ಮಂಕುತಿಮ್ಮನ ಕಗ್ಗ – ಟಿಪ್ಪಣಿ ೫೫.
ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ ? |
ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ||
ನರನುಮಂತೆಯೇ ಮನಸಿನನುಭವದಿ ಕಾಣುವನು |
ಪರಸತ್ತ್ವಮಹಿಮೆಯನು – ಮಂಕುತಿಮ್ಮ || ೫೫ ||
ವೈಜ್ಞಾನಿಕ ತಳಹದಿಯಾಧಾರಿತ ಆಧುನಿಕ ಮನೋಭಾವದ ಹಿಂದೆ ನಡೆದಿರುವ ಜಗದಲ್ಲಿ ಪ್ರತಿಯೊಂದಕ್ಕೂ ನೇರ, ಅಲ್ಲಗಳೆಯಲಾಗದ ಸಾಕ್ಷ್ಯ ಸಂಬಂಧವಿರಬೇಕು. ಅಂತಿದ್ದರೆ ಮಾತ್ರ ಯಾವುದೇ ಸಾಧ್ಯಾಸಾಧ್ಯತೆಯನ್ನು ಎಲ್ಲರು ವಿವಾದಾತೀತವಾಗಿ ಒಪ್ಪಲು ಸಾಧ್ಯ. ಆದರೆ ‘ನೈಜ ಜಗದ ಎಲ್ಲಾ ವ್ಯಾಪಾರಗಳನ್ನು ಕೇವಲ ಈ ಸೂತ್ರದಲ್ಲಿ ನಿಭಾಯಿಸಲು ಸಾಧ್ಯವೇ ? ಸಂಶಯಾತೀತ ಭೌತಿಕ ಅನುಭವಕ್ಕೆ ದಕ್ಕಿದರೆ ಮಾತ್ರ ಸತ್ಯ , ಮಿಕ್ಕಿದ್ದೆಲ್ಲಾ ಅಸಾಧು ಎನ್ನಲಾದೀತೆ ?’ ಎನ್ನುವ ಮೂಲ ಜಿಜ್ಞಾಸೆ ಈ ಕಗ್ಗದಲ್ಲಿದೆ. ಕಣ್ಣಿಗೆ ಕಾಣದ ಅನುಭವ, ಅನುಭೂತಿಗಳ ಮಹತ್ವವನ್ನು ಸಾರುವ ಮತ್ತೊಂದು ಪದ್ಯವಿದು.
ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ ? |
ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ||
ಕುರುಡನೊಬ್ಬ ತನ್ನ ಕಣ್ಣಿಂದ ಸೂರ್ಯಚಂದ್ರರನ್ನು ಕಾಣಲು ಸಾಧ್ಯವಿಲ್ಲವೆನ್ನುವುದೇನೊ ನಿಜ. ಆದರೂ ಅವನಿಗೂ ಹಗಲಾದುದರ, ಇರುಳಾದುದರ ಅರಿವು ಉಂಟಾಗುತ್ತದೆ – ಬರಿಯ ಬಿಸಿಲು ತಂಪಿನ ಸೋಕುವಿಕೆಯ ಸಂವೇದನೆಯಿಂದಲೆ. ತನ್ನ ಬದುಕೆಲ್ಲ ಕತ್ತಲಲ್ಲೆ ಕಳೆಯಬೇಕಾದ ಕುರುಡನ ಎಲ್ಲಾ ಕ್ರಿಯೆ, ಪ್ರಕ್ರಿಯೆಗಳು ಈ ರೀತಿಯ ಅನ್ಯ ಸಂವೇದನೆಗಳಿಂದಲೆ ನಿಭಾಯಿಸಲ್ಪಡುವ ವಾಸ್ತವವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ – ಬರಿಯ ಇಂದ್ರೀಯಗ್ರಹಿತ ಅನುಭವಗಳೆ ಎಲ್ಲವೂ ಅಲ್ಲ; ವಸ್ತು-ವಿಷಯ ಗ್ರಹಿಕೆಗೆ ನಮಗೆ ತಿಳಿದ, ತಿಳಿಯದ ಇನ್ನೂ ಅದೆಷ್ಟೋ ಮಾರ್ಗಗಳ ಸಾಧ್ಯತೆಯಿದೆ ಎನ್ನುವುದು.
ಕಣ್ಣಿಲ್ಲದ ಕುರುಡ ಸೂರ್ಯಚಂದ್ರರನ್ನು ಭೌತಿಕ ಸ್ವರೂಪದಲ್ಲಿ ಕಾಣಲಾರ ಎನ್ನುವ ವಾಸ್ತವವನ್ನೇ ಅತಾರ್ಕಿಕವಾಗಿ ವಿಸ್ತರಿಸಿ, ಈ ಕಾರಣದಿಂದ ಕುರುಡ ಸೂರ್ಯಚಂದ್ರರ ಬಿಸಿ ಮತ್ತು ತಂಪನ್ನು ಗ್ರಹಿಸಲಾಗದು, ಅನುಭವಿಸಲಾಗದು ಎನ್ನುವುದೂ ಹಾಸ್ಯಾಸ್ಪದವಾಗುತ್ತದೆ. ತಾನು ಕಾಣಲಾಗದು ಎನ್ನುವ ಕಾರಣಕ್ಕೆ ಕುರುಡ ಸೂರ್ಯಚಂದ್ರರ ಅಸ್ತಿತ್ವವನ್ನು ಅಲ್ಲಗಳೆಯುವುದಿಲ್ಲ. ಬದಲಿಗೆ ಅವುಗಳ ಇರುವಿಕೆಯನ್ನು ಅವುಗಳ ತಾಪಮಾನದ ಸ್ಪರ್ಶಾನುಭವದಿಂದ ಗ್ರಹಿಸಿ, ಒಪ್ಪಿಕೊಳ್ಳುತ್ತಾನೆ. ಅರ್ಥಾತ್ , ಸೃಷ್ಟಿಯ ಎಷ್ಟೋ ವಿಷಯಗಳಿಗೆ ನಾವು ಕೂಡ ಕುರುಡರೇ; ಅದನ್ನು ಕಾಣಲಾಗದ ದೌರ್ಬಲ್ಯ, ಅಸಹಾಯಕತೆಯಿಂದ ಬಂಧಿಸಲ್ಪಟ್ಟವರು. ಆದರೆ, ಅದೇ ಹೊತ್ತಿನಲ್ಲಿ ಅಂತಹ ಇರುವಿಕೆಯನ್ನು ಸಾರುವ ಅನೇಕ ಪರೋಕ್ಷ ಅನುಭವಗಳು ನಮ್ಮ ಮುಂದೆ ತೆರೆದುಕೊಳ್ಳುತ್ತಲೇ ಇರುತ್ತವೆ – ನಾವು ಗ್ರಹಿಸಿ, ಒಪ್ಪಿಕೊಳ್ಳಲು ಮುಕ್ತ ಮನಸಿನಿಂದ ಸಿದ್ಧರಿದ್ದರೆ.
ನರನುಮಂತೆಯೇ ಮನಸಿನನುಭವದಿ ಕಾಣುವನು |
ಪರಸತ್ತ್ವಮಹಿಮೆಯನು – ಮಂಕುತಿಮ್ಮ ||
ಸಾಮಾನ್ಯ ನರಮನುಷ್ಯನು ಸಹ, ಕೆಲವಾರು ವಿಶೇಷ ಅನುಭವಗಳನ್ನು ಮನಸಿನ ಇಂದ್ರೀಯಾತೀತ ಅಮೂರ್ತ ಪರಿಗ್ರಹಿಕೆಯಲ್ಲೇ ಪಡೆಯುತ್ತಾನೆ. ಆ ಪರಬ್ರಹ್ಮನ ಮಹಿಮೆಯನ್ನರಿಯುವ ವಿಷಯದಲ್ಲು ನಾವು ಕುರುಡರ ಹಾಗೆಯೆ. ಕಣ್ಣಿದ್ದರೂ ಆ ಮಹಿಮೆಯನ್ನು ಕಾಣುವ ಶಕ್ತಿಯಿಲ್ಲದ ಕಾರಣ, ಕುರುಡನು ಬಿಸಿ-ತಂಪುಗಳ ಸೋಕಿದ ಅನುಭವದಿಂದಲೆ ಸೂರ್ಯಚಂದ್ರರನ್ನು ಅರಿಯುವಂತೆ, ನರಮಾನವರು ಪರಬ್ರಹ್ಮದ ತತ್ತ್ವ, ಸತ್ತ್ವ, ಮಹತ್ವಗಳನ್ನು ತಮ್ಮ ಮನಸಿನ ಅನುಭವದಿಂದ ಕಾಣುವರು.
‘ಮನಸು ಕಣ್ಣಿಗೆ ಕಾಣಿಸದು, ಆ ಪರಬ್ರಹ್ಮತ್ವ ಭೌತಿಕ ನಿಲುಕಿಗೆ ಎಟುಕದು’ ಎಂದು ಅವುಗಳ ಅಸ್ತಿತ್ವವನ್ನೇ ಸಾರಾಸಗಟಾಗಿ ಅಲ್ಲಗಳೆಯುವ ಬದಲು, ಅವುಗಳಿಂದ ಸಹಜವಾಗಿ ಹೊಮ್ಮುವ ಪರೋಕ್ಷ ಸಂಕೇತಗಳನ್ನು ಗ್ರಹಿಸಿ ಅವುಗಳ ಇರುವಿಕೆಯನ್ನು ಅನುಭಾವಿಸಬೇಕು. ತನ್ಮೂಲಕ ಕಣ್ಣಿಗೆ ಪ್ರತ್ಯಕ್ಷ ಕಾಣದ್ದನ್ನು, ಮನಸಲಿ ಪರೋಕ್ಷ ಕಂಡುಕೊಳ್ಳುವ ವಿಧಾನವೂ ಸತ್ಯಾನ್ವೇಷಣೆಯ ಸಮ್ಮತ ಹಾದಿ ಎಂದು ಒಪ್ಪಿಕೊಂಡು ಮುನ್ನಡೆಯಬೇಕು. ಆಗ ಬಾವಿಕಪ್ಪೆಯ ಮನಸ್ಥಿತಿಯಿಂದ ಹೊರಬಂದು ವಿಶಾಲ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಲು ಸಾಧ್ಯ, ಮಾನಸಿಕ ಪಕ್ವತೆ-ಪ್ರಬುದ್ಧತೆಯತ್ತ ನಿಖರವಾದ ಹೆಜ್ಜೆಯಿಡಲು ಸಾಧ್ಯ.
ಈ ಮನೋಭಾವವನ್ನು ಅಳವಡಿಸಿಕೊಂಡ ಮನುಜ ಮನಸು ಮುಚ್ಚಿದ ಕೊಡೆಯಂತೆ ಸಂಕುಚಿತ ಮನೋಭಾವಕ್ಕೆ ಶರಣಾಗದೆ, ತೆರೆದ ಕೊಡೆಯಂತೆ ವಿಶಾಲ ಮನಸತ್ತ್ವವನ್ನು ಬೆಳೆಸಿಕೊಂಡು ಮುನ್ನಡೆಯಲು ಸಾಧ್ಯ ಎನ್ನುವುದಿದರ ಮೂಲತಿರುಳು. ಪ್ರತ್ಯಕ್ಷ ಸಾಕ್ಷಾಧಾರದಿಂದ ನಿರೂಪಿಸಲಾಗದಿದ್ದರು ಮನಸಿನ ಅಲ್ಲಗಳೆಯಲಾಗದ ಗ್ರಹಿಕೆ, ಅನುಭವವನ್ನು ನಿರಾಕರಿಸಲಾಗದು ಎನ್ನುವ ಒಟ್ಟಾರೆ ಭಾವ ಇಲ್ಲಿ ಬಿಂಬಿತವಾಗಿದೆ.
– ನಾಗೇಶ ಮೈಸೂರು
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ
Facebook ಕಾಮೆಂಟ್ಸ್