ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಮೀಕ್ಷೆಗಳೆಲ್ಲವನ್ನೂ ಮೀರಿಸಿ ಗೆಲುವು ಸಾಧಿಸಿದ್ದ ಬಿಜೆಪಿ ಬಹಳ ದೊಡ್ಡ ಹೊಡೆತ ನೀಡಿದ್ದು ಮಾಯಾವತಿಯವರ ರಾಜಕೀಯ ಬದುಕಿಗೆ. ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಕೂಡಾ ಹೀನಾಯವಾಗಿ ಮುಖಭಂಗ ಅನುಭವಿಸಿದ್ದರೂ ಅವರಿಬ್ಬರೂ ಇನ್ನೂ ಯುವಕರು. ಜನ ಬಯಸಿದರೆ ಹತ್ತೋ ಹದಿನೈದು ವರ್ಷಗಳ ಬಳಿಕವಾದರೂ ಗೆಲುವಿನ ಕೇಕೆ ಹಾಕಲೂಬಹುದು. ಆದರೆ ಬಹುಜನ ಸಮಾಜ ಪಕ್ಷದ ಪರಮೋಚ್ಚ ನಾಯಕಿ ಮಾಯಾವತಿಯವರ ರಾಜಕೀಯ ಬದುಕಿಗೆ ದಟ್ಟ ಕಾರ್ಮೋಡ ಕವಿದಿದೆ. ಸತತ ಮೂರು ಸೋಲುಗಳಿಂದ ಘೀಳಿಡುವುದನ್ನು ಮರೆತಿರುವ ಗಜಪಡೆ ಇದೀಗ ಸಂಪೂರ್ಣವಾಗಿ ಕಂಗಾಲಾಗಿ ಹೋಗಿದೆ.
೨೦೧೪ರಲ್ಲಿ ಒಂದೇ ಒಂದು ಲೋಕಸಭಾ ಸ್ಥಾನ ಗೆಲ್ಲುವಲ್ಲಿ ವಿಫಲರಾಗಿದ್ದ ಮಾಯಾವತಿ ೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಬಹುದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ೨೦೧೫ರ ಪಂಚಾಯತ್ ಚುನಾವಣೆಯಲ್ಲಿ ಬಿಎಸ್ಪಿ ಗಣನೀಯ ಸಾಧನೆ ಮಾಡಿ ಪುಟಿದೇಳುವ ಸೂಚನೆ ತೋರಿಸಿತ್ತು. ಮಾಯಾವತಿಯವರು ಪ್ರಚಾರದಲ್ಲೇನೂ ಹಿಂದೆ ಬಿದ್ದಿರಲಿಲ್ಲ. ಸಾಲು ಸಾಲು ಸಮಾವೇಶಗಳನ್ನುದ್ದೇಶಿಸಿ ಮಾತಾಡಿದ್ದರು. ಪ್ರತಿ ಭಾಷಣದಲ್ಲಿ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಬರೆದು ತಂದಿದ್ದ ಭಾಷಣ ಮಾಡುತ್ತಿದ್ದರು. ಜನರೂ ಬಹಳ ದೊಡ್ಡ ಪ್ರಮಾಣದಲ್ಲಿ ಸೇರುತ್ತಿದ್ದರು. ರೋಹಿತ್ ವೆಮುಲಾ ಆತ್ಮಹತ್ಯೆ, ಊನಾ ಪ್ರಕರಣ, ಮುಸ್ಲಿಂ ಹಾಗೂ ದಲಿತರ ಮೇಲಿನ ಹಲ್ಲೆ ಪ್ರಕರಣಗಳನ್ನು ಹೋದಲ್ಲಿ ಬಂದಲ್ಲಿ ಕೆದಕಿ ಮುಸ್ಲಿಂ ಮತ್ತು ದಲಿತರ ಮತಕ್ಕೆ ಲಗ್ಗೆ ಹಾಕೇ ಬಿಟ್ಟೆ ಎಂದು ಖುಷಿಯಲ್ಲಿ ತೇಲಾಡಿದ್ದ ಮಾಯಾವತಿಯವರಿಗೆ ಚುನಾವಣಾ ಫಲಿತಾಂಶದ ದಿನ ಭ್ರಮನಿರಸನವಾದದ್ದು ಸುಳ್ಳಲ್ಲ! ಈ ಡಿಜಿಟಲ್ ಯುಗದಲ್ಲಿ ಡಿಮಾನಿಟೈಸೇಶನ್, ಮತ್ತದೇ ಮೀಸಲಾತಿ, ಮತ್ತದೇ ಶೋಷಣೆಯ ಹಳೇ ಕ್ಯಾಸೆಟ್ ಬಿಟ್ರೆ ಅದು ಯಾರು ಬೆಂಬಲಿಸುತ್ತಾರೆ ಸ್ವಾಮಿ? ಮೋದಿ ನೇತೃತ್ವದ ಬಿಜೆಪಿಯನ್ನು ಹಣಿಯಲು ಪೂರ್ವಾಂಚಲದಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದ ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿಯನ್ನು ಪಕ್ಷಕ್ಕೆ ಬರ ಮಾಡಿ ಟಿಕೇಟ್ ಕೂಡಾ ಕೊಟ್ಟಿದ್ದರು. ಆದರೆ ದಲಿತರು, ಮುಸ್ಲಿಂ ಮತ್ತು ಬ್ರಾಹ್ಮಣ ಮತದಾರರ ವೋಟನ್ನು ಬಹಳ ದೊಡ್ಡಮಟ್ಟದಲ್ಲಿ ನೆಚ್ಚಿಕೊಂಡಿದ್ದ ಮಾಯಾವತಿ ಚುನಾವಣೆಯ ನಂತರ ಬಹಳ ದೊಡ್ಡ ಆಘಾತಕ್ಕೊಳಗಾಗಿದ್ದರು.
ಯಾವ ದಲಿತರು ಮತ್ತು ಹಿಂದುಳಿದ ವರ್ಗದ ಕಲ್ಯಾಣದ ಬಗ್ಗೆ ಮಾತಾಡಿ ಮಾಯಾವತಿ ಅಧಿಕಾರ ದಕ್ಕಿಸಿಕೊಂಡಿದ್ದರೋ ಆ ವರ್ಗದ ಜನಕ್ಕೆ ಹೇಳಿಕೊಳ್ಳುವಂತಹ ಕಾರ್ಯಗಳನ್ನು ನೀಡಲಿಲ್ಲ. ಜಾತಿ ಸಮಾನತೆ ಕೇವಲ ಸಭೆಗಷ್ಟೇ ಸೀಮಿತವಾಯಿತು. ಕಾನ್ಶೀರಾಮ್ ರಲ್ಲಿ ಶೋಷಿತ ವರ್ಗದ ಬಗ್ಗೆ ಇದ್ದ ನಿಜವಾದ ಕಾಳಜಿ ಮಾಯಾವತಿಯವರಲ್ಲಿ ಅಷ್ಟಾಗಿ ಕಂಡು ಬರಲಿಲ್ಲ ಅನ್ನುವುದು ಮಾಯಾವತಿಯವರನ್ನು ಹತ್ತಿರದಿಂದ ಬಲ್ಲವರ ಅಂಬೋಣ. ಅಧಿಕಾರದ ಮದ ಹೆಲಿಪ್ಯಾಡ್ ಸಮೇತ ಸುಸಜ್ಜಿತ ಬಂಗಲೆ, ಇಂಪೋರ್ಟೆಡ್ ಜ್ಯುವೆಲ್ಲರಿ, ಕೊನೆಗೆ ನೋಟಿನ ಹಾರ ಹಾಕುವಷ್ಟರ ವರೆಗೂ ಮುಂದುವರಿಯಿತು. ಹಲವಾರು ಪಾರ್ಕ್ ಗಳಲ್ಲಿ ಸರಕಾರದ ವೆಚ್ಚದಲ್ಲಿ ಮಾಯಾವತಿಯವರ ಮತ್ತು ಪಕ್ಷದ ಚಿನ್ಹೆ ಆನೆಯ ಪ್ರತಿಮೆಗಳನ್ನು ನಿರ್ಮಿಸಲಾಯಿತು. ಸುಮಾರು ೨೬೦೦ ಕೋಟಿ ಇದಕ್ಕಾಗಿ ವ್ಯಯಿಸಲಾಯಿತು. ಮಾಯಾವತಿಯವರ ತಮ್ಮನ ಒಡೆತನದಲ್ಲಿದ್ದ ಕಂಪನಿಯ ಆಸ್ತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಯಿತು. ಶೋಷಿತ ವರ್ಗದ ಅಭಿವೃದ್ಧಿ ಮಾಡುತ್ತೇನೆಂದು ಅಧಿಕಾರಕ್ಕೆ ಬಂದ ಮಾಯಾವತಿ ಸ್ವಯಂ ಅಭಿವೃದ್ಧಿಯಲ್ಲಿ ರಾಜ್ಯದ ಅಭಿವೃದ್ಧಿಯನ್ನು ಮರೆತರು. ಪರಿಣಾಮವಾಗಿ ೨೦೧೨ರಲ್ಲಿ ಸೋತರು. ೨೦೧೨ರ ವಿಧಾನಸಭಾ ಚುನಾವಣೆ ಸೋತ ಮೇಲೆ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಬಿಎಸ್ಪಿ ವಿಫಲವಾಯಿತು. ಮಾಯಾವತಿಯವರ ಸಂಪೂರ್ಣ ದೃಷ್ಟಿ ದೆಹಲಿಯತ್ತ ನೆಟ್ಟಿತ್ತು. ಪ್ರಧಾನಿಯಾಗುವ ಕನಸು ಕಾಣುತ್ತಾ ಉತ್ತರಪ್ರದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದರು. ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಶಾಸಕಾಂಗ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಭಾಜಪಾ ತೆಕ್ಕೆಗೆ ಜಾರಿಬಿಟ್ಟು ಬಹಳ ದೊಡ್ಡ ಹೊಡೆತ ನೀಡಿದರು. ಇದೀಗ ಮೋದಿ ಹವಾದ ಮುಂದೆ ಆನೆ ಮತ್ತೊಮ್ಮೆ ಖೆಡ್ದಾಕ್ಕೆ ಬಿದ್ದಿದೆ.
ಮಾಯಾವತಿಯವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ೨೦೦೦ದ ಗರಿ ಗರಿ ನೋಟಿನ ಮಾಲೆಗೆ ಕೊರಳೊಡ್ಡುವ ಕನಸು ಕಂಡಿದ್ದರೇನೋ? ಅಥವಾ ಉತ್ತರಪ್ರದೇಶವಲ್ಲದೇ ಬೇರೆ ರಾಜ್ಯಗಳಲ್ಲೂ ತಮ್ಮ ಪ್ರತಿಮೆಗಳನ್ನು ನಿರ್ಮಿಸಲು ಸಿದ್ಧತೆ ನಡೆಸಿದ್ದರೋ? ಹೋಗ್ಲಿ ಬಿಡಿ, ಏನೂ ಇಲ್ಲವೆಂದರೆ ಈಗ ಇರುವಂತಹ ಬಂಗಲೆ ಇನ್ನೂ ಹತ್ತು ನಿರ್ಮಿಸಲು ಯೋಚಿಸಿದ್ದರೋ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈಗ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಮುಂದೆ ೨೦೧೯ರಲ್ಲಿ ಕೇಂದ್ರದಲ್ಲಿ ನಿರ್ಣಾಯಕ ಶಕ್ತಿಯಾಗುವ ದೂರದ ಆಲೋಚನೆ ಮಾಡಿದ್ದರೇನೋ? ಆದರೆ ಏನು ಮಾಡೋಣ. ಬಿಜೆಪಿ ಊಹಿಸಲಸಾಧ್ಯವಾದ ರೀತಿಯಲ್ಲಿ ಉತ್ತರ ಪ್ರದೇಶದ ಗದ್ದುಗೆಯನ್ನೇರಿದೆ. ಇದನ್ನು ಜೀರ್ಣಿಸಲಸಾಧ್ಯವಾಗಿ ಚುನಾವಣಾ ಆಯೋಗ ಅಕ್ರಮ ಎಸಗಿದೆ, ವೋಟಿಂಗ್ ಯಂತ್ರಗಳನ್ನು ಟಾಂಪರ್ ಮಾಡಿ ಬಿಜೆಪಿ ಗೆಲುವಿಗೆ ಸಹಕರಿಸಿದೆ ಎಂದು ಚುನಾವಣಾ ಆಯೋಗದ ಮೇಲೆಯೇ ಆರೋಪ ಮಾಡುತ್ತಾರೆ. ಮುಸ್ಲಿಂ ಮತದಾರರು ಜಾಸ್ತಿ ಇರೋ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದ ಉರಿ ತಡೆಯೋಕಾಗುತ್ತಿಲ್ಲ. ಅಲ್ಲ ಮುಸ್ಲಿಂ ಸಹೋದರರ ಮತಗಳೇನು ಯಾವುದೇ ಪಕ್ಷದ ಪಿತ್ರಾರ್ಜಿತ ಆಸ್ತಿಯೇ? ಅವರಿಗೆ ಯಾರು ಬೇಕೋ ಅವರನ್ನು ಆರಿಸಲು ಸ್ವತಂತ್ರರಲ್ಲವೇ? ನಾಲ್ಕು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಅನುಭವವಿದ್ದೂ ಈ ರೀತಿ ಕಾಗಕ್ಕ ಗೂಬಕ್ಕ ಆರೋಪ ಮಾಡಿದರೆ ಜನ ಇನ್ನೂ ನಿಮ್ಮನ್ನು ದೂರ ಮಾಡುವರಷ್ಟೇ. ಸಾಧ್ಯವಾದರೆ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿ. ಮುಂದಿನ ಚುನಾವಣೆಯಲ್ಲಿ ಇದಕ್ಕಿಂತ ಹತ್ತು ಸ್ಥಾನವಾದರೂ ಹೆಚ್ಚು ಬರಬಹುದು. ಇಲ್ಲ ಇದೇ ತರಹ ಹಾದಿ ಬೀದಿಯಲ್ಲಿ ಓತಪ್ರೋತವಾದ ಹೇಳಿಕೆಗಳನ್ನು ಕೊಡುತ್ತಾ ಹೋದರೆ ಈಗ ಬಂದಿರೋ ಸ್ಥಾನಗಳೂ ಕನಸಾಗಿ ಉಳಿಯಬಹುದು. ಜನ ದಡ್ಡರಲ್ಲ. ನಿಮ್ಮ ಬಣ್ಣದ ಮಾತಿಗೆ ಮರುಳಾಗಿ ವೋಟ್ ಹಾಕುವ ಕಾಲ ಮುಗಿದು ಹೋಯಿತು.
ಐದು ವರ್ಷ ಸ್ವಂತ ಬಲದಿಂದ ಆಡಳಿತ ನಡೆಸಿದ್ದ ಪಕ್ಷ ಇಂದು ಕೇವಲ ೧೯ ಸ್ಥಾನಕ್ಕೆ ಬಂದು ನಿಂತಿದೆಯೆಂದರೆ ಅದಕ್ಕೆ ಪ್ರಮುಖ ಕಾರಣ ಮಾಯಾವತಿಯವರ ಸರ್ವಾಧಿಕಾರಿತನ. ಸೆಕೆಂಡ್ ಜನರೇಶನ್ ನಾಯಕರನ್ನು ಬೆಳೆಸುವ ಗೋಜಿಗೇ ಮಾಯಾವತಿ ಹೋಗಿಲ್ಲ. ಮಾಯಾವತಿಯವರನ್ನು ಬಿಟ್ಟರೆ ಸಾರ್ವಜನಿಕವಾಗಿ ಹೇಳಿಕೆ ನೀಡಬಲ್ಲ ದೊಡ್ಡ ನಾಯಕ ಬಿಎಸ್ಪಿಯಲ್ಲಿಲ್ಲ. ಮಾಯಾವತಿಯವರ ನಂತರ ಬಿಎಸ್ಪಿ ಪಕ್ಷವನ್ನು ಯಾರು ಮುನ್ನಡೆಸಬಲ್ಲರು ಅನ್ನುವುದೇ ಯಕ್ಷಪ್ರಶ್ನೆ. ಹಿಂದೆ ಬಿಎಸ್ಪಿಯಲ್ಲಿದ್ದು ಈಗ ಬೇರೆ ಪಕ್ಷಗಳಲ್ಲಿರುವ ನಾಯಕರು ಹೇಳುವ ಪ್ರಕಾರ ಮಾಯಾವತಿಯವರಷ್ಟು ದೊಡ್ಡ ಸ್ವಾರ್ಥ ನಾಯಕಿ ಇನ್ನೊಬ್ಬರಿಲ್ಲ. ಜನಬೆಂಬಲವಿಲ್ಲದೇ ಬಹುಜನ ಸಮಾಜ ಪಕ್ಷ ಐಸಿಯು ತಲುಪಿದೆ. ಸಧ್ಯ ರಾಜ್ಯಸಭಾ ಸದಸ್ಯರಾಗಿರುವ ಮಾಯಾವತಿಯವರಿಗೆ ಇನ್ನೊಮ್ಮೆ ಆಯ್ಕೆಯಾಗಲು ಬೇಕಾದ ಶಾಸಕರ ಬೆಂಬಲವೂ ಇಲ್ಲ. ಬ್ರಾಹ್ಮಣ ಮತ್ತು ಮುಸ್ಲಿಂ ನಾಯಕರಿಗೆ ಜಾಸ್ತಿ ಮಣೆ ಹಾಕಿದ್ದೂ ಬಹುವಾಗಿ ನೆಚ್ಚಿಕೊಂಡಿದ್ದ ದಲಿತರು ಬಿಎಸ್ಪಿಯಿಂದ ದೂರ ಹೋಗಲು ಕಾರಣವಾಯಿತು ಎನ್ನಲಾಗುತ್ತಿದೆ. ಪಕ್ಷದ ಹಿರಿಯ ನಾಯಕರನ್ನು ನಡೆಸಿಕೊಂಡ ರೀತಿಯೂ ಮಾಯಾವತಿಯವರಿಗೆ ಮುಳುವಾಯಿತು. ಯಾರು ತಮ್ಮನ್ನು ಕೈಹಿಡಿದು ಬೆಳೆಸಿದ್ದರೋ ಅವರನ್ನೇ ಮಾಯಾವತಿ ಕಡೆಗಣಿಸಿದರು. ಜನಸಾಮಾನ್ಯರಿಂದ ಅಂತರ ಕಾಯ್ದುಕೊಳ್ಳುತ್ತಾ ಬಂದರು .ಇವೆಲ್ಲದರ ಜೊತೆಗೆ ಮೋದಿ ಅಲೆಗೆ ಪತರಗುಟ್ಟಿ ಹೋಗಿರುವ ಆನೆಯ ಹೆಜ್ಜೆಗಳು ಉತ್ತರಪ್ರದೇಶ ಮತ್ತು ರಾಷ್ಟ್ರ ರಾಜಕಾರಣದಲ್ಲಿ ನಿಧಾನವಾಗಿ ಮಾಯವಾಗುತ್ತಿವೆ.
Facebook ಕಾಮೆಂಟ್ಸ್