X

ಬಾಲ್ಕನಿ ಬರ್ಡಿಂಗ್ ನ 4 ನೇ ಹಕ್ಕಿ – ಪಿಕಳಾರ.

ಪರಿಸರ ವೀಕ್ಷಣೆ ನನಗೆ ಮೊದಲಿನಿಂದಲೂ ಆಸಕ್ತಿಯ ವಿಷಯವೇ. ಹೈಸ್ಕೂಲಿನ ವಿಜ್ಞಾನದಲ್ಲಿ ಓಡುತಿದ್ದ ಪಾಠಗಳ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುತಿತ್ತು.ಜೀವಶಾಸ್ತ್ರವನ್ನು ಪಿ‌ಯೂ‌ಸಿಯಲ್ಲಿ ಅರಿಸಿಕೊಂಡಾಗಲೂ ನಮ್ಮ ಪರಿಸರವೇ ಜೀವಶಾಸ್ತ್ರದ ಪ್ರಯೋಗಶಾಲೆಯಾಗಿತ್ತು.

ಅತಿಯಾದ crazy ಯಾಗಿ ಅಲ್ಲದಿದ್ದರೂ ಅವಕಾಶ ಸಿಕ್ಕಿದಾಗ ಕಣ್ಣು ಜಾಸ್ತಿ ವಿಷಯಗಳನ್ನು ವೀಕ್ಷಿಸಲು ಹವಣಿಸುತ್ತದೆ.ಪಕ್ಷಿ ವೀಕ್ಷಣೆಗೂ  ಅತಿಯಾಗಿ ಹಚ್ಚಿಕೊಂಡಿರಲಿಲ್ಲ.ಪಕ್ಷಿಗಳ ಬಗ್ಗೆ ಆಸಕ್ತಿ ಬರಲು ಕಾರಣವಾಗಿದ್ದು ಇದೇ ಪಿಕಳಾರ.ನಮ್ಮ ಮಾವನ ಮನೆಯ ಕೈತೋಟದಲ್ಲಿ ಕೆಮ್ಮೀಸೆ ಪಿಕಳಾರ ಗೂಡು ಕಟ್ಟಿ ಮೂರು ಮರಿಗಳನ್ನು ಬೆಳೆಸಿತ್ತು.ತುಂಬಾ ಕೆಳಸ್ತರದಲ್ಲಿ ಚಿಕ್ಕ ಹೂವಿನ ಗಿಡದಲ್ಲಿ ಗೂಡು ಕಟ್ಟಿದ್ದನ್ನು ಅದಕ್ಕಿಂತ ಮೊದಲು ನೋಡಿರಲಿಲ್ಲ.ಆ ಗೂಡನ್ನು ನೋಡಿದ ಮೇಲೆ ನನ್ನ ಕಣ್ಣು, ಪಕ್ಷಿಗಳ ಮುಖ್ಯವಾಗಿ ಈ ಪಿಕಳಾರ ಹಕ್ಕಿಯ ಗೂಡು ಕಟ್ಟುವ ದೃಶ್ಯಗಳನ್ನು ಇನ್ನೂ ಹೆಚ್ಚಾಗಿ ಹುಡುಕಲು ಶುರು ಮಾಡಿದವು.ಮನೆಯ ಕೈ ತೋಟಗಳಲ್ಲಿ, ಸಣ್ಣ ಸಣ್ಣ ಪೊದೆಗಳಲ್ಲಿ ಈ ಪಿಕಲಾರದ ಗೂಡುಗಳು ಹಲವಾರು ಸಿಕ್ಕಿದರೂ ಸೂಕ್ಷ್ಮ ವೀಕ್ಷಣೆ ಮಾಡಲಾಗುತ್ತಿರಲಿಲ್ಲ.

ನಾವಿರುವ ಅಪಾರ್ಟ್ಮೆಂಟಿನ 8ನೇ ಅಂತಸ್ತಿನಲ್ಲಿರುವ ನಮ್ಮ ಮನೆ ಬಾಲ್ಕನಿಗೆ  ಕೆಮ್ಮೀಸೆ ಪಿಕಳಾರ ಜೋಡಿಗಳು  ಆಗಾಗ್ಗೆ ಬಂದು ಆಹಾರಕ್ಕಾಗಿ ಹುಡುಕಾಡುತಿತ್ತು. ಮದ್ಯಾಹ್ನನ ಸಮಯದಲ್ಲಿ ಬಾಲ್ಕನಿಯಲ್ಲಿ  ಬೆಳೆಸಿದ “ಅಂತರಗಂಗೆ” ಯ ಕುಂಡದಲ್ಲಿನ ನೀರನ್ನು ಕುಡಿದು ಹೋಗುತಿದ್ದವು. ಕೆಲವು ದಿನಗಳ ನಂತರ ಒಮ್ಮೆ ಕತ್ತಲಾದ  ನಂತರ ಬಾಲ್ಕನಿಯಲ್ಲಿ ಕಟ್ಟಿರುವ ಹಗ್ಗದಲ್ಲಿ ಬಟ್ಟೆ ಒಣಗಿಸಲು ಹೋದಾಗ ಆಶ್ಚರ್ಯ ಕಾದಿತ್ತು.ಒಂದು ಕೆಮ್ಮೀಸೆ ಪಿಕಳಾರ ಆ ಹಗ್ಗ ಕಟ್ಟಿದ ಮರದ ಫ್ರೇಮೀನ ಮೇಲೆ ಮುದುಡಿಕೊಂಡು ಕುಳಿತಿತ್ತು.ತನ್ನ ಕೊಕ್ಕು ಮತ್ತು ಕೊರಳನ್ನು ದೇಹದ ಪುಕ್ಕಗಳ ನಡುವೆ ಹುದುಕಿಸಿಕೊಂಡು ಕುಳಿತಿರುವ ಪಿಕಳಾರ ಹಕ್ಕಿಯು ಫೋಟೋ ಕ್ಲಿಕ್ಕಿಸಿದಾಗಲೂ ಹಾರಲಿಲ್ಲ.!!!ನಾವು ಬಟ್ಟೆ ಹರಡುವಷ್ಟು ಹೊತ್ತು ಅದು ಹೆದರಿಕೊಳ್ಳದೆ ಅಲ್ಲಿಯೇ ಕುಳಿತಿತ್ತು.ಇಲ್ಲಿ ಯಾಕೆ ಇದು ಕುಳಿತುಕೊಳ್ಳುತ್ತಿದೆ ಎಂಬುದು ನಮ್ಮ ಪ್ರಶ್ನೆಯಾಗಿತ್ತು.

 
First sight—ತಲೆ ಮತ್ತು ಕೊಕ್ಕನ್ನು ಗರಿಗಳೊಳಗೆ ಅಡಗಿಸಿಕೊಂಡಿದ್ದಾಗ

ಹೀಗೆ ಒಂದೆರಡು ದಿನ ಕಳೆದ ಮೇಲೆ ತಿಳಿದ ವಿಷಯ ತುಂಬಾ ಆಶ್ಚರ್ಯಕರವಾಗಿತ್ತು.ಆ ಪಿಕಳಾರ ನೆರೆಮನೆಯ ಬಾಲ್ಕನಿಯ ಇದೇ ರೀತಿಯ ಬಟ್ಟೆ ಒಣಗಿಸುವ ಹಗ್ಗದ ಮರದ ಫ್ರೇಮೀನ ಮೇಲೆ ಗೂಡು ಕಟ್ಟಿತ್ತು!!!

ತಕ್ಷಣ‌ನಾವು ಅಲ್ಲಿಗೆ ಹೋಗಿ ನೋಡಿದರೆ ಆವಾಗಲೇ ಅದು ಮೊಟ್ಟೆ ಇಟ್ಟಾಗಿತ್ತು.!!

ಸಣ್ಣ ಸಣ್ಣ ಪೊದೆಗಳಲ್ಲಿ ಕೆಳಸ್ತರದಲ್ಲಿ ಮಾತ್ರ ಗೂಡನ್ನು ನೋಡಿದ ನನಗೆ ಅದು ನೆರೆಮನೆಯ ಬಾಲ್ಕನಿಯಲ್ಲಿ, ಅದೂ ಎಂಟನೇ ಅಂತಸ್ತಿನಲ್ಲಿ, ಗೂಡನ್ನು ನೋಡಿ ಆಶ್ಚರ್ಯವಾಯಿತು.ಅವರ ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳಿರುವುದರಿಂದ ಯಾವಾಗಲೂ ಮಕ್ಕಳು ಹೊರ ಬಂದು ಗೂಡನ್ನು ನೋಡುವುದು ಮಾಮೂಲಾಯಿತು.ಮಕ್ಕಳ ಆಗಮನದಿಂದ ಒಂದಿಷ್ಟೂ ಗಾಬರಿಯಾಗದ ಪಿಕಳಾರ ಗೂಡುಬಿಟ್ಟು ಹಾರುತಿರಲಿಲ್ಲ. ..ಒಂದು ಹಕ್ಕಿ ಗೂಡಲ್ಲಿ ಕೂತಿದ್ದರೆ ಇನ್ನೊಂದು ಮೇಲಿನ ಅಥವಾ ಕೆಳಗಿನ ಮನೆಯ ಕಿಟಕಿಯ ಮೇಲೆ ಕುಳಿತು ಕಾವಲು ಕಾಯುತಿತ್ತು.ಕಾಗೆ ಮತಿತ್ತರ ಅಪಾಯ ಕಂಡಾಗ ಗಟ್ಟಿಯಾಗಿ ಕೂಗಿ ಗೂಡಲ್ಲಿರುವ ಹಕ್ಕಿಯನ್ನು ಎಚ್ಚರಿಸುತಿತ್ತು.ಅಗಾಗ್ಯೆ ನಮ್ಮ ಬಾಲ್ಕನಿಗೆ ಬಂದು ಏನಾದರೂ ತಿನ್ನಲು ಸಿಗುತ್ತಾ ಎಂದು ನೋಡಿ ಹೋಗುತಿತ್ತು. ರಾತ್ರಿ ಹೊತ್ತು ಒಂದು ಹಕ್ಕಿ ಗೂಡಲ್ಲಿ ಕೂತಿದ್ದರೆ ಇನ್ನೊಂದು ನಮ್ಮ ಬಾಲ್ಕನಿಯ ಮರದ ಫ್ರೇಮೀನ ಮೇಲೆ ಕುಳಿತಿರುತಿತ್ತು.

ಮೊಟ್ಟೆಗೆ ಕಾವು ಕೊಡುತ್ತಿರುವ ಬುಲ್ ಬುಲ್….

ನಮ್ಮ ಮನೆಯ ಬಾಲ್ಕನಿಯಲ್ಲಿ ಮತ್ತೊಂದು ಹಕ್ಕಿಯ ಕಾವಲು…

5-6 ದಿನಗಳ ನಂತರ ಮೊಟ್ಟೆಯೊಡೆದು ಮರಿಯಾದವು.ಮರಿಗಳಿಗೆ ಗುಟುಕು ಕೊಟ್ಟು ಬೆಳೆಸುತ್ತಿದ್ದ ಕ್ರಮ ಮಾತ್ರ ಅತ್ಯಂತ ಕುತೂಹಲಕರವೂ ವೀಕ್ಷಣೀಯವೂ ಆಗಿತ್ತು.ಮೊಟ್ಟೆಯಿಂದ ಹೊರಬಂದ ಆ ಹಕ್ಕಿಗಳು ಮಾಂಸದ ಮುದ್ದೆಯಂತೆ ಇದ್ದರೂ ಬಾಯಿಮಾತ್ರ ಅಗಲವಾಗಿ ತೆರೆದಿರುತಿದ್ದವು. ಬಸವನ ಹುಳ ಇತ್ಯಾದಿ ಹುಳಗಳೂ, ವಿಧ-ವಿಧವಾದ ಹಣ್ಣುಗಳನ್ನು ತಂದು ತೆರೆದಿದ್ದ ಆ ಬಾಯಿಯೊಳಗೆ ತುರಿಕಿಸುತಿದ್ದವು. ಪಿಕಳಾರ ಹಕ್ಕಿಗಳು ಮರಿಗಳಿಗೆ ಪದೇ-ಪದೇ ತಿನಿಸುತ್ತಿದ್ದವು. 5-10ನಿಮಿಷಕ್ಕೊಮ್ಮೆ ಏನಾದರೂ ಆಹಾರ ತರುತ್ತಿದ್ದವು.ಕೀಟ ಮತ್ತು ಹಣ್ಣುಗಳನ್ನು ಬೇಕಾದಷ್ಟೇ ಪ್ರಮಾಣದಲ್ಲಿ ತಂದು ಸಮತೋಲನ ಆಹಾರವನ್ನು ಕಾಯ್ದುಕೊಳ್ಳುತ್ತಿತ್ತು…ಜೋಡಿ ಹಕ್ಕಿಗಳ ಅತೀ ವಿಶೇಷವಾದ ಒಂದು ಚಟುವಟಿಕೆ ನಮ್ಮನ್ನು ತುಂಬಾ ಆಶ್ಚರ್ಯಚಕಿತರಾಗಿಸಿತ್ತು.ತಂದ ಆಹಾರದಲ್ಲಿ ಒಂದಿಸ್ಟನ್ನು ಬಾಯಿಗೆ ತುರಿಕಿಸದೆ, ಗೂಡಿನ ಅಂಚಲ್ಲಿ ಕೂಡಿಡುತಿತ್ತು.ಮರಿಹಕ್ಕಿಗಳನ್ನು ಆಹಾರ ಕುಟುಕಿ ತಿನ್ನಲು ಕಲಿಸುವ ಉದ್ದೇಶವೂ ಅಥವಾ ಆಹಾರ ಸಿಗದಾಗ ಬೇಕಾಗುವ “ರಿಸರ್ವ್ ಸ್ಟಾಕ್” ಆಗಿತ್ತೋ ಏನೋ….!!!!ಪಕ್ಕದ ಮನೆಯ ಬಾಲ್ಕನಿಯಲ್ಲಿ ಗೂಡಿದ್ದರೆ ನಮ್ಮ ಬಾಲ್ಕನಿಯಲ್ಲಿ ಬಂದು ಹಣ್ಣಿಗಾಗಿ ನಮ್ಮನ್ನು ಬೇಡುತ್ತಿದ್ದ ರೀತಿ ವಿಚಿತ್ರವಾಗಿತ್ತು.ಬೆಳ್ಳಿಗ್ಗೆ 7 ಗಂಟೆಯಿಂದಲೇ ಅವುಗಳ ಕೂಗಾಟ ಶುರುವಾಗುತಿತ್ತು. ಬಾಲ್ಕನಿಯಲ್ಲಿ ಕೂತ ಹಕ್ಕಿಯನ್ನು ನಾವು ನೋಡಲು ಹೋದರೆ ಪುರ್ ಎಂದು ಹಾರಿ ಹೋದರೂ ಹತ್ತಿರದಲ್ಲೇ ಇದ್ದು ನಮ್ಮ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುತಿದ್ದವು. ಹಾರಿ ಹೋದ ಹಕ್ಕಿಗಳು ಬಾಲ್ಕನಿಯ ಬಾಗಿಲು ತೆರೆದು-ಮುಚ್ಚಿದ ಶಬ್ದ ಕೇಳುತ್ತಲೇ ವಾಪಸು ಬರುತಿದ್ದವು… ಅವುಗಳ ನಿರೀಕ್ಷೆಯಂತೆ ನಾವಿಟ್ಟ ಬಾಳೆಹಣ್ಣು, ಚಿಕ್ಕೂ ಸೇಬು ಹಣ್ಣು ಗಳನ್ನು ಖುಷಿಯಿಂದ ಕೊಕ್ಕಿನಲ್ಲಿ ಹಿಡಿಯುವಸ್ಟು ತುಂಬಿಕೊಂಡು ಹೋಗಿ ಮರಿಗಳಿಗೆ ಉಣಿಸಿತಿದ್ದವು.

ಹಣ್ಣನ್ನು ಹುಡುಕುತ್ತಾ ನಮ್ಮ ಮನೆಯ ಬಾಲ್ಕನಿಗೆ ಬಂದಾಗ ಕ್ಲಿಕ್ಕಿಸಿದ ಫೋಟೋ…

6-7 ದಿನಗಳಾದ ನಂತರ ಒಂದು ದಿನ  ಡ್ಯೂಟಿಗೆ ಬಂದಿದ್ದಾಗ ಪಿಕಳಾರ ಗೂಡುಕಟ್ಟಿದ ಮನೆಯ ನಮ್ಮ ಸಹದ್ಯೋಗಿಯಿಂದ ಕರೆ ಬಂದಿತ್ತು.ವಿಷಯ ಗಂಭೀರವಾಗಿತ್ತು.ನಾಲ್ಕು ಮರಿಗಳಲ್ಲಿ ಎರಡು ಮರಿಗಳು ಗೂಡಿನಿಂದ ಹೊರಗೆ ಬಂದು ಕೆಳಗೆ ಬಿದ್ದಿದ್ದವು…ಚಿಕ್ಕದಾಗಿ ಪುಕ್ಕ ಬಂದಿದ್ದರೂ ಹಾರಲು ಅಶಕ್ಯವಾಗಿದ್ದ ಆ ಮರಿಗಳು ಬಾಲ್ಕನಿಯ ನೆಲದಲ್ಲಿ ಕೂತಿದ್ದವು. ..ಪೋಷಕ ಹಕ್ಕಿಗಳು ಗೂಡಲ್ಲಿ ಕೂತ ಇನ್ನೆರಡು ಮರಿಗಳಿಗೇ ಆಹಾರ ಕೊಡುತಿದ್ದವೇ ವಿನಹ ನೆಲದ ಮೇಲಿನ ಮರಿಗಳನ್ನು ನೋಡುತ್ತಲೇ ಇರಲಿಲ್ಲ….ಮರಿಗಳನ್ನು ಹೇಗೆ ರಕ್ಷಿಸುವುದು ಎಂಬುದು ನಮ್ಮ ಸಹದ್ಯೋಗಿಯ ಪ್ರಶ್ನೆಯಾಗಿತ್ತು …. “ಸ್ವಲ್ಪ ನೀರನ್ನೂ…ಹಣ್ಣನ್ನೂ ಸಾದ್ಯವಾದರೆ ತಿನ್ನಿಸಿ…ಇಲ್ಲವಾದರೆ ಕನಿಷ್ಠ ಕಾಗೆಗಳಿಂದ ರಕ್ಷಿಸಿ” ಎಂದು ಸಲಹೆ ಕೊಟ್ಟೆ…ಸಂಜೆ ಡ್ಯೂಟಿಯಿಂದ ಬಂದ ನಂತರ ಆ ನಮ್ಮ ಸಹದ್ಯೋಗಿ ಮರಿ ಹಕ್ಕಿಗಳ ರಕ್ಷಣೆಗೆ ತೆಗೆದುಕೊಂಡ ಕಾಳಜಿ ಅದ್ಭುತವಾಗಿತ್ತು.ಮರಿಗಳಿಗೆ ನೀರು ಮತ್ತು ಬೇಯಿಸಿದ ಮೊಟ್ಟೆಯನ್ನು ಕೊಟ್ಟು ಸ್ವಲ್ಪ ಸುಧಾರಿಸಿದ ಮರಿಗಳನ್ನು ರಟ್ಟಿನ ಪೆಟ್ಟಿಗೆಯ ತೆರೆದ ಮುಚ್ಚಳದಲ್ಲಿಟ್ಟು ಪಿಕಳಾರದ ಗೂಡಿನ ಹತ್ತಿರ ತೂಗು ಹಾಕಿದ್ದರು. …ಪಿಕಳಾರ ಹಕ್ಕಿಗಳು ಈ ಮರಿಗಳನ್ನು ಆರೈಕೆ ಮಾಡಲು ಶುರುಮಾಡಿದ್ದವು…ಭೇಷ್… ಈ ಹಕ್ಕಿಪ್ರಿಯರ ಕಾಳಜಿಗೊಂದು ಸಲಾಮ್….

ನಂತರದ ಒಂದೆರಡು ದಿನಗಳಲ್ಲಿ ನಾಲ್ಕೂ ಮರಿಗಳು ಸುರಕ್ಷಿತವಾಗಿ ಹಾರಿ ಹೋಗಿ ಕಥೆ ಸುಖಾಂತ್ಯ ಕಂಡಿತು.ಪಿಕಳಾರ ಮರಿಗಳ ಅತೀ ಬೇಗ ಬೆಳವಣಿಗೆಯಾಗಿ ಹಾರಿ ಹೋಗುವುದು ವಿಚಿತ್ರವೇ…..ದಿನದಿಂದ ದಿನಕ್ಕೆ ಅವುಗಳ ದೇಹದಲ್ಲಾಗುವ ಬೆಳವಣಿಗೆ ಆಶ್ಚರ್ಯತರುತ್ತದೆ. … ಬೆಳ್ಳಿಗ್ಗೆ ಇದ್ದಂತೆ ಸಂಜೆ ಇರುವುದಿಲ್ಲ… 8-9 ದಿನಗಳಲ್ಲಿ ರೆಕ್ಕೆ-ಪುಕ್ಕ ಬೆಳೆದ ಮರಿಗಳು ಹಾರಲು ಶಕ್ಯ….

ಈವಾಗಲೂ ಪಿಕಳಾರ ಹಕ್ಕಿಗಳು ನಮ್ಮ ಬಾಲ್ಕನಿಯ ನಿತ್ಯದ ಅತಿಥಿ…ಹಣ್ಣಿಟ್ಟಿದ್ದರೆ ಖುಷಿಯಿಂದ ತಿನ್ನುತ್ತವೆ,…ಇಲ್ಲವಾದಲ್ಲಿ ಒಂದೆರಡು ಬಾರಿ ಕೂಗಿ ಕರೆದು ಹಣ್ಣು ಹಾಕಿಸಿಕೊಳ್ಳುತ್ತವೆ.ಹಾಕಿಲ್ಲವಾದರೆ ಬೈದುಕೊಂಡೇ ಬೇರೆ ಬಾಲ್ಕನಿಗೆ ಪಲಾಯನ ಮಾಡುತ್ತವೆ… ಕಳೆದ ವಾರ ಎರಡು ಮರಿಗಳನ್ನು ಕರೆದು ತಂದಿತ್ತು… 2ದಿನ ಪೋಷಕ ಹಕ್ಕಿಗಳ ಸಂಗಡ ಬಂದ ಮರಿಗಳು ನಂತರ ತಾವಾಗಿಯೇ ಬರಲು ಶುರು ಮಾಡಿದವು… ಒಟ್ಟಾರೆ ಬೆಳ್ಳಿಗ್ಗೆ-ಬೆಳ್ಳಿಗ್ಗೆ ನಮಗೆ ಸುಮಧುರವಾದ ಆಲಾರಂ!!!!.

ಕೆಮ್ಮೀಸೆ ಪಿಕಳಾರ ಅಥವಾ ಕೆಂಪು ಕಪೋಲದ ಪಿಕಳಾರ ಏಷಿಯಾ ಖಂಡದಲ್ಲಿ ಕಂಡು ಬರುವ ಅತಿ ಸಾಮನ್ಯವಾದ ಪಿಕಳಾರ (Bulbul) ಜಾತಿಯ ಹಕ್ಕಿ.ಇತರ ಪಿಕಳಾರಗಳಂತೆ ಈ ಹಕ್ಕಿಯೂ ಕೂಡ ಹಣ್ಣು, ಮಕರಂದ ಹಾಗು ಕ್ರಿಮಿ ಕೀಟಗಳನ್ನು ಆಹಾರವಾಗಿ ಸೇವಿಸುತ್ತವೆ.ಈ ಹಕ್ಕಿಯನ್ನು ನಗರಗಳ ಉದ್ಯಾನವನಗಳಲ್ಲಿಯೂ, ಮಲೆನಾಡಿನ ದಟ್ಟ ಅರಣ್ಯಗಳಲ್ಲಿಯೂ ಕಾಣಬಹುದು.ಕೆಮ್ಮೀಸೆ ಪಿಕಳಾರ ಗುಬ್ಬಚ್ಚಿಗಿಂತ ಕೊಂಚ ದೊಡ್ಡದು ಹಾಗು ಮೈನಾಗಿಂತಲೂ ಕೊಂಚ ಸಣ್ಣ ಗಾತ್ರದ ಹಕ್ಕಿ.ಇದರ ಗಾತ್ರ ಸುಮಾರು ೨೦ ಸೆ.ಮೀ.ಕಪ್ಪು ಬಣ್ಣದ ಜುಟ್ಟು, ಬಿಳಿಯ ಎದೆ ಭಾಗ, ಕೆಂಪು ಬಣ್ಣದ ಗಲ್ಲ (ಕೆನ್ನೆ), ಕಂದು ಬಣ್ಣದ ಬೆನ್ನು ಹಾಗು ಬಾಲ ಈ ಹಕ್ಕಿಯ ಪ್ರಮುಖ ಗುರುತಿನ ಚಿಹ್ನೆಗಳು.

Facebook ಕಾಮೆಂಟ್ಸ್

Nagaraj Adiga: ಮೂಲತಃ ಉಡುಪಿಯವರಾದ ನಾಗರಾಜ್ ಅಡಿಗ ಕೈಗಾದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಲೇಕಖನಗಳನ್ನು ಬರೆಯುವುದು, ಓದುವುದು, ಛಾಯಾಗ್ರಹಣ ಮತ್ತು ವಿಜ್ಞಾನ ಇವರ ಆಸಕ್ತಿ.
Related Post