X

ಕೆ. ಎನ್. ಗಣೇಶಯ್ಯರವರ  ೨ ಹೊಸ ಪುಸ್ತಕಗಳ  ವಿಮರ್ಶೆ

೧. ಪದ್ಮಪಾಣಿ-( ಕಥಾ ಸಂಕಲನ)

ಮತ್ತೊಂದು ಐತಿಹಾಸಿಕ ಜಾನಪದ ಶೈಲಿಯ ರಹಸ್ಯಗಳ ಹಿನ್ನೆಲೆಯುಳ್ಳ ರೋಚಕ ಕಥೆಗಳ ಕಥಾ ಸಂಕಲನ ಇದು.

ಪದ್ಮಪಾಣಿ ಎಂಬ ಶೀರ್ಷಿಕೆ ಕತೆಯಲ್ಲಿ ಕತೆಯಲ್ಲಿ ಲೇಖಕರು ಅಜಂತಾ ಗುಹೆಯ ಸುಂದರ ಶಿಲ್ಪವೊಂದರ ಬೆಳಕಿಗೆ ಬಾರದ ಬೌದ್ಧ ಧರ್ಮದ ಕತೆಯನ್ನು ಭೂತವೊಂದು ಹೇಳಿದಂತೆ ಬಿಂಬಿಸಿದರೆ, ಮಲಬಾರ್-೦೭ ಎಂಬಲ್ಲಿ ಜೈವಿಕ ಭಯೋತ್ಪಾದನೆ ಎಂಬ ವಿನೂತನ ಕಥಾವಸ್ತುವನ್ನು ಉಸಿರು ಹಿಡಿವ ವೇಗದಲ್ಲಿ ಬಿಡಿಸುತ್ತಾರೆ.

ಪಾಲುಕ್ಕಮ್ಮನ ತಾಯಿ ಕರುಳಿನ ಕತೆ ಒಂದೆಡೆಯಾದರೆ, ತಲಕಾಡಿನ ಮರಳಿನ ಕೆಳಗೆ ಅಡಗಿರಬಹುದಾದ ಅಲಮೇಲಮ್ಮನ ಕತೆ ಇನ್ನೊಂದೆಡೆ.

ಹೀಗೆ ಮಿಕ್ಕೆಲ್ಲ ಕತೆಗಳಲ್ಲಿ:- ಕಿತ್ತೊರಿನ ಬೇಗಮ್ ಕತೆ, ಬೇಲೂರು ಶಿಲಾಬಾಲಿಕೆಯ ಮತ್ತು ಶಾಂತಲೆಯ ಸಾಮ್ಯದ ಹಿಂದಿನ ಕತೆಯನ್ನು ಕಾಲ್ಪನಿಕವಾದರೂ ನಾವು ಇದುವರೆಗೂ ತಿಳಿದ ಮಾಹಿತಿಗಳಿಗೆ ಭಿನ್ನವಾದರೂ ಅತಿ ರೋಚಕವಾಗಿ ಬಿಡಿಸುತ್ತಾರೆ. ಚರಿತ್ರೆಯನ್ನೆ ಬಳಸಿಕೊಂಡು ಆ ಘಟನೆಗಳ ಆಧಾರದ ಮೇಲೆ ತಮ್ಮ ಕಲ್ಪನೆಯನ್ನು ತಾರ್ಕಿಕವಾಗಿ ಹರಿಯಬಿಡುವ ಇವರ ಪ್ರತಿಭೆ ಅನನ್ಯ.

೮ ಇಂತಾ ಕುತೂಹಲಕಾರಿ ಕತೆಗಳಿರುವ ಈ ಸಂಕಲನ ಎಲ್ಲರಿಗೂ ಮಾಹಿತಿಭರಿತ ಮನರಂಜನೆ ನೀಡುವಲ್ಲಿ ಸಫಲವಾಗಿದೆ.

ಕೊಂಡು ಓದಬೇಕಾದ ಪುಸ್ತಕ:-

ಅಂಕಿತ ಪುಸ್ತಕ ಪ್ರಕಾಶನ, ೨೦೧೭, ೧೬೪ ಪುಟಗಳು, ಬೆಲೆ: ರೂ. ೧೩೦

೨. ಬಳ್ಳಿಕಾಳ ಬೆಳ್ಳಿ (ಕಾದಂಬರಿ):

ಐತಿಹಾಸಿಕ ಥ್ರಿಲ್ಲರ್ ಗಳಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಕೆ. ಎನ್ ಗಣೇಶಯ್ಯನವರ ಹೊಸ ಕಾದಂಬರಿ “ಬಳ್ಳಿಕಾಳ ಬೆಳ್ಳಿ” ಮತ್ತೆ ಓದುಗರನ್ನು ಕರ್ನಾಟಕದ ಕರಾವಳಿಯ ಇತಿಹಾಸದ ಮುಚ್ಚಿದ ಪುಟಗಳ, ಪಾಳುಬಿದ್ದ ಶಿಲ್ಪಗಳ, ಶಿಥಿಲವಾದ ಹಳೇ ರಾಜಧಾನಿಗಳ ಲೋಕಕ್ಕೆ ಕರೆದೊಯ್ಯುತ್ತದೆ. ಮುಖ್ಯವಾಗಿ ಕಥಾವಸ್ತುವಿಗೆ ಜೈನ ಧರ್ಮದ ಅನುಯಾಯಿ ರಾಣಿ ಚೆನ್ನ ಭೈರಾದೇವಿಯ ಕಾಲದಲ್ಲಿ ನೆಡೆದ ಕೆಲವು ನಿಗೂಢ ಘಟನೆಗಳಿಗೆ, ಈಗಿನ ನಿಧಿಗಳ್ಳರ ಜಾಲಕ್ಕೆ ತಳುಕು ಹಾಕುವ ಲೇಖಕರು ಅಂತ್ಯದವರೆಗೂ ಕೌತುಕಮಯವಾಗಿ, ರಹಸ್ಯಮಯವಾಗಿಯೇ ಕತೆಯನ್ನು ಬೆಳೆಸಿದ್ದಾರೆ. ಇಲ್ಲಿ ನಾಯಕನಿಗಿಂತಾ ಹೆಚ್ಚಾಗಿ ಇಬ್ಬರು ಸಂಶೋಧಕಿಯರಾಗಿ ಡಾ.ಪೂಜಾ ಮತ್ತು ಡಾ.ಲಕ್ಷ್ಮಿ ಪೊದ್ದಾರ್ ಎಂಬ ಮಹಿಳೆಯರನ್ನು ಮುಖ್ಯವಾಗಿ ಬಳಸಿದ್ದಾರೆ. ಇದು ಮೆಚ್ಚತಕ್ಕುದ್ದು.

ಆದರೆ ಒಂದು ಕಾದಂಬರಿಯಲ್ಲಿ ಇರಬೇಕಾದ ಪಾತ್ರ ಪೋಷಣೆ, ಪಾತ್ರಧಾರಿಗಳ ಖಾಸಗಿ ಜೀವನದ ಹಿನ್ನೆಲೆ ಅವರ ಪರಸ್ಪರ ಭಾವನಾತ್ಮಕ ಸಂಬಂಧಗಳಿಗೆ ಇಲ್ಲಿ ಯಾವುದೇ ಸ್ಥಾನವಿಲ್ಲ. ಎಲ್ಲರನ್ನೂ ಬರೇ ಸಂಶೋಧಕರೋ ಇಲ್ಲವೇ ಶಿಲ್ಪಕಲಾ ತಜ್ಞರೋ, ಜಾನಪದ ಸಾಹಿತ್ಯ ವಿಮರ್ಶಕರೋ ಎಂಬಂತೆ ಅವರನ್ನು “ತಾಂತ್ರಿಕ” ಆಗಿ ದುಡಿಸಿಕೊಂಡಿದ್ದಾರೆ. ಅದರಿಂದ ಕೆಲವೊಮ್ಮೆ ಕಾದಂಬರಿ ಓದುವ ‘ಹಿತವಾದ ಫೀಲ್ ’ ಬರದೇ, ಒಂದು ರಿಸರ್ಚ್ ಗ್ರಂಥ ಅಥವಾ ಜ್ಞಾನಕೋಶ ಓದಿದಾಗ ಬರುವ ಗೌರವ ಮಾತ್ರ ಉಂಟಾಗುತ್ತದೆ.

ಬಹಳ ಮಟ್ಟಿಗೆ ಓದುಗರನ್ನು ಇದು ಮೆಚ್ಚಿಸಬಹುದಾದರೂ,  ಪ್ರೇಮ- ಪ್ರಣಯ ಸಾಮಾಜಿಕ ಸಂಬಂಧಗಳುಳ್ಳ ಕತೆಯನ್ನು ಬಯಸುವವರಿಗೆ ಇದು ’ಒಣಗಿದಂತಿದೆ’  ಎನಿಸಬಹುದು..ಇದೊಂದೇ ಚಿಕ್ಕ ಋಣಾತ್ಮಕ ಅಂಶ ಎನ್ನಬಹುದು.

ಆದರೆ ವಿಶಿಷ್ಟ ಚಾರಿತ್ರಿಕ/ ಪೌರಾಣಿಕ ಬಗೆಯ ಕಥಾವಸ್ತು, ಬೆರಗುಗೊಳಿಸುವ ಐತಿಹಾಸಿಕ ಮತ್ತು ಶಿಲ್ಪಕಲಾ ಮಾಹಿತಿ, ವಾಸ್ತವ ಮತ್ತು ಕಾಲ್ಪನಿಕವನ್ನು ಬೆಸುಗೆ ಹಾಕುವ ಲೇಖಕರ ಶೈಲಿ ಇವೆಲ್ಲವೂ ಬಹುತೇಕ ಸುಶಿಕ್ಷಿತ (ಐeಚಿಡಿಟಿeಜ) ಓದುಗರನ್ನು ಮೆಚ್ಚಿಸುವುದು ನಿಶ್ಚಿತ.

ಅಂತವರಿಗೆ ಈ ಪುಸ್ತಕವನ್ನು ಮಧ್ಯದಲ್ಲೇ ಕೆಳಗಿಡಲು ಸಾಧ್ಯವಾಗುವುದಿಲ್ಲ. ಖಂಡಿತಾ ನಿಮ್ಮ ಖಾಸಗಿ ಗ್ರಂಥಾಲಯದಲ್ಲಿರಬೇಕಾದ ಪುಸ್ತಕ!

ಅಂಕಿತ ಪುಸ್ತಕ ಪ್ರಕಾಶನ, ೨೦೧೭, ೨೫೧ ಪುಟಗಳು, ಬೆಲೆ=ರೂ.೨೨೫.

 

Facebook ಕಾಮೆಂಟ್ಸ್

Nagesh kumar: ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Related Post