ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೪
ಮಂದಾಕ್ಷಿ ನಮಗಿಹುದು, ಬಲುದೂರ ಸಾಗದದು |
ಸಂದೆ ಮಸುಕಿನೊಳಿಹುದು ಜೀವನದ ಪಥವು ||
ಒಂದುಮೆಟುಕದು ಕೈಗೆ; ಏನೊ ಕಣ್ಕೆಣಕುವುದು |
ಸಂದಿಯವೆ ನಮ್ಮ ಗತಿ – ಮಂಕುತಿಮ್ಮ || ೦೪೪ ||
ಈ ಪದ್ಯದಲ್ಲಿ, ಏನೆಲ್ಲಾ ಜಟಾಪಟಿ ಮಾಡಿದರೂ ಜೀವನದ ಒಗಟನ್ನು ಬಿಡಿಸಲಾಗದ ಮಾನವನ ಅಸಹಾಯಕ ಸ್ಥಿತಿ ಬಿಂಬಿತವಾಗಿದೆ.
ಮಂದಾಕ್ಷಿ ನಮಗಿಹುದು, ಬಲುದೂರ ಸಾಗದದು |
ಈ ಸಾಲಿನ ಮೇಲ್ನೋಟದ ಅರ್ಥ – ನಮಗಿರುವ ದೃಷ್ಟಿ ಒಂದು ರೀತಿಯ ಮಂದದೃಷ್ಟಿಯ ಹಾಗೆ; ಅದು ಎಷ್ಟು ದೂರ ತಾನೆ ಬಿಚ್ಚಿ ತೋರಲು ಸಾಧ್ಯ? ಎನ್ನುವುದು. ಅಂದರೆ ಸೃಷ್ಟಿ ಜಗದ ವೈಶಾಲ್ಯ, ಆಳ, ಅಗಲಗಳು ಅದೆಷ್ಟು ಗಾಢವಾಗಿದೆಯೆಂದರೆ, ಅದನ್ನೆಲ್ಲ ತೆರೆದು ತೋರಬಲ್ಲ ಸಾಮರ್ಥ್ಯವಿರುವ (ಬೌದ್ಧಿಕ) ಕಣ್ಣುಗಳೇ ನಮ್ಮಲ್ಲಿಲ್ಲ (ಬೈ ಡಿಸೈನ್). ಅಂದ ಮೇಲೆ ಅದು ತೋರಬಲ್ಲ ಸಾಮರ್ಥ್ಯವೇ ಸೀಮಿತವೆಂದರ್ಥ ತಾನೇ ? ಹೀಗಾಗಿಯೆ ಅದನ್ನು ನಂಬಿ ಬಲು ದೂರ ಸಾಗಲಾಗದ ಅಸಹಾಯಕ ಪರಿಸ್ಥಿತಿ ನಮ್ಮದು ಎನ್ನುತ್ತಾನೆ ಮಂಕುತಿಮ್ಮ.
ಸಂದೆ ಮಸುಕಿನೊಳಿಹುದು ಜೀವನದ ಪಥವು ||
ಮೊದಲೇ ಮಂದಾಕ್ಷಿ; ಅದು ಸಾಲದೆಂಬಂತೆ ನಾವು ಸಾಗಬೇಕಾದ ಈ ಜೀವನದ ರಸ್ತೆಯು ಕೂಡ ಸಂಜೆಯ ಮಸುಕಿನೊಳಗೆ, ಅರೆಬರೆ ಕಾಣುವ ಮಬ್ಬಿನೊಳಗೆ ಹುದುಗಿಕೊಂಡಿದೆಯಂತೆ ! ಮಂದದ ಕಣ್ಣು; ಅದರ ಜತೆಗೆ ಹೋಗುವ ಮಾರ್ಗವೂ ಅಸ್ಪಷ್ಟತೆಯ ‘ಮಂಧಾಕಾರ’ ಎಂದರೆ ನೇರವಾಗಿ, ಸರಾಗವಾಗಿ ಹೋಗುವ ಸಾಧ್ಯತೆ, ಖಚಿತತೆಯಾದರೂ ಎಲ್ಲಿ?
ಇದರ ಇನ್ನೊಂದು ಬಗೆಯ ವಿಶ್ಲೇಷಣೆ ಮತ್ತೊಂದು ಕುತೂಹಲಕಾರಕ ಹೊಳಹನ್ನು ತೆರೆದಿಡುತ್ತದೆ. ಇಲ್ಲಿ ಕವಿ ಈಗಾಗಲೆ ಜೀವನ ಸಂಧ್ಯೆಯ ಹೊಸಲಿನಲ್ಲಿ ಕಾಲಿಟ್ಟ ವೃದ್ಧಾಪ್ಯದ ಸ್ಥಿತಿಯನ್ನು ವಿವರಿಸುತ್ತಿರುವಂತಿದೆ. ಶೈಶವ, ಬಾಲ್ಯ, ಯೌವ್ವನ, ಪ್ರಾಯಾದಿ ಹಂತಗಳಲ್ಲೆಲ್ಲ ಹೆಣಗಾಡಿ ದಾಟಿ, ಜೀವನ ಸಂಧ್ಯೆಯ ಹೊಸಿಲಾಗಿರುವ ವೃದ್ದಾಪ್ಯ ಹಂತಕ್ಕೆ ಬಂದಾಗಲಷ್ಟೆ ನೈಜ ಜೀವನ ಪಥದ ಗೋಚರವಾಗುತ್ತದೆಯೆನ್ನುವುದು ಇಲ್ಲಿನ ಹುರುಳು. ಹುರುಪಿನ ವಯಸಿದ್ದಾಗ, ಎಲ್ಲವು ನೆಟ್ಟಗಿದ್ದಾಗ ಯಾವುದಾವುದೊ ಮೋಹ, ನೇಹ, ದಾಹಗಳಲ್ಲಿ ಸಿಕ್ಕಿ ಸಮಯ ಕಳೆದಿದ್ದಾಯಿತು – ಸರಿಯೊ, ತಪ್ಪೊ ಎಂದು ಆಲೋಚಿಸಲು ಅವಕಾಶವಿರದಂತೆ. ಆದರೆ ಈಗ ವಯಸ್ಸಾದಂತೆ ಆ ಯುವಪ್ರಾಯದ ತೇಜವೆಲ್ಲ ಕುಗ್ಗಿಹೋಗಿದೆ. ವಯಸಿನ ಹೊಡೆತಕ್ಕೆ ಸಿಕ್ಕಿ ದುರ್ಬಲವಾಗುವ ಹೊತ್ತಿನಲ್ಲಿ ಕಣ್ಣುಗಳು ಮಂಜಾಗಿ, ದೃಷ್ಟಿಯೂ ಮಂದವಾಗಿ ಹೋಗಿದೆ. ಅತ್ತ ಶಕ್ತಿಯೂ ಇಲ್ಲ, ಇತ್ತ ದೃಷ್ಟಿಯೂ ಇಲ್ಲದ ಹೊತ್ತಲ್ಲಿ ದೂರ ಹೋಗಬೇಕೆಂದರೆ ನಡೆಯಲಾದರು ಎಲ್ಲಿ ಸಾಧ್ಯ ? ಪ್ರಾಯದಲ್ಲಿಲ್ಲವಾಗಿದ್ದ ಜ್ಞಾನಶಕ್ತಿ ಮತ್ತು ಇಚ್ಚಾಶಕ್ತಿ ವೃದ್ದಾಪ್ಯದಲ್ಲಿದ್ದರು, ಅದನ್ನು ಕಾರ್ಯಗತಗೊಳಿಸುವ ಕ್ರಿಯಾಶಕ್ತಿಗೆ ಪೂರಕವಾದ ಕಸುವಿಲ್ಲದ ದುರ್ಬಲತೆ ಆವರಿಸಿಕೊಂಡಿದೆ ಎನ್ನುವ ಅಳಲನ್ನು ಕಾಣಬಹುದು.
ಒಂದುಮೆಟುಕದು ಕೈಗೆ; ಏನೊ ಕಣ್ಕೆಣಕುವುದು |
ಸಂದಿಯವೆ ನಮ್ಮ ಗತಿ – ಮಂಕುತಿಮ್ಮ ||
ಈ ಪರಿಸ್ಥಿತಿಯಲ್ಲಿ ಹೊರಟಾಗ ಯಾವುದೂ, ಏನೂ ಕೈಗೆಟುಕದ, ಹಿಡಿತಕ್ಕೆ ಸಿಗದ ಪರಿಸ್ಥಿತಿ; ಏನೋ ಹೊಳಹು ಕಂಡಂತೆ ಕಂಡರೂ, ತಪ್ಪು ಲೆಕ್ಕಾಚಾರದ ದುರ್ಗತಿ. ಏನೋ ಇರುವಂತೆ ಮಂಜುಮಂಜಾಗಿ ಕಂಡರು ಅದೇನೆಂಬ ಸ್ಪಷ್ಟತೆಯಿರದೆ ಬರಿಯ ಸಂದೇಹದ ಎಳೆ ಹಿಡಿದಷ್ಟೇ ಮುಂದೆ ಸಾಗುವ ಅಸಹಾಯಕ ಸ್ಥಿತಿಗತಿ ನಮ್ಮದೆಂದು ಕೊರಗುತ್ತಾನೆ ಮಂಕುತಿಮ್ಮ.
ಸಾರದಲ್ಲಿ ಹೇಳುವುದಾದರೆ: ಜೀವನಸಂಧ್ಯೆಯ ಮಸುಕು ಮಬ್ಬಿನಲ್ಲಿ ನಡೆದಿದ್ದಾಗ ಒಮ್ಮೊಮ್ಮೆ ಇದ್ದಕ್ಕಿದ್ದಂತೆ, ಅದುವರೆಗೂ ಕಣ್ಣಿಗೆ ಕಾಣಿಸದೆ ಆಟವಾಡಿಸಿದ್ದ ಜೀವನಪಥ ಮತ್ತದರ ಮುಂದಿನ ಹೆಜ್ಜೆ ಅಸ್ಪಷ್ಟವಾಗಿಯೆ ಗೋಚರವಾಗಿಬಿಡಬಹುದು. ಆದರೀಗ ಅದನ್ನು ಕ್ರಮಿಸಲು ಬೇಕಾದ ಶಕ್ತಿಬಲ, ದೃಷ್ಟಿಬಲವೆಲ್ಲ ಕಾಲನ ಹೊಡೆತಕ್ಕೆ ಸಿಕ್ಕಿ ದುರ್ಬಲವಾಗಿ ಹೋಗಿವೆ. ಪಥವೇನೊ ಗೊತ್ತಾಯಿತೆಂದರೂ ಕೂಡ, ಮಂದದೃಷ್ಟಿಗಾವುದೂ ಸರಿಯಾಗಿ ಕಾಣದು; ಕಂಡಿದ್ದಾವುದು ದುರ್ಬಲ ದೇಹಕ್ಕೆಟುಕದು. ಆದರೂ ಪ್ರಯತ್ನಿಸಿ ನೋಡೋಣವೆಂದು ಹಾಗು ಹೀಗೂ ಏದುತ್ತ ನಡೆದರೂ, ಶೀಘ್ರದಲ್ಲೆ ತೀವ್ರ ಬೆಂಡಾಗಿಸಿ ಬಳಲಿಸಿ ಸುಸ್ತು ಆಯಾಸಗಳಡಿ ಸಿಲುಕಿಸಿ ‘ಉಸ್ಸಪ್ಪಾ’ ಎಂದು ಕೂರಿಸಿಬಿಡುತ್ತದೆ. ಹಾಗೆ ಕೂತಾಗಲೂ, ಕೂತಲ್ಲೆ ಮತ್ತೇನೊ ಕೆಣಕಿದಂತಾಗಿ ಇನ್ನೇನೊ ಹೊಸತು ಕಾಣಿಸಿಕೊಂಡಂತಹ ಭ್ರಮೆ ಪ್ರಲೋಭಿಸಿ ಕಂಗೆಡಿಸುತ್ತದೆ. ‘ಮತ್ತೆ ಎದ್ದು ಆ ಹೊಸತನ್ನು ಅನುಕರಿಸಿ ಹಿಡಿಯಲೆ ? ಅಥವಾ ಸಾಕೆನಿಸಿ ಬೇಸತ್ತು, ಏನಾದರೂ ಹಾಳಾಗಲೆಂದು ಕೈ ಬಿಟ್ಟುಬಿಡಲೆ ?’ – ಎಂದೆಲ್ಲಾ ಸಂದೇಹಗಳು ಹೆಜ್ಜೆಹೆಜ್ಜೆಗೆ ಕಾಡಿ ಆ ಸ್ಥಿತಿಯಲ್ಲೆ ನರಳುವಂತೆ ಮಾಡಿಬಿಡುತ್ತವೆ.
ವಯಸಿದ್ದಾಗ ಮೈಯ ಕಸುವಿದ್ದಾಗ ಮೋಹಪಾಶದಡಿ ಸಿಕ್ಕಿ ಸರಿಯಾದ ದಾರಿ ಕಾಣಿಸದೆ, ಮಾರ್ಗದರ್ಶನವಿಲ್ಲದೆ ತೊಳಲಾಡಿದ್ದಾಯ್ತು. ನಂತರ ದಾರಿ ಕಾಣಿಸುವ ಹೊತ್ತಿಗೆ ಕಸುವೆ ಉಳಿದಿರದೆ, ಮಂಜುಗಣ್ಣಲ್ಲಿ ತತ್ತರಿಸುವಂತಾಯ್ತು. ಇದೊಂದು ಹಲ್ಲಿದ್ದಾಗ ಕಡಲೆಯಿರದ, ಕಡಲೆಯಿದ್ದಾಗ ಹಲ್ಲಿರದ ಪರಿಸ್ಥಿತಿಯ ಹಾಗೆ ಎನ್ನುವ ಭಾವವನ್ನೂ ಇಲ್ಲಿ ನಿಷ್ಪತ್ತಿಸಬಹುದು.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ
Facebook ಕಾಮೆಂಟ್ಸ್