ಬದುಕಿನಲ್ಲಿ ಪ್ರೀತಿಯೇ ಮುಖ್ಯಾನ!? ಅಥವಾ ಬದುಕುವುದು ಮುಖ್ಯಾನ!? ಅನ್ನೋದರ ಗೊಂದಲಕ್ಕೆ ಅರ್ಜುನ್’ರವರ ನೈಜ ಘಟನೆಗಳ ಆಧಾರಿತ ಕಾದಂಬರಿ ತಕ್ಕ ಮಟ್ಟಿಗೆ ಉತ್ತರಿಸುತ್ತದೆ.ಸಾಧಾರಣ ಕಥೆಯಂತಿದ್ದರೂ ಜೀವನದ ಪಾಠ ಮತ್ತು ಮಾನಸಿಕ ಹೋರಾಟವನ್ನು ಕಾದಂಬರಿ ತೆರೆದಿಡುತ್ತದೆ..
ಕಾದಂಬರಿಯಲ್ಲಿ ಜೀವಂತ ಪಾತ್ರಗಳಿಗೆ “ಅವಳು” ಎಂದು ಉಲ್ಲೇಖಿಸಿದ್ದು ವಿಶೇಷ. ನಾನಿಲ್ಲಿ ಕಾದಂಬರಿಯನ್ನು “ಅವಳು” ಎಂದೂ ಮತ್ತು ಅವಳ ಮೋಸಗಳನ್ನು ಬದುಕಿನಲ್ಲಿ ಪಾಠವೆಂದು ಸೋಲಿನ ಹಂತದಲ್ಲಿದ್ದ ಬದುಕನ್ನು ಇನ್ನೂ ಸುಂದರವಾಗಿ ಕಟ್ಟಿಕೊಂಡ ನಾಯಕನನ್ನು “ಅವನು” ಎಂದೂ ಸಂಬೋಧಿಸಿದ್ದೇನೆ.”ಅವಳ”ಲ್ಲಿ ಬಡತನ-ಸಿರಿತನ ಪ್ರೀತಿ,ತ್ಯಾಗ,ಮೋಸ,ಒಳ್ಳೆತನ,ದುಃಖ, ಖುಷಿ,ಹತಾಶೆ,ಎಲ್ಲವೂ ಇದೆ..ಇಲ್ಲಿ ಬದುಕು ಕಲಿಸಿದ “ಅವಳು” ಅಮ್ಮನಿದ್ದಾಳೆ,ಗೆಳತಿಯರಿದ್ದಾರೆ,ಪ್
ತಮ್ಮ ಇಷ್ಟದ ಓದು,ಉದ್ಯೋಗ ಸಿಗಲಿಲ್ಲವಲ್ಲ ಎಂದು ಕೊರಗುವವರ ನಡುವೆ ಸಿಕ್ಕ ಅವಕಾಶದಲ್ಲಿ ಮುಂದೆ ಬರಲು ಪ್ರಯತ್ನಿಸುವ ಅವನ ಛಲ ಹತಾಶರಾಗುವವರಿಗೆ ಟಾನಿಕ್ ಕೊಟ್ಟ ಹಾಗೆ ಕಣ್ಣ ಮುಂದೆ ಬರುತ್ತದೆ.ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದಾಗ ದುಡ್ಡಿಲ್ಲದೇ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತ,ಮನಸೊಳಗಡೆ ಅವಳು ಕೊಟ್ಟ ನೋವನಿಟ್ಟುಕೊಂಡು ಒಂದು ಸುಂದರ ಬದುಕು ಕಟ್ಟಿಕೊಳ್ಳುವ ಅವನದು ಓದುಗರೊಳಗೆ ಭೇಷ್ ಎನಿಸಿಕೊಳ್ಳುವ ಪಾತ್ರ.ಈ ಹಣ,ಅಹಂ,ಅಂತಸ್ತಿನ ಹಿಂಬಾಲಕ ಪ್ರೀತಿ ಯಾವತ್ತಿದ್ದರೂ ನಡುದಾರಿಯಲ್ಲಿ ಅಡ್ಡದಾರಿ ಹಿಡಿದು ಹೋಗುವುದೇ ಎನ್ನುವುದು ಅವನಿಗೆ ಮೊದಲ ಬಾರಿ ಅವಳಿಂದ ಮೋಸ ಹೋದಾಗಲೇ ಅರಿವಾಗದಿರುವುದು ವಿಷಾದವಾದರೂ “ನೀನಲ್ಲದೇ ಇನ್ನೊಬ್ಬಳು” ಎನ್ನುವ ಜಾಯಮಾನದವರ ಮುಂದೆ ಅವನು ಕಾಡುತ್ತಾ ಹೋಗುತ್ತಾನೆ..”ಈರುಳ್ಳಿ ಹೆಚ್ಚುವಾಗ ಮಾತ್ರ ನಿನ್ ಕಣ್ಣಲ್ಲಿ ನೀರು ಬರತ್ತೆ.ಉಳಿದ ಟೈಂ ಯಾವತ್ಗೂ ನಿನ್ ಕಣ್ಣಲ್ಲಿ ನೀರು ಹಾಕ್ಸಲ್ಲ” ಅನ್ನೊ ತೋರಿಕೆಯ ಹಲ್ಕಾ ಮೊಹಬ್ಬತ್ತಿನ ಡೈಲಾಗಿನ ಹೊರತಾಗಿ ಒಳಗಿನ ತುಮುಲಗಳನ್ನರಿತು ಅವಳ ಕಣ್ಣ ಕಾಡಿಗೆಯ ಗೆರೆಯಾಚೆ ಕಂಬನಿ ಒಸರದಂತೆ ನೋಡಿಕೊಳ್ಳಲು ಪ್ರಯತ್ನಿಸುವ ಅವನ ಪರಿಸ್ಥಿತಿಗಳೂ ಕಣ್ಮುಂದೆ ಬಂದಾಗ ಓದುಗರು ಭಾವುಕರಾಗುತ್ತಾರೆ..”ಪ್ರೀತಿಸುವ ಹೃದಯದ ಕೆಳಗೆ ಹಸಿಯುವ ಹೊಟ್ಟೆ ಇರುತ್ತದೆ”ಎನ್ನುವ ಅವನು ಅವಳಿಗೆ ತಿಳಿಸಿ ಹೇಳುವ ಬದುಕಿನ ಸತ್ಯಗಳು ಅವನ ಪ್ರಪಂಚದ ಅರಿವಿನ ಬಗ್ಗೆ ಕೂಲಂಕುಷವಾಗಿ ತಿಳಿಸುತ್ತವೆ.ಬಲವಂತಿಸಿ ಪಡೆದುಕೊಳ್ಳಲು ಪ್ರೀತಿ ಎನ್ನುವುದು ಮಕ್ಕಳಾಡುವ ಆಟಿಕೆಯಲ್ಲ ಎನ್ನುವುದನ್ನರಿತ ಅವನು ಒಂದು ಕ್ಷಣ ಅವಳಿಗೆ ಕೆಟ್ಟದ್ದನ್ನು ಬಯಸುವ ಮನಸ್ಸಾದರೂ ಮನಸ್ಸನ್ನು ಹತೋಟಿಗೆ ತಂದುಕೊಂಡು ಎರೆಡೆರಡು ಬಾರಿ ಮೋಸ ಮಾಡಿದವಳಿಗೂ ಒಳ್ಳೆಯದನ್ನೇ ಬಯಸುತ್ತಾನೆ.ಇಲ್ಲಿ ತ್ಯಾಗದ ಮನಸ್ಥಿತಿ ಅವನಲ್ಲಿರುವುದರ ಜೊತೆಗೆ ನೈಜ ಪ್ರೀತಿಯ ಕುರುಹು ಗೋಚರಿಸುತ್ತದೆ.”ತಿರಸ್ಕರಿದವರಿಗೆ ನಿಮ್ಮೊಲವನ್ನು ಪಡೆದುಕೊಳ್ಳುವ ಅದೃಷ್ಟವಿಲ್ಲವೆಂದು ಸಕಾರಾತ್ಮಕವಾಗಿ ಚಿಂತಿಸಿದರೆ ನೀವೇ ತಿರಸ್ಕರಿಸಿದವರಿಗಿಂತ ಎತ್ತರದ ಸ್ಥಾನದಲ್ಲಿರುತ್ತೀರಿ” ಎನ್ನುವ ಸಾಲುಗಳನ್ನು ಓದುಗರ ಮನಸ್ಸಿನಲ್ಲಿ ಬಿತ್ತುವ ಅವನು ಎರಡೆರಡು ಬಾರಿ ಮೋಸ ಮಾಡಿ ಹೋದವಳನ್ನೂ “ಬದುಕು ಕಲಿಸಿದವಳು” ಎಂದೇ ಹೇಳಿರುವುದು ಅವನ ವಿಶೇಷತೆ..
ತುಂಡುಡುಗೆ ಧರಿಸಿ ಸಮಾನತೆಯ ಬಗ್ಗೆ ವಾದಕ್ಕಿಳಿಯುವ “ಅವಳಿಗೆ” ಅವನು ಹೇಳಿದ ಮಾತಂತೂ ಓದುಗರ ಮೆಚ್ಚುಗೆ ಪಡೆದೇ ಪಡೆಯುತ್ತದೆ “ಈ ಸಮಾಜದಲ್ಲಿ,ಈ ನೆಲದಲ್ಲಿ, ಈ ಮಣ್ಣಲ್ಲಿ ಯಾವತ್ತೂ ಹೆಣ್ಣು ಗಂಡಿಗೆ ಸಮಾನ ಅಲ್ಲ.ಅವಳು ಆಗೋದೂ ಇಲ್ಲ,ಯಾಕಂದ್ರೆ ಈ ಮಣ್ಣಲ್ಲಿ ಹೆಣ್ಣು ಗಂಡಿಗಿಂತ ಹತ್ತು ಮೆಟ್ಟಿಲು ಮೇಲಿದ್ದಾಳೆ,ಈ ಮಣ್ಣಲ್ಲಿ ಹುಟ್ಟುವ ಪ್ರತಿಯೊಂದು ಹೆಣ್ಣೂ ಕೂಡಾ ಒಂದು ಅದ್ಭುತವೇ..! ಗಂಡು ಅವಳ ಕಾಲುಭಾಗನೂ ಇಲ್ಲ. ಅವಳೊಂದು ವೇಳೆ ಸಮಾನತೆ ಬೇಕು ಅಂದ್ರೆ ಹತ್ತು ಮೆಟ್ಟಿಲು ಕೆಳಗೆ ಇಳಿದು ಬರಬೇಕು” ಎನ್ನುವ ಈ ಸಾಲುಗಳು ನಮ್ಮ ಮಣ್ಣಿನ ಹೆಣ್ಣಿನ ಸ್ಥಾನಮಾನವನ್ನು ಕಣ್ಣಿಗೆ ತಂದು ನಿಲ್ಲಿಸಿ ಸ್ವಲ್ಪ ಸಮಯ ಯೋಚಿಸಿದ್ದಂತು ಸುಳ್ಳಲ್ಲ..
ಮೋಸ ಮಾಡಿ ಹೋದಳೆಂದು ಹುಡುಗ ಕುಡುಕನಾಗುವುದು,ಕೆಟ್ಟ ಚಟಗಳ ದಾಸನಾಗುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದು ಈಗೀಗ ಯುವಜನತೆಯ ಫ್ಯಾಶನ್ ಆಗಿದೆ,ಅರೆಕ್ಷಣದ ಯೋಚನೆಗೆ ಸುಂದರ ಬದುಕಿಗೆ ತಿಲಾಂಜಲಿ ಇಟ್ಟುಕೊಳ್ಳುವವರ ಮಧ್ಯೆ ಅವನು ಬೇರೆಯಾಗಿ ಆದರ್ಶದಂತೆ ತೋರುತ್ತಾನೆ,ಹತಾಶೆಯ ನಂತರ ಮೊಳಕೆ ಒಡೆದ ಬೀಜವೆನ್ನಬಹುದು..ಗಟ್ಟಿಯಾಗುತ್ತಾನೆ
ಒಟ್ಟಾರೆಯಾಗಿ ಪ್ರಸ್ತುತ ಜೀವನದ ತುಂಬಾ ವಿಷಯದ ಸುತ್ತ ಸುಳಿಯುವ ಕಾದಂಬರಿ ಒಂದು ಕಡೆ ಓದುಗರನ್ನು ಭಾವುಕರನ್ನಾಗಿ ಮಾಡುತ್ತದೆಯಾದರೂ ಅದರೊಳಗಿನ ಸಂದೇಶ ಇನ್ನೂ ಚಿಂತಿಸುವಂತೆ ಮಾಡುತ್ತದೆ… ಹುಡುಗಿಯ ಪ್ರೀತಿಗಿಂತ ಬದುಕು ದೊಡ್ಡದು..ಬದುಕನ್ನ ಪ್ರೀತಿಸಬೇಕಾಗಿದೆ ಅನ್ನೋ ಆಶಯ ಹೊತ್ತ ನೈಜ ಘಟನೆಗಳ ಆಧಾರಿತ ಸುಂದರ ಕಾದಂಬರಿ “ಅವಳು ಬದುಕ ಕಲಿಸಿದವಳು..”
“ಅವಳು ಬದುಕ ಕಲಿಸಿದವಳು”
ಲೇಖಕರು: ಅರ್ಜುನ್ ದೇವಾಲದಕೆರೆ
Facebook ಕಾಮೆಂಟ್ಸ್