X

ಅನಾಥಮಕ್ಕಳ ಪಾಲಿನ ಬೆಳ್ಳಿ ಕಿರಣ – ‘ಸಿಂಧೂತಾಯಿ ಸಪ್ಕಲ್’

ಅನಾಥೋ ದೈವರಕ್ಷಿತಃ ಎಂಬುದು ನಮ್ಮ ಹಿರಿಯರು ತಿಳಿಹೇಳಿದ ನುಡಿ. ಯಾರೂ ಇಲ್ಲದವರ ಪಾಲಿಗೆ ದೇವರು ಯಾವುದೋ ರೂಪದಲ್ಲಿದ್ದು ಸಹಾಯ ಮಾಡುತ್ತಾರೆ ಎಂಬುದು ಅಕ್ಷರಶಃ ನಿಜ. ನಮ್ಮೆಲ್ಲರ ಜೀವನದಲ್ಲಿ ಒಂದಲ್ಲ ಒಂದು ಬಾರಿ ನಾವೆಲ್ಲರೂ ಅಪರಿಚಿತರಿಂದ ಅಥವಾ ಇನ್ಯಾರಿಂದಲೋ ಅನಿರೀಕ್ಷಿತವಾಗಿ ನೆರವು ಪಡೆದುಕೊಂಡು ನಮ್ಮ ಹಿರಿಯರು ಹೇಳಿದ ಮಾತು ನಿಜವೆಂಬುದನ್ನು ಕಂಡುಕೊಂಡಿದ್ದೇವೆ. ಆದರೆ ಈಗ ನಾನು ಹೇಳ ಹೊರಟಿರುವುದು ಮಹಾರಾಷ್ಟ್ರದ ಸಮಾಜ ಸೇವಕಿ ’ಸಿಂಧೂತಾಯಿ ಸಪ್ಕಲ್’ರ ಬಗ್ಗೆ. ಅನಾಥಮಕ್ಕಳ ಪಾಲಿನ ದೇವತೆಯಾಗಿ ಭಾರತ ದೇಶದಾದ್ಯಂತ ಮಮತಾಮಯಿ ಎಂದು ಕರೆಸಿಕೊಂಡು ಸಮಾಜ ಸೇವಕಿಯಾಗಿ, ಅನಾಥಮಕ್ಕಳಿಗಾಗಿ ತನ್ನ ಜೀವನವನ್ನೇ ಸಮರ್ಪಿಸಿ ‘ಮಾಯಿ’ ಎಂದೇ ಕರೆಯಿಸಿಕೊಂಡವರು. ಬಾಲ್ಯದಲ್ಲಿಯೇ ತನ್ನವರೆನಿಸಿಕೊಂಡವರಿಂದ ತಿರಸ್ಕರಿಸಲ್ಪಟ್ಟು ಅಕ್ಷರಶಃ ಬೀದಿಯಲ್ಲಿ ಜೀವನ ಸಾಗಿಸಿ, ಹಸಿವಿನಿಂದ ಪ್ರತಿಯೊಂದು ದಿನವೂ ಸತ್ತು ಬದುಕಿದವರು. ತನ್ನಂತಹ ದುಃಸ್ಥಿತಿ ಇನ್ಯಾರಿಗೂ ಬರಬಾರದೆಂಬ ಸಂಕಲ್ಪ ಮಾಡಿ ಸರ್ಕಾರವೇ ಮೆಚ್ಚುವಂತೆ 6 ಅನಾಥಾಲಯಗಳ ಸ್ಥಾಪಿಸಿ ತನ್ಮೂಲಕ ದಿಕ್ಕುದೆಸೆಯಿಲ್ಲದ ಸಾವಿರಾರು ಜನರನ್ನು ಸಲಹುತ್ತಿರುವ ಇವರಿಗೆ ನನ್ನದೊಂದು ದೊಡ್ಡ ನಮನ.

ಮಹಾರಾಷ್ಟ್ರದ ವಾರ್ಧಜಿಲ್ಲೆಯ ಪಿಂಪ್ರಿಮೇಘೆ ಹಳ್ಳಿಯಲ್ಲಿ ದನಗಾಯಿವೃತ್ತಿಯ ಬಡಕುಟುಂಬವೊಂದರಲ್ಲಿ ನವೆಂಬರ್ 14 1948ರಂದು ಜನಿಸಿದವರು ಸಿಂಧೂತಾಯಿ ಸಪ್ಕಲ್. ಇವರ ತಂದೆ ಅಭಿಮಾನ್ಜಿ ದನಮೇಯಿಸುವ ನೆಪದಲ್ಲಿ ತಾಯಿಯ ವಿರೋಧದ ನಡುವೆಯೂ ಸಿಂಧೂತಾಯಿ ಸಪ್ಕಲ್ ಶಾಲೆಗೆ ಕಳುಹಿಸುತ್ತಾರೆ. ತಂದೆಯ ಸಹಕಾರ, ತಾಯಿಯ ವಿರೋಧ, ವಿದ್ಯಾಭ್ಯಾಸಕ್ಕಾಗಿ ಸ್ಲೇಟುಕೊಳ್ಳಲೂ ಸಾಧ್ಯವಾಗದಂತಹ ಆರ್ಥಿಕ ಅಡಚಣೆಯ ನಡುವೆಯೂ 4ನೇ ತರಗತಿ ಪಾಸುಮಾಡಿಕೊಂಡರು. 10ನೇ ವಯಸ್ಸಿಗೆ ಮನೆಯವರ ತೀರ್ಮಾನದಂತೆ ಶ್ರೀಹರಿ ಸಪ್ಕಲ್ ಅಲಿಯಾಸ್ ಹರ್ಬಾಜಿ ಎಂಬ 30 ವರ್ಷದ ವ್ಯಕ್ತಿಯೊಂದಿಗೆ ವಿವಾಹ ಬಂಧನಕ್ಕೊಳಗಾಗಬೇಕಾಯಿತು. ವರ್ಷ 20 ಕಳೆಯುವುದರೊಳಗಾಗಿ ಮೂರು ಮಕ್ಕಳ ತಾಯಿಯಾಗಿ 4ನೇ ಮಗು ಗರ್ಭದಲ್ಲಿ ಬೆಳೆಯುತ್ತಿತ್ತು. ಸಣ್ಣ ವಯಸ್ಸಿಗೆ ಸಂಸಾರದ ಜವಾಬ್ಧಾರಿ ನಿಭಾಯಿಸಬೇಕಾದ ಪರಿಸ್ಥಿತಿ.

ಹುಟ್ಟಿನಿಂದಲೇ ದನಸಾಗಾಣಿಕೆ ಮಾಡುತ್ತಾ ಬೆಳೆದ ಇವರಿಗೆ ಗ್ರಾಮದ ಜನರ ಮೇಲೆ ಅಪಾರ ಪ್ರೀತಿ. ಊರಿನ ಮುಖ್ಯಸ್ಥನೋರ್ವನಿಂದ ಗ್ರಾಮಸ್ಥರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಧನಿ ಎತ್ತುತ್ತಾರೆ. ಅಂದಿನ ಪರಿಸ್ಥಿತಿಯಲ್ಲಿ ಊರಿನ ಮುಖ್ಯಸ್ಥನ ವಿರುದ್ಧವೇ ಧರಣಿ ಕುಳಿತು ಅವನಿಂದ ಗ್ರಾಮಸ್ಥರಿಗಾಗುತ್ತಿದ್ದ ಅನ್ಯಾಯವನ್ನು ಡಿಸ್ಟ್ರಿಕ್ಟ್ ಕಲೆಕ್ಟರ್ ಗಮನಕ್ಕೆ ತಂದು ನ್ಯಾಯ ಒದಗಿಸಿ ಯಶಸ್ಸು ಪಡೆದಾಗ ಮುಂದೊಂದು ದಿನ ಇದೇ ಮುಖ್ಯಸ್ಥನ ದ್ವೇಷದ ಜ್ವಾಲೆಗೆ ತನ್ನ ಸಂಸಾರವೇ ಸುಟ್ಟು ಹೋಗಬಹುದೆಂಬ ಕಲ್ಪನೆಯೂ ಇವರಿಗೆ ಇರಲಿಲ್ಲ. ಅವಮಾನಗೊಂಡ ಊರಿನ ಮುಖ್ಯಸ್ಥ ಸಿಂಧೂತಾಯಿ ಸಪ್ಕಲ್’ರ ವಿರುದ್ಧ ಕಟ್ಟುಕಥೆಗಳನ್ನು ಸೃಷ್ಟಿಸಿ, ಅವರ ಪತಿ ಅನಿವಾರ್ಯವಾಗಿ ಇವರನ್ನು ತೊರೆಯುವಂತೆ ಮಾಡಿದನು. 9 ತಿಂಗಳ ತುಂಬು ಗರ್ಭಿಣಿಯಾಗಿದ್ದ ಸಿಂಧೂತಾಯಿ ಸಪ್ಕಲ್’ರನ್ನು ಹೊಡೆದು ದನಗಳ ಕಾಲ್ತುಳಿತಕ್ಕೆ ಸಿಲುಕಿ ನರಳಾಡಲಿ ಎಂದು ದನದ ಕೊಟ್ಟಿಗೆಗೆ ದೂಡಿ ಕ್ರೌರ್ಯವನ್ನು ಮೆರೆದಿದ್ದರು. ಆದರೆ ತುಂಬುಗರ್ಭಿಣಿಯಾದ್ದರಿಂದ ಪ್ರಜ್ಞೆಕಳೆದುಕೊಂಡು ಬಿದ್ದ ಸಿಂಧೂತಾಯಿ ಸಪ್ಕಲ್ ಎಚ್ಚರಗೊಂಡಾಗ ಅವರು ಅದಾಗಲೇ ಹೆಣ್ಣು ಮಗುವಿಗೆ ಜನ್ಮನೀಡಿರುವುದನ್ನು ತಿಳಿಯುತ್ತಾರೆ. ಅಲ್ಲದೇ ಆ ನವಜಾತ ಶಿಶು ಮತ್ತು ತನಗೆ ಆಸರೆಯಾಗಿ ದನವೊಂದು ನಿಂತಿರುವುದನ್ನು ನೋಡುತ್ತಾರೆ. ಇಂತ ಪರಿಸ್ಥಿತಿಯಲ್ಲಿ ಚೂಪಾದ ಕಲ್ಲನ್ನು ತೆಗೆದುಕೊಂಡು ನವಜಾತ ಮಗುವಿನ ಹೊಕ್ಕುಳ ಬಳ್ಳಿಯನ್ನು ತುಂಡರಿಸಿ ತನ್ನ ದುಃಸ್ಥಿತಿಯನ್ನು ನೆನೆದುಕೊಂಡು ಆಶ್ರಯಕ್ಕಾಗಿ ತವರು ಮನೆಯತ್ತ ಸಾಗುತ್ತಾರೆ. ಆಗ ತಾನೇ ಹುಟ್ಟಿದ ಮಗುವನ್ನು ಎತ್ತಿಕೊಂಡು ಕಿಲೋಮೀಟರ್’ನಷ್ಟು ದೂರ ನಡೆದುಕೊಂಡು ಬಂದ ಮಗಳಿಗೆ ಆಶ್ರಯ ನೀಡಲು ನಿರಾಕರಿಸಿದ ತಾಯಿಯನ್ನು ನೋಡಿದಾಗ ಹುಟ್ಟಿದಾಗಿನಿಂದಲೂ ಹೆಣ್ಣು ಎಂಬ ಕಾರಣಕ್ಕಾಗಿ ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟಿದ್ದ ಸಿಂಧೂತಾಯಿಗೆ ಚಿಂದಿ ಎಂಬ ತನ್ನ ಹೆಸರು (ಮರಾಠಿ ಭಾಷೆಯಲ್ಲಿ ಬಟ್ಟೆಯ ಹರಿದ ತುಂಡು) ಅನ್ವರ್ಥ ಎಂದೆನಿಸಿತ್ತು.

ಹೀಗೆ ತವರು ಮನೆಯಿಂದ ತಿರಸ್ಕರಿಸಲ್ಪಟ್ಟ ಸಿಂಧೂತಾಯಿ ಸೇರಿಕೊಂಡದ್ದು ಸ್ಮಶಾನಭೂಮಿಯನ್ನು. ನವಜಾತ ಶಿಶುವನ್ನು ಹೊತ್ತುಕೊಂಡು ಸ್ಮಶಾನದ ದುರ್ಗಮ ಪರಿಸ್ಥಿತಿಯಲ್ಲಿ ಬಾಣಂತಿಯೊಬ್ಬಳು ದಿನ ಕಳೆಯುತ್ತಿದ್ದಾಳೆಂದರೆ ಬಹುಶಃ ಜೀವನ ಹೀಗೂ ಇರಬಹುದೇ ಎಂಬ ಯೋಚನೆ ನಮಗಾಗದೇ ಇರದು. ಇನ್ನು ಹಸಿವವನ್ನು ನೀಗಿಸಲು ಸ್ಮಶಾನದಲ್ಲಿ ಮೃತವ್ಯಕ್ತಿಯ ಸಂಬಂಧಿಕರು ಬಿಸಾಡಿದ ಪಿಂಡ ಬಳಸಿದ ಬೇಳೆ ಕಾಳುಗಳಿಂದ ಚಪಾತಿ ತಯಾರಿಸಿಕೊಂಡು ದಿನಕಳೆದ ಗಟ್ಟಿಗಿತ್ತಿ ಈಕೆ. ಅವರ ಮಾತಿನಲ್ಲಿ ಹೇಳುವುದಾದರೆ ಸ್ಮಶಾನದಲ್ಲಿ ವಾಸಿಸುತ್ತಿದ್ದರಿಂದ ಯಾವ ಪುರುಷರೂ ಅತ್ತ ಕಡೆ ಮುಖಮಾಡುತ್ತಿರಲಿಲ್ಲ. ತಾನೇನಾದರೂ ಕಾಣಿಸಿಕೊಂಡರೆ ಭೂತ ಭೂತ ಎಂದು ಓಡಿ ಹೋಗುತ್ತಿದ್ದರಿಂದ ಸುರಕ್ಷಿತವಾಗಿ ಇರುವಂತಾಯಿತು. ಹೀಗೆ ಮುಂದೆ ಉದರ ಪೋಷನಕ್ಕಾಗಿ ರೈಲುಗಳಲ್ಲಿ ಹಾಡುತ್ತಾ, ಬೇಡುತ್ತಾ ತಿರುಗಿದ ಇವರು ತನ್ನಂತೆ ಹಸಿದ ಸ್ಥಿತಿಯಲ್ಲಿದ್ದವರಿಗೂ ತನ್ನ ಸಂಪಾದನೆಯಲ್ಲಿ ಒಂದು ಪಾಲು ನೀಡಿ ಧನ್ಯರಾಗುತ್ತಿದ್ದರು. ಒಂದು ದಿನ ರೈಲ್ವೇ ನಿಲ್ದಾಣದ ಮೂಲೆಯಲ್ಲಿ ತಾನು ಕಷ್ಟಪಟ್ಟು ಸಂಪಾದಿಸಿದ ಒಂದು ರೋಟಿಯನ್ನು ಹಿಡಿದುಕೊಂಡು ತನ್ನ ಬದುಕಿನ ದುರ್ದೆಸೆಯನ್ನು ಚಿಂತಿಸುತ್ತಾ ಆತ್ಮಹತ್ಯೆಗೆ ನಿರ್ಧಾರಮಾಡಿದ ಸಿಂಧೂತಾಯಿಗೆ ಆ ಕ್ಷಣದಲ್ಲಿ ಅನಾಥ ವ್ಯಕ್ತಿಯೊಬ್ಬರು ಸಾಯುವ ಸ್ಥಿತಿಯಲ್ಲಿದ್ದು ಗುಟುಕು ನೀರಿಗಾಗಿ ದಯನೀಯವಾಗಿ ಬೇಡುತ್ತಾ ಇರುವುದನ್ನು ಕಂಡು ಅವರ ಬಳಿ ಹೋಗಿ ಅವರಿಗೆ ಕುಡಿಯಲು ನೀರು ಕೊಟ್ಟು ತಾನು ತಂದಿದ್ದ ರೋಟಿಯನ್ನು ಅವರಿಗೆ ನೀಡಿ ಸಂತೈಸಿದರು. ಆ ಸಮಯದಲ್ಲಿ ಮಾಡಿದ ಒಂದು ಸಣ್ಣ ಸಹಾಯ ಆ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರುಮಾಡಿತು. ಈ ಘಟನೆ ಸಿಂಧೂತಾಯಿ ಮನಸ್ಸಿನಲ್ಲಿ ಅನಾಥರಿಗಾಗಿ ಏನಾದರೂ ಮಾಡಬೇಕೆಂಬ ಇಚ್ಛೆ ಪ್ರಬಲವಾಗಿ ಬೇರೂರುವಂತೆ ಮಾಡಿತು.

ಮುಂದೆ ಬೀದಿ ಬದಿಯಲ್ಲಿದ್ದ ಅನಾಥವಾಗಿ ಅಲೆಯುತ್ತಿದ್ದ ದೀಪಕ್ ಎಂಬ ಅನಾಥ ಮಗುವಿಗೆ ಆಸರೆಯಾಗುತ್ತಾರೆ. ಒಂದೊಂದೇ ಅನಾಥ ಮಗುವಿಗೆ ಆಸರೆಯಾಗುತ್ತಾ 18 ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾರೆ. ತನ್ನ ದತ್ತು ಮಕ್ಕಳು ಮತ್ತು ಸ್ವಂತ ಮಗಳು ಮಮ್ತಾಳನ್ನು ನಡುವೆ ಯಾವುದೇ ಭೇದಭಾವವಿರಬಾರದೆಂಬ ಉದ್ದೇಶದಿಂದ ಪುಣೆಯಲ್ಲಿರುವ ಶ್ರೀಮಂತ್ ದುಗ್ದಾಸೇತ್ ಹಲ್ವಾಯಿ ಟ್ರಸ್ಟ್ನಲ್ಲಿ ಬಿಡುತ್ತಾರೆ. ಹೀಗೆ ಅನಾಥರಿಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಡುತ್ತಾ ನಿಸ್ವಾರ್ಥ ಸೇವೆ ಸಲ್ಲಿಸಿದ ಇವರು ಮುಂದೊಂದು ದಿನ ‘ಮಾಯಿ’ ಎಂದೇ ಜನಪ್ರಿಯರಾದರು. ಯಾವುದೇ ಒಂದು ಸರಕಾರವು ಕಣ್ತೆರೆದು ನೋಡಬೇಕಾದ, ಅನಾಥ ಮಕ್ಕಳ ಜೀನವದಲ್ಲಿ ಹೊಸ ಭರವಸೆಯನ್ನು ಮೂಡಿಸಿ ಸುಮಾರು 1200ಕ್ಕಿಂತಲೂ ಹೆಚ್ಚು ಅನಾಥ ಮಕ್ಕಳಿಗೆ ಆಸರೆಯಾಗಿ ಅವರೆಲ್ಲರೂ ಸ್ವಂತ ಕಾಲ ಮೇಲೆ ನಿಲ್ಲವಂತೆ ಮಾಡಿದ್ದಾರೆ. ಅಂದು ಎಲ್ಲರಿಂದ ತಿರಸ್ಕೃತರಾಗಿದ್ದ ಇವರಿಗೆ 207ಕ್ಕಿಂತಲೂ ಹೆಚ್ಚು ಅಳಿಯಂದಿರು, 36ಕ್ಕೂ ಹೆಚ್ಚು ಸೊಸೆಯಂದಿರು, 1000ಕ್ಕಿಂತಲೂ ಹೆಚ್ಚು ಮೊಮ್ಮಕ್ಕಳ ಪ್ರೀತಿಯ ಬೆಸುಗೆ ಬೆಳೆದಿದೆ. ಇವರು ದತ್ತು ಸ್ವೀಕರಿಸಿದ ಎಷ್ಟೋ ಮಕ್ಕಳು ವಿದ್ಯಾವಂತರಾಗಿ ಡಾಕ್ಟರ್, ಲಾಯರ್ ಆಗಿ ವಿವಿಧ ಕ್ಷೇತ್ರಗಳಲ್ಲಿ ಜೀವನ ಕಂಡುಕೊಂಡಿದ್ದಾರೆ. ಇವರ ಸಮಾಜಮುಖೀ ಕಾರ್ಯಗಳಿಂದ ಪ್ರೇರಿತರಾದ ಇವರ ಮಗಳು ಕೂಡ ಒಂದು ಅನಾಥಾಶ್ರಮವನ್ನು ನಡೆಸುತ್ತಿದ್ದರೆ, ಇನ್ನೊಬ್ಬರು ತನ್ನ ತಾಯಿಯ ಜೀವನದ ಮೇಲೆ ಪಿ.ಹೆಚ್.ಡಿ ಮಾಡುತ್ತಿದ್ದಾರೆ.

ಅನಾಥಮಕ್ಕಳಿಗೆ ಮಾತ್ರ ತನ್ನ ಜೀವನವನ್ನು ಸಮರ್ಪಿಸದೇ ತನ್ನ ಸಮಾಜಸೇವೆಯ ಭಾಗವಾಗಿ 84 ಹಳ್ಳಿಗಳ ಪುನರ್ ನಿರ್ಮಾಣಕ್ಕಾಗಿ ಶ್ರಮಿಸಿದ ಕಥೆ ಇಂತಿದೆ. ಭಾರತ ಸರಕಾರವು ಮಹಾರಾಷ್ಟ್ರ – ಮಧ್ಯಪ್ರದೇಶ ಗಡಿಪ್ರದೇಶದಲ್ಲಿರುವ ಮೇಲ್ಘಾಟ್ ಅರಣ್ಯ ಪ್ರದೇಶದ ಚಿಕ್ಕಲ್ದಾರವನ್ನು ಹುಲಿ ಸಂರಕ್ಷಣಾ ಯೋಜನೆಗೆ ಆಯ್ಕೆ ಮಾಡಿದಾಗ ಸುತ್ತಮುತ್ತ ವಾಸಿಸುವ ಸುಮಾರು 84ಹಳ್ಳಿಗಳ ಜನರನ್ನು ಅಧಿಕಾರಿಗಳು ಬಲವಂತವಾಗಿ ತೆರವುಗೊಳಿಸಲು ಪ್ರಯತ್ನಿಸುತ್ತಾರೆ. ಅಂತಹ ಸಂದರ್ಭದಲ್ಲಿ ಆದಿವಾಸಿ ಹಳ್ಳಿಯಾಗಿರುವ ಕೋಹಾದ ಜನರು ಸಾಕಿದ 132ದನಗಳನ್ನು ಅಧಿಕಾರಿಗಳು ಸತತ 3 ದಿನ ಹಿಡಿದಿಡುತ್ತಾರೆ. ಈ ಸಂಕಷ್ಟದಲ್ಲಿ ದನವೊಂದು ಮೃತಪಡುತ್ತದೆ. ಈ ತುರ್ತು ಸಂದರ್ಭದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ, ಅರಣ್ಯ ಮಂತ್ರಿ ಚೆಡ್ಡಿಲಾಲ್ ಗುಪ್ತಾರವರ ಮನವೊಲಿಸಿ ಈ ಪ್ರದೇಶಕ್ಕೊದಗಿದ ಸಮಸ್ಯೆಯನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಕೀರ್ತಿ ಇವರದ್ದು.

ಸಿಂಧೂತಾಯಿ ಸಪ್ಕಲ್ ಹೇಳುವಂತೆ ಹೆಣ್ಣಿಗೆ ಜೀವನದಲ್ಲಿ 2 ಬಾರಿ ಮೆರವಣಿಗೆಯಂತೆ ಒಂದು ಮದುವೆಯ ಸಂದರ್ಭದಲ್ಲಿ ಇನ್ನೊಂದು ಮರಣದ ಸಂದರ್ಭದಲ್ಲಿ. ಬಾಲ್ಯದಿಂದಲೂ ಹೆಣ್ಣು ಮಗುವೆಂಬ ತಿರಸ್ಕಾರ, ಬಳಿಕ ಗಂಡನ ಮನೆಯ ತಿರಸ್ಕಾರ, ನಂತರ ಸಮಾಜದ ತಿರಸ್ಕಾರ ಇತ್ಯಾದಿ ಸಂಘರ್ಷಮಯ ಸಂದರ್ಭಗಳನ್ನು ದಾಟಿ ಬೆಂಕಿಯಲ್ಲಿ ಅರಳಿದ ಸಿಂಧೂತಾಯಿ ಸಪ್ಕಲ್ ಹೂವು ಎಂಬುದನ್ನು ಸ್ಪಷ್ಟ. ಅಂದು ಹಾಡುತ್ತಾ ಬೇಡುತ್ತಾ ಉದರ ಪೋಷಣೆ ಮಾಡುತ್ತಿದ್ದರೆ, ಇಂದು ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಮಾಡುತ್ತಾ ಜೀವನ ಕಲಿಸಿದ ಅನುಭವದ ಪಾಠಗಳನ್ನು ಭಾಷಣದ ಮೂಲಕ ದೊರಕುವಹಣದಿಂದ ಸಮಾಜ ಸೇವೆಯನ್ನು ಮುಂದುವರಿಸುತ್ತಿರುವುದನ್ನು ನೋಡಿದರೆ ಸಿಂಧೂತಾಯಿಯವರ ‘ಭಾಷಣ್ ಹೆ ತು ರೇಷನ್ ಹೆ’ ಎನ್ನುವ ಮಾರ್ಮಿಕ ಮಾತು ಎಂತಹವರನ್ನು ಒಂದು ಕ್ಷಣ ಯೋಚಿಸುವಂತೆ ಮಾಡುತ್ತದೆ. ಸರಕಾರದಿಂದ ನಿರೀಕ್ಷಿತ ನೆರವು ದೊರೆಯದಿದ್ದರೇನಂತೆ, ಇವರಿಂದ ಸಹಾಯ ಪಡೆದ ಅನೇಕ ಮಂದಿ ಇವರಿಗೆ ಬೆನ್ನೆಲುಬಾಗಿದ್ದಾರೆ. ಯಾವುದೇ ಉನ್ನತ ಶಿಕ್ಷಣವಿಲ್ಲದೇ ಜೀವನ ಕಲಿಸಿದ ಪಾಠ, ಸಹಾಯ ಮಾಡಬೇಕೆನ್ನುವ ನಿಷ್ಕಲ್ಮಶ ಮನಸ್ಸಿನಿಂದಲೇ ಇಂದು ಅನಾಥಮಕ್ಕಳತಾಯಿ ಎಂದೇ ಕರೆಸಿಕೊಂಡ ಸಿಂಧೂತಾಯಿ ಸಪ್ಕಲ್ ಭಾರತದ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಟೇಲ್, ಶ್ರೀ ಪ್ರಣಬ್ ಮುಖರ್ಜಿಯವರಿಂದ ಹಿಡಿದು ಹಳ್ಳಿಯ ಕಟ್ಟಕಡೆಯ ವ್ಯಕ್ತಿಯ ಮನಸ್ಸಿನಲ್ಲಿಯೂ ಅಚ್ಚಳಿಯದೇ ಉಳಿಯುವಂತಹ ಸಾಧನೆಯನ್ನು ಮಾಡಿದ್ದಾರೆ.

ಸಾಧನೆಯ ಬೆನ್ನತ್ತಿ ಹೋಗದೇ, ಪ್ರಚಾರಕ್ಕಾಗಿ ಪ್ರಲಾಪಿಸದೇ, ನಿಷ್ಕಲ್ಮಶ ಮನಸ್ಸಿನಿಂದ ಮಾಡಿದ ಕಾರ್ಯಕ್ಕೆ ಎಲ್ಲಾ ದಿಕ್ಕಿನಿಂದಲೂ ಪ್ರಶಂಸೆ ದೊರೆಯುತ್ತದಂತೆ. ಅಂತೆಯೇ 2010ರಲ್ಲಿ ಇವರ ಜೀವನಾಧರಿತ ಮರಾಠಿ ಭಾಷೆಯಲ್ಲಿ ‘ಮೀ ಸಿಂಧೂತಾಯಿ ಸಪ್ಕಲ್’ ಎಂಬ ಚಿತ್ರ ಬಿಡುಗಡೆಯಾಗಿ 54ನೇ ಲಂಡನ್ ಫಿಲ್ಮ ಫೆಸ್ಟಿವಲ್ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಯಿತು. 4 ರಾಷ್ಟ್ರ ಪ್ರಶಸ್ತಿ ಬಾಚಿಕೊಂಡಾಗ ಈ ಚಿತ್ರದ ಕುರಿತು ಚಲನ ಚಿತ್ರಕಾರ ಮಹಾದೇವನ್ ಹೇಳಿದ ಮಾತು ಏನೆಂದರೆ ‘ಸಿಂಧೂತಾಯಿಯವರ ಜೀವನವೇ ಒಂದು ಕಾಲ್ಪನಿಕ ಎಂದೆನಿಸುತ್ತದೆ. ಗಂಡನಿಂದ ತೊರೆಯಲ್ಪಟ ಮೇಲೆ ಇವರು ಪಟ್ಟ ಪಾಡು, ದುರಂತವೇ ಜೀವನವಾದ ಈ ಕಥೆಯಲ್ಲಿ ಯಾವುದು ಬಿಡಬೇಕು ಯಾವುದು ಸೇರಿಸಬೇಕು ಎಂದು ತಿಳಿಯುವುದೇ ದೊಡ್ಡ ಸಮಸ್ಯೆಯಾಗಿತ್ತು ಎನ್ನುವುದು’.

ಇವರ ಸಾಧನೆಯ ಹಾದಿಯಲ್ಲಿ ‘ಸನ್ಮತಿ ಬಾಲನಿಕೇತನ್ – ಪುಣೆ, ‘ಮಮತಾ ಬಾಲ್ ಸದನ್ – ಸಾಸ್ವಾಡ್, ಮಾಯಿ ಆಶ್ರಮ್ – ಅಮರಾವತಿ, ಅಭಿಮಾನ್ ಬಾಲಭವನ್, ವಾರ್ಧ, ಗಂಗಾಧರ್ ಬಾಬ್ಛತ್ರಾಲಯ – ಗುಹಾಟ್, ಸಪ್ಟ್ಸಿಂಧೂ ಮಹಿಳಾ ಆಧಾರ್ ಬಾಲಸಂಗೋಪನ ಮತ್ತು ಶಿಕ್ಷಣ್ ಸಂಸ್ಥಾ, ಪುಣೆ, ಸಂಸ್ಥೆಗಳ ಮೂಲಕ ಅನಾಥರ ಪಾಲಿಗೆ ಅಕ್ಷರಶಃ ತಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಕಡರ್ಟ್ ಫೌಂಡೇಶನ್, ಮದರ್ ತೆರೇಸಾ, ಮಹಾರಾಷ್ಟ್ರ ಸರ್ಕಾರದ ಅಹಲ್ಯಬಾಯಿ ಹೋಲ್ಕರ್ ಪ್ರಶಸ್ತಿ, ಬಸವಭೂಷಣ ಪುರಸ್ಕಾರ, ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರಿಂದ ಪಡೆದ ಪ್ರಶಸ್ತಿ, ಹಾಂಕಾಂಗ್ ದೇಶದ ರಾಷ್ಟ್ರೀಯ ಪ್ರಶಸ್ತಿ ಇತ್ಯಾದಿ 500ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಸಮಾಜ ಸೇವೆಗಾಗಿ ಪಡೆದಿದ್ದರೆ, ಇದರಲ್ಲಿ ದೊರಕಿದ ಹಣವನ್ನು ಮಕ್ಕಳ ಅನಾಥಾಶ್ರಮಕ್ಕೆ ವ್ಯಯಿಸುತ್ತಿದ್ದಾರೆ. ಸನ್ಮತಿ ಬಾಲ ನಿಕೇತನ – ಸಿಂಧೂತಾಯಿ ನಡೆಸುತ್ತಿರುವ ಈ ಅನಾಥಶ್ರಮದಲ್ಲಿ 300ಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ. ವಿಪರ್ಯಾಸವೆಂದರೆ ಇವರ ಪತಿ ತನ್ನ 80ನೇ ವಯಸ್ಸಿನಲ್ಲಿ ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟುಕೊಂಡು ಇವರ ಬಳಿ ಬಂದಾಗ ತಾನು ತಾಯಿಯಾಗಿ ಮಾತ್ರ ಉಳಿಯುತ್ತೇನೆ ಎನ್ನುತ್ತಾ ತನ್ನ ಹಿರಿಯಮಗನೆಂಬಂತೆ ಆಶ್ರಯ ನೀಡಿ ಹಿರಿಮೆ ಮೆರೆದಿದ್ದಾರೆ. ಹಸಿವು ಎಂಥವರನ್ನು ಜೀವನದಲ್ಲಿ ಸೋಲಿಸುತ್ತದೆ ಮತ್ತು ಗೆಲ್ಲಿಸುತ್ತದೆ ಎಂಬುದಕ್ಕೆ ಇವರ ಜೀವನ ಒಂದು ಉತ್ತಮ ಉದಾಹರಣೆ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಡೋಂಗಿ ಸಮಾಜಸೇವೆಯ ಹೆಸರಿನಲ್ಲಿ, ಈ ದೇಶದ ಸಂಸ್ಕೃತಿ, ಆಚಾರ ವಿಚಾರವನ್ನು ಮೂಲದಿಂದಲೇ ನಾಶಮಾಡುವ ದುರುದ್ದೇಶದಿಂದ ಕಾರ್ಯನಿರ್ವಹಿಸುವಂತ ಕೆಲವೊಂದು ಸಂಸ್ಥೆಗಳಿಂದಾಗಿ ಸಮಾಜಸೇವಾ ಸಂಸ್ಥೆಗಳ ಬಗ್ಗೆ ಅಪಸ್ವರ ಎದ್ದಿರುವುದು ಸಹಜ ಆದರೆ ಅನಾಥ ಮಕ್ಕಳಪಾಲಿನ ಆಶಾಕಿರಣವಾಗಿರುವ ‘ಸಿಂದೂತಾಯಿ ಸಪ್ಕಲ್’, ಬಚ್ಪನ್ ಬಚಾವೋ ಮೂಲಕ ಮಕ್ಕಳ ಬಾಲ್ಯವನ್ನು ಉಳಿಸಲು ಹೋರಾಡುತ್ತಿರುವ ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ, ಅಕ್ಷರ ದಾಸೋಹ ಮೂಲಕ ಸಾವಿರಾರು ಬಡವಿದ್ಯಾರ್ಥಿಗಳಿಗೆ ಜಾತಿಮತಧರ್ಮದ ಭೇದವಿಲ್ಲದೇ ವಿದ್ಯಾದಾನ ಅನ್ನದಾನ ಮಾಡುತ್ತಿರುವ ಶತಾಯುಷಿ 108ಶಿವಕುಮಾರ ಸ್ವಾಮಿಜಿ, ಅವರೆಲ್ಲರೂ ಸರಕಾರ ಮಾಡಬೇಕಾದ ಕಾರ್ಯವನ್ನು ಏಕಾಂಗಿಯಾಗಿ ಯಶಸ್ವಿಯಾಗಿ ನಿರ್ವಹಿಸುವುದನ್ನು ಕಂಡಾಗ, ಈ ನೆಲ, ಜಲ ಮಣ್ಣಿನ ಮೇಲೆ ನಮಗೆ ಹೆಮ್ಮೆ ಮೂಡುತ್ತದೆ. ಭಾರತದ ಸಂಸ್ಕೃತಿ ವಿಶ್ವದಲ್ಲಿಯೇ ಶ್ರೇಷ್ಠವೆಂದೆನಿಸುತ್ತದೆ. ಯಾವುದೋ ಸಿನಿಮಾದ ನಟ ನಟಿಯರನ್ನು ಅವರ ಜೀವನ ಶೈಲಿಯನ್ನು ಅನುಕರಣೆ ಮಾಡುತ್ತಾ ಆದರ್ಶ ಪುರುಷರೆಂದು ಒಪ್ಪಿಕೊಳ್ಳುವುದಕ್ಕಿಂತ, ದುಡ್ಡುಕೊಟ್ಟು ಪ್ರಶಸ್ತಿಪಡೆಯುವ ಸಾಧಕರ ಸಂಖ್ಯೆಯೇ ಹೆಚ್ಚಿರುವಂತಹ ಇಂದಿನ ದಿನದಲ್ಲಿ 69ವರ್ಷ ಸಿಂಧೂತಾಯಿಯವರ ಸಾಧನೆ ನಿಜಕ್ಕೂ ಪ್ರಶಂಸನೀಯ. ತಾಯಿಯ ಋಣ ತೀರಸಲು ಈ ಜನ್ಮದಲ್ಲಿ ಸಾಧ್ಯವಿಲ್ಲವಂತೆ ನಮ್ಮ ಸಮಾಜ ಹೇಳುತ್ತದೆ. ಆದರೆ ಸಿಂಧೂತಾಯಿಯವರ ಸಾಧನೆ ಖಂಡಿತವಾಗಿಯು ಈ ಮಾತಿಗೆ ಅಪವಾದ ಎಂದೆನಿಸುತ್ತದೆ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂಬ ಮಾತಿಗೆ ಸರಿಸಾಟಿಯಾದ ವ್ಯಕ್ತಿತ್ವ ಇವರದೆಂದರೂ ತಪ್ಪಾಗಲಾರದು.

– ಹರೀಶ ರಾವ್, ಅಲೆವೂರು
aharishrao@gmail.com
ಆಧಾರ : ಸಾಮಾಜಿಕ ಜಾಲತಾಣಗಳಿಂದ ಪಡೆದ ಮಾಹಿತಿ, ಅಂತರ್ಜಾಲಗಳಲ್ಲಿ ದೊರಕಿದ ಮಾಹಿತಿ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post