X

ಗುಣದ ಕಾರಣ ಮೂಲ, ವಿಸ್ಮಯದ ಸಂಕೀರ್ಣ ಜಾಲ..!

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೩

ತೃಣಕೆ ಹಸಿರೆಲ್ಲಿಯದು ? ಬೇರಿನದೆ ? ಮಣ್ಣಿನದೆ ? |
ದಿನಪನದೆ ? ಚಂದ್ರನದೆ ? ನೀರಿನದೆ ? ನಿನದೆ ? ||
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ ? ನೋಡು |
ಗುಣಕೆ ಕಾರಣವೊಂದೆ ? – ಮಂಕುತಿಮ್ಮ || ೦೫೩ ||

ಹೊರನೋಟಕ್ಕೆ ಸರಳವೆಂದು ಕಾಣುವಲ್ಲು ಇರುವ ಅವ್ಯಕ್ತ ಸಂಕೀರ್ಣತೆಯನ್ನು ಈ ಪದ್ಯ ಸೊಗಸಾಗಿ ವಿವರಿಸುತ್ತದೆ – ಎಲ್ಲರ ಗ್ರಹಿಕೆಗು ಸುಲಭದಲೊದಗುವ ಹುಲ್ಲಿನ (ತೃಣ) ಉದಾಹರಣೆಯೊಡನೆ.

ತೃಣಕೆ ಹಸಿರೆಲ್ಲಿಯದು ? ಬೇರಿನದೆ ? ಮಣ್ಣಿನದೆ ? |
ದಿನಪನದೆ ? ಚಂದ್ರನದೆ ? ನೀರಿನದೆ ? ನಿನದೆ ? ||

ನಾವು ಹುಲ್ಲಿನ ಬಣ್ಣವನ್ನು ನೋಡಿದ ತಕ್ಷಣವೆ ಗ್ರಹಿಸಿಬಿಡುತ್ತೇವೆ – ಅದರ ಬಣ್ಣ ಹಸಿರು ಎಂದು. ಆದರೆ ಆ ಹುಲ್ಲಿಗೆ ಹಾಗೆ ಹಸಿರು ಬಣ್ಣ ಬಂದುದಾದರೂ ಎಲ್ಲಿಂದ ? ಅದೇನು, ಹುಲ್ಲಿಗೆ ನೀರು ಮತ್ತು ಲವಣ ಸತ್ವಗಳನ್ನು ಹೀರಲು ಮತ್ತು ತನ್ಮೂಲಕ ಬೆಳೆಯಲನುವು ಮಾಡಿಕೊಡುವ, ಕಂದು ಬಣ್ಣದ ಬೇರಿಂದ ಒದಗಿದ ಬಣ್ಣವೆ ? ಅಥವಾ ಅವನ್ನೆಲ್ಲ ಬೇರಿಗೆ ಸರಬರಾಜು ಮಾಡುವ ಮೂಲ ಹೊಣೆ ಹೊತ್ತ ಕೆಂಪು ಮಣ್ಣು, ತನ್ನಾಟದ ಮಾಯಾಜಾಲದಲ್ಲಿ ಅಂತಿಮವಾಗಿ ಹುಲ್ಲಿಗೆ ತೊಡಿಸಿದ ಹಸಿರಂಗಿಯೆ ? ಸೋಜಿಗವೆಂದರೆ ಬೇರಾಗಲಿ, ಮಣ್ಣಾಗಲಿ ಎರಡರಲ್ಲು ಹಸಿರು ಬಣ್ಣವೆ ಇಲ್ಲ ! ಆದರೆ ಅವೆರಡರ ಸಖ್ಯ ಮತ್ತು ಪೋಷಣೆಯಲ್ಲಿ ಚಿಗುರುವ ಹುಲ್ಲಿಗೆ ಮಾತ್ರ ಹಸಿರಿನ ದಟ್ಟ ಲೇಪನ..! ‘ಎಲ್ಲಿಂದ ತಂದು ಹಚ್ಚಿದವಪ್ಪಾ ಈ ಹಸಿರನ್ನು ?’ ಎಂದಿಲ್ಲಿ ವಿಸ್ಮಯಗೊಂಡಿದ್ದಾನೆ ಮಂಕುತಿಮ್ಮ.

ಅಲ್ಲಿಗೆ ಬೇರು, ಮಣ್ಣಿಗೆ ನಿಲ್ಲದೆ ಹಾಗೆಯೆ ಮುಂದುವರೆಯುತ್ತದೆ ಕವಿಮನದ ವಿಚಾರಸರಣಿಯ ಲಹರಿ. ಹುಲ್ಲು ತನ್ನ ಪಾಡಿಗೆ ತಾನು ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಸುತ್ತ, ತನ್ನ ಅಡಿಗೆಯನ್ನು ತಾನೆ ಮಾಡುಂಡುಕೊಂಡು ಬೆಳೆಯಲು ಕಾರಣಕರ್ತನಾದ ದಿನಪನೆ (ಸೂರ್ಯ) ಆ ಹಸಿರು ಗುಣದ ಕಾರ್ಯಕರ್ತನಿರಬಹುದೆ ? ಅಥವ ಅಸ್ತಂಗತನಾದ ದಿನಪನ ಜಾಗದಲ್ಲಿ ಇರುಳಿನ ಪಾಳಿ ನಿಭಾಯಿಸಿಕೊಂಡು ತನ್ನ ತಂಪು ಚಂದ್ರಿಕೆ ಚೆಲ್ಲುತ್ತ, ಹುಲ್ಲಿನ ಕಾರ್ಖಾನೆಯು ವಿಶ್ರಮಿಸಿಕೊಳ್ಳಲು ಅನುವು ಮಾಡಿಕೊಡುವ ಚಂದ್ರನ ಕಾಣಿಕೆಯಿರಬಹುದೆ ? ಹುಲ್ಲಿನ ಒಳಗಿನ ಜೀವಸೆಲೆಯಾಗಿ ಓಡಾಡಿಕೊಂಡು ಅದರೆಲ್ಲಾ ಕಾಯಕವನ್ನು ಸರಾಗ-ಸಾಕಾರವಾಗಿಸುವ, (ಹುಲ್ಲು ಹೀರಿಕೊಂಡ) ನೀರಿನ ಮಹಿಮೆಯೆ, ಈ ಹಸಿರು ? ಅದಾವುದೂ ಅಲ್ಲವೆಂದಾದರೆ, ಬೀಜ ಬಿತ್ತಿ, ಗಿಡ ನೆಟ್ಟು, ನೀರಿನ ಬೋಗುಣಿ ಹಿಡಿದು ಹುಲ್ಲಿಗೆ ನೀರುಣಿಸುವ ಕಾಯಕ ಮಾಡುವ ನಾವುಗಳೆ ? ಮಳೆಯ ರೂಪಲ್ಲಿ ನೈಸರ್ಗಿಕವಾಗಿ ಅದನ್ನೆ ಆಗಗೊಳಿಸುವ ಸೃಷ್ಟಿಕರ್ತನ ಕೈ ಚಳಕವೆ ? ಯಾರದಿಲ್ಲಿ ನಿಜವಾದ ಕೊಡುಗೆ ?

ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ ? ನೋಡು |
ಗುಣಕೆ ಕಾರಣವೊಂದೆ ? – ಮಂಕುತಿಮ್ಮ ||

ಹೀಗೆ ತಾರ್ಕಿಕಾತಾರ್ಕಿಕ ಕಾರ್ಯ-ಕಾರಣ ಕೊಂಡಿಯ ಬೆನ್ನು ಹಿಡಿದು ಅಗಾಧ ವಿಸ್ಮಯ ಜಗದ ಪುಟ್ಟ ಸೋಜಿಗವೊಂದನ್ನು ಬಿಡಿಸಲು ಹೆಣಗತೊಡಗುತ್ತದೆ ಹುಲುಜೀವಿ ನರಜನ್ಮ. ಅದೇನು ಅಷ್ಟು ಸುಲಭದ ತುತ್ತಿಗೆ ಸಿಗುವ ಬುತ್ತಿಯೆ ? ಈ ನಡುವೆ ಅದರ ಹಿನ್ನಲೆ, ಮುನ್ನಲೆಯೇನನ್ನು ಆಲೋಚಿಸದೆ, ಇಂಥಹ ಸೌಂದರ್ಯವನ್ನು ನೋಡಲು ಈ ಕಣ್ಣುಗಳೆಷ್ಟು ಪುಣ್ಯ ಮಾಡಿದ್ದವೊ – ಎಂದು ತಮ್ಮನ್ನು ಆ ರಸಾಸ್ವಾದನೆಗೆ ಮಾತ್ರ ಸೀಮಿತಗೊಳಿಸಿಕೊಳ್ಳುವ ಕವಿ ಹೃದಯಗಳೂ ಅಗಾಧವೆ. ಆದರೆ ಅಂತಹ ಮನಗಳಲ್ಲು ಕೂಡ ಬಿಡದೆ ಕಾಡಿರಬಹುದಾದ ಪ್ರಶ್ನೆ – ನಾವು ಬಾಹ್ಯದಲ್ಲಿ ಕಾಣುವ ಗುಣ, ಸ್ವರೂಪದ ಮೂಲಕಾರಣ ಕೇವಲ ಒಂದು ಮಾತ್ರವೆ ? ಅಥವಾ ಹಲವಾರರ ಸಮ್ಮೇಳನವೆ ? ಈ ಪರ್ಯಾಲೋಚನೆಯಲ್ಲಿ ಹಲವಾರು ತಾರ್ಕಿಕ ಮತ್ತು ನೈಜ ಸಾಧ್ಯತೆಗಳು ಹೊಳೆಯಲಾರಂಭಿಸಿದಾಗ ಮೂಡುವ ಅನಿಸಿಕೆ – ‘ಬಹುಶಃ, ಇದೆಲ್ಲಾ ಕಾರಣಗಳ ಸಂಯೋಜಿತ ಪ್ರಕ್ರಿಯೆ ಹುಲ್ಲಿನ ಅಂತಿಮ ರೂಪಕ್ಕೆ ಕಾರಣವಾಗಿರಬಹುದು’ ಎಂದು.

ಹೀಗೆ ನಮ್ಮ ಸುತ್ತಲು ಕಾಣುವ ಸೃಷ್ಟಿಯಲ್ಲಿ ಹುಡುಕುತ್ತಾ ಹೋದರೆ, ‘ಹೊರಗೆ ಕಾಣುವ ಒಂದೇ ಒಂದು ಸರಳ ಗುಣಕ್ಕು ಎಷ್ಟೊಂದು ಕಡೆಯಿಂದ, ಎಷ್ಟೊಂದು ರೀತಿಯ ಪ್ರಕ್ರಿಯೆಗಳು ಸಮಷ್ಟಿಸಿ ಕಾರ್ಯ ನಿರ್ವಹಿಸುತ್ತಿವೆ !?’ ಎನ್ನುವ ಅಚ್ಚರಿ ಕಾಣಿಸಿಕೊಳ್ಳದೇ ಇರದು. ಇಂತಹ ಹಲವು ಹತ್ತು ಕಾರಣಗಳು, ಒಮ್ಮೆಯೂ ಒಂದೂ ಕೈಕೊಡದೆ, ನಿರಂತರವಾಗಿ ತಂತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸಿದರೆ ಮಾತ್ರ ಈ ಸರಳ ಚಮತ್ಕಾರ ಸಾಕಾರವಾಗಲಿಕ್ಕೆ ಸಾಧ್ಯ. ಆ ಸಾಧ್ಯತೆಯನ್ನು ನೈಸರ್ಗಿಕ ಪರಿಸರದಲ್ಲಿ, ಸ್ವಯಂನಿಯಂತ್ರಿತ ಸಮತೋಲನದಲ್ಲಿ, ಸರಳ ಪ್ರಕ್ರಿಯೆಯ ರೂಪದಲ್ಲಿ ಯಾವುದೇ ತೊಡಕು, ಸಂಕೀರ್ಣತೆಯಿಲ್ಲದೆ ನಿಭಾಯಿಸಿಕೊಳ್ಳುವಂತೆ ಸೃಜಿಸಿರುವುದೆ ವಿಶ್ವಚಿತ್ತದ ಅದ್ಭುತ ಚಮತ್ಕಾರ. ಅದನ್ನು ಆರಾಮವಾಗಿ ಕಣ್ಣಿಂದ ನೋಡಿ ಆನಂದಿಸುವ ಪುಣ್ಯ ಮಾನವನದಾಗಿಹ ಕಾರಣ ಅದನ್ನು ವ್ಯರ್ಥವಾಗಿಸದೆ, ಕನಿಷ್ಠ ನೋಡಿಯಾದರೂ ಹರ್ಷಿಸು ಎನ್ನುತ್ತಾನೆ – ಮಂಕುತಿಮ್ಮ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಹುಲ್ಲಿನ ಜೀವನ ಚಕ್ರದ ಹಿಂದಿನ ವಿಜ್ಞಾನವನ್ನೆಲ್ಲ ಗ್ರಹಿಸಿ, ಅದನ್ನು ಸರಳೀಕರಿಸಿ ತೆರೆದಿಟ್ಟ ರೀತಿ.

ಈ ತರ್ಕವನ್ನೆ ಹಿಡಿದು ತುಸು ಆಳದ ಆಲೋಚನೆಗಿಳಿದರೆ, ಹೊರಗೆ ಕಾಣುವ ಯಾವುದೇ ಸ್ವರೂಪದ ಹಿನ್ನಲೆಯಲ್ಲಿ ಕಾರ್ಯ ಮಾಡುವ ನೂರಾರು ಸೂತ್ರಗಳಿರಬಹುದು ಎನ್ನುವ ಸತ್ಯದ ಅರಿವಾಗುತ್ತದೆ; ಬಾಹ್ಯವರ್ತನೆಯ ಬೆನ್ನಲ್ಲಿ ಬರಿಗಣ್ಣು, ಮತಿಗೆಟುಕದ ನೂರೆಂಟು ಕಾರಣ ಮೂಲಗಳಿರಬಹುದು ಎನ್ನುವ ಸಾಮಾನ್ಯ ತಿಳುವಳಿಕೆ ನಮ್ಮ ಅರಿವಿಗೆ ನಿಲುಕುತ್ತದೆ. ಸಹನೆ, ತಾಳ್ಮೆಯಿಂದ ಅವಲೋಕಿಸಿದರೆ ಮಾತ್ರ ಅವು ಗ್ರಹಿಕೆಕೆ ದಕ್ಕುತ್ತವೆಯೆ ಹೊರತು ಬರಿಯ ಮೇಲ್ನೋಟಕ್ಕಲ್ಲ – ಎನ್ನುವ ಅಂಶದ ದರ್ಶನವೂ ಆಗುತ್ತದೆ. ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎಂಬ ನಾಣ್ಣುಡಿಯನ್ನು ಈ ಹಿನ್ನಲೆಯಲ್ಲಿ ಅರ್ಥೈಸಿದಾಗ ಅದರ ಮೂಲತತ್ವದ ಸತ್ವ ಸುಲಭ ಗ್ರಹಿಕೆಗೆ ದಕ್ಕುತ್ತದೆ.

ಒಟ್ಟಾರೆ ‘ಹುಲ್ಲಿನ ಬಣ್ಣ ಹಸಿರು’ – ಎಂದು ಮೂರು ಪದಗಳಲ್ಲಿ ಹೇಳಿ ಮುಗಿಸಬಹುದಾದ ಸರಳ ವಸ್ತುವಿನ ಹಿನ್ನಲೆಯಲ್ಲೂ, ಎಂತಹ ಅದ್ಭುತವಿರಬಹುದು ಎನ್ನುವುದನ್ನು ಮನಕ್ಕೆ ನೇರವಾಗಿ , ಸರಳವಾಗಿ ನಾಟುವಂತೆ ಹೇಳಿಬಿಡುತ್ತಾನಿಲ್ಲಿ ಮಂಕುತಿಮ್ಮ. ಹಾಗೆ ಹೇಳುತ್ತಲೆ, ನಮ್ಮ ಸುತ್ತಲೂ ಇರುವ ಇಂಥಹದ್ದೆ ಕೋಟ್ಯಾಂತರ ವಸ್ತು-ವಿಷಯಗಳ ಹಿಂದೆ ಇನ್ನೆಷ್ಟು ಇಂತಹದ್ದೇ ಕಾರಣೀಭೂತ ಅಂಶಗಳಿರಬಹುದೆನ್ನುವ ಗ್ರಹಿಕೆಯನ್ನು ನಮ್ಮ ಊಹೆಗೆ ಬಿಡುತ್ತಾನೆ !

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post