ಇಲ್ಲಿ ನಾನೆಂದರೆ ನಾನಲ್ಲ!! ಅಜ್ಜನೆಂದರೆ ಅದೂ ಅವನಲ್ಲ.. ಕಾಲವೇ ನಿರ್ಣಯಿಸುವ, ಎಲ್ಲರೂ ತಲೆ ಬಾಗಲೇ ಬೇಕಿರುವ ಜಗತ್ತಿನ ವಾಸ್ತವ ಸತ್ಯ. ನಿಜವೇ! ಮನುಷ್ಯ ಹೆಚ್ಚು ಹೆಚ್ಚು ವಿಮರ್ಶೆ ಮಾಡಿದಂತೆ, ಅರ್ಥೈಸಿಕೊಳ್ಳೊ ಪ್ರಯತ್ನ ಮಾಡಿದಂತೆ ಒಳಗಿನ ಜ್ಞಾನವೆಂಬ ಕವಾಟ ತೆರೆದು ತನ್ನ ಹತ್ತಿರದ ವಾಸ್ತವ ಸತ್ಯಕ್ಕೆ ತಲೆ ಬಾಗುತ್ತಾನೆ, ಅಲ್ಲಿಯವರೆಗೂ ಕಣ್ಣು ತೆರೆದಂತಿದ್ದರೂ, ಮಿಥ್ಯದ ಒಡನಾಟದಲ್ಲೇ ಇದ್ದು ಬಿಡುತ್ತಾನೆ. ಮತ್ತು ತಾನಿರುವ ತಾಣ, ಹೋಗುತ್ತಿರುವ ದಾರಿ ಎಲ್ಲವೂ ಸರಿಯಾಗಿಯೇ ಇದೆಯೆಂಬ ಭ್ರಮಾ ಲೋಕದ ಭರವಸೆಯಲ್ಲಿ ಉಳಿದು ಬಿಡುತ್ತಾನೆ. ಇವೆಲ್ಲದರಿಂದ ಹೊರತಾದವರು ಕೆಲವರಷ್ಟೇ!! ಅವರೆಲ್ಲರೂ ಹೇಳುವುದಷ್ಟನ್ನೂ ಹೇಳಿ, ಮನುಕುಲಕ್ಕೆ ಹೊಸ ಮಾರ್ಗ ತೋರಿಸಿ ನಡೆದೇ ಬಿಟ್ಟರೂ… ಆದರೇ ಆ ಮಾರ್ಗ ಮತ್ತೆ ಅದರ ಆಳ ಅಗಲಗಳನ್ನ ಅರ್ಥ ಮಾಡಿಕೊಂಡವರು, ಪಾಲಿಸಿದವರು ಬೆರಳೆಣಿಕೆಯಷ್ಟೇ ಅನ್ನೋದು ವಿಪರ್ಯಾಸ.
ಸಾಯಂಕಾಲದ ಆರಕ್ಕೇ ಭಾಸ್ಕರನ ಬೀಳ್ಕೊಟ್ಟು ಸಮುದ್ರ ದಡದ ಮರಳಿನ ರಾಶಿಯ ಮೇಲೆ ಹವಾಯಿ ಚಪ್ಪಲಿ ಹಾಕಿಕೊಂಡು, ಜೀನ್ಸ್ ಪ್ಯಾಂಟ್ ಮೊಣಕಾಲಿನಷ್ಟು ಮಡಚಿಕೊಂಡು ಸಿ. ಅಶ್ವಥ್ ರ *ಕಾಣದ ಕಡಲಿಗೆ ಹಂಬಲಿಸಿದೆ ಮನ* ಅನ್ನೋ ಹಾಡನ್ನ ಗೊಣಗುತ್ತಾ ಸಾಗುತಲಿದ್ದೆ. ಇದೇನೊ ಹವ್ಯಾಸ! ನನ್ನ ಅದೃಷ್ಟ ಕ್ಕೆ ಎಲ್ಲಾ ಬದುಕಿನ ಜಂಜಾಟಗಳನ್ನ ಕೆಲವು ಕ್ಷಣಕಾದರೂ ಮರೆಸುವ ಅದ್ಭುತ ತಾಕತ್ತಿರುವ ಸಮುದ್ರದ ದಡದ ತಂಗಾಳಿ ಬೀಸೊ ಸುಂದರ ಪರಿಸರ ಕರಾವಳಿಯ ತಪ್ಪಲಲ್ಲೇ ನನ್ನ ಮನೆ. ಹಾಗೆ ಸಾಗುತ್ತಿರುವಾಗಲೇ ಮೊನ್ನೆ ಮದುವೆ ಊಟದ ಪಾಯಸ ತಗುಲಿ ಕಲೆಯಾದ ನನ್ನ ಹೊಸ ಹಸಿರು ಬಣ್ಣದ ಅಂಗಿಯ ಮೇಲೆ ಗಮನ ತಿರುಗಿದಾಗಲೇ ಹೊಸ ಆಲೋಚನೆಗಳು ನಾಂದಿಯಾದವು.
ಸರಿಯಾಗಿ ಅದೇ ಕ್ಷಣಕ್ಕೆ ಎದುರುಗಡೆ ಹಣ್ಣು ಹಣ್ಣು ಮುದುಕರೊಬ್ಬರು ಬಂದು ಏನೊ ತಮ್ಮಾ ಸಂಗೀತದ ಹುಚ್ಚೆ?? ನನ್ನ ಜೊತೆ ಕೂಡಿ ನಡೆಯುವಂತೆ ಬಾ ಎಂದಾಗ, ನಂಗೂ ಜೊತೆಗಾರರೊಬ್ಬರು ಸಿಕ್ಕರೆಂಬ ಖುಷಿಯೊಂದಿಗೆ ಮುಂದಡಿಯಿಟ್ಟದ್ದಾಯಿತು. ಆ ತಾತನೋ ಎಂಭತ್ತರ ಆಸು ಪಾಸು. ಮುಖದ ಮೇಲಿನ ಚರ್ಮವೆಲ್ಲಾ ಇಸ್ತ್ರಿ ಮಾಡಿ ಮಡಚಿದ ಕಾಟನ್ ಬಟ್ಟೆಯ ಮೇಲಿನ ಗೇರೆಗಳಂತೆ ಕಾಣಿಸುತ್ತಿದ್ದವು. ಮಾಂಸವೆಲ್ಲಾ ಮಾಸಿ ಮೂಳೆಯನ್ನೂ ಎಣಿಸಲು ಸಾಧ್ಯವೆನಿಸುತ್ತಿತ್ತು. ತಾತನ ಆ ಕುಬ್ಜ ದೇಹ ನೋಡಿ ನನ್ನ ಮುಖದ ಮೇಲೆ ಕೈ ಇಟ್ಟುಕೊಂಡು ಕೆನ್ನೆ ಗಿಲ್ಲಿದೆ!! ಅಬ್ಬಾ ಇನ್ನು ಏನೂ ಆಗಿಲ್ಲ.. ಆಮೇಲೆ ಮೊಬೈಲ್ ತೆಗೆದು ಮುಂಭಾಗದ ಕ್ಯಾಮರಾದಲ್ಲಿ ನನ್ನ ಮುಖ ನೋಡಿಕೊಂಡೆ. ಆದರೂ ಆ ಕುಬ್ಜ ಅಜ್ಜನ ದೇಹ ನನ್ನ ಮುಖ, ನನ್ನ ಹಸಿರು ಬಣ್ಣದ ಅಂಗಿಯ ಮೇಲಿನ ಪಾಯಸದ ಕಲೆ ಹೀಗೆ ಎಲ್ಲವೂ ಸೇರಿಕ್ಕೊಂಡು ಏನನ್ನೋ ಹೇಳಲು ಹೊರಟಿವೆಯೇನೋ ಅನ್ನಿಸುತಿತ್ತು. ತಾತನನ್ನು ಮಾತಡಿಸಲು ಶುರುವಿಟ್ಟೆ, ಹೆಸರು-ಮನೆ ಕೇಳಿದಾಗಲೇ, ಓ ಅಲ್ಲೊ ಎಲ್ಲೊ ಇದೆ ಮನೆ, ವಯಸ್ಸಾಯಿತು ತಮ್ಮಾ ವಿಳಾಸ ಮರೆತು ಬಿಟ್ಟಿದ್ದೇನೆ ಅಂದಾಗಲೇ ಕಣ್ಣುಗಳೆರಡನ್ನೂ ಅಗಲಿಸಿ ಸ್ತಬ್ಧವಾದೆ. ವಯಸ್ಸಿನ ತಮಾಷೆ ನೋಡು ನಿನಗಿನ್ನೂ ಮುಖದ ತುಂಬಾ ಕಳೆ ಇದೆ, ಮೈ ತುಂಬಾ ರಕ್ತ ಇದೆ, ನನ್ನದೆಲ್ಲಾ ಮಾಸಿ ಹೋಗಿದೆ, ಕುಬ್ಜತೆ ಆವರಿಸಿ ಬಿಟ್ಟಿದೆ. ಈ ಬಿದ್ದು ಹೋಗುವ ಬಡ ಜೀವಕ್ಕೆ ಯಾವ ಮನೆ, ಯಾವ ವಿಳಾಸ. ಎಲ್ಲಾ ಸುಳ್ಳಿನ ಹಿಂದಿರುವ ಪರಮ ಸತ್ಯ ನೋಡು ಈ ನನ್ನ ದೇಹ. ಏನು ಮಾಡೋದು ನನ್ನ ಎಲ್ಲಾ ಸಂಪತ್ತನ್ನು ಜಗತ್ತಿನಿಂದ ಮುಚ್ಚಿಟ್ಟೇ, ಕಾಲನ ನಿರ್ಣಯ- ಸಾವಿನ ಸಾಮಿಪ್ಯ ಈ ನನ್ನ ಆಯುಷ್ಯದ ಕೊನೆಗಾಲಕ್ಕೆ ಭಗವಂತ ಕೊಟ್ಟ ದೇಹ ಸೌಂದರ್ಯ ಮಾತ್ರ ಯಾವ ಬಣ್ಣದಿಂದಲೂ ಮುಚ್ಚಿಡಲಾಗಲಿಲ್ಲ. ಅನ್ನುತ್ತಾ ಆ ಅಜ್ಜ ಮಾತಾಡುತ್ತಲೇ ಇದ್ದ.
ಹೌದು, ಅಜ್ಜನ ಬಾಯಿಂದ ಬರುತ್ತಿದ್ದ ಎಲ್ಲಾ ಶಬ್ದಕ್ಕೂ ತೂಕದ ಅರ್ಥವಿತ್ತು. ಅವೆಲ್ಲದರ ಹಿಂದೆ ನನಗೆ ಒಪ್ಪಲು ಕಹಿಯೆನಿಸುವ ಕೊನೆಗೂ ಒಪ್ಪದೇ ವಿಧಿಯಿಲ್ಲ ಎನ್ನುವಂತ ಕಠೋರ ಸತ್ಯದ ಛಾಪು ಇತ್ತು. ನೋಡ ನೋಡುತ್ತಲೇ ಅಜ್ಜನ ಕಣ್ಣು ನನ್ನ ಹಸಿರು ಬಣ್ಣದ ಅಂಗಿಯ ಮೇಲಿನ ಪಾಯಸದ ಕಲೆಯ ಮೇಲೆ ಹರಿಯಿತು. ಹೊಸ ಬಟ್ಟೆಯ ಮೇಲೆ ಕಲೆಯಾಗಿದೆಯಲ್ಲಾ ನೋವಾಯ್ತ ಕೇಳಿದಾಗ ತಲೆಯಾಡಿಸುತ್ತಲೆ ಮುಂದೆ ಸಾಗಿದೆ. ಹಾಗೆಯೇ ಬದುಕು, ಇಲ್ಲಿ ಅಂಗಿಗೊಂದು ಬಣ್ಣ, ಪಾಯಸಕ್ಕೊಂದು ಬಣ್ಣ, ಎರಡೂ ಬಣ್ಣವೇ ಆದರೂ ಇಷ್ಟ ಪಟ್ಟು ಸೇರಿಸಿದರೇ ಮಾತ್ರವೇ ಕಾಮನಬಿಲ್ಲು, ಇಷ್ಟವಿಲ್ಲದೇ ನಡೆಯೋದೆಲ್ಲಾ ನೋವನ್ನೀಯುವುದೆ ಕಣೊ ತಮ್ಮಾ ಅಂತ ಅಜ್ಜ ಹೇಳೊವಾಗ ನನ್ನೊಳಗೆ ಕಂಪನಗಳು ಶುರುವಾಗಿದ್ದವು. ನನ್ನ ಯೋಚನೆಯ ಮಟ್ಟವನ್ನೂ ಮೀರಿದ ಸಂಗತಿಗಳಿಗೆ ಕಿವಿಗೊಡುತ್ತಿದ್ದೇನೆ, ಜೀರ್ಣಿಸಲಾಗದ ವಿಚಾರಗಳಿವು ಅಜೀರ್ಣವಾಗದೆ ಇದ್ದರೆ ಸಾಕೆನ್ನುವ ಭಾವನೆಯಲ್ಲಿ ನಡೆಯುತ್ತಿದ್ದೆ.
ಅಜ್ಜನ ಕೈಯಲ್ಲಿನ ಬಿದಿರಿನ ಗೂಟ, ಪಾದ ಸವೆದು ಹೋಗಿರುವ ಪ್ಯಾರಗಾನ್ ಚಪ್ಪಲಿ, ಅರ್ಧ ತೋಳಿನ ಉದ್ದ ಅಂಗಿ, ಬಿಳಿ ಬಣ್ಣದ ಪಂಚೆಯ ಮೇಲಿನ ಮೂರ್ನಾಲ್ಕು ತೂತುಗಳು, ಹತ್ತಾರು ಹಳದಿ ಕಲೆಗಳು ಆತನ ಪರಿಚಯ. ದಾರಿಯುದ್ದಕ್ಕೂ ಮಾತಾಡುತ್ತಲೇ ಇದ್ದ ಅಜ್ಜ ಒಮ್ಮಿಂದೊಮ್ಮೇಲೆ ನನಗೆ ಗುರುವಿನಂತೆ ಕಾಣಿಸ ತೊಡಗಿದ. ಹತ್ತಾರು ಬಗೆಯ ಸುಗಂಧ ದ್ರವ್ಯ, ಬಗೆ ಬಗೆಯ ಧಿರಿಸು, ಎರಡೆರೆಡು ಇಂಚಿಗು ಹೆಚ್ಚು ಬಳಿದುಕೊಳ್ಳುತ್ತಿದ್ದ ಸೌಂದರ್ಯ ವರ್ಧಕಗಳು ಇನ್ನೆಷ್ಟು ದಿನ ಅಂತನಿಸೋಕೆ ಶುರುವಾಯ್ತು. ಅಜ್ಜನ ದಾಟಿಯಲ್ಲಿ ಗಾಂಭೀರ್ಯ ಇತ್ತು, ನಡಿಗೆಯಲ್ಲು ಸ್ಥಿರತೆ ಇತ್ತು. ಅಜ್ಜನ ಬಿದಿರು ಕೋಲಿನ ಊರುವಿಕೆಯ ಸದ್ದು ಮರಳಿನ ಮೇಲೂ ಟಕ್_ಟಕ್ ಎಂಬ ಸದ್ದಿನೊಂದಿಗೆ ನನ್ನ ಆಂತರ್ಯದ ಸುಳ್ಳಿನ ಮುಖವಾಡಕ್ಕೆ ಇಡುತ್ತಿರುವ ಏಟೇನೋ ಎನಿಸುತ್ತಿತ್ತು.
ಕತ್ತಲೂ ಕವಿದಂತೆ ಸಮುದ್ರದ ನೀರಿನ ನಡುವೆ ಆಕ್ರಂದನಗಳು ಹೆಚ್ಚಾಗುತ್ತದೆ, ಚಂದಿರನ ಸ್ವಾಗತಕ್ಕೆ ಅಣಿಯಾಗೋ ಸಮುದ್ರದ ನೀರಿನ ಅಲೆಗಳು ತಾ ಮುಂದು ತಾ ಮುಂದು ಎಂದು ದಡಕ್ಕೆ ಅಪ್ಪಳಿಸಲು ಓಡಿಬರ ತೊಡಗಿದವು. ಅಜ್ಜನ ಕಾಲಿಗೆ ಬಡಿದು ಹೋಗುತ್ತಿದ್ದರು ಅರಿವಿಲ್ಲದೆ ವೈರಾಗಿಯಂತೆ ಸಾಗುತ್ತಲೇ ಇದ್ದ. ದಡೆಯ ಮೇಲಿನ ಒಣ ಮರವೊಂದು ಅಜ್ಜ ತೋರಿಸಿದ. ಅದನ್ನ ನೋಡು ನನ್ನ ಹಾಗೆ ಎಲೆಗಳು ಉದುರಿ, ಒಣಗಿ ನಿಂತಿದೆ ಬರಿಯ ತೊಗಲು ಮುಚ್ಚಿದ ಗಟ್ಟಿ ಮೂಳೆಗಳಿಂದ ಇನ್ನೂ ನಿಂತಿದೆ. ಈಗ ಸಮುದ್ರದ ಪೂರ್ತಿ ನೀರು ಅದರ ಬುಡಕ್ಕೆ ಹೋದರು ಹೀರುವ ತಾಕತ್ತಿಲ್ಲ. ಕೂಡಿಡುವ ಆಸೆಯೂ ಇಲ್ಲ ಅದಕ್ಕೆ. ನಾನು ಹಾಗೆ ನನಗೆ ನೀರಿನ ಪರೊವೆಯೂ ಇಲ್ಲ. ಧೂಳಿನ ಗೋಜು ಇಲ್ಲ. ಯಾವುದೋ ಹೊಸ ಪ್ರಪಂಚಕ್ಕೆ ನನ್ನ ಪಯಣ, ಅಲ್ಲಿಯ ಸ್ವಾಗತ, ಇಲ್ಲಿಯ ನಿರ್ಗಮನ ಎರಡೂ ಸಮೀಪಿಸುತ್ತಿದೆ ನನಗೆ, ಗೊಂದಲಗಳಿಲ್ಲ. ಚರ್ಮದ ಕಾಳಜಿಯಿಲ್ಲ, ಸೌಂದರ್ಯದ ಆಸೆಗಳಿಲ್ಲಾ ನಾನು ನಂಬಿರುವ ಕೊನೆಯ ಸತ್ಯದೆಡೆಗೆ ನನ್ನ ಪಯಣ ಅಂತಿರುವಾಗಲೇ..
ನಾನು.. ಸಾಕು ಅಜ್ಜ ಈಗಿನ್ನೂ ಕತ್ತಲಾಯಿತು ಮನೆ ಕಡೆ ಹಿಂದಿರುಗೋಣ ಎಂದು ನಿಂತು ತಿರುಗಿ ಬಿಟ್ಟೆ, ಸರಿ ನಡೀ ಅಂತ. ಅಜ್ಜನೂ ಬರತೊಡಗಿದ ಆದರೇ ಅಜ್ಜ ತಿರುಗಿದ ರೀತಿಯೇ ಬೇರೆಯದು, ಅಜ್ಜನ ದೇಹವನ್ನೆಲ್ಲಾ ತಿರುಗಿಸಲೇ ಇಲ್ಲಾ ನನ್ನ ಜೊತೆ ಜೊತೆಗೆ ಹಿಮ್ಮುಖವಾಗಿಯೇ ಬರತೊಡಗಿದ. ಆಶ್ಚರ್ಯ ಇಮ್ಮಡಿಯಾಗಿ ಕೇಳಿಯೇ ಬಿಟ್ಟೆ ಅಜ್ಜನಿಗೆ, ಅಜ್ಜನ ಆ ಜಟಿಲವಾದ ಅರ್ಥದ ವಿಶ್ಲೇಷಣೆ ಯ ತರಂಗ ನನ್ನ ಮೆದುಳನ್ನೇ ಅಲ್ಲಾಡಿಸಿತು. “ಹೌದು ಜೀವನವೇ ಹೀಗೆ ಇಲ್ಲೀ ಒಮ್ಮೇಲೆ ಪಯಣ, ಮತ್ತೆ ಹಿಂತಿರುಗಿ ಬರುವುದು ಅಸಾಧ್ಯ. ಇಲ್ಲಿ ಎಲ್ಲದಕ್ಕೂ ಒಂದೊಂದು ಮುಕ್ತಾಯವಿದೆ ಅನ್ನೋದು ಅಜ್ಜ ಹೇಳಿದ ಮಾತು, ಒಮ್ಮೆ ನಡೆದರೆ ಮುಗೀತು. ಮತ್ತೆ ಅದೇ ದಾರಿಯ ಅದೇ ಪಯಣ ಮರೀಚಿಕೆಯಷ್ಟೆ. ಇಲ್ಲಿನ ಯಾವುದು ಶಾಶ್ವತವಲ್ಲ. ನಾವೇ ನಡೆದ ನಮ್ಮ ಹೆಜ್ಜೆಗಳನ್ನು ಮತ್ತೆ ಹುಡುಕುವುದರೊಳಗೆ ಅದರ ಮೇಲೆ ಮತ್ಯರೋ ನಡೆದಿರುತ್ತಾರೇ” ಅಬ್ಬಾ!! ಎಷ್ಟೊಂದು ವಿಷಯ. ಈ ಅಜ್ಜ ನಿಜಕ್ಕೂ ಅಸಮಾನ್ಯ ಎಂದೆನಿಸಿ ಚಪ್ಪಲಿಗ೦ಟಿದ ಮರಳನ್ನು ನೀರಿನಲ್ಲಿ ತೊಳೆದುಕೊಂಡು ಹಿಂದಿರುಗಿ ನೋಡಿದರೆ, ಅಜ್ಜ ಮಾಯ!! ಒಮ್ಮೆ ಅವಕ್ಕಾದೆ.
ಅರೆ!! ಇದೇನೂ ಕನಸೊ ನಿಜವೋ.. ಆ ನಿರ್ಲಿಪ್ತ ಕಣ್ಣುಗಳಲ್ಲಿ ನಾ ಕಂಡ ಅದಮ್ಯ ಶಕ್ತಿ ಅದಾಗಲೇ ನನ್ನನ್ನ ಭ್ರಮಾಲೋಕದಿಂದಾಚೆಗೆ ಓಡಿಸಿ ಬಿಟ್ಟಿತ್ತು. ಯಾವುದು ಸೌಂದರ್ಯ? ಯಾವುದು ಶಾಶ್ವತವೆನ್ನುವ ಪ್ರಶ್ನೆಗಳೆಲ್ಲಾ ಒಂದೊಂದಾಗಿ ಕಾಡ ತೊಡಗಿದವು. ಮನಸಿನಾಳದಲ್ಲಿ ಗುಂಯಿಗುಡುತ್ತಿರುವ ದುಂಬಿಯ ನಾದಕ್ಕೆ ತಲೆಕೆಟ್ಟು ನಿಂತಿದ್ದೆ. ಕೈ ಕಾಲುಗಳೆಲ್ಲಾ ಯಾರದೊ ಹಿಡಿತಕ್ಕೊಳಗಾಗಿದೆಯೇನೋ ಎಂಬಂತೆ ಭಾಸವಾಗತೊಡಗಿತ್ತು!! ಯಾರ ಬಳಿಯೂ ಹೇಳಿಕೊಳ್ಳಲಾರದಂತ ಹೊಸ ನೋವಿನ ಪರಿ ನನ್ನ ಮನಸು ದೇಹವನ್ನೆಲ್ಲಾ ಜರಿದು ಹಾಕಿ ಬಿಟ್ಟಿತ್ತು. ಕಣ್ಣು ಬಿಟ್ಟು ಎದ್ದು ಕುಳಿತು ನೀರಿನ ಬಾಟಲಿ ಅರಸುತ್ತಾ ಸಾವರಿಸಿಕ್ಕೊಂಡ ಮೇಲೆಯೇ ಆ ಕುಬ್ಜ ಅಜ್ಜ ಕನಸಿನೊಳ ಬಂದ್ ಗುರುವಾಗಿದ್ದ, ನನ್ನ ಭ್ರಾಂತಿಯೋಡಿಸಲು ಬಂದ ಮಂತ್ರವಾದಿಯಾಗಿದ್ದ- ಕನಸಲ್ಲೇ ಉಗುಳು ನುಂಗಲಾರದೆ ಗಂಟಲು ಒಣಗಿಸಿ ಹೋದ ಅವ ನನ್ನ ಪಾಲಿನ ನಿಜವಾದ ದೇವರಾಗಿದ್ದ . ಆ ಕನಸು ಮರೆಯಲಾರದ್ದು. ಮತ್ತೆಂದು ಆ ಕುಬ್ಜ ಅಜ್ಜ ಬರಲೇ ಇಲ್ಲಾ. ಆತನೂ ಮರೆಯಲಾರದವನೇ !!
– ತಿರು ಭಟ್ಕಳ
Facebook ಕಾಮೆಂಟ್ಸ್