ಉಚಿತ ಪೆನ್ನು, ಪುಸ್ತಕ, ಲ್ಯಾಪ್‍ಟಾಪ್, ಟ್ಯಾಬ್, ಜೊತೆಗೆ ಉಚಿತ ಇಂಟರ್‍ನೆಟ್, ಮನೆಗೊಂದು ಕಲರ್ ಟಿವಿ, ರೇಷನ್ ಕಾರ್ಡ್‍ದಾರರಿಗೆ ಒಂದು ಮೊಬೈಲ್, ಮಹಿಳೆರಿಗೆ ಸೀರೆ-ರವಿಕೆ, ಇನ್ನುಳಿದಂತೆ ಕಡಿಮೆ ಬೆಲೆಗೆ ಇಡ್ಲಿ, ಹಾಲು, ಮೊಸರು, ನೂರು ಯುನಿಟ್‍ಗಳಷ್ಟು ಉಚಿತ ಕರೆಂಟ್, ಉಚಿತ ನೀರು, ಅಡುಗೆ ಮನೆಗೆ ಸಾನಿಟಿ ಕಿಟ್, ಮೆಲ್ಲುವುದಕ್ಕೆ ಕಡಿಮೆ ಬೆಲೆಗೆ ಕುರಿ-ಮೇಕೆ ಮಾಂಸ, ಮಹಿಳೆಯರಿಗೆ ಸ್ಕೂಟರ್ ಖರೀದಿಗೆಂದು 50% ಸಬ್ಸಿಡಿ, ಮದುವೆಗೆ 8 ಗ್ರಾಂಗಳ ಉಚಿತ ಮಾಂಗಲ್ಯ. ಒಂಭತ್ತು ತಿಂಗಳ ಮೆಟರ್‍ನಿಟಿ ರಜೆ, ಇನ್ನೊಂದೆಡೆ ಆ ಭಾಗ್ಯ ಈ ಭಾಗ್ಯಗಳೆಂಬ ಮತ್ತೊಂದಷ್ಟು ಭಾಗ್ಯಗಳ ಕೊಡುಗೆ ಇತ್ಯಾದಿ ಇತ್ಯಾದಿ. ಹೀಗೆ ಒಂದಲ್ಲ ಎರಡಲ್ಲ ಎಲ್ಲಿ ನೋಡಿದರೂ ದೇಶಾದ್ಯಂತ ಇಂತಹ ಸಾಲು ಸಾಲು ‘ಉಚಿತ’ಗಳದ್ದೇ ಕಾರುಬಾರು! ಒಟ್ಟಿನಲ್ಲಿ ಇಲ್ಲಿ ಬದುಕುವುದಕ್ಕೆ ಅಂತ ಯಾರೂ ಮಂಡೆ ಬಿಸಿ ಮಾಡಬೇಕಾಗಿಲ್ಲವೇನೋ. ‘ಬಡವ’ ಎನ್ನುವ ಸಾಮಾನ್ಯ ಅರ್ಹತೆಯೊಂದನ್ನು ಗಿಟ್ಟಿಸಿಕೊಂಡಿದ್ದರೆ ಮತ್ತೆಲ್ಲವನ್ನೂ ಸರಕಾರವೇ ನೀಡುತ್ತದೆ!
ಈ ರೀತಿಯ ಫ್ರೀಬೀಸ್‍ಗಳನ್ನು ನೋಡಿದಾಗ ಪಕ್ಕನೆ ನೆನಪಾಗುವುದು ತಮಿಳುನಾಡಿನ ದಿವಂಗತ ಜಯಾಲಲಿತಾರವರು! ರಾಜಕೀಯ ರಂಗದಲ್ಲಿ ಒಂದು ‘ಮಾದರಿ’ಯನ್ನೇ ಹುಟ್ಟು ಹಾಕಿದ ಜಯಲಲಿತಾರವರ ರಾಜಕೀಯ ಲೆಕ್ಕಾಚಾರಗಳು ನಿಜಕ್ಕೂ ಕಡಿಮೆ ತೂಕದ್ದಲ್ಲ. ಹಣ ಎಲ್ಲಿಂದ ಬೇಕಾದರೂ ಹರಿದು ಬರಲಿ ಆದರೆ ಆಡಳಿತವೊಂದು ತನ್ನ ಅಧಿಕಾರವಾಧಿಯಲ್ಲಿ ಇಷ್ಟೆಲ್ಲಾ ಪುಕ್ಸಟ್ಟೆಗಳನ್ನು ಕೊಡುತ್ತದೆ ಎಂದಾದರೆ, ಜನರ ಜೀವನ ವೆಚ್ಚವನ್ನು ಇಳಿಸುತ್ತದೆ ಎಂದಾದರೆ ಯಾರು ತಾನೆ ಅಂತಹ ಆಡಳಿತವನ್ನು ಬೇಡ ಅನ್ನುತ್ತಾರೆ ಹೇಳಿ!? ತಮಿಳುನಾಡಿನಲ್ಲಿ ‘ಅಮ್ಮಾ’ ಬ್ರಾಂಡ್ ಅಷ್ಟೊಂದು ಸದ್ದು ಮಾಡಿದ್ದು, ವಿರೋಧೀ ಪಕ್ಷಗಳನ್ನು ಹೇಳ ಹೆಸರಿಲ್ಲದಂತೆ ಮಾಡಿದ್ದು ಇದೇ ಫ್ರೀಬೀಸ್‍ಗಳು ಎಂದರೆ ತಪ್ಪಾಗದು! ಕೇವಲ ತಮಿಳುನಾಡು ಎಂದಲ್ಲ ಇಂದು ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಕೂಡ ಜಾತಿ ರಾಜಕೀಯ, ಧರ್ಮ ರಾಜಕೀಯದ ಜೊತೆಗೆ ‘ಈ ಫ್ರೀಬೀಸ್’ ಎಂಬ ಹೊಸ ರಾಜಕೀಯವನ್ನು ಕೂಡ ನೆಚ್ಚಿಕೊಂಡಿದೆ. ‘ಗೆದ್ದರೆ ಯುವಕರ ಕೈಗೆ ಉಚಿತವಾಗಿ ಮೊಬೈಲ್ ಕೊಡುತ್ತೇವೆ’ ಎಂಬ ಇತ್ತೀಚಿನ ಹೊಸ ಫ್ರೀಬೀ (ಪಂಜಾಬ್‍ನ ಚುನಾವಣಾ ಪ್ರಚಾರದಲ್ಲಿ) ಇದಕ್ಕೊಂದು ತಿಳಿಯಾದ ಹೊಚ್ಚ ಹೊಸ ಉದಾಹರಣೆ!
ಆಮಿಷಗಳನ್ನು ನೀಡಿ ಜನರನ್ನು ಬುಟ್ಟಿಗೆ ಹಾಕಿಕೊಳ್ಳುವುದು ನಿಜಕ್ಕೂ ದೇಶದ ಭವಿಷ್ಯ ದೃಷ್ಟಿಯಿಂದ ದುರಂತವೆ ಸರಿ. ಆದರೂ ಈ ರೀತಿಯಲ್ಲಿ ಜನರನ್ನು ಮರುಳು ಮಾಡುವುದನ್ನು ಅದ್ಯಾವ ಸಂಘಟನೆಗಳೂ, ಸಂಘ ಸಂಸ್ಥೆಗಳು ವಿರೋಧಿಸುವುದೇ ಇಲ್ಲ! ಇಂತಹ ಪುಕ್ಸಟ್ಟೆ ಕೊಡುಗೆಗಳನ್ನು ನೀಡಿದರಷ್ಟೇ ಆ ಪಕ್ಷ ಅಥವಾ ಅಡಳಿತ ಉತ್ತಮವಾದದು ಎಂಬ ಕೆಟ್ಟ ಮನೋಸ್ಥಿತಿ ಜನಸಾಮಾನ್ಯರಲ್ಲೂ ಬೆಳೆದಂತಿದೆ! ಇನ್ನು ಪಕ್ಷಗಳು ನೀಡುವ ಕೊಡುಗೆಗಳು ಚುನಾವಣಾ ಪೂರ್ವದಲ್ಲಾದರೆ ಇದನ್ನು ಆಮಿಷಗಳೆಂದು ಒಂದೇ ಏಟಿಗೆ ಷರಾ ಬರೆಯಬಹುದು. ಆದರೆ ಅಧಿಕಾರ ಸಿಕ್ಕಿದ ಮೇಲೆ ನೀಡುವ ಕೊಡುಗೆಗಳನ್ನು ಈ ರೀತಿ ಗುರುತಿಸುವುದು ಕಷ್ಟ. ಯಾಕೆಂದರೆ ಅವೆಲ್ಲವುಗಳು ‘ಸಾಮಾಜಿಕ ಕಲ್ಯಾಣದ’ ಒಂದು ಭಾಗವೆಂದು ಪರಿಗಣಿಸಲ್ಪಡುತ್ತದೆ! ಆದ್ದರಿಂದಲೇ ತಮಿಳುನಾಡಿನಲ್ಲಿ ಜಯಾ ನೀಡುವ ಅದೆಲ್ಲಾ ಫ್ರೀಬೀಸ್‍ಗಳು ಸಕ್ರಿಯ ರಾಜಕಾರಣದ, ಅಭಿವೃದ್ಧಿ ಆಡಳಿತದ ಒಂದು ಭಾಗವಾಗಿ ಬೆಳೆದಿರುವುದು, ವಿರೋಧಿಗಳಿಗೆ ಬಿಸಿ ತುಪ್ಪವಾಗಿರುವುದು! ಅದೆಷ್ಟು ತಪ್ಪು ಮಾಡಿದರೂ, ಭ್ರಷ್ಟಾಚಾರದಲ್ಲಿ ಹೆಸರು ಕೇಳಿಬಂದಿದ್ದರು ಅಷ್ಟೇ ಏಕೆ ಒಂದಷ್ಟು ವರ್ಷ ಜೈಲಲ್ಲಿ ಕಳೆದು ಬಂದರೂ ಕೂಡ ತಮಿಳು ಜನರಿಗೆ ‘ಜಯಾ’ ಆಡಳಿತವೇ ಬೇಕೆನ್ನಿಸಿರುವುದು ಇದರ ಪ್ರತಿಫಲವೆಂದರೂ ತಪ್ಪಾಗದು! ಈಕೆಯ ಅಧಿಕಾರಾವಧಿಯಲ್ಲಿ ತಮಿಳುನಾಡು ಸಾಧಿಸಿದ ಪ್ರಗತಿ ಏನು? ಅದರೆ ಆರ್ಥಿಕತೆಯ ವಸ್ತು ಸ್ಥಿತಿ ಹೇಗಿದೆ? ಎಂಬುದೆಲ್ಲಾ ಇಲ್ಲಿ ಗೌಣವಾಗುವ ಪ್ರಶ್ನೆಗಳು. ಒಟ್ಟಿನಲ್ಲಿ ಗಿಮಿಕ್‍ಗಳನ್ನು ಮಾಡಿಕೊಂಡು ಜನಸಾಮಾನ್ಯರನ್ನು ಖುಷಿಪಡಿಸುತ್ತಿರಬೇಕಷ್ಟೆ! ಈ ಮಾದರಿಯ ಆಡಳಿತದ ಮೂಲಕ ಜನರನ್ನ ಒಲಿಸಿಕೊಳ್ಳಲು ಸರಕಾರವು ಅದ್ಯಾವ ಆರ್ಥಿಕ ಮೂಲವನ್ನು ನೆಚ್ಚಿಕೊಂಡಿರುತ್ತದೆ ಎಂಬುದೂ ಕೂಡ ಇಲ್ಲಿ ಗೌಣವಾಗಿ ಬಿಡುತ್ತದೆ! ನಿಜ ಹೇಳಬೇಕೆಂದರೆ ತಮಿಳುನಾಡಿನಲ್ಲಿ ಇಂತಹ ಜನಮರುಳು ಕಾರ್ಯಕ್ರಮಗಳಿಗೆ, ಫ್ರೀಬೀಸ್‍ಗಳಿಗೆ ಬೇಕಾಗುವ ಕೋಟಿ ಲೆಕ್ಕದ ಆರ್ಥಿಕತೆಯನ್ನು ‘ಅಬಕಾರಿ’ ಸುಂಕದ ಮೂಲಕ ಸರಿದೂಗಿಸಲಾಗುತ್ತಿದೆಯಂತೆ! ತಮಿಳುನಾಡಿನಲ್ಲಿ ಲಿಕರ್ ಮಾರಾಟವು ಸರಕಾರದ ಏಕಸ್ವಾಮ್ಯದಲ್ಲೇ ಉಳಿದಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಕೂಡ ಇದುವೇ! ಒಂದೆಡೆಯಿಂದ ಜನರಿಗೆ ಹೆಚ್ಚು ಹೆಚ್ಚು ಸಾರಾಯಿ ಕುಡಿಸುತ್ತಾ ಇನ್ನೊಂದೆಡೆಯಿಂದ ಆಮಿಷಗಳ ವೇಷದಲ್ಲಿ ಬಡವರ ಉದ್ಧಾರವೆಂದು ಜಪಗೈಯುತ್ತಿರುವುದು ನಮ್ಮ ದೇಶದ ರಾಜಕಾರಣದ ಅಭಿವೃದ್ಧಿ ಮಂತ್ರ!! ದುರಂತವಲ್ಲವೇ ಇದು!? ಸರಕಾರದ ಈ ಪ್ರಯತ್ನದ ಫಲವಾಗಿಯೇ 2002-03ರಲ್ಲಿ 2,800ಕೋಟಿ ಇದ್ದ ತಮಿಳನಾಡಿನ ಲಿಕರ್ ಆದಾಯವು ಇಂದು ಸುಮಾರು 30,000 ಕೋಟಿಯನ್ನೂ ಮೀರಿ ಮುಂದೆ ಸಾಗಿರುವುದು! ಒಂದೆಡೆ ಹೆಚ್ಚು ಹೆಚ್ಚು ಮದ್ಯದ ಮಾರಾಟಕ್ಕೆ ಒತ್ತು ನೀಡುವುದು ಇನ್ನೊಂದೆಡೆ ಜನರಿಗೆ ಖುಷಿ ಪಡಿಸುವ ಯೋಜನೆಗಳನ್ನು ತರುವುದು. ಸರಕಾದ ಈ ಪರಿಯ ಆಡಳಿತಾತ್ಮಕ ಹೆಜ್ಜೆಗಳನ್ನು ಸರಿ ಎನ್ನಬೇಕೆ ಅಥವಾ ತಪ್ಪು ಎನ್ನಬೇಕೆ ಎಂಬುದನ್ನು ಜನಗಳೇ ಚಿಂತಿಸಬೇಕು! ಕರ್ನಾಟಕದ ‘ಭಾಗ್ಯ’ಗಳ ಸರಪಳಿ ಕೂಡ ಇಂತಹುದೇ ರಾಜಕಾರಣದ ಒಂದು ಭಾಗವೆಂಬುದನ್ನು ಬೇರೆ ಹೇಳಬೇಕಾಗಿಲ್ಲ ತಾನೇ!?
ಆಮಿಷಗಳು ಇಂದು ಸಾಮಾಜಿಕ ಕಲ್ಯಾಣದ ಭಾಗವಾಗಿರುವುದು ನಿಜಕ್ಕೂ ದುರಂತವೇ ಸರಿ. ತಮಿಳುನಾಡು ಎಂದಂತಲ್ಲ. ಇದೀಗ ಕರ್ನಾಟಕ, ಮಹರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು ಜನರನ್ನು ಮರುಳುಗೊಳಿಸುವ ದಂಧೆಗೆ ಇಳಿದಿದೆ. ಈ ತರದ ಪುಕ್ಸಟ್ಟೆ ಕೊಡುಗೆಗಳು ಮೇಲುನೋಟಕ್ಕೆ ನೆರವಿನ ಹಸ್ತದಂತೆ ಕಂಡು ಬಂದರೂ ಒಟ್ಟಾಗಿ ನೋಡಿದರೆ ಇದೊಂದು ತೀರಾ ಅಪಾಯಕಾರಿ ಹೆಜ್ಜೆಗಳೇ! ಮಾತ್ರವಲ್ಲದೆ ಬೊಕ್ಕಸಕ್ಕೂ ದೊಡ್ಡ ಮಟ್ಟದ ಹೊಡೆತ. ಯಾಕೆಂದರೆ ಸರಕಾರ ಈ ಪರಿಯ ಕೊಡುಗೆಗಳನ್ನು ನೀಡಬೇಕಾದರೆ ಅವುಗಳು ಆರ್ಥಿಕವಾಗಿ ಸದೃಢವಾಗಿರಬೇಕಾಗುತ್ತದೆ. ಒಂದುವೇಳೆ ಸದೃಢವಾಗಿಯೇ ಇದೆ ಎಂದಾದರೆ ಈ ಮೊದಲಿನ ಸರಕಾರಗಳು ಯಾಕೆ ಈ ಪರಿಯ ಪುಕ್ಸಟ್ಟೆ ಕೊಡುಗೆಗಳನ್ನು ಜನರಿಗೆ ನೀಡಲಿಲ್ಲ? ಖಜಾನೆಯಲ್ಲಿ ಆ ದುಡ್ಡು ಹಾಗೇ ಕೊಳೆಯುತ್ತಿತ್ತೇ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಮೇಲೈಸುತ್ತದೆ. ನೇರವಾಗಿ ಹೇಳುವುದಾದರೆ ಸಾಮಾಜಿಕ ಕಲ್ಯಾಣ, ಬಡವರ ಉದ್ಧಾರವೆಂದು ರಾಜ್ಯದ ಸಂಪತನ್ನು ಪುಕ್ಸಟ್ಟೆ ತಿನ್ನಿಸುತ್ತಾ ಹೋದರೆ ಅಲ್ಲಿ ಒಂದು ವರ್ಗದ ಜನಬೆಂಬಲವನ್ನು ಗಳಿಸಬಹುದೇ ಹೊರತು ಒಟ್ಟು ಆರ್ಥಿಕ ಪ್ರಗತಿಯನ್ನಂತು ಸಾಧಿಸುವುದು ಖಂಡಿತಾ ಅಸಾಧ್ಯ. ಹಾಗೇನೆ, ನಿಗದಿತ ತೆರಿಗೆಯ ಮೂಲಕ ಗಳಿಸುವ ಹಣವನ್ನು ಜನರಿಗೆ ಪುಕ್ಸಟ್ಟೆ ತಿನ್ನಿಸಲು ವ್ಯಹಿಸಿದರೆ ನಿಜವಾಗಿಯೂ ವ್ಯಹಿಸಬೇಕಾಗಿರುವ ಕ್ಷೇತ್ರಗಳಾದ ಸಾರಿಗೆ, ಶಿಕ್ಷಣ, ಆಸ್ಪತ್ರೆ ಸರಕಾರಿ ಕಚೇರಿಗಳ ಕಾರ್ಯ ಇವೇ ಮೊದಲಾದವುಗಳು ಜಿಡ್ಡು ಹಿಡಿಯುತ್ತಾ ಸಾಗುತ್ತದೆ ಎಂಬುದು ನಿಸ್ಸಂಶಯ! ಇದರ ಪರಿಣಾಮದಿಂದಲೇ ಇಂದು ಸರಕಾರಿ ಇಲಾಖೆಗಳಲ್ಲಿ ಹುದ್ದೆಗಳು ಬೇಕಾ ಬಿಟ್ಟಿಯಾಗಿ ಖಾಲಿ ಬಿದ್ದಿದ್ದರೂ ನೇಮಕಾತಿಯ ನಡೆ ಮಾತ್ರ ಆಮೆಗತಿಯಲ್ಲಿರುವುದು! ನೇಮಕಾತಿ ನಡೆಸಿದರೆ ಸಂಬಳ-ಭತ್ಯೆ ವ್ಯಹಿಸಲು ದುಡ್ಡು ಬೇಡವೇ!? ಆದ್ದರಿಂದಲೇ ಸಾರ್ವಜನಿಕ ರಂಗದ ಈ ಅವಶ್ಯಕ ಸೇವೆಗಳನ್ನು ಚುರುಕಾಗಿಡಲು, ಇರುವ ನೌಕರರನ್ನು ಸಂಭಾಳಿಸಲು ಸರಕಾರ ಮತ್ತೆ ಒಂದಷ್ಟು ಹೊಸ ಹೊಸ ಹಣಕಾಸಿನ ಮೂಲವನ್ನು ಅರಸುತ್ತಿರುವುದು! ಅದಕ್ಕಾಗಿ ತಮಿಳುನಾಡು ಸರಕಾರ ಮಾಡಿದಂತೆ ಒಂದಾ ಅಬಕಾರಿಯಂತಹ ಸಾಮಾಜಿಕ ಕಂಟಕದ ವಿಚಾರವನ್ನು ಬೆಂಬಲಿಸಿ ಅದರ ಮಾರುಕಟ್ಟೆಯನ್ನು ವಿಸ್ತರಿಸುತ್ತಾ ಹಣ ಗಳಿಸುವುದು ಇಲ್ಲವೇ ವಿಧ ವಿಧದ ಹೆಚ್ಚುವರಿ ತೆರಿಗೆಗಳನ್ನು ಜನರ ಮೇಲೆ ಏರುತ್ತಾ ಸಾಮಾಜಿಕ ಜೀವನವನ್ನು ಮತ್ತಷ್ಟು ದುಸ್ತರಗೊಳಿಸುವುದು!
ಸಾಮಾಜಿಕ ಕಲ್ಯಾಣವೆಂಬುದು ಸರಕಾರದ ಆದ್ಯ ಕರ್ತವ್ಯಗಳಲ್ಲೊಂದು. ಪ್ರತೀ ಬಡವವನನ್ನು ಕೂಡ ಅದು ಅನ್ನ ಆಹಾರಕ್ಕೆ ಬರಗಾಲವಿಲ್ಲದಂತೆ ಸಾಕಿ ಸಲಹಬೇಕು. ಜೊತೆಗೆ ಇವತ್ತಿನ ಬಡವನನ್ನು ಮುಂದಿನ ದಿನಗಳಲ್ಲಿ ಆರ್ಥಿಕ ಸದೃಢನನ್ನಾಗಿಸುತ್ತಾ ರಾಷ್ಟ್ರದ ಆರ್ಥಿಕತೆಗೆ ಚೈತನ್ಯ ತುಂಬುವ ಓರ್ವ ಶ್ರೀಮಂತನನ್ನಾಗಿಸುವತ್ತ ಪ್ರಯತ್ನಿಸಬೇಕು. ಇದಕ್ಕಾಗಿ ಅದು ಉತ್ತಮ ಶಿಕ್ಷಣ, ಉದ್ಯೋಗ, ಸ್ವ-ಉದ್ಯೋಗ ತರಬೇತಿಗಳನ್ನು ನೀಡುವುದರತ್ತ ಹೆಚ್ಚು ಹೆಚ್ಚು ಕಾರ್ಯೋನ್ಮುಖವಾಗಿ ಆ ನಿಟ್ಟಿನಲ್ಲಿ ಯೋಜನೆಗೆಳನ್ನು ಜಾರಿಗೆ ತರಬೇಕು. ಆದರೆ ಇವತ್ತಿನ ಸರಕಾರಗಳ ಯೋಜನೆಗಳು ಹೇಗಿದೆಯೆಂದರೆ ಅತ್ತ ವಿರೋಧಿಸುವುದಕ್ಕೂ ಆಗಲ್ಲ ಇತ್ತ ಒಪ್ಪಿಕೊಳ್ಳುವುದಕ್ಕೂ ಆಗುವುದಿಲ್ಲ! ಯಾಕೆಂದರೆ ಅವುಗಳು ಕೊಡುವ ಯೋಜನೆಗಳಿಗೆ ‘ಬಡವರ ಉದ್ಧಾರ’ವೆಂಬ ಟ್ಯಾಗ್ ಒಂದನ್ನು ಅಂಟಿಸಲ್ಪಟಿರುತ್ತದೆ!! ರಾಜ್ಯದ ಬೊಕ್ಕಸ ಗುಳೇ ಎದ್ದು ಹೋದರೂ ಚಿಂತಿಲ್ಲ ಆದರೆ ನಾನು ಮಾತ್ರ ಮತ್ತೊಮ್ಮೆ ಪಟ್ಟಾಭೀಷೇಕಗೊಳ್ಳಬೇಕು ಎಂಬ ಚಿಂತನೆಯ ಯೋಜನೆಗಳಿವು ಎಂಬುದನ್ನು ಜನ ಸಾಮಾನ್ಯ ಅರ್ಥೈಸುವುದೇ ಇಲ್ಲ. ಫ್ರೀಬೀಸ್‍ಗಳನ್ನು ನೀಡುತ್ತಾ ಮತಗಳನ್ನು ಬಾಚುತ್ತಾ ತನ್ನ ಅಧಿಕಾರವನ್ನು ಗಟ್ಟಿಗೊಳಿಸುವುದೇ ಇಂದಿನ ರಾಜಕಾರಣದ ಸಕ್ರಿಯ ನಡೆ. ಇದರಿಂದ ಬಡವ ಶ್ರೀಮಂತನಾಗುತ್ತಾನೆ ಎನ್ನುವುದು ಬರೀ ಭ್ರಮೆಯಷ್ಟೇ! ಈ ಸತ್ಯ ಜನತೆಗೆ ಅರ್ಥವಾಗುವವರೆಗೂ ರಾಜಕಾರಣದ ಈ ನಡೆ ತಡೆಯಿಲ್ಲದೆ ಮುಂದೆ ಸಾಗುತ್ತಲೇ ಇರುತ್ತದೆ!
ಚಿತ್ರಕೃಪೆ: ಇಂಟರ್’ನೆಟ್
Facebook ಕಾಮೆಂಟ್ಸ್