X

ನಂಬಿಕೆಯ ಸಾಫ್ಟ್ ಭಾರತ ಸೃಷ್ಟಿಯಾಗಲಿ

 ತುಂಬ ದಿನಗಳ ನಂತರ ಮತ್ತೆ ಬರೆಯುತ್ತಿರುವೆ. ಇತ್ತೀಚೆಗೆ ದಿನಪತ್ರಿಕೆಯಲ್ಲಿ ಪ್ರಕಟವಾದ ಬರಹವೊಂದು ಮತ್ತೆ ನನ್ನನ್ನು ಬರೆಯುವಂತೆ ಮಾಡಿದ್ದು ವಿಶೇಷವೋ, ಶೇಷವೋ ನಾನರಿಯೆ. ಆದರೆ ಒಂದಂತೂ ನಿಜ ದಿನಾದಿನಾ ಸ್ಮಾರ್ಟ್ ಟೆಕ್ನಾಲಜಿಗಳತ್ತ ದಾಪುಗಾಲಿಡುತ್ತಿರುವ ನಾವು ನಮ್ಮ ಸುರಕ್ಷತೆಯನ್ನೇ ಮರೆತು ಬಿಟ್ಟಿದ್ದೇವೆ ಅನ್ನಿಸುವಷ್ಟರ ಮಟ್ಟಿಗೆ ಒಂದಿಷ್ಟು ಘಟನೆಗಳು ಘಟಿಸುತ್ತಿರುವುದನ್ನು ಗಮನಿಸುತ್ತಿದ್ದೀರಿ ಎಂಬ ನಂಬಿಕೆಯಲ್ಲಿ ಬರಹದ ಮಾತನ್ನು ಮುಂದುವರೆಸುತ್ತಿದ್ದೇನೆ.

ಅವಳು ಮಹಾನಗರಿಯೊಂದರಲ್ಲಿರುವ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ, ಹೊಟ್ಟೆಪಾಡಿಗಾಗಿ ಖಾಸಗಿ ವಸತಿ ವ್ಯವಸ್ಥೆ ಮಾಡಿಕೊಂಡು ಕಂಪೆನಿಯ ಕ್ಯಾಬ್‍ನಲ್ಲಿ ಪ್ರಯಾಣ ಮಾಡುವ ಅತಿ ಸಾಮಾನ್ಯ ಜೀವನ ಅವಳದ್ದು. ತಂದೆ-ತಾಯಿ ಬಹುದೂರದ ಹಳ್ಳಿಯೊಂದರಲ್ಲಿ ಹಾಗೋ ಹೀಗೋ ಜೀವನ ಸಾಗಿಸುತ್ತಿದ್ದಾರೆ.

ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ತುಡಿತದಿಂದ ನಗರಕ್ಕೆ ಪ್ರವೇಶಿಸಿದ ಇವಳಿಗೀಗ ಮಾನಸಿಕ ಹಿಂಸೆ ತಡೆದುಕೊಳ್ಳುವುದೇ ಕಷ್ಟವಾಗಿ ಬಿಟ್ಟಿದೆ. ಅಷ್ಟಕ್ಕೂ ಆಕೆ ಮಾಡಿದ ತಪ್ಪೇನು ಗೊತ್ತಾ? ಹತ್ತಿರದ ಬೀದಿಯಲ್ಲಿದ್ದ ರಿಚಾರ್ಜ್ ಶಾಪ್ನಲ್ಲಿ ತನ್ನ ನಂಬರ್ ಕೊಟ್ಟು ರೀಚಾರ್ಜ್ ಮಾಡಿಸಿಕೊಂಡಿದ್ದು. ಅಷ್ಟೇ. ಇಲ್ಲಸಲ್ಲದ ಅಸಹ್ಯ, ಅಸಭ್ಯ ಮೇಸೆಜ್‍ಗಳು ತನ್ನ ಮೊಬೈಲ್ ಇನ್‍ಬಾಕ್ಸ್ ಸೇರುತ್ತಿರುವುದು ಅವಳಿಗೆ ಅಸಹನೀಯವೆನಿಸಿತು. ಸೈಬರ್ ಕ್ರೈಂ ಬ್ರಾಂಚ್‍ಗೆ ದೂರು ನೀಡಿದ್ದು ಆಯಿತು. ಆದರೆ ಫಲಿತಾಂಶ ಶೂನ್ಯ.

ಇದು ಕೇವಲ ಒಂದಿಬ್ಬರು ಹುಡುಗಿಯರ ಕಥೆಯಲ್ಲ. ಲಕ್ಷ ಲಕ್ಷ ಹುಡುಗಿಯರು ಈ ರೀತಿಯ ವಿಚಿತ್ರ ಸಂದರ್ಭಗಳಿಗೆ ಸಾಕ್ಷಿಯಾಗುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿರುವುದು ಆತಂಕಕಾರಿ. ಹುಡುಗಿಯರ ನಂಬರ್‍ಗಳನ್ನು ಅವರ ರೂಪಕ್ಕೆ ಅನುಗುಣವಾಗಿ ಬೆಲೆಕಟ್ಟಿ ಇತರರಿಗೆ ಮಾರುತ್ತಿರುವವರು ಅದಾವ ವಿಚಿತ್ರ ಹಣದ ಹುಚ್ಚಿಗೆ ಬಿದ್ದಿದ್ದಾರೆಂದು ನೆನಸಿಕೊಂಡರೆ ಬೇಸರವೆನಿಸುತ್ತದೆ.

ಪೇಪರ್‍ಲೆಸ್ ದುನಿಯಾವನ್ನು ಸೃಷ್ಟಿಸಲು ಭಾರತ ತುದಿಗಾಲಿನಲ್ಲಿದೆ. ಸಾಫ್ಟ್ ಯುಗಕ್ಕೆ ಭಾರತ ಸೂಕ್ಷ್ಮವಾಗಿ, ತುಸು ವೇಗವಾಗಿಯೇ ಒಗ್ಗಿಕೊಳ್ಳುತ್ತಿದೆ. ಆದರೆ ಅದರೊಂದಿಗೆ ರಕ್ಷಣೆಯ ಹಿತದೃಷ್ಠಿಯಿಂದಲೂ ಸಾಕಷ್ಟು ಸುಧಾರಣೆಗಳು ಆಗಬೇಕಿದೆ.

ಬಹುಶಃ ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯದ ವೆಬ್‍ಸೈಟ್ ಹ್ಯಾಕ್ ಆದ ಬಗ್ಗೆ ನಿಮಗೆ ಗೊತ್ತೇ ಇರಬಹುದು. ವಿದ್ಯಾರ್ಥಿಗಳ ಜೀವನವನ್ನೇ ಗೊಂದಲಕ್ಕೀಡು ಮಾಡುವ ಈ ರೀತಿಯ ಘಟನೆಗಳು ಸಾಫ್ಟ್ ಯುಗಕ್ಕೆ ಧಕ್ಕೆ ತರುತ್ತವೆ ಎಂಬುದನ್ನು ಕಡೆಗಣಿಸುವಂತಿಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ಗಂಭೀರ ಅಂಶವೆಂದರೆ ವಿವಿಯ ವೆಬ್‍ಸೈಟ್‍ಯನ್ನು ಖಾಸಗಿ ಸಂಸ್ಥೆಯೊಂದು ನೋಡಿಕೊಳ್ಳುತ್ತಿದ್ದಾಗ ಇದ್ದ ಗೊಂದಲಗಳಿಗಿಂತ ಸರ್ಕಾರಿ ಸ್ವಾಮ್ಯದಲ್ಲಿರುವಾಗಿನ ಗೊಂದಲಗಳೇ ಹೆಚ್ಚಾಗಿವೆ. ಹಾಗಾದರೆ ಸರ್ಕಾರ ವಿದ್ಯಾರ್ಥಿಗಳ ಜೀವನದ ಬಗೆಗೆ ಆಸಕ್ತಿ ಕಳೆದುಕೊಂಡಿದೆಯೇ?

ಗೊತ್ತಿಲ್ಲ. ಉತ್ತರಪ್ರದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಹುಡುಗಿಯರಿಗೆ ಫೋನ್ ಮೂಲಕ ಹಿಂಸೆ ನೀಡುತ್ತಿರುವವರ ಪ್ರಕರಣಗಳು ದಾಖಲಾಗಿವೆ. ಆದರೆ ಅಲ್ಲಿ ಶಿಕ್ಷೆ ಮಾತ್ರ ಯಾರಿಗೂ ಆಗಿಲ್ಲ. ಅದರೊಂದಿಗೆ ವಿವಿಧ ರೀತಿಯಲ್ಲಿ ಹಿಂಸೆಗೊಳಗಾದ ಮಹಿಳೆಯರು ನೀಡಿದ ದೂರು, ಧೂಳು ಹಿಡಿದಿರುವುದು ಅಷ್ಟೇ ಸತ್ಯ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಮೊದಲ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ಆರಂಭವಾದ ಬೆಂಗಳೂರಿನಲ್ಲೇ ಇಂತಹ ಅದೆಷ್ಟೋ ಪ್ರಕರಣಗಳು ದಿನನಿತ್ಯ ಘಟಿಸುತ್ತಿವೆ. ಆದರೆ ಘಟನೆಗಳ ಸ್ವರೂಪಗಳು ಭಿನ್ನವಾಗಿರಬಹುದು ಅಷ್ಟೇ.

ಸಂಪರ್ಕ ಸೇತುವೆಯಂತೆ ಕೆಲಸ ಮಾಡಬೇಕಾದ ಟೆಲಿಕಾಂ ಮತ್ತು ಇಂಟರ್‍ನೆಟ್ ವ್ಯವಸ್ಥೆಗಳು ವೈಯಕ್ತಿಕ ನೆಮ್ಮದಿಯನ್ನು ಹಾಳು ಮಾಡುತ್ತಿವೆ. ಒಂದು ಹಂತದಲ್ಲಿ ಸುರಕ್ಷತೆಯಿಲ್ಲದ ಸಂದರ್ಭಗಳನ್ನು ಸೃಷ್ಟಿಸುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಬೇಕಾದ್ದು ಅನಿವಾರ್ಯ ಕೂಡ.

ಹಾರ್ಡ್ ಭಾರತದಿಂದ ಸಾಫ್ಟ್ ಭಾರತದತ್ತ ಸಾಗುತ್ತಿರುವ ಖುಷಿಯಲ್ಲಿರುವ ನಾವು ಈ ವಿಷಯವಾಗಿ ಗಂಭೀರ ಚಿಂತನೆ ನಡೆಸಿದಲ್ಲಿ ಯಶಸ್ಸು ಕಾಣಬಹುದು. ಇಲ್ಲವಾದರೆ ನಂಬಿಕೆ ಕಳೆದುಕೊಂಡ ಸಾಫ್ಟ್ ಯುಗ ಮತ್ತಷ್ಟು ಸಂಕಷ್ಟಗಳನ್ನು ನಮ್ಮ ಮುಂದಿರಿಸಬಹುದು ಎಂಬ ಆತಂಕ ಮತ್ತೆ ಮತ್ತೆ ಚಿಂತಿಸುವಂತೆ ಮಾಡುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿ ಎಂಬುದು ಮತ್ತೊಮ್ಮೆ ನಾವು ಸರ್ಕಾರದ ಮುಂದಿರಿಸುವ ಬೇಡಿಕೆ.

Facebook ಕಾಮೆಂಟ್ಸ್

Pavithra Bidkalkatte: ಪವಿತ್ರ ಬಿದ್ಕಲ್'ಕಟ್ಟೆ ಪತ್ರಿಕೋದ್ಯಮ ವಿದ್ಯಾರ್ಥಿ ಎಸ್.ಡಿ.ಎಮ್ ಕಾಲೇಜು ಉಜಿರೆ
Related Post