X

೦೪೭. ಕೈಯ ಹಕ್ಕಿಯ ಬಿಟ್ಟು, ಪೊದೆಯ ಹಕ್ಕಿಗೆ ಗುರಿಯಿಟ್ಟಂತೆ..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೭

ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? |

ಅರೆಬೆಳಕು ಧರೆಯೊಳೆಂದೊರಲಿ ಸುಖವೇನು ? ||

ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ |

ಪರಿಕಿಸಿದೊಡದು ಲಾಭ – ಮಂಕುತಿಮ್ಮ || ೦೪೭ ||

ಮೊದಲಿನೆರಡು ಸಾಲುಗಳಲ್ಲಿ ಸರ್ವೇ ಸಾಧಾರಣವಾಗಿ ಕಾಣಿಸುವ ಮನುಜ ಪ್ರವೃತ್ತಿ ಹೇಗೆ ಬಿಂಬಿತವಾಗಿದೆ ನೋಡಿ. ನಾವಂದುಕೊಂಡಂತೆ ನಡೆಯದ ಪ್ರತಿ ವಿಷಯಕ್ಕೂ ಒಂದೋ ನಮ್ಮನ್ನೇ ದೂಷಿಸಿಕೊಳ್ಳುವ ಕೀಳರಿಮೆಗೆ ಒಳಗಾಗುತ್ತೇವೆ (ಅರೆಗಣ್ಣು ನಮದೆಂದು ಕೊರಗುವುದು : ನಮಗೆ ಇರುವ ಸಾಮರ್ಥ್ಯವೇ ಸೀಮಿತವೆಂದು ಭಾವಿಸಿಕೊಳ್ಳುವುದು ). ಇಲ್ಲವಾದರೆ ದೋಷವನ್ನೆಲ್ಲ ಸುತ್ತಲಿನ ಪರಿಸರಕ್ಕೆ ಆರೋಪಿಸಿ ತಪ್ಪು ನಮ್ಮದಲ್ಲ ಎಂದು ಹಪಹಪಿಸುತ್ತೇವೆ. ಎರಡರ ಫಲಿತವು ಶೂನ್ಯವೇ ಎನ್ನುವುದು ಇಲ್ಲಿನ ಕವಿಭಾವ.

ಕುತೂಹಲದ ಬೆನ್ನಟ್ಟಿ ಜಿಜ್ಞಾಸೆ-ಅನ್ವೇಷಣೆಗೆ ಹೊರಟ ಮನದ ಯಾನ ತಾರ್ಕಿಕ ಅಂತ್ಯ ಕಾಣದೆ ಬೇಸತ್ತುಹೋಗಿದೆ. ಆ ಗುಟ್ಟರಿಯುವ ದಾಹ ತಣಿಯದೆ ತನ್ನ ಅಸಹಾಯಕ ಸ್ಥಿತಿಗೆ ತಾನೇ ಮರುಗುವಂತಾಗಿಬಿಟ್ಟಿದೆ ಕವಿಗೆ. ನಿರಂತರ ಕೊರೆಯುತ್ತಿರುವ ಆ ಚಿಂತನೆಯ ಚಿಂತೆ ಸದಾ ಕಾಡುವ ಕೊರಗಾಗಿಬಿಡುವುದು ಅದರ ಸಹಜ ಬೆಳವಣಿಗೆ ತಾನೆ ? ಹೀಗಾಗಿ ಅದನ್ನು ಹದ್ದುಬಸ್ತಿನಲ್ಲಿಡಲೋ ಏನೊ ಎಂಬಂತೆ – ‘ಯಾವುದೇ ಪ್ರಯೋಜನವಿಲ್ಲದ ಬರಿಯ ಕೊರಗಿನಿಂದೇನು ಪ್ರಯೋಜನ ? ‘ ಎಂದು ಸಮಾಧಾನಿಸಿಕೊಳ್ಳುತ್ತ ತಮ್ಮ ಪ್ರಕ್ಷುಬ್ದ ಮನಸನ್ನು ಅದರ ಧನಾತ್ಮಕ ಕೋನದತ್ತ ತಿರುಗಿಸಲು ಯತ್ನಿಸುತ್ತಾರೆ.

ಕಣ್ಣಿನ ದೋಷದಿಂದಾಗಿ ಬರಿ ಅರೆಬರೆ ಕಾಣುವ ಶಕ್ತಿ ಮಾತ್ರವಿರುವ ಪರಿಸ್ಥಿತಿಯಲ್ಲಿ,  ನಮ್ಮ ಕಣ್ಣಿನ ದೋಷಕ್ಕೆ ಕೊರಗಿ-ಮರುಗಿದರೇನು ಪ್ರಯೋಜನ, ಸುಖ ? ಆ ದೋಷದ ಕಣ್ಣಲ್ಲೆ ಹೊರಗಿನ ಜಗವನ್ನು ನೋಡುತ್ತ, ಅದರ ಸೀಮಿತತೆಯ ಫಲವಾಗಿ ಬರಿಯ ಅರ್ಧಂಬರ್ಧ ಬೆಳಕನ್ನು ಮಾತ್ರ ಪರಿಗ್ರಹಿಸಿ, ಎಲ್ಲವನ್ನು ಸಂಪೂರ್ಣವಾಗಿ ಕಂಡೆನೆಂಬ ತಪ್ಪು ಗ್ರಹಿಕೆಯಲ್ಲಿ , ‘ಈ ಧರೆಯಲ್ಲಿರುವ ಬೆಳಕೆ ಅರೆಬರೆ, ಅಸಂಪೂರ್ಣ ; ಇಲ್ಲಿ ಪೂರ್ತಿ ಬೆಳಕಿಲ್ಲ’ ಎಂದು ಒರಲಿದರೆ, ಗೊಣಗುಟ್ಟಿಕೊಂಡರೆ ಏನು ಪ್ರಯೋಜನ? ನಮ್ಮ ಮಿತಿಯಿಂದ ಅರಿಯಲಾಗದ್ದನ್ನು ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂದು ತಪ್ಪಾಗಿ ಪರಿಗ್ರಹಿಸಿ ಆ ಅರಿಯಬೇಕಾದ ಜ್ಞಾನ-ಸತ್ಯವೆ ಇಲ್ಲಿಲ್ಲ, ಇರುವುದೆಲ್ಲ ಅರೆಬರೆ ಸತ್ಯ-ಜ್ಞಾನ ಮಾತ್ರವಷ್ಟೇ ಹೊರತು ಸಂಪೂರ್ಣ ಸತ್ಯವಲ್ಲ ಎಂದು ಮೊಂಡುವಾದ ಹಿಡಿದರೆ ಸತ್ಯ ಸುಳ್ಳಾಗಿಬಿಡುವುದೆ ?

ಬದಲಿಗೆಆ ದೋಷಾರೋಪಣೆಯನ್ನೆಲ್ಲ ನಿಲ್ಲಿಸಿ ನಮ್ಮ ಪರಿಮಿತಿಯನ್ನು ಅರಿತು ಒಪ್ಪಿಕೊಳ್ಳುವ ದೊಡ್ಡತನ ತೋರಿಸಿದರೆ, ಇರುವಷ್ಟು ಕಣ್ಣಿನ ಸಾಮರ್ಥ್ಯದಲ್ಲೆ, ಕಾಣಿಸಿದಷ್ಟು ಬೆಳಕಿನ ಅನ್ವೇಷಣೆ-ಪರೀಕ್ಷೆ ನಡೆಸಿ ‘ಕೈಗೆಟುಕಿದಷ್ಟೇ ಲಾಭ’ – ಎಂದು ನಿರಾಳವಾಗಬಹುದಲ್ಲವೆ ? ಆಗ ಅಲ್ಲಿ ಸಂಪೂರ್ಣ ಪರಿಪೂರ್ಣತೆಯ ತೃಪ್ತಿಯಿರದಿದ್ದರು, ಆದಷ್ಟು ದೂರಕ್ಕೆ ನಡೆದೆವೆನ್ನುವ ‘ಸಮಯೋಚಿತ ಮತ್ತು ಕಾರ್ಯಸಾಧು ಪ್ರಕ್ರಿಯೆಯ’ ಸಂತೃಪ್ತಭಾವವಾದರು ದಕ್ಕುತ್ತದೆ. ಒಂದು ಹದದಾಚೆಗೆ, ನಮ್ಮ ಸೀಮಿತತೆಯ ಹಂತದ ಪರಿಧಿ ಮೀರಿ ‘ಇದ್ದುದೆಲ್ಲವ (ಸಾಧ್ಯವಾದುದೆಲ್ಲ) ಬಿಟ್ಟು ಇರದುದರ ಬೆನ್ನಟ್ಟುವ’ ಹವಣಿಕೆ ಅಂತಿಮವಾಗಿ ಯಾರಿಗೂ ಒಳಿತಲ್ಲ – ಎನ್ನುವ ಅರಿವಿನ ಪ್ರಕ್ಷೇಪ ಇದರೊಡಲಲಡಗಿದ ಮೂಲಭಾವವೆನ್ನಬಹುದು. ಇನ್ನು ಸರಳವಾಗಿ ಹೇಳುವುದಾದರೆ ‘ಕೈಯಲ್ಲಿರುವ ಒಂದು ಹಕ್ಕಿಯ ಬಿಟ್ಟು, ಪೊದೆಯಲಿರುವ ಎರಡು ಹಕ್ಕಿಗೆ ಗುರಿಯಿಡುವ’ ಪಾಡು ಸಲ್ಲ  . ಕೈಲಿರುವ ಹಕ್ಕಿ ಹಾರಿಹೋಗದಂತೆ ನೋಡಿಕೊಳ್ಳುವುದು ಮೊದಲ ಅಗತ್ಯ; ನಂತರವಷ್ಟೇ ಪೊದೆಯತ್ತ ಗಮನವೀಯುವುದು ಉಚಿತ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post