X

ಉಲಿದದ್ದು ಮತ್ತು ಮನದಲ್ಲೇ ಉಳಿದದ್ದು

ಇತ್ತೀಚೆಗೆ, ಹೆಚ್ಚಿನವರ ತಲೆಯಲ್ಲಿ, ಹೇಗಾದರೂ ಸರಿ, “ಮಾತನಾಡಿದವನೇ ಮಹಾಶೂರ” ಎಂಬ ಭ್ರಮೆ ಪದರಗಟ್ಟಿದೆ. ಹಾಗಾಗಿ ಪದಗಳ ಮೇಲೆ ನಿಯಂತ್ರಣವೇ ಇಲ್ಲದಾಗಿದೆ. ಬೇಕಾಬಿಟ್ಟಿ ಹೇಳಿಕೆಗಳ ಹಳಹಳಿಕೆಯ ಗೀಳು ಇಂದು ರಾಜಕಾರಣಿಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದೇ ದೊಡ್ಡ ಗೋಳು. ಈಗೀಗ ಕೆಲವು ಸಾಹಿತಿ, ಚಿಂತಕ, ಹೋರಾಟಗಾರರೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಇದೊಂದು ಪ್ರಚಾರದ ಹಪಾಹಪಿಯ ಕ್ಷುಲ್ಲಕ ತಂತ್ರವಷ್ಟೇ! ಹಾಗಾದರೆ ಮೈಕ್’ ಸಿಕ್ಕುತ್ತಿದ್ದಂತೆ ಬಾಯಿಗೆ ಬಂದಂತೆ ಒದರುವವರ ಒಳಮನಸ್ಸು ಅವರ ಅಷ್ಟಿಷ್ಟು (ಇದ್ದರೆ!)ಆತ್ಮಸಾಕ್ಷಿಯ ಜೊತೆಗೆ ಅಂಥ ಹೇಳಿಕೆಗಳ ಒಳಗುಟ್ಟನ್ನು ಒಳಗೊಳಗೆ ಪಿಸುಗುಡಬಹುದಲ್ಲವೇ?  ಬಹಿರಂಗದ ಗಟ್ಟಿ ಧ್ವನಿಯ ಮಾತು ಹಾಗೂ ಅಂತರಂಗದ ಪಿಸು ದನಿಯಲ್ಲಿ ಹೊರಹೊಮ್ಮುವ ಅದರ ಒಳಗುಟ್ಟು ಪರಸ್ಪರ ಮುಖಾಮುಖಿಯಾದರೆ? ಇಲ್ಲೊಂದಷ್ಟು ಅಂಥ ಉದಾಹರಣೆಗಳಿವೆ. ಇದು ಕಾಲ್ಪನಿಕವಾದರೂ ಸತ್ಯಕ್ಕೆ ಹೆಚ್ಚೇನು ದೂರವಿಲ್ಲ!

● ಜಿಗ್ನೇಶ್ ಮೇವಾನಿ: ಮೋದಿ ಅಜೆಂಡಾ ಹಾಗೂ ಹಿಂದುತ್ವ ಅಜೆಂಡಾ ವಿರೋಧಿಸಲು ಎಸ್.ಎಸ್.ಎಸ್ ಸ್ಥಾಪಿಸಿ ಆರ್.ಎಸ್.ಎಸ್ ಶಾಖೆಗಳ ಮುಂದೆ ಶಾಖೆ ತೆರೆಯಲಿದ್ದೇವೆ.

■ ಒಳಗುಟ್ಟು: ಈ ಜನರ ಮುಂದೆ ಏನ್ ಬೇಕಾದರೂ ಕೊಚ್ಚಿಕೊಳ್ಳಬಹುದು. ಉತ್ತರದಾಯಿತ್ವ ಏನ್ ಬೇಕಾಗಿಲ್ಲ. ‘ಉಡುಪಿ ಚಲೋ’ ಸಂದರ್ಭ, ಮೂರು ತಿಂಗಳಲ್ಲಿ ಪಂಕ್ತಿ ಬೇಧ ಕೊನೆಗೊಳಿಸದಿದ್ದರೆ ಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಿದ್ದೆ. ಐದು ತಿಂಗಳಾಯ್ತು. ಮುತ್ತಿಗೆನೂ ಇಲ್ಲ, ಏನೂ ಇಲ್ಲ. ಒಬ್ನೂ ಆ ಬಗ್ಗೆ ಸೊಲ್ಲೆತ್ತಿಲ್ಲ ಅಂತೀನಿ!

● ಅಸಾದುದ್ದೀನ್ ಒವೈಸಿ: ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಬ್ಬರು ರಾಜ್ಯದಲ್ಲಿನ ತಡೆಯುವಲ್ಲಿ ವಿಫಲರಾಗಿದ್ದಾರೆ.

■ ಒಳಗುಟ್ಟು: ಇದಕ್ಕೇ ಅಲ್ಲವೇ ನಾನು ನಿರಂತರವಾಗಿ, ಗಲಭೆ ಹುಟ್ಟು ಹಾಕುವಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಪ್ರಚೋದಿಸುವುದು. ನಾನು ಹಾಗೆ ಮಾಡಿದ್ದರಿಂದಲೇ ಈಗ ಟೀಕಿಸಲೊಂದು ವಿಷಯ ಸಿಕ್ತು.

● ಅಗ್ನಿಶ್ರೀಧರ್: ಸಣ್ಣ ಕಿಡಿಯಾಗಿದ್ದ ನಾನು ಈ ಘಟನೆಯಿಂದ  ಜ್ವಾಲೆಯಂತಾಗಿದ್ದೇನೆ. ನನ್ನ ಶಕ್ತಿ ಏನೆಂದು ತೋರಿಸುವೆ.

■ ಒಳಗುಟ್ಟು: ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಜಟ್ಟಿಯಂತೆ ಹೇಗಾದರೂ ಸಮರ್ಥಿಸಿಕೊಂಡಿಲ್ಲಾಂದ್ರೆ ಕಷ್ಟ! ನಿಜ ಪರಿಸ್ಥಿತಿ ಜ್ವಾಲೆಯಲ್ಲ, ಮಸಿ ಕೆಂಡದಂತಾಗಿದೆ. ಲಾಂಗ್, ಮಚ್ಚು, ಫಾರಿನ್ ಬಾಟಲ್ ಸಿಕ್ಕಿದ್ದನ್ನೆಲ್ಲಾ ಡೈವರ್ಟ್ ಮಾಡೋಕೆ ಈ ಡವ್ ಅಷ್ಟೇ!  ಇಲ್ಲಾಂದ್ರೆ ನಾಳೆ ಸಂಘಟನೆ, ಹೋರಾಟ ಅಂಥ ಹೋದ್ರೆ ಜನ ಸುಮ್ನೆ ಬಿಟ್ಟಾರೇ?

●ರಾಹುಲ್ ಗಾಂಧಿ: ಮೋದಿಜಿಯ ‘ರೈನ್’ಕೋಟ್’ ಹೇಳಿಕೆ  ಮಾಜಿ ಪ್ರಧಾನಿಯನ್ನಷ್ಟೇ ಅಲ್ಲ, ದೇಶವನ್ನೇ ಅವಮಾನಿಸಿದಂತೆ. ಕ್ಷಮೆ ಕೇಳುವ ತನಕ ಕಲಾಪ ನಡೆಯಲು ಬಿಡೆವು.

■ ಒಳಗುಟ್ಟು: ದೇಶಕ್ಕೆ ಅವಮಾನವಾಗುವಂತದ್ದು ಬೇರೇನೂ ನಡೆಯುತ್ತಿಲ್ಲ. ಇದನ್ನೇ ಹಾಗೆ ಬಿಂಬಿಸ್ತೇನೆ. ಬೇರೆ ವಿಧಿಯಿಲ್ಲ, ನನ್ನ ನೇತೃತ್ವದಲ್ಲಿ ನಮ್ಮ ಪಕ್ಷ ತಕ್ಕಮಟ್ಟಿಗೆ ಯಶಸ್ವಿಯಾಗಿ ಮಾಡುವುದು ಕಲಾಪಕ್ಕೆ ಅಡ್ಡಿಪಡಿಸುವುದೊಂದೇ!

● ಸಿದ್ದರಾಮಯ್ಯ: ಬಿ.ಜೆ.ಪಿಯವರು  ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸದಿದ್ದರೆ ಅವರ  ಹಳೆ ಫೈಲ್’ಗಳನ್ನು ಓಪನ್ ಮಾಡಿಸಬೇಕಾಗುತ್ತದೆ.

■ ಒಳಗುಟ್ಟು: ಯಾವ್ ಫೈಲು ಇಲ್ಲಾ ಏನೂ ಇಲ್ಲ. ಚುನಾವಣೆ ಹತ್ತಿರದಲ್ಲಿರುವಾಗ ಅಂಥ ಆರೋಪ ಮಾಡಿದರೆ ಪೈಲ್ಸ್ ಆದಂಗಾಗುತ್ತೆ. ‘ಡೈರಿ’ ಬೇರೆ ಧೈರ್ಯಗೆಡಿಸಿಬಿಟ್ಟಿದೆ. ಸೋ! ಬಾಯಿ ಮುಚ್ಚಿಸೋಕಷ್ಟೇ ಈ ಅವಾಜ್.

● ಗುಲಾಂ ನಬಿ ಅಜಾದ್: ಎಸ್.ಪಿ ಹಾಗೂ ಕಾಂಗ್ರೆಸ್ ಮೈತ್ರಿ 2019ರ ಲೋಕಸಭೆ ಚುನಾವಣೆಯವರೆಗೂ ಮುಂದುವರಿಯಲಿದೆ. ಇತರೆ ಜಾತ್ಯತೀತ ಪಕ್ಷಗಳು ಈ ಒಕ್ಕೂಟದ ಭಾಗವಾಗಲಿವೆ.

■ ಒಳಗುಟ್ಟು: ರಾಷ್ಟ್ರೀಯ ಪಕ್ಷವಾಗಿಯೂ ಏಕಾಂಗಿಯಾಗಿ ಚುನಾವಣೆ ಎದುರಿಸುವಷ್ಟು ಸಮರ್ಥವಾಗಿಲ್ಲ ಹೀಗಾದರೂ ಒಂದಷ್ಟು ಸೀಟ್ ಗೆಲ್ಲಬಹುದೆಂಬ ಹಪಾಹಪಿಯಷ್ಟೇ! ಇನ್ನು ‘ಜಾತ್ಯತೀತ’ ಎಂಬ ಪದ ಬಳಸಿದ್ದು ಜಾತಿ, ಧರ್ಮಾಧಾರಿತ ಎನ್ನುವುದರ ಕೋಡ್ ವರ್ಡ್ ಆಗಿ ಎನ್ನುವುದು ನೆನಪಿರಲಿ.

ಓವರ್ ಡೋಸ್: ಬೇಕಾಬಿಟ್ಟಿ ಹೇಳಿಕೆ ನೀಡುತ್ತಲೇ ಹುಚ್ಚು ವರ್ತನೆ ತೋರುವ ಸ್ಥಿತಿ ತಲುಪಿರುವವರನ್ನು “ಸ್ಟೇಟ್’ಮೆಂಟಲ್'” ಎನ್ನಬಹುದು.

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post