X
    Categories: ಕಥೆ

ಅನುಬಂಧ – ಭಾಗ ೧

ಆ ದಿನ ಅವಳ ಜೊತೆ ನಾ ಹೊರಟಾಗ ಕೇಳಿದ್ದೆ “ಅಕ್ಕಾ, ನಿನ್ನ ಹೆಸರೇನು?” ಅಂತ. “ನಂಗೆ ಹೆಸರಿಲ್ಲ” ಅಂದಳು ಅವಳು. “ಮತ್ತೆ ನಾ ನಿನ್ನ ಹೇಗೆ ಕರೀಲಿ?” ಅಂದೆ. “ಈಗಷ್ಟೇ ಕರೆದೆ ಅಲ್ವಾ ‘ಅಕ್ಕಾ…’ ಅಂತ. ಹಾಗೆ ಕರಿ” ಅಂದಳು. ನಾನು ಸುಮ್ಮನೆ ಒಂದು ನಗು ಬೀರಿ “ಸರಿ” ಎನ್ನುತ್ತಾ ಜೊತೆ ನಡೆದಿದ್ದೆ. ಆ ದಿನಗಳೇ ಹಾಗಿದ್ದವೋ? ಆ ವಯಸ್ಸೇ ಹಾಗಿತ್ತೋ? ಅರಿಯೆ. ಹೆಚ್ಚು ಪ್ರಶ್ನೆಗಳು ಉದ್ಭವವಾಗುತ್ತಲೇ ಇರಲಿಲ್ಲ. ಅದೂ ಅಲ್ಲದೇ ಆಗ ನಾನೊಬ್ಬ ದಿಕ್ಕುದೆಸೆಯಿಲ್ಲದೇ ಅಲೆಯುತ್ತಿದ್ದ ಹನ್ನೊಂದು ವರ್ಷದ ಬಾಲಕ. ಹಾಗೆಯೇ ನನಗೂ ಇಂಥದೇ ಹೆಸರು ಅಂತ ಇರಲಿಲ್ಲ. ಕರೆಯುವವರೆಲ್ಲ, “ಏ ಹುಡುಗ..” ಅಂತಲೋ, “ಶ್..ಶ್…” ಅಂತಲೋ ಕರೆಯುತ್ತಿದ್ದರು. ಅಂತಹ ಅನಾಮಿಕ ಬದುಕು ಬದುಕುತ್ತಿದ್ದವನಿಗೆ ಯಾರೋ ಒಬ್ಬಳು ಅಕ್ಕ ನನ್ನ ಜೊತೆ ನಮ್ಮ ಮನೆಗೆ ಬಾ ಎಂದಾಗ ಮನದಲ್ಲಾದ ಸಂತಸ ಅತೀವ. ಬಸ್ ನಿಲ್ದಾಣದ ಅಂಗಡಿಗಳಿಂದ ಬಿಸ್ಕೇಟ್ ಪ್ಯಾಕ್’ಗಳನ್ನು ಪಡೆದು ಸಿಕ್ಕ ಸಿಕ್ಕ ಬಸ್ ಹತ್ತಿ, “ಬೇಡ..ಬೇಡ..” ಎನ್ನುವವರನ್ನು, “ಛೀ ಹೋಗಾಚೆ…” ಎಂದು ದರ್ಪ ತೋರಿಸುವವರನ್ನು,, “ಅಲ್ಲೇ ಇರು, ಹತ್ರ ಬರಬೇಡ” ಎಂದು ಮುಖ ಸಿಂಡರಿಸಿಕೊಂಡು ದೂರದಿಂದಲೇ ಹಣ ಎಸೆಯುವವರನ್ನು, “ಮಾರಿದ್ದು ಸಾಕು, ಕೆಳಗೆ ಇಳಿ ಟೈಮಾಯ್ತು” ಎಂದು ಗದರುವ ಕಂಡಕ್ಟರ್’ಗಳನ್ನು ನೋಡಿ ನೋಡಿ ಬೇಸತ್ತಿದ್ದ ನನಗೆ ಅವಳು ಜೊತೆ ಬರಲು ಕರೆದಾಗ “ಈ ಅಕ್ಕ ಯಾಕೆ ನನ್ನ ಕರೆಯುತ್ತಿದ್ದಾಳೆ? ನನ್ನನ್ನೇ ಯಾಕೆ ಆಯ್ಕೆ ಮಾಡಿದಳು? ಎಂಬ ದ್ವಂದ್ವಗಳೇ ಹುಟ್ಟಲಿಲ್ಲ. ಅದೇಕೋ ಆ ಅಕ್ಕನ ಮುಖದಲ್ಲಿ ಒಂದು ಆತ್ಮೀಯತೆ ಕಾಣಿಸಿತ್ತು. ಕೈಲಿದ್ದ ಬಿಸ್ಕೇಟ್ ಪೊಟ್ಟಣಗಳ ಬುಟ್ಟಿಯನ್ನ ಅಂಗಡಿ ಮಾಲಿಕರಿಗೆ ಹಿಂದಿರುಗಿಸಿದೆ. ಬುಟ್ಟಿಯಲ್ಲಿದ್ದ ಪೊಟ್ಟಣಗಳು ಖಾಲಿಯಾಗದೇ ಇದ್ದರೂ ಖುಷಿಯಿಂದ ಹಿಂದಿರುಗಿಸಿದ್ದು ಅಂದೇ ಮೊದಲಾಗಿತ್ತು. ಮಾರಾಟವಾಗದೇ ಉಳಿದ ಪೊಟ್ಟಣಗಳ ಜೊತೆಜೊತೆಗೆ ಆ ಬಸ್ ನಿಲ್ದಾಣದ ಎಲ್ಲ ಹಳೆಯ ನೆನಪುಗಳನ್ನು ಕಟ್ಟಿದ ಅಗೋಚರ ಪೊಟ್ಟಣ ಕೂಡ ಅದರಲ್ಲಿತ್ತು. ಅಕ್ಕ ನನ್ನ ಕೈ ಹಿಡಿದು ನಡೆಯುತ್ತಿದ್ದಳು. ಅದೇಕೋ ಮನಸಿಗೆ ತುಂಬಾ ಹಿತವೆನಿಸುತ್ತಿತ್ತು. ಮೊದಲನೇ ಬಾರಿ ಜಗತ್ತನ್ನೇ ಗೆಲ್ಲಬಲ್ಲೆ ಎಂಬ ಹುಚ್ಚು ವಿಶ್ವಾಸ ಬಂದಿತ್ತು.

ಇಬ್ಬರೂ ಮನೆ ಸೇರಿದೆವು. ಅಕ್ಕನದ್ದು ಮಧ್ಯಮ ವರ್ಗದ ಜೀವನ. ಎರಡು ಕೋಣೆಯಿರುವ ಒಂದು ಚಿಕ್ಕ ಬಾಡಿಗೆ ಮನೆ. ರಾತ್ರಿ ಊಟಕ್ಕೆ ಪಲಾವ್ ಮಾಡಿದ್ದಳು. ಹೊಟ್ಟೆತುಂಬ ತಿಂದೆ. ಹಾಗಂತ ಜಾಸ್ತಿ ತಿಂದೆ ಅಂತಲ್ಲ‌. ತಿಂದಷ್ಟನ್ನೇ ಸಂತೃಪ್ತಿಯಿಂದ ತಿಂದೆ. ನಂತರ ಒಂದು ಚಾಪೆ ಹಾಸಿ, ಅದರ ಮೇಲೊಂದು ಹಳೆಯ ಸೀರೆ ಹಾಸಿ ಮಲಗಲು ಹೇಳಿದಳು. ಜೀವನದಲ್ಲಿ ನನಗೆ ನೆನಪಿರುವಂತೆ ಮೊದಲ ಬಾರಿ ಒಂದು ಕೋಣೆಯ ಒಳಗಡೆ ನಿದ್ರಿಸಿದ್ದೆ. ಅದೊಂದು ಸುದೀರ್ಘ ರಾತ್ರಿಯಾಗಿತ್ತು. ಕನಸುಗಳು ಸಹ ಆ ದಿನ ನನ್ನ ಬಳಿ ಸುಳಿಯಲಿಲ್ಲ; ಅವುಗಳಿಗೂ ನನ್ನ ಆ ಸುಂದರ ನಿದ್ರೆಯ ನಡುವೆ ಸುಳಿಯುವುದು ಬೇಡ ಅನ್ನಿಸಿರಬೇಕು. ಬೆಳಿಗ್ಗೆ ೮ ಗಂಟೆಯವರೆಗೆ ಮಲಗಿದ್ದೆ. ಆ ಬೆಳಗು ಹೊಸ ಜೀವನದ ಆರಂಭಕ್ಕೆ ನಾಂದಿ ಹಾಡಿತು. ಕಿಟಕಿಯಿಂದ ಹೊರಗೆ ಇಣುಕಿದಾಗ ಕಂಡ ಸೂರ್ಯ ಕೂಡ ನನ್ನ ಹೊಸ ಬದುಕು ನೋಡಿ ಖುಷಿಯಿಂದ ಮುಗುಳ್ನಕ್ಕಂತೆ ಭಾಸವಾಯಿತು.  ಬಸ್ ನಿಲ್ದಾಣದ ಶೌಚಾಲಯದ ವಾಸನೆಯನ್ನಷ್ಟೇ ಕುಡಿದ ಮೂಗಿಗೆ, ಅಕ್ಕ, ದೇವರ ಪೂಜೆ ಮಾಡಿ ಹಚ್ಚಿದ ಅಗರಬತ್ತಿಯ ಪರಿಮಳ ಈ ಬದುಕಿಗೇ ಹೊಸ ಸೌಗಂಧ ತಂದಂತಿತ್ತು.  ಅಂದು ರವಿವಾರ ಆಗಿದ್ದರಿಂದ ಅಕ್ಕ ನನ್ನ ಜೊತೆಗೇ ಇದ್ದಳು. ಪೇಟೆಗೆ ಕರೆದೊಯ್ದಳು‌. ಬಟ್ಟೆ ಕೊಡಿಸಿದಳು. ಪಾರ್ಕ’ಗೆ ಕರೆದುಕೊಂಡು ಹೋದಳು. ಹೀಗೆ ಆ ಒಂದು ದಿನ ಕಳೆದ ಹನ್ನೊಂದು ವರ್ಷವನ್ನೇ ತಿರುಗಿ ಕೊಟ್ಟಂತಾಗಿತ್ತು ನನಗೆ.

ಆ ಪ್ರೀತಿ ಅಲ್ಲಿಗೆ ಮುಗಿಯಲಿಲ್ಲ. ಆಕೆ ನನ್ನನ್ನು ತನ್ನ ಮಗನಂತೆ ಬೆಳೆಸಿದಳು. ಓದಿಸಿದಳು. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಮಾಡಿದಳು. ಆಗಲೇ ಹೇಳಿದಂತೆ ಮೊದಮೊದಲು ಅವಳು ಯಾಕಾಗಿ ನನಗೆ ಇಷ್ಟೆಲ್ಲ ಮಾಡುತ್ತಿದ್ದಾಳೆ ಎಂಬ ಪ್ರಶ್ನೆಯೇ ಇರಲಿಲ್ಲ ಮನಸಲ್ಲಿ. ದಿನಗಳು ಕಳೆಯುತ್ತಿದ್ದಂತೆ, ಪ್ರಶ್ನೆಗಳು ಕಾಡುತ್ತಿದ್ದವು. ಯಾಕೆ ನನಗಾಗಿ ಇಷ್ಟು ಒದ್ದಾಟ ಮಾಡುತ್ತಾಳೆ ಈ ಅಕ್ಕ? ಕೇಳಿಬಿಡಬೇಕು ಅನಿಸುತ್ತಿತ್ತು. ಆದರೆ ಎಲ್ಲಿ ಆ ಪ್ರಶ್ನೆಯಿಂದ ಅವಳನ್ನು ಕಳೆದುಕೊಂಡು ಬಿಡುತ್ತೇನೋ ಎಂಬ ಭಯ ಕೂಡ ಎದುರಾಯಿತು. ಆ ವಿಚಾರದಲ್ಲಿ ನಾನು ಸ್ವಾರ್ಥಿಯಾದೆ. ಮತ್ತೆ ಏಕಾಂಗಿ ಬದುಕು ಬೇಕಾಗಿರಲಿಲ್ಲ ನನಗೆ. ನಡೆದಷ್ಟು ದಿನ ನಡೆಯಲಿ ಎಂದು ಸುಮ್ಮನಾದೆ. ಬದುಕು ಎಂಥ ವಿಚಿತ್ರ ನೋಡಿ,‌ ನನ್ನ ಯಾರೂ ಮಾತಾಡಿಸಲು ಸಹ ಹಿಂಜರಿಯುತ್ತಿದ್ದಾಗ “ಯಾಕೆ?” ಎಂಬ ಪ್ರಶ್ನೆ ಬರಲಿಲ್ಲ. ಯಾರೋ ನನ್ನ ಪ್ರೀತಿಸುತ್ತಾಳೆ ಎಂದಾಗ “ಯಾಕೆ ಪ್ರೀತಿಸುತ್ತಾಳೆ?” ಅನಿಸುತ್ತದೆ. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಾಗಲೇ ಬದುಕು ಚಂದವಂತೆ. “ಕಾಲಾಯ ತಸ್ಮೈ ನಮಃ”; ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದುಕೊಂಡು ದಿನಗಳನ್ನು ಕಳೆದೆ. ನನ್ನ ಓದು ಮುಗಿಯಿತು.‌ ಕೆಲಸಕ್ಕೆ ಸೇರಿದೆ. ಅಲ್ಲಿಗೆ ಅಕ್ಕ ನನಗಾಗಿ ನಡೆಸಿದ ಒದ್ದಾಟ ಸುಖಾಂತ್ಯ ಕಂಡಂತಾಗಿತ್ತು.

ಈಗ ಅಕ್ಕ ನೀಡಿದ ನಿಸ್ವಾರ್ಥ ಪ್ರೀತಿಯ ಕಾಲು ಭಾಗವಾದರೂ ಋಣಸಂದಾಯ ಮಾಡುವ ಸಮಯ ಎಂದು ಮನದಲ್ಲೇ ನಿರ್ಧರಿಸಿದೆ. ಮೊದಲ ಕಿರುಕಾಣಿಕೆ ಎಂಬಂತೆ ಅವಳಿಗೊಂದು ಸೀರೆ ಕೊಳ್ಳಬೇಕೆಂದುಕೊಂಡೆ‌. ಮೊದಲ ತಿಂಗಳ ಸಂಬಳಕ್ಕಾಗಿ ಹಾತೊರೆಯುತ್ತ ಕಾಯುತ್ತಿದ್ದೆ. ಕೊನೆಗೂ ಆ ದಿನ ಬಂದೇ ಬಿಟ್ಟಿತು. ಆಫೀಸ್ ಮುಗಿಸಿ ಹೊರಟವನೇ ಸೀರೆ ಅಂಗಡಿಗೆ ಹೋಗಿ ಒಂದು ಸೀರೆ ಕೊಂಡು ಮನೆಯತ್ತ ಹೆಜ್ಜೆ ಹಾಕಿದೆ. ಅದೇನೋ ತಡೆಯಲಾರದ ಖುಷಿ ಮನಸ್ಸಿಗೆ. ಎಲ್ಲೊ ಬಸ್ ನಿಲ್ದಾಣದ ಕಸ‌ಗುಡಿಸಿಕೊಂಡು ಬದುಕಬೇಕಾಗಿದ್ದ ನನ್ನ, ಬ್ಯಾಂಕ್ ಉದ್ಯೋಗಿಯಾಗುವಂತೆ ಮಾಡಿದ ಆ‌ ಜೀವದ ಖುಷಿಗಿಂತ ಹೆಚ್ಚಿನದು ನನ್ನ‌ ಜೀವನದಲ್ಲಿ ಏನು ತಾನೇ ಇರಲು ಸಾಧ್ಯ. ಅವಳೊಂದು ದೇವತೆ ನನ್ನ‌ ಪಾಲಿಗೆ. ನಾನು ದುಡಿದು ಆ ದೇವತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದೇ ನನ್ನ ಬದುಕಿನ ಮೊದಲ ಆದ್ಯತೆಯಾಗಿತ್ತು. ಅದು ಕೈಗೂಡಲು ಅತಿ ಸಮೀಪದಲ್ಲಿದ್ದೆ ನಾನು. ಹಾಗಾಗಿ ಮನದ ಉಲ್ಲಾಸಕ್ಕೆ ಪಾರವಿರಲಿಲ್ಲ.

ಬಸ್ ಇಳಿದು ಓಡೋಡುತ್ತ ಮನೆಗೆ ಬಂದೆ. ಬೀಗ ಹಾಕಿತ್ತು. ನಾನು ಆ ದಿನ ಸ್ವಲ್ಪ ಬೇಗವೇ ಮನೆ ತಲುಪಿದ್ದೆ. ಅಕ್ಕ ಇನ್ನೂ ಆಫೀಸಿನಿಂದ ಬಂದಿರಲಿಲ್ಲ. ನನ್ನ ಕೈಲಿದ್ದ ಕೀಲಿಕೈ ಇಂದ ಬೀಗ ತೆಗೆದು ಒಳಹೋದೆ. ಬಟ್ಟೆ ಬದಲಾಯಿಸಲು ಸಹ ಮನಸ್ಸಾಗಲಿಲ್ಲ. ಅಕ್ಕನನ್ನು ನೋಡುವ ತವಕದಲ್ಲಿ ಕಾಯುತ್ತ ಕುಳಿತೆ. ನಮ್ಮವರಿಗಾಗಿ ಪ್ರೀತಿಯಿಂದ ಉಡುಗೊರೆಯೊಂದ ತಂದಾಗ ಇಷ್ಟು ಚಡಪಡಿಕೆಯಾಗುವುದೇ ಎಂದು ನನಗೇ ಅಚ್ಚರಿಯಾಯಿತು. ಹೀಗೆ ಸಮಯ ಕಳೆಯಿತು. ಅಕ್ಕನ ದೈನಂದಿನ ಮನೆ ತಲುಪುವ ಸಮಯಕ್ಕಿಂತ ತುಸು ಜಾಸ್ತಿಯೇ ಹೊತ್ತಾಯಿತು. ಒಂದಿಷ್ಟು ಆತಂಕ. ಇನ್ನೂ ಕೆಲವು ಸಮಯ ಕಾದೆ. ಅಕ್ಕ ಬರಲಿಲ್ಲ. ಮೊಬೈಲ್ ತೆಗೆದು ಅವಳ ಫೋನಾಯಿಸಿದೆ. ಕರೆ ಸ್ವೀಕರಿಸಲಿಲ್ಲ‌. ಇನ್ನೂ ಮೂರು ಬಾರಿ ಮಾಡಿದೆ,‌ ಐದು ಬಾರಿ, ಹತ್ತು ಬಾರಿ‌ ಹೀಗೆ ಕರೆ ಮಾಡುತ್ತಲೇ ಇದ್ದೆ. ಪ್ರಯೋಜನವಿಲ್ಲದಾಯಿತು. ಅಕ್ಕನ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿ ವಿಚಾರಿಸಿದೆ. ಅವರೊಂದಿಗೆ ಪ್ರತಿದಿನದ ಸಮಯದಲ್ಲೇ ಆಫಿಸಿನಿಂದ ಹೊರಟಿದ್ದಾಳೆ ಎಂಬ ಉತ್ತರ ಬಂತು. ಇನ್ನೆಲ್ಲಿ ವಿಚಾರಿಸುವುದೋ‌ ಅರಿಯದಾದೆ. ಮನೆಗೆ ಬೀಗ ಹಾಕಿ‌ ಅವಳ ಆಫೀಸಿನ ಕಡೆ ಹೋದೆ. ಅಲ್ಲೆಲ್ಲಾ ಹುಡುಕಾಡಿದೆ. ಅಲ್ಲಿಯೂ ಸುಳಿವು ಸಿಗದಾಯಿತು. ಕಂಗಾಲಾದೆ. ಅಲ್ಲೇ ಹತ್ತಿರದಲ್ಲಿದ್ದ  ಇನ್ನೊಬ್ಬಳು ಸಹೋದ್ಯೋಗಿ ಆಶ್ರಿತಾ ಅವರ ಮನೆಗೆ ಹೊರಡಲನುವಾದೆ. ಆಗ ಮೊಬೈಲ್ ಫೋನಿಗೆ ಒಂದು ಕರೆ ಬಂತು. ನಡುಗುವ ಬೆರಳುಗಳಿಂದಲೇ ಕರೆ ಸ್ವೀಕರಿಸಿ “ಹಲೋ…ಯಾರು?” ಎಂದೆ.

ಮುಂದುವರಿಯುವುದು..

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post