ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೨
ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ |
ಮುಗಿವ ತರಣಿಯ ರಕ್ತ ಹಿತವೆನಿಸದೇಕೋ ! ||
ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ |
ಬಗೆವೆನ್ನ ಮನಸಿನೊಳೊ ? – ಮಂಕುತಿಮ್ಮ || ೦೫೨ ||
ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ |
ನೀಲಾಕಾಶದ ಮುದವೀವ ಭಾವವನ್ನು ಯಾರು ತಾನೆ ಅಲ್ಲಗಳೆಯಲಾದೀತು? ಅದು ಎಲ್ಲರಿಗು ಹಿತವೆನಿಸುವ, ಸೊಗಸಾದ ಅನುಭವ ನೀಡುವಂತಹ ನೀಲಿ. ಆದರೆ ಅದೇ ನೀಲಿ ಬಯಲಿನಲ್ಲಿ ಮನೆ ಮಾಡಿಕೊಂಡಿರುವ ಆಕಾಶ ಕಾಯಗಳಲ್ಲೊಂದಾದ ಸೂರ್ಯನ ಪ್ರಖರತೆಯ ಬಣ್ಣ ಗಾಢತೆ ಮತ್ತಿತರ ವೈವಿಧ್ಯತೆಗಳಿಂದ ಕೂಡಿದ್ದು. ಒಂದೊಂದು ಹೊತ್ತಿನಲ್ಲಿ ಒಂದೊಂದು ಬಣ್ಣದ ರಾಜ್ಯವಾಳುವುದು ಅದರ ವಿಶೇಷತೆಯಾದರೂ, ಮುಗಿವ (ಮುಳುಗುವ) ಹೊತ್ತಿನ ಸೂರ್ಯನ, ಅರುಣರಾಗ ಲೇಪನದ ಕೆಂಪಿನ ಮೊಹರು ಅದ್ಬುತವೆಂದೆ ಹೇಳಬೇಕು, ಅದರಲ್ಲು ನೀಲಿ ಬಯಲಿನ ಪರದೆಯ ಹಿನ್ನಲೆಯಲ್ಲಿ.
ಮುಗಿವ ತರಣಿಯ ರಕ್ತ ಹಿತವೆನಿಸದೇಕೋ ! ||
ಆದರೆ ಕವಿ ಮನಕೆ ಪ್ರಕ್ಷುಬ್ದವೆನಿಸುವ ಅಸ್ತಮನ ಸೂರ್ಯನ ಕೆಂಪಿಗಿಂತ, ತಂಪು ಭಾವನೆಯೀವ ಗಗನದ ಬಯಲೆ ಹೆಚ್ಚು ಹಿತವೆನಿಸುವುದಂತೆ. ಎರಡೂ ಸೌಂದರ್ಯದ ವಿಭಿನ್ನ ವ್ಯಾಖ್ಯಾನಗಳಾದರು ಯಾಕೊ ನೀಲಿಯ ಮೇಲೆ ಮಮಕಾರ ಹೆಚ್ಚು – ಬಹುಶಃ ಅದರ ಪ್ರಶಾಂತತೆಯನ್ನಾರೋಪಿಸುವ, ಕಣ್ಣು ತಂಪಾಗಿಸುವ ಸೌಮ್ಯತೆಯಿಂದೇನೊ.
ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ |
ನಿಜದಲ್ಲಿ ಸೂರ್ಯಾಸ್ತಮಾನದ ಕೆಂಪು ಕೂಡ ಚೆಂದವಿದ್ದರು ತನ್ನ ಮನಸು ನೀಲಿಗೆ ಆದ್ಯತೆಯಿತ್ತ ಹಾಗೆ, ಬೇರೆ ಕೆಲವರು ನೀಲಿಯ ಬದಲು ಅಸ್ತಮಾನದ ಕೆಂಪಿಗೆ ಮನಸೋಲಬಹುದು, ಅದರಲ್ಲು ನೀಲಿ-ಕೆಂಪುಗಳೊಡಗೂಡಿ ಅದು ಬರೆಯುವ ಚಿತ್ತಾರಗಳ ವರ್ಣ ವೈವಿಧ್ಯಕ್ಕೆ ಬೆರಗಾಗಿ.
ಬಗೆವೆನ್ನ ಮನಸಿನೊಳೊ ? – ಮಂಕುತಿಮ್ಮ ||
‘ಲೋಕೋಭಿನ್ನರುಚಿಃ’ ಎನ್ನುವ ಹಾಗೆ ಒಬ್ಬೊಬ್ಬರಿಗೆ ಒಂದೊಂದು ಸೊಗಸೆನಿಸುವ ಈ ಪರಿಯನ್ನು ನೋಡಿ ಕವಿ ವಿಸ್ಮಿತನಾಗಿ ಕೇಳುತ್ತಾನೆ – ಈ ಸೊಗಸಿನ ಮೂಲವಾದರು ಯಾವುದು ? ಎಂದು. ಆ ಸೊಗಸಿನ ಅನುಭೂತಿಯ ಮೂಲ ನೀಲಿಯಲ್ಲಿದೆಯೊ, ಕೆಂಪಿನಲ್ಲಿದೆಯೊ ಅಥವಾ ‘ಸೌಂದರ್ಯವೆನ್ನುವುದು ನೋಡುಗರ ಕಣ್ಣಿನಲ್ಲಿದೆ’ ಎನ್ನುವ ಮಾತಿನಂತೆ ಬೇರೆ ಬೇರೆಯವರಲ್ಲಿ ಬೇರೆ ಬೇರೆ ತರದ ಭಾವ ಮೂಡಿಸುವ ಮನಸಿನಲ್ಲಿಹುದೊ ? ಎಂದು ತಮ್ಮ ವಿಸ್ಮಯವನ್ನು ವ್ಯಕ್ತಪಡಿಸುತ್ತಾರೆ.
ನಾವು ಕಾಣುವ ಸುತ್ತಲ ಜಗದ ಸೌಂದರ್ಯವಾಗಲಿ ಕುರೂಪವಾಗಲಿ ಯಾವಾಗಲು ತನ್ನ ಸ್ವರೂಪವನ್ನು ಒಂದೇ ರೀತಿಯಲ್ಲಿ ಕಾದುಕೊಂಡಿರುತ್ತದೆ. ಆದರೆ ನೋಡುಗರ ಅಭಿರುಚಿ, ದೃಷ್ಟಿಕೋನ, ಮನಸ್ಥಿತಿಗನುಗುಣವಾಗಿ ಅದು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ‘ಮನಸಿನಂತೆ ಮಹದೇವ’ ಎನ್ನುವ ಹಾಗೆ ಒಬ್ಬೊಬ್ಬರಿಗೊಂದೊಂದು ರೀತಿಯಾಗಿ ಕಾಣಿಸಿಕೊಳ್ಳುವ ಪರಿಗೆ ಮನಸಿನ ವ್ಯಾಪಾರ ಕಾರಣವೆ ಹೊರತು ಹೊರಗಣ್ಣಿಗೆ ತೋರಿಕೊಳ್ಳುವ ಭೌತಿಕ ಸ್ವರೂಪವಿರಲಾರದು ಎನ್ನುವ ಇಂಗಿತ ಇಲ್ಲಿನ ಸಾರ.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ
Facebook ಕಾಮೆಂಟ್ಸ್