ಪ್ರತಿನಿತ್ಯ ರಾತ್ರಿ ಊಟವಾದ ಬಳಿಕ ನನ್ನಾಕೆಗೆ ಪೋನ್ ಮಾಡಿ ಮಾತನಾಡುವುದು ದಿನಚರಿಯಲ್ಲಿ ನನಗರಿವಿಲ್ಲದೇ ಒಗ್ಗಿಹೋಗಿತ್ತು. ಅಂದು ಕೂಡ ತುಸು ರಾತ್ರಿಯಾದರೂ ಹಾಸ್ಟೆಲ್’ನಲ್ಲಿ ಇರುವ ಕಾರಣಕ್ಕೆ ಸ್ನೇಹಿತೆಯರೊಡನೆ ಓದುತ್ತಿರಬಹುದೆಂದು ಪೋನ್ ಮಾಡಿದೆ. ಒಮ್ಮೆ ರಿಂಗ್ ಪೂರ್ತಿ ಆದರು ಆ ಕಡೆಯಿಂದ ಮಾತಿನ ಧ್ವನಿ ಕೇಳಿಸಲೇ ಇಲ್ಲ. ಮತ್ತೊಮ್ಮೆ ಮಾಡಿದೆ. ಆಗ ಮೃದುವಾಗಿ ಹಲೋ ಎಂಬ ಅವಳ ಮಾತು ಕೇಳಿಬಂತು.ಯಾಕೋ ಅಂದು ಅವಳ ಧ್ವನಿಯಲ್ಲಿನ ವ್ಯತ್ಯಾಸವನ್ನು ಅರಿಯಲಿಕ್ಕೆ ನನ್ನ ಮನಕ್ಕೆ ಬಹಳ ಸಮಯ ಹಿಡಿಯಲಿಲ್ಲ. ಏನಾಯ್ತು, ಹುಷಾರಿಲ್ಲವೇ..? ಎಂದು ಕೇಳಿದೆ. ಇಲ್ಲ, ಹಾಗೇನಿಲ್ಲ. ಆರಾಮವಾಗಿದ್ದೀನಿ ಎಂಬ ಪ್ರತ್ಯುತ್ತರ ಬಂತು ಆ ಕಡೆಯಿಂದ. ಆದರೂ ಬಿಡದೇ ಮತ್ತೊಮ್ಮೆ, ಮಗದೊಮ್ಮೆ ಕೇಳಿದಾಗ ಹೌದು, ಸ್ವಲ್ಪ ಹುಷಾರಿಲ್ಲ. ಹೊಟ್ಟೆ ನೋಯುತ್ತಿದೆ ಎಂದಳಾಕೆ. ಹೊಟ್ಟೆನೋವು ಎಂಬ ಶಬ್ದ ಕೇಳಿದ ಕೂಡಲೇ, ಅವಳಿಗೆ ಮರು ಮಾತನಾಡಲು ಅವಕಾಶವನ್ನೂ ಕೊಡದೇ, ರಸ್ತೆ ಪಕ್ಕದಲ್ಲಿ ಕಂಡ ಕಂಡಿದ್ದನ್ನು ತಿನ್ನುವುದಕ್ಕೆ ಹೀಗೆಲ್ಲಾ ಆಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ತೊಗೋಬಾರ್ದಾ ಎಂದೆಲ್ಲಾ ಒಂದೇ ಸಮನೆ ರೇಗಲಾರಂಭಿಸಿದೆ. ಅವಳು ಏನೋ ಹೇಳಲು ಹೊರಟರೂ, ಮಾತನ್ನು ಅರ್ಧಕ್ಕೆ ನಿಲ್ಲಸಿ ಮತ್ತೊಂದಿಷ್ಟು ಕೂಗಾಡಿದೆ. ತತ್ ಕ್ಷಣವೇ ಆ ಕಡೆಯಿಂದ ಪೋನ್ ಕಟ್ಟಾಯಿತು ಅಷ್ಟೇ. ಮೆಸೇಜ್ ಮಾಡಿದ್ರೆ, ನನಗೆ ಡಿಸ್ಟರ್ಬ್ ಮಾಡ್ಬೇಡಾ, ನನ್ನನ್ನ ಒಬ್ಬಂಟಿಯಾಗಿ ಬಿಟ್ಬಿಡು ಅಂತ ರಿಪ್ಲೈ ನೋಡಿ ಮೈಯೆಲ್ಲಾ ಒಮ್ಮೆ ಉರ್ದೋಯ್ತು. ಇವತ್ ಯಾಕ್ ಇವ್ಳ ಹಿಂಗ್ ಆಡ್ತವ್ಳೆ ಅಂತಾ ತಲೆ ಕೆಡ್ಸ್ಕೊಂಡ್ ನಾನು ದಿಂಬಿಗೆ ತಲೆ ನೀಡಿದೆ.
ಆದರೂ ಮನಸ್ಸು ಮಾತ್ರ ಅವಳ ಬಗ್ಗೆನೇ ಯೋಚ್ನೆ ಮಾಡ್ತಿತ್ತು. ಯಾವತ್ತೂ ಹಾಗ್ ಹೇಳಿದವಳಲ್ಲ. ಇವತ್ಯಾಕೆ ಈ ಥರ ಮಾತಾಡ್ ಬಿಟ್ಟಳು ಅಂತ. ಹಾಗೇ ಸುಮ್ನೆ ಯೋಚನೆ ಮಾಡುತ್ತಾ ಇರಬೇಕಿದ್ರೆ ತಟ್ಟನೇ ಮನಸ್ಸಿಗೆ ಯಾವ್ದೋ ವಿಚಾರ ಬಂತು. ತಕ್ಷಣ ಆಕೆಗೆ ಮತ್ತೆ ಪೋನ್ ಮಾಡಿದೆ. ನಿಂಗೆ ಒಂದ್ ಬಾರಿ ಸುಮ್ನಿರು ಹೇಳಿದ್ರೆ ಅರ್ಥ ಆಗಲ್ವ ಅಂತನೇ ಮಾತು ಶುರು ಮಾಡಿದಳಾಕೆ. ನಾನೊಮ್ಮೆ ಸುಧಾರಿಸಿಕೊಂಡು ವಿಪರೀತ ಹೊಟ್ಟೆ ನೋವಾ ಎಂದು ಕೇಳಿದೆ. ಆ ಕಡೆಯಿಂದ ಕೀರುದನಿಯಲ್ಲಿ ಹೌದು ಎಂದಳು. ಸಾರಿ ಕಣೇ, ನಿನ್ ಪರಿಸ್ಥಿತಿ ಅರ್ಥ ಮಾಡಿಕೊಳ್ಳದಿರೋಕೆ. ನಾನು ಮರೆತೇ ಬಿಟ್ಟಿದ್ದೆ. ಹೋಗ್ಲಿ ಬಿಡು, ಜೀರಿಗೆ ಕಷಾಯ ಮಾಡ್ಕೊಂಡು ಕುಡ್ದಿದಿದ್ರೆ ಕಡ್ಮೆ ಆಗಿರೋದು, ಮಾಡಿ ಕೊಡೊಕೆ ಪ್ರೆಂಡಿಗೆ ಹೇಳು ಎಂದೆ. ಆ ಕ್ಷಣಕ್ಕೆ ಆಕೆಯ ಸ್ವರವೇ ಬದಲಾಗಿ ಹೋಯ್ತು. ಥ್ಯಾಂಕ್ಸ್ ಕಣೋ, ನನ್ನ ಅರ್ಥ ಮಾಡ್ಕೊಂಡಿರೊದಕ್ಕೆ ಎಂದಳಾಕೆ. ಅವಳ ಆರೋಗ್ಯದ ವ್ಯತ್ಯಾಸಕ್ಕೆ ಕಾರಣ ತಿಳಿಯಿತು ಅನ್ನೋ ಮುಜುಗರಕ್ಕಿಂತ ತನ್ನ ನೋವಿಗೆ ಸ್ಪಂದಿಸಿದ್ದಾನೆ ಎಂಬ ಕಾರಣಕ್ಕಿರಬಹುದು. ನಂತರ ಅವಳಾಗೇ ಮಾತನಾಡಲಾರಂಭಿಸಿದಳು. ಮಧ್ಯಾಹ್ನ ಕಾಲೇಜಿನ ಅವಧಿಯಲ್ಲಿ ಹೊಟ್ಟೆನೋವು ಎಂದು ಹಾಸ್ಟೆಲ್’ಗೆ ಬಂದು ಮಲಗಿದವಳು ಎದ್ದಿದ್ದು ರಾತ್ರಿ ನೀ ಪೋನ್ ಮಾಡಿದಾಗ ಎಂದಾಗ ಬಿಸಿ ಕೆಂಡವೊಂದು ಎಳೆ ಚರ್ಮವನ್ನು ಸುಟ್ಟಂತಾಯಿತು.
ಇದು ಕೇವಲ ಒಂದು ಘಟನೆಯಷ್ಟೆ. ಜಗತ್ತಿನ ಪ್ರತಿ ಹೆಣ್ಣು ಕೂಡ ಋತುಮಾತಿಯಾದಾಗ ಈ ನೋವನ್ನು ಅನುಭವಿಸಿರುತ್ತಾಳೆ. ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ. ಆದರೆ ಆ ನೋವನ್ನು ಜಗತ್ತಿನ ಎದುರಿಗೆ ತೆರೆದಿಡಲು ಸ್ವಲ್ಪ ಮುಜುಗರಕ್ಕೊಳಗಾಗುತ್ತಾಳೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಇಂತಹ ವಿಷಯವನ್ನು ತಮ್ಮ ತಾಯಂದಿರಲ್ಲಿ ಹಂಚಿಕೊಳ್ಳುತ್ತಾರೆ. ಜನ್ಮಕ್ಕೆ ಕಾರಣನಾದ ಅಪ್ಪನ ಹತ್ತಿರವೂ ಹೇಳಿಕೊಳ್ಳಲು ಆಗದ ಸಮಯವೂ ಕೆಲವರಿದ್ದಿರುತ್ತದೆ. ಅದೇನೇ ಇರಲಿ. ಇದು ವರವೋ, ಶಾಪವೋ ಎಂಬುದು ಇಲ್ಲಿ ಚರ್ಚೆಯ ವಸ್ತುವಲ್ಲ. ಆದರೆ ನಿಜವಾಗಿ ಯೋಚಿಸಬೇಕಾಗಿದ್ದು ಇಂತಹ ಸಮಯದಲ್ಲಿ ಒಬ್ಬ ಪುರುಷ ಹೇಗೆ ವರ್ತಿಸುತ್ತಾನೆ ಎಂದು. ಯಾಕೆಂದರೆ ಪ್ರತಿ ಪುರುಷನ ಜೀವನದಲ್ಲೂ ಹೆಣ್ಣು ತಾಯಿಯಾಗಿ, ಅಕ್ಕ-ತಂಗಿಯಾಗಿ, ಪ್ರೇಯಸಿ/ಹೆಂಡತಿಯಾಗಿ ಕೊನೆಗೆ ಮಗಳಾಗಿ ಇದ್ದೇ ಇರುತ್ತಾಳೆ. ಹೆಣ್ಣು ಋತುಮತಿಯಾದ ಸಂದರ್ಭದಲ್ಲಿ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯ ಕಾರಣಕ್ಕಾಗಿ ಆಕೆಗರಿವಿಲ್ಲದೆ ಕೆಲವು ಒತ್ತಡಗಳಿಗೆ ಒಳಗಾಗುತ್ತಾಳೆ. ಮನಸ್ಸಿಗೆ ತುಸು ಕಿರಿಕಿರಿ-ದುಗುಡ, ನಿಷ್ಕ್ರೀಯತೆಗೆ ಒಳಗಾಗುವುದು ಇತ್ಯಾದಿ. ಆದರೆ ಆ ಸಮಯದಲ್ಲಿ ಆಕೆಯ ಮನಸ್ಥಿತಿಯನ್ನು ಅರಿತು ಆಕೆಯ ನೋವಿಗೆ ಸ್ಪಂದಿಸುವುದು ಪುರುಷನ ಕರ್ತವ್ಯ ಎಂದರೆ ತಪ್ಪಾಗಲಾರದು.
ಅಕ್ಕ-ತಂಗಿಯರ ವಿಷಯದಲ್ಲೂ ಸಹ ಅಣ್ಣನ ಸ್ಥಾನದಲ್ಲಿ ಆಕೆಯ ಸಮಸ್ಯೆಗೆ ನೆರವಾಗುವುದು ಅವಶ್ಯ. ಅದರಲ್ಲೂ ಹೊಸದಾಗಿ ಮದುವೆಯಾದ ನವಜೋಡಿಗಳಲ್ಲಿ ಈ ವಿಷಯದ ಬಗ್ಗೆ ಅರಿವು ಹೆಚ್ಚಿರಬೇಕು. ಎಲ್ಲ ಹೆಣ್ಣು ಇಂತಹ ವಿಷಯವನ್ನು ತನ್ನ ಗಂಡನ ಬಳಿ ಹೇಳಿಕೊಳ್ಳುತ್ತಾಳೆ ಎಂದೇನಿಲ್ಲ. ಆದರೆ ತಾಯಿಯ ಹತ್ತಿರ ಮಾತ್ರ ಹೇಳಿಕೊಳ್ಳುತ್ತಾಳೆ. ಹಾಗಾಗಿ ಮದುವೆಯಾದ ಮೇಲೆ ಪುರುಷ ತನ್ನ ಹೆಂಡತಿಗೆ ಗಂಡನಾಗುವುದರ ಜೊತೆಗೆ ತಾಯಿಯಾಗುವುದು ಹೆಚ್ಚು ಅವಶ್ಯ ಎನ್ನುವುದು ನನ್ನ ಅನಿಸಿಕೆ. ಗಂಡ ತಾಯಿಯಾದಾಗ ಹೆಣ್ಣು ಇಂತಹ ವಿಷಯವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾಳೆ. ಯಾಕೆಂದರೆ ಆಕೆಯ ಮಾತಿಗೆ ಆತ ಪೂರಕವಾಗಿ ಸ್ಪಂದಿಸುತ್ತಾನೆ ಎಂಬ ನಂಬಿಕೆ. ಅಂತಹ ನಂಬಿಕೆಯನ್ನು ಪ್ರತಿಹೆಣ್ಣಿನ ಗಂಡನಾದವನು ಗಳಿಸಿಕೊಳ್ಳಬೇಕು. ಮತ್ತು ಉಳಿಸಿಕೊಳ್ಳಬೇಕು.
ಹಿಂದಿನ ಕಾಲವೊಂದಿತ್ತು. ಋತುಮತಿಯಾದ ಹೆಣ್ಣನ್ನು ಮಡಿ-ಮೈಲಿಗೆಯ ಹೆಸರಿನಲ್ಲಿ ಮನೆಯ ಎಲ್ಲ ಕೆಲಸಗಳಿಂದ ದೂರವಿಡುತ್ತಿದ್ದರು. ಬಹುಷಃ ಅದು ಆಕೆಗೆ ಆ ಸಮಯದಲ್ಲಿ ಅಗತ್ಯವಾಗಿ ಬೇಕಾಗಿದ್ದ ವಿಶ್ರಾಂತಿಗೂ ಆಗಿರಬಹುದು. ಕಾಲಕ್ರಮೇಣ ಸಮಾಜ ಬದಲಾದ ಹಾಗೇ ಸಾಮಾಜಿಕ ಕಟ್ಟುಪಾಡುಗಳೂ ಬದಲಾದವು. ಆದರೆ ಹೆಣ್ಣಿನ ಈ ಪ್ರಕೃತಿ ನಿಯಮ ಬದಲಾಗಲಿಲ್ಲ. ಇಂದು ಹಲವಾರು ಸ್ತ್ರೀಯರು ತಮ್ಮ ಸಹಜ ಪ್ರಕ್ರಿಯೆಯನ್ನು ಜಗತ್ತಿಗೆ ಹೇಳಲು ಧ್ವನಿಯೆತ್ತಿದ್ದಾರೆ. ಇದು ಯಾರು ಯಾರಿಗೂ ನೀಡಿರುವ ಶಾಪವೇನಲ್ಲ. ಜೀವನದ ಗತಿಯಲ್ಲಿ ಇದು ಒಂದು ಕೂಡ. ಅದನ್ನು ಎಲ್ಲರೂ ಒಪ್ಪಬೇಕಿದೆ. ವಿಶ್ವದ ಸೃಷ್ಟಿಯಲ್ಲಿ ಹೆಣ್ಣು ನಿಜಕ್ಕೂ ಒಂದು ಅತ್ಯದ್ಭುತ ಶಕ್ತಿಯಾಗಿದೆ. ತನ್ನ ಎಲ್ಲ ವಯಕ್ತಿಕ ಸಮಸ್ಯೆಗಳನ್ನು ಮೆಟ್ಟಿ ಇಂದು ಪುರುಷರಿಗೆ ಜೊತೆಯಾಗುತ್ತಿರುವುದು ಪ್ರತಿಯೊಬ್ಬ ಪುರುಷ ಹೆಮ್ಮೆಪಡಬೇಕಾದ ವಿಷಯ. ಇಲ್ಲಿ ಹೆಣ್ಣು ಈ ವಿಷಯದಲ್ಲಿ ಹೇಗೆ ವರ್ತಿಸುತ್ತಾಳೆ ಎನ್ನುವುದಕ್ಕಿಂತ ಪುರುಷನಾದವನು ಇಂತಹ ವಿಷಯದಲ್ಲಿ ಸ್ತ್ರೀಯರ ಭಾವನೆಗಳಿಗೆ ಹೆಚ್ಚು ಸ್ಪಂದಿಸುವುದನ್ನು ಕಲಿತರೆ ಈ ಬರಹ ಸಾರ್ಥಕವಾದಂತೆ. ಈ ನಿಟ್ಟಿನಲ್ಲಿ ನಮ್ಮ ಬದುಕಲ್ಲಿ ಎದುರಾಗುವ ಪ್ರತಿ ಹೆಣ್ಣನ್ನು ಗೌರವಿಸುವುದು ನಿಜವಾದ ಪುರುಷನ ಕರ್ತವ್ಯವಾಗಿದೆ. ಏಕೆಂದರೆ ಪುರುಷನಾದವನು ಬದುಕಲ್ಲಿ ಒಮ್ಮೆ ಮಾತ್ರ ಸಾಯುತ್ತಾನೆ, ಆದರೆ ಆಕೆ ತಿಂಗಳಲ್ಲಿ ಮೂರು ದಿನ ಸತ್ತು, ಮತ್ತೆ ಬದುಕುತ್ತಾಳೆ..!
– ಗುರುಪ್ರಸಾದ ಶಾಸ್ತ್ರಿ
sirsinow@gmail.com
Facebook ಕಾಮೆಂಟ್ಸ್