X

ಮುಳುಗುತ್ತಿರುವ ಹಡಗಿಗೆ ಹೊಸ ನಾವಿಕರಾಗುತ್ತಾರೆಯೇ ಪ್ರಿಯಾಂಕಾ?

ಪ್ರಿಯಾಂಕಾ ರಾಬರ್ಟ್ ವಾದ್ರಾ ಉರುಫ್ ಪ್ರಿಯಾಂಕಾ ಗಾಂಧಿ!!

  ದೇಶದ ರಾಜಕೀಯದ ದಿಕ್ಸೂಚಿ ಎಂದೇ ಭಾವಿಸಲಾಗಿರುವ ಉತ್ತರಪ್ರದೇಶದ ಚುನಾವಣೆಯ ಅಖಾಡದಲ್ಲಿ ಪ್ರಚಾರದ ಭರಾಟೆ ಜೋರಾಗಿರುವಾಗ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಾಳಯದಲ್ಲಿ ಬಹಳ ದೊಡ್ದ ಸದ್ದು ಮಾಡುತ್ತಿರುವ ಹೆಸರಿದು. ಪ್ರಿಯಾಂಕರನ್ನು ಕರೆತನ್ನಿ ಕಾಂಗ್ರೆಸ್ ಉಳಿಸಿ ಅನ್ನೋ ಕೂಗು ಈ ಬಾರಿ ಬಹಳ ಪ್ರಬಲವಾಗಿ ಕಾಂಗ್ರೆಸ್ ಕ್ಯಾಂಪಲ್ಲಿ ಕೇಳಲ್ಪಡುತ್ತಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಏರ್ಪಡಲು ಪ್ರಿಯಾಂಕ ಪಾತ್ರ ಬಹಳ ದೊಡ್ದದಿತ್ತು ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರು ಒಪ್ಪಿಗೊಂಡಿದ್ದಾರೆ. ಪಂಜಾಬಿನಲ್ಲಿ ನವ್ಜೋತ್ ಸಿಧು ಅವರನ್ನು ಪಕ್ಷಕ್ಕೆ ಕರೆ ತಂದದ್ದೂ ಕೂಡಾ ಪ್ರಿಯಾಂಕ ಅನ್ನುವ ಮಾತು ಕಾಂಗ್ರೆಸ್ ಪಕ್ಷದ ಚಾವಡಿಯಲ್ಲಿ ಹರಿದಾಡುತ್ತಿದೆ.

 

ನರೇಂದ್ರ ಮೋದಿ ಯುಗಾರಂಭವಾದ ಮೇಲೆ ದೇಶದಲ್ಲಿ ಹೇಳಹೆಸರಿಲ್ಲದಂತಾಗಿರುವ ಕಾಂಗ್ರೆಸ್ ಪಕ್ಷಕ್ಕೆ ೨೦೧೯ರಲ್ಲಿ ಮೋದಿ ವಿರುದ್ಧ ಬಳಸಲು ಇದ್ದ ಬಹುದೊಡ್ಡ ಅಸ್ತ್ರವೇ ಪ್ರಿಯಾಂಕ ಗಾಂಧಿ. ಆದರೆ ತನ್ನ ಟ್ರಂಪ್ ಕಾರ್ಡನ್ನು ಕಾಂಗ್ರೆಸ್ ಪಕ್ಷ ಬಹಳ ತುರಾತುರಿಯಲ್ಲಿ ಬಿಜೆಪಿ ವಿರುದ್ಧ ಪ್ರಯೋಗಿಸಲು ಯತ್ನಿಸುತ್ತಿದೆ ಅಂದರೆ ತಪ್ಪಾಗಲಾರದು. ಇದಕ್ಕೆ ಕಾರಣಗಳೂ ಇವೆ. ಮೊದಲನೆಯದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಅನಾರೋಗ್ಯ. ಹಿಂದಿನಂತೆ ಸಕ್ರಿಯ ರಾಜಕಾರಣ ಮಾಡಲು ಸೋನಿಯಾ ಗಾಂಧಿಯವರಿಗೆ ಸಾಧ್ಯವಾಗುತ್ತಿಲ್ಲ. ಎರಡನೆಯದು ರಾಜಕಾರಣಕ್ಕೆ ಬಂದು ದಶಕಗಳಾದರೂ ತನ್ನ ರಾಜಕೀಯ ಸಾಮರ್ಥ್ಯ ಸಾಬೀತು ಪಡಿಸಲು ರಾಹುಲ್ ಗಾಂಧಿ ವಿಫಲರಾದದ್ದು. ಸೋನಿಯಾ ಅನಾರೋಗ್ಯಕ್ಕಿಂತಲೂ ರಾಹುಲ್ ವೈಫಲ್ಯವೇ ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಖ್ಯ ಭೂಮಿಕೆಯಲ್ಲಿ ಪ್ರಿಯಾಂಕ ಕರೆತರಲು ಕಾರಣ ಅಂತ ವಿಶ್ಲೇಷಿಸಲಾಗುತ್ತಿದೆ.

ಉತ್ತರಪ್ರದೇಶ ಚುನಾವಣೆ ಘೋಷಣೆಗೂ ಮುನ್ನ ಶೀಲಾ ದೀಕ್ಷಿತರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿ ಚುನಾವಣಾ ಉಸ್ತುವಾರಿಯನ್ನು ರಾಜಕೀಯ ತಂತ್ರಜ್ನ ಪ್ರಶಾಂತ್ ಕಿಶೋರ್’ಗೆ ರಾಹುಲ್ ಗಾಂಧಿ ವಹಿಸಿದ್ದರು. ಆದರೆ ಗ್ರೌಂಡ್ ರಿಯಾಲಿಟಿಯನ್ನು ಅಧ್ಯಯನ ಮಾಡಿಕೊಂಡ ಪ್ರಶಾಂತ್ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮತ್ತು ಪ್ರಿಯಾಂಕ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರುವ ಅನಿವಾರ್ಯತೆಯನ್ನು ಪಕ್ಷದ ಹೈಕಮಾಂಡ್ ಮುಂದಿರಿಸಿದ್ದರು. ಆದರೆ ಆವಾಗ ಪ್ರಶಾಂತ್ ಮಾತನ್ನು ತಿರಸ್ಕರಿಸಿದ್ದ ರಾಹುಲ್ ತಿಂಗಳುಗಳ ಹಿಂದೆ ಸಮಾಜವಾದಿ ಪಕ್ಷವನ್ನು ಸಾರ್ವಜನಿಕ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಇದೀಗ ಇದ್ದಕ್ಕಿದ್ದಂತೆ ಅಖಿಲೇಶ್ ಜೊತೆ ಮೈತ್ರಿ ಮಾಡಿ ಕೇವಲ ೧೦೫ ಸೀಟುಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ತಯಾರಾಗಿದೆ. ಇಲ್ಲಿ ರಾಹುಲ್ ಗಾಂಧಿಯವರ ರಾಜಕೀಯ ಲೆಕ್ಕಾಚಾರ ಉಲ್ಟಾ ಹೊಡೆದದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಧಾನಿ ಮೋದಿಯವರು ನೋಟು ರದ್ಧತಿ ಮಾಡಿದಾಗ ಎಟಿಎಮ್ ಕ್ಯೂನಲ್ಲಿ ನಿಂತು ನಾಲ್ಕು ಸಾವಿರ ಪಡೆದಿದ್ದ ರಾಹುಲ್ ಗಾಂಧಿ, ಹೊಸ ವರ್ಷಾಚರಣೆ ಮಾದಲು ವಿದೇಶಕ್ಕೆ ಹಾರುತ್ತಾರೆ! ಹೇಳಿ ಕೇಳಿ ಈಗ ವೋಟು ಪಡೆಯುವುದು ಮೊದಲಿನಷ್ಟು ಸುಲಭವಲ್ಲ. ಕಾಂಗ್ರೆಸ್ ೫೦ ವರ್ಷಗಳಿಂದ ಉಪಯೋಗಿಸುತ್ತಾ ಬಂದಿದ್ದ ರೋಟಿ ಕಪ್ಡಾ ಮತ್ತು ಮಕಾನ್ ಘೋಷಣೆ ಕೇಳಿ ಮತ ನೀಡುವಷ್ಟು ದಡ್ಡರಲ್ಲ ನಮ್ಮ ಜನ. ಇಂತಹ ಸಂದರ್ಭದಲ್ಲಿ ಒಬ್ಬ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ಪಾತ್ರ ನಿರ್ವಹಿಸದ ರಾಹುಲ್ ಕೈಗೆ ಕಾಂಗ್ರೆಸ್ ಮತ್ತು ಜನ ಬಯಸಿದರೆ ಮುಂದೆ ದೇಶದ ಚುಕ್ಕಾಣಿ ಕೊಡಲು ಮತದಾರ ಖಂಡಿತಾ ಮನಸ್ಸು ಮಾಡಲಾರ ಅನ್ನೋ ಸತ್ಯ ಕಾಂಗ್ರೆಸ್ ಪಕ್ಷ ಬಹಳ ತಡವಾಗಿಯಾದರೂ ಅರಿತಂತಿದೆ.

ಪ್ರಿಯಾಂಕ ವಿಷಯಕ್ಕೆ ಬಂದಾಗ ಅಜ್ಜಿ ಇಂದಿರಾ ಗಾಂಧಿ ಜೊತೆ ಪ್ರಿಯಾಂಕರನ್ನು ಹೋಲಿಕೆ ಮಾಡಲಾಗುತ್ತಿದೆ. ಆದರೆ ಇಂದಿರಾ ಗಾಂಧಿ ರಾಜಕೀಯದಲ್ಲಿದ್ದಾಗ ಇದ್ದ ಸನ್ನಿವೇಶ ಈಗಕ್ಕಿಂತ ಬಹಳ ಭಿನ್ನ. ಇಂದಿರಾ ಗಾಂಧಿ ಬಳಿಯಿದ್ದ ರಾಜಕೀಯ ಚತುರತೆ ಮತ್ತು ವರ್ಚಸ್ಸು ಪ್ರಿಯಾಂಕ ಪಡೆಯಲು ಸಾಧ್ಯವೇ ಅನ್ನುವುದೂ ಪ್ರಶ್ನಾರ್ಹವಾಗಿದೆ. ಹಾಗೆ ನೋಡಿದರೆ ೧೯೯೯ರಿಂದ  ಚುನಾವಣೆಗಳಲ್ಲಿ ಪ್ರಿಯಾಂಕ ಕೆಲಸ ಮಾಡುತ್ತಿದ್ದರು. ಆದರೆ ಅವರ ಕಾರ್ಯಕ್ಷೇತ್ರ ಕೇವಲ ಅಮೇಥಿ ಮತ್ತು ರಾಯ್ ಬರೇಲಿ ಆಗಿತ್ತು. ಸೋನಿಯಾ ಮತ್ತು ರಾಹುಲ್ ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ಮಾಡುತ್ತಿದ್ದರು. ಪ್ರಿಯಾಂಕ ಸಕ್ರಿಯ ರಾಜಕೀಯಕ್ಕೆ ಬರಲೇಬೇಕು ಎಂಬುದು ಕಾಂಗ್ರೆಸ್ ನಾಯಕರ ಒತ್ತಾಸೆಯೂ ಆಗಿದೆ. ಅದಕ್ಕಾಗಿಯೇ ಉತ್ತರಪ್ರದೇಶದ ಮೈತ್ರಿಗೆ ಪ್ರಿಯಾಂಕ ಅವರೇ ಕಾರಣ ಅಂತ ಅಹ್ಮದ್ ಪಟೇಲ್ ಟ್ವೀಟ್ ಮಾಡಿ ಹೇಳಿದ್ದು. ಮೂಲಗಳ ಪ್ರಕಾರ ಸಮಾಜವಾದಿ ಪಕ್ಷ ಕಾಂಗ್ರೆಸ್ಗೆ ೧೦೫ ಸ್ಥಾನಗಳನ್ನು ನೀಡಲು ಸುತರಾಂ ತಯಾರಿರಲಿಲ್ಲ. ಆದರೆ ಪ್ರಿಯಾಂಕ ಮಧ್ಯಪ್ರವೇಶದಿಂದ ಇದು ಸಾಧ್ಯವಾಯಿತು ಎನ್ನಲಾಗುತ್ತಿದೆ.

ರಾಬರ್ಟ್ ವಾದ್ರಾ ಮೇಲೆ ಹಲವಾರು ಆರೋಪಗಳಿದ್ದು ಹರ್ಯಾಣದ ಡಿಎಲ್ಎಫ್ ಹಗರಣ, ಗಾಂಧಿ ಕುಟುಂಬದ ಹೆಸರನ್ನು ಬಳಸಿ ವಿವಿಐಪಿ ಸೌಲಭ್ಯಗಳನ್ನು ಬಳಸಿಕೊಂಡದ್ದು, ಮತ್ತು ವಿವಾದಾತ್ಮಕ ಶಸ್ತ್ರಾಸ್ತ್ರ ಡೀಲರ್ ಸಂಜಯ್ ಭಂಡಾರಿ ಜೊತೆಗಿರುವ ವ್ಯವಹಾರ ಇವುಗಳಲ್ಲಿ ಪ್ರಮುಖವಾದದ್ದು. ಇಂತಹ ರಾಬರ್ಟ್ ವಾದ್ರಾ ಪತ್ನಿಯಾಗಿರುವ ಪ್ರಿಯಾಂಕ ಸಕ್ರಿಯ ರಾಜಕಾರಣಕ್ಕೆ ಬಂದರೆ ಅದ್ಯಾವ ನೆಲೆಯಲ್ಲಿ ರಾಜಕಾರಣ ಮಾಡಬಹುದು ಅನ್ನೋ ಪ್ರಶ್ನೆಯೂ ಉಧ್ಬವಿಸುತ್ತದೆ. ರಾಬರ್ಟ್ ವಾದ್ರಾ ಪ್ರಿಯಾಂಕಾ ಮೇಲೆ ತಮ್ಮ ಪ್ರಭಾವ ಬೀರಿ ಹಿಂಬಾಗಿಲ ರಾಜಕಾರಣ ಮಾಡಲೂಬಹುದು. ಒಂದು ವೇಳೆ ಪ್ರಿಯಾಂಕ ಸಕ್ರಿಯ ರಾಜಕಾರಣಕ್ಕೆ ಬಂದರೂ ಅವರು ಸೆಣೆಸಬೇಕಾದದ್ದು ಅಮಿತ್ ಶಾ ಮತ್ತು ನರೇಂದ್ರಮೋದಿಯವರ ವಿರುದ್ಧ. ಈ ಇಬ್ಬರೂ ಫುಲ್ ಟೈಮ್ ರಾಜಕಾರಣಿಗಳ ವಿರುದ್ಧ ಸಧ್ಯ ಪಾರ್ಟ್ ಟೈಮ್ ರಾಜಕಾರಣಿಗಳಾಗಿರುವ ರಾಹುಲ್ ಮತ್ತವರ ಸೋದರಿ ಪಿಯಾಂಕ ಯಾವ ರೀತಿ ದಾಳವನ್ನುದುರಿಸುತ್ತಾರೆ ಅನ್ನುವುದೂ ಮುಖ್ಯ.

ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಗಾಂಧಿ ಕುಟುಂಬದವರೇ ಯಾರಾದರೂ ಆಗಬೇಕು ಅನ್ನೋ ಸತ್ಯ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರಿಗೆ ಗೊತ್ತಿದೆ. ಆಗಿನ ಅಧ್ಯಕ್ಷ ಸೀತಾರಾಮ್ ಕೇಸರಿಯವರನ್ನು ಪಕ್ಷದಿಂದ ಕೆಳಗಿಳಿಸಿ ಪಕ್ಷದ ಚುಕ್ಕಾಣಿಯನ್ನು ಸೋನಿಯಾ ಪಡೆದುಕೊಳ್ಳುತ್ತಾರೆ. ಒಂದೊಮ್ಮೆ ನರಸಿಂಹರಾವ್ ಸರಕಾರ ಪುನರಾಯ್ಕೆಗೊಂಡಿದ್ದರೆ ಕಾಂಗ್ರೆಸ್ ನಲ್ಲಿ ಗಾಂಧಿ ಕುಟುಂಬದ ಹಿಡಿತ ಸಂಪೂರ್ಣ ಕುಂದುತ್ತಿತ್ತು ಅನ್ನುತ್ತದೆ ರಾಜಕೀಯ ಇತಿಹಾಸ. ಸೋನಿಯಾ ಗಾಂಧಿ ರಾಜಕೀಯ ಪ್ರವೇಶ ಆ ಕಾಲದಲ್ಲಿ ಆಗಿಲ್ಲದಿದ್ದರೆ ಪರಿಸ್ಥಿತಿ ಬೇರೆಯದೇ ಇರುತ್ತಿತ್ತು. ಇದೀಗ ಸೋನಿಯಾ ಗಾಂಧಿ ಮೊದಲಿನಂತೆ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಆಗದಿರುವಾಗ ಮತ್ತು ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಲು ವಿಫಲರಾಗಿರುವಾಗ ಪ್ರಿಯಾಂಕ ಸಕ್ರಿಯ ರಾಜಕಾರಣಕ್ಕೆ ಬರಬೇಕು ಅನ್ನುವುದು ಪಕ್ಷದ ನಾಯಕರ ಇಂಗಿತ. ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್ ಮುಂತಾದ ಯುವನಾಯಕರು, ಚಿದಂಬರಂ, ಎ.ಕೆ.ಆಂಟನಿ ಮುಂತಾದ ಹಿರಿಯ ನಾಯಕರು ಎಂದೂ ಕಾಂಗ್ರೆಸ್ ಪಕ್ಷದ ಅಧಿನಾಯಕರಾಗಲು ಸಾಧ್ಯವಿಲ್ಲ ಅನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ.

ಕಾಂಗ್ರೆಸ್ ಪಕ್ಷ ಹಿಂದೆಂದಿಗಿಂತಲೂ ಹೀನಾಯ ಸ್ಥಿತಿ ತಲುಪಿರುವಾಗ ಪ್ರಿಯಾಂಕ ಕರೆತನ್ನಿ ಅನ್ನೋ ಕೂಗು ಬಹಳ ದೊಡ್ಡಮಟ್ಟದಲ್ಲಿ ಎದ್ದಿದೆ. ಸೋತು ಸುಣ್ಣವಾಗಿ ಕೋಮಾ ತಲುಪಿರುವ ಪಕ್ಷಕ್ಕೆ ಸಂಜೀವಿನಿ ಆಗಬಲ್ಲರು ಪ್ರಿಯಾಂಕ ಅನ್ನುವುದು ಪಕ್ಷದ ಕಾರ್ಯಕರ್ತರ ನಂಬಿಕೆ. ಉತ್ತರಪ್ರದೇಶದ ಮೈತ್ರಿಯಲ್ಲಿ ಪ್ರಿಯಾಂಕ ಪಾತ್ರ ಬಹಳ ದೊಡ್ಡದಿತ್ತು ಎನ್ನುವ ಮಾತು ಹರಿದಾಡುತ್ತಿದೆಯಾದರೂ ಬಿಜೆಪಿ ಮತ್ತು ಮೋದಿ ಅಲೆಯ ಭಯವೇ ಎಸ್ಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಒಂದು ಮಾಡಿದ್ದು ಅನ್ನುವ ಮಾತುಗಳನ್ನೂ ಅಲ್ಲಗಳೆಯುವಂತಿಲ್ಲ‌. ಬಿಹಾರದಲ್ಲಿ ಮಹಾಘಟ್ಬಂದನ್ ಬಿಜೆಪಿಯನ್ನು ಸೋಲಿಸಿದ ಹಾಗೆ ಉತ್ತರಪ್ರದೇಶದಲ್ಲೂ ಬಿಜೆಪಿಯನ್ನು ಎಸ್ಪಿ ಕಾಂಗ್ರೆಸ್ ಮೈತ್ರಿಕೂಟ ಸೋಲಿಸುತ್ತದೆ ಅನ್ನುವ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ ಬೆಂಬಲಿಗರದ್ದು ಮತ್ತು ಇದರ ಕ್ರೆಡಿಟ್ ಪ್ರಿಯಾಂಕಾಗೆ ದಕ್ಕಿ ಪಕ್ಷದಲ್ಲಿ ಅವರು ಸಕ್ರಿಯರಾಗಲು ಸಾಧ್ಯ ಅನ್ನುವುದೂ ಅವರ ಅಂಬೋಣ. ಆದರೆ ಬಿಹಾರದಲ್ಲಿ ಎರಡು ಪ್ರಬಲ ಪಕ್ಷಗಳು ಒಂದಾಗಿದ್ದವು. ಉತ್ತರಪ್ರದೇಶದ ಮಟ್ಟಿಗೆ ಕಾಂಗ್ರೆಸ್ ಪ್ರಬಲ ಪಕ್ಷವೇ ಅಲ್ಲ.  ಉತ್ತರಪ್ರದೇಶದ ಫಲಿತಾಂಶದ ಬಳಿಕ ಪ್ರಿಯಾಂಕ ಕಾಂಗ್ರೆಸ್ ನಲ್ಲಿ ಬಹಳ ದೊಡ್ಡ ಪಾತ್ರ ವಹಿಸುವರೇ ಅನ್ನುವುದು ಸಧ್ಯದ ಕುತೂಹಲ. ರಾಹುಲ್ ಗಾಂಧಿಗೆ ಪಕ್ಷ ಸಂಘಟನೆಯಲ್ಲಿ ಪ್ರಿಯಾಂಕ ಸಹಾಯ ಬೇಕಿದೆ ಅನ್ನುವುದೂ ಕಾಂಗ್ರೆಸ್ ಕಾರ್ಯಕರ್ತರ ಆಶಯ. ಮುಳುಗುತ್ತಿರುವ ಕಾಂಗ್ರೆಸ್ ಹಡಗಿಗೆ ಹೊಸ ನಾವಿಕರಾಗುತ್ತಾರೆಯೇ ಪ್ರಿಯಾಂಕ ಅನ್ನುವುದನ್ನು ಕಾದು ನೋಡಬೇಕು.

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post