‘ಹರಿವರಾಸರಂ ವಿಶ್ವಮೋಹನಂ..’ ಎಂಬ ಪದ್ಯ ಕಿವಿಗೆ ಬಿದ್ದರೆ ಸಾಕು ಅದೇನೋ ಪುಳಕ. ನಿಂತಲ್ಲೆ ಕಾಲಿನ ಪಾದರಕ್ಷೆಯನ್ನು ತೆಗೆದು ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯನ್ನು ಸ್ಮರಿಸಿಕೊಂಡು ಕೈಮುಗಿಯುವ ಎಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಶಬರಿಮಲೆ ದೇಗುಲದಲ್ಲಿ ದಿನದ ಪೂಜೆಯೆಲ್ಲಾ ಮುಗಿದ ಬಳಿಕ ರಾತ್ರಿ ಸ್ವಾಮಿಯನ್ನು ಮಣಿಕಂಠನರೂಪದಲ್ಲಿ ಕಲ್ಪಿಸಿಕೊಂಡು ಮಗುವನ್ನು ಜೋಗುಳ ಹಾಡಿ ಮಲಗಿಸುತ್ತಾರೆ. ಆಗ ‘ಹರಿವರಾಸರಂ’ ಗೀತೆಯನ್ನು ಹಾಡಿ ಅಯ್ಯಪ್ಪ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. 1950ರಲ್ಲಿ “ಕುಂಭಕುಡಿ ಕುಲತೊರ್ ಅಯ್ಯರ್ ರಚಿಸಿ ಖ್ಯಾತ ಸಂಗೀತ ನಿರ್ದೇಶಕರಾದ ಜಿ.ದೇವರಾಜನ್ ರಾಗ ಸಂಯೋಜನೆಯಲ್ಲಿ ಪ್ರಸಿದ್ಧ ಗಾಯಕ ಶ್ರೀ ಯೇಸುದಾಸರ ಕಂಠಸಿರಿಯಲ್ಲಿ ಮೂಡಿ ಬಂದ ಈ ಹಾಡು ಕೋಟ್ಯಾಂತರ ಅಯ್ಯಪ್ಪ ಭಕ್ತರ ಪಾಲಿಗೆ ಸ್ಮರಣೀಯವಾದುದು. ಒಂದು ರೀತಿಯಲ್ಲಿ ಅಯ್ಯಪ್ಪ ಭಕ್ತರ ಪಾಲಿನ ಪ್ರಾಣಗೀತೆ ಎಂದರೂ ತಪ್ಪಾಗಲಾರದು.
1950ರ ಕಾಲದಲ್ಲಿ ಕೇರಳದ ಕೆಲವು ವ್ಯಕ್ತಿಗಳು ಕಪ್ಪು ಬಟ್ಟೆ ಧರಿಸಿ, ಪ್ರತ್ಯೇಕವಾಗಿ ಶಿಬಿರಕಟ್ಟಿಕೊಂಡು ಕಠಿಣ ವ್ರತ ನಿಮಯ ಪಾಲಿಸಿ ತೀರ್ಥಯಾತ್ರೆ ಹೋಗುತ್ತಿದ್ದುದನ್ನು ನೋಡಿದ ಕರ್ನಾಟಕದ ಮಂದಿಯು ಈ ಕುರಿತು ವಿಚಾರಿಸಿದಾಗ ಅವರೆಲ್ಲ ಹೋಗುತ್ತಿದ್ದುದು ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಮಂದಿರಕ್ಕೆಂದು ತಿಳಿಯಿತು. ತೀರ್ಥಯಾತ್ರೆಗಳಲ್ಲಿ ಬದರಿ, ಕೇದಾರನಾಥ, ಅಮರನಾಥದಷ್ಟೇ ಕಠಿಣವಾಗಿದ್ದರೂ ಅಯ್ಯಪ್ಪನ ಮಂದಿರಕ್ಕೆ ಹೋಗುವ ಭಕ್ತರ ಸಂಖ್ಯೆ ದಿನೇ ದಿನೇ ಬೆಳೆಯುತ್ತಾ ಹೋಯಿತು. ಮಕರ ಸಂಕ್ರಾಂತಿಯ ಮಕರ ವಿಳ್ಳಕ್ಕು ಮತ್ತು ಮಕರ ಜ್ಯೋತಿಯ ದರ್ಶನ ಪಡೆಯಲು ಬರುವ ಭಕ್ತ ಸಮೂಹಕ್ಕೆ ಅಯ್ಯಪ್ಪ ಸ್ವಾಮಿಯು ಭಾಗ್ಯದಾತ. ಕಲಿಯುಗದ ಪ್ರತ್ಯಕ್ಷ ದೇವರೆಂದೇ ಪ್ರಸಿದ್ಧಿ ಪಡೆದ ಈ ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ವಿಶ್ವದ ಮೂಲೆ ಮೂಲೆಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಇದ್ದಾರೆ.
ಅಯ್ಯಪ್ಪ ವ್ರತಧಾರಿಯ ತೀರ್ಥಯಾತ್ರೆ ಎಂದರೆ ಅದು ಅಷ್ಟು ಸುಲಭವಲ್ಲ. ತೀರ್ಥಯಾತ್ರೆಯ ಮೊದಲು 48 ದಿನಗಳ ಕಾಲ ಪ್ರತ್ಯೇಕವಾಗಿ ಶಿಭಿರದಲ್ಲಿದ್ದು, ಸೂರ್ಯೋದಯಕ್ಕೆ ಮುಂಚೆ ತಣ್ಣೀರಿನಲ್ಲಿ ಸ್ನಾನ ಮಾಡಿ, ಗುರು ಸ್ವಾಮಿಯ ನೇತೃತ್ವದಲ್ಲಿ ಶರಣು ಕರೆದು, ಸ್ವಾಮಿಗೆ ದೀಪಬೆಳಗಿದ ನಂತರ ತನ್ನ ಉಪಾಹಾರವನ್ನು ಸೇವಿಸಬೇಕಾಗುತ್ತದೆ. ಮಲಮೂತ್ರ ವಿಸರ್ಜನೆ ಮಾಡಿದರೆ ಮತ್ತೆ ಸ್ನಾನ ಮಾಡಿ ಭಸ್ಮ ಬಳಿದುಕೊಳ್ಳಬೇಕು. ನಿದ್ದೆ ಮಾಡಿದರೂ ಈ ನಿಯಮ ಅನ್ವಯ. ತನ್ನ ಶಿಬಿರದಲ್ಲಿ ತಯಾರಿಸಿದ ಆಹಾರವಲ್ಲದೆ ಹೊರಗೆ ಎಲ್ಲೂ ಆಹಾರ ಸೇವಿಸುವಂತಿಲ್ಲ ಮತ್ತು ಸೂರ್ಯಾಸ್ತದ ನಂತರ ಪೂಜೆಯಾಗುವ ವರೆಗೆ ನೀರು ಸಹ ಕುಡಿಯುವಂತಿಲ್ಲ. ರಾತ್ರೆ ಸ್ನಾನ ಮಾಡಿ ಶರಣು ಕರೆದು ಸ್ವಾಮಿಗೆ ದೀಪ ಬೆಳಗಿದ ನಂತರವಷ್ಟೆ ಮಿತವಾದ ಉಪಾಹಾರ ಸೇವಿಸಬೇಕು. ಏನೇ ಆಹಾರ ಸೇವಿಸುವುದಿದ್ದರೂ ಅದಕ್ಕೆ ನೀರಿನಿಂದ ಪ್ರೋಕ್ಷಣೆ ಮಾಡಿ ಸ್ವಾಮಿಯನ್ನು ನೆನೆದು ಸೇವಿಸಬೇಕು. ಚಪ್ಪಲಿ ಹಾಕುವಂತಿಲ್ಲ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುವಂತಿಲ್ಲ. ಕಪ್ಪು ಬಣ್ಣದ ಬಟ್ಟೆಯೊಂದೇ ಯೋಗ್ಯ. ಬೀಡಿ ಸಿಗರೇಟು, ತಂಬಾಕು, ಮದ್ಯ ಎಲ್ಲವೂ ನಿಷಿದ್ಧ. ಒಟ್ಟಿನಲ್ಲಿ ಹಿತಮಿತವಾದ ಆಹಾರ, ಮಿತವಾದ ಮಾತು, ಸದಾ ಕಾಲ ಅಯ್ಯಪ್ಪನ ಧ್ಯಾನ ಮಾಡುತ್ತಾ ಆತ್ಮ ಸಂಯಮದೊಂದಿಗೆ, ಆಡಂಬರ ರಹಿತವಾಗಿ 48ದಿನಗಳ ಕಾಲ ಕಳೆಯಬೇಕು. ಸಾಮಾನ್ಯವಾಗಿ ನವೆಂಬರ್ ತಿಂಗಳಿಂದ ಜನವರಿ 14ರವರೆಗಿನ ಮೈಕೊರೆಯುವ ಚಳಿಯಲ್ಲಿ ಈ ವ್ರತಪಾಲನೆ ಒಂದು ತಪಸ್ಸೇ ಸರಿ. ಹೀಗಾಗಿಯೇ ‘ಮಕರದ ಮಂಜಿನಲಿ ಶಬರಿಮಲೆ’ ಎಂಬ ಹಾಡನ್ನು ಕೇಳುತ್ತಾ ತಣ್ಣೀರ ಸ್ನಾನ ಮಾಡಿ ಶರಣು ಕರೆಯುವಾಗ ನಿಜವಾಗಿಯೂ ನಮ್ಮ ಮೈ ಮನ ಪುಳಕವಾಗುತ್ತದೆ.
ಮಕರ ಜ್ಯೋತಿದರ್ಶನಕ್ಕೆ ತೆರಳುವ ಭಕ್ತರು ತಮ್ಮ ಶಿಬಿರದಲ್ಲಿ ಅನ್ನದಾನ, ಮಹಾಪೂಜೆಯೊಂದಿಗೆ ಕುದಿಯುತ್ತಿರುವ ಬಿಸಿಎಣ್ಣೆಯಲ್ಲಿ ಅಪ್ಪವನ್ನು ತೆಗೆಯುವ ಅಪ್ಪಸೇವೆ, ಕೆಂಡಸೇವೆಯಂತಹ (ನಿಷ್ಠೆಯಿಂದ ವ್ರತಪಾಲಿಸಿದವರಿಗೆ ಸಣ್ಣ ಗುಳ್ಳೆಯು ಕಾಣಿಸಿಕೊಳ್ಳುವುದಿಲ್ಲ) ಕಠಿಣ ಸೇವೆಗಳನ್ನು ನೆರವೇರಿಸಿ ಗುರುಸ್ವಾಮಿಯ ನೇತೃತ್ವದಲ್ಲಿ ಇರುಮುಡಿ ಮತ್ತು ಪಡಿಯಕ್ಕಿಯೊಂದಿಗೆ ಯಾತ್ರೆಗೆ ಹೊರಡುತ್ತಾರೆ. ಇರುಮುಡಿಯಲ್ಲಿ ಅಯ್ಯಪ್ಪನಿಗೆ ಪ್ರಿಯವಾದ ತುಪ್ಪ ಮತ್ತು ತೆಂಗಿನಕಾಯಿಯನ್ನು ಕಟ್ಟಿಕೊಂಡು ತಲೆಯಲ್ಲಿ ಹೊತ್ತುಕೊಂಡು ಯಾತ್ರೆಗೆ ಹೊರಟರೆ, ಗುರುಸ್ವಾಮಿಯ ಅಪ್ಪಣೆ ಇಲ್ಲದೇ ಇರುಮುಡಿಯನ್ನು ತಲೆಯಿಂದ ಕೆಳಗಿಳಿಸುವಂತಿಲ್ಲ. ಒಟ್ಟಿನಲ್ಲಿ ಗುರುಸ್ವಾಮಿ ಎಂದೆನಿಸಿಕೊಂಡವನು ಇತರ ವ್ರತಧಾರಿಗಳಿಗೆ ಅಯ್ಯಪ್ಪ ಸ್ವಾಮಿಯ ದರುಶನಕ್ಕೆ ದಾರಿದೀಪವಾಗಿ ನಿಲ್ಲಬೇಕಾಗುತ್ತದೆ. 42ದಿನಗಳ ಕಾಲ ಶಿಬಿರದಲ್ಲಿ ಪಟ್ಟ ಶ್ರಮದ ಮಹತ್ವವೆಲ್ಲವೂ ಈ ಯಾತ್ರೆಯಲ್ಲಿ ಅನುಭವಕ್ಕೆ ಬರುತ್ತದೆ.
ಅಯ್ಯಪ ಸ್ವಾಮಿಯ ಮತ್ತು ವಾವರ ಸ್ವಾಮಿಯ ನಡುವೆ ನಡೆದ ಯುದ್ಧ ಮತ್ತು ಹಿಂದೂ ಮುಸ್ಲಿಂ ಸಾಮರಸ್ಯದ ಸ್ನೇಹದ ಹಿನ್ನೆಲೆಯಲ್ಲಿ ಎರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ವ್ರತಧಾರಿಗಳು ವಾವರಸ್ವಾಮಿಯ ಮಸೀದಿಗೆ ಭೇಟಿಕೊಡುವ ಮೂಲಕ ಯಾತ್ರೆಯನ್ನು ಆರಂಭಿಸುತ್ತಾರೆ. ಎರಿಮಲೆಯಿಂದ ಪಂಬಾ ನದಿವರೆಗಿನ 48ಮೈಲಿಗಳ ದೀರ್ಘಯಾತ್ರೆಯ ದುರ್ಗಮ ದಾರಿಯನ್ನು ಜನವರಿ ತಿಂಗಳಿನಿಂದ ತೆರೆಯಲಾಗುತ್ತದೆ. ಪ್ರಥಮ ಭಾರಿಗೆ ಅಯ್ಯಪ್ಪದೇಗುಲಕ್ಕೆ ಭೇಟಿಕೊಡುವ ಕನ್ನೆ ಸ್ವಾಮಿಗಳೆನಿಸಿಕೊಂಡವರು ಅಳುದಾ ನದಿಯಲ್ಲಿ ಮಿಂದು ಅತ್ಯಂತ ಕಠಿಣವಾದ ಅಳುದಾ ಬೆಟ್ಟವನ್ನು ಹತ್ತುತ್ತಾರೆ. ಅಯ್ಯಪ್ಪಸ್ವಾಮಿಯಿಂದ ಪಾಪವಿಮೋಚನೆಗೊಂಡು ಮಹಿಷಿಯು ಸ್ವರ್ಗದಿಂದ ಭೂಲೋಕ್ಕೆ ಬಿದ್ದ ಸ್ಥಳವು ಅಳುದಾ ಬೆಟ್ಟದ ತುದಿಯಲ್ಲಿ ಇಂದಿಗೂ ಇದೆ. ಇದು ತುಂಬಾ ಆಳವಾದ ಕಂದರವಾಗಿ ಮಾರ್ಪಟ್ಟಿತ್ತು ಹೀಗಾಗಿ ಇದನ್ನು ಮುಚ್ಚುವ ಸಲುವಾಗಿ ಅಳುದಾ ನದಿಯಲ್ಲಿ ಮಿಂದ ಪ್ರತಿಯೊಂದು ಕನ್ನೆ ಸ್ವಾಮಿಗಳು ಒಂದು ಕಲ್ಲನ್ನು ಮಹಿಷಿ ಬಿದ್ದ ಜಾಗದಲ್ಲಿ ತಂದು ಹಾಕುವ ಸಂಪ್ರದಾಯವಿದೆ ಎಂಬುದು ಹಿರಿಯರು ನೀಡಿದ ಮಾಹಿತಿ. ಪ್ರತಿವರ್ಷ ಕೋಟಿ ಕೋಟಿ ಕನ್ಯೆ ಸ್ವಾಮಿಗಳು ಕಲ್ಲುಗಳನ್ನು ತಂದು ಹಾಕಿದರೂ ಕಲ್ಲಿನ ರಾಶಿ ಬೆಟ್ಟದ ತುದಿಯಿಂದ ಒಂದು ಅಡಿಯು ಎರದೇ ಇರುವುದು ಅಯ್ಯಪ್ಪ ಭಕ್ತರ ಪಾಲಿಗೆ ಒಂದು ವಿಸ್ಮಯ. ನಂತರ ಕರಿಮಲೆಯ ದುರ್ಗಮಬೆಟ್ಟವನ್ನು ಇಳಿದು ಅಯ್ಯಪ್ಪ ಭಕ್ತಾದಿಗಳು ಪವಿತ್ರ ಪಂಬಾ ನದಿಯ ತಟವನ್ನು ತಲುಪುತ್ತಾರೆ. ಅಯ್ಯಪ್ಪ ಸ್ವಾಮಿಯ ಆಶೀರ್ವಾದವಿಲ್ಲದೆ ಅಳುದಾ ಬೆಟ್ಟವನ್ನು ಹತ್ತುವುದಾಗಲೀ ಕರಿಮಲೆ ಬೆಟ್ಟವನ್ನು ಇಳಿಯುವುದಾಗಲಿ ಸಾಧ್ಯವಿಲ್ಲ ಎಂಬುದು ವ್ರತಧಾರಿಗಳ ಪ್ರತ್ಯಕ್ಷ ಅನುಭವ.
ಪಂಬಾ ನದಿ ಮುಖೇನ ಗಣೇಶಬೆಟ್ಟ ಮಾರ್ಗವಾಗಿ ನೀಲಿಮಲೆ ಬೆಟ್ಟವನ್ನು ಹತ್ತಿಕೊಂಡು, ಶಬರಿಪೀಠ, ಶರಣ್ ಗುತ್ತಿ ಮಾರ್ಗವಾಗಿ ಅಯ್ಯಪ್ಪ ದೇಗುಲವನ್ನು ಸೇರಿ ಜ್ಯೋತಿದರ್ಶನ ಪಡೆಯುವ ಮೂಲಕ ಅಯ್ಯಪ್ಪ ಭಕ್ತರು ತಾವು ತಂದ ತುಪ್ಪ, ತೆಂಗಿನ ಕಾಯಿಯನ್ನು ಸ್ವಾಮಿಗೆ ಸಮರ್ಪಿಸಿ, ಕ್ಷಣ ಕಾಲದ ದರುಶನ ಪಡೆದು ಪುನೀತರಾಗುತ್ತಾರೆ. ಕಠಿಣವಾದ ಯಾತ್ರೆಯನ್ನು ಮುಗಿಸಿಕೊಂಡು ಬಂದ ಎಷ್ಟೋ ವ್ರತಧಾರಿಗಳು ತಮ್ಮ ಜೀವನದಲ್ಲಿ ಅಯ್ಯಪ್ಪನ ಕೃಪೆಯಿಂದ ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಪಡದು ಕೃತಾರ್ಥರಾಗಿದ್ದಾರೆ. ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ತಮಿಳು ನಾಡಿನ ಸೂಪರ್‍ಸ್ಟಾರ್ ಶ್ರೀ ರಜನೀಕಾಂತ್, ಕರ್ನಾಟಕದ ಡಾ| ರಾಜ್ ಕುಮಾರ್, ಮಹಾರಾಷ್ಟ್ರದ ವಿವೇಕ್ ಒಬೆರಾಯ್, ಇತ್ಯಾದಿ ಇತ್ಯಾದಿ ಘನವೆತ್ತ ಸ್ಥಾನದಲ್ಲಿರುವ ವ್ಯಕ್ತಿಗಳು ಅಯ್ಯಪ್ಪನ ಭಕ್ತರಾಗಿದ್ದಾರೆ. ಮಕರದ ಮಂಜಿನನಡುವೆ ದುರ್ಗಮ ಕಾಡಿನಮಧ್ಯದಲ್ಲಿ ನಿಂತು ಮಕರಜ್ಯೋತಿ ದರ್ಶನದ ಮಹಿಮೆಯನ್ನು ಎಷ್ಟು ಕೊಂಡಾಡಿದರೂ ಅಯ್ಯಪ್ಪ ಭಕ್ತರಿಗೆ ತೃಪ್ತಿಯಿಲ್ಲ. ಭಕ್ತರು ತಂದ ತುಪ್ಪದ ತೆಂಗಿನ ಕಾಯಿ ಉರಿಯಲು ಹಾಕಿದ ಬೆಂಕಿಯ ರಾಶಿಯ ಸಮೀಪದಲ್ಲಿ ಬೆಂಕಿಯ ಉರಿಯ ನಡುವೆಯೂ ಹಚ್ಚ ಹಸಿರಿನಿಂದ ಹಸಿರಾಗಿರುವ ಮರವನ್ನು ನೋಡಿದರೆ ಇದೊಂದು ಅತಿಶಯ ಕ್ಷೇತ್ರವೆಂಬುದರಲ್ಲಿ ಯಾವು ಅನುಮಾನವೂ ಇಲ್ಲ. ಅಯ್ಯಪ್ಪ ಮಾಲೆ ಹಾಕಿ ಶ್ರದ್ಧಾ ಭಕ್ತಿಯಿಂದ ಯಾತ್ರೆ ಕೈಗೊಂಡ ಪ್ರತಿಯೊಬ್ಬರಿಗೂ ಅಯ್ಯಪ್ಪ ಸ್ವಾಮಿಯ ಅಲೌಕಿಕ ಶಕ್ತಿಯ ಗೋಚರವಾಗಿಯೇ ಆಗುತ್ತದೆ. ಕಾಲಬದಲಾಗಿದೆ ಇದೆಲ್ಲಾ ಸುಳ್ಳು ಎಂಬ ಹಾರಿಕೆಯ ಉತ್ತರ ನೀಡುವವರು ‘ವಾಲ್ಮೀಕಿಯ ಮನಃಪರಿವರ್ತನೆಗೈದು ರಾಮಾಯಣ ರಚಿಸುವಂತೆ ಪ್ರೇರೇಪಿಸಿದ ಪುಣ್ಯಭೂಮಿ ನಮ್ಮ ನೆಲ’ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕಿದೆ.
ಆದರೆ ಈಗಿನ ಅಯ್ಯಪ್ಪ ವೃತಧಾರಿಗಳನ್ನು ಅವರು ಪಾಲಿಸುವ ವ್ರತನಿಯಮಗಳನ್ನು ನೋಡಿದಾಗ ಮನಸ್ಸಿನಲ್ಲಿ ಬೇಸರ ಮೂಡುತ್ತದೆ. ಅಯ್ಯಪ್ಪ ಮಾಲೆಯೊಂದು ಧರಿಸಿ, ಕಪ್ಪು ಬಟ್ಟೆ ಉಟ್ಟು ಬರಿಗಾಲಲ್ಲಿ ನಡೆದರೆ ಅದೇ ಅಯ್ಯಪ್ಪ ವ್ರತಧಾರಿ ಪಾಲಿಸಬೇಕಾದ ನಿಯಮ ಎಂಬಂತಾಗಿದೆ. ಮೂರು ಹೊತ್ತು ಪಾನ್, ಜರ್ದ, ಬೀಡ, ಚೀವಿಂಗಮ್ ಜಗಿಯುತ್ತ, ಬೀಡಿ ಸಿಗರೆಟು ಎಳೆಯುತ್ತಾ, ಕಿವಿಗೆ ಇಯರಫೋನ್ ಇಟ್ಟು, ಮೊಬೈಲಿನಲ್ಲಿ ಹರಟೆಹೊಡೆಯುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವ ಅನೇಕ ವ್ರತಧಾರಿಗಳನ್ನು ನಾವು ನೋಡುತ್ತೇವೆ. ಯಾಕೆ ಹೀಗಾಯಿತು ಎಂದು ನೋಡಿದರೆ ಅಯ್ಯಪ್ಪವ್ರತಧಾರಿಗಳಿಗೆ ದಾರಿದೀಪವಾಗಬೇಕಿದ್ದ ಕೆಲವೊಂದು ಗುರುಸ್ವಾಮಿಗಳು ಈ ವ್ರತವನ್ನು ಹಣಗಳಿಸುವ ದಂಧೆಯಾಗಿ ಪರಿಗಣಿಸಿರುವುದು. ಕೇವಲ ಅಯ್ಯಪ್ಪ ದೇಗುಲಕ್ಕೆ ಭೇಟಿ ಕೊಟ್ಟ ಸಂಖ್ಯೆಯ ಲೆಕ್ಕದಿಂದ ಗುರುಸ್ವಾಮಿ ಎನಿಸಿಕೊಂಡ ಇಂತವರಿಂದ ಶ್ರದ್ಧಾ ಭಕ್ತಿಯಿಂದ ಅಯ್ಯಪ್ಪ ಮಾಲೆ ಧರಿಸುವ ಭಕ್ತರಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ, ಅತ್ತ ಗುರುವನ್ನು ನಿಂದಿಸಲಾಗದೆ ಇತ್ತ ವಸ್ತುಸ್ಥಿತಿಯನ್ನು ಸಹಿಸಿಕೊಳ್ಳಲಾಗದೆ ಚಡಪಡಿಸುವ ಮನೋಸ್ಥಿತಿಯಲ್ಲಿ ಅಯ್ಯಪ್ಪನ ವ್ರತಧಾರಣೆಯೇ ಬೇಡ ಎಂಬಂತಾಗಿದೆ. ಕೆಲವೊಂದು ಶಿಬಿರದ ಗುರುಸ್ವಾಮಿಗಳು ಪ್ರತಿಷ್ಠೆಗೆ ಬಿದ್ದವರಂತೆ ರಾತ್ರಿ 11.30ಯಾದರೂ ರಾತ್ರಿಯ ನಿತ್ಯದ ಪೂಜೆಯನ್ನು ಮತ್ತು ಶನಿವಾರದ ಪಡಿಪೂಜೆಯನ್ನು ಮುಗಿಸದೇ ವ್ರತಧಾರಿಗಳನ್ನು, ವ್ರತಧಾರಿಗಳ ಮನೆಯವರನ್ನು ವಿನಾಕಾರಣ ಕಾಯಿಸುತ್ತಾರೆ. ಅವರ ಭಕ್ತಿ ಇಂತಹ ಕಪಟ ಗುರುಸ್ವಾಮಿಗಳಿಗೆ ದುಡ್ಡು ಸಂಪಾದನೆಯ ರಹದಾರಿಯಾಗಿದೆ. ಕೆಲವರು ಇರುಮುಡಿ ಕಟ್ಟುವ ಸಂದರ್ಭ ಭಕ್ತರು ಭಕ್ತಿಯಿಂದ ಹಾಕುವ ನೋಟಿನಮೇಲೆ ಪ್ರೀತಿ ನೆಟ್ಟವರಂತೆ ವರ್ತಿಸಿದರೆ, ಕೆಲವು ವ್ರತಧಾರಿಗಳು ಕುಟುಂಬಸ್ಥರು ಇರುಮುಡಿಕಟ್ಟುವ ಸಂದರ್ಭ ಭಕ್ತಿಯಿಂದ ಕೊಡುವ ಹಣದಲ್ಲಿ ಮುಂದಿನ ಎಷ್ಟು ದಿನಗಳನ್ನು ಗಮ್ಮತ್ತಿನಿಂದ ಕಳೆಯಬಹುದೆಂದು ಲೆಕ್ಕಚಾರದಲ್ಲಿರುತ್ತಾರೆ.
ಗುರುವಿನ ಸ್ಥಾನದ ಜವಾಬ್ದಾರಿಯನ್ನರಿಯದೆ ದೇಗುಲ ಪ್ರವಾಸದ ನೆಪದಲ್ಲಿ ಬೀಚ್, ಪಾರ್ಕ್, ವಸ್ತುಪ್ರದರ್ಶನ ಎಂಬಿತ್ಯಾದಿ ಜನಜಂಗುಳಿಯ ಸ್ಥಳಗಲ್ಲಿ ಸಮಯ ಕಳೆಯುವುದನ್ನು ನೋಡುವಾಗ ಮನದಾಳದಲ್ಲಿ ನಮ್ಮ ಸಂಸ್ಕೃತಿಯನ್ನು ನಾವೆ ವಿನಾಶದ ಅಂಚಿಗೆ ದೂಡುತಿದ್ದೇವೆ ಎಂದೆನಿಸುತ್ತದೆ. ಗುರುಸ್ವಾಮಿ ಎನಿಸಿಕೊಂಡು ಭಕ್ತರಿಂದ ಹಣಪೀಕಿಸುವುದು ಎಷ್ಟು ಸರಿ ? ಶೋಕಿಗಾಗಿ, 10ನೇ ವರ್ಷ, 15ನೇ ವರ್ಷ 18ವರ್ಷ 25ನೇ ವರ್ಷದ ಯಾತ್ರೆಎಂದೆಲ್ಲ ಪ್ರಚಾರದ ಗೀಳಿನಲ್ಲಿ ಹೂವಿನ ಮಾಲೆಯಲ್ಲಿ ಅಲಂಕಾರ, ಸಮ್ಮಾನ ಮಾಡಿಸಿಕೊಳ್ಳುವುದು ಯಾವ ಪುರುಷಾರ್ಥಕ್ಕಾಗಿ ? ಆತ್ಮ ಸಂಯಮವಿಲ್ಲದೇ ತಮ್ಮ ವಿಚಾರಗಳ ಮೇಲೆ ಹಿಡಿತವಿಲ್ಲದೇ, ಮಾಲೆ ಧರಿಸಿ ಏನು ಪ್ರಯೋಜನ ? ಇಂತಹ ಪ್ರವೃತ್ತಿ ಹಿಂದೂ ಧರ್ಮವನ್ನು ಜರಿಯುವವರಿಗೆ ನಾವೇ ಮತ್ತಷ್ಟು ಅವಕಾಶವನ್ನು ಕೊಟ್ಟಂತಾಗುವುದಿಲ್ಲವೇ ? ದೇವರ ಮೇಲೆ ನಂಬಿಕೆ ಇಲ್ಲದೇ ಈ ವ್ರತಾಚರಣೆ ಪಾಲನೆ ನಿಯಮಗಳನ್ನು ತಿಳಿಯದೇ ಟೀಕಿಸುವವರ ಸಂಖ್ಯೆ ದೊಡ್ಡದಿರುವಾಗ ಕಪಟವ್ರತಧಾರಿಗಳು, ಕಪಟ ಗುರುಸ್ವಾಮಿಗಳಿಂದ ಎಲ್ಲಾ ಅಯ್ಯಪ್ಪಭಕ್ತರೂ ತಲೆತಗ್ಗಿಸುವಂತಾಗಿದೆ. ಒಂದೆಡೆ ಹಿಂದೂ ಧರ್ಮದಲ್ಲಿ ಹುಟ್ಟಿರುವುದೇ ದುರಂತ ಎಂಬ ಪರಿಸ್ಥಿತಿನ್ನು ನಿರ್ಮಾಣಮಾಡಿ, ಹಿಂದೂ ಸಂಸ್ಕೃತಿಯನ್ನು ಒಡೆಯಲು ಬುದ್ಧಿಜೀವಿಗಳೆನಿಸಿಕೊಂಡವರು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಅದೇಷ್ಟೋ ವಿದೇಶಿ ಎನ್.ಜಿ.ಒಗಳು ಹಿಂದೂ ಸಂಸ್ಕೃತಿಯನ್ನು ಒಂದು ವಿಕೃತಿ ಎಂದು ಬಿಂಬಿಸಲು ಕೆಲವೊಂದು ದೃಶ್ಯಮಾಧ್ಯಮಗಳನ್ನು ಖರೀದಿಸಿ ನಮ್ಮ ಮೇಲೆ ಛೂ ಬಿಟ್ಟಿದೆ. ಹಿಂದೂ ಧರ್ಮವನ್ನು ಒಡೆಯಬೇಕಾದರೆ ಅವರ ನಂಬಿಕೆಗೆ ಕೊಡಲಿ ಏಟು ನೀಡಬೇಕೆಂದು ಭಾವಿಸಿ ನಮ್ಮ ಸಂಸ್ಕೃತಿಯ ಮೂಲಬೇರುಗಳನ್ನು ಆಧುನಿಕತೆಯ ಹೆಸರಿನಲ್ಲಿ, ಮೂಢನಂಬಿಕೆಯ ಹೆಸರಿನಲ್ಲಿ ತುಂಡರಿಸುತ್ತಾ ಇದೆ. ಮಕರಜ್ಯೋತಿ ಮತ್ತು ಮಕರವಿಳ್ಳಕ್ಕ್ ನಡುವಿನ ವ್ಯತ್ಯಾಸವನ್ನರಿಯದೇ ಅಯ್ಯಪ್ಪ ಸ್ವಾಮಿ ನಕ್ಷತ್ರರೂಪದಲ್ಲಿ ಕಾಣಿಸಿಕೊಳ್ಳುವ ನಂಬಿಕೆಯನ್ನು ಗೇಲಿ ಮಾಡುತ್ತಿರುವವರನ್ನು ಕಂಡಾಗ, ಇದಕ್ಕೆಲ್ಲಾ ಕಾರಣ ನಮ್ಮಿಂದ ಆಗುತ್ತಿರುವ ಇಂತಹ ಸಾಲು ಸಾಲು ತಪ್ಪುಗಳು ಎಂಬುದನ್ನು ನಾವು ಒಪ್ಪಿಕೊಳ್ಳ ಬೇಕಿದೆ. ಜ್ಯೋತಿಸ್ವರೂಪನು ನಕ್ಷತ್ರರೂಪದಲ್ಲಿ ಕಾಣಿಸಿಕೊಂಡಾಗ ಬೆಳಗುವ ಮಕರಜ್ಯೋತಿಯನ್ನು ಕಣ್ಣಾರೆ ನೋಡಿದವನಿಗೆ ಮಾತ್ರ ವಾಸ್ತವವೇನೆಂಬುದು ಅರಿವಾಗುತ್ತದೆ.
ಹಿರಿಯ ಅಯ್ಯಪ್ಪವ್ರತಧಾರಿಗಳೊಬ್ಬರು ಹೇಳುವ ಪ್ರಕಾರ ಶಬರಿಮಲೆಯಿಂದ ಹಿಂತಿರುಗಿದ 48ದಿನಗಳ ಬಳಿಕವೂ ನಿಷ್ಠೆಯಿಂದ ನಿಯಮ ಪೂರ್ವಕವಾಗಿ ಸ್ವಾಮಿಯನ್ನು ಪೂಜಿಸಿದಾಗ ಮಾತ್ರ ಅಯ್ಯಪ್ಪ ಸ್ವಾಮಿಯ ಯಾತ್ರೆ ಅಂತ್ಯವಾಗುತ್ತದಂತೆ. ಗುರುಸ್ವಾಮಿಯಾದವನು ವ್ರತದ ಸಂಪೂರ್ಣ ನಿಯಮವನ್ನು ಸ್ವತಃ ತಿಳಿದುಕೊಂಡು ವೃತಧಾರಿಗಳಿಗೆ ಕಡ್ಡಾಯವಾಗಿ ಮತ್ತು ಭಕ್ತಿಪೂರ್ವಕವಾಗಿ ಈ ಎಲ್ಲಾ ನಿಯಮಗಳನ್ನು, ವಿಧಿಗಳನ್ನು, ಯಾತ್ರೆಯ ಮಹತ್ವವನ್ನು, ಪವಿತ್ರ 18ಮೆಟ್ಟಿಲುಗಳ ಮಹಿಮೆಯನ್ನು ವ್ರತಧಾರಿಗಳಾಗಲಿಚ್ಚಿಸಿವವರಿಗೆ ಅರುಹಿ ಈ ನಿಯಮ ಪಾಲಿಸಲು ಒಪ್ಪಿದವರಿಗೆ ಮಾತ್ರ ಶಿಬಿರದಲ್ಲಿರಲು ಅವಕಾಶ ನೀಡಬೇಕು. ಮತ್ತು ತಾನು ಕೂಡ ಅದನ್ನ ಪಾಲನೆ ಮಾಡಬೇಕು. ಎಲ್ಲಾ ರೀತಿಯ ತಂಬಾಕು ಸೇವನೆ, ಇತ್ಯಾದಿಗಳನ್ನು ಸಂಪೂರ್ಣ ನಿಷೇಧಿಸಬೇಕು. ಒಂದೊಮ್ಮೆ ಇದನ್ನು ಮಾಡದಿದ್ದಲ್ಲಿ ನವರಾತ್ರಿಯಲ್ಲಿ ಸೇವಾರ್ಥವಾಗಿ ಹಾಕುತ್ತಿದ್ದ ಹುಲಿವೇಷದ ಪರಿಸ್ಥಿತಿಯೂ ಅಯ್ಯಪ್ಪವ್ರತಧಾರಿಗಳಿಗೂ ಒದಗಬಹುದು. ಕೇವಲ ಹಣವೇ ಪ್ರಧಾನವಾಗಿ ಹರಕೆಯ ಹಿನ್ನೆಲೆ ಮೂಲೆಗುಂಪಾಗಬಹುದು. ಈ ಅಯ್ಯಪ್ಪ ವ್ರತಧಾರಿಗಳನ್ನು ನಮ್ಮ ಸಮಾಜವು ಜಾತಿ, ಮತ ಪಂಥದ ಭೇದವಿಲ್ಲದೇ ಅಪಾರವಾಗಿ ಗೌರವಿಸುತ್ತಾ ಬಂದಿದೆ. ಇದನ್ನು ಉಳಿಸಿಕೊಳ್ಳುವ ಜವಾಬ್ಧಾರಿ ಎಲ್ಲಾ ಅಯ್ಯಪ್ಪ ವ್ರತಧಾರಿಗಳ ಮೇಲಿದೆ.
ಇಂದಿಗೂ ಅದೇಷ್ಟೋ ಅಯ್ಯಪ್ಪ ವ್ರತಧಾರಿಗಳಿಗೆ ಈ ದೇಗುಲ ಮೈ ಮನತುಂಬುವ ಭಕ್ತಿಧಾಮವಾಗಿದೆ. ಅಯ್ಯಪ್ಪ ಸ್ವಾಮಿಯನ್ನು ಕ್ಷಣಮಾತ್ರ ನೊಡುವ ಸೌಭಾಗ್ಯಕ್ಕಾಗಿ ಹಂಬಲಿಸುವ ಅದೆಷ್ಟೋ ಕೋಟಿ ಕಂಗಳ ಆಶಯಕ್ಕೆ ದಯವಿಟ್ಟು ಧಕ್ಕೆತರುವಂತತಿರುವ ಈ ಪರಿಸ್ಥಿತಿಯನ್ನು ಬದಲಾಯಿಸುವ ಹೊಣೆ ಎಲ್ಲಾ ಅಯ್ಯಪ್ಪವ್ರತಧಾರಿಗಳ ಮೇಲಿದೆ. ನಿಜಾರ್ಥದಲ್ಲಿ ಸ್ವಾಮಿಯಾಗಿ ಯಾತ್ರೆ ಕೈಗೊಂಡು, ಮಕರದ ಮಂಜಿನಲಿ ಬೆಳಗುತ್ತಿರುವ ಜ್ಯೋತಿಸ್ವರೂಪನನ್ನು ಭಕ್ತಿಯಿಂದ ಶರಣುಘೋಷದೊಂದಿಗೆ ಆರಾಧಿಸೋಣ. ಶರಣು ಪೊನ್ನಂಬಲವಾಸನೇ ಸ್ವಾಮಿಯೇ ಶರಣಂ ಅಯ್ಯಪ್ಪ.
ಹರೀಶ ರಾವ್, ಅಲೆವೂರು
aharishrao@gmail.com
Facebook ಕಾಮೆಂಟ್ಸ್