X

ದಕ್ಷಿಣದಲ್ಲೊಂದು ದಿನ…

ಸ್ವಾರ್ಥತೆಯಂಬ ಕಾಮಾಲೆ ಕಣ್ಣಿನ ಮೇಲೆ ಹಳದಿ ಬಣ್ಣದ ಕನ್ನಡಕವನ್ನು ಧರಿಸಿರುವ ಜಗತ್ತಿನ ಯಾವುದೋ ಮೂಲೆಯಿಂದ ದೂರದ ಜಾತ್ರೆಗೆ ಹೊರಟ್ಟಿದ್ದ ಅಣ್ಣ ತಮ್ಮರ ಜೋಡಿ ಮನೆ ಬಿಟ್ಟು ಆಗಲೇ ನಾಲ್ಕು ತಾಸಾಗಿ, ಉರಿ ಬಿಸಿಲು ರಣವಾಗಿ, ಗಂಟಲು ಒಣಗಿ, ಕುಡಿಯಲು ನೀರು ಸಿಗದೇ, ಪರಿತಪಿಸುತ್ತಿದ್ದಿತು. ಅಣ್ಣ ಹೇಗೋ ತನ್ನ ಸಣ್ಣ ತಮ್ಮನನ್ನು ನೀರಿರುವ ಒಂದು ಕೆರೆಗೆ ಕರೆದುಕೊಂಡು ಹೋದ. ಇಬ್ಬರು ಸಾಧ್ಯವಾದಷ್ಟು ನೀರನ್ನು ಹೀರಿ ಪಯಣವನ್ನು ಮುಂದುವರೆಸಿದರು. ಮೊದಲ ಬಾರಿಗೆ ಜಾತ್ರೆಗೆ ಹೋಗುತ್ತಿರುವ ತಮ್ಮ, ಜಾತ್ರೆಯ ನೋಡುವ ಮೊದಲೇ ಅಣ್ಣನ ವರ್ಣನೆಯಿಂದ ಒಮ್ಮೆ ಅದನ್ನು ಕಲ್ಪಿಸಿಕೊಳ್ಳುವ ತವಕದಲ್ಲಿರುತ್ತಾನೆ. ತಂಪು ನೀರಿನ ಸಾಂತ್ವನ ಹಿತವೆನಿಸಿದ ಮೇಲೆ ಒಂದರಿಂದೊಂದು ಮೂಡುತ್ತಿದ್ದ  ಪ್ರೆಶ್ನೆಗಳ ಉಪಟಳಕ್ಕೆ ಸುಮ್ಮನಿರದೆ ಯಾರೋ ಒಡೆದುಕೊಂಡು ಹೋಗುತ್ತಿದ್ದ ಹೋರಿಯನ್ನು ಕಂಡು ‘ಅಣ್ಣ, ಆ ಹೋರಿಯ ಕೊಂಬು ಹಾಗು ಮೈಯ  ಮೇಲೆ ಬಣ್ಣವನ್ನೇಕೆ ಮೆತ್ತಿದ್ದಾರೆ?’ ಎಂದು ಕೇಳುತ್ತಾನೆ. ಅದಕ್ಕೆ ಅಣ್ಣನು ಅದು ಜಾತ್ರೆಯಲ್ಲಿ ಓಡುವ ಹೋರಿಯೆಂದು, ಅದನ್ನು ಹಿಡಿದು ನಿಲ್ಲಿಸಿದ ವ್ಯಕ್ತಿ ವಿಜಯಶಾಲಿಯೆಂದೂ, ಅಲ್ಲದೆ ಇದೇ ರೀತಿ ಹಲವು ಹೋರಿಗಳು ಬೇರೆ ಬೇರೆ ಊರುಗಳಿಂದ ಬರುತ್ತಿವೆ ಎಂದೂ ಹೇಳುತ್ತಾನೆ. ತುಸು ಹೊತ್ತು ಸುಮ್ಮನಿದ್ದ ತಮ್ಮ ‘ಓಡುವ ಹೋರಿಯನ್ನ ಹಿಡಿಯುವುದರಿಂದ ಏನು ಸಿಗುತ್ತದೆ?’ ಎಂಬ ಪ್ರಶ್ನೆಯ ಕೊನೆಯಲ್ಲಿ ಅವನ ಮುಖದ ಮೇಲೆ ಮೂಡಿದ ಗೊಂದಲದ ಭಾವವನ್ನು ಕಂಡು ಒಳಗೊಳಗೇ ನಕ್ಕ ಅಣ್ಣ ತನಗೆ ಗೊತ್ತಿಲ್ಲವೆನ್ನುತ್ತಾ ಸುಮ್ಮನಾಗುತ್ತಾನೆ. ಗೊತ್ತಿದ್ದರೂ ಏನೆಂದು ಹೇಳುವುದು? ಜಾತ್ರೆಗೆ ಹೋದ ಮೇಲೆ ಅವನೇ ನೋಡಿ ತಿಳಿಯಲಿ ಎಂದುಕೊಳ್ಳುತ್ತಾನೆ.

ಉರಿ ಬಿಸಿಲಿನ ಧಗೆಗೆ ದಣಿದು ದಾರಿಯ ಪಕ್ಕದಲ್ಲಿದ್ದ ಹಲಸಿನ ಮರದ ಕೆಳಗೆ ಇಬ್ಬರು ತುಸು ಹೊತ್ತು ನಿಲ್ಲುತ್ತಾರೆ. ‘ಬಾಯಾರಿಕೆಯಾಗಿದೆಯಾ ?’ ಎಂದು ತಮ್ಮನನ್ನು ವಿಚಾರಿಸಿದಾಗ ಉತ್ತರವಾಗಿ ‘ಅಣ್ಣ, ನಿಜ ಹೇಳು.. ಓಡುವ ಹೋರಿಗಳನ್ನ ಹಿಡಿಯುವುದರಿಂದ ಅವರಿಗೆ ಏನು ಸಿಗುತ್ತೆ’ ಎಂಬ ಪ್ರೆಶ್ನೆಯನ್ನೇ ತಮ್ಮ ಮತೊಮ್ಮೆ ಹರಿಬಿಡುತ್ತಾನೆ. ಹೇಳಬಾರದೆಂದುಕೊಂಡಿದ್ದ ಅಣ್ಣ ಕೊನೆಗೆ, ಇದು ಒಂದು ಬಗೆಯ ಕ್ರೀಡೆಯೆಂದೂ, ಸುಗ್ಗಿ ಹಬ್ಬದ ನಂತರ ಹಳ್ಳಿಗರ ಮನೋರಂಜನೆಗಾಗಿ, ಕೆಲವೆಡೆ ಸಂಪ್ರದಾಯವಾಗಿ ಇನ್ನೂ ಕೆಲವೆಡೆ ಹಬ್ಬವಾಗಿಯೂ ಆಚರಿಸುತ್ತಾರೆ, ಗಟ್ಟಿಮುಟ್ಟಾದ ಎತ್ತುಗಳನ್ನ ಇದಕ್ಕೆಂದೇ ತಯಾರು ಮಾಡುತ್ತಾರೆ ಎಂದು ಸುಮ್ಮನಾಗುತ್ತಾನೆ. ಅಷ್ಟರಲ್ಲಾಗಲೇ ಪಯಣ ಮತ್ತೆ ಮುಂದುವರೆದಿರುತ್ತದೆ. ಅಣ್ಣ ಮುಂದುವರೆಸಿ, ‘ಅದು ಬಹಳ ಒಳ್ಳೆಯ ತಯಾರಿಯೇ, ಆದರೆ, ಅದರಿಂದ ಪ್ರತಿಫಲವನ್ನು ಪಡೆಯಬೇಕು ಎಂಬುದೇ ಅದರ ಹಿಂದಿನ ಕಾಣದ ನೆರಳಾಗಿರುತ್ತದೆ .ತನ್ನ ಹೋರಿ ಗೆಲ್ಲಲಿ ಎಂಬ ಆಸೆಗೆ ಇಷ್ಟೆಲ್ಲಾ. ಅಲ್ಲಿ ಒಂದು ಸಣಕಲು ಹೋರಿ ದಿನವಿಡೀ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರೆ, ಇಲ್ಲಿ ಈ ಗಡುಸು ಹೋರಿಗೆ ರಾಜ ಮರ್ಯಾದೆ! ಅಲ್ಲಿ ಅದಕ್ಕೆ ಒಣಹುಲ್ಲಿನ ಭಕ್ಷ್ಯವಾದರೆ ಇಲ್ಲಿ ಇದಕ್ಕೆ ಬೇಯಿಸಿದ ಹುರುಳಿ ಕಾಳುಗಳ ಸವಿಯುವ ಸುಖ. ಒಮ್ಮೆ ಈ ಹೋರಿಗೆ ವಯಸ್ಸಾಯಿತೋ, ಇದಕ್ಕೂ ಅದೇ ಗತಿ. ನಂತರ ಮತ್ತೊಂದು ಎಳೆಮರಿ ಆಟಕ್ಕಾಗಿ ತಯಾರಾಗುತ್ತದೆ ಎಂದು ಸುಮ್ಮನಾಗುತ್ತಾನೆ.

‘ಅಷ್ಟೆಲ್ಲ ಖರ್ಚು ಮಾಡಿ, ನಿಗಾ ಮಾಡಿ, ಪ್ರೀತಿಯಿಂದ ಸಾಕುವುದು ಒಳ್ಳೆಯದೇ ಅಲ್ವ?  ಕೊನೆಪಕ್ಷ ಅದು ಪ್ರಾಣಿ, ಗೇಯುವುದು ಹಾಗು  ಮಲಗುವುದಷ್ಟೇ ಅದರ  ಕಾಯಕ ಎಂಬ ಹೀನ ಮನಸ್ಥಿತಿಯಿಂದಾದರೂ ಜನರು ಹೊರ ಬರುತ್ತಾರಲ್ಲ’ ಎಂದ ತಮ್ಮನಿಗೆ, ‘ಗೆಲ್ಲಬೇಕೆಂಬ ಸ್ವಾರ್ಥತೆಯೇ ಮನದೊಳಗೆ ತುಂಬಿಕೊಂಡಿರುವಾಗ ಎಲ್ಲಿಯ ಪ್ರೀತಿ, ಎಲ್ಲಿಯ ನಿಗಾ ತಮ್ಮ?’ ಎಂದು ಸುಮ್ಮನಾಗುತ್ತಾನೆ. ತಮ್ಮ ಮರು ಪ್ರಶ್ನೆ ಹಾಕುವುದಿಲ್ಲ. ಜಾತ್ರೆ ತಲುಪಲು ಇನ್ನು ಕೆಲ ತಾಸು ನಡೆಯಬೇಕು ಎಂದು ಯಾರೋ ಹೇಳಿದನ್ನು ಕೇಳಿದಂತಾಯಿತು. ಸ್ವಲ್ಪ ಸಮಯದ ನಂತರ ತಮ್ಮ ಮುಂದುವರೆಸಿ ‘ಈ ಕ್ರೀಡೆ ಹೇಗಿರುತ್ತದೆ, ಗೆಲ್ಲುವುದು ಅಂದರೆ ಏನು? ಸೋಲುವುದು ಹೇಗಿರುತ್ತದೆ??’ ಎಂದು ಕೇಳುತ್ತಾನೆ. ಆದರೆ ಉತ್ತರ ಹೇಳಲು ಅಣ್ಣ ನಿರಾಕರಿಸಿ ಮಾತನಾಡದೆ ಬೇಗ ಬೇಗ ನಡೆಯಬೇಕೆಂದು ಹೇಳುತ್ತಾನೆ. ಇಳಿ ಬಿದ್ದ ಮುದ್ದು ತಮ್ಮನ ಮುಖವನ್ನು ಗಮನಿಸಿ ‘ ಅದು ಸಾವಿರಾರು ಜನರು ಗುಂಪುಗೊಂಡಿರುವ ಸಾಗರ. ಎಲ್ಲರೂ ಕತ್ತಲು ಕೋಣೆಯೊಳಗಿಂದ ಹೊರ ಬರುವ ಹೋರಿಯನ್ನು ಜಿಗಿದು ಹಿಡಿಯುವ ತವಕದಲ್ಲಿರುತ್ತಾರೆ. ತೊಡೆಯನ್ನು ತಟ್ಟಿಕೊಳ್ಳುತ್ತಿರುತ್ತಾರೆ’ ಎಂದಾಗ ತಮ್ಮನ ಕಿವಿ ನಿಮಿರುತ್ತದೆ.

‘ಆಮೇಲೆ?’

‘ಅವರಿಗೆ ಕೋಣವನ್ನು ತಬ್ಬಿ ಹಿಡಿದು, ಗೆದ್ದು ಬೀಗುವ ಚಟವಾದರೆ, ಕೋಣಕ್ಕೆ ಇದ್ದೆನೋ ಬಿದ್ದೆನೋ ಎಂದು ತಪ್ಪಿಸಿಕೊಂಡು ಓಡುವ ಬವಣೆ! ಬೆಕ್ಕಿಗೆ ಚಿನ್ನಾಟ ಆದರೆ ಇಲಿಗೆ ಪ್ರಾಣ ಸಂಕಟ ಅಂತಾರಲ್ಲ ಹಾಗೆ’ ಎನ್ನುತ್ತಾನೆ.

‘ಆದ್ರೆ, ಆ ಕೋಣ ಯಾಕೆ ಓಡಬೇಕು, ಸುಮ್ನೆ ಅದ್ರ ಪಾಡಿಗೆ ಅದು ನಿಂತಲ್ಲೇ ನಿಂತ್ರೆ ಯಾರಿಗ್ ಏನ್ ಮಾಡೋಕ್ ಆಗುತ್ತೆ ?’ ಎಂದ ತಮ್ಮನ ಮುಗ್ದ ಪ್ರಶ್ನೆಯ ದ್ವಂದ್ವವನ್ನು ಅರಿತ ಅಣ್ಣ, ಹೋರಿಗಳು ಓಡ್ಲಿಲ್ಲ ಅಂದ್ರೆ, ಅದರ ಬಾಲವನ್ನು ಹಿಡಿದು ಬಾಯಿಂದ ಕಚ್ಚುವುದಾಗಿಯೂ, ಚೂಪಾದ ಅಸ್ತ್ರಗಳಿಂದ ತಿವಿಯುವುದಾಗಿಯೂ, ಮದ ಬಂದಂತೆ ಓಡಲು ಕಣ್ಣಿಗೆ ಮೆಣಸಿನಕಾಯಿಯನ್ನು ತುರುಕುವುಗಾಗಿಯೂ, ಕೆಲವೆಡೆ ಕುಡಿದು ತುದಿ ಮುರಿದ ಬುಗುರಿಯಂತೆ ಕುಣಿಯುತ್ತ ಜನರು  ಹೋರಿಯ ಬಾಯೊಳಕ್ಕೂ ‘ಎಣ್ಣೆ’ಯ ಸ್ವಾಹಾವನ್ನು ಮಾಡಲಾಗುವುದು ಎಂದು ಕೇಳಿದ್ದೀನಿ ಎಂದಾಗ ತಮ್ಮ ತನ್ನ ಬೆರಗು ಕಣ್ಣುಗಳಿಂದ ಅಣ್ಣನನ್ನೇ ನೋಡುತ್ತಿರುತ್ತಾನೆ. ಅಣ್ಣ ಮುಂದುವರೆಸಿ, ‘ಇಲ್ಲಿಯಾದರು ಪರವಾಗಿಲ್ಲ ತಮ್ಮ, ಹೊರದೇಶಗಳಲ್ಲಿ ಈ ಆಟ ಇನ್ನೂ ವಿಚಿತ್ರ. ಅಲ್ಲಿ ಆಟದ ಮೈದಾನದ ಒಳಗೆ ಹೋರಿಗಳನ್ನು ಬಿಟ್ಟು, ಕೆಂಪು ಬಟ್ಟೆಗಳನ್ನೇ ಬಂಡವಾಳವಾಗಿಸಿಕೊಂಡು, ಚೂರಿಗಳಿಂದ ಹತ್ತಾರು ಜನ ಒಂದೇ ಕೋಣವನ್ನು ತಿವಿದು ತಿವಿದು ಸಾಯಿಸುವುದೇ ಒಂದು ಆಟವಂತೆ! ಅಲ್ಲಿ ಜೀವವೊಂದು ರಕ್ತ ಕಾರಿ ಸಾಯಿತ್ತಿದ್ದರೆ ಇತ್ತ ಜನರ ಗುಂಪು ಪ್ರತಿ ಚೂರಿಯ ಇರಿತಕ್ಕೂ ಕೇಕೆ ಹಾಗುತ್ತ ಕುಣಿಯುತ್ತಿರುತ್ತದೆ ಎಂದು ಕೇಳಿರುವೆ ಎನ್ನುತ್ತಾನೆ. ಆ ಆಟಗಳಿಗೆ ಹೋಲಿಸಿದರೆ ಈ ಆಟಗಳೇ ಕೋಣಗಳಿಗೆ ಸುಖದ ಸುಪ್ಪತ್ತಿಗೆ ಎನ್ನುತ್ತಾನೆ. ಕೊನೆ ಪಕ್ಷ ಹೋರಿಯ ಬಾಲವನ್ನು ಹುಚ್ಚು ನಾಯಿಗಳಂತೆ ಕಚ್ಚುವ ಮುನ್ನ ಒಮ್ಮೆಯಾದರೂ ಕಾಯಿ ಒಡೆದು, ಕುಂಕುಮವನ್ನಿಟ್ಟು ಕೈ ಮುಗಿಯುತ್ತಾರೆ ಇವರು ಎನ್ನುತಾನೆ.

ಅಷ್ಟರಲ್ಲಾಗಲೇ ಭಯದ ಛಾಯೆ ತಮ್ಮನನ್ನು ಅವನಿಗರಿಯದಂತೆ ಆವರಿಸುತ್ತದೆ. ಮುಂದೇನು ಕೇಳ ಬೇಕೆಂದು ಅರಿಯದೆ ಸುಮ್ಮನಾದ ತಮ್ಮನನ್ನು ‘ಏನಾಯಿತು’ ಎಂದು ಕೇಳಿದಾದ ‘ಅಣ್ಣ, ಬಾ ನಾವು ವಾಪಸ್ ಹೋಗೋಣ.. ಈ ಹಿಂಸೆನ ಯಾರಾದರೂ ಆಟ ಅಂತಾರ..?! ಮಾನವರಿಗೆ ಅದು ಆಟವಾದರೆ ಪ್ರಾಣಿಗಳಿಗೆ ಜೀವನ. ಅವರ ಸುಖ ಸಮಾರಂಭಗಳಿಗೆ ಪ್ರಾಣಿಗಳೇಕೆ ಆಟದ ಗಾಳವಾಗಬೇಕು..? ಅವರು ಅಷ್ಟೆಲ್ಲ ಮಾಡುವ ಮೊದಲು ಪ್ರಾಣಿಗಳ ಅಭಿಪ್ರಾಯವನ್ನು ಒಮ್ಮೆ ಕೇಳಲಿ ಅಲ್ಲ..?! ಎಲ್ಲ ಮಾನವ ಹೇಳಿದ ಹಾಗೆ ನಡೆದರೆ ಆ ಆಟಕ್ಕಾದರೂ ಮರ್ಯಾದೆ ಇರುತ್ತದೆಯೇ? ಪ್ರಾಣಿಗಳ ಅಭಿಪ್ರಾಯವೂ ಅವಶ್ಯವಾಗುವುದಿಲ್ಲವೇ?’ ಎನ್ನುತ್ತಾನೆ. ಅಣ್ಣನಿಗೆ ಉತ್ತರಿಸಲು ಪದಗಳ ಕೊರತೆ ಕಾಣುತ್ತದೆ. ನಂತರ ಇಲ್ಲಿಯವರೆಗೂ ಬಂದು ಈಗ ವಾಪಾಸ್ ಹೋದರೆ ಸರಿಯಾಗುವುದಿಲ್ಲ ಬಾ ಇನ್ನೇನು ಜಾತ್ರೆ ಬಂದೇ ಬಿಟ್ಟಿತು ಎಂದು ಮನವೊಲಿಸಿ ಕರೆದುಕೊಂಡು ಹೋಗುತ್ತಾನೆ.

ತಮ್ಮನ ಪ್ರಶ್ನೆಯ ಹಿಂದಿದ್ದ ಸಾಮಾನ್ಯವಾದ ಹಾಗು ಅಷ್ಟೇ ಮಹತ್ವವಾದ ಪ್ರಶ್ನೆಯ ಬಗ್ಗೆ  ಯೋಚಿಸುತ್ತಾ ನಿರ್ಲಿಪ್ತ  ಭಾವದಿಂದ ಅಣ್ಣ ಮುಂದುವರೆಯುತ್ತಾನೆ. ನಂತರ ತಮ್ಮನನ್ನು ಉದ್ದೇಶಿಸಿ ‘ನಮ್ಮ ದೇಶದಲ್ಲಿ ಸಂವಿಧಾನ ಎಂಬ ಒಂದು ದೊಡ್ಡ ಕಾನೂನು ಇದೆಯೆಂತೆ. ಅದರಲ್ಲಿ ಎಲ್ಲ ಜನರಿಗೂ ಒಂದೇ ನ್ಯಾಯವಂತೆ. ಮೇಲು-ಕೀಳು, ಬಡವ-ಬಲ್ಲಿದ, ಜಾತಿ-ಪಂಥ ಹೀಗೆ ಏನನ್ನೂ ಲೆಕ್ಕಿಸದೆ ಎಲ್ಲರಿಗೂ ಒಂದೇ ಸಮನಾಗಿ ರೂಪಿಸಿರುವ ಕಾನೂನಂತೆ ಅದು. ಆದರೆ ‘ಮಾನವ-ಅಮಾನವ’ ರಲ್ಲಿ ಮಾತ್ರ ಅದರಲ್ಲಿ ತಾರತಮ್ಯ ಇದೆಯಂತೆ. ಅದರಲ್ಲಿ ಮಾನವರಿಗೆ ಇರುವ ಮೂಲಭೂತ ಹಕ್ಕು ಪ್ರಾಣಿಗಳಿಗಿಲ್ಲ! ಅವರಿಗರುವ ವಾಕ್ ಸ್ವಾತಂತ್ರ್ಯ ಇವುಗಳಿಗಿಲ್ಲ, ಮಾತೇ ಬಾರದ ಮೇಲೆ ವಾಕ್  ಸ್ವಾತಂತ್ರ್ಯಕ್ಕೆಲ್ಲಿಂದ  ಬೆಲೆ ಬಿಡು. ಆದರೂ ಅದ್ಯಾರೋ ಒಂದಿಷ್ಟು ಜನ ಈ ರೀತಿ ಮಾಡುವುದು ತಪ್ಪು ಎಂದು ಹಠ ಮಾಡಿ ಅದೇನೋ ಸುಪ್ರೀಂ ಕೋರ್ಟ್’ನಿಂದ ನ್ಯಾಯ ತಂದರಂತೆ. ಆಗ ತಮ್ಮ ಮನೆಯ ಬೆಂಕಿಯನ್ನು ಆರಿಸುವ ಬದಲು ಬೇರ್ಯಾವ ಮನೆಗೆ ಬೆಂಕಿ ಬಿದ್ದಿದೆ ಎಂದು ನೋಡುವ ತೆವಲಿನ ಜನ, ಬೂತ ಬಡಿದವಂತೆ ರೊಚ್ಚಿಗೆದ್ದರಂತೆ! ಜಗತ್ತೇ ಕೊನೆಯಾದಂತೆ ವಿಲ-ವಿಲ ಒದ್ದಾಡಿಕೊಂಡರಂತೆ! ಕೆಲವರು ಇದನ್ನ ನಿಲ್ಲಿಸೋದಾದ್ರೆ ದೇವ್ರ ಹೆಸ್ರಲ್ಲಿ, ಹಬ್ಬದ ನೆಪದಲ್ಲಿ ರಾಶಿ-ರಾಶಿ ಪ್ರಾಣಿಗಳನ್ನೂ ಕಡಿಯೋದ ನಿಲ್ಲಿಸಲಿ ಎಂದು ಒಣ ಸಬೂಬನ್ನು ಕೊಟ್ಟರಂತೆ. ಅದು ದೊಡ್ಡ ಕಳ್ತನ, ಆದ್ರೆ ಇದು ಚಿಕ್ಕ ಕಳ್ತನ. ಅವ್ರ್ ಅಷ್ಟ್ ಕದ್ರೆ, ನಾವ್ ಇಷ್ಟೇ ಕದಿಯೋದು, ಏನಾಗಲ್ಲ ಬಿಡಿ ಅಂದ್ರಂತೆ! ’ ಎಂದು ಸುಮ್ಮನಾಗುತ್ತಾನೆ. ಅಷ್ಟರಲ್ಲಿ ತಮ್ಮ ತನ್ನ  ಅಣ್ಣನ ಮಾತುಗಳಲ್ಲಿ ಕಲ್ಪಿಸಿಕೊಂಡ ಜಾತ್ರೆ ಬಂದೇ ಬಿಡುತ್ತದೆ. ಆದರೆ ಅದು ತಮ್ಮನ ಎಳೆಯ ಕಲ್ಪನೆಗೂ ಮೀರಿ ದೊಡ್ಡಗಾಗಿರುತ್ತದೆ. ಅತಿ ವಿಶಾಲವಾದ ಬಯಲು ಪ್ರದೇಶದಲ್ಲಿ ಎಲ್ಲಿ ನೋಡಿದರೂ ಬಣ್ಣ ಬಣ್ಣದ ವಸ್ತ್ರವನ್ನು ತೊಟ್ಟಿರುವ ವ್ಯಕ್ತಿಗಳೇ ಹೆಚ್ಚು. ತಿಂಡಿ ತಿನಿಸುಗಳ ಅಂಗಡಿಗಳು ಇರುವ ಸ್ಥಳದಿಂದ ಘಮ್ ಎಂದು ಕರಿದ ತುಪ್ಪದ ಸುವಾಸನೆ ಒಂದೆಡೆಯಾದರೆ, ಆಗಲೇ ಕುಡಿದು ತೂರಾಡುತ್ತಿರುವ ಹೆಂಡ ಕುಡುಕರ ಹಾಗು  ಸಾರಾಯಿ ಅಂಗಡಿಗಳ ಗುಂಪು ಮತ್ತೊಂದೆಡೆ. ಅಷ್ಟರಲ್ಲಾಗಲೇ ಪಕ್ಕದ ನದಿಯ ದಂಡೆಯ ಮೇಲೆ ಅಣ್ಣ ಹೇಳುತ್ತಿದ್ದ ಹಾಗೆಯೇ ಹೋರಿಗಳನ್ನು ಓಡಿಸುವ ಆಟ ಶುರುವಾಗುವುದರಲಿತ್ತು. ಅಣ್ಣ  ಹಾಗು ತಮ್ಮ ಒಂದು ಎತ್ತರದ ಪ್ರದೇಶಕ್ಕೆ ಹೋಗಿ ನಿಂತರು. ಹೋರಿಗಳ ಮಾಲೀಕರು ಒಬ್ಬೊಬ್ಬರಾಗೆ ತಮ್ಮ ಹೋರಿಗಳನ್ನು ತರುತ್ತಿದ್ದರೆ ನೋಡುಗರು ಅವುಗಳ ಕೊಂಬು, ತಲೆ ಹಾಗು ಮೈಯನ್ನು ಮುಟ್ಟಿ ನಮಸ್ಕಾರವನ್ನು ಮಾಡುತ್ತಿದ್ದರು! ಪ್ರತಿಯೊಬ್ಬರ ಸ್ಪರ್ಶಕ್ಕೂ ಕಿವಿ ಚಟ್ಟೆಯನ್ನು ಸರ್ರನೆ ಹಿಂದಕ್ಕೆ ತಿರುಗಿಸಿ ಬಾಲವನ್ನು ತನ್ನ ಎಡಕ್ಕೂ ಬಲಕ್ಕೂ ಬಡಿಯುತ್ತಿದ್ದರೆ ಆ ಹೋರಿಯ ಕಣ್ಣಗಳಲ್ಲಿ ಅದೆಂಥಹ ಪ್ರೀತಿಯ ಭಾವ! ಇಷ್ಟೊಂದು ಮುಗ್ದ ಹೋರಿಗಳು ಹೇಗೆ ಆ ಪಾಟಿ ಮದವೇರಿ ಓಡುತ್ತವೆ ಎಂಬುದ ನೋಡಬೇಕು ಎಂಬ ಕುತೂಹಲದಿಂದ ತಮ್ಮ ಕಾಯುತ್ತಾನೆ. ಹೋರಿಗಳಿಗೆ ಪೂಜೆಯನ್ನು ಮಾಡಿ, ತಲೆಯ ಮೇಲೆ ಹರಿಶಿನ ಕುಂಕುಮವನ್ನು ಚೆಲ್ಲಿ, ಒಂದು ಕೆಂಪು ಬಟ್ಟೆಯನ್ನು ಕಟ್ಟಿ ಚೌಕಾಕಾರದ ಒಂದು ಕೋಣೆಯೊಳಗೆ ನೂಕುತ್ತಾರೆ.

ಆ ಕೋಣೆಯೊಳಗೆ ಏನಾಯಿತ್ತೆಂದು ಅರಿಯುವುದರೊಳಗೆ, ಒಳಗೆ ಹೋದ ಹೋರಿ ಒಮ್ಮೆಲೇ ಗುಟುರುತ್ತಾ ಸಿಕ್ಕ ಸಿಕ್ಕವರನ್ನೆಲ್ಲ ಕೊಂಬಿನಲ್ಲಿ ತಿವಿಯುತ್ತಾ ನುಗ್ಗಿ ಓಡುತ್ತದೆ. ಗುಂಪು ಕಟ್ಟಿದ್ದ ಜನರಲ್ಲಿ ಒಬ್ಬೊಬ್ಬರೇ ಅದರ ಮೇಲೆ ಹುಲಿಯಂತೆ ನೆಗೆದು, ಕುತ್ತಿಗೆಯ ಮೇಲೋ, ಬುಜದ ಮೇಲೋ, ಕೋತಿಗಳಂತೆ ಜೋತು ಬೀಳತೊಡಗುತ್ತಾರೆ. ತಮ್ಮ ಶಕ್ತಿಯ ಹಿರಿಮೆಯನ್ನು ಮೂಕ ಪ್ರಾಣಿಯೊಂದನ್ನು ಭಯ ಬೀಳಿಸಿ ಓಡಿಸಿ ಅದನ್ನು ತಡೆಯುವುದರ ಮುಖೇನ ವ್ಯಕ್ತಪಡಿಸಲು ಹವಣಿಸುತ್ತಾರೆ. ಆಟವೋ, ಓಟವೋ, ಭಯವೋ, ಭಕ್ತಿಯೋ, ಹೋರಿಯಂತೂ ಇದ್ದೆನೋ ಬಿದ್ದೆನೋ ಎಂದು ಓಡುತ್ತದೆ. ಸಿಕ್ಕ ಸಿಕ್ಕ ಪೊದೆಗಳೊಳಗೆ, ಹಳ್ಳ ಗುಂಡಿಗಗಳ್ಯಾವುದನ್ನು ಲೆಕ್ಕಿಸದೆ ಓಡತೊಡಗುತ್ತದೆ. ಹೀಗೆಯೇ ಓಡಿದ ಹೋರಿಯೊಂದು ದೊಡ್ಡ ಗೊಳ್ಳದ ಒಳಗೆ ಬಿದ್ದ ರಭಸಕ್ಕೆ ಅದರ ಕಾಲು ಮುರಿದು ನೇತಾಡತೊಡಗುತ್ತದೆ! ಮುರಿದ ಗೆಣ್ಣಿನ ಸಂದಿಯಿಂದ ರಕ್ತವೂ ಚಿಮ್ಮತೊಡಗುತ್ತದೆ!!

ಇತ್ತ ಕಡೆ ತಮ್ಮ ತೆರೆದ ಬಾಯಿಯನ್ನು ಹಾಗೆಯೇ ಬಿಟ್ಟು, ಕಣ್ಣುಗಳನ್ನು ಹಿಗ್ಗಿಸಿ ನಡೆಯುವುದನ್ನೆಲ್ಲ ನೋಡುತ್ತಿರುತ್ತಾನೆ. ಅಣ್ಣನ ಮೈಗೆ ಅಂಟಿಕೊಂಡು ನಿಂತಿದ್ದ ಆತನ ಎದೆಬಡಿತ ಒಂದೇ ಸಮನೆ ಹೆಚ್ಚತೊಡಗುತ್ತದೆ.

ಕಾಲು ಮುರಿದ ಹೋರಿ ಇನ್ನು ಓಡಲಾಗುವುದಿಲ್ಲ ಎಂದರಿತಾಗ ಅದರ ಮಾಲಿಕನಿಗೆ ಎಲ್ಲಿಲ್ಲದ ಕೋಪ ಹಾಗು ದುಃಖ ಒಮ್ಮೆಲೇ ಮೂಡುತ್ತದೆ. ಕೈಲಿದ್ದ ಬೆತ್ತದಿಂದ ರಪರಪನೆ ಹೋರಿಯ ಬೆನ್ನಿನ ಮೇಲೆ ಜಾಡಿಸತೊಡಗುತ್ತಾನೆ. ರಕ್ತದ ಮಡುವುನಲ್ಲಿ ನಿಂತಿದ್ದ ಹೋರಿ ಮುಂದೆ ಕದಲುವುದಿಲ್ಲ. ಸಿಟ್ಟು ಇಳಿಯುವವರೆಗೂ ಬಡಿದ ಮಾಲೀಕ, ಪಂಥ ಕಟ್ಟಿದ ಪರಿಣಾಮವಾಗಿ ಅವನಿಗೆ ಗೆಲ್ಲುವ ಅನಿವಾರ್ಯತೆಯ ನೆನಪಾಗುತ್ತದೆ. ಆತ ತಡ ಮಾಡದೆ ಎಲ್ಲರ ಬಳಿಗೂ ಹೋಗಿ ‘ಯಾವುದಾದರೂ ಒಳ್ಳೆಯ ಹೋರಿ ಇದೆಯಾ’ ಎಂದು ಅರೆ ಹುಚ್ಚನಂತೆ ಕೇಳತೊಡಗುತ್ತಾನೆ. ಎಲ್ಲರೂ ನಿರಾಕರಿಸಿದಾಗ ಅವನ ಕಣ್ಣು ಎತ್ತರದ ಜಾಗದಲ್ಲಿ ನಿಂತಿದ್ದ ಅಣ್ಣ ತಮ್ಮರ ಮೇಲೆ ಬೀಳುತ್ತದೆ! ಆತ ದಾಪುಗಾಲು ಹಾಕುತ್ತಾ  ಇತ್ತ ಕಡೆ ಬರುವುದನ್ನು ಕಂಡ ತಮ್ಮ ಅಣ್ಣನಿಗೆ ಓಡಿ ಹೋಗೋಣವೆಂದು ಹೇಳುತ್ತಾನೆ! ಅಣ್ಣ ಬೇಡವೆನ್ನುತ್ತಾನೆ. ಹತ್ತಿರ ಬಂದ ಅವನ ಮುಖದಿಂದ ಹೆಂಡದ ನಾಥ ದೊಪ್ಪನೆ ಮುಖಕ್ಕೆ ಬಡಿಯುತ್ತಿರುತ್ತದೆ. ಆತ ಹತ್ತಿರಕ್ಕೆ ಬಂದವನೇ ಅಣ್ಣನನ್ನು ದುರುಗುಟ್ಟು ನೋಡಿ, ತುಟಿಯನ್ನು ಹಲ್ಲಿನಿಂದ ಕಚ್ಚಿ, ತಾನು ಹಿಡಿದಿದ್ದ  ಕುಣಿಕೆಯ ಹಗ್ಗವನ್ನು ಅಣ್ಣನ ತಲೆಯ ಸುತ್ತ ಹಾಕಿಯೆ ಬಿಡುತ್ತಾನೆ! ಅಣ್ಣ ಒಂದೇ ಸಮನೆ ಕೊಸರಾಡ ತೊಡಗಿದರೆ ತಮ್ಮ ‘ಅಂಬಾ’ ಎನ್ನುತ ರೋಧಿಸತೊಡಗುತ್ತಾನೆ! ಒಲ್ಲದ ಮನಸ್ಸಿನ ಅಣ್ಣನನ್ನು ಮಾಲೀಕ ಆಟದಲ್ಲಿ ಓಡಿಸಲು ಎಳೆದುಕೊಂಡು ಹೋದರೆ ಇತ್ತ ತಮ್ಮನ ರೋದನೆ ಮುಗಿಲು ಮುಟ್ಟುತ್ತದೆ. ‘ಅಣ್ಣ ಹೆದರಬೇಡ, ನಾನು ಸಂವಿಧಾನದ ಕಾನೂನನ್ನು ಬಳಸಿ ನಿನ್ನನ ಬಿಡುಸ್ತಿನಿ. ಸುಪ್ರೀಂ ಕೋರ್ಟಿನಿಂದ ಆದೇಶ ತರತೀನಿ’ ಎಂದು ಬಿಕ್ಕಳಿಸುತ್ತಿದ್ದ ತಮ್ಮನ ಮಾತನ್ನು ಕೇಳಿದಾಗ ಅಲ್ಲಿದ್ದ ಚಿಳ್ಳೆ-ಪಿಳ್ಳೆ ನಾಟಿ ಹೋರಿಗಳು ಗಹಗಹಿಸಿ ನಗಲಾರಂಭಿಸಿತ್ತವೆ..

Facebook ಕಾಮೆಂಟ್ಸ್

Sujith Kumar: ಹವ್ಯಾಸಿ ಬರಹಗಾರ.
Related Post