“ಆರ್ಮುಗಂ ” ದಿನವೂ ಬೆಳಗ್ಗೆ ಐದು ಗಂಟೆಗೆ ಮನೆ ಬಿಟ್ಟು ೩-೪ ಕಿಲೋಮೀಟರು ನಡೆದು ಬರುತಿದ್ದ. ದಾರಿಯಲ್ಲಿ ಮಂಜುನಾಥ ನಗರ ನೋಡುತ್ತಾ ಅಚ್ಚರಿಯಾಗುತಿತ್ತು. ಕೇವಲ ಎರಡು ವರ್ಷಗಳಲ್ಲಿ ಅದೆಷ್ಟು ಬದಲಾವಣ . ತಾನು ಅಲ್ಲಿ ಸುಮಾರು ೫-೬ ಮನೆಗಳನ್ನು ಕಟ್ಟಿ ಆಗಲೇ ಸ್ವಂತ ವಾಸಕ್ಕೆ ಸಂಸಾರಗಳು ಬಂದ್ದಿದ್ದವು. ಪಾಯ ತೊಡುವುದರಿಂದ ಮನೆಗೆ ಎಲೆಕ್ಟ್ರಿಕಲ್ ಮತ್ತು ಪೈಂಟಿಂಗ್ ಕೆಲಸಗಳಲ್ಲಿ ಅವನದೇ ಕಾರುಬಾರು. ಜೊತೆಗೆ ಮಗ ಸೆಲ್ವಂ ಕೂಡ ಗಾರೆ ಕೆಲಸ ಮಾಡುತ್ತಾನೆ. ಹಾಗೆ ದಾರಿಯಲ್ಲಿ ಬರುವಾಗ ಆರ್ಮುಗಂ ಬೀದಿ ದೀಪಗಳನ್ನು ಆರಿಸಿ ಮುಂದೆ ಹೋಗುತ್ತಿದ್ದ. ಅಲ್ಲಿಂದ ಸುಮಾರು ೨ ಕಿಲೋಮೀಟರು ದೂರದಲ್ಲಿ ಒಂದು ಹೊಸ ಬಡಾವಣೆ ತಲೆ ಎತ್ತುತ್ತಿತ್ತು.
ಹೊಸ ಬಡಾವಣೆಯಲ್ಲಿ ಆ ದೊಡ್ಡ ಮನೆಯ ಕೆಲಸ ಅರ್ಮುಗಂ’ನದು. ಅದು ಕೆ.ಇ.ಬಿ’ಯ ದೊಡ್ಡ ಅಧಿಕಾರಿ ರಘುರಾಮ್ ಅವರದು ಅದರಿಂದ ಸ್ವಲ್ಪ ದೂರವೇ ಅರ್ಮುಗಂ ಮನೆ. ಮನೆಯಂದರೆ ಖಾಲಿ ಸ್ಥಳದಲ್ಲಿ ಇಟ್ಟಿಗೆ ಕಲ್ಲು ಅಡ್ಡ ಇಟ್ಟು ಯಾವುದೊ ಮನೆಯ ಹಳೆಯ ಬಾಗಿಲು ಕಿಟಕಿ ನಿಲ್ಲಿಸಿ ಮನೆ ಮಾಡಿಕೊಂಡಿದ್ದ. ಒಂದು ಕಡೆ ಕೆಲಸ ಮುಗಿದರೆ ಹೊಸ ಬಡಾವಣೆ ಹುಡುಕಿಕೊಂಡು ಹೋಗುತ್ತಿದ್ದ.
ಲೈನ್ ಮ್ಯಾನ್ ಬಸಯ್ಯ ಯಾವಾಗಲೂ ಆರ್ಮುಗಂ’ಗೆ ತಮಾಷೆ ಮಾಡುತ್ತಿದ್ದ. “ಲೈನ್ ಮ್ಯಾನ್ ನಾನೂ? ನೀನೋ? ಬೀದಿ ದೀಪ ಹಚ್ಚುವ ಆರಿಸುವ ಕೆಲಸ ಯಾರದು? ನನ್ನ ಸಂಬಳಕ್ಕೆ ಕೈ ಹಾಕಬೇಡ ” ಅರ್ಮುಗಂ ನಗುತ್ತ ತನ್ನ ಕೆಲಸ ಮಾಡುತ್ತಿದ್ದ. ಅವನಿಗೆ ಕೆ.ಇ.ಬಿ’ಯಲ್ಲಿ ಎಲ್ಲರು ಪರಿಚಯವೇ. ಆಗಾಗ ಅಲ್ಲಿಗೆ ಭೇಟಿ ಕೊಟ್ಟು ಎಲ್ಲರನ್ನು ಮಾತನಾಡಿಸುತ್ತಿದ್ದ. ಲೈಸನ್ಸ್ ತರುವುದು ಮೀಟರ್ ಅಳವಡಿಸುವುದು ಎಲ್ಲವು ಅವನಿಗೆ ಸಾಮಾನ್ಯ ಕೆಲಸ.
ಅಂದು ರಘುರಾಮ್ ಅವರ ಮನೆಯ ಗೃಹ ಪ್ರವೇಶ. ಹೊಸ ಬಡಾವಣೆಯಲ್ಲಿ ಅದೊಂದೇ ಹೊಸ ಮನೆ. ಎಲೆಕ್ಟ್ರಿಕಲ್ ಕನೆಕ್ಷನ್’ಗೆ ಕಂಬಗಳನ್ನು ನೆಟ್ಟು ಬಹು ದೂರದಿಂದ ವಿದ್ಯುತ್ ಸರಬರಾಜು ಆಗಿತ್ತು. ಬಣ್ಣದ ದೀಪಗಳಿಂದ ಮನೆ ಅರಮನೆಯಂತೆ ಕಾಣುತ್ತಿತ್ತು. ಕೆಲಸ ಮುಗಿಸಿ ಮನೆಗೆ ಹೋಗುವಾಗ ರಾತ್ರಿ ೧೧ ಗಂಟೆಯ ಮೇಲಾಗಿತ್ತು.
ಎಂದಿನಂತೆ ಅಂದು ಬೆಳಗ್ಗೆ ಆರ್ಮುಗಂ ಮಂಜುನಾಥ ಬಡಾವಣೆ ಸುತ್ತಿ ಬೀದಿಯ ದೀಪ ಆರಿಸಿ ಮುಂದೆ ಹೋಗುತ್ತಿದ್ದ. ಹಿಂದಿನಿಂದ ಲೈನ್ ಮ್ಯಾನ್ ಬಸಯ್ಯ ಅವನನ್ನು ಸೇರಿಕೊಂಡ,”ನಡೀ ಇವತ್ತು ನಿನ್ನ ಮನೆ ನಾ ನೋಡಬೇಕು ಬಹಳ ದಿನದಿಂದ ಅಂದುಕೊಂಡಿದ್ದೆ” ಎಂದ. ಅರ್ಮುಗಂ “ಮತ್ತೊಮ್ಮೆ ನೋಡಿದರಾಯಿತು” ಎಂದ. “ಇನ್ನೆಷ್ಟು ದಿನ ನಿನ್ನದು ಇಲ್ಲಿಯ ಕೆಲಸ ಮುಗಿಯಿತಲ್ಲ. ನಡೀ” ಎಂದು ಜೊತೆಯಲ್ಲಿ ಹೆಜ್ಜೆ ಹಾಕಿದ.
ಮನೆಯ ಹತ್ತಿರ ಬಂದು ಆರ್ಮುಗಂ ಬಾಗಿಲನ್ನು ಸರಿಸಿದ. ಒಳಗೆ ಬಂದ ಬಸಯ್ಯ ದಿಗ್ಭ್ರಾಂತನಾದ . ಅಲ್ಲಿ ಮೂಲೆಯಲ್ಲಿ ಅರ್ಮುಗಂ’ನ ಇಬ್ಬರು ಮೊಮ್ಮಕ್ಕಳು ಓದುತ್ತ ಕುಳಿತಿದ್ದರು. ಹತ್ತಿರದಲ್ಲಿ ಎಣ್ಣೆಯ ಬುಡ್ಡಿ ದೀಪ ಉರಿಯುತ್ತಿತ್ತು.
Pic credit – BonifaceMwangi
– ಹೆಚ್ ಎಸ್ ಅರುಣ್ ಕುಮಾರ್
Facebook ಕಾಮೆಂಟ್ಸ್