X

ತಪೋವನದೆಡೆಗಿನ ತಪಸ್ಸಿನ ತಪೋಭಂಗ- 4

ನಾವು ಆ ಬೆಳಿಗ್ಗೆ ಜೀಪನ್ನೇರಿ ಕುಳಿತದ್ದೊಂದೇ ಬಂತು. ಇನ್ನೇನು ತಾಸು ಎರಡು ತಾಸಿಗೆಲ್ಲ ಹೃಷಿಕೇಶ ತಲುಪುತ್ತೇವೇನೋ ಎಂಬ ವೇಗದಲ್ಲಿ ಹೊರಟ ಜೀಪು ಎರಡು ಕಿಮೀ ಹೋಗುವುದರೊಳಗೆ ಗಂಟೆ ಕಳೆದಿತ್ತು. ರಾತ್ರಿ ಎಷ್ಟು ಮಳೆಯಾಗಿತ್ತೋ ಏನೋ ಎಲ್ಲ ಕಡೆಯೂ ಗುಡ್ಡ ಕುಸಿದು ಕಲ್ಲುಗಳು ರಸ್ತೆಗೆ ಬಂದು ಕುಳಿತಿದ್ದವು. ಅದಲ್ಲದೇ ಗುಡ್ಡದ ಇಳುಕಲ್ಲಿನಿಂದ ಬರುವ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿತ್ತು. ಸ್ವಲ್ಪ ಹೊತ್ತು ಅದೇ ದಾರಿಯಲ್ಲಿ  ಜೀಪ್ ನಡೆಸಿ ಇನ್ನು ಮುಂದೆ ಹೋಗುವುದು ಕಷ್ಟ ಎಂದು ಡ್ರೈವರ್ ಅನುಮಾನ ವ್ಯಕ್ತ ಪಡಿಸುವುದಕ್ಕೂ, ದಾರಿಯೇ ಮುಗಿದು ಹೋದಂತೆ ಪೂರ್ತಿ ಗುಡ್ಡವೇ ಕುಸಿದು, ರಸ್ತೆಗೆ ಬಂದು ನಿಂತ ಜಾಗ ಬರುವುದಕ್ಕೂ ಸರಿ ಹೋಗಿತ್ತು. ಡ್ರೈವರ್ ಒಂದು ಚಿಕ್ಕ ಸೇತುವೆಯ ಮೇಲೆ ಗಾಡಿ ನಿಲ್ಲಿಸಿ ತನ್ನ ಪಾಡಿಗೆ ತಾನು ಮಲಗಿದ. ಕೆಳಗಡೆ ಗಂಗೆ ಕೆಂಪು ಕೆಂಪಾಗಿ ರಭಸದ ಅಲೆಗಳಾಗಿ ಹರಿದುಹೋಗುತ್ತಿದ್ದಳು. ಹಿಂದಿನ ದಿನಕ್ಕಿಂತ ಎರಡು ಮೂರು ಪಟ್ಟು ಜಾಸ್ತಿಯೇ ಇತ್ತೇನೋ ನೀರು!! ಮಳೆ ನಿಲ್ಲುವ ಯಾವ ಸೂಚನೆಯು ಕೂಡ ಕಾಣಲಿಲ್ಲ.

   ಡ್ರೈವರ್ ನಿದ್ದೆ ಹೋಗಿದ್ದ. ಒಂದೆರಡು ಗಂಟೆ ಅಲ್ಲಿಯೇ ಕುಳಿತು ಕಾಡು ಹರಟೆಯಲ್ಲಿ ತೊಡಗಿದ್ದೆವು ನಾನು ಅಮೋಘ. ಇನ್ನು ಅಲ್ಲಿಯೇ ಕುಳಿತಿರುವುದು ಕಷ್ಟವೆನಿಸತೊಡಗಿತು. ಜೀಪಿನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಧರಾಸು ಬ್ಯಾಂಡಿನಲ್ಲಿ ಹೋಟೆಲ್ ಹಿಡಿಯೋಣವೆಂದರೆ ಜೋರಾದ ಮಳೆ. ಜೊತೆಗೆ ಬ್ಯಾಗ್ ಕೂಡ ಒದ್ದೆ ಬಟ್ಟೆಗಳಿಂದ ಬಹಳ ಭಾರವಾಗಿತ್ತು. ಸ್ವಲ್ಪ ಹೊತ್ತು ನಾವು ಕುಳಿತಲ್ಲಿಯೇ ನಿದ್ರೆ ಹೊಡೆದೆವು. ಮಧ್ಯಾಹ್ನದ ಸಮಯಕ್ಕೆ ಜೆಸಿಬಿಯೊಂದು ಬಂದು ರೋಡ್ ಓಪನ್ ಮಾಡಿತು. ಅಂತೂ ನಮ್ಮ ಪ್ರವಾಸಕ್ಕೆ ಜೀವ ಬಂತು ಎಂದುಕೊಂಡೆವು. ಆದರೆ ಆ ಪ್ರಯಾಣ ಧರಾಸುವರೆಗೆ ಮಾತ್ರ.

  ಮುಂದೆ ಎಲ್ಲ ಕಡೆ ರೋಡ್ ಬ್ಲಾಕ್ ಆಗಿದೆ. ಇಲ್ಲಿಯೇ ರೂಮ್ ಮಾಡಿರಿ. ರೋಡ್ ಓಪನ್ ಆದರೆ ಹೇಳುತ್ತೇನೆ ಎಂದಿದ್ದ ಡ್ರೈವರ್. ಸರಿ ಎಂದು ನಾವು ಇದ್ದ ಎರಡು ಒಳ್ಳೆಯ ಹೋಟೆಲ್ ಗಳಲ್ಲಿ ವಿಚಾರಿಸಿದೆವು. ಯಾವುದು ಖಾಲಿ ಇರಲಿಲ್ಲ. ಹುಡುಕಿ ಹುಡುಕಿ ಒಂದು ಮನೆಯಲ್ಲಿ ಮಹಡಿಯ ಮೇಲಿನ ರೂಮ್ ಸಿಕ್ಕಿತು. ಹಿಂದಿನ ದಿನ ಟಾಯ್ಲೆಟ್ ಎದುರು ಮಲಗಿದ ಅನುಭವವಾದ್ದರಿಂದ ಈಗ ಸಿಕ್ಕಿದ ಜಾಗ ತುಂಬಾ ಚೆನ್ನಾಗಿದೆ ಎನ್ನಿಸಿತ್ತು. ಹೊರಗೆ ಮಳೆ ಸುರಿಯುತ್ತಿದ್ದುದರಿಂದ ಓಡಾಡುವ ಅವಕಾಶ ಇಲ್ಲದೆ ಏನೋ ಒಂದಿಷ್ಟು ತಿಂದು ಮಲಗಿಕೊಂಡೆವು. ರಾತ್ರಿ ಹೊರಡುವ ಅನಿವಾರ್ಯತೆ ಬಂದರೆ ಎಂಬ ಮುಂದಾಲೋಚನೆ!!

  ನಮ್ಮಿಬ್ಬರಿಗೂ ಎಂತಹ ನಿದ್ರೆ ಎಂದರೆ ಎಚ್ಚರಾಗುವಾಗ ಸಂಜೆ 7.30. ಗಾಡಾಂಧಕಾರ, ಕರೆಂಟ್ ಕೂಡ ಇರಲಿಲ್ಲ. ಕೆಳಗೆ ಹೋಗಿ ನೋಡಿದರೆ ಜೀಪ್ ಅಲ್ಲಿಯೇ ಇತ್ತು. ಡ್ರೈವರ್ ಎಲ್ಲೂ ಕಾಣಲಿಲ್ಲ ಆದರೂ ನಮ್ಮಿಬ್ಬರನ್ನೂ ಬಿಟ್ಟಂತೂ ಹೋಗಲಿಲ್ಲ ಎಂಬ ಸಮಾಧಾನ ಮೂಡಿತು. ಮತ್ತೆ ಊಟ ಮುಗಿಸಿ ಮಲಗಿದರಾಯಿತು ಎಂದು ಹೋದೆವು. ಹೋಟೆಲ್ ಓನರ್ ಯಾರ ಬಳಿಯೋ ಮಾತನಾಡುತ್ತಿದ್ದ. “ಬಾದಲ್ ಫಟ್ ಗಯಾ (ಮೇಘ ಸ್ಫೋಟ.. ಯಾವುದೇ ಸಣ್ಣ ಪ್ರದೇಶದಲ್ಲಿ, ಅತಿ ಕಡಿಮೆ ಸಮಯದಲ್ಲಿ ಹಠಾತ್ತನೆ ಬೀಳುವ ಆಕ್ರಮಣಕಾರಿ ಮಳೆ ಎನ್ನಬಹುದೇನೋ.) ಬಹುತ್ ಜಗಹ್ ಮೇ..ಪತಾ ನಹಿ, ಕಿತನೇ ಲೋಗೋಂ ನೇ ಜಾನ್ ದೇದಿಯಾ?” ನಾವು ಏನಾಗಿದೆ ಎಂದು ಕೇಳಿದರೆ ಆ ಹೊತ್ತಿನಲ್ಲಿ ಅವರಿಗೂ ಕೂಡ ಪೂರ್ಣ ಮಾಹಿತಿ ಇರಲಿಲ್ಲ.

   ನಾವು ಊಟ ಮುಗಿಸಿ ಮಲಗಿದೆವು. ಮರುದಿನ ಎದ್ದಾಗ ಕೂಡ ವಾತಾವರಣದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. “ಅಮೋಘ, ಮಳೆ ಇದ್ದರೆ ಇರಲಿ, ನಡಿ ಹೋಗಿ ಅಡ್ಡಾಡಿ ಬರೋಣ.. ಏನಾಗಿದೆ ಎಂದು ತಿಳಿಯುತ್ತದೆ ಎಂದು ರೂಮಿನಿಂದ ಕೆಳಗಿಳಿದು, ಮಳೆ ತಾಗದಿರಲೆಂದು ಪ್ಲಾಸ್ಟಿಕ್ ಕೊಪ್ಪೆ ಜೊತೆಗೆ ಕಾಲಿಗೆ ಚಪ್ಪಲಿ ತೆಗೆದುಕೊಂಡು ಹೊರಬಿದ್ದೆವು. ಮಳೆ ಒಂದೇ ಸಮನೆ ಹೊಯ್ಯುತ್ತಿತ್ತು. ಗಂಗೋತ್ರಿಯ ಗುಡ್ಡ ಹತ್ತದಿದ್ದರೇನು ಇಲ್ಲಿಯೇ ಯಾವುದಾದರೂ ಗುಡ್ಡ ಹತ್ತೋಣ ಎಂದು ಒಂದು ಸಣ್ಣ ಟ್ರೆಕಿಂಗ್ ಮಾಡಿದೆವು. ನಂತರ ಗುಡ್ಡ ಇಳಿದು ಗಂಗೆಯ ಮಡಿಲಿಗೆ ಹೋಗಿ ಆಟ ಆಡುವ ಸಾಹಸವನ್ನು ಮಾಡಿದೆವು.

  ಮಧ್ಯಾಹ್ನ ಒಂದು ಗಂಟೆಯ ಸಮಯಕ್ಕೆ ಹೋಟೆಲ್ಲಿನ ಬಳಿ ಬಂದಾಗ “ಇನ್ನೂ ಹದಿನೈದು ದಿನವೇ ಬೇಕೇನೋ ರಸ್ತೆ ಸರಿಯಾಗಲು, ಕೇದಾರನಾಥದ ಬಳಿ ಪ್ರವಾಹ ಉಂಟಾಗಿ ನೀರು ಎಲ್ಲೆಲ್ಲೂ ದಾಂಧಲೆ ಮಾಡಿ ಸಾವಿರಗಟ್ಟಲೆ ಜನ ನಾಪತ್ತೆಯಾಗಿದ್ದರಂತೆ.ಉತ್ತರಕಾಶಿಯಲಿ ಕೂಡ ಹೀಗೆ ಅಂತೆ”. ಏನೇನೋ ಅಂತೆ ಕಂತೆಗಳ ಸುದ್ದಿ. ನಾವಿರುವುದು ಧರಾಸು ಬ್ಯಾಂಡ್. ಅಲ್ಲಿ ಅಷ್ಟೇನು ಅನಾಹುತವಾಗಿರಲಿಲ್ಲ. ಮುಂದೆ ಬಹಳ ದೊಡ್ಡ ಡ್ಯಾಮ್ ಇರುವುದರಿಂದ ನೀರು ಸರಿಯಾಗಿ ಹರಿಯಲು ಜಾಗ ಇದ್ದಿದ್ದರಿಂದ ಆಗಬೇಕಾದ ಅನಾಹುತ ತಪ್ಪಿದೆ ಎನ್ನುತ್ತಿದ್ದರು ಜನ. ರುದ್ರ ಪ್ರಯಾಗ, ದೇವ ಪ್ರಯಾಗ, ಕರ್ಣ ಪ್ರಯಾಗದ ಕಡೆ ನೀರು ನುಗ್ಗಿದೆ ಎನ್ನುವ ಸುದ್ದಿಗಳು. ಎಷ್ಟೋ ಮನೆಗಳು ಕೊಚ್ಚಿಹೋದವು ಎಂಬ ಮಾತುಗಳು.

  ಮನೆಗೆ ಫೋನ್ ಕೂಡ ತಾಗುತ್ತಿಲ್ಲ. ಅವರೆಷ್ಟು ಹೆದರಿಕೊಂಡಿದ್ದಾರೋ ಎನ್ನಿಸಿತು ಒಮ್ಮೆ. ಜೊತೆಗೆ ಹದಿನೈದು ದಿನ ರಸ್ತೆ ಓಪನ್ ಆಗದಿದ್ದರೆ ನಾವು ಮನೆ ಸೇರುವುದು ಹೇಗೆ? ಇಷ್ಟೆಲ್ಲ ಅನಾಹುತವಾಗಿರುವುದು ನಿಜವಾ??
ಈಗಷ್ಟೇ ನಾವು ಆಡಿಕೊಂಡು ಬಂದ ಗಂಗೆಯಲಿ ನೀರು ಉಕ್ಕಿಬಂದಿದ್ದರೆ..!? ಒಮ್ಮೆಲೇ ಮೈ ಸಣ್ಣಗೆ ಕಂಪಿಸಿತು.

  “ಅಮೋಘ, ಇನ್ನು ಇಲ್ಲಿ ಕುಳಿತರೆ ಆಗುವುದಿಲ್ಲ.. ಆದದ್ದಾಗಲಿ, ನಡೆದು ಹೊರಟು ಬಿಡೋಣ.. ಎಷ್ಟಾಗುತ್ತದೆಯೋ ಅಷ್ಟು.. ” ಎಂದೆ. ಅವನಿಗೂ ನಡೆದು ಹೋಗುವ ಆಲೋಚನೆಯೇ ಸರಿ ಎನ್ನಿಸಿದ್ದರಿಂದ ರೂಮ್ ಹೋಗಿ ಬ್ಯಾಗ್ ಬೆನ್ನಿಗೇರಿಸಿದೆವು. ಅದನ್ನು ಹೊತ್ತು ನಡೆಯುವುದು ಸಾಧ್ಯವಿರಲಿಲ್ಲ. ಒದ್ದೆಯಾದ ಚಾದರ, ಜೀನ್ಸ್ ಎಲ್ಲವನ್ನು ಅಲ್ಲಿಯೇ ತೆಗೆದಿಟ್ಟು, ಹಾಕಿಕೊಂಡು ಬಂದ ಶೂವನ್ನು ಬ್ಯಾಗೊಳಗೆ ಹಾಕಿ, ಚಪ್ಪಲಿ ಹಾಕಿ ನಡೆಯಲು ಪ್ರಾರಂಭಿಸಿಯೇ ಬಿಟ್ಟೆವು. ಹಾಗೊಂದು ವೇಳೆ ನಾವು ರಸ್ತೆ ಸರಿಯಾಗುತ್ತದೆಂದು ಕಾಯುತ್ತಿದ್ದರೆ ಹದಿನೈದು ದಿನವಲ್ಲ.. ತಿಂಗಳೇ ಕಳೆಯುತ್ತಿತ್ತು.

  ನಡೆಯುತ ಹೊರಟ ನನಗೆ ಹಿಮಾಲಯದ ಗುಡ್ಡಗಳ ನಿಜ ಪರಿಸ್ಥಿತಿ ಅರ್ಥವಾಗತೊಡಗಿತು. ನೀರು ಬಂದಲ್ಲೆಲ್ಲ ಬಂಡೆ ಕಲ್ಲುಗಳು ಉರುಳಿ ಬಂದು ರಸ್ತೆಗೆ ಬಿದ್ದಿದ್ದವು. ಒಂದು ಕಡೆಯಂತೂ ನಾವು ನೋಡುತ್ತಿದ್ದಂತೆ ಕಲ್ಲು ನಮ್ಮ ಕಡೆಯೇ ಉರುಳಿ ಬರುತ್ತಿತ್ತು. ಎತ್ತ ಕಡೆ ಓಡಬೇಕು ಎಂಬ ಸಂದಿಗ್ಧದಲ್ಲಿದ್ದಾಗಲೇ ಆ ಕಲ್ಲು ಎದುರು ಸಿಕ್ಕ ದೊಡ್ಡ ದೊಡ್ಡ ಕಲ್ಲಿಗೆ ಬಡಿದು ಚೂರು ಚೂರಾಗಿ ಸಿಡಿದಾಗ ಹೋದ ಉಸಿರು ಬಂದಂತಾಗಿತ್ತು. ಮುಂದಿನ ಒಂದೇ ಕ್ಷಣಕ್ಕೆ ನಾವಿಬ್ಬರು ಅಲ್ಲಿಂದ ದೂರ ಓಡಿದ್ದೆವು. ಸಂಜೆ ಆರು ಘಂಟೆಯವರೆಗೆ ನಡೆಯುತ್ತಾ ಹತ್ತು ಕಿಮೀ ಬಂದಿದ್ದೆವು. ಅದಾಗಲೇ ಕತ್ತಲಾಗಿದ್ದರಿಂದ ದಾರಿಯ ಬದಿಯ ಸಣ್ಣ ಹಳ್ಳಿಯಲ್ಲೇ ಉಳಿದೆವು.

  ಆ ಮಂಜು, ಆ ಮಳೆ, ಆ ಹಸಿರು. ಸಾವಿರಗಟ್ಟಲೆ ಜನರ ಉಸಿರು ಕಸಿದುಕೊಂಡ ಆ ದಿನ ನಮಗೆ ಮಾತ್ರ ಸುಂದರವಾಗಿಯೇ ಇತ್ತು. ನಾವಿರುವ ಪರಿಸ್ಥಿತಿಗಳು ಮಾತ್ರ ನಮಗೆ ಬದುಕು ಕಟ್ಟಿಕೊಡುತ್ತವೆ ಎಂಬ ಮಾತು ಎಷ್ಟು ನಿಜ.

  ಕೆಂಪಾಗಿ ಹರಿಯುತ್ತಿರುವ ಗಂಗೆಯಲ್ಲಿ ನಾವು ಮಕ್ಕಳಂತೆ ಆಡಿದ ಕ್ಷಣದಲ್ಲೇ ಅಲ್ಲೆಲ್ಲೋ ಅದೆಷ್ಟು ಜನರನ್ನು, ಮಕ್ಕಳನ್ನು ಆಹುತಿ ತೆಗೆದುಕೊಂಡು ಬಿಟ್ಟಿತ್ತು ಅದೇ ನೀರು!! ಅದೆಲ್ಲ ವಿಷಯಗಳು ಅಲ್ಲಿದ್ದಾಗ ನನಗೆ ತಿಳಿದದ್ದಲ್ಲ.. ಹಾಗೊಂದು ವೇಳೆ ನಾನು ಉತ್ತರಕಾಶಿ ತಲುಪಿ, ಬೆಳಗಿನ ಜಾವಕ್ಕೆ ಇದೇ ಗಂಗೆಯಲ್ಲಿ ತೇಲಿ ಹೋಗಿದ್ದರೂ ಕೂಡ ಇವೆಲ್ಲ ನನಗೆ ತಿಳಿಯುತ್ತಿರಲಿಲ್ಲವೇನೋ..? ಆದರೆ ನಾನು ಬದುಕಿ ಬಂದಿದ್ದೇನೆ. ಆ ಹುಚ್ಚು ಮಳೆಯನ್ನು, ಗುಡ್ಡವನ್ನು,  ಮಣ್ಣಿನೊಳಗೆ ಹೂತು ಹೋಗಿರುವ ಮನೆಗಳನ್ನು ಕಂಡು ಬಂದಿದ್ದೇನೆ. ಅಲ್ಲದೆ ವಾಪಸ್ ಬಂದು ಟಿವಿಯಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳನ್ನು, ತಿಂಗಳುಗಟ್ಟಲೆ ನಡೆದ ರೆಸ್ಕ್ಯೂ ಆಪರೇಷನ್ ಗಳನು ನೋಡುವಾಗ ಜೀವನದ ಪಾಠಗಳು ಒಂದೊಂದಾಗಿ ಅರಿವಾದವೇನೋ..

   ಮುಂಚೆಯೇ ಮಾತನಾಡಿಕೊಂಡಂತೆ ಮರು ದಿನ ಬೆಳಿಗ್ಗೆ ಐದಕ್ಕೆಲ್ಲ ಎದ್ದು ಮತ್ತೆ ಪಯಣ ಪ್ರಾರಂಭಿಸಿದ್ದೆವು. ಆ ದಿನ ಮಳೆ ಪೂರ್ತಿಯಾಗಿ ಕಡಿಮೆಯಾಗಿತ್ತು. ಸೂರ್ಯ ಕೂಡ ಮೋಡದಿಂದ ಹೊರಬಂದು ಬೆಳಕು ಚೆಲ್ಲಿದ್ದ. ನಾವು ಅಂದು ನಡೆದ ದಾರಿಯಲ್ಲಿ ಕೂಡ ಅದೆಷ್ಟೋ ನೋವಿನ ಕಥೆಗಳು. ಒಂದು ಕಡೆಯಂತೂ ರಸ್ತೆಯೇ ಇಲ್ಲದಂತೆ ಕೊಚ್ಚಿಕೊಂಡು ಹೋಗಿತ್ತು. ರಸ್ತೆಯ ಮೇಲೆ ಬಿದ್ದಿರುವ ಕಲ್ಲು, ಹರಿಯುತ್ತಿರುವ ನೀರಂತೂ ಸಾಮಾನ್ಯವಾಗಿತ್ತು. ಗುಡ್ಡದ ನೀರು ಕುಡಿಯುತ್ತ, ಎದುರಿನಲ್ಲಿ ಸಿಕ್ಕವರನ್ನು ವಿಚಾರಿಸುತ್ತಾ, ಅದೆಷ್ಟೋ ಶಾರ್ಟ್ ಕಟ್ ಗಳನ್ನೂ ಹುಡುಕಿ ಅಂದು ಕ್ರಮಿಸಿದ್ದು 20 ಕಿಮೀ. ಅಲ್ಲಿಂದ ಒಂದು ಜೀಪ್ ಸಿಕ್ಕಿತು. ಎಲ್ಲಿಯವರೆಗೆ ಹೋಗುತ್ತದೆಯೋ ಅಲ್ಲಿಯವರೆಗೆ ಕರೆದುಕೊಂಡು ಹೋಗುತ್ತೇನೆ. ಆಕಡೆ ಬೇರೆ ಜೀಪಿನವರು ಕರೆದುಕೊಂಡು ಹೋಗುತ್ತಾರೆ ಎಂದ. ನಡೆದು ರೂಢಿಯಿಲ್ಲದ ಕಾಲುಗಳು ಊದಿಕೊಂಡಿದ್ದವು. ಜೀಪ್ ಹತ್ತಿ ಕುಳಿತೆವು. ಅಲ್ಲಲ್ಲಿ ಜೀಪ್ ಇಳಿದು ಹೂತಿದ್ದ ಜೀಪ್ ಅನ್ನು ದೂಡುವ ಪರಿಸ್ಥಿತಿ ಬರುತ್ತಿತ್ತು. ಮನೆಗೆ ಹೋಗುವ ಆತುರ, ಉಳಿದವರ ಸಾವಿನ ಸೂತಕದ ಆತಂಕಗಳ ನಡುವೆ ಚಿಕ್ಕ ಪುಟ್ಟ ಕಷ್ಟಗಳು ಕಷ್ಟಗಳಾಗಿ ನಿಲ್ಲಲಿಲ್ಲ. ಅಂದು ಸಂಜೆಹೊತ್ತಿಗೆಲ್ಲ ಮತ್ತೆ ಹೃಷಿಕೇಶ ತಲುಪಿದ್ದೆವು. ಸಿಗ್ನಲ್ ಸಿಕ್ಕಾಗ ಮನೆಗೆ ಫೋನ್ ಮಾಡಿದಾಗ ತಿಳಿಯಿತು ಅವರೆಲ್ಲ ಎಷ್ಟು ಕಳವಳಗೊಂಡಿದ್ದರು ಎಂದು.

 ಬಾವಿಯ ಕಪ್ಪೆಯಂತೆ ಇದ್ದ ನಮಗೆ ಹೊರಗೆ ಏನು ನಡೆದಿದೆ ಎಂಬುದೇ ತಿಳಿದಿರಲಿಲ್ಲ. ಅಂತೂ ಮನೆಯವರಿಗೆಲ್ಲ ಸಮಾಧಾನ ಹೇಳಿ, ದೆಹಲಿಯ ಬಸ್ ಏರಿ ಕುಳಿತಾಗ ಶೂನ್ಯ ಭಾವ ಕವಿದಿತ್ತು. ಗಂಗೋತ್ರಿಯ ತಾವು ಸೇರದೆ ಶೂನ್ಯ ಭಾವ ಏನು ಎಂಬುದು ಅರಿವಾಯಿತಲ್ಲ ಎಂದು ಅಡ್ಡ ದನಿಯೊಂದು ಕೂಗಿಕೊಂಡಿತು. ಉಳಿದ ಸಮಯವಾದರೆ ನಗು ಬರುತ್ತಿತ್ತೇನೋ.. ಆದರೆ ಅದೆಷ್ಟೋ ಜನರ ಸಾವಿನ ಸುದ್ದಿ ಕೇಳಿ ಮನಸ್ಸಿಗೆ ಸೂತಕದ ಛಾಯೆ ಆವರಿಸಿಕೊಂಡಿತ್ತು. ಮನಸ್ಸಿನಲ್ಲೂ, ಮುಖದಲ್ಲೂ ನಗು ಮೂಡುವ ಶಕ್ತಿ ಇರಲಿಲ್ಲ. ದೆಹಲಿ ತಲುಪಿ ರೂಮ್ ಸೇರಿದಾಗ ಉಳಿದವರೆಲ್ಲರೂ ಬಹಳ ಖುಷಿ ಪಟ್ಟರು.

  “ಅಮೋಘ, ಇನ್ನೊಂದು ದಿನ ಖಂಡಿತವಾಗಿಯೂ ತಪೋವನ ತಲುಪೋಣ..” ಎಂದು ಬೆನ್ನು ತಟ್ಟಿದೆ. ಅವನೂ ನಸುನಕ್ಕ. ಆ ದಿನ ಇನ್ನೂ ಬಂದಿಲ್ಲ. ಆದರೆ ಗಂಗೋತ್ರಿಯ ಮಡಿಲಿಗೆ ಮಾತ್ರ ಆರು ತಿಂಗಳ ನಂತರ ಡಿಸೆಂಬರ್ ನಲ್ಲಿ ಹೋಗಿದ್ದೆವು. ಮೊದಲ ನಡೆದ ಪ್ರಳಯದ ಛಾಯೆ ಉತ್ತರಕಾಶಿಯಿಂದ ಗಂಗೋತ್ರಿಯವರೆಗೂ ಕಾಣಿಸುತ್ತಿತ್ತು. ಪ್ರಳಯದ ಕಥೆಗಳು ಜನಮಾನಸದಲ್ಲಿ ಹಾಗೆಯೇ ಬೇರು ಬಿಟ್ಟಿತ್ತು.

  ಅದರ ಬಗ್ಗೆ ಮುಂದೊಂದು ಸಂಚಿಕೆಯಲ್ಲಿ ಬರೆಯುತ್ತೇನೆ. ತಪೋವನ ನೋಡಬೇಕೆಂಬ ನನ್ನ ಅಪೂರ್ವ ಆಸೆಯಂತೂ ಇನ್ನು ಹಾಗೆ ಉಳಿದು ಬಿಟ್ಟಿದೆ.
………………………………………
ಮುಗಿಯಿತು

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post