ಘಟನೆ ೦೧: ತನು ಕಾಲೇಜಿಗೆ ಈಗಷ್ಟೆ ಸೇರಿಕೊಂಡಿದ್ದಾಳೆ. ಎಲ್ಲವೂ ಹೊಸತು. ಹೊಸ ಗೆಳೆಯರು, ಹೊಸ ಜಾಗ, ಹೊಸ ಪ್ರಾಧ್ಯಾಪಕರ ವರ್ಗ ಎಲ್ಲವೂ.. ಪಿ.ಯೂ.ಸಿ ಯ ಮೊದಲ ವರ್ಷಕ್ಕೆ ಹೋಗುವಾಗ ಎರಡನೇ ವರುಷಕ್ಕೆ ಬಡ್ತಿ ಪಡೆದ ಹುಡುಗರು ರೇಗಿಸುವುದು, ತಮಾಷೆ ಮಾಡುವುದು, ಸ್ನೇಹ ಬೆಳೆಸಿಕೊಳ್ಳಲು ನಿಲ್ಲಿಸಿ ಮಾತನಾಡಿಸುವುದು ಎಲ್ಲವೂ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ತುಂಬಾ ಮುಗ್ದೆಯಾಗಿದ್ದ ತನುವಿಗೆ ಅದು ಹಿಂಸೆ ಎನಿಸತೊಡಗಿತು. ಒಂದು ಹುಡುಗರ ಗುಂಪು ದಿನವೂ ಅವಳ ದಾರಿಗೆ ಅಡ್ಡಲಾಗಿ ನಿಂತು ರೇಗಿಸುತ್ತಿದ್ದರು. ಅವರಲ್ಲೇ ಇರುವ ಸ್ನೇಹಿತನಿಗೆ (ರಾಜ್) ಪ್ರೀತಿ ನಿವೇದನೆ ಮಾಡಬೇಕೆಂದು ತಾಕೀತು ಮಾಡಿದ್ದರು. ಅದನ್ನು ಇಷ್ಟಪಡದ ತನು ಅಲ್ಲಿಂದ ತಪ್ಪಿಸಿಕೊಳ್ಳಲು ಸಮಯ ಕೇಳಿದಳು. ವಾರಾಂತ್ಯಕ್ಕೆ ರಾಜ್ ನ ಎದುರು ನಿಲ್ಲಲೇ ಬೇಕಾಯಿತು. ಅವಳು ಹೆದರುತ್ತಾ ಕೈಕಾಲು ನಡುಗುತ್ತಾ ಬೆವತುಹೋಗಿದ್ದಳು. ಒಪ್ಪಿಗೆ ಸೂಚಿಸಿದಳು. ರಾಜ್ ನ ಸ್ನೇಹಿತರೆಲ್ಲರೂ ಅವಳನ್ನು ರಾಜ್ ನ ಪ್ರೇಯಸಿ ಎಂದು ಕರೆಯತೊಡಗಿದರು. ಸುತ್ತುವರೆದು ರಾಗಿಂಗ್ ಮಾಡಲಾರಂಭಿಸಿದರು. ಅವಳಿಗೆ ಹೇಗೆ ಎದುರಿಸಬೇಕೆಂದು ತಿಳಿಯಲಿಲ್ಲ. ಗೋಡೆಯ ಮೇಲೆಲ್ಲಾ ಅವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬರ್ಥದಲ್ಲಿ ಹೆಸರು ಬಳಸಿದರು. ಇದು ಅವಳ ಮನಸ್ಸನ್ನು ಘಾಸಿಗೊಳಿಸಿತು. ಒಂದು ತಿಂಗಳು ಕಳೆಯುವಷ್ಟರಲ್ಲಿ ತನು ನೇಣಿಗೆ ಶರಣಾಗಿದ್ದಳು..
**
ಘಟನೆ ೦೨: ಪ್ರಥಮ ಪಿ.ಯು. ವಿದ್ಯಾರ್ಥಿ ಅಜಯ್ ಗೆ ಯಾವ ವಿಷಯವೂ ಅರ್ಥವಾಗುತ್ತಿರಲಿಲ್ಲ. ಕನ್ನಡ ಮೀಡಿಯಂ ನಲ್ಲಿ ಓದಿದ ಅವನಿಗೆ ಪ್ರತಿಯೊಂದು ವಿಷಯವೂ ಇಂಗ್ಲೀಷಿನಲ್ಲಿಯೇ ಇದ್ದದ್ದು ಕಬ್ಬಿಣದ ಕಡಲೆಯ ಹಾಗಾಯಿತು. ಜೊತೆಗೆ ಅವನಿಗೆ ಸಿಕ್ಕ ಸ್ನೇಹಿತರ ಗುಂಪು ಕೂಡ ಹಾಗೆಯೇ ಇತ್ತು. ಸಿಗರೇಟು ಸೇದಿ(ಧೂಮ್ರಪಾನ ಆರೋಗ್ಯಕ್ಕೆ ಹಾನಿಕಾರಕ) ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಬರ್ತ್ ಡೇ ಪಾರ್ಟಿ ಅದು ಇದು ಇಲ್ಲದ ನೆಪ ಹೇಳಿ ಹಣ ಖರ್ಚು ಮಾಡುವುದರ ಜೊತೆಗೆ ಕುಡಿದು ಮನೆಗೆ ಹೋಗದೇ ಅಲ್ಲಿಯೇ ಮಲಗುತ್ತಿದ್ದರು. ಹೆತ್ತವರಿಗೆ ಕೇಳಿದ್ದಕ್ಕೆಲ್ಲ ಸುಳ್ಳಿನ ಕತೆ ಹೆಣೆಯುತ್ತಿದ್ದರು. ಅದರ ಪರಿಣಾಮ ಮೊದಲ ವರ್ಷದ ಫಲಿತಾಂಶ ಅಜಯ್ ಫೇಲಾಗಿದ್ದು. ಮನೆಗೆ ಬರದ ಅವನನ್ನು ತಾಯಿ ಹುಡುಕಿದ ರೀತಿ ಕಣ್ಣೀರು ತರಿಸುತ್ತಿತ್ತು. ಸಿಕ್ಕ ಸಿಕ್ಕ ಸ್ನೇಹಿತರಿಗೆಲ್ಲ ಕರೆ ಮಾಡಿ “ಅಜಯ್ ಮನೆಗೆ ಬಂದಿದ್ದನಾ..?? ಅಲ್ಲಿದ್ದಾನ? ಎಲ್ಲಿ ಇರುವನೆಂದಾದರೂ ಗೊತ್ತಿದೆಯಾ..” ಎಂದು ಅಳುತ್ತಿದ್ದರು..
**
ಇದು ಒಂದೆರಡು ಘಟನೆಗಳಷ್ಟೆ. ಇಂತಹುದು ಅನೇಕ ನಡೆಯುತ್ತದೆ. ಹರೆಯ ಎನ್ನುವುದು ಸುಕೋಮಲ ಬಳ್ಳಿಯಂತೆ. ಹೆಚ್ಚು ಒತ್ತಡ ಹಾಕಿದರೂ ಕಷ್ಟ, ಹಾಗೆ ಬಿಟ್ಟರೆ ಹೇಗಂದರೆ ಹಾಗೆ ಬೆಳೆಯುತ್ತದೆ. ಯಾವ ರೀತಿಯಾಗಿ ಮಕ್ಕಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೆತ್ತವರು ಒದ್ದಾಡುತ್ತಾರೆ. ಹರೆಯದ ಮನಸ್ಸಿನಲ್ಲಿ ಏನೇನು ನಡೆಯುತ್ತದೆ ಎಂದು ತಿಳಿದುಕೊಳ್ಳಲು ಆಪ್ತ ಸಮಾಲೋಚನೆ ಮಾಡಲೇ ಬೇಕು. ಮಗಳಾಗಲಿ, ಮಗನಾಗಲಿ ಕಾಲೇಜಿನಿಂದ ಬಂದ ಕೂಡಲೆ ಒಮ್ಮೆ ಏನೆಲ್ಲಾ ನಡೆದಿದೆ ಎಂದು ಕೇಳಬೇಕು. ನಾನೇನು ಚಿಕ್ಕ ಮಗುವಾ? ಎಂದು ಕೇಳಬಹುದು. ಆದರೂ ಅಲ್ಲಿನ ವಿಷಯ ನಾಜೂಕಾಗಿ ತಿಳಿದುಕೊಳ್ಳಬೇಕು. ಅಲ್ಲದೆ ಏನೇ ನಡೆದರೂ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಧೈರ್ಯ ತುಂಬ ಬೇಕು. ಪಾಸೋ ಫೈಲೋ ಜೀವನ ಬೇರೆಯದೇ ಇದೆ. ಅದು ಕಷ್ಟವಾದರೆ ಬೇರೆಯದೇ ಕೋರ್ಸ್ ಮಾಡಬಹುದು ಚಿಂತಿಸಬೇಡ ಎಂಬ ಧನಾತ್ಮಕ ವಿಚಾರಗಳನ್ನು ಹತ್ತಿರದಲ್ಲೇ ಕುಳಿತು ತಿಳಿಹೇಳಬೇಕು. ತನುವಿನ ವಿಚಾರಕ್ಕೆ ಬಂದರೆ “ಅವಳು ಚಂದದ ಹುಡುಗಿ ಎಂದು ರೇಗಿಸುವುದು ಸಹಜವೇ..” ಆದರೆ ಅದನ್ನು ಮನೆಯವರ ಹತ್ತಿರ ಬಂದು ಹೇಳಬೇಕಿತ್ತು. ಮಕ್ಕಳು ಚಿಕ್ಕದಿರುವಾಗ ಹೆತ್ತವರೇ ಕೈ-ಕೈಹಿಡಿದು ಬಿಟ್ಟು ಬರುತ್ತಾರೆ. ಆಗ ಮಕ್ಕಳಿಗೆ ಈ ಪ್ರಪಂಚವೇ ಒಂದು ಸೋಜಿಗದಂತೆ, ವಿಸ್ಮಯದಂತೆ ಕಾಣುತ್ತದೆ. ಅಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನು ಓಡೋಡಿ ಬಂದು ಕುತೂಹಲದಿಂದ ಹೇಳತೊಡಗುತ್ತವೆ. ಒಂದಷ್ಟು ದಿನ ಕೇಳಿಸಿಕೊಂಡ ಹೆತ್ತವರು ಕೊನೆಗೊಂದು ದಿನ ಬೈದುಬಿಡುತ್ತಾರೆ. ನಿನ್ನ ಕತೆ ಕೇಳಲು ಸಮಯವಿಲ್ಲ. ತರಗತಿಯ ಅಧ್ಯಾಪಕರು ಕೊಟ್ಟ ಮನೆಕೆಲಸ ಮಾಡಿ, ಓದು ಹೋಗು..” ಎಂದು. ಅಲ್ಲಿಂದ ಶುರುವಾಗುತ್ತದೆ. ಮನದೊಳಗೆ ಯುದ್ಧ. ಯಾವುದು ಅಗತ್ಯವಾಗಿ ಹೇಳಬೇಕೋ ಅದನ್ನೇ ಮಕ್ಕಳು ಭಯದಿಂದ ಹೇಳಲು ಹಿಂಜರಿಯಿತ್ತಾರೆ. ಅದಕ್ಕಿಂತಲೂ ಅಸುರಕ್ಷತೆ ಕಾಡುತ್ತದೆ. ಆತ್ಮ ಸ್ಥೈರ್ಯ ಕುಂದುತ್ತದೆ. ನಮ್ಮ ಹೆತ್ತವರು ನಮಗೆ ಒತ್ತಾಸೆಯಾಗಿಲ್ಲ ಎನ್ನುವ ಭಾವ ಬಲವಾಗಿ ಕುಳಿತುಬಿಡುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿ ಪರಿಹಾರ ಹೆತ್ತವರೇ ಹುಡುಕಬೇಕು. ಸ್ನೇಹಿತರಂತೆ ವ್ಯವಹರಿಸಬೇಕು. ಇಲ್ಲದಿದ್ದರೆ ತುಂಬಲಾರದ ನಷ್ಟ ಅನುಭವಿಸುವುದು ಹೆತ್ತವರೇ.
– ಸಿಂಧು ಭಾರ್ಗವ್.
Facebook ಕಾಮೆಂಟ್ಸ್