X

ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಲಿ

ನಿಸರ್ಗದ ಜೊತೆ ಸಮಾನ್ಯ ಜೀವಿಯಂತೆ ಬೆರೆತು ಬಾಳಬೇಕಾದ ಮಾನವ ಅಭಿವೃದ್ದಿ ಎನ್ನುವ ಮಾನದಂಡದಿಂದ ಸಂಪೂರ್ಣ ಕುರುಡಾಗಿದ್ದಾನೆ. ತನ್ನ ಸ್ವಾರ್ಥ ಬದುಕಿಗಾಗಿ ಇಂದು ಪರಿಸರ ನಾಶಮಾಡುತ್ತಿರುವುದರಿಂದ ವನ್ಯ ಜೀವಸಂಕುಲಗಳ ನಾಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನುಷ್ಯ ತಾನು ಸಕಲ ಜೀವ ಸಂಕುಲಗಳಂತೆ ಒಂದು ಜೀವಿ ಎನ್ನುವುದನ್ನು ಮರೆತು ಇಡೀ ಜೀವ ಸಂಕುಲ, ಅರಣ್ಯ ಸಂಪತ್ತನ್ನು ನಾಶ ಮಾಡಲು ಹೊರಟಿದ್ದಾನೆ. ನೈಸರ್ಗಿಕ ಪ್ರದೇಶಗಳನ್ನು ಹಾಗೂ ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನು ರಕ್ಷಿಸಿ ಉಳಿಸಬೇಕಾದ ಮನುಷ್ಯನೇ ಇಂದು ಅಧಿಕಾರ ಮತ್ತು ಸಂಪತ್ತಿನ ಆಸೆ ಆಮಿಷಗಳಿಗೆ ಬಲಿಯಾಗಿ ಪರಿಸರ ನಾಶಕ್ಕೆ ಮುಂದಾಗಿರುವುದು ದುರಾದೃಷ್ಟಕರ ಸಂಗತಿ.

ಯಾವುದು ಪರಿಸರದ ಮೇಲೆ ದುಷ್ಟರಿಣಾಮ ಬೀರುತ್ತದೆ, ಯಾವುದು ಪೂರಕವಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನವು ಇಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ದಾಸರಾಗಿದ್ದೇವೆ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ದೆಸೆಯಿಂದ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಹೆಚ್ಚಿನ ಮನುಷ್ಯರು ಪರಿಸರಕ್ಕೆ ಮಾರಕವಾಗುವಂತ ಜೀವನ ಕ್ರಮವನ್ನು ಅನುಸರಿಸಿಕೊಂಡು ಪರಿಸರದಲ್ಲಿ ನಾವು ಒಂದು ಜೀವಿಸಂಕುಲ ಎನ್ನುವುದನ್ನೆ ಮರೆತುಬಿಟ್ಟಿದ್ದೇವೆ. ಇತರ ಜೀವಿಗಳಂತೆ ಮನುಷ್ಯ ಜೀವಿಯೂ ಪ್ರಕೃತಿಯ ನಿಯಮಗಳನ್ನು ಪಾಲಿಸಿದ್ದರೆ ಬರಗಾಲವಾಗಿರಬಹುದು, ಹವಾಮಾನ ವೈಪರಿತ್ಯ, ಪರಿಸರ ಮಾಲಿನ್ಯ ಇದ್ಯಾವ ಸಮಸ್ಯೆಗಳು ಬರುತ್ತಿರಲಿಲ್ಲ.

ಪರಿಸರವನ್ನು ಬೆಳಸಿ ಸಂರಕ್ಷಿಸಬೇಕಾದ ಮಾನವ, ಪರಿಸರವನ್ನು ನಾಶಮಾಡುವುದರ ಜೊತೆಗೆ ಮಾಲಿನ್ಯ ಮಾಡುತ್ತಿದ್ದು ಇದರಿಂದಾಗಿ ಕೆಲವು ಜೀವ ಸಂಕುಲಗಳು ನಾಶವಾಗುತ್ತಿವೆ. ಇದರ ಪ್ರತಿಫಲ ಮನುಷ್ಯನಿಗೂ ತಟ್ಟಿದೆ. ಇದಕ್ಕೆ ಒಂದು ಸ್ಪಷ್ಟವಾದ ಉದಾಹರಣೆಯೆಂದರೆ 1984ರಲ್ಲಿ ಮಧ್ಯಪ್ರದೇಶದ ಭೂಪಾಲ್‍ನಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆ. ಇದರಿಂದಾಗಿ ಸಾವಿರಾರು ಜನರು ಮರಣಹೊಂದಿರುವ ಘಟನೆ ನಮ್ಮ ಕಣ್ಣ ಮುಂದಿದ್ದರು ಎಚ್ಚೆತ್ತುಕೊಳ್ಳದ ಮನುಷ್ಯ ಕುಲ ಸಕಲ ಜೀವ ರಾಶಿಗಳ ಮಾರಣಹೋಮಕ್ಕೆ ಕಡಿವಾಣ ಹಾಕದಿದ್ದರೆ ಮನುಷ್ಯ ಮುಂದೊಂದು ದಿನ ಇತರ ಜೀವಿಗಳಂತೆ ಅವನತಿ ಹೊಂದುವುದು ಖಂಡಿತ.

ಒಂದು ಕಡೆ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ನಾಶ, ಹೀಗೆ ಮನುಷ್ಯ ತನ್ನ ಅಗತ್ಯವಸ್ತುಗಳನ್ನು ಹಾಗೂ ಇತರ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಬರದಲ್ಲಿ ಪರಿಸರವನ್ನು ಮನಸ್ಸಿಗೆ ಬಂದ ಹಾಗೆ ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಮನುಷ್ಯರು ಅಥವಾ ನಮ್ಮನ್ನು ಆಳುವವರು ಎಚ್ಚತ್ತುಕೊಂಡು ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಪರಸರ ನಾಶವನ್ನು ತಡೆಗಟ್ಟಲು ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಪರಿಸರದಲ್ಲಿ ಲಕ್ಷ ಲಕ್ಷ ಜೀವಿಗಳಂತೆ ಮನುಷ್ಯನೂ ಒಂದು ಜೀವಿ ಎನ್ನುವುದನ್ನು ಮರೆಯಬಾರದು, ಈ ಎಲ್ಲಾ ಲಕ್ಷೋಪಲಕ್ಷ ಜೀವಿಗಳಂತೆ ಮಾನವ ಜೀವಿಯೂ ಪ್ರಕೃತಿಯ ನಿಯಮಗಳನ್ನು ಪಾಲಿಸಿದ್ದರೆ ಬಹುಷ್ಯ ಇಂದು ಯಾವುದೇ ಸಮಸ್ಯೆಗಳು ಬರುತ್ತಿರಲಿಲ್ಲ. ಆದರೆ ಬುದ್ಧಿ ಜೀವಿಯಾದ ಮನುಷ್ಯ ಜೀವಿಯು ಪರಿಸರವನ್ನು ತನಗೆ ಸೂಕ್ತವಾದ ರೀತಿಯಲ್ಲಿ ಪರವರ್ತನೆ ಮಾಡಿ, ಈ ಸುಂದರ ವ್ಯವಸ್ಥೆಯನ್ನು ಹಾಳುಮಾಡುತ್ತಿರುವುದು ನೋಡಿದರೆ ಮನುಷ್ಯನ ತನ್ನ ಅಂತ್ಯವನ್ನು ತಾನೆ ಕಂಡುಕೊಳುತ್ತಿರುವುದಂತು ಸತ್ಯ. ಹಾಗಾಗಿ ಇಂತಹ ಚಳುವಳಿಗಳನ್ನು ನಡೆಸುವ ಮೂಲಕ ಸರ್ಕಾರ ಮತ್ತು ಅರಣ್ಯವನ್ನು ಮನಸ್ಸಿಗೆ ಬಂದಂತೆ ನಾಶ ಮಾಡುತ್ತಿರುವವರ ಕಣ್ಣು ತೆರೆಸಲು ಸಹಕಾರಿಯಾಗಿದ್ದು ಪರಿಸರದ ಮೇಲೆ ನಡೆಯುತ್ತಿರುವಂತಹ ದೌರ್ಜನ್ಯವನ್ನು ತಡೆಗಟ್ಟುವ ಮೂಲಕ ಜನರಲ್ಲಿ ಪರಿಸರ ಪ್ರೇಮವನ್ನು ಮೂಡಿಸಿ ಪರಿಸರವನ್ನು ರಕ್ಷಿಸುವಂತಹ ಕಾರ್ಯವನ್ನು ಮಾಡಬೇಕಿದೆ.

ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬರದಲ್ಲಿ ಪರಿಸರಕ್ಕೆ ಮಾರಕವಾಗುವಂತಹ ಯೋಜನೆಗಳು, ಕಟ್ಟಡಗಳು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು ವಿಜ್ಞಾನ ಮತ್ತು ತಂತ್ರಜ್ಞಾನಗಳ ಅವಿಷ್ಕಾರಗಳಿಂದಾಗಿ ಯಂತ್ರಗಳ ಬಳಕೆ ಹೆಚ್ಚುತ್ತಿದ್ದು ವಾತಾವರಣ ಕಲುಶಿತವಾಗುತ್ತಿದೆ. ಇದಕ್ಕೆ ಸ್ಪಷ್ಟ ಉದಾಹಾರಣೆಯಾಗಿ ದೆಹಲಿ ನಮ್ಮ ಕಣ್ಣಮುಂದಿದೆ. ಹೀಗೆ ಪರಿಸರದಲ್ಲಿ ಅಸಮತೋಲನದಿಂದ ಶುದ್ಧ ನೀರು ಮತ್ತು ಗಾಳಿಯ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆರೆಕಟ್ಟೆಗಳು ಬತ್ತಿ ಹೊಗುತ್ತಿದ್ದು ಒಂದು ಹನಿ ನೀರಿಗಾಗಿ ಇಂದು ಪರದಾಡುವಂತಾಗಿದೆ ಎಂದರೆ ಅದಕ್ಕೆ ಹೊಣೆಯಾರು? ನಾವೆ ಅಲ್ಲವೇ! ಈ ಬಗ್ಗೆ ನಾವು ಚಿಂತಿಸಿ ಸೂಕ್ತ ಕ್ರಮವನ್ನು ಕೈಗೊಂಡಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ.

ಪವನ್ ಎಂ. ಸಿ
ದ್ವಿತೀಯ ಎಂ.ಸಿ.ಜೆ
ಎಸ್.ಡಿ.ಎಂ. ಕಾಲೇಜು ಉಜಿರೆ.

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post