ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೩
ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ |
ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು ||
ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ |
ಚಾಲಿಪುದು ಬಿಡು ಕೊಡದೆ – ಮಂಕುತಿಮ್ಮ || ೦೪೩ ||
ಈ ಪದ್ಯದಲ್ಲಿ ಮತ್ತೆ ಕವಿಚಿತ್ತ ವಿಶ್ವಚಿತ್ತದ ವಿಶ್ಲೇಷಣೆಗಿಳಿದಿದೆ – ಈ ಬಾರಿ ತಂತಮ್ಮ ಕಕ್ಷೆ, ಆಯಾಮಗಳಲ್ಲಿ ಸುಖವಾದ ನಿರಂತರ ಚಲನೆಯಲ್ಲಿರುವ ಹಾಗೆ ಮಾಡಿರುವ ಹಿನ್ನಲೆ ಶಕ್ತಿಯ ಕುರಿತು ವಿಸ್ಮಯಗೊಳ್ಳುತ್ತ.
ಮೇಲ್ನೋಟಕ್ಕೆ ಎಲ್ಲೆಡೆಯು ಹರಡಿಕೊಂಡಿರುವ ವಿದ್ಯುಲ್ಲಹರಿಯ ರೂಪದ ಶಕ್ತಿಯೊಂದು, ಕಣರೂಪಿ ಧೂಳಿನಿಂದ ಹಿಡಿದು, ಭೂಗೋಳ, ಸೂರ್ಯ, ಚಂದ್ರ, ತಾರೆಗಳಂತಹ ವ್ಯೋಮಕಾಯಗಳವರೆಗೆ ಯಾವುದನ್ನು ಬಿಡದೆ ಎಲ್ಲವೂ ತಂತಮ್ಮ ಚಲನೆಯಲ್ಲಿರುವಂತೆ ನೋಡಿಕೊಂಡಿದೆ ಎಂದು ಅರ್ಥೈಸಬಹುದಾದರು, ಕವಿಯ ಮೂಲ ಒಳನೋಟ ಅದಕ್ಕಿಂತಲೂ ಆಳವಾಗಿರುವಂತಿದೆ. ಮೊದಲಿಗೆ ಹೇಳುವ ವಿವರಣೆಯಲ್ಲಿ ಮೇಲೆ ಎನ್ನುವುದು ಇಡೀ ಗಗನದ ಸಂಕೇತವಾಗಿದೆ. ಕೆಳಗೆ ಎನ್ನುವುದನ್ನು ಕೆಳಗಿನ ಲೋಕದ ಅಥವಾ ಪಾತಳದ ಕಲ್ಪನೆಗೆ ಸಮೀಕರಿಸಬಹುದು, ಅಥವಾ ನಮ್ಮ ಕಾಲಡಿ ಇರುವ ನಾವು ನಿಂತಿರುವ ಭೂಮಿಯೆಂದು ಅರ್ಥೈಸಬಹುದು. ಒಳಗೆ ಎನ್ನುವುದು ಭೂಮಿಯೊಳಗಿನ ಅಂತರಾಳವನ್ನು ಅಥವಾ ನಾವರಿಯದ ನಮ್ಮೊಳಗನ್ನು ಕುರಿತಾಗಿ ಆಡಿರಬಹುದು.
ಹೀಗೆ ಹತ್ತಿರ, ಸುತ್ತಮುತ್ತೆಲ್ಲ ಕಡೆ, ನಾವು ಕಾಣಬಹುದಾದೆಲ್ಲ ಮೂಲೆಮೂಲೆಯಲ್ಲಿ ಯಾವುದೊ ಒಂದು ಅದ್ಭುತ ಶಕ್ತಿ ವ್ಯಾಪಿಸಿಕೊಂಡಿದೆ – ಒಂದು ಅವ್ಯಕ್ತ ರೂಪದಲ್ಲಿ. ವಿದ್ಯುತ್ತಿನ ಹಾಗೆ ಇದು ಕೂಡ ಮೂರ್ತರೂಪದಲ್ಲಿ ಕಾಣಿಸಿಕೊಳ್ಳದಿದ್ದರು ಅದರ ಲಹರಿಯಾಗಿ ಅಥವಾ ಲೀಲೆಯಾಗಿ ಎಲ್ಲೆಡೆಗು ಹರಡಿದೆ ಈ ಶಕ್ತಿ. ನನಗನಿಸುವಂತೆ ಕವಿ ಇಲ್ಲಿ ಯಾವುದೊ ಶಕ್ತಿಯ ಬಗೆ ಮಾತನಾಡದೆ ಎಲ್ಲಾ ವ್ಯೋಮ ಕಾಯಗಳನ್ನು ತಂತಮ್ಮ ಸ್ವರೂಪ, ಕಕ್ಷೆ, ಜಾಗೆಗಳಲ್ಲಿ ನಿರಂತರವಾಗಿರುವಂತೆ ನೋಡಿಕೊಳ್ಳುವ ಬ್ರಹ್ಮಾಂಡದ ನಿಸರ್ಗಸಿದ್ದ ‘ಒಟ್ಟಾರೆ’ ಗುರುತ್ವ ಶಕ್ತಿಯ ಕುರಿತಾಗಿ ಹೇಳುತ್ತಿದ್ದಾರೆನಿಸುತ್ತದೆ. ವೈಜ್ಞಾನಿಕವಾಗಿ ಆ ಒಂದು ಶಕ್ತಿ ತಾನೆ ಎಲ್ಲವನ್ನು ಗಗನದ ಬಯಲಲ್ಲಿ ಚೆಲ್ಲಾಡಿಹೋಗದಂತೆ ಹಿಡಿದಿಟ್ಟುಕೊಂಡಿರುವುದು?
ಆ ಶಕ್ತಿಯೆ ವಿದ್ಯುಲ್ಲಹರಿಯ ಹಾಗೆ ವ್ಯೋಮಾಕಾಶದಲ್ಲಿರುವ ಎಲ್ಲಾ ಕಾಯಗಳನ್ನು, ಸೂಕ್ಷ್ಮ ಕಣದಿಂದ ಅಗಾಧ ಗಾತ್ರದ ಬೃಹತ್ ಕಾಯದವರೆಗೆ ಪ್ರತಿಯೊಂದನ್ನು, ತಂತಮ್ಮ ನಿಯಮಿತ ಗತಿ, ವಿಧಾನ, ಕಕ್ಷೆ, ದಿಕ್ಕು, ವೇಗಾದಿ ಪೂರಕಗಳಿಗನುಸಾರವೆ ಚಲನೆಯಲ್ಲಿಟ್ಟು ಅದರ ಸಮತೋಲನವನ್ನು ಕಾಯ್ದುಕೊಂಡಿದೆ. ಅದೆಷ್ಟು ಅಸೀಮ ಶಕ್ತಿಯೆಂದರೆ ಸೂಕ್ಷ್ಮರೂಪದ ಚಿಕ್ಕದಿರಲಿ, ಬೃಹತ್ ಗಾತ್ರದ ದೊಡ್ಡದಿರಲಿ ಯಾರನ್ನು ಬಿಟ್ಟುಕೊಡದೆ ಅವರನ್ನು ಮುನ್ನಡೆಸುತ್ತಿದೆ. ಅಂತ ಅಸೀಮ ಶಕ್ತಿ ಈ ಸೃಷ್ಟಿಯಲ್ಲಿ ಅಂತರ್ಗತವಾಗಿದೆಯೆಂಬ ಭಾವ, ಅದೆ ಸೃಷ್ಟಿಕರ್ತನ ಶಕ್ತಿ ರೂಪದ ತುಣುಕೆಂಬ ಅನಿಸಿಕೆ, ಇಂಗಿತ ಇಲ್ಲಿ ವ್ಯಕ್ತವಾಗಿದೆ.
ಅದರ ವಿಸ್ತೃತ ಆಯಾಮದಲ್ಲಿ ಸೃಷ್ಟಿಯ ಅಪರೂಪದ ಕೃತಿಯಾದ ನಾವು ಕೂಡ, ನಮ್ಮ ಅಂತರಾಳದ ಅದ್ಭುತ ಸಂಚಲನೆಯಲ್ಲಿಯೂ ಇದೆ ರೀತಿಯ ಶಕ್ತಿಯ ಬಂಧಿಗಳಾಗಿ ಪ್ರವರ್ತಿಸುತ್ತೇವೆ. ಆ ಅರ್ಥದಲ್ಲಿ ಬಾಹ್ಯದ ನಿರ್ಜಿವ ಜಗದ ಪ್ರಕ್ರಿಯೆಗೂ, ಆಂತರ್ಯದ ಜೈವಿಕ ಪ್ರೇರಿತ ಸಂಚಲನೆಗೂ ಮೂಲಭೂತ ವ್ಯತ್ಯಾಸವೇನು ಇರದು ಎನ್ನುವ ಹೋಲಿಕೆಯನ್ನು ನಿಷ್ಪತ್ತಿಸಬಹುದು. ಅಣುವಿನಿಂದ ಅಗಾಧದವರೆಗೆ ಯಾವುದೋ ಅಗೋಚರ, ಹತೋಟಿಯುಕ್ತ ಸಂಯೋಜಿತ ಚಾಲಕಶಕ್ತಿ ಎಲ್ಲವನ್ನು ಮುನ್ನಡೆಸುತ್ತಿದೆ, ನಿಯಂತ್ರಣದಲ್ಲಿಟ್ಟಿದೆ ಎನ್ನುವ ಸಾರ ಇಲ್ಲಿನ ಒಟ್ಟರ್ಥ.
ಈ ಚಾಲಕಶಕ್ತಿಯು ಚಲನಶೀಲತೆಯ ಪ್ರತೀಕ (ಕೈನೆಟಿಕ್ ಎನರ್ಜಿ). ನಮ್ಮ ಪುರಾತನ ಕಲ್ಪನೆಯಲ್ಲಿ ಚಲನೆಯಿರದೆ ಸ್ಥಾಯೀರೂಪದಲ್ಲಿರುವ ಜಡಶಕ್ತಿಯ (ಪೊಟೆನ್ಷಿಯಲ್ ಎನರ್ಜಿ) ಪ್ರಸ್ತಾಪವೂ ಉಂಟು. ಚಲನಶೀಲತೆಯನ್ನು ಪ್ರಕೃತಿಗೆ ಮತ್ತು ಜಡಶಕ್ತಿಯನ್ನು ಪುರುಷಕ್ಕೆ ಸಮೀಕರಿಸಿರುವ ಅದ್ಭುತ ವಿವರಣೆಯು ಅದರ ಉತ್ಪನ್ನವೇ !
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ
Facebook ಕಾಮೆಂಟ್ಸ್