X

ದೇಶವನ್ನು ಬಾಯಿಗೆ ಬಂದಂತೆ ಟೀಕಿಸುವುದು ಸುಲಭ. ಸಮಾಜಕ್ಕೆ ಒಂದಾದರೂ ಉಪಕಾರವಾಗುವ ಕೆಲಸ ಮಾಡಿ ನೋಡಿ. ನೀವು ಟೀಕಿಸುವ ದೇಶದಲ್ಲೇ ಒಳ್ಳೆಯದನ್ನು ಕಾಣುವಿರಿ.

ಇವತ್ತು ಬೆಳಗ್ಗೆ ದೂರವಾಣಿ ಕರೆಯೊಂದು ಬಂತು.

‘ನೀವು ಪತ್ರಕರ್ತರಲ್ವಾ’

‘ಹೌದು’

‘ನೀವೆಂಥದ್ದು ಮಾರಾಯ್ರೇ, ನೋಡುದಿಲ್ವಾ, ಪ್ರತಿ ದಿನ ಬೆಳಗ್ಗೆ ಟ್ಯೂಬ್ ಲೈಟ್ ಉರೀತದೆ, ನಾನು ವಾಕಿಂಗ್ ಮಾಡುವಾಗ ಯಾವಾಗಲೂ ಬೆಳಕು ಹರಿದಾಗಲೂ ಉರೀತಾನೇ ಇರ್ತದೆ. ಇಂಥದ್ದನ್ನೆಲ್ಲಾ ಪೇಪರ್ ನಲ್ಲಿ ಹಾಕಬೇಕು ಮಾರಾಯ್ರೇ, ಎಷ್ಟೊಂದು ವೇಸ್ಟ್ ಗೊತ್ತುಂಟಾ’

‘ಹೌದಾ’

ನಾನಂದೆ. ಅವರು ಮಾತನ್ನು ನಿಲ್ಲಿಸುವಂತೆ ಕಾಣಲಿಲ್ಲ.

‘ನೋಡಿ ಇವ್ರೇ…, ನಾನು ಮೊನ್ನೆ ಅಮೇರಿಕಾಕ್ಕೆ ಹೋಗಿದ್ದೆ. ಅಲ್ಲಿ ಎಷ್ಟು ಚಂದ ಉಂಟು ಮಾರಾಯ್ರೇ, ಹೇಗೆ ನೋಡಿದ್ರಾ, ಎಷ್ಟು ಕ್ಲೀನ್, ಯಾವುದನ್ನೂ ವೇಸ್ಟ್ ಮಾಡುದಿಲ್ಲ. ಬೀದಿದೀಪ ಹಾಗೆಲ್ಲಾ ಉರಿದರೆ ಫೈನ್ ಹಾಕ್ತಾರೆ ಗೊತ್ತುಂಟಾ, ನೀವೊಮ್ಮೆ ನೋಡ್ಬೇಕು ಮಾರ್ರೆ, ಎಷ್ಟು ಚಂದದ ದೇಶ, ನಮ್ಮದುಂಟಲ್ಲಾ ಏನೂ ಹೇಳಿ ಪ್ರಯೋಜನವಿಲ್ಲ. ದಾರಿಯಲ್ಲೇ ಕಸ ಎಸೀತಾರೆ, ಮಗ ಬಂದವ್ನು ಹೇಳ್ತಿದ್ದಾ, ಪಪ್ಪಾ ಇಲ್ಲಿ ಬೂರ್ನಾಸು ನಾವು ಅಮೇರಿಕಕ್ಕೇ ಹೋಗೋಣ ಎಂದು. ನಾನೂ ಒಮ್ಮೆ ಆಲೋಚನೆ ಮಾಡಿದೆ. ಅಲ್ಲಿಗೆ ಹೋಗುವಾ ಅಂತ. ಆದರೆ ನನಗೆ ಅಲ್ಲಿ ಕೆಲವೊಮ್ಮೆ ಚಳಿ ತಡ್ಕೊಳ್ಳಿಕ್ಕೆ ಆಗುದಿಲ್ಲ. ಹೀಗಾಗಿ ಬಂದುಬಿಟ್ಟೆ. ಇಲ್ಲಿ ಎಂಥದ್ದು ಉಂಟು? ಪೊಲಿಟಿಶೀಯನ್ನುಗಳು ಯಾವಾಗಲೂ ಲಡಾಯಿ ಮಾಡಿಕೊಂಡಿರ್ತಾರೆ. ಕ್ರಿಕೆಟ್ಟಿನಲ್ಲೂ ರಾಜಕೀಯ. ಟಿ.ವಿ. ನೋಡಿದರೆ ಅದೇ ಪೊಟ್ಟು ಧಾರಾವಾಹಿ. ಯಾವುದಾದರೂ ಬರ್ಕತ್ತುಂಟಾ’

ಅವರ ವಾದಸರಣಿ ಮುಂದುವರಿಯುತ್ತಿತ್ತು…(ಅವರದ್ದು ಜಿಯೋ ಸಿಮ್ಮು ಎಂದು ಕಾಣುತ್ತದೆ)

‘ನೋಡಿ ಮಾರಾಯ್ರೇ, ಈ ಟ್ಯೂಬ್ ಲೈಟ್ ಒಂದು ಬೀದಿಯಲ್ಲಿ ಹೀಗೆ ಉರಿದರೆ ಕರೆಂಟು ಎಷ್ಟು ನಷ್ಟ ಆಯಿತು ಗೊತ್ತುಂಟಾ, ಹಾಗೆಯೇ ದೇಶದ ಎಲ್ಲಾ ಬೀದಿಗಳಲ್ಲಿ ಬೆಳಕು ಹರಿದ ಮೇಲೆಯೂ ಟ್ಯೂಬ್ ಲೈಟ್ ಉರಿದರೆ ದೇಶಕ್ಕೆಷ್ಟು ನಷ್ಟ? ಯಾರೂ ಕೇಳುವವರೇ ಇಲ್ಲ ಅಂತ ಕಾಣ್ಸುತ್ತದೆ. ನೀವು ಪೇಪರಿನಲ್ಲಿ ಬರೀರಿ. ಬಿಡ್ಬೇಡಿ’

ಹೀಗೆ ವಾಪಸ್ ಅವರು ಟ್ಯೂಬ್ ಲೈಟಿನ ವಿಷಯಕ್ಕೇ ಮರಳಿದರು.

ಅವರು ಹೇಳಿದ್ದರ ಮೂಲ ಅರ್ಥ ಇಷ್ಟೇ. ಬೀದಿಯಲ್ಲಿ ಟ್ಯೂಬ್ ಲೈಟ್ ಬೆಳಕು ಹರಿದ ಮೇಲೆಯೂ ಉರಿಯುತ್ತದೆ. ಯಾರಾದರೂ ಅದನ್ನು ಬಂದ್ ಮಾಡಬೇಕಿತ್ತು. ಆದರೆ ಮಾಡಿಲ್ಲ. ಹೀಗಾಗಿ ಟ್ಯೂಬ್ ಲೈಟ್ ಸ್ವಿಚ್ ಆಫ್ ಮಾಡದ ಇಡೀ ವ್ಯವಸ್ಥೆ ವಿರುದ್ಧವೇ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಈಗ ಪ್ರಶ್ನಿಸುವ ಸರದಿ ನನ್ನದಾಯಿತು.

“ಸರ್, ನೀವು ಓಡಾಡುವ ಬೀದಿ ಯಾವುದು?’

‘………………………….’

ಅವರು ಉತ್ತರಿಸಿದರು.

“ಸರ್, ಯಾವಾಗಲೂ ಟ್ಯೂಬ್ ಲೈಟ್ ಹೀಗೇ ಉರಿಯುತ್ತಾ?’

“ಹೇ…ಹಂಗೇನೂ ಇಲ್ಲ, ಒಂದೆರಡು ದಿನದಿಂದ ಅಷ್ಟೇ’

“ಸರ್..ಹಾಗಾದರೆ ಯಾವಾಗಲೂ ಟ್ಯೂಬ್ ಲೈಟ ಸ್ವಿಚ್ ಯಾರು ಆಫ್ ಮಾಡುತ್ತಿದ್ದರು?’

“ಓ ಹಾಗಾ, ಅದು ಓ ಅಲ್ಲಿ ಕೊನೇ ಬೀದೀಲಿ ಇದ್ದಾರಲ್ವಾ ಅವರು. ಯಾವಾಗಲೂ ಅವರೇ ಸ್ವಿಚ್ ಆಫ್ ಮಾಡ್ತಾರೆ. ಯಾವಾಗಲೂ ನಮ್ಮೊಡನೆ ಪಟ್ಟಾಂಗ ಹೊಡೀತಾರೆ ಮಾರಾಯ್ರೇ’

“ಸರ್…ಹಾಗಾದರೆ ಎರಡು ದಿನದಿಂದ ಅವ್ರಿಲ್ವಾ?’

“ಹೌದು ಮಾರಾಯ್ರೇ, ಅವರು ಎರಡು ದಿನಗಳಿಂದ ವಾಕಿಂಗ್ ಗೆ ಬರುತ್ತಿಲ್ಲ. ಏನೂಂತ ಗೊತ್ತಿಲ್ಲ. ನೋಡಿ, ಎರಡು ದಿನದಿಂದ ಟ್ಯೂಬ್ ಲೈಟ್ ಸ್ವಿಚ್ ಆಫ್ ಮಾಡುವವರೇ ಇಲ್ಲ.’

“ಸರ್….ಅವರು ನಿಮ್ಮದೇ ಬಡಾವಣೆಯವರಾ ಅಥವಾ ಟ್ಯೂಬ್ ಲೈಟ್ ಸ್ವಿಚ್ ಆಫ್ ಮಾಡಲು ಅವರಿಗೇನಾದರೂ ಸಂಬಳ ಕೊಡ್ತಾರಾ’

“ಹೇ…..ಇಲ್ಲ ಮಾರಾಯ್ರೇ, ಅವರಿಗೆಂಥ ಸಂಬ್ಳ, ಇನ್ ಫ್ಯಾಕ್ಟ್, ಈ ಕಾರ್ಪೊರೇಶನ್ ನವ್ರಿದ್ದಾರಲ್ವಾ, ಅವರು ನಮ್ಮ ಬಡಾವಣೆಯ ಸ್ಟಾರ್ಟಿಂಗ್ ಪಾಯಿಂಟ್ ನಲ್ಲಿ ಸ್ವಿಚ್ ಒಂದನ್ನು ಹಾಕಿ ಹೋಗಿದ್ದಾರೆ. ಯು ನೋ, ಅದನ್ನು ಯಾರು ಬೇಕಾದರೂ ಆಪರೇಟ್ ಮಾಡಬಹುದು, ಅದೇನೂ ದೊಡ್ಡ ವಿಷ್ಯವೇ ಅಲ್ಲ, ಅದಕ್ಕೆಲ್ಲಾ ಪೇ ಮಾಡ್ತಾರಾ, ಹೆ ಹೇ…ಏನು ಹಾಗಾದರೆ ದೇಶದ ಕಥೆ ಎಂಥದ್ದಾದೀತು’

‘ಸರ್…. ಹೌದಾ, ಯಾರು ಬೇಕಾದ್ರೂ ಆಪರೇಟ್ ಮಾಡಬಹುದಾ’

“ಮತ್ತೇನು ಮಾರಾಯ್ರೇ, ಸ್ವಿಚ್ ಯಾರು ಬೇಕಾದ್ರೂ ಆಪರೇಟ್ ಮಾಡಬಹುದು, ಅಂಥದ್ದೇನೂ ಘನಾಂದಾರಿ ಕೆಲಸ ಅದ್ರಲ್ಲಿಲ್ಲ’

“ಸರ್….ಹಾಗಾದರೆ ನೀವು ಹೇಳಿದ ಯಜಮಾನರು ಎರಡು ದಿನಗಳಿಂದ ವಾಕಿಂಗ್ ಗೆ ಬಂದಿಲ್ಲ. ಹೀಗಾಗಿ ಸ್ವಿಚ್ ಆಫ್ ಆಗಿಲ್ಲ. ಟ್ಯೂಬ್ ಲೈಟ್ ಉರೀತಿಲ್ಲ. ಹಗಲು ಕರೆಂಟ್ ವೇಸ್ಟ್ ಆಗ್ತಿದೆ ಅದೂ ನ್ಯಾಶನಲ್ ವೇಸ್ಟ್ ಎಂದು ನೀವು ಹೇಳ್ತೀರಿ. ಹಾಗಾದರೆ ಇದಕ್ಕೆ ಕಾರಣ ಯಾರು? ಯಾವಾಗಲೂ ಟ್ಯೂಬ್ ಲೈಟ್ ಆಫ್ ಮಾಡುವವ್ರಾ, ಅಥವಾ ಕಾರ್ಪೊರೇಶನ್ನಾ’

ಫೋನ್ ಕಟ್…

ಅಲ್ಲಿಗೆ ನಮ್ಮ ಭಯಂಕರ ಸಂಭಾಷಣೆ ಮುಗಿಯಿತು. ದೇಶದ ಬಗ್ಗೆ ಮಹಾನ್ ಕಾಳಜಿ ಇರುವ ವ್ಯಕ್ತಿ ಫೋನ್ ಇಟ್ಟದ್ದು ನನ್ನ ಪ್ರಶ್ನೆಯಿಂದ ಎಂಬುದು ನನಗೂ ತಿಳಿದಿತ್ತು. ಆ ವ್ಯಕ್ತಿಗೆ ಸಮಾಜದ ಬಗ್ಗೆ ಇನ್ನಿಲ್ಲದ ಕಾಳಜಿ. ಆದರೆ ಸಮಾಜಸೇವೆ ಇನ್ನೊಬ್ಬರು ಮಾಡಬೇಕು ಎಂಬ ಆಸೆ. ಯಾವುದಕ್ಕೂ ಸೇರುವುದಿಲ್ಲ. ಟ್ಯೂಬ್ ಲೈಟ್ ಸ್ವಿಚ್ ಅವರೇ ಆಫ್ ಮಾಡಿದ್ದಿದ್ದರೆ ಇಂಥ ಪ್ರಸಂಗ ಬರ್ತನೇ ಇರಲಿಲ್ಲ. ಆದರೆ ಅಂಥ ಯೋಚನೆ ಮಾಡುವುದೇ ಮಹಾಪರಾಧ ಎಂಬ ಮನೋಭಾವ ಅವರದ್ದು. ಸಮಾಜಸೇವೆ ಮಾಡುವವರು ಎಂದರೆ ಅದೊಂಥರಾ ಸೆಕೆಂಡ್ ಗ್ರೇಡ್ ವೃತ್ತಿ. ನಾವು, ನಮ್ಮ ಮಕ್ಕಳು ಮನೆಯೊಳಗಿರಬೇಕು. ಹೊರಗೆ ಬಂದರೆ ಸ್ಟೇಜಿನಲ್ಲಿ ಕುಳಿತುಕೊಳ್ಳೋಣ. ಬ್ಯಾನರ್ ಕಟ್ಟುವುದು, ಕುರ್ಚಿ ಇಡುವುದು ಮತ್ತೊಂದು ಇತ್ಯಾದಿಗಳೆಲ್ಲ ಮಾಡಲು ಬೇರೊಬ್ಬರು ಇದ್ದಾರೆ ಎಂಬ ಮನೋಭಾವದವರು ಹಲವು ಸ್ವಯಂಸೇವಾ ಸಂಘಗಳಲ್ಲಿದ್ದಾರೆ.

ನನ್ನೆಲ್ಲ ಪತ್ರಿಕಾ ಮಾಧ್ಯಮ ಮಿತ್ರರಿಗೂ ಗೊತ್ತು. ಕೆಲವರು ಕ್ಯಾಮರಾ ಕಂಡ ಕೂಡಲೇ ಅದರ ಆವರಣದೊಳಗೆ ಬರಲು ಯತ್ನಿಸುತ್ತಾರೆ. ಪತ್ರಿಕೆಗಳಲ್ಲಿ ಫೊಟೋಗಳಲ್ಲಿ ಕಾಣಿಸಿಕೊಳ್ಳಲು ಇನ್ನಿಲ್ಲದ ಪೈಪೋಟಿ ನಡೆಸುತ್ತಾರೆ. ನೀವು ಟಿ.ವಿ. ಹಚ್ಚಿ ವಾರ್ತೆ ನೋಡಿದಾಗಲೇ ಗೊತ್ತಾಗುತ್ತದೆ. ರಾಜಕಾರಣಿಗಳ ಹಿಂದೆ, ಮುಂದೆ ಕ್ಯಾಮರಾಕ್ಕೆ ಫೋಸ್ ಕೊಡುವವರ ಸಂಖ್ಯೆಯೇ ಜಾಸ್ತಿ. ಇವರಿಂದ ಸಮಾಜಕ್ಕೆ ನಯಾಪೈಸೆ ಉಪಕಾರ ಏನಾದರೂ ಆಗಿದೆಯಾ, ದುರ್ಬೀನು ಹಾಕಿ ನೋಡಬೇಕು.

ಮೇಲೆ ಹೇಳಿದ ಮಹಾನುಭಾವರು ಚುನಾವಣೆ ಬಂದಾಗ ವಿದೇಶದಲ್ಲಿರುವ ತಮ್ಮ ಮಗನ ಮನೆಗೆ ಹೋಗಿ ಕುಳಿತಿದ್ದರು. ಊರಿಗೆ ಬಂದ ಮೇಲೆ ವ್ಯವಸ್ಥೆಯ ಬಗ್ಗೆ ಮಾತನಾಡುವುದೇ ಅವರ ಚಾಳಿ.

ಇಂಥವರು ನಿಮ್ಮ ಆಸುಪಾಸಿನಲ್ಲೂ ಇದ್ದಾರು.

ಹಾಗೆಯೇ ನಿಸ್ವಾರ್ಥವಾಗಿ ಯಾವುದೇ ಪ್ರಚಾರ ಬಯಸದೇ ಕೆಲಸ ಮಾಡುವವರೂ ನಮ್ಮೊಡನೆ ಇದ್ದಾರೆ.

ಇವತ್ತು ಸಂಘ, ಸಂಸ್ಥೆಗಳು ಅಂಥವರನ್ನು ಹುಡುಕಿ ಗೌರವಿಸಬೇಕು.

ವ್ಯವಸ್ಥೆಯನ್ನು ಬಾಯಿಗೆ ಬಂದಂತೆ ಟೀಕಿಸುವುದು ದೊಡ್ಡ ವಿಷಯವೇ ಅಲ್ಲ. ಅದನ್ನು ಸರಿಪಡಿಸಲು ತಮ್ಮದಾಗುವ ಕಾರ್ಯ ಮಾಡುವವರೇ ಗ್ರೇಟ್.  ವಿದೇಶಗಳಲ್ಲಿ ಅಲ್ಲಿನ ಶಿಸ್ತು, ನಿಯಮ ಪಾಲಿಸುವವರು ಇಲ್ಲಿನ ವ್ಯವಸ್ಥೆಯನ್ನು ಹಳಿಯುತ್ತಾರೆ. ತಾವೂ ಅದೇ ವ್ಯವಸ್ಥೆಯ ಒಂದು ಭಾಗ ಎಂಬುದನ್ನು ಬೇಗ ಮರೆಯುತ್ತಾರೆ.

ಏನಂತೀರಿ?

Facebook ಕಾಮೆಂಟ್ಸ್

Harish mambady: ಕಳೆದ ಹದಿನಾರು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಸದ್ಯ ಫ್ರೀಲ್ಯಾನ್ಸ್ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನ,  ಸಿನಿಮಾ ಕುರಿತ ಲೇಖನಗಳು, ಬರೆಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿವಾಸಿ.
Related Post