನ್ ನಿರ್ಮಾಣಗೊಂಡಿತ್ತು. 1851ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಅದನ್ನು ಅಧಿಕೃತವಾಗಿ ಬಳಸಲು ಪ್ರಾರಂಭಿಸಿತು. ಭಾರತೀಯ ಪೋಸ್ಟ್ ಮತ್ತು ಟೆಲಿಗ್ರಾಫ್, ಜಗತ್ತಿನ ಅತ್ಯಂತ ಹಳೆಯ ವ್ಯವಸ್ಥೆಗಳಲ್ಲೊಂದು. ಯಶಸ್ಸು ಕಾಣುತ್ತಿದ್ದಂತೆ, 1853ರಲ್ಲಿ ದೇಶದಾದ್ಯಂತ ಸುಮಾರು 6,400 ಕಿಲೋಮೀಟರ್ ಗಳಷ್ಟು ಟೆಲಿಗ್ರಾಫ್ ಲೈನುಗಳನ್ನು ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಇದು ಕೊಲ್ಕತ್ತಾ-ಪೇಶಾವರ, ಆಗ್ರಾ-ಮುಂಬಯಿ-ಮದ್ರಾಸ್, ಬೆಂಗಳೂರು-ಊಟಿಗಳನ್ನು ಕನೆಕ್ಟ್ ಮಾಡಿತು. ವಿಲಿಯಮ್ ಓ-ಶಾಗ್ನೆಸ್ಸಿ ಎಂಬ ಮುಜರಾಯಿ ಇಲಾಖೆಯ ಅಧಿಕಾರಿ, ಇವೆಲ್ಲದರ ಜವಾಬ್ದಾರಿ ಹೊತ್ತಿದ್ದ.

ಭಾರತದಲ್ಲಿ ರೇಡಿಯೋ

ಭಾರತದಲ್ಲಿ ರೇಡಿಯೋ ಅಧಿಕೃತವಾಗಿ ಕಾರ್ಯಾರಂಭಿಸಿದ್ದು 1927ರಲ್ಲಿ. 1930ರಲ್ಲಿ ಭಾರತ ಸರ್ಕಾರ ರೇಡಿಯೋ ಪ್ರಸರಣವನ್ನ, ತನ್ನ ಸುಪರ್ದಿಗೆ ತೆಗೆದುಕೊಂಡಿತು. ಭಾರತೀಯ ರೇಡಿಯೋಗೆ 1937ರಲ್ಲಿ “ಆಲ್ ಇಂಡಿಯಾ ರೇಡಿಯೋ” ಎಂಬ ನಾಮಕರಣವಾಯಿತು. ಅದು “ಆಕಾಶವಾಣಿಯಾಗಿ” ಬದಲಾಗಿದ್ದು, ನಂತರ 1957ರಲ್ಲಿ. ಭಾರತೀಯರ ಮನೆಮನಗಳಲ್ಲಿ ರೇಡಿಯೋ ಮೂಡಿಸಿರುವ ಛಾಪೇ ವಿಶಿಷ್ಟವಾದದ್ದು. ಭಾರತದಲ್ಲಿ ಟೀವಿಗಳೆಲ್ಲ ಶ್ರೀಸಾಮಾನ್ಯನ  ಮನೆಗೆ ಬಂದಿದ್ದು ತಡವಾಗಿ. ಸ್ವಾತಂತ್ರ್ಯಾ ನಂತರ, ಭಾರತ ತೀರಾ ಬಡ ರಾಷ್ಟ್ರವಾಗಿದ್ದಾಗಿನಿಂದಲೂ, ಹಳ್ಳಿಗಾಡಿನಲ್ಲೂ ಸಹ “ಆಕಾಶವಾಣಿ”ಯೊಂದೇ ಹೊರ ಜಗತ್ತಿಗೆ ತೆರೆದುಕೊಡುತ್ತಿದ್ದ ಆಶಾಕಿರಣವಾಗಿತ್ತು. ಇಂದಿಗೂ ಅಪರೂಪಕ್ಕೆ ರೇಡಿಯೋ ಕೇಳಿದರೆ, ಅನೇಕರು ಬಾಲ್ಯದ ಸವಿನೆನಪಿಗೆ ಜಾರುತ್ತಾರೆ. ಇತ್ತೀಚಿಗೆ ಟಿವಿ, ಇಂಟರ್ನೆಟ್ ಮತ್ತು ಎಫ್ ಎಮ್ ರೇಡಿಯೋಗಳ ಹಾವಳಿಯಲ್ಲಿ, ಆಕಾಶವಾಣಿ ಸೊರಗಿದ್ದರೂ, “ಆಕಾಶವಾಣಿ’ ಅಂದರೆ ಭಾರತೀಯರಿಗೇನೋ ಒಂದು ಮಧುರ ಅನುಭೂತಿ. ಮಾರ್ಚ್ 2016ರವರೆಗೆ ಭಾರತದಲ್ಲಿ 345 ರೇಡಿಯೋ ಸ್ಟೇಶನ್ ಗಳಿವೆ.

ಆದರೆ ಎಫ್ ಎಮ್ ತಂತ್ರಜ್ಞಾನದ ಮೂಲಕ ರೇಡಿಯೋ ಯುವಜನತೆಯಲ್ಲೂ ತನ್ನ ಛಾಪನ್ನ ಉಳಿಸಿಕೊಂಡಿದೆ. ಎಫ್ ಎಮ್( ಫ್ರೀಕ್ವೆನ್ಸಿ ಮೊಡ್ಯುಲೇಶನ್) ತಂತ್ರಜ್ಞಾನ ಆಕಾಶವಾಣಿಯ ಆಂಪ್ಲಿಟ್ಯೂಡ್ ಮೊಡ್ಯುಲೇಶನ್ ಗಿಂತ ಭಿನ್ನ. ಇದರಲ್ಲಿ ವಾಹಕ ತರಂಗದ ಫ್ರೀಕ್ವೆನ್ಸಿಯನ್ನು, ಸಂದೇಶದ ಫ್ರೀಕ್ವೆನ್ಸಿಗೆ ಅನುಗುಣವಾಗಿ ಮಾರ್ಪಾಟು ಮಾಡಿ, ಎರಡನ್ನೂ ತಳಕು ಹಾಕಿ ಪಸರಿಸಲಾಗುತ್ತದೆ. ಇದು ಹೆಚ್ಚಿಗೆ ದೂರ ಕ್ರಮಿಸಲಾರದು, ಆದರೆ ಕ್ರಮಿಸಿದಷ್ಟು ದೂರ ಉತ್ತಮ ದಕ್ಷತೆಯನ್ನು ಹೊಂದಿರುತ್ತದೆ. ಎಫ್ ಎಮ್ ಗಳು ಗೊಸ್’ಗುಡುವುದು ಕಮ್ಮಿ ನೋಡಿ! ಎಫ್ ಎಮ್ ಭಾರತದಲ್ಲಿ ತನ್ನ ಮೊದಲ ದನಿ ಹೊರಡಿಸಿದ್ದು ಚೆನ್ನೈನಲ್ಲಿ, 1977ರ ಜುಲೈ 23ರಂದು.

ಭಾರತದಲ್ಲಿ ಟೀವಿ

ಟೀವಿ  ಭಾರತಕ್ಕೆ ಬಂದಿದ್ದು 1959ರಲ್ಲೇ ಆದರೂ, ಪೂರ್ಣಪ್ರಮಾಣದಲ್ಲಿ ಪ್ರಸರಣ ಆರಂಭಿಸಿದ್ದು 1975ರಲ್ಲಿ. ಭಾರತ ಸರ್ಕಾರ ದೂರದರ್ಶನ ಅಂತ ತನ್ನದೇ ವಾಹಿನಿಯನ್ನು ಪ್ರಾರಂಭಿಸಿತು. ಆಗಿನ ಕಾಲದಲ್ಲಿ ಅದು ಪ್ರತಿಸ್ಪರ್ಧಿಯೇ ಇಲ್ಲದ ಏಕೈಕ ಚಾನೆಲ್. ಮಾಹಿತಿ ಮತ್ತು ಪ್ರಸರಣ ಇಲಾಖೆ ದೂರದರ್ಶನ ವಾಹಿನಿಯನ್ನು ನಡೆಸಿಕೊಂಡು ಹೋಗುತ್ತಿತ್ತು. 1997ರಲ್ಲಿ ಪ್ರಸಾರ ಭಾರತಿ ರೂಪ ತಳೆದು, ದೂರದರ್ಶನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು.

ಭಾರತಕ್ಕೆ ಬಂದಿದ್ದು ತಡವಾದರೂ, ಟೀವಿ ಭಾರತೀಯರ ಮನಸ್ಸನ್ನು ಆಕ್ರಮಿಸಿಕೊಳ್ಳುವುದಕ್ಕೆ ತಡ ಮಾಡಲಿಲ್ಲ. ಮೊದಲು ಎಲ್ಲೋ ದೂರದಿಂದ ನೋಡಲು ಸಿಗುತ್ತಿದ್ದ ಟೀವಿ, ಮನೆಯೊಳಗೇ ಬಂದ ಮೇಲಂತೂ, ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಯಿತು. ಬರೀ ಮಾತಷ್ಟೇ ಆಡುತ್ತಿದ್ದ ರೇಡಿಯೋ, ಅಟ್ಟ ಸೇರಿತು. ಒಂದಿದ್ದ ದೂರದರ್ಶನ, 6 ರಾಷ್ಟ್ರೀಯ ವಾಹಿನಿ ಹಾಗೂ 11 ಸ್ಥಳೀಯ ವಾಹಿನಿಗಳಾಗಿ ವಿಸ್ತಾರಗೊಂಡಿತು. ಮಾಧ್ಯಮ ಕ್ಷೇತ್ರದಲ್ಲಿ ಉದಾರೀಕರಣದ ನಂತರವಂತೂ, ಸ್ಟಾರ್, ಜೀ ನಂತಹ ಸಂಸ್ಥೆಗಳು ಅಖಾಡಕ್ಕಿಳಿದವು. ಟೀವಿ ಅಭೂತಪೂರ್ವ ಜನಪ್ರಿಯತೆ ಗಳಿಸಿದ್ದರಿಂದ, ಸಹಜವಾಗಿಯೇ ಒಂದು ಬೃಹತ್ ಬಹುಕೋಟಿ ಉದ್ಯಮವಾಗಿ ಬೆಳೆದು ನಿಂತಿತು. ಮನರಂಜನೆ, ಸಂಗೀತ, ಕ್ರೀಡೆ, ಸುದ್ದಿ, ಫ್ಯಾಶನ್, ಸಾಹಸ, ಪ್ರವಾಸ, ಕಾರ್ಟೂನ್, ವಿಜ್ಞಾನ ಹೀಗೆ ಇವೆಲ್ಲ ಕ್ಷೇತ್ರಗಳಿಗೂ ಪ್ರತ್ಯೇಕವಾಗಿ ನೂರಾರು ಚಾನೆಲ್ ಗಳು ಹುಟ್ಟಿಕೊಂಡವು. ಕಳೆದ ವರ್ಷದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 857 ಟೀವಿ ಚಾನೆಲ್ ಗಳಿವೆ. 2012ರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿರುವ 14.8 ಕೋಟಿ ಮನೆಗಳ ಪೈಕಿ, 12.6 ಕೋಟಿ ಮನೆಗಳು ದೂರದರ್ಶನವನ್ನು ಹೊಂದಿವೆ!

ದೂರವಾಣಿ ಇನ್ ಭಾರತ!

1880ರಲ್ಲಿ ಓರಿಯಂಟಲ್ ಮತ್ತು ಆಂಗ್ಲೋ ಇಂಡಿಯನ್ ಎಂಬ ಕಂಪನಿಗಳು ಟೆಲಿಗ್ರಾಫ್ ಗಳನ್ನು ಒದಗಿಸುವುದಾಗಿ ಕೋರಿ ಭಾರತಕ್ಕೆ ಬಂದಿದ್ದಲ್ಲಿಂದ ಭಾರತದಲ್ಲಿ ದೂರವಾಣಿಯ ಬೀಜ ಮೊಳಕೆಯೊಡೆಯಿತು. ಆದರೆ ಬ್ರಿಟೀಶ್ ಸರ್ಕಾರ, “ದೂರಸಂಪರ್ಕ ಸರ್ಕಾರದ ಜವಾಬ್ದಾರಿ” ಅಂತ ಒಪ್ಪಿಗೆ ನಿರಾಕರಿಸಿತ್ತು. ನಂತ “ಓರಿಯಂಟಲ್” ಗೆ ಪರ್ಮಿಶನ್ ನೀಡಿ, ಮೇಜರ್ ಬೇರಿಂಗ್ 1882ರ ಜುಲೈ 28ರಂದು ಕಲ್ಕತ್ತಾ, ಮುಂಬೈ ಮತ್ತು ಮದ್ರಾಸ್ ಗಳಲ್ಲಿ ಟೆಲಿಫೋನ್ ಎಕ್ಸ್ಚೇಂಜ್ಗಳನ್ನು ಉದ್ಘ್ಹಾಟಿಸಿದ.  ಆಗ ಕಲ್ಕತ್ತೆಯ ಕಚೇರಿಗೆ 93 ಗ್ರಾಹಕರಿದ್ದರಂತೆ. ಸ್ವಾಂತಂತ್ರ್ಯ ಬಂದ ಸಮಯದಲ್ಲಿ ಭಾರತದಲ್ಲಿ 80,000 ಟೆಲಿಫೋನ್ ಗಳಿದ್ದವು. ಸ್ವಾಂತಂತ್ರ್ಯಾ ನಂತರದ ಸ್ಥಿತಿಗತಿಯಲ್ಲಿ, ದೂರವಾಣಿಯನ್ನು ಒಂದು ಉಪಕರಣವಾಗಿ ನೋಡದೆ, ಪ್ರತಿಷ್ಠೆಯ ಸಂಕೇತವಾಗಿ ನೋಡುತ್ತಿದ್ದರು. 1971ರ ಹೊತ್ತಿಗೆ ಟೆಲಿಫೋನ್ ಗಳ ಸಂಖ್ಯೆ 9,80,000ಕ್ಕೆ ಏರಿತು. ಮತ್ತೂ ಹತ್ತು ವರ್ಷದಲ್ಲಿ 20,15,000ಕ್ಕೆ ಏರಿತು. ಕೊನೆಗೆ 1991 ಆಗುವಷ್ಟರಲ್ಲಿ 50,07,000 ದೂರವಾಣಿಗಳು ಭಾರತದಲ್ಲಿದ್ದವು.

ನಿಜವಾದ ಕ್ರಾಂತಿ ಆರಂಭವಾಗಿದ್ದು 1991ರ ಉದಾರೀಕರಣದ ನಂತರ. 1981ರಲ್ಲೇ ಇಂದಿರಾ ಗಾಂಧಿ ದೇಶಾದ್ಯಂತ ವರ್ಷಕ್ಕೆ 50,00,000 ಲೈನುಗಳನ್ನು ಹಾಕಲು ಐಟಿಐ ಮತ್ತು ಫ್ರೆಂಚ್ ಕಂಪನಿಯ ನಡುವೆ ಸಹಯೋಗಕ್ಕೆ ಯತ್ನಿಸಿದರು. ಆದರೆ ವಿರೋಧ ಪಕ್ಷಗಳು ಒಪ್ಪಲಿಲ್ಲ. ಸ್ಯಾಮ್ ಪಿತ್ರೋಡಾ ಎಂಬ ಅಮೆರಿಕೆಯಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯ ತಂತ್ರಜ್ಞಾನಿ, ಒಮ್ಮೆ ತೊಂಬತ್ತರ ದಶಕದಲ್ಲಿ ಭಾರತಕ್ಕೆ ಬಂದಾಗ ಪತ್ನಿಗೆ ಕಾಲ್ ಮಾಡಲು ಯತ್ನಿಸಿ ವಿಫಲವಾಗಿದ್ದರು. ತಾಯ್ನಾಡಿಗೆ ಮರಳಿ, ದೂರಸಂಪರ್ಕ ವ್ಯವಸ್ಥೆಯನ್ನು  ಉದ್ಧರಿಸಬೇಕು ಅಂತ ತೀರ್ಮಾನಿಸಿಯೇ ಬಿಟ್ಟರು ಸ್ಯಾಮ್. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸಾತ್ ನೀಡಿದಾಗ, ‘ಸೆಂಟರ್ ಫಾರ್ ಡೆವೆಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್’ ಪ್ರಾರಂಭಿಸಿ, ಪ್ರಥಮಬಾರಿಗೆ ಭಾರತದಲ್ಲಿ ಎಲೆಕ್ಟ್ರಿಕ್ ಎಕ್ಸ್ಚೇಂಜ್ ಗಳನ್ನು ತಯಾರಿಸಿದರು. ಸ್ಯಾಮ್ ಪಿತ್ರೋಡಾ ಭಾರತೀಯ ದೂರಸಂಪರ್ಕ ಇತಿಹಾಸದಲ್ಲಿ ಮರೆಯಲಾಗದ ವ್ಯಕ್ತಿತ್ವ. ಅವರು ಸರ್ಕಾರದೊಂದಿಗೆ ಜಾರಿಗೆ ತಂದ ಅನೇಕ ಯೋಜನೆಗಳು ನೀಡಿದ ಕೊಡುಗೆ ಅಪಾರ.

1985ರಲ್ಲಿ ದೂರಸಂಪರ್ಕ, ಅಂಚೆಯಿಂದ ಹೊರ ಬಂದು ಸ್ವತಂತ್ರ ಇಲಾಖೆಯಾಯಿತು.  ಮರುವರ್ಷ, ಮಹಾನಗರಗಳಿಗೆ ಸೇವೆ ಒದಗಿಸಲೋಸುಗ MTNL ಮತ್ತು ಅಂತರಾಷ್ಟ್ರೀಯ+ ಸಂಪರ್ಕ ಒದಗಿಸಲೋಸುಗ VSNL ಎಂದು ಮತ್ತೆರಡು ಸಂಸ್ಥೆಗಳು ಹುಟ್ಟಿಕೊಂಡವು. ಆದರೆ ಇವೆಲ್ಲ ಕೇಂದ್ರ ಸರ್ಕಾರದ ಅಧೀನದಲ್ಲೆ ಇದ್ದವು. ಆದರೆ 1991ರಲ್ಲಿ ದೂರಸಂಪರ್ಕ ಸೇವೆಗೆ ಬೇಡಿಕೆ ತೀವ್ರವಾಗಿ ಹೆಚ್ಚಿದ್ದರಿಂದ, ಖಾಸಗೀ ಸಹಭಾಗಿತ್ವವನ್ನು ಒಪ್ಪಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಬಂತು. ನರಸಿಂಹರಾವ್ ಸರ್ಕಾರ “ಸರ್ವರಿಗೂ ದೂರಸಂಪರ್ಕ’ ಅನ್ನುವ ಘೋಷನೆಯಡಿ “ರಾಷ್ಟ್ರೀಯ ದೂರಸಂಪರ್ಕ ಕಾಯಿದೆ”ಯನ್ನು 1994ರಲ್ಲಿ ಅನುಮೋದಿಸಿತು. ಅಷ್ಟರಲ್ಲಿ ವಿಶ್ವಬ್ಯಾಂಕ್ ಅಂತರಾಷ್ಟ್ರೀಯ ದೂರಸಂಪರ್ಕ ಸೇವೆಯಲ್ಲೂ ಖಾಸಗಿ ಸಹಭಾಗಿತ್ವವನ್ನು ಒಪ್ಪಿಕೊಳ್ಳಲು ಸಲಹೆ ನೀಡಿತು. ಆದರೆ ಸರ್ಕಾರ ಮೊದಲು ದೇಶೀಯ ಸೇವೆಯಲ್ಲೇ ಖಾಸಗೀ ಕಂಪನಿಗಳಿಗೂ ಸೇವೆ ಒದಗಿಸಲು ಅನುಮತಿ ನೀಡಿತು. ದೇಶ ಇಪ್ಪತ್ತು ಟೆಲಿಕಾಮ್ ವೃತ್ತಗಳಾಗಿ, ಹದಿನೆಂಟು ಮೊಬೈಲ್ ಫೋನ್ ವೃತ್ತಗಳಾಗಿ ವಿಂಗಡನೆಯಾಯಿತು.

1997ರಲ್ಲಿ, ದೂರಸಂಪರ್ಕದ ಫೀಲ್ಡಿನಲ್ಲಿ ತೆರಿಗೆ ಮತ್ತು ಕಾಯಿದೆ ಮಾರ್ಪಾಡುಗಳಲ್ಲಿ ರಾಜಕೀಯದ ಹಸ್ತಕ್ಷೇಪವನ್ನು ತಡೆಯಲು “ಟ್ರಾಯ್” ಎಂಬ ಸಂಸ್ಥೆ ಹುಟ್ಟಿಕೊಂಡಿತು. ನರಸಿಂಹರಾವ್ ನಂತರ ಅಧಿಕಾರಕ್ಕೆ ಬಂದ ವಾಜಪೇಯಿ , ಉದಾರೀಕರಣದ ಪರವೇ ಇದ್ದರು. 2000ನೇ ಇಸವಿಯಲ್ಲಿ ದೂರಸಂಪರ್ಕ ಇಲಾಖೆಯ ಹೆಸರು ‘ಭಾರತ್ ಸಂಚಾರ್ ನಿಗಮ್ ಲಿಮಿಟೆಡ್’ (ಬಿಎಸ್ಎನ್ಎಲ್) ಎಂದು ಬದಲಾಯಿತು. 2002ರಲ್ಲಿ ಅಂತಾರಾಷ್ಟ್ರೀಯ ಕರೆಗಳ ಸೇವೆ ಒದಗಿಸುತ್ತಿದ್ದ VSNL ಅನ್ನು ಸರ್ಕಾರ ಖಾಸಗೀಕರಣಗೊಳಿಸಿ, ಮೊಬೈಲ್ ಸೇವೆ ಒದಗಿಸುವ ಸಂಸ್ಥೆಗಳಿಗೆ ಕಡಿಮೆ ದುಡ್ಡಿಗೆ ಅನುಮತಿ ನೀಡಲೂ ಪ್ರಾರಂಭಿಸಿತು. ಇದು ವಿದೇಶಿ ಕಂಪನಿಗಳಿಗೆ ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಭಾರೀ ಪ್ರೋತ್ಸಾಹ ನೀಡಿದಂತಾಯಿತು. ಇವೆಲ್ಲದರ ಪರಿಣಾಮವಾಗಿ ದೂರಸಂಪರ್ಕ ಸೇವೆ ಅಗ್ಗವಾಗಿ, ಸಾಮಾನ್ಯನಿಗೂ ಸುಲಭದಲ್ಲಿ ದೊರಕುವಂತಾಯಿತು.

ತಂತ್ರಜ್ಞಾನ ಜಗತ್ತೂ ತನ್ನ ಕೆಲಸವನ್ನು ಮಾಡುತ್ತಲೇ ಇತ್ತು. ವರ್ಷದಿಂದ ವರ್ಷಕ್ಕೆ ತಂತ್ರಜ್ಞಾನಗಳೂ, ಉಪಕರಣಗಳೂ ಉನ್ನತವಾಗತೊಡಗಿದವು. ಮೊಬೈಲ್ ಫೋನುಗಳ ನಾಗಾಲೋಟವನ್ನಂತೂ ತಡೆಯುವವರೇ ಇಲ್ಲವಾದರು. 1995ರಲ್ಲಿ ಬಂಗಾಲದ ಮುಖ್ಯಮಂತ್ರಿ ಜ್ಯೋತಿ ಬಸು, ಅಂದಿನ ದೂರಸಂಪರ್ಕ ಮಂತ್ರಿ ಸುಖ್ರಾಮ್ ಗೆ ಭಾರತದ ಮೊದಲ ಮೊಬೈಲ್ ಕರೆ ಮಾಡಿದ್ದರು. 2001ರಲ್ಲಿ ಮೂವತ್ತೇಳು ಲಕ್ಷವಿದ್ದ ಮೊಬೈಲ್ ಗಳ ಸಂಖ್ಯೆ 2012ರಷ್ಟೊತ್ತಿಗೆ 92.9 ಕೋಟಿಗೆ ಬಂದು ತಲುಪಿತ್ತು! 2004ರಲ್ಲಿ ಸ್ಥಿರ ದೂರವಾಣಿಗಳ ಸಂಖ್ಯೆಯನ್ನು ಮೊದಲ ಬಾರಿಗೆ ಮೀರಿಸಿದ್ದ ಮೊಬೈಲ್, ಇವತ್ತು ಸ್ಥಿರ ದೂರವಾಣಿಗಳಿಗಿಂತ ಇಪ್ಪತ್ತು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿದೆ. ಭಾರತದ ದೂರಸಂಪರ್ಕ ಕ್ಷೇತ್ರ ಪ್ರತೀವರ್ಷ ಶೇಕಡ 40ರಷ್ಟು ಬೆಳೆಯುತ್ತಾ, ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಉದ್ಯಮಗಳಲ್ಲೊಂದು.

ಭಾರತದಲ್ಲಿ ಇಂಟರ್ನೆಟ್:

ಭಾರತಕ್ಕೆ ಇಂಟರ್ನೆಟ್ ಕಾಲಿಟ್ಟಿದ್ದು ಸುಮಾರು 1995ರಲ್ಲಿ. VSNL ಭಾರತದಲ್ಲಿ ಮೊದಲು ಈ ಸೇವೆಯನ್ನು ಪ್ರಾರಂಭಿಸಿತು. ಮೊದಲ ಆರು ತಿಂಗಳಲ್ಲೇ ಹತ್ತುಸಾವಿರ ಗ್ರಾಹಕರು ದೊರಕಿದರು. ಆದರೆ ಅಂತರ್ಜಾಲದ್ದು ರಾಕಿಂಗ್ ಎಂಟ್ರಿ ಆಗಿರಲಿಲ್ಲ. ಭಾರತದಲ್ಲಿ ಅದು ಜನಪ್ರಿಯವಾಗಿದ್ದು ಕ್ರಮೇಣವಾಗಿ. ಮೊದಲ ಹತ್ತು ವರ್ಷದಲ್ಲಿ ಅಂತರ್ಜಾಲ ಕ್ಷೇತ್ರದ ಬೆಳವಣಿಗೆ ತೃಪ್ತಿದಾಯಕವಾಗಿರಲಿಲ್ಲ. 2005ರ ನಂತರ ಚೇತರಿಸಿಕೊಂಡಿತಾದರೂ, ಹೇಳಿಕೊಳ್ಳುವಂಥ ಪ್ರಗತಿಯನ್ನೇನು ಕಂಡಿರಲಿಲ್ಲ. ಆದರೆ 2010ರಲ್ಲಿ ಕೇಂದ್ರ ಸರ್ಕಾರ 3ಜಿ ಮತ್ತು 4ಜಿ ಸ್ಪೆಕ್ಟ್ರಮ್ ಗಳನ್ನು ಹರಾಜಿಗೆ ಹಾಕಿತು. ನಂತರದ ದಿನಗಳಲ್ಲಿ ಅಂತರ್ಜಾಲ ಒದಗಿಸಲು ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತು. ದರಗಳಲ್ಲಿ ಕಡಿತ, ವೇಗಭರಿತ ಸೇವೆಯಂತಹ ಅಭಿವೃದ್ಧಿಗಳಾದವು. ಆವತ್ತು ಶುರುವಾದ ಸ್ಪರ್ಧೆ ಇವತ್ತಿನ ಜಿಯೋವರೆಗೂ ನಿಂತಿಲ್ಲ.

ಈಥರ್ನೆಟ್, ಆಪ್ಟಿಕಲ್ ಫೈಬರ್ಗಳು, ವೈಫೈ, ವೈ-ಮ್ಯಾಕ್ಸ್ ಮುಂತಾದ ತಂತ್ರಜ್ಞಾನಗಳು ಭಾರತದಲ್ಲಿ ಚಾಲ್ತಿಯಲ್ಲಿವೆ. 2015ರ ಅಂಕಿಅಂಶಗಳ ಪ್ರಕಾರ ಭಾರತ 30 ಕೋಟಿ ಅಂತರ್ಜಾಲ ಬಳಕೆದಾರರೊಂದಿಗೆ ಚೀನಾದ ನಂತರ, ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆ. ಆದರೆ ಭಾರತದಲ್ಲಿ ಅಂತರ್ಜಾಲದ ಸರಾಸರಿ ವೇಗ ವಿದೇಶಗಳಿಗಿಂತ ತುಂಬಾ ಕೆಳಮಟ್ಟದಲ್ಲಿತ್ತು. 2007ರಲ್ಲಿ, ವಿಶ್ವ 56 ಲಕ್ಷ ಬಿಟ್ಸ್ ಗಳನ್ನು ಸೆಕೆಂಡೊಂದರಲ್ಲಿ ಪಡೆಯಲು ಸಾಧ್ಯವಿದ್ದರೆ, ಭಾರತಕ್ಕೆ ಕೇವಲ 40 ಸಾವಿರ ಬಿಟ್ಸ್ ಗಳನ್ನು ಪಡೆಯಲು ಮಾತ್ರ ಶಕ್ಯವಿತ್ತು. ಈಗ ಪರಿಸ್ಥಿತಿ ಸುಧಾರಣೆಯಾಗಿದೆ.

ಇಂಟರ್ನೆಟ್ ನಲ್ಲಿ ಪತ್ರಿಕೆಯಿದೆ, ಟೀವಿಯಿದೆ, ಸಿನೆಮಾಗಳಿವೆ, ವಿಜ್ಞಾನವಿದೆ, ಪ್ರವಾಸವಿದೆ, ಪ್ರಪಂಚವೇ ಇದೆ. ಅದು ಬಲಶಾಲಿ ಹಾಗೂ ಅಷ್ಟೇ ಅಪಾಯಕಾರಿ ಕೂಡ. ಭಾರತ ಸರ್ಕಾರ ಅಂತರ್ಜಾಲವನ್ನು ಹಳ್ಳಿಗಳಿಗೂ ವಿಸ್ತರಿಸಲು, ಆ ಮೂಲಕ ಜನರಿಗೆ ಶಿಕ್ಷಣವನ್ನೂ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. 2013ರ ವರದಿಗಳ ಪ್ರಕಾರ, ಭಾರತದ ಅಂತರ್ಜಾಲ ಜಗತ್ತಿನಲ್ಲಿ  ಬಿಎಸ್ಎನ್ನೆಲ್  ಅತಿದೊಡ್ಡ ಸಂಸ್ಥೆ. ಅದು ಗ್ರಾಮೀಣ ಪ್ರದೇಶಗಳಿಗೆ ರಿಯಾಯಿತಿ ದರದಲ್ಲಿಯೂ ಸೇವೆ ಒದಗಿಸುತ್ತದೆ. ಸ್ಮಾರ್ಟ್ ಫೋನ್ ಗಳು ಬಂದ ಮೇಲಂತೂ, ಅಂತರ್ಜಾಲ ಜಲಕ್ಕಿಂತ ಸುಲಭವಾಗಿ ಕೈಗೆಟಕುತ್ತಿದೆ. ಈ ವರ್ಷದಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆದಾರರ ಸಂಖ್ಯೆಯೇ ಭಾರತದಲ್ಲಿ 50 ಕೋಟಿಯನ್ನು ಮೀರಿ ಹೋಗುವ ಅಂದಾಜಿದೆ.

ಭಾರತದ ಸಂವಹನ ಕ್ರಾಂತಿಗೆ ಇಸ್ರೋದ ಇನ್ಸ್ಯಾಟ್ ಉಪಗ್ರಹಗಳ ಸರಣಿ ಅಪಾರ ಕೊಡುಗೆ ನೀಡಿದೆ. ಆ ಸರಣಿಯಲ್ಲಿ ಇದುವರೆಗೆ 24 ಉಪಗ್ರಹಗಳು ಹಾರಿದ್ದು, 11 ಉಪಗ್ರಹಗಳು ಇನ್ನೂ ಕಾರ್ಯಾಚರಣೆಯಲ್ಲಿವೆ. ಸರ್ಕಾರೀ ಸ್ವಾಮ್ಯದ ದೂರಸಂಪರ್ಕ ಇಲಾಖೆ(ಈಗ ಬಿಎಸ್ಎನ್ನೆಲ್) ಭಾರತದ ಮೂಲೆ ಮೂಲೆಗೆ, ವಿಶೇಷವಾಗಿ ಖಾಸಗೀ ಕಂಪನಿಗಳು ಹೋಗಲೂ ಹಿಂಜರಿಯುವ ಗ್ರಾಮ ಪ್ರದೇಶಗಳಿಗೆ ದೂರಸಂಪರ್ಕ ಒದಗಿಸುವಲ್ಲಿ ಮಹತ್ತರ ಸಾಧನೆ ಮಾಡಿದೆ.

          ಮನುಷ್ಯ ಇವತ್ತು ಈ ಮಟ್ಟಿಗೆ ಅಭಿವೃದ್ಧಿ ಹೊಂದಿರಲು ಸಾಧ್ಯವಾಗಿರುವುದು ಆತ ಕಟ್ಟಿಕೊಂಡ ಅದ್ಭುತ ಸಂವಹನ ವ್ಯವಸ್ಥೆಯಿಂದಲೇ.  ನಾವು “ಮನೆಗೆ ಬರುವುದು ತಡವಾಗುತ್ತದೆ” ಅನ್ನುವುದರಿಂದ ಹಿಡಿದು, ಇಸ್ರೊ ವಿಜ್ಞಾನಿಗಳು ಹಾರಿದ ಉಪಗ್ರಹವನ್ನು ಕಕ್ಷೆಸೇರಿಸುವಲ್ಲಿಗೂ ಎಲ್ಲರೂ ಅವಲಂಬಿತವಾಗಿರುವುದು ಈ ವ್ಯವಸ್ಥೆಯ ಮೇಲೆಯೇ.  ಆದರೆ ಇದನ್ನೂ ಸೇರಿ ಎಲ್ಲಾ ತಂತ್ರಜ್ಞಾನವೂ ಸಮೃದ್ಧಿಗೂ ಕಾರಣವಾಗಬಹುದು, ಯುದ್ಧಕ್ಕೂ ಕಾರಣವಾಗಬಹುದು. ಮನುಷ್ಯನ ದುರಾಸೆಗಳು ಆತನ ಹಾದಿ ತಪ್ಪಿಸಬಾರದಷ್ಟೇ. ಭವಿಷ್ಯದಲ್ಲೂ ಈ ಕ್ಷೇತ್ರದಲ್ಲಿ ಅಪರಿಮಿತ ಸಾಧ್ಯತೆಗಳಿವೆ. ಎಲ್ಲವೂ ಮಾನವನನ್ನು ಮತ್ತಷ್ಟು ಮಾನವನನ್ನಾಗೇ ಮಾಡಲಿ, ರಾಕ್ಷಸನನ್ನಾಗಿ ಅಲ್ಲ ಅನ್ನುವ ಆಸೆಯೊಂದಿಗೆ….

(ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

Facebook ಕಾಮೆಂಟ್ಸ್

Sanketh D Hegde: ವೃತ್ತಿ ವಿಜ್ಞಾನ. ಬರವಣಿಗೆ ನನ್ನ ಹವ್ಯಾಸ ಅಂತ ಹೇಳಲಾರೆ. ಅದು ನನಗೊಂದು ಆಪ್ತಮಿತ್ರ. ಪ್ರಚಲಿತ ವಿದ್ಯಮಾನಗಳು ಮತ್ತು ವಿಜ್ನಾನದ ಬಗ್ಗೆ ಬರೆಯುತ್ತೇನೆ. ಹುದ್ದೆ-ಗಿದ್ದೆ ಏನಿಲ್ಲ, ಇಂಜಿನಿಯರಿಂಗ್ (ECE) ಓದುತ್ತಿದ್ದೇನೆ. ಪ್ರಶಸ್ತಿಗಳ ಗರಿಗಳೆಲ್ಲ ಇಲ್ಲ. ಕೆಲವು ರಾಜ್ಯ, ರಾಷ್ಟ್ರಮಟ್ಟಗಳ ಸ್ಪರ್ಧೆ, ಚರ್ಚೆ, ಪ್ರಬಂಧಗಳನ್ನ ಗೆದ್ದಿದ್ದೇನಷ್ಟೆ. ಇನ್ನೇನಿಲ್ಲ, ನೀವುಂಟು, ನನ್ನ ತೊದಲು ಬರಹಗಳುಂಟು. ಕನ್ನಡದ ಮೇಲಿನ ಪ್ರೀತಿ, ನನ್ನನ್ನ ಬರೆಸುತ್ತೆ!
Related Post