X

ಸಿಹಿ-ಕಹಿಯ ಸಮಾಚಾರ

ಸವಿ ಸವಿ ಸಡಗರ, ಸಂಭ್ರಮದ ಸುಮಧುರ ಕ್ಷಣಗಳೇ ಹಬ್ಬದ ಹಿಗ್ಗು. ಇವು ಬದುಕಿನ ಮಬ್ಬು ಮಾಸುವಂತೆ ಮಾಡಿ, ಮಾಸದ ಖುಷಿಯ ಕಳೆಯನ್ನು ಮೈಮನಗಳಲ್ಲೆಲ್ಲಾ ಹಬ್ಬಿಸಿಬಿಡುತ್ತವೆ. ಹಲವು ಹಬ್’ಗಳ ಜಪದಲ್ಲೇ ಮುಳುಗಿಹೋಗುವ ಇಂದಿನವರಿಗೆ ತಮ್ಮದೇ ಮನೆಯಲ್ಲಿ ನಡೆಯುವ ಹಬ್ಬಗಳ ಬಗ್ಗೆ ಮಾತ್ರ ಆಸಕ್ತಿಯೇ ಇಲ್ಲ. ಹಬ್ಬ ಹರಿದಿನವೆಂದರೇ ಸಿಹಿ. ಅದೇಕೆ ತಾರತಮ್ಯ? ಎಲ್ಲ ಹಬ್ಬಗಳಲ್ಲೂ ಸಿಹಿಗೆ ಮಾತ್ರವೇ ಕೆಂಪು ಹಾಸಿನ ಸ್ವಾಗತ ಹಾಗೂ ಭರ್ಜರಿ ರಾಜಾತಿಥ್ಯ. ಕಹಿ ಇದ್ದಿದ್ದಕ್ಕೆ ತಾನೆ ಸಿಹಿಗೊಂದು ಪ್ರಾಧಾನ್ಯತೆ, ವಿಶೇಷ ಐಡೆಂಟಿಟಿ. ಹಾಗೆಂದು ಪಟ್ಟು ಬಿಡದೇ ಕಹಿಯೂ ಒಂದು ಹಬ್ಬದಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಿಕೊಳ್ಳುವಲ್ಲಿ ಸಫಲವಾಗಿರಬೇಕು. ಅದುವೇ ಯುಗಾದಿ ಹಬ್ಬ. ಬೇವು ಹಾಗೂ ಬೆಲ್ಲದ ಸಂಗಮ. ಇದೊಂಥರ ಹಬ್ಬಗಳ ‘ಸಿಹಿ ಕಹಿ ಚಂದ್ರು’ ಎನ್ನಬಹುದೇನೋ!!

 

ಸಿಹಿ-ಕಹಿಯಿಲ್ಲದ ಬದುಕುಂಟೇ? ವೈದ್ಯರು ನಾಲ್ಕಾರು ಬಗೆಯ ಕಹಿ ಗುಳಿಗೆ ನೀಡಿದರೂ, ಅದರ ಜೊತೆಗೊಂದು, ಬಾಯಿ ಚಪ್ಪರಿಸಿಕೊಂಡು ಕುಡಿಯುವ ಸಿಹಿಯಾದ ಟಾನಿಕ್’ನ್ನೂ ಕೊಡುತ್ತಾರೆ. ಒಂದೊಮ್ಮೆ ಹಾಗೆ ನೀಡದೇ ಹೋದರೂ ಮಾತ್ರೆ ತಿಂದ ಕಹಿ ಮರೆಸಲು ಒಂದಷ್ಟು ಹನಿ ಸುಮಧುರವಾದ ಜೇನನ್ನಾದರೂ ಸೇವಿಸುವ ಮೂಲಕ ಸಿಹಿ ಕಹಿಯ ಸಮತೋಲನವನ್ನು ಕಾಯ್ದುಕೊಳ್ಳುತ್ತೇವೆ ಅಲ್ಲವೇ?!  ದೊಡ್ಡವರಾಗುತ್ತಾ ಹೋದಂತೆ ನಮ್ಮೊಳಗೇ ಸೃಷ್ಟಿಯಾಗುವ ಕಹಿಯ ತೀವ್ರತೆಯೇ ಹೆಚ್ಚಿರುವುದರಿಂದ ಗುಳಿಗೆಯ ಕಹಿ ಲೆಕ್ಕಕ್ಕೇನು ಇರುವುದಿಲ್ಲ ಬಿಡಿ. ನಮ್ಮ ದೈನಂದಿನ ಬದುಕಿನಲ್ಲೂ ಅಷ್ಟೇ, ಸಿಹಿ ಕಹಿ ಬೇರೆ ಬೇರೆ ರೂಪದಲ್ಲಿರುತ್ತದೆ. ಉದಾಹರಣೆಗೆ ಮಹಿಳೆಯರ ಪಾಲಿಗೆ, ಅಮ್ಮ ಎಂದೆಂದಿಗೂ ಸಿಹಿ, ಆದರೆ ಅದೇಕೋ ಅತ್ತೆ ಮಾತ್ರ ಕಹಿಯೇ. ಕೆಲವು ಪುರುಷರಿಗೆ, ಪತ್ನಿ ಬರುವ ತನಕ ಮಾತ್ರ ಮನೆಯವರ ಬಾಂಧವ್ಯ ಮಧುರ. ಮದುವೆಯಾಗಿ ಅರ್ಧಾಂಗಿ ಬಂದಮೇಲೆ ಅದ್ಯಾಕೋ ಮನೆಯವರೇ ಕಹಿಯೆನಿಸಿಬಿಡುತ್ತಾರೆ.

 

ರಾಜಕಾರಣದಲ್ಲಂತೂ ಈ ಸಿಹಿ ಹಾಗೂ ಕಹಿ ಸದಾ ಜೊತೆ ಜೊತೆಗೇ ಇರುತ್ತವೆ. ಸಿಹಿ ಮಾತುಗಳ ಸರದಾರರೊಳಗಿರುವ ಕಹಿ ಆಗಿಂದಾಗ್ಗೆ ಹೊರಹೊಮ್ಮುತ್ತಲೇ ಇರುತ್ತದೆ. ನೂರಾರು ಕಣ್ಣುಗಳೆದುರು, ಕ್ಯಾಮೆರಾದ ‘ಫಳ್’ ಎನ್ನುವ  ಬೆಳಕಿನ ಹೊಡೆತಗಳ ನಡುವೆ ಪರಸ್ಪರ ಆಲಂಗಿಸಿಕೊಂಡು ಸಿಹಿತಿಂಡಿಯ ತುಣುಕೊಂದನ್ನು ಒಬ್ಬರಿಗೊಬ್ಬರು ಬಾಯಿಗಿಟ್ಟುಕೊಂಡು ಫೋಸ್ ನೀಡುವುದೇನೋ ಸರಿ. ಆದರೆ ನಾಲಗೆಯ ಮೇಲಿನ ಆ ಸಿಹಿ ಆರುವ ಮುನ್ನವೇ ಮನದೊಳಗಿನ ಕಹಿಯನ್ನು ಕಕ್ಕಲಾರಂಭಿಸುತ್ತಾರೆ.  ಸದಾ ಆಯ್ದ ವ್ಯಕ್ತಿ- ವಿಚಾರಗಳ ಬಗ್ಗೆಯಷ್ಟೇ ಹೋರಾಟ ಆಯೋಜಿಸುವುದನ್ನೇ ಜೀವನಾಧಾರವನ್ನಾಗಿಸಿಕೊಂಡಿರುವ ಕೆಲವು ಮಹಾನ್ ಜೀವಪರರಿಗೆ ಶಾಂತಿ, ಸಾಮರಸ್ಯ, ಸೌಹಾರ್ದತೆಯೆಂದರೆ ಒಂಥರಾ ಕಹಿಯಿದ್ದಂತೆ. ಎಲ್ಲೋ ಹೊಡೆದಾಟ, ಯಾವುದೋ ಸೈದ್ಧಾಂತಿಕ ತಿಕ್ಕಾಟ, ವಿಚಾರಹೀನ ಹಣಾಹಣಿಗಳೆಂದರೆ ಅವರಿಗೆ ಸವಿಯೋ ಸವಿ. ಇನ್ನು ಹಣದ ಹಿಂದೆ ಬಿದ್ದವರಿಗೆ ಅದನ್ನೊಂದು ಬಿಟ್ಟು ಉಳಿದವೆಲ್ಲವೂ ತಿಕ್ತ.

 

ಯಾವುದು ಸಿಹಿ ಯಾವುದು ಕಹಿ ಎಂಬ  ಪರಿಗಣನೆಯ ಮಾನದಂಡವೂ ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಕಾಲದಿಂದ ಕಾಲಕ್ಕೆ ಭಿನ್ನ. 35 ಅಂಕ ಪಡೆದು ಜಸ್ಟ್ ಪಾಸ್ ಆದ ವಿದ್ಯಾರ್ಥಿಯೋರ್ವನಿಗೆ ಅದು ಬೆಲ್ಲದ ಸವಿಯಾದರೆ, ಅದೇ ಪರೀಕ್ಷೆಯಲ್ಲಿ 98 ಅಂಕ ಗಳಿಸಿಯೂ, ಕಳೆದುಕೊಂಡ ಎರಡೇ ಎರಡು ಅಂಕ ಕೆಲವು ಮಕ್ಕಳಿಗೆ ಘೋರ ಕಹಿಯೆನಿಸಿಬಿಡುವುದಲ್ಲವೇ? ಪ್ರತೀ ಮೆಸೇಜಿಗೂ ಒಂದೊಂದು ರುಪಾಯಿ ವ್ಯಯಿಸುತ್ತಿದ್ದ ಕಾಲದಲ್ಲಿ ಅದೇ ಸಕ್ಕರೆಯ ಸವಿಯಾಗಿದ್ದರೆ ಇಂದು ಪುಕ್ಕಟೆ ಇಂಟರ್ನೆಟ್ಟಿನ ಅಸಂಖ್ಯಾತ ಅವಕಾಶಗಳ ನಡುವೆಯೂ ಮನಸ್ಸು ಕಹಿ ಮಾಡಿಕೊಳ್ಳುವವರೇ ಹೆಚ್ಚು. ಹೀಗೆ ಸಿಹಿ-ಕಹಿಯ ಹದವಾದ ಮಿಶ್ರಣವೇ ಬದುಕು. ಯುಗಾದಿಯ ಶುಭಾಶಯಗಳು ನಿಮಗೆ.

 

ಓವರ್ ಡೋಸ್: ಗಾದಿಗಾಗಿ ‘ಯು’ ಟರ್ನ್ ಹೊಡೆಯಲು ಹೊಂಚುಹಾಕುವ ರಾಜಕಾರಣಿಗಳಿಗೆ ನಿತ್ಯ ಯುಗಾದಿ.

 

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post