ಒಂದಿಹುದುಪಾಯವೋರೊರ್ವನರೆಗಣ್ಣುಗಳು |
ಮೊಂದೊಂದು ಸತ್ಯಾಂಶಕಿರಣಗಳ ಪಿಡಿದು ||
ಒಂದುಗೂಡಿದೊಡವರ್ಗಳರಿವನೆಲ್ಲವನಾಗ |
ಮುಂದು ಸಾಗುವೆವಿನಿತು – ಮಂಕುತಿಮ್ಮ || ೦೪೮ ||
ಈ ಪದ್ಯವು ಹಿಂದಿನ ಪದ್ಯದ ಮುಂದಿನ ಭಾಗವೆನ್ನಬಹುದು. ಅಲ್ಲಿ ಅರೆಗಣ್ಣಿನ ಪ್ರಸ್ತಾಪವಾಗಿ ಅದರಿಂದಾದ ಕುಂದು ಕೊರತೆಯನ್ನು ಎತ್ತಿ ತೋರಿಸುವ ಪ್ರಧಾನ ಆಶಯವಾಗಿದ್ದರೆ, ಇಲ್ಲಿ ಮನುಜ ಕುಲ ಅದನ್ನು ಹೇಗೆ ನಿವಾರಿಸಿಕೊಳ್ಳಬಹುದೆಂಬ ಮಾರ್ಗೋಪಾಯವನ್ನು ಸೂಚಿಸುತ್ತದೆ.
ವಿವರಣೆಯ ಆಳಕ್ಕಿಳಿವ ಮೊದಲು ಗಮನಿಸಬೇಕಾದ ಒಂದು ಮುಖ್ಯಾಂಶವೆಂದರೆ – ನಾವೀ ಆಧುನಿಕ ದಿನಗಳಲ್ಲಿ, ಜಾಗತಿಕ ಪರಿಸರ, ಒತ್ತಡಗಳ ನಡುವೆ ಪದೇಪದೇ ಹೇಳುವ, ಪೋಷಿಸುವ ‘ಟೀಮ್ವರ್ಕ್’ ಸಿದ್ದಾಂತ ಈ ಪದ್ಯದಲ್ಲಾಗಲೆ ಅಡಕವಾಗಿರುವುದು. ಆ ಸಮಷ್ಟಿ ಬಲದ ಕುರಿತು ಸೂಚ್ಯವಾಗಿ ತೋರುತ್ತಲೆ, ಅರೆಗಣ್ಣಿರುವುದು ನಿಜವಾದರು ಎಲ್ಲರ ಕುರುಡು ಒಂದೇ ರೀತಿಯದು ಎಂದು ಹೇಳುವಂತಿಲ್ಲವಲ್ಲ ? ಎಲ್ಲರ ದೋಷವೂ ಒಂದೆ ರೀತಿಯದೆನ್ನಲು ಸಾಧ್ಯವಿಲ್ಲವಲ್ಲ ? ಒಬ್ಬನ ದೋಷ ಮತ್ತೊಬ್ಬನ ಬಲವೂ ಆಗಿರಬಹುದಲ್ಲ?
ಆದ ಕಾರಣ ಅರೆಗಣ್ಣು, ಅರೆಬೆಳಕೆಂದು ಕೊರಗುತ್ತ ಕೂರುವ ಬದಲು ಮತ್ತೊಂದು ಉಪಾಯ ಮಾಡಬಹುದು – ಅರೆಗಣ್ಣಿರುವ ಪ್ರತಿಯೊಬ್ಬರು ತಂತಮ್ಮ ಅರೆಗಣ್ಣಿನ ನೆರವಿನಲ್ಲೆ ಒಂದೊಂದು ಸತ್ಯಾಂಶದ ಸುಳಿವು ನೀಡುವ ಬೆಳಕಿನ ಕಿರಣಗಳನ್ನು ಹಿಡಿದು ಅನ್ವೇಷಣೆಗೆ ಹೊರಡಲಿ. ಹೀಗೆ ಪ್ರತಿಯೊಬ್ಬರು ಬೇರೆಬೇರೆಯಾದ ತಂತಮ್ಮ ನೋಟಕ್ಕೆ ನಿಲುಕುವ ಹಲವಾರು ಸುಳಿವುಗಳನ್ನು ಎಲ್ಲಾಕಡೆಯಿಂದ ಮುತ್ತತೊಡಗಿದರೆ ಆ ರಹಸ್ಯದ ತುಣುಕುಗಳೊಂದೊಂದಾಗಿ ಅನಾವರಣವಾಗತೊಡಗುವುದಲ್ಲವೆ ? ಆ ಯತ್ನದಲ್ಲಿ ಯಶಸ್ಸು ಕಂಡ ಅರಿವು, ಜ್ಞಾನಗಳನ್ನೆಲ್ಲ ಒಟ್ಟುಗೂಡಿಸಿದರೆ ಅದರ ಸಮಗ್ರ ನೋಟದ ಇಣುಕು ನೋಟ ಸಿಕ್ಕು, ಈಗಿನಂತೆ ಒಬ್ಬಂಟಿ ಗೊಂದಲದಲ್ಲಿ ಒದ್ದಾಡುವ ಬದಲು ಅಷ್ಟಿಷ್ಟಾದರು ಮುಂದೆ ಸಾಗುವ ಸಾಧ್ಯತೆಯಾದರೂ ಇರುತ್ತದೆ. ಆ ಪ್ರಕ್ರಿಯೆ ಹಾಗೆಯೆ ಮುಂದುವರೆದರೆ ಮುಂದೊಮ್ಮೆ ಒಟ್ಟು ರಹಸ್ಯವೂ ಪೂರ್ತಿಯಾಗಿ ಅನಾವರಣವಾಗಿಬಿಡಬಹುದಲ್ಲವೆ ?
ಇಲ್ಲಿ ಕವಿ ಮನಸು ಸದ್ಯದ ಅನ್ವೇಷಣೆಯಲ್ಲಿ ನೂರೆಂಟು ವಿಧದ ಯತ್ನಗಳು ನಡೆಯುತ್ತಿದ್ದರೂ, ಅದರ ಸಂಯೋಜಿತ, ಸಮಷ್ಟಿ ಯತ್ನವಿಲ್ಲದೆ ಅವೆಲ್ಲವು ವ್ಯರ್ಥವಾಗುತ್ತಿರುವುದನ್ನು ಗಮನಿಸಿದೆ. ಹಾಗೆಯೆ ಅರಿಯಬೇಕಾದ ಉತ್ತರವು ಇಲ್ಲೆ ಎಲ್ಲೊ ಅಡಗಿರಬೇಕೆಂಬ ದೂರದಾಸೆಯೂ ಇದೆ. ಬರೆದ ಆ ಕಾಲಮಾನದಲ್ಲೂ ಎಲ್ಲವನ್ನು ಸಮಗ್ರವಾಗಿ ಸಮಷ್ಟಿಸುವ ಕೊರತೆಯಿರುವುದನ್ನು ಮನಗಂಡಿದೆ. ಸಮೂಹ ಯತ್ನದಲ್ಲಿ ಅಂತಿಮ ಫಲಿತ ಸಿಗುವುದೊ, ಬಿಡುವುದೊ ಕನಿಷ್ಠ ಈಗಿರುವುದಕ್ಕಿಂತ ಉತ್ತಮ ಫಲಿತವಾದರು ಸಿಗುವುದೆಂಬ ಆಶಯ ಇಲ್ಲಿ ವ್ಯಕ್ತವಾಗಿದೆ.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ
Facebook ಕಾಮೆಂಟ್ಸ್