X

ಹಣವೆಂಬ ಕಣವಿರದ ಹೊಸ ಲೋಕವ ಹುಡುಕಬೇಕಯ್ಯಾ…

ಸನ್ನಿವೇಶ -೧

ಬೇಸಿಗೆಯ ಸುಡುಬಿಸಿಲಿಗೆ ತಲೆಸುತ್ತು ಬಂದು ನಿತ್ರಾಣದಿಂದ ಬಳಲುತ್ತಿದ್ದ ತಂದೆಯನ್ನು ನೋಡಲಾರದೆ ಊರಿನ ದೊಡ್ಡಾಸ್ಪತ್ರೆಗೆ (ಸರ್ಕಾರೀ ಆಸ್ಪತ್ರೆ) ಸೇರಿಸಲು ತೆರಳಿದ ಮಗನಿಗೆ ನರ್ಸುಗಳೆಂದು ಕರೆಯುವ ದರ್ಪದಿಂದ ಓಡಾಡುವ ಹೆಂಗಸರುಗಳು ‘ಆಸ್ಪತ್ರೇಲಿ ಯಾವ್ ಬೆಡ್ಡು ಖಾಲಿ ಇಲ್ಲರಿ.. ಪಕ್ಕದ್ ಪ್ರೈವೇಟ್ ಆಸ್ಪತ್ರೆಗೆ ಸೇರ್ಸಿ’ ಎಂದು ಅವಿನಿಯಪೂರ್ವಕವಾಗಿ ಅರಚಿದಾಗ ಮಗನಿಗೆ ಸಿಟ್ಟು ಉಕ್ಕಿ ಬಂದರೂ ಆತ ವ್ಯಕಪಡಿಸಲಾಗದ ಸ್ಥಿತಿಯಲ್ಲಿದ್ದ. ಆಸ್ಪತ್ರೆಯಲ್ಲಿ ಬೆಡ್ಡುಗಳು ಖಾಲಿ ಇವೆಯೆಂದು, ನರ್ಸುಗಳ ಕೈಯೊಳಗೆ ಒಂದೆರೆಡು ನೂರರ ನೋಟುಗಳನ್ನು ತುರುಕಿದರೆ ಬೆಡ್ಡಿರುವ ಕೋಣೆಗಳು ತನಗೆ ತಾನೇ ತೆರೆದುಕೊಳ್ಳುತ್ತವೆಂದು ಅಲ್ಲದೆ ಪಕ್ಕದ ಪ್ರೈವೇಟ್ ಹಾಸ್ಪಿಟಲ್ ಗೆ  ಇಲ್ಲಿನ ಕಳಿಸಲ್ಪಡುವ ರೋಗಿಗಳಿಗೆ ಸಮನಾಗಿ ಕಮಿಷನ್ ಎಂಬ ಪ್ರೋತ್ಸಾಹ ಧನವನ್ನು ಇವರುಗಳಿಗೆ ನೀಡುತ್ತಾರೆಂದು, ಅದಕ್ಕಾಗೇ ಅಲ್ಲಿನ ಪ್ರೈವೇಟ್ ಆಸ್ಪತ್ರೆಯವರು ಯದ್ವಾ ತದ್ವ ಹಣ ಪೀಕುತ್ತಾರೆಂದು ಮಗನಿಗೆ ಚೆನ್ನಾಗಿ ತಿಳಿದಿತ್ತು. ಬಳಲುತ್ತಿದ್ದ ತಂದೆಯ ಮುಖವನ್ನು ಒಮ್ಮೆ ನೋಡಿ ಹಾಗೆಯೇ ಜೇಬಿನಲ್ಲಿದ್ದ ಕೆಲವೇ ನೋಟುಗಳನ್ನು ಗಮನದಲ್ಲಿಟ್ಟುಕೊಂಡು ಮಗ ಅಳುಕುತ್ತ ನೂರರ ಒಂದು ನೋಟನ್ನು ಆಕೆಯ ಕೈಯ ಮೇಲಿಟ್ಟ. ಆಕೆಯ ಅಜ್ಜನ್ನೂ ಅಥವಾ ಅಪ್ಪನೋ ಕಟ್ಟಿಸಿರುವ ಆಸ್ಪತ್ರೆಯಲ್ಲಿ ಕೊಡುವ ಉಚಿತ ಚಿಕಿತ್ಸೆಯನ್ನು ಕಂಡು ತಾಳಲಾರದೆಂಬಂತೆ  ಆಕೆ ‘ನೂರ್ ರೂಪಾಯಿಯಲ್ಲಿ ಏನ್ರಿ ಸಿಗುತ್ತೆ.. ಬೆಡ್ ಒಂದಕ್ಕೆ 200 ನಡೀತಾ ಇರೋದು’ ಎಂದು ಧಿಮಾಕಿನ ಶೃಂಗದಿಂದ ಅರಚತೊಡಗಿದಳು. ಅಪ್ಪನ ಗೋಳನ್ನು ತಾಳಾಲಾರದೆ ಹಾಗು ಪ್ರೈವೇಟ್ ಆಸ್ಪತ್ರೆಗಳೆಂಬ ಹಣದ ಜಿಗಣೆಗಳ ದಾಹವನ್ನು ನೀಗಿಸಲಾರದೆ ತನ್ನ ಸಿಟ್ಟನ್ನು ಅದುಮಿಕೊಂಡು ಮಗ ನೂರರ ಮತ್ತೊಂದು ನೋಟನ್ನು ಆಕೆಯ ಕೈಯ ಮೇಲೆ ಇಟ್ಟನು. ಎರಡು ನೋಟುಗಳು ನರ್ಸ್ ಜೇಬಿನೊಳಗೆ ಇಳಿದಾಗ ಪಕ್ಕದಲ್ಲೇ ಇದ್ದ ವಿಶಾಲವಾದ ಕೋಣೆ ತೆರೆಯಲ್ಪಟ್ಟಿತ್ತು. ಅಲ್ಲಿ ಒಂದಲ್ಲ ಎರಡಲ್ಲ ಸುಮಾರು ಮೂವತ್ತರಿಂದ ನಲ್ವತ್ತು ಬೆಡ್ಡುಗಳು ಖಾಲಿ ಬಿದ್ದಿದ್ದವು. ಇನ್ನೂ ಹಲವು ಕುಟುಂಬಗಳೊಟ್ಟಿಗೆ ಹೀಗೆಯೇ ವಾಗ್ವಾದವನ್ನು ಮಾಡುತ್ತಿದ್ದ ನರ್ಸುಗಳು ಪ್ರತಿಯೊಬ್ಬರಿಂದ 200 ರೂಪಾಯಿಗಳನ್ನು ಪಡೆದು ಆ ಕೋಣೆಯೊಳಗೆ ಬಿಡುತ್ತಿದ್ದರು.

ನರಳುತ್ತಿರುವ ರೋಗಿಗಳನ್ನು ಸತಾಯಿಸುವುದೇ ಕಾಯಕವನ್ನಾಗಿ ಮಾಡಿಕೊಂಡಿದ್ದ ಅಲ್ಲಿನ ಡಾಕ್ಟರ್’ಗಳು ಹಣದ ವಾಸನೆ ಬರುವವರೆಗೂ ಅತ್ತ ಸುಳಿಯುತ್ತಿರಲಿಲ್ಲ. ಅಂತೂ ಕಾದು, ಕಾದು ಎಷ್ಟೋ ಸಮಯದ ನಂತರ ಒಬ್ಬ ಡಾಕ್ಟರ್ ಹಾಗು ಆಕೆಯ ಹಿಂದೆ ಸ್ವಲ್ಪ ಹೊತ್ತಿನ ಹಿಂದಷ್ಟೇ ಇನ್ನೂರು ರೂಪಾಯಿಗಳನ್ನು ಕಸಿದುಕೊಂಡಿದ್ದ ನರ್ಸಮ್ಮ ಬಂದರು. ಕಣ್ಣು, ನಾಲಿಗೆಯನ್ನಷ್ಟೇ ಪರೀಕ್ಷಿಸಿದ ಡಾಕ್ಟರ್ ‘ಪೇಷಂಟ್ ತುಂಬ ಸೀರಿಯಸ್ ಆಗಿದ್ದಾರೆ, ಪಕ್ಕದ್ ಪ್ರೈವೇಟ್ ಆಸ್ಪತ್ರೆಗೆ ಸೇರ್ಸಿ’ ಎಂದು ಮುಂದೆ ನೆಡೆದರು. ‘ಸಾರ್, ನಾಲ್ಕ್ ಘಂಟೆಯಿಂದ ಕಾಯಿತಾ ಇದ್ದೀವಿ, ಬೆಡ್ಡಿಗೆ ಅಂತ ನರ್ಸ್ ದುಡ್ಡನ್ನು ತಗೊಂಡಿದ್ದಾರೆ, ನನ್ನ ಹತ್ರ ಪ್ರೈವೇಟ್ ಆಸ್ಪತ್ರೆಗೆ ಸೇರ್ಸೋಕ್ಕೆ ದುಡ್ಡ್ ಇದ್ದಿದ್ರೆ ಇಲ್ಲಿಗೆ ಯಾಕೆ ಬರ್ತಿದ್ದೆ? ತಲೆ ಸುತ್ತಿಗೆ ನೀವು ಪ್ರೈವೇಟ್ ಆಸ್ಪತ್ರೆ ಅಂದ್ರೆ ನಿಮ್ ಡಾಕ್ಟರ್’ಗಿರಿ ನಾಲಾಯಕ್ ಅನ್ಸಲ್ವಾ?’ ಎಂದು ಮಗ ಕೊನೆಗೂ ಜಾಡಿಸಿದ. ಪಕ್ಕದಲ್ಲಿದ್ದ ಬೆಡ್ಡಿನ ಜನರೆಲ್ಲಾ ಇವರನ್ನೇ ತದೇಕಚಿತ್ತದಿಂದ ನೋಡತೊಡಗಿದರು. ‘ರೀ ಮಿಸ್ಟರ್ ಏನ್ರಿ ನಿಮ್ ಹೆಸ್ರು, ನಾಲ್ಗೆ ಮೇಲೆ ನಿಗಾ ಇರ್ಲಿ’ ಎಂದು ಡಾಕ್ಟರ್’ನ ಸೇನಾಪತಿಯಂತೆ ನರ್ಸ್ ಮುಂದೆ ಬಂದಳು. ‘ಪ್ರೈವೇಟ್ ಆಸ್ಪತ್ರೆಗೆ ಸೇರ್ಸೋಕ್ಕೆ ಆಗ್ಲಿಲ್ಲ ಅಂದ್ರೆ ಸ್ಮಶಾನಕ್ಕೆ ಸೇರ್ಸಿ, ಹೋಗ್ರಿ’ ಎಂದು ಆಕೆ ಹೇಳಿ ತಿರುಗಿದೊಡನೆಯೇ ಆಕೆಯ ಜುಟ್ಟನ್ನು ಹಿಡಿದೆಳೆದು, ಕೈಯ ಮುಷ್ಟಿಯನ್ನು ಬಿಗಿ ಮಾಡಿ ಆಕೆಯ ಮುಖದ ಮೇಲೆ ಭಾರಿಸಿದ. ಹೊಡೆದ ಹೊಡತಕ್ಕೆ ನರ್ಸಮ್ಮ ಚೀರುತ್ತಾ ಮೂರ್ಛೆ ಬಿದ್ದಳು. ಇಲ್ಲಿದ್ದರೆ ತನಗೆ ಕೆಲಸಕ್ಕೆ ಕಂಟಕವೆಂದು ಡಾಕ್ಟರ್ ಅಲ್ಲಿಂದ ಜಾಗ ಕಿತ್ತರು.

ಸನ್ನಿವೇಶ -೨

ಅದು ಆ ರಾಜ್ಯದ ಅತಿ ಪ್ರಸಿದ್ಧ ದೇವಾಲಯ. ಪ್ರತಿ ದಿನ ಸಾವಿರಾರು ಕೆಲವೊಮ್ಮೆ ಲಕ್ಷಾಂತರ ಭಕ್ತಾದಿಗಳೂ ಬರುವುದುಂಟು. ಅದಷ್ಟು ಜನರ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವ, ಸಹಬಾಳ್ವೆಯಿಂದ ಬದುಕುವ ಕಲೆಯನ್ನು ಕಲಿಸುವ ವಿಶಿಷ್ಟತೆ ಆ ಕ್ಷೇತ್ರದ ಮಹಿಮೆ. ಅಂದು ಬಂದ ಲಕ್ಷಾಂತರ ಭಕ್ತಾದಿಗಳಲ್ಲಿ ಅಪ್ಪ ಹಾಗು ಮಗ ಇಬ್ಬರೂ ಬಂದಿದ್ದರು. ಪ್ರತಿ ಸೆಕೆಂಡಿಗೆ ಇಬ್ಬರಂತೆ ಒಳಬಂದು ಹೊರಹೋಗುತ್ತಿದ್ದ ಆ ಜನಗಳನ್ನು ನಿಯಂತ್ರಿಸುವುದು ಅಲ್ಲಿನ ಕಾರ್ಯಪಾಲಕರಿಗೆ ತುಸು ಕಷ್ಟದ ಕೆಲಸವೇ ಆಗಿದ್ದಿತು. ಬೆಳಗ್ಗಿನ ಜಾವ ಹೊಳೆಯಲ್ಲಿ ಸ್ನಾನ ಮುಗಿಸಿ ಅರ್ಧ ದಿನದವರೆಗೂ ಕಾದು, ಭಕ್ತಾದಿಗಳ ಸಾಗರದೊಳಗೆ ಈಜುತ್ತಾ ಕಷ್ಟಪಟ್ಟು ದೇವಾಲಯದ ಒಳ ಹೋಗತೊಡಗಿದಅಪ್ಪ ಮಗ ದೇವರ ಗುಡಿಯನ್ನು ಸುತ್ತ ಸುತ್ತುತಾ ಇನ್ನೇನು ಕೊನೆಯ ಸುತ್ತಿನಲ್ಲಿ ದೇವರ ಮೂರ್ತಿಯನ್ನು ಕಣ್ಣುತುಂಬಿಕೊಳ್ಳಬೇಕು ಎನ್ನುವಷ್ಟರಲ್ಲಿ ಕಾರ್ಯಪಾಲಕರಲ್ಲೊಬ್ಬ ಅಪ್ಪನ ರೆಟ್ಟೆಯನ್ನು ಹಿಡಿದೆಳೆದು ಮುಂದೆ ತಳ್ಳುತ್ತಾನೆ. ‘ನಡಿ ಮುಂದೆ, ನಡಿತಾ ಇರ್ಬೇಕು’ ಎಂದು ಏಕವಚನದಲ್ಲಿ ಅರಚುತ್ತಾ ಸಿನಿಮೀಯ ರೌಡಿಗಳ ಡೈಲಾಗ್ ಗಳನ್ನು ಉಸುರುತ್ತಾ ಸಿಕ್ಕ ಸಿಕ್ಕವರನ್ನೆಲ್ಲ ಮುಂದಕ್ಕೆ ದಬ್ಬುತ್ತಾನೆ. ಮಗನ ಕೋಪ ನತ್ತಿಗೇರಿದರೂ ದೇವಾಲಯದ ಒಳಗೆಅದೇ ಧಾಟಿಯಲ್ಲಿ ಉತ್ತರಿಸುವುದು ಶಕ್ಯವಲ್ಲವೆನ್ನುತ್ತಾ ಸುಮ್ಮನಾಗುತ್ತಾನೆ. ಅಪ್ಪನೂ ಅತಂತ್ರ ಸ್ಥಿತಿಯಲ್ಲಿರುವ ಮುಸಿಯನಂತೆ ಕಣ್ಣುಗಳನ್ನು ಮಿಕ ಮಿಕ ಬಿಡುತ್ತಾ ಆತನನ್ನೇ ನೋಡತೊಡಗುತ್ತಾನೆ.

ಸರಿ ಅದದ್ದು ಆಗಲಿ, ದೇವನಿರುವುದು ನಮ್ಮ ತನದಲ್ಲಿ, ಜೀವಿಗಳ ಮನದಲ್ಲಿ ಅಂದುಕೊಂಡು ಪ್ರಸಾದವನ್ನು ಸ್ವೀಕರಿಸಲು ಊಟದ ಕೋಣೆಗೆ ಇಬ್ಬರೂ ಹೋಗುತ್ತಾರೆ. ಅತಿ ವಿಶಾಲವಾದ ಆ ಕೋಣೆಯಲ್ಲಿ  ಜೇನಿನ ಗೂಡಿನಂತೆ ಎಲ್ಲ ಕಡೆಯಿಂದ ಜನರು ಮುತ್ತಿಕೊಂಡಿದ್ದರು. ಸ್ಕೂಲ್ ನ PT ಮಾಸ್ಟರ್ ನಂತೆ ಅರಚುವ ಅಲ್ಲಿನ ಕಾರ್ಯಪಾಲಕರು ಪ್ರಸಾದ ಸ್ವೀಕರಿಸಲು ಬರುವವರನ್ನು ತಮ್ಮ ಸೀಟಿಯ ಸದ್ದಿಗೆ ಎದ್ದು ಕೂರುವ ಮಕ್ಕಳಂತೆ ಕಾಣುತ್ತಾರೆ. ಇಲ್ಲೂ ಸಹ ಅದೇ ಸಿನಿಮೀಯ ಡೈಲಾಗ್ ಗಳು. ಒಟ್ಟಿನಲ್ಲಿಅಲ್ಲಿ ತಪ್ಪುಗಳೆಂದರೆ ಏನು ಎಂದು ಅರಿಯುವ ಮೊದಲೇ  ಭಕ್ತಾದಿಗಳು ತಪ್ಪಿತಸ್ಥರಾಗುತ್ತಾರೆ.

ಮೇಲಿನ ಎರಡು ಸನ್ನಿವೇಶಗಳು ಇಂದಿನ ಹಲವಾರು ಆಸ್ಪತ್ರೆ ಹಾಗು ದೇವಾಲಯಗಳಿಗೆ ಅನ್ವಯಿಸುತ್ತವೆಂಬುದು ಸುಳ್ಳಲ್ಲ. ದೇಹದ ಕಷ್ಟಗಳಿಗೆ ಆಸ್ಪತ್ರೆಯ ಹಾದಿಯಾದರೆ ಜೀವನದ ಸಂಕಷ್ಟಗಳಿಗೆ ದೇವಾಲಯದ ಮೊರೆ. ಈ ಜಾಗಗಳಿಗೆ ಬೇಡವೆಂದರೂ ಬರುವೆವೆಂದು ಒಳ ನುಗ್ಗುವ ಜನರೇ ಬಲು ಹೆಚ್ಚು. ಆದರಿಂದಇಂತಹ ಸ್ಥಳಗಳಿಗೆ ಬರುವ ಪ್ರತಿಯೊಬ್ಬರೂ ಒಂದಿಲ್ಲೊಂದು  ರೋದನೆಯನ್ನು ಒಳಗೆ ಅದುಮಿಕೊಂಡೆ ಬಂದಿರುತ್ತಾರೆ.  ಅದೇನೇ ಆಗಲಿ, ನಿಮ್ಮ ಮುಂದೆ ನಾನು ಶರಣು ಎಂಬಂತೆ ತೆಲೆಯನ್ನು ತಗ್ಗಿಸುತ್ತಾರೆ. ದೇವಾಲಯಗಳಲ್ಲಿ ಕಾರ್ಯಪಾಲಕರು,ಆಸ್ಪತ್ರೆಗಳಲ್ಲಿ ನರ್ಸುಗಳು ಇಂತಹ ಜನರ ನಿಕಟಕ್ಕೆ ಸಿಗುವ ವ್ಯಕ್ತಿಗಳು.ಅವರುಗಳು ಹೇಳುವ ನೀತಿಯಾಗಲಿ ಅಥವಾ ಕೊಡುವ ಔಷಧೀಯ ಯಾವುದೇ ಬಗೆಯಾಗಿರಲಿ ಮರುಮಾತನಾಡದಾದೆ ಅವರ ಸೂಚನೆಗಳನ್ನು ಪಾಲಿಸುತ್ತಾರೆ. ಈ ಮುಗ್ದ ನಂಬಿಕೆಯೇ ಹೆಚ್ಚಾಗಿ ಮುಳುವಾಗುವುದು. ವಿಪರ್ಯಾಸವೆಂಬತೆ ಇಲ್ಲಿ ಸತಾಯಿಸಲ್ಪಡುವ ವ್ಯಕ್ತಿಗಳು ಕೇವಲ ಬಡ ಬಗ್ಗರು. ಪ್ರೆಶ್ನಿಸುವುದು, ಅದು ತಪ್ಪು, ಸರಿಯಲ್ಲ ಎನ್ನುವುದು ಅವರ ಜಾಯಮಾನದಲ್ಲಿ ಬಂದ ವಿಷಯವಲ್ಲ.ಅಂಥವರ ಮುಂದೆ ತಮ್ಮ ಬಲ ಪ್ರದರ್ಶಿಸುವಂತೆ ನಟಿಸುವ ಜನರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಚಿನ್ನದ ಅಂಗಡಿಯನ್ನೇ ದೇಹದ ಮೇಲೆ ಇಳಿಸಿಕೊಂಡಿರುವ ವ್ಯಕ್ತಿಗಳು, ದೊಡ್ಡ ದೊಡ್ಡ ಕಾರುಗಳಲ್ಲಿ ಬರುವ ಜನರ ಮುಂದೆ ನಿಯತ್ತಿನ ಸೇವಕರಂತೆ ನುಲಿಯುವ ಇವರುಗಳು, ಬಡಜನರ ನೆರಳು ಕಂಡರೆ ಮಾತ್ರ ಸಿಡಿ ಮಿಡಿ ಸಿಡಿಯುತ್ತಾರೆ.ವರ್ತಕ ಸಮಾಜದಲ್ಲೂ ಅದೇ ಬವಣೆ. ಹಣವಿರುವ ಕೆಲವರು ಮುಲಾಜಿಲ್ಲದೆ ತೆತ್ತುವ ಬೆಲೆಗೆ ಒಗ್ಗಿಕೊಂಡು ಚೌಕಾಶಿ ಮಾಡುವ ಬಡವರನ್ನು ಮೇಲೆ ಕೆಳಗೆ ನೋಡುವ ವರ್ತಕರು ಅಂಥವರನ್ನು ಕಾಲಿನ ದೂಳಿನಂತೆಯೂ ಕಾಣುವುದುಂಟು.

ಒಟ್ಟಿನಲ್ಲಿ ಆಧುನಿಕ ಯುಗದ  ಹೊಸ ಬಗೆಯ ಶೋಷಣೆಯ ವಿಷಯಗಳ ವೇದಿಕೆಗಳಾಗಿ ಆಸ್ಪತ್ರೆ ಹಾಗು ದೇವಾಲಯಗಳು ಮಾರ್ಪಾಡಾಗುತ್ತಿವೆ. ವಿಶೇಷ ದರ್ಶನ, ವಿವಿಧ ಬಗೆಯ ಅಭಿಷೇಕ ಹಾಗು ಅರ್ಚನೆಗಳು, ವಿಶೇಷ ಪ್ರಸಾದ ಎಂಬ ಹಲವು ವಿಶೇಷಣಗಳು ಬಡವ-ಬಲ್ಲಿದ ಎಂಬ ಹಲವು ಪಿಡುಗುಗಳನ್ನು ತಮಗರಿಯದೆ ದೇವಾಲಯದ ಆವರಣದಲ್ಲಿ ಪಸರಿಸುತ್ತಿವೆ. ಒಂದು ಘಂಟೆಯ ಕಾಲ ದೇವರ ದರ್ಶನಕ್ಕೆ ಕಾಯಲಾಗದ ವ್ಯಕ್ತಿಗೆ ದೇವರ ದರ್ಶನ ಕೇವಲ ನೆಪ ಮಾತ್ರಕ್ಕೆ ಎನ್ನಬಹುದು. ಅಲ್ಲದೆ ಯಾವ ದೇವರು ತಾನೇ ಸಾವಿರದ ಒಂದು ರೂಪಾಯಿಗೆ ನನಗೆ ಪಂಚಕಜ್ಜಾಯ ಅಭಿಷೇಕ, ನೂರು ರೂಪಾಯಿಗೆ ನನಗೆ ಸಾಮನ್ಯ ಅಭಿಷೇಕ ಎಂಬ ಪ್ರೈಸ್ ಟ್ಯಾಗ್ ಗಳನ್ನು ಅಂಟಿಸಿಕೊಂಡಿರುತ್ತವೆ? ಮಾನವನ ಹಣದ ಆಸೆಗೆ ಕೊನೆಯೆಂದು? ರಕ್ತ ಬೆವರು ಒಂದಾಗಿಸಿ ವರ್ಷವಿಡೀ ದುಡಿದ ಹಣವನ್ನು ಅರ್ಥವೇ ಆಗದ ಖಾಯಿಲೆಯ ಔಷಧಿಗಳಿಗೆ ಸುರಿವಾಗ ಪಡುವ ಸಂಕಟ ಅದನ್ನು ಅನುಭವಿಸಿದವನಿಗೇ ಗೊತ್ತು. ಬಟ್ಟೆ ಬದಲಾಯಿಸಲು, ಊಟ ಮಾಡಿಸಲು, ವೀಲ್ ಚೇರ್ ಗಳಲ್ಲಿ ಸಾಗಿಸಲು,ಎಲ್ಲಕ್ಕಿಂತ ಮಿಗಿಲಾಗಿ ಮಲಗಲು ಕನಿಷ್ಠ ಒಂದು ಬೆಡ್ ಅನ್ನು ನೀಡಲೂ ಹಣವನ್ನು ಕೇಳುವ ಆಸ್ಪತ್ರೆಗಳ ನೋಡಿದರೆ ಮಾನವೀಯತೆ ಎಂಬುದು ಏನೆಂಬ ಪ್ರಶ್ನೆ ಉದ್ಭವಿಸುತ್ತದೆ.

ಮೊನ್ನೆ ಕಬ್ಬಿನ ರಸವನ್ನು ಕುಡಿಯುವಾಗ ಬರಗಾಲದ ದಿಕ್ಸೂಚಿಯಂತಿದ್ದ ಬಿಸಿಲಿನ ಧಗೆಗೆ ಒಂದೆರೆಡು ಐಸ್ ಕ್ಯೂಬ್ ಇದ್ದರೆ ಹಾಕಿ ಕೊಡಿ ಎಂದಾಗ ಅಂಗಡಿಯವನು ‘ಐಸ್ ಎಲ್ಲ ಯಾಕೆ ಸಾರ್,ದೇಹ ಹಾಳು.ಇಲ್ಲಿ ಪ್ಯೂರ್ ಕಬ್ಬಿನ ರಸ ಮಾತ್ರ ಸಿಗೋದು’ ಎಂದನು. ಪಕ್ಕದಲ್ಲೇ ಇದ್ದ ನನ್ನ ಗೆಳೆಯ‘ಐಸ್ ಕ್ಯೂಬ್ ಗಳ ಬೆಲೆ ಈಗ ವಿಪರೀತ ಜಾಸ್ತಿ ಆಗಿದೆ’ ಎಂದು ಸುಮ್ಮನಾದ. ನಾನು ಏಕೆಂದು ಮರುಪ್ರಶ್ನಿಸಿದಾಗ ಮೊದಲೆಲ್ಲ ಆಸ್ಪತ್ರೆಗಳಲ್ಲಿ  ಶವಗಳನ್ನು ಕೊಳೆಯದಂತೆ ಸಂರಕ್ಷಿಸಲು ಬಳಸುತ್ತಿದ್ದ ಮಂಜಿನ ಗೆಡ್ಡೆ ಗಳನ್ನು ಅಲ್ಲಿನ ಆಸ್ಪತ್ರೆಯವರು ಕಡಿಮೆ ದರದಲ್ಲಿ ಕದ್ದು ಮಾರುತ್ತಿದ್ದರೆಂದು, ನಂತರ ವಿಷಯ ತಿಳಿದು ಅಲ್ಲಿನ ಜನಸಾಮಾನ್ಯರು ಆಸ್ಪತ್ರೆಗಳಿಗೆ ಮುತ್ತಿಗೆ ಹಾಕಿ ಈ ಅನಾಚಾರವನ್ನು ನಿಲ್ಲಿಸಿದರು. ಅಲ್ಲಿಂದ ಮುಂದೆ ಹೆಚ್ಚಿನ ಬೆಲೆಯ ಮಂಜುಗೆಡ್ಡೆಗಳನ್ನು ಕೊಳ್ಳಲು ಕಂಜೂಸು ಮಾಡುವ ವ್ಯಾಪಾರಿಗಳು ‘ಪ್ಯೂರ್ ಕಬ್ಬಿನ ರಸ’ ಎಂಬ ಬೋರ್ಡ್ ಅನ್ನು ಹಾಕಿಕೊಂಡು ಸಮಾಜ ಸೇವಕರ ಪೋಸ್ ಅನ್ನು ನೀಡುತ್ತಿದ್ದಾರೆ ಎಂದ.

ಗಲ್ಲ ಪೆಟ್ಟಿಗೆಯ ಚಿಲ್ಲರೆ ದುಡ್ಡುಗಳನ್ನು ಎಣಿಸುತ್ತಾ ‘ಪಪ್ಪಾ, ದೇವಸ್ಥಾನಕ್ಕೆ ಹೋದಾಗ ಹಾಕೋಕೆ ಇಷ್ಟ್ ಚಿಲ್ಲರೆ ದುಡ್ಡ್ ಸಾಕಾಗಲ್ವ?’ ಎಂದ ಅಂಗಡಿಯವನ ಮಗನನ್ನು ನೋಡುತ್ತಾ ಸುಮ್ಮನೆ ನಿಂತೆ.

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post