X

ಒಬ್ಬಂಟಿಯನ್ನಾಗಿ ಮಾಡಿದ ಹಾಸ್ಟೆಲ್ ಪ್ರೇಯರ್ ಅವಾಂತರ

ನಮ್ಮ ಕಾಲೇಜ್ ಇರುವುದು ಪುಣ್ಯಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ. ಕಾಲೇಜಿನ ಹಿಂದೆಯೇ ನಮ್ಮ ಹಾಸ್ಟೆಲ್. ಸುತ್ತಮುತ್ತಲು ಹಚ್ಚ ಹಸಿರು. 4 ಮಹಡಿಯ ಕಟ್ಟಡ. 3ನೇ ಮಹಡಿಯಲ್ಲಿರುವುದು ನನ್ನ ರೂಮ್. ರೂಮ್ ಕಿಟಕಿ ತೆಗೆದರೆ ಕಾಣುವುದು ನಮ್ಮ ಬಾಯ್ಸ್ ಹಾಸ್ಟೆಲ್. ಬಾಯ್ಸ್ ಹಾಸ್ಟೆಲ್ ನಮ್ಮ ಹಾಸ್ಟೆಲ್ ನಡುವೆ ಇರೋದೆ ನಮ್ಮ ಮೆಸ್ ಹಾಲ್. ಎಂಟರ್‍ಟೈನ್‍ಮೆಂಟ್‍ಗೋಸ್ಕರ ಹೆಸರಿಗೊಂದು ಟಿ.ವಿ. ಧಾರಾವಾಹಿ ನೋಡಲು ಬರುವುದು ಬರೀ ಯು.ಜಿ. ಮಕ್ಕಳು ಯಾಕಂದ್ರೆ ಪಾಪ ಇವರಿಗೆ ಇದೊಂದೆ ಪ್ರಪಂಚ ಮೊಬೈಲ್ ಫೋನ್ ಹಿಡ್ಕೊಂಡ್ರೆ ಎಲ್ಲಿ ವಾರ್ಡನ್ಸ್ ಬಂದು ಕಾನ್ಫೆಸ್ಕೇಟ್ ಮಾಡುತ್ತಾರೋ ಎಂಬ ಭಯ.

ಹಾಸ್ಟೆಲ್‍ನಲ್ಲಿ ರೂಲ್ಸ್ ಅಂದ್ರೆ ರೂಲ್ಸ್. ಟೈಮಿಂಗ್ ಅಂದ್ರೆ ಟೈಮಿಂಗ್. ಸಂಜೆ 6 ಗಂಟೆ ಒಳಗೆ ಎಲ್ಲರೂ ಗೂಡು ಸೇರಬೇಕು, ಇಲ್ಲಾಂದ್ರೆ ನಮ್ಮ ಕೋಟೆ ಬಾಗಿಲು ಭದ್ರವಾಗಿ ಮುಚ್ಚುತ್ತದೆ. ಸಮಾನತೆ ಎನ್ನೋ ಈ ಕಾಲದಲ್ಲಿ ನಮಗೆ ಇಲ್ಲಿ ಬಾಯ್ಸ್ ಹಾಸ್ಟೆಲ್ ಸ್ಟುಡೆಂಟ್ಸ್ ಜೊತೆ ಅಸಮಾನತೆ. ನಮಗೆ ಒಂದು, ಬಾಯ್ಸ್ ಹಾಸ್ಟೆಲ್‍ನಲ್ಲಿ ಒಂದು ಟೈಮಿಂಗ್.

ಬೆಳಿಗ್ಗೆ ಹಾಸ್ಟೇಲ್‍ನಲ್ಲಿ ಪ್ರೇಯರ್ ಕಂಪಲ್ಸರಿ. 6 ಗಂಟೆಗೆ ಬೆಲ್ ಹೊಡಿತಿತ್ತು ಎಲ್ಲರೂ ಬಂದು ಪ್ರೇಯರ್ ಹೇಳಿ ಹೋಗಬೇಕಿತ್ತು. ಎಲ್ರೂ ನಿದ್ದೆ ಕಣ್ಣಲ್ಲಿ ಬಂದು ನಿದ್ದೇಲೀನೆ ಪ್ರೇಯರ್ ಹೇಳ್ತಾ ಇದ್ವಿ. ಬರೀ ಪ್ರೇಯರ್ ಸಾಂಗ್ ಹೇಳೋದು ಮಾತ್ರ ಅಲ್ಲ ಅಲ್ಲಿ ಬಂದಿರೋ ಅಷ್ಟೂ ಮಂದಿ ರೋಲ್ ನಂಬರ್ ಹೇಳಿ ಅಟೆಂಡನ್ಸ್ ಹೇಳಿ ಹೋಗಬೇಕಿತ್ತು. ಪಿ.ಜಿ. ಫಸ್ಟ್ ಇಯರ್, ಸೆಕೆಂಡ್ ಇಯರ್ ಹಾಗೂ ಯು.ಜಿ. ಮಕ್ಕಳಿಗೆ ಅಂತಾ ಬೇರೆ ಬೇರೆ ಸೆಷನ್ಸ್‍ಗಳಲ್ಲಿ ನಡಿಯುತಿತ್ತು. ಮತ್ತೆ ಪುನಃ ಬೆಡ್‍ಗೆ ಹೋಗಿ ಮಲಗಿದ್ರೆ ಇನ್ನು ಏಳೋದು 7.30 ಬೆಲ್ ಆದ ನಂತರನೇ. ಆಮೇಲೆ ಬ್ರಶ್, ಸ್ನಾನ, ಬ್ರೇಕ್ ಫಾಸ್ಟ್ ಎಲ್ಲಾ.

ಈ ಪ್ರೆಯರ್ ಸಿಸ್ಟಮ್ ಬರೀ 1 ತಿಂಗಳಿಗಷ್ಟೇ ಸೀಮಿತವಾಗಿತ್ತು. ವಾರ ವಾರ ವೀಕೆಂಡ್ ಬರ್ತಾ ಇದ್ರೆ ಮನೆಗೆ ಹೊಗ್ತಾ ಇದ್ದ ನಾನು ವಾರದಲ್ಲಿ ಬರಿ 5 ದಿನ ಮಾತ್ರ ಪ್ರೇಯರ್‍ಗೆ ಹೋಗ್ತಾ ಇದ್ದಿದ್ದು. ಇನ್ನು ದೈವ ದೇವರು ಎಂದು ನಂಬದ ನಾನು ಹಾಸ್ಟೆಲ್‍ನಲ್ಲಿ ಇರುವಷ್ಟು ದಿನ ಸಾಚಾ ತರಹ ಪ್ರೇಯರ್‍ಗೆ ಹೋಗ್ತಾ ಇದ್ದೆ. ದಿನ ದಿನ ಹೋದಂತೆ ಪ್ರೇಯರ್‍ಗೆ ಬರೋ ಜನರ ಸಂಖ್ಯೆ ಇಳಿಮುಖವಾಗ ತೊಡಗಿತು. ನಮ್ಮಲ್ಲಿ ಒಟ್ಟು ಇಬ್ಬರು ಲೀಡರ್ಸ್‍ಗಳಿದ್ರು ಅದರಲ್ಲಿ ಒಬ್ಬಳು ನನ್ನ ಕ್ಲಾಸಿನವಳೆ ಆಗಿದ್ದವಳು.

ಮೊದಲೆಲ್ಲ ಹಾಸ್ಟೆಲ್‍ನಲ್ಲಿದ್ದ ಫಸ್ಟ್ ಇಯರ್ ಪಿ.ಜಿ.ಯ 120 ಮಕ್ಕಳು ಬರುತ್ತಾ ಇದ್ದರು. ಕಾಲಕ್ರಮೇಣ 50, 25, 10 ಅಂತ ಕಡಿಮೆ ಆಗುತ್ತಾ ಹೋಯಿತು. ಅದರಲ್ಲೂ ನನ್ನ ಕ್ಲಾಸಿನವಳಾದ ಹಾಸ್ಟೇಲ್ ಲೀಡರ್ ರೆಗ್ಯುಲರ್ ಆಗಿ ಬರುತ್ತಿರಲ್ಲ. ಸಂಜೆ ಕಾಮನ್ ಅಟೆಂಡನ್ಸ್ ಬರೋವಾಗ ನಾನು ಕಾಲೆಳೆದು ಜಗಳಕ್ಕೆ ನಿಂತಿದ್ದೆ. “ಬಾಯ್ಸ್ ಹಾಸ್ಟೆಲ್ ಮತ್ತು ಗರ್ಲ್ಸ್ ಹಾಸ್ಟೆಲ್‍ಗೆ ಒಂದು ರೂಲ್ಸ್ ನಿಜ ಒಪ್ಪಿಕೊಳ್ಳುವಂತಹ ವಿಷಯ ಆದರೆ ಇಲ್ಲಿ ಹಾಸ್ಟೆಲ್ ಲೀಡರ್‍ಗೆ ಒಂದು ರೂಲ್ಸ್ ಮಿಕ್ಕಿದ ಸ್ಟುಡೆಂಟ್ಸ್‍ಗೆ ಒಂದು ರೂಲ್ಸ್. ಇದು ಯಾಕೆ ಹೀಗೆ? ನಾಳೆನಿಂದ ಎಲ್ಲರೂ ಪ್ರೇಯರ್‍ಗೆ ಬರಬೇಕು ಈ ವಿಷಯವಾಗಿ ವಾರ್ಡನ್ ಜೊತೆ ನಾನೇ ಬೇಕಿದ್ದರೆ ಮಾತನಾಡುತ್ತೆನೆ” ಎಂದೆ.

ನಾನು ಹೀಗೆಲ್ಲಾ ಮಾತನಾಡಿದಕ್ಕೆ ನನ್ನ ವಿರುದ್ಧವಾಗಿ ಮರುದಿನ ವಾರ್ಡನ್ ಬಳಿ ಕಂಪ್ಲೆಂಟ್ ಹೋಯಿತು. ಅದೇನೆಂದರೆ “ಅವಳು ಪ್ರೇಯರ್ ಮಾಡೋವಾಗ ಚಪ್ಪಲಿ ಕಳಚುವುದಿಲ್ಲ, ಕೈ ಜೋಡಿಸಿ ನಿಲ್ಲುವುದಿಲ್ಲ” ಅದಕ್ಕೆ ನಾನು ಕೂಡಾ “ಚಪ್ಪಲಿ ಕಳಚುವುದು ಮತ್ತು ಕೈ ಜೋಡಿಸದೆಯೇ ನಿಲ್ಲುವುದು ನನಗೆ ಬಿಟ್ಟಿದ್ದು. ಆದರೆ ಹಾಸ್ಟೆಲ್ ಎಂದ ಮೇಲೆ ಎಲ್ಲರಿಗೂ ಒಂದೇ ರೂಲ್ಸ್ ಅಲ್ವ ಮೇಡಮ್! ಹಾಗಾದರೆ ಬೆಳಗ್ಗೆ ಪ್ರೇಯರ್‍ಗೆ ಬರೋ ಎಲ್ಲರೂ ಹಲ್ಲು ಉಜ್ಜಿ, ಸ್ನಾನ ಮಾಡಿ ಬರುತ್ತಾರೋ ಏನೋ?” ಹೀಗೆ ಕೇಳಿದ್ದೇ ತಪ್ಪಾಯಿತು ಅನಿಸುತ್ತದೆ. ನಮ್ಮ ಹಾಸ್ಟೆಲ್‍ನಲ್ಲಿ 6 ಗಂಟೆಗೆ ಇದ್ದ ಪ್ರೇಯರ್ 5.30 ಕ್ಕೆ ಆಯಿತು. ಅದಲ್ಲದೆ ಎಲ್ಲರೂ ಹಲ್ಲು ಉಜ್ಜಿ ಸ್ನಾನ ಮಾಡಿಯೇ ಬರಬೇಕು ಎಂದು ನಮ್ಮ ವಾರ್ಡನ್ ಮಕ್ಕಳಿಗೆ ಆರ್ಡರ್ ಮಾಡಿದರು. ಕಾಮನ್ ಬಾತ್ ರೂಮ್‍ನಲ್ಲಿ ಬೆಳ್ಳಿಗ್ಗೆನೇ ನೂಕು ನುಗ್ಗಲು ಶುರುವಾಯಿತು. ಅಂದಿನಿಂದ ಇಂದಿನವರೆಗೆ ಯಾರೂ ಕೂಡಾ ಹಾಸ್ಟೆಲ್‍ನಲ್ಲಿ ನನ್ನ ಜೊತೆ ಮಾತಾಡಲು ಇಷ್ಟ ಪಡುವುದಿಲ್ಲ. ಇಲ್ಲಿ ಈಗ ನಾನಯಿತು ನನ್ನ ರೂಮ್ ಆಯಿತು ಅಷ್ಟೆ ನನ್ನ ಹಾಸ್ಟೆಲ್ ಪ್ರಪಂಚ.

ಅಶ್ವಿನಿ ಶ್ರೀಶಾ ನಾಯಕ್
ಮಂಗಳೂರು

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post