X

ಆಸೆಗೆ ತಣ್ಣೀರು,”ಪನ್ನೀರ್” ಕಣ್ಣೀರು!

ತಾಯಿಯ ಮಹತ್ವದ ಬಗ್ಗೆ ಹೇಳುವಾಗ ‘ಅಮ್ಮನಿಗೆ ಪರ್ಯಾವಿಲ್ಲ. ಆಕೆಯ ಸ್ಥಾನವನ್ನು ಯಾರಿಂದಲೂ ತುಂಬಲಾಗದು’, ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಆದರೆ ಸದ್ಯ ಈ ಮಾತು ರಾಜಕೀಯ ಕ್ಷೇತ್ರದಲ್ಲೂ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ. ನೆರೆ ರಾಜ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ಕ್ಷಿಪ್ರ  ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ “ಅಮ್ಮ”ನ ಮಹತ್ವ ಅರಿವಾಗುತ್ತದೆ. ಅಮ್ಮ ಇರುವವರೆಗೂ ಶಾಂತವಾಗಿದ್ದ ತಮಿಳುನಾಡು ರಾಜಕಾರಣ ಈಗ ಕದಡಿದ ಕೊಳವಾಗಿದೆ.

ಅಮ್ಮನಿಗೆ ಭಾರೀ ನಿಷ್ಟರಾಗಿದ್ದ ಓ. ಪನ್ನೀರ್ ಸೆಲ್ವಂ, ಚಿಕ್ಕಮ್ಮನ ಯಜಮಾನಿಕೆಯಲ್ಲಿ ಕಷ್ಟಕ್ಕೆ ಸಿಲುಕುವಂತಾಗಿದೆ. ಪ್ರತಿಯಾಗಿ, ಕೋಲೆ ಬಸವನಂತಿದ್ದ ಸೆಲ್ವಂ ಕೂಡಾ ಚಿನ್ನಮ್ಮನ ವಿರುದ್ಧ ಗುಟುರು ಹಾಕುತ್ತಿದ್ದಾರೆ ಎನ್ನುವುದೇ ವಿಶೇಷ.  ಪನ್ನೀರ್ ಸೆಲ್ವಂಗೆ ಅಧಿಕಾರ ಅನುಭವಿಸುವ ಅವಕಾಶ ಸಿಕ್ಕಿದ್ದೇ ಪನ್ನೀರಿನ ಹನಿಗಳಂತೆ ಎಲ್ಲೋ ಚೂರುಪಾರು  ಹೊರತು ಕರ್ನಾಟಕದಿಂದ ತಮಿಳುನಾಡಿಗೆ ಹರಿವ ಕಾವೇರಿ ನೀರಿನಂತೆ ಧಾರಾಳವಾಗಲ್ಲ. ಮೇಲಾಗಿ ಅವರಿಗೂ ಆ ದಾಹ ಇದ್ದಂತಿರಲಿಲ್ಲ ಬಿಡಿ!!

ಎಷ್ಟು ರಾಜಕೀಯ ಪಕ್ಷಗಳು ಅವರ ಬಗ್ಗೆ, ಇಂಥಹವರು ನಮ್ಮ ಪಕ್ಷದಲ್ಲಿ ಇದ್ದಿದ್ದರೆ?!!ಎಂದು ಕೈ ಕೈ ಹಿಸುಕಿಕೊಂಡಿದ್ದವೋ. ಬಹುತೇಕ ರಾಜಕೀಯ ಪಕ್ಷಗಳ ನಾಯಕರು,  ಅಧಿಕಾರದಿಂದ ಪದಚ್ಯುತಿಗೊಂಡರೆ ಸಾಕು ಇಡೀ ಪಕ್ಷವನ್ನೇ ಪತರುಗುಟ್ಟಿಸುವಂತೆ ಸೆಡ್ಡು ಹೊಡೆಯುತ್ತಾರೆ. ಒಂದು ಗ್ರಾ.ಪಂ ಚುನಾವಣೆಗೆ ಟಿಕೇಟ್ ಸಿಕ್ಕಿಲ್ಲವೆಂದರೂ ಸಾಕು ಪಕ್ಷದಿಂದಲೇ ಟಿಕೇಟ್ ತಗೊಂಡು ಬೇರೆ ಪಕ್ಷಕ್ಕೆ ಬಕೇಟ್ ಹಿಡಿಯುವವರಿಗೇನು ಕೊರತೆಯೇ? ಕೆಲವರ ಪೊಲಿಟಿಕಲ್ ಸ್ಟೇಟಸ್ ಬದಲಾಗದಿದ್ದರೂ ಪಕ್ಷ ಮಾತ್ರ ಬದಲಾಗುತ್ತಲೇ ಇರುತ್ತದೆ. ಆದರೆ ಓ.ಪಿ.ಎಸ್ (ಓ. ಪನ್ನೀರ್ ಸೆಲ್ವಂ) ಮಾತ್ರ  ಕರೆದಾಗಲೆಲ್ಲಾ “ಓ.ಎಸ್” ಎಂದು ಅಧಿಕಾರದ ಕುರ್ಚಿ ಬಿಟ್ಟು ವಾಪಾಸು ಬರುತ್ತಿದ್ದರು. ಇವರು, ಪ್ರಸಿದ್ಧ ಹೇಳಿಕೆಯೊಂದನ್ನು ತುಸು ಬದಲಿಸಿ ಹೇಳುವುದಾದರೆ ‘ಯಶಸ್ವಿ ಮಹಿಳೆ ಹಿಂದಿರುವ ಪುರುಷ’ನೇ ಸರಿ.

ಸಮಯ ಸಂದರ್ಭ ಸಿಕ್ಕಾಗೆಲ್ಲಾ ವಿವೇಚನೆ ಹಾಗೂ ವಿವೇಕವನ್ನು ಮೂಟೆಕಟ್ಟಿ ಬದಿಗೆಸೆದು, ಅಮ್ಮನ ಕಾಲಿಗೆರಗುತ್ತಲೇ ಅನಿವಾರ್ಯ ಎನಿಸಿದಾಗೆಲ್ಲಾ ‘ಎರವಲು ಸಿ.ಎಂ’ ಆಗಿ ಕಾರ್ಯನಿರ್ವಹಿಸಿದವರು ಪನ್ನೀರ್. ಸದ್ಯ ಅದೇ ಅವರ ಅಧಿಕಾರಕ್ಕೆ ಎರವಾಯಿತೇ? ಹಿರಿಯಕ್ಕನ ಚಾಳಿಯೇ ತಾನೆ ಮನೆಮಂದಿಗೆಲ್ಲ?! ಸದ್ಯ ಚಿಕ್ಕಮ್ಮನೂ ಪನ್ನೀರ್ ಸೆಲ್ವಂರಿಂದ ಅದನ್ನೇ ನಿರೀಕ್ಷಿಸುತ್ತಿದ್ದಾರೆಯೇ ಹೊರತು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದನ್ನಲ್ಲ. ಅಮ್ಮ ಇನ್ನಿಲ್ಲವೆಂದಾದಾಗ ಶಶಿಕಲಾ ಗದ್ಗದಿತರಾಗಿ “ನಾವು ಅಮ್ಮನ ಹಾದಿಯಲ್ಲೇ ಮುಂದುವರಿಯುತ್ತೇವೆ” ಎಂದಿದ್ದು ಪ್ರಾಯಶಃ ಇದೇ ಕಾರಣಕ್ಕೇ ಇರಬೇಕು! ಚಿನ್ನಮ್ಮ ಸೆಲ್ವಂರ ಆಸೆಗೆ ತಣ್ಣೀರೆರಚುವ ಪ್ರಯತ್ನದಲ್ಲಿದ್ದಾರೆ. ಬೇಸತ್ತ ಅವರೀಗ “ಅಮ್ಮ ಎಂದರೆ ಏನೋ ಹರುಷವು..” ಎನ್ನುತ್ತಾ ಸಮಾಧಿ ಮುಂದೆ ಕಣ್ಣೀರು ಸುರಿಸುತ್ತಿದ್ದಾರೆ.

ಈಗಲೂ ರಾಜೀನಾಮೆ ನೀಡಿ ತೆಪ್ಪಗೆ ಉಳಿದು ಬಿಡುತ್ತಿದ್ದರೇನೋ? ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಹರಿದ ‘fun’ ನೀರು ಅವರ ಮೈಚಳಿ ಬಿಡಿಸಿತು.  “ಸ್ಟೆಪ್ನಿ ಸಿ.ಎಂ, ಮುಖ್ಯಮಂತ್ರಿ ಸೀಟ್ BMTC/KSRTC ಬಸ್’ನ ಮಹಿಳೆಯರ ಸೀಟಿನಂತೆ ಮಹಿಳೆಯರು ಬಂದಾಗೆಲ್ಲಾ ಬಿಟ್ಟುಕೊಡಬೇಕು” ಹೀಗೆ ಅಪಹಾಸ್ಯಕ್ಕೆ ಈಡಾದ ಮೇಲಷ್ಟೇ ಅವರು ಗಡುಸಾಗಿದ್ದು. ತನ್ನ ಅಧಿಕಾರ ಕಿತ್ತುಕೊಂಡರೆಂದು ಗುಡುಗಿದ್ದು.

ಈಗಾಗಲೇ ಇರುವ ‘ಅಮ್ಮ’ ಯೋಜನೆಗಳ ನೆರವಿನಿಂದ ಪುಕ್ಕಟೆ ಜನಪ್ರಿಯತೆ ಪಡೆಯಬಹುದೆಂಬ ಹವಣಿಕೆಯಲ್ಲಿದ್ದಾರೆ ಚಿಕ್ಕಮ್ಮ. ತಮಿಳುನಾಡಿನಲ್ಲಿ ಚಾಲ್ತಿಯಲ್ಲಿರುವುದು ”ಅಮ್ಮ ಬ್ರ್ಯಾಂಡೇ, ಹೊರತು ಅಪ್ಪ ಬ್ರ್ಯಾಂಡ್ ಅಲ್ಲ”, ಹಾಗಾಗಿ ಅಲ್ಲಿನ  ಆಡಳಿತ ಚಿನ್ನಮ್ಮನ ಕೈಲಿರುವುದೇ ಸೂಕ್ತ ಎನ್ನುವುದು ಶಶಿಕಲಾ ಬೆಂಬಲಿಗರ ಪ್ರಬಲ ವಾದ. ಸದ್ಯ ಚೆಂಡು ಅಲ್ಲಿಂದಿಲ್ಲಿಗೆ ಸ್ಥಳಾಂತರವಾಗುತ್ತಲೇ ಇದೇ. ಗೋಲು ಯಾರದ್ದು? ಸೋಲು ಯಾರದ್ದು? ಕಾದು ನೋಡಬೇಕು.

ಓವರ್ ಡೋಸ್: ತಮಿಳುನಾಡಿನ ಸದ್ಯದ ರಾಜಕೀಯ ತಿಕ್ಕಾಟಗಳಿಗೆ ಸಂಪೂರ್ಣವಾಗಿ ‘ಪನ್ನೀರ್’ ಸೆಲ್ವಂ ಕಾರಣ, ಏಕೆಂದರೆ ಅವರ ಹೆಸರಲ್ಲೇ ‘ನೀರ್’ ಇದೆ. ಅಂದ ಮೇಲೆ ತಮಿಳುನಾಡು ಕ್ಯಾತೆ ತೆಗೆಯದೇ ಇದ್ದೀತೆ?!

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post