X

ನಾವೇಕೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು..?

     ಕಳೆದ ಒಂದೆರೆಡು ವರ್ಷಗಳಿಂದೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಚೀನಾ ಉತ್ಪನ್ನಗಳನ್ನ ಬಹಿಷ್ಕರಿಸಿ ” (“ಬಾಯ್ಕಾಟ್ ಚೀನಾ ಪ್ರಾಡಕ್ಟ್ಸ್ “) ಎಂಬ ಅಡಿಬರಹದೊಂದಿಗೆ ದೊಡ್ಡ ಆಂದೋಲನ ಒಂದು ಪ್ರಾರಂಭವಾಗಿದೆ. ಈಗೀಗ ಕೆಲ ಸಂಘಟನೆಯ ಕಾರ್ಯಕರ್ತರು ಬೀದಿಗೂ ಇಳಿದು ಹೋರಾಡಲಾರಂಭಿಸಿದ್ದಾರೆ. ದಿನದಿನಕ್ಕೆ ವ್ಯಾಪಕ ಪ್ರಚಾರ ಪಡೆದುಕೊಳ್ಳುತ್ತಿರುವ ಈ ಆಂದೋಲನ,  ತನ್ನ ನೈಜ ಮತ್ತು ಪ್ರಸಕ್ತ ವಿಚಾರಧಾರೆಯಿಂದಾಗಿ ಹೆಚ್ಚಿನ ಮೈಲೇಜ್ ಪಡೆದುಕೊಳ್ಳುತ್ತಿದೆ.  ವಾಸ್ತವ ನೆಲೆಗಟ್ಟಿನಲ್ಲಿ, ದೂರದೃಷ್ಠಿಯಿಂದ ಯೋಚಿಸಿದಲ್ಲಿ , ಉಳಿದೆಲ್ಲ ಆಂದೋಲನಗಳಿಗಿಂತ ಈ ಆಂದೋಲನ ಅರ್ಥಪೂಣವೆನಿಸುತ್ತದೆ.  ಹಾಗಾದರೆ ನಾವೇಕೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ?

   ಚೀನಾ. ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ. ಜನಸಂಖ್ಯೆಯ ಜೊತೆಗೆ ಜಗತ್ತಿಗೆ ಅತಿ ಹೆಚ್ಚು ಉತ್ಪನ್ನಗಳನ್ನು ರಫ್ತು ಮಾಡುವ ದೇಶ ಕೂಡ ಹೌದು. ಭೂಪಟದ ಪ್ರತಿ ದೇಶದಲ್ಲೂ ಚೀನಾ ಉತ್ಪನ್ನಗಳಿಗೆ ಬೇಡಿಕೆಯಿದೆ ಮತ್ತು ಜನ ಚೀನಾ ಉತ್ಪನ್ನಗಳಿಗೆ ಮುಗಿ ಬೀಳುತ್ತಾರೆ. ಅಂದ ಮಾತ್ರಕ್ಕೆ, ಬೇರೆಲ್ಲಾ ದೇಶಗಳ ಉತ್ಪನ್ನಗಳಿಗಿಂತ ಚೀನಾ ಉತ್ಪನ್ನಗಳು ಉತ್ಕೃಷ್ಟವೆಂದೇನಲ್ಲ. ಬೆಲೆ ಕಡಿಮೆ ಎಂದಷ್ಟೇ. ಈ ಚೀನಾ ಉತ್ಪನ್ನಗಳಿಗೆ ವಾರೆಂಟಿ , ಗ್ಯಾರೆಂಟಿ ಎರಡು ಇರುವುದಿಲ್ಲ. ಆದರೂ ಕಡಿಮೆ ಬೆಲೆಗೆ ಸಿಗುತ್ತದೆಯೆನ್ನುವ ಏಕೈಕ ಕಾರಣ ಚೀನಾ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಬೇಡಿಕೆಯನ್ನು ಹುಟ್ಟು ಹಾಕಿದೆ. ಬೆಲೆ  ಕಡಿಮೆಯಾದ್ದರಿಂದ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡತನ ರೇಖೆಗಿಂತ ಕೆಳಗಿರುವ ದೇಶಗಳಲ್ಲಂತೂ ಚೀನಾ ಉತ್ಪನ್ನಗಳಿಗೆ  ಎಲ್ಲಿಲ್ಲದ ಬೇಡಿಕೆಯಿದೆ. ಅಂಕಿ ಅಂಶಗಳನ್ನು ಗಮನಿಸಿದರೆ ಚೀನಾ ದಿನದಿನಕ್ಕೂ ಜಾಗತಿಕ ಮಾರುಕಟ್ಟೆಯ ಮೇಲಿನ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳುತ್ತ ಹೋಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ  ಈ ವರ್ಷ ಶೇ.3ರಷ್ಟು ರಫ್ತಿನ ಪ್ರಮಾಣವನ್ನು ಹೆಚ್ಚಿಸಿದೆ ಚೀನಾ. ಕಾಲಿನ ಚಪ್ಪಲಿಯಿಂದ ಹಿಡಿದು ಯಂತ್ರೋಪಕರಣಗಳವರೆಗೂ ಯಾವ ಉತ್ಪನ್ನವನ್ನು ಬಿಡದೆ, ದೊಡ್ಡ ದೊಡ್ಡ ಕಂಪೆನಿಗಳ ಉತ್ಪನ್ನಗಳನ್ನೇ ನಕಲು ಮಾಡುತ್ತಾ ಇಂದು ವಿಶ್ವಮಾರುಕಟ್ಟೆಯಲ್ಲಿ ಹೆಮ್ಮೆರವಾಗಿ ಬೆಳೆದು ನಿಂತಿದೆ ಚೀನಾ.  ಆ ಮೂಲಕ ತನ್ನ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಅಭಿವೃದ್ಧಿ ಹೊಂದಿರುವ ದೇಶಗಳ ಸಾಲಿನಲ್ಲಿ ನಿಲ್ಲಲು ಹಾತೊರೆಯುತ್ತಿದೆ. ಹಾಗಾದರೆ ವಿಶ್ವಕ್ಕೆ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಪೂರೈಸುತ್ತಾ, ತನ್ನ ಆರ್ಥಿಕತೆಯನ್ನು ಚೀನಾ ಹೆಚ್ಚಿಸಿಕೊಳ್ಳುತ್ತಿದ್ದರೇ ನಾವೇಕೆ ಚೀನಾವನ್ನು ದ್ವೇಷಿಸಬೇಕು ? ನಾವೇಕೆ ಚೀನಾ ಉತ್ಪನ್ನಗಳನ್ನ ಬಹಿಷ್ಕರಿಸಬೇಕು ?. ಕಾರಣವಿದೆ ಮತ್ತು ಆ ಕಾರಣ ಭಾರತೀಯರನ್ನು ಬೆಚ್ಚಿ ಬೀಳಿಸುತ್ತದೆ.

     ಬೇರೆ ದೇಶಗಳಿಗೆ ಕಡಿಮೆ ದರದಲ್ಲಿ , ಅತ್ಯಂತ ಕಳಪೆ ಗುಣಮಟ್ಟದ  ಉತ್ಪನ್ನಗಳನ್ನು ಪೂರೈಸಿ, ಆ ದೇಶಗಳ ಆರ್ಥಿಕ ಸಮಮೋತಲನವನ್ನೇ ಅಲುಗಾಡಿಸಲು ಪ್ರಯತ್ನಿಸುತ್ತಿದೆ ಚೀನಾ. ತನ್ನ ಅಪಾರ ಜನಸಂಖ್ಯೆಯನ್ನೇ ಬಂಡವಾಳ ಮಾಡಿಕೊಂಡಿರುವ ಚೀನಾ, ಅನನುಭವಿ ಮತ್ತು ಕೌಶಲ್ಯರಹಿತ ಕಾರ್ಮಿಕರಿಂದ ಕಳಪೆ ಗುಣಮಟ್ಟದ ಉತ್ಪನಗಳನ್ನು ತಯಾರಿಸಿ ಜಗತ್ತಿಗೆ ಪೂರೈಸುತ್ತಿದೆ.  ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬಳಸಿ ಯಾವ ದೇಶ ತಾನೇ ಸಬಲವಾಗಬಲ್ಲದು? ಇಷ್ಟೇ ಅಲ್ಲಾ, ಜಾಗತಿಕ ಕಾನೂನುಗಳನ್ನು ಆಗಾಗ ಧಿಕ್ಕರಿಸುವ ಚೀನಾ, ಆರ್ಥಿಕವಾಗಿ ಸಬಲವಾಗುತ್ತಾ ಹೋದಂತೆಲ್ಲ ಜಗತ್ತಿನ ಇತರೇ ರಾಷ್ಟ್ರಗಳಿಗೆ ಮಗ್ಗಿಲ ಮುಳ್ಳಾಗುವುದು ಖಂಡಿತ. ಕೇವಲ ಕಮ್ಯೂನಿಸ್ಟ್ ತತ್ವಗಳನ್ನೇ ತಲೆಗೆ ತುಂಬಿಕೊಂಡಿರುವ ಚೀನಾ, ಆರ್ಥಿಕವಾಗಿ ಸಬಲವಾದರೆ ಜಗತ್ತಿನ ಶಾಂತಿ ಕದಡುವುದಂತೂ ಖಚಿತ. ಇದಕ್ಕೆ ಸಾಕ್ಷಿ ಈಗಾಗಲೇ ಗಡಿಯ ದೇಶಗಳೊಂದಿಗೆ ಚೀನಾ ವ್ಯವಹರಿಸುತ್ತಿರುವ ರೀತಿ. ಇದರ ಜೊತೆಗೆ , ಜಗತ್ತನ್ನೇ ಕಿತ್ತು ತಿನ್ನುತಿರುವ ಭಯೋತ್ಪಾದನೆ ಎಂಬ ಸಮಸ್ಯೆಗೆ ಚೀನಾ ಪರೋಕ್ಷವಾಗಿ ನೀರೆರೆದು ಪೋಷಿಸುತ್ತಿದೆ ಎಂಬ ಸತ್ಯ ಇತ್ತೀಚಿನ ತನಿಖೆಗಳಿಂದ ಹೊರ ಬಿದ್ದಿದೆ.

      ಇದು ಜಾಗತಿಕ ಮಟ್ಟದಲ್ಲಿಯಾದರೆ, ಭಾರತದ ಸಮಸ್ಯೆ ಇನ್ನೂ ಗಹನವಾದದ್ದು. ಭಾರತ ಸ್ವತಂತ್ರವಾದ ದಿನದಿಂದಲೂ ಚೀನಾ ಭಾರತವನ್ನು ಕಾಡುತ್ತಲೇ ಇದೆ. ಗಡಿಯಲ್ಲಿ ಸದಾ ಒಂದಿಲ್ಲೊಂದು ತಕರಾರು ತಗೆಯುವ ಚೀನಾ, ದಿನೇ ದಿನೇ ಪಾಕಿಸ್ತಾನಕ್ಕಿಂತ ಹೆಚ್ಚು ಕಂಟಕವಾಗಿ ಪರಿಣಮಿಸುತ್ತಿದೆ. ಚೀನಾ ಭಾರತದ ಮೇಲೆ ಹೆಗೆ ಸಾಧಿಸಲು ಅನೇಕ ಕಾರಣಗಳಿವೆ ಅದರಲ್ಲಿ ಮುಖ್ಯವಾದದ್ದು , ಮಾನವ ಸಂಪನ್ಮೂಲ. ಜನಸಂಖ್ಯೆಯಲಿ ಭಾರತ ಚೀನಾಗಿಂತ ಒಂದು ಮೆಟ್ಟಿಲು ಕೆಳಗಿದ್ದರೂ , ತಂತ್ರಜ್ಞಾನ ಮತ್ತು ಗುಣಮಟ್ಟದಲ್ಲಿ ಭಾರತೀಯರು ಚೀನೀಯರಿಗಿಂತ ಬಹಳ ಮುಂದಿದ್ದಾರೆ. ಚೀನಾ ಜಗತ್ತಿಗೆ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ರಫ್ತು ಮಾಡಿದರೆ. ಭಾರತ ಉತ್ಕೃಷ್ಟ ಮಟ್ಟದ ಡಾಕ್ಟರ್, ಇಂಜಿನಿಯರ್ ಗಳನ್ನು ಪೂರೈಸುತ್ತಿದೆ. ಸ್ವಾತಂತ್ರ್ಯ ನಂತರದ ಸಮಸ್ಯೆಗಳ ಸುಳಿಯಲ್ಲಿ ಭಾರತ ನರಳುತ್ತದೆ , ನಾನು ಬಹಳ ಸುಲಭವಾಗಿ ಇಪ್ಪತ್ತೊಂದನೇ ಶತಮಾನದಲ್ಲಿ ಏಷ್ಯಾದ ಬಲಿಷ್ಠ ರಾಷ್ಟ್ರವಾಗಬಹುದೆಂದು ಕನಸು ಕಾಣುತಿದ್ದ ಚೀನಾಗೆ, ಭಾರತ ಕೃಷಿ ಮತ್ತು ಗುಡಿಕೈಗಾರಿಕೆಗಳ ಸಹಾಯದಿಂದ 1960ರಷ್ಟರಲ್ಲಿ, ತನ್ನ ಆರ್ಥಿಕ ಸಮತೋಲನ ಕಂಡುಕೊಳ್ಳುವತ್ತ ಸಾಗಲಾರಂಭಿಸಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಅಂದಿನ ಕಾಲಕ್ಕೆ ಕೃಷಿ ಭಾರತೀಯ ಅರ್ಥ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತರೆ, ಗುಡಿ ಕೈಗಾರಿಕೆ ಮತ್ತು ಶಿಕ್ಷಿತ ಗುಣಮಟ್ಟದ ಕಾರ್ಮಿಕರು ಅರ್ಥವ್ಯವಸ್ಥೆಯ ಹೃದಯಾವಾಗಿ ಭಾರತವನ್ನು ಅಭಿವೃದ್ಧಿಯೆಡೆಗೆ ನಡೆಸಲಾರಂಭಿಸಿದ್ದರು. ಯಾವಾಗ ಭಾರತ ಏಷ್ಯಾದ ಬಲಿಷ್ಠ ರಾಷ್ಟ್ರವಾಗಬೇಕೆಂಬ ತನ್ನ ಕನಸಿಗೆ ಪ್ರತಿಸ್ಪರ್ಧಿಯಾಗಬಹುದೆಂಬ ಯೋಚನೆ ಚೀನಾದ ಎದೆಯಲ್ಲಿ ನಡುಕ ಹುಟ್ಟಿಸಿತೋ ,ಅಂದೇ ಚೀನಾ ಭಾರತದ ಬೆಳವಣಿಗೆಗೆ ಅಡ್ಡಗಾಲಾಗಲು ತೀರ್ಮಾನಿಸಿತು. ಅದರ ಪರಿಣಾಮವೇ 1962ರ ಗಡಿ ಸಮಸ್ಯೆ ಮತ್ತು ಇಂಡೋ-ಚೀನಾ ಯುದ್ಧ. ಬಾಹ್ಯ ನೋಟಕ್ಕೆ ಅರುಣಾಚಲ ಪ್ರದೇಶದ ಗಡಿಯಲ್ಲಿ ಖ್ಯಾತೆ ತೆಗೆದು , ಗಡಿ ವಿಚಾರಕ್ಕೆ ಯುದ್ಧ ಸಂಭವಿಸಿದಂತೆ ಕಂಡರೂ , ಚೀನಾದ ಉದ್ದೇಶ ಮಾತ್ರ, ಏಷ್ಯಾದ ಇತರ ರಾಷ್ಟ್ರಗಳಿಗೆ ಭಾರತಕ್ಕಿಂತ ತಾನು ಎಷ್ಟು ಬಲಿಷ್ಠ ಎಂಬುದನ್ನು ತೋರಿಸಬೇಕೆಂಬ ಗುಪ್ತ ವಾಂಛೆ. ಅಂದಿನ ಭಾರತೀಯ ನಾಯಕರ ಅಸಮರ್ಥತೆ ಮತ್ತು ಕೆಲ ಒಳರಾಜಕಾರಣದಿಂದಾಗಿ ಭಾರತ ಸೋತರೂ.., ಚೀನಾಕ್ಕೆ ಅಂದು ಭಾರತದ ಶಕ್ತಿಯ ಪರಿಚಯವಾಗಿತ್ತು.  ಯಾವಾಗ ಭಾರತ ತನಗಿಂತಲೂ ಪ್ರಭಾವಶಾಲಿಯಾಗಿ ಬೆಳೆಯುತಿದೆಯೆಂಬುದು ಚೀನಾಕ್ಕೆ ಮನದಟ್ಟಾಗುತ್ತದೋ , ಆಗ ಭಾರತದ ಆರ್ಥಿಕತೆ ಮತ್ತು ಆಂತರೀಕ ಭದ್ರತೆಗೆ ಹೊಡೆತ ನೀಡಲು ಮುಂದಾಗುತ್ತದೆ ಚೀನಾ. 1965 ಮತ್ತು 1971ರಲ್ಲಿ ಪಾಕಿಸ್ತಾನ ಭಾರತದ ಮೇಲೆ ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಾಗ. ಯುದ್ಧ ಸಾರಿದರೆ ಬೆನ್ನೆಲುಬಾಗಿರುತ್ತೇನೆ ಎಂದು ಪಾಕಿಸ್ಥಾನವನ್ನು ಭಾರತದ ವಿರುದ್ಧ ಛೂ ಬಿಟ್ಟಿದ್ದೆ ಚೀನಾ. ಇತ್ತ ಪಾಕ್ ಎರಡು ಯುದ್ಧದಲ್ಲೂ ಸೋಲುತಿದ್ದಂತೆಯೇ,  ಭಯೋತ್ಪಾದನೆಯೆಂಬ ಛದ್ಮಯುದ್ಧಕ್ಕೆ ಪಾಕಿಸ್ತಾನವನ್ನು ಪ್ರೋತ್ಸಾಹಿಸಿದ್ದು ಮತ್ತು ಹಣಕಾಸಿನ ನೆರವು ನೀಡಿದ್ದು ಸಹ ಇದೇ ಚೀನಾ. ಪಾಕಿಸ್ತಾನ ಭಯೋತ್ಪಾದಕರನ್ನು ಹುಟ್ಟುಹಾಕುತಿದ್ದರೆ, ಅವರನ್ನು ಪೋಷಿಸುತ್ತಿರುವ ದೇಶ ಚೀನಾ.

     ಯಾವಾಗ ಭಾರತವನ್ನು ಶಕ್ತಿಯಿಂದ ಸೋಲಿಸುವುದು ಅಸಾಧ್ಯವೆನಿಸಿತೋ ಆಗ ಚೀನಾ ಭಾರತದ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಯೋಚಿಸಲಾರಂಭಿಸುತ್ತದೆ. ಮೊದಲೇ ಉಲ್ಲೇಖಿಸಿದಂತೆ ಭಾರತೀಯ ಆರ್ಥಿಕತೆ ಅವಲಂಭಿಸಿದ್ದು, ಕೃಷಿ, ಕೌಶಲ್ಯ ಭರಿತ ಕಾರ್ಮಿಕರು ಮತ್ತು ಗುಡಿಕೈಗಾರಿಕೆಯನ್ನು. ಕೃಷಿಯಲ್ಲಿ ಭಾರತಕ್ಕೆ ಪೈಪೋಟಿ ನೀಡಲು, ಭೌಗೋಳಿಕ ಸಮಸ್ಯೆ ತೊಡಕಾದರೆ. ಗುಣಮಟ್ಟದ ಕಾರ್ಮಿಕರನ್ನು ತಯಾರಿಸಿ, ಬೇರೆ ದೇಶಗಳಿಗೆ ಪೂರೈಸಲು ತೊಂದರೆಯಾದದ್ದು ಭಾಷೆ(ಇಂಗ್ಲೀಷ್). ಆಗ ಚೀನಾ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಆಯ್ದುಕೊಂಡದ್ದು ಭಾರತೀಯ ಗುಡಿಕೈಗಾರಿಕೆಯನ್ನು. ಭಾರತೀಯ ಗುಡಿಕೈಗಾರಿಕೆಯಿಂದ ತಯಾರಾಗಲ್ಪಡುತ್ತಿದ್ದ, ರೇಷ್ಮೆ ವಸ್ತುಗಳು,  ಆಟಿಕೆಗಳು, ಅಲಂಕಾರಿಕ ವಸ್ತುಗಳು, ಸಣ್ಣ-ಪುಟ್ಟ ಕೃಷಿ ಮತ್ತು ಇತರ ಉಪಕರಣಗಳನ್ನು ಗುರಿಯಾಗಿರಿಸಿಕೊಂಡು, ನೋಡಲು ಆಕರ್ಷಕವಾಗಿರುವ ಕಳಪೆ ಗುಣಮಟ್ಟದ ಕಡಿಮೆ ಬೆಲೆಯ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ಬಿಡಲಾರಂಭಿಸಿತು. ನೋಡಿದ ಕೂಡಲೇ ಕಣ್ಣಿಗೆ ಮುದ ನೀಡುತಿದ್ದ ಮತ್ತು ಭಾರತೀಯ ಉತ್ಪನ್ನಗಳಿಗಿಂತ ಕಡಿಮೆ ಬೆಲೆಯಲ್ಲಿ ದೊರಕಲಾರಂಭಿಸಿದ ಚೀನಿ ಉತ್ಪನ್ನಗಳು ಮಧ್ಯಮ ಮತ್ತು ಬಡತನ ರೇಖೆಗಿಂತ ಕೆಳಗಿದ್ದ ಭಾರತೀಯ ಗ್ರಾಹಕರನ್ನು ಸೆಳೆಯಲಾರಂಭಿಸಿದವು. ಗುಣಮಟ್ಟವನ್ನು ಪರಿಶೀಲಿಸದೆ, ದೂರದೃಷ್ಠಿಯಿಲ್ಲದೇ ಗ್ರಾಹಕರು ಚೀನಿ ಉತ್ಪನ್ನಗಳಿಗೆ ಮುಗಿ ಬೀಳಲಾರಂಭಿಸಿದರು. ಪರಿಣಾಮ ಪ್ರತಿವರ್ಷ ಶೇ.10-15ರಷ್ಟು ಭಾರತೀಯ ಗುಡಿ ಕೈಗಾರಿಕೆಗಳ ಉತ್ಪನ್ನಗಳು ಬಿಕರಿಯಾಗದೇ ಉಳಿಯಲಾರಂಭಿಸಿದವು. ಗುಡಿ ಕೈಗಾರಿಕೆಯನ್ನು ನಂಬಿ ಬದುಕು ಸಾಗಿಸುತಿದ್ದ ಅದೆಷ್ಟೋ ಜೀವಗಳು ಬೀದಿಗೆ ಬಂದವು. ದೇಶದ ಅರ್ಥವ್ಯವಸ್ಥೆ ಅಲುಗುತಿದ್ದರೂ ಅಂದಿನ ಸರ್ಕಾರಗಳಿಗೆ ಚೀನಾ ಉತ್ಪನ್ನಗಳಿಂದ ಬರುತಿದ್ದ ತೆರಿಗೆಯ ಮೇಲಿನ ವ್ಯಾಮೋಹವೇ ಹೆಚ್ಚಾಗುತ್ತದೆ. ತೆರಿಗೆಯನ್ನು ತಪ್ಪದೇ ಪಾವತಿಸುತಿದ್ದ ಚೀನಾ ಉತ್ಪನ್ನಗಳು, ಮುಂದೊಂದು ದಿನ ದೇಶದ ಪ್ರಗತಿಗೆ ಮತ್ತು ಭದ್ರತೆಗೆ ಮಾರಕವಾಗುತ್ತದೆ ಎನ್ನುವುದನ್ನೇ ಮರೆತ ಅಂದಿನ ನಾಲಾಯಕ್ಕು ನಾಯಕರು, ಚೀನಾ ಉತ್ಪನ್ನಗಳು ಯಥೇಚ್ಚವಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರು ಕಣ್ಮುಚ್ಚಿ ಕುಳಿತು ಬಿಡುತ್ತಾರೆ. ಇದೆಲ್ಲದರ ಪರಿಣಾಮವೇ 1990ರ ವೇಳೆಗೆ ಭಾರತೀಯ ಗುಡಿ ಕೈಗಾರಿಕೆಗಳು ಅವನತಿಯ ಹಾದಿ ಹಿಡಿಯುತ್ತವೆ ಮತ್ತು ಚೀನಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಯನ್ನು ಆಳಲಾರಂಭಿಸುತ್ತವೆ. ಶ್ರೀಮಂತರು ಮತ್ತು ಕೆಲವು ಶಿಕ್ಷಿತ ಗ್ರಾಹಕರನ್ನು ಬಿಟ್ಟರೆ ಉಳಿದೆಲ್ಲಾ ಭಾರತೀಯ ಗ್ರಾಹಕರು ಚೀನಿ ಉತ್ಪನ್ನಗಳ ದಾಸರಾಗುತ್ತಾರೆ. ಮೊದ ಮೊದಲು ಚೀನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಅಸಮಧಾನ ವ್ಯಕ್ತಪಡಿಸುವ ಗ್ರಾಹಕ , ದಿನಕಳೆದಂತೆ  ಚೀನಿ ಉತ್ಪನ್ನಗಳ ಗುಣಮಟ್ಟಕ್ಕೆ ಹೊಂದಿಕೊಳ್ಳುತ್ತಾನೆ. ಯಾವ ಮಟ್ಟಿಗೆ ಈ ಚೀನಾ ಉತ್ಪನ್ನಗಳು ಭಾರತೀಯ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತವೆಯೆಂದರೆ 2000ನೇ ಇಸವಿಯ ವೇಳೆಗೆ ಗ್ರಾಹಕ ಚೀನಿ ಉತ್ಪನ್ನಗಳು ಬೇಡ ಭಾರತ ಉತ್ಪಾದಿಸಿದ ವಸ್ತುಗಳನ್ನು ತೆಗೆದುಕೊಳ್ಳುತ್ತೇನೆಂದರೂ ಪರ್ಯಾಯ ವಸ್ತು ಸಿಗದೆ ವಿಧಿಯಿಲ್ಲದೆ ಚೀನಿ ಉತ್ಪನ್ನಗಳನ್ನೇ ಖರೀದಿಸಬೇಕಾಗಿ ಬರುತ್ತದೆ. ಯಾಕೆಂದರೆ 2000ನೇ ಇಸವಿಯ ವೇಳೆಗೆ ಭಾರತದ ಬಹುತೇಕ ಗುಡಿಕೈಗಾರಿಕೆಗಳು ಚೀನಿ ವಸ್ತುಗಳಿಗೆ ಬಲಿಯಾಗಿ ಬಾಗಿಲು ಮುಚ್ಚಿರುತ್ತವೆ.

    ಹೀಗೆ ಭಾರತಕ್ಕೆ ರಫ್ತುಮಾಡಿದ ಕಳಪೆ ವಸ್ತುಗಳಿಂದ ಬಂದ ಲಾಭವನ್ನು, ಭಾರತವನ್ನು ಹಾಳು ಮಾಡಲು ಉಪಯೋಗಿಸುತ್ತದೆ ಚೀನಾ. ಒಂದುಕಡೆ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಗಡಿಯಲ್ಲಿ ಖ್ಯಾತೆ ತೆಗೆಯಲು ಹಣಕಾಸು ನೆರವು ನೀಡುವ ಚೀನಾ, ಇನ್ನೊಂದೆಡೆ ದೇಶದೊಳಗಿನ ಶತ್ರುಗಳಾದ ನಕ್ಸಲೈಟ್, ಮಾವೋವಾದಿ ಮತ್ತು ಕಮ್ಯೂನಿಸ್ಟ್ ಸಂಘಟನೆಗಳಿಗೆ ದೇಶದೊಳಗಿನ ಆಂತರಿಕ ಭದ್ರತೆಯನ್ನು ಕದಡುವ ಕೆಲಸಕ್ಕೆ ಧನಸಹಾಯ ಮಾಡಲಾರಂಭಿಸುತ್ತದೆ. ಭಾರತ ಜಾಗತಿಕ ಮಟ್ಟದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡರು ಚೀನಾ ಅದನ್ನು ವಿರೋಧಿಸುತ್ತದೆ. ಇದಕ್ಕೆ ಅದ್ಭುತ ಉದಾಹರಣೆಯೆಂದರೆ ಎನ್.ಎಸ್.ಜಿ (ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್). ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತವನ್ನು ಗುಂಪಿಗೆ ಸೇರಿಸಿಕೊಳ್ಳಲು ತಯಾರಿದ್ದರೂ , ಚೀನಾ ಮಾತ್ರ ದ್ವೇಷ ಸಾಧಿಸುತ್ತಿದೆ. 2010ರ ವೇಳೆಗೆ ಭಾರತೀಯ ಗುಡಿ ಕೈಗಾರಿಕೆಯನ್ನು ನುಂಗಿ ಹಾಕಿದ ಚೀನಾ, ಭಾರತವನ್ನು ಮೀರಿ ಏಷ್ಯಾದ ಬಲಿಷ್ಠರಾಷ್ಟ್ರವಾಗಿ ಗುರುತಿಸಿಕೊಳ್ಳಲು ಹವಣಿಸಲಾರಂಭಿಸುತ್ತದೆ.

      ಆದರೆ ಕಳೆದ ಎರಡು ವರ್ಷಗಳಿಂದ ಚೀನಾಕ್ಕೆ ಮತ್ತೆ ಭಾರತದ ನಡುಕ ಪ್ರಾರಂಭವಾಗಿದೆ. ಭಾರತವನ್ನಾಳುತ್ತಿರುವ ಹೊಸ ಸರ್ಕಾರ “ಮೇಕ್ ಇನ್ ಇಂಡಿಯಾ”ಯೋಜನೆಯನ್ನು ಜಾರಿಗೆ ತಂದು ಗ್ರಾಹಕರಿಗೆ ಭಾರತೀಯ ಉತ್ಪನ್ನಗಳನ್ನೇ ಉಪಯೋಗಿಸುವಂತೆ ಸೂಚಿಸಿದೆ. ಗುಡಿ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ , ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಧನಸಹಾಯ ಮತ್ತು ಕಡಿಮೆ ಬಡ್ಡಿಯಲ್ಲಿ ಸಾಲದಂತಹ ಯೋಜನೆಗಳನ್ನು ಜಾರಿಗೆತರುತ್ತಿದೆ. ಪರಿಣಾಮ, ಚೀನಿ ಉತ್ಪನ್ನಗಳ ದಾಳಿಗೆ ಬಲಿಯಾಗಿ ಅವನತಿಯ ಅಂಚಿನಲಿದ್ದ ಹಲವಾರು ಗುಡಿ ಕೈಗಾರಿಕೆಗಳು ಮೈಕೊಡವಿಕೊಂಡು ಮೇಲೆದ್ದು ಚೀನಿ ಉತ್ಪನ್ನಗಳಿಗೆ ಸವಾಲಾಗಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಪ್ರತಿಯೊಂದು ಚೀನಿ ಉತ್ಪನ್ನಕ್ಕೂ ಪರ್ಯಾಯ ಭಾರತೀಯ ಉತ್ಪನ್ನದ ಉತ್ಪಾದನೆ ಪ್ರಾರಂಭವಾಗಿದೆ. ಸರ್ಕಾರದ ಈ ಚದುರಂಗದ ನಡೆ ಚೀನಿಯರಿಗೆ ಮಂಕುಬಡಿಸಿದೆ. ಇನ್ನೊಂದು ಕಡೆ ಎರಡು ವರ್ಷದ ಮೊದಲು ಭಾರತದೊಂದಿಗೆ ಅಷ್ಟೇನೂ  ಉತ್ತಮ ಭಾಂಧವ್ಯ ಹೊಂದಿರದ, ಜಗತ್ತಿನ ದಿಗ್ಗಜರಾಷ್ಟ್ರಗಳಾದ, ಅಮೇರಿಕ , ರಷ್ಯಾ, ಜರ್ಮನಿಯಂತಹ ದೇಶಗಳು  ಭಾರತದ ಸ್ನೇಹಹಸ್ತ ಬಯಸುತ್ತಾ ಭಾರತಕ್ಕಾಗಿ ಯಾವ ಸಹಾಯವನ್ನಾದರೂ ಮಾಡಲು ತುದಿಗಾಲಿನಲ್ಲಿ ನಿಂತಿರುವುದು ಚೀನಾವನ್ನು ಇನ್ನಷ್ಟು ನಿದ್ದೆಗೆಡಿಸಿದೆ. ಗಾಯದ ಮೇಲೆ ಬರೆ ಎಳೆದಂತೆ ಗಡಿಯಲ್ಲಿ ಶಾಂತಿ ಕದಡುತ್ತಿದ್ದ ಚೀನಾ ಬೆಂಬಲಿತ ಭಯೋತ್ಪಾದಕರನ್ನು , ಆಂತರಿಕವಾಗಿ ಕಾಡಿತಿದ್ದ ಮಾವೋವಾದಿಗಳನ್ನು , ನಕ್ಸಲೈಟ್ಗಳನ್ನು ಬಡಿದು ಬುದ್ಧಿ ಕಲಿಸುವಂತೆ ಸೈನ್ಯಕ್ಕೆ ಸರ್ಕಾರ ಸ್ವಾತಂತ್ರ್ಯ ನೀಡಿದೆ. ಇದನ್ನೇ ಕಾಯುತ್ತಿದ್ದ ಭಾರತೀಯ ಸೇನೆ ಎರಡು ಕಡೆಯೂ ದೇಶದ್ರೋಹಿಗಳ ತಲೆಗಳನ್ನುದುರಿಸಲಾರಂಭಿಸಿದೆ. ಇವೆಲ್ಲದಕ್ಕೆ ಕಲಶವಿಟ್ಟಂತೆ ಸರಕಾರ ಹೇಳದಿದ್ದರೂ ಭಾರತೀಯ ಗ್ರಾಹಕರೇ ಚೀನಾದ ನರಿ ಬುದ್ಧಿಯನ್ನರಿತು ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸಲಾರಂಭಿಸಿರುವುದು ಚೀನಾಗೆ ದೊಡ್ಡ ಹೊಡೆತವನ್ನೇ ನೀಡಿದೆ. ಚೀನಾದ ಸ್ಥಿತಿ ಸಧ್ಯಕ್ಕೆ ರೆಕ್ಕೆ ಮುರಿದ ಹಕ್ಕಿಯಂತಾಗಿದೆ.

   ಅದಕ್ಕೆ ಈ ಆಂದೋಲನ ಬಹಳ ಅರ್ಥಪೂರ್ಣವೆಂದು ಉಲ್ಲೇಖಿಸಿದ್ದು. 2015ರಿಂದೀಚೆಗೆ ಈ ಆಂದೋಲನದ ಫಲವಾಗಿ ಭಾರತದಲ್ಲಿ ಚೀನಿ ಉತ್ಪನ್ನಗಳನ್ನು ಕೊಳ್ಳುವವರ ಸಂಖ್ಯೆ ಶೇ.20ರಷ್ಟು ಕಡಿಮೆಯಾಗಿದೆ. ಪ್ರತಿ ಬಾರಿ ದೀಪಾವಳಿಯಲ್ಲಿ ತನ್ನ ಸುರಕ್ಷಿತವಲ್ಲದ ಅಪಾಯಕಾರಿ ಪಟಾಕಿಗಳನ್ನು ಭಾರತಕ್ಕೆ ರಫ್ತು ಮಾಡಿ ಯಥೇಚ್ಚವಾಗಿ ಲಾಭ ಮಾಡಿಕೊಳ್ಳುತ್ತಿದ್ದ ಚೀನಾಕ್ಕೆ, 2015ರ ದೀಪಾವಳಿ ಸಂಧರ್ಭದಲ್ಲಿ ಚೀನಾ ಪಟಾಕಿಗಳನ್ನು ಕೊಳ್ಳದೇ ನಮ್ಮ ದೇಶದಲ್ಲಿ ತಯಾರಾದ ಸುರಕ್ಷಿತ ಪಟಾಕಿಗಳನ್ನು ಬಳಸಿ ಚೀನಾಕ್ಕೆ ತಿರುಗೇಟು ನೀಡಿದ್ದಾನೆ ಭಾರತೀಯ ಗ್ರಾಹಕ. ಸುಮಾರು ಶೇ.40ರಷ್ಟು ಚೀನಿ ಪಟಾಕಿಗಳು ಬಿಕರಿಯಾಗದೆ, ಕಸದ ಬುಟ್ಟಿಗೆ ಆಹಾರವಾಗಿದ್ದು, ಭಾರತೀಯ ಗ್ರಾಹಕ ಎಚ್ಚೆತ್ತುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲೂ ಸಹ ಚೀನಿ ಪಟಾಕಿಗಳಿಗೆ ಮಾರುಕಟ್ಟೆ ಕ್ಷೀಣಿಸಿದೆ. ಚೀನಿ ಪಟಾಕಿಗಳಿಗೆ  ಕಳೆದ ವರ್ಷದಿಂದಿತ್ತೀಚೆಗೆ ಶೇ. 2-3ರಷ್ಟು ಬೇಡಿಕೆ ಕುಸಿದಿದೆ. ಇದು ಭಾರತಕ್ಕೆ ಮತ್ತು ಜಾಗತಿಕವಾಗಿ ಉತ್ತಮ ಬೆಳವಣಿಗೆಯೆಂದರೆ ತಪ್ಪಲ್ಲ.

    ಅದೇನೆ ಇರಲಿ, ನಮ್ಮ ಗುಡಿ ಕೈಗಾರಿಕೆಗಳನ್ನು ನಾಶಪಡಿಸಿದ, ದೇಶದ ಭದ್ರತೆಗೆ ಸವಾಲೊಡ್ಡುತ್ತಿರುವ, ಆಂತರಿಕ ಕಲಹಗಳನ್ನು ಪೋಷಿಸುತ್ತಿರುವ ಚೀನಾ ಮತ್ತದರ ಉತ್ಪನ್ನಗಳನ್ನು ನಾವು ಬಹುದೂರ ಇಡಬೇಕಾಗಿದೆ. “ಬಾಯ್ಕಾಟ್ ಚೀನಾ ಪ್ರಾಡಕ್ಟ್ಸ್ ” ಆಂದೋಲನ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಾವನ್ನಾರಂಭಿಸಿದ್ದರೂ, ಇದು ಕೇವಲ ಶಿಕ್ಷಿತರ ಆಂದೋಲನವಾಗಿಯೇ ಉಳಿದಿದೆ. ಅನಕ್ಷರಸ್ತರ ಮತ್ತು ಹಳ್ಳಿಗಾಡಿನ ಗ್ರಾಹಕರಿಗೆ ಚೀನಾದ ನರಿ ಬುದ್ಧಿ ಮತ್ತು ಚೀನಾ ಉತ್ಪನ್ನಗಳಿಂದಾಗುವ ಅನಾಹುತಗಳನ್ನು ಮನವರಿಕೆ ಮಾಡಿಕೊಟ್ಟು, ಅವರು ಚೀನಾ ಉತ್ಪನ್ನಗಲನ್ನು ಬಹಿಷ್ಕರಿಸಿದ ದಿನ  ಈ ಆಂದೋಲನ ನಿಜಕ್ಕೂ ಯಶಸ್ವಿಯಾಗುತ್ತದೆ ಮತ್ತು ಚೀನಾ ಬಾಲ ಮುದುರಿಕೊಂಡು ತೆಪ್ಪಗಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಿತನು, ವಿಷಯದ ಬಗ್ಗೆ ಅರಿವಿರುವ ಪ್ರತಿಯೊಬ್ಬರು ಇತರರಿಗೆ ಮನವರಿಕೆ ಮಾಡಿಕೊಡಬೇಕಾದ ತುರ್ತು ಅವಶ್ಯಕತೆಯಿದೆ. ಶಾಲಾ-ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಹಳ್ಳಿ-ಹಳ್ಳಿಗೆ ಸಂಚರಿಸಿ ಜನಜಾಗೃತಿ ಮಾಡಬೇಕಾಗಿದೆ. ಆಂದೋಲನಕಾರಾರು ಫೇಸ್ ಬುಕ್ , ವಾಟ್ಸ್ಯಾಪ್, ಟ್ವಿಟರಿನಿಂದ ಹೊರ ಬಂದು ತಳಮಟ್ಟದಲ್ಲಿ ಕಾರ್ಯಪ್ರವೃತವಾಗಬೇಕಿದೆ.

   ಈ ಲೇಖನ ಓದುತ್ತಿರುವ ಪ್ರತಿಯೊಬ್ಬರಿಗೂ ಒಂದು ಜವಬ್ದಾರಿಯಿದೆ. ಮುಂದಿನ ಬಾರಿ ನೀವು ಯಾವುದೇ ವಸ್ತುವನ್ನು ಕೊಳ್ಳುವ ಮೊದಲು, ಅದು ಚಿಕ್ಕದಿರಲಿ ದೊಡ್ಡದಿರಲಿ, ವಸ್ತುವಿನ ಉತ್ಪಾದಕರು ಯಾರು ಎಂದು ತಿಳಿದುಕೊಳ್ಳಿ, ಒಂದು ವೇಳೆ ಅದು “ಮೇಡ್ ಇನ್ ಚೀನಾ” ಆಗಿದ್ದಲ್ಲಿ ದಯವಿಟ್ಟು ಆ ವಸ್ತುವನ್ನು ತೆಗೆದುಕೊಳ್ಳದೆ, ಪರ್ಯಾಯವಾಗಿ,    ಮೇಡ್ ಇನ್ ಇಂಡಿಯಾ ಅಥವಾ ಚೀನಾ ಉತ್ಪಾದಕನಲ್ಲದ ಬೇರೆ ದೇಶದ ವಸ್ತುಗಳನ್ನು ಕೊಂಡುಕೊಳ್ಳಿ. ಬೆಲೆ ತುಸು ಹೆಚ್ಚಿರಬಹುದು ಆದರೆ ನಿಮಗೆ ಗುಣಮಟ್ಟದ ವಸ್ತುವಿನ ಜೊತೆಗೆ ದೇಶಸೇವೆ ಮಾಡಿದ ತೃಪ್ತಿ ಖಂಡಿತ ದೊರೆಯುತ್ತದೆ.

   ನೆನಪಿರಲಿ, ನಾವು ಚೀನಿ ಉತ್ಪನ್ನಗಳಿಗೆ ವ್ಯಯಿಸುವ ಒಂದೊಂದು ರೂಪಾಯಿಯನ್ನು ಚೀನಾ ಒಂದೊಂದು ಬುಲೆಟ್ ಆಗಿ ನಮ್ಮ ಸೈನಿಕರ ಎದೆಗಿಳಿಸುತ್ತದೆ. ಈ ಮೂಲಕ ನಮ್ಮ ಸೈನಿಕರ ಸಾವಿಗೆ ನಾವೇ ಪರೋಕ್ಷವಾಗಿ ಕಾರಣವಾಗುತ್ತೇವೆ.  ಹಾಗಾಗಬಾರದೆಂದಾದರೆ ಇಂದೇ ಚೀನಿ ಉತ್ಪನ್ನಗಳನ್ನು ನಾವು ಬಹಿಷ್ಕರಿಸಬೇಕಾಗಿದೆ.  ಬನ್ನಿ “ಬಾಯ್ಕಾಟ್ ಚೀನಾ ಪ್ರಾಡಕ್ಟ್ಸ್ ” ಆಂದೋಲನಕ್ಕೆ ಕೈ ಜೋಡಿಸೋಣ , ಆ ಮೂಲಕ ಚೀನಾ ಎಂಬ ನರಿಬುದ್ಧಿಯ ದೇಶಕ್ಕೆ ಪಾಠ ಕಲಿಸೋಣ.

Facebook ಕಾಮೆಂಟ್ಸ್

Arjun Devaladakere: ಹೆಸರು ಅರ್ಜುನ್ ದೇವಾಲದಕೆರೆ , ಸ್ವಂತ ಊರು ಸಕಲೇಶಪುರ ತಾಲ್ಲೂಕಿನ ದೇವಾಲದಕೆರೆ ಎಂಬ ಮಲೆನಾಡ ಸ್ವರ್ಗ. ವಾಣಿಜ್ಯ ಮತ್ತು ವ್ಯವಹಾರ ವಿಷಯದಲ್ಲಿ ಉನ್ನತ ಪದವೀಧರ. ಸಧ್ಯಕ್ಕೆ ಬೆಂಗಳೂರಿನ ಒಂದು ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿ. ಸಮಾಜಮುಖಿ ಬರಹ ಹವ್ಯಾಸ. ಸಧ್ಯ ಚಿಕ್ಕಮಗಳೂರು ಜಿಲ್ಲಾಪತ್ರಿಕೆ ದರ್ಪಣದ ಕಾಯಂ ಅಂಕಣಕಾರ. ಸತ್ಯ ಘಟನೆ ಆಧಾರಿತ "ಅವಳು" ಕಾದಂಬರಿ ಬಿಡುಗಡೆಗೆ ಸಿದ್ದವಾಗಿದೆ. ಕ್ರಿಕೆಟ್, ಫುಟ್ ಬಾಲ್ ,ಫೋಟೋಗ್ರಫಿ ಮತ್ತು ನಾಟಕಗಳಲ್ಲಿ ಅಭಿನಯ ಇತರೆ ಹವ್ಯಾಸಗಳು.
Related Post