X

ಆತ ಸಂಸದನಾಗುವ ಮುನ್ನ ತಾಯಿಗೆ ಮಗನಾಗಿದ್ದ..

ಅಲ್ಲಾ, ಒಬ್ಬ ಜವಾಬ್ದಾರಿ ಜನಪ್ರತಿನಿಧಿಯಾಗಿ ತನ್ನ ನಡೆ ಕ್ಷೇತ್ರದ ಜನತೆ ಅಥವಾ ಸಾಮಾನ್ಯರೊಡನೆ ಹೇಗೆ ಇರಬೇಕು ಎಂಬುದು ಗೊತ್ತಿಲ್ಲದ ಮನುಷ್ಯನನ್ನು ಆ ಜಿಲ್ಲೆಯ ಪ್ರಜ್ಞಾವಂತ ಮತದಾರರು ಹೇಗಪ್ಪಾ ಐದು ಬಾರಿ ಸಂಸದರನ್ನಾಗಿ ಮಾಡಿದ್ರು ಎನ್ನುವುದೇ ಅರ್ಥವಾಗದ ವಿಷಯ ಎಂದು ಮೈಸೂರಿನ ಪರಿಚಯದವರೊಬ್ಬರು ನನ್ನ ಬಳಿ ಹೇಳಿಕೊಂಡರು. ನನಗೂ ಒಂದು ಬಾರಿ ಹೌದಲ್ಲಾ, ಅನ್ನಿಸಿದ್ದು ಸುಳ್ಳಲ್ಲ. ಮತ್ತು ಇದು ಕೇವಲ ಒಬ್ಬನ ಅಭಿಪ್ರಾಯವಲ್ಲ. ನಿನ್ನೆಯಿಂದ ದೃಶ್ಯಮಾದ್ಯಮದೆದುರು ಕೂತು ಚಳಿ ಕಾಯಿಸಿಕೊಂಡ ರಾಜ್ಯದ ಎಲ್ಲ ಜನರದ್ದೂ ಇದೇ ಮಾತು. ವಿಷಯವನ್ನು ಪ್ರಸ್ತುತ ಪಡಿಸುವ ಮುನ್ನ ನಾನು ಯಾರ ಪರವಾಗಿಯೂ, ಯಾರ ವಿರುದ್ಧವಾಗಿಯೂ ಈ ಲೇಖನ ಬರೆಯುತ್ತಿಲ್ಲ, ಬದಲಾಗಿ ಘಟನೆಯ ಇನ್ನೊಂದು ಮುಖವನ್ನು ತೆರೆದಿಡುವ ಪ್ರಯತ್ನ ಮಾಡುವನೆಂಬ ಭರವಸೆಯೊಂದಿಗೆ ಈಗ ಆರಂಭಿಸಿರುವೆ.

 

ಪ್ರಸ್ತುತ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಆದರ್ಶಗಳು ನಮ್ಮಲ್ಲಿ ಕೆಲವೇ ಕೆಲವು ಮಂದಿ ಇದ್ದಾರೆ. ಆದರೆ ಹೇಗಿರಬಾರದು ಎಂಬುದನ್ನು ತೆಗೆದುಕೊಂಡಾಗ ಬಹುದೊಡ್ಡ ಪಟ್ಟಿ ಬೆಳೆಯುತ್ತದೆ. ಹೀಗಿದ್ದಾಗ ಸಮಾಜಕ್ಕೆ ಮಾದರಿಯಾಗಿ ನಿಲ್ಲಬೇಕಿದ್ದ ಒಬ್ಬ ಸಂಸತ್ ಸದಸ್ಯ ಸಾಮಾನ್ಯ ವೈದ್ಯನ ಮೇಲೆ ಹಲ್ಲೆ ಮಾಡಿದ್ದು ಸರ್ವಥಾ ಒಪ್ಪುವಂಥದ್ದಲ್ಲ ಮತ್ತು ಖಂಡನೀಯ. ಏಕೆಂದರೆ ಜನರನ್ನು ಕಾಯಬೇಕಿದ್ದ ವ್ಯಕ್ತಿಯೊಬ್ಬ ಕಾನೂನನ್ನು ಕೈಗೆತ್ತಿಕೊಂಡಿರುವುದು ಸಾಮಾನ್ಯ ಜನರ ಕಣ್ಣಿಗೆ ಮತ್ತು ಕಾನೂನಿನ ದೃಷ್ಟಿಯಲ್ಲಿ ಅಪರಾಧ. ತಪ್ಪನ್ನು ಯಾರೇ ಮಾಡಿದರು ತಪ್ಪೇ. ಕಾನೂನು ಜನಸಾಮಾನ್ಯರಿಗೊಂದು,ಜನಪ್ರತಿನಿಧಿಗಳಿಗೊಂದು ಅಂತೇನಿಲ್ಲ.

 

ಒಂದು ಕಡೆ ಈ ದೇಶದ ಪ್ರಧಾನಿ, ದೇಶ ಮತ್ತು ದೇಶವಾಸಿಗಳು ನಡೆಯುತ್ತಿರುವ ಹಾದಿಯನ್ನು ಬದಲಾಯಿಸಲು ಸರ್ವ ಪ್ರಯತ್ನವನ್ನು ಮಾಡುತ್ತಿರುವಾಗ ಅವರಿಗೆ ಸಾಥ್ ನೀಡಬೇಕಿದ್ದ ಸಂಸತ್ ಸದಸ್ಯರು ಹೀಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಸರಿಯಲ್ಲ. ಜನಪ್ರತಿನಿಧಿಗಳು ಸಮಾಜದ ಅಭಿವೃದ್ಧಿ ವಿಷಯದಲ್ಲಿ ಜನಪ್ರಿಯತೆಯನ್ನು ಪಡೆಯಬೇಕೆ ವಿನಃ ವಿವಾದಗಳಿಂದಲ್ಲ. ಇಂತಹ ವಿವಾದ ವಿಷಯಗಳು ಒಂಥರಾ  ಮುಖದ ಮೇಲಿನ ಮೊಡವೆಗಳಂತೆ. ಮುಖವನ್ನು ಅಂದಗೊಳಿಸಲು ಕನ್ನಡಿ ಹಿಡಿದಾಗಲೆಲ್ಲಾ ಇರುವ ಒಂದು ಮೊಡವೆಯ ಮೇಲೆಯೇ ದೃಷ್ಟಿ ಹರಿಯುತ್ತದೆ. ಮತ್ತು ಮನಸ್ಸು ಖಿನ್ನತೆಯತ್ತ ಸಾಗುತ್ತದೆ.

 

ಕಿಸೆಯಲ್ಲಿನ ನಾಣ್ಯಕ್ಕೆ ಎರಡು ಮುಖಗಳಿರುವಂತೆ ಪ್ರತಿಯೊಂದು ವಿಷಯ-ಘಟನೆಗಳಿಗೂ ಎರಡು ಮುಖಗಳಿರುವಂತೆ. ಕೇವಲ ಒಂದು ಕಡೆ ಮಾತ್ರ ನಿಂತು ಪೂರ್ಣ ಪ್ರಮಾಣದಲ್ಲಿ ನ್ಯಾಯ ನೀಡಲೂ ಎಂದಿಗೂ ಸಾಧ್ಯವಿಲ್ಲ. ಹಾಗೇಯೇ, ಈ ಘಟನೆಯನ್ನು ಮತ್ತೊಂದು ತುದಿಯಿಂದ ನೋಡಿದಾಗ ಈ ಮೇಲೆ ಹೇಳಿರುವ ವಿಷಯಗಳಿಗೆ ತದ್ವಿರುದ್ಧವಾಗಿ ಕಂಡುಬರುತ್ತದೆ. ಏಕೆಂದರೆ ಒಬ್ಬ ಜನಪ್ರತಿನಿಧಿ ಕೇವಲ ಜನತೆಯ ಸ್ವತ್ತಲ್ಲ. ಬದಲಾಗಿ ಅವನಿಗೂ ಸಹ ವಯಕ್ತಿಕ ಬದುಕಿರುತ್ತದೆ. ಅವನು ಅದಕ್ಕೂ ಸಹ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಬದುಕು ದುರ್ಗಮ ಎನ್ನುವುದಕ್ಕಿಂತ ಬದುಕಿಗೆ ಅರ್ಥವೇ ಇರುವುದಿಲ್ಲ.

 

ನಾವು ಚಿಕ್ಕವರಿದ್ದಾಗ ಬೇರು ಎಡವಿ ಬಿದ್ದು ಪೆಟ್ಟಾದಾಗ ಸಾಮಾನ್ಯವಾಗಿ ಅಳುತ್ತಾ ಅಮ್ಮನತ್ತಿರ ಬರುತ್ತಿದ್ದ ನೆನಪು. ಆಗ ಗಾಯಕ್ಕೆ ಎಣ್ಣೆ ಹಚ್ಚಿ ಸವರಿದಾಗ ನಮ್ಮ ಅಳು ನಿಲ್ಲುತ್ತಿರಲಿಲ್ಲ, ಬದಲಾಗಿ ಎಡವಿದ ಬೇರನ್ನು ಅಮ್ಮನ ಕೈನಿಂದ ಕಿತ್ತೆಸೆದಾಗ ಅಳು ತನ್ನಿಂತಾನೇ ಮಾಯವಾಗುತ್ತಿತ್ತು. ಯಾಕಂದ್ರೆ ನಮಗೆ ಬೇಸರವಿದ್ದಿದ್ದು ಗಾಯದ ಮೇಲಲ್ಲ, ಪೆಟ್ಟು ಮಾಡಿದ ಆ ಬೇರಿನ ಮೇಲೆ. ಜಗತ್ತಿನಲ್ಲಿ ಕೇವಲ ಭಾವನೆಯ ಕಾರಣಕ್ಕೆ ಜೀವನವನ್ನು ಸಾಗಿಸುತ್ತಿರುವವರಲ್ಲಿ ನಮ್ಮ ದೇಶದ ಜನ ಮೊದಲಿಗರು. ಹಾಗಾಗಿಯೇ ನಮ್ಮ ಸಂವಿಧಾನವು ಅದಕ್ಕೆ ಬಹುದೊಡ್ಡ ಕಾಣಿಕೆಯನ್ನು ನೀಡಿದೆ. ಭಾವನೆಗಳು ಇರುವ ಕಾರಣಕ್ಕೆ ನಮ್ಮ ತಂದೆ-ತಾಯಿಯರನ್ನು ದೇವರೆಂದು ಕಾಣುವ ಸಂಸ್ಕೃತಿ ನಮ್ಮ ದೇಶದ ಜನತೆಗಿದೆ. ಅದ್ಯಾವುದೂ ಇತರರು ಹೇಳಿ ಬರುವಂತದ್ದಲ್ಲ, ಬದಲಾಗಿ ಜನ್ಮತಃ ಬಂದಿದ್ದು.

ಈಗ ಭಾವನೆಗಳ ವಿಷಯದಲ್ಲಿ ಈ ಘಟನೆಯನ್ನು ಅವಲೋಕಿಸಿದಾಗ, ತಾಯಿಯ ತೀವ್ರ ಅನಾರೋಗ್ಯದ ಅಂತಹ ಪರಿಸ್ಥಿತಿಯಲ್ಲಿ ಒಬ್ಬ ಸಂಸದನೆಂಬುದನ್ನು ಮರೆತು ಮಗನಾಗಿ ಬಂದಿದ್ದ ಅವರಿಗೆ ಕಾಣಿಸಿದ್ದು ಚಳಿಗಾಲದಲ್ಲಿ ತಣ್ಣನೆಯ ಸ್ಟ್ರೆಕ್ಚರ್ ಮೇಲೆ ಮಲಗಿಸಿದ್ದ ತನ್ನ ಹೆತ್ತಾಯಿ. ತೊಡೆಯ ಮೂಳೆಮುರಿತಕ್ಕೆ ಒಳಗಾದ ವೃದ್ಧರನ್ನು ಎರಡು-ಮೂರು ತಾಸುಗಳ ಕಾಲ ಕೇವಲ ಸ್ಟ್ರೆಕ್ಚರ್ನಲ್ಲಿ ಮಲಗಿಸಿದರೇ ಏನಾಗಬೇಡ. ನೋವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅವರನ್ನು ಮಲಗಿಸಲು ವೈದ್ಯರು ಸೂಚನೆ ನೀಡಿದ್ದರೇ, ಅಥವಾ ಸಿಬ್ಬಂದಿಗಳ ಅಲಕ್ಷವೇ ಎಂಬುದು ಅರಿಯದ ವಿಚಾರ. ಹೀಗಿದ್ದಾಗ ಒಬ್ಬ ಮಗನಾಗಿ ತನ್ನ ತಾಯಿಯನ್ನು ಅಂತಹ ಸ್ಥಿತಿಯಲ್ಲಿ ಕಂಡಿದ್ದು ಸ್ವಾಭಾವಿಕವಾಗಿ ಬೇಸರಗೊಳ್ಳುವ ವಿಚಾರ. ಸಾಮಾನ್ಯರು ಸಿಟ್ಟು ಬಂದು ಅಲ್ಲಿನ ಸಿಬ್ಬಂದಿಗಳಿಗೆ ಒಂದಷ್ಟು ಬೈದು ತಮ್ಮ ಪಾಡಿಗೆ ಹೊರನಡೆಯುತ್ತಿದ್ದರೇನೋ! ಹೇಳಿ ಕೇಳಿ ಸ್ವಲ್ಪ ಮುಂಗೋಪಿ ಸ್ವಭಾವದ ಸಂಸದರಿಗೆ ಕೈಮುಂದಾಯಿತು ಅನ್ನಿಸುತ್ತದೆ. ಆದರೆ ಕಾರಣ ಏನೇ ಇದ್ದರೂ ಯಾರ ಮೇಲೂ ಕೈಮಾಡುವ ಹಕ್ಕು ಯಾರಿಗೂ ಇರುವುದಿಲ್ಲ. ಅದರಲ್ಲೂ ತಾನೊಬ್ಬ ಜನಪ್ರತಿನಿಧಿ ಎಂಬುದನ್ನು ಆ ಕ್ಷಣಕ್ಕೆ ಅವರು ಮರೆತಿದ್ದು ಎದ್ದು ಕಾಣುತ್ತದೆ.

 

ಈ ಮಧ್ಯ ಮತ್ತೊಂದು ಗಮನಿಸಲೇಬೇಕಾದ ವಿಷಯಗಳೆಂದರೆ ದೃಶ್ಯಮಾದ್ಯಮಗಳ ಹಪಾಹಪಿತನ. ಈ ಪ್ರಕರಣ ದೃಶ್ಯ ಮಾದ್ಯಮದವರಿಗೆ ಕನಿಷ್ಟ 3 ದಿನ ಊಟವನ್ನುಣಿಸಿದೆ. ಪ್ರಕರಣದಲ್ಲಿ ದೊರೆತ ಕೇವಲ ಒಂದು ಭಾಗವನ್ನಿಟ್ಟುಕೊಂಡು ದಿನಪೂರ್ತಿ ಉಂಡು ತಣ್ಣಗೆ ಕುಳಿತ ದೃಶ್ಯ ಮಾದ್ಯಮದವರ ಕೆಲಸಕ್ಕೆ ಜನರೇ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಇಂತಹ ವಿಷಯಗಳ ಜೊತೆಗೆ ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿಯುವ ಪ್ರಯತ್ನವನ್ನೂ ಇಂದಿನ ಕೆಲ ದೃಶ್ಯಮಾದ್ಯಮಗಳು ಮಾಡಬೇಕಾದ ಅನಿವಾರ್ಯತೆ ಇದೆ.

 

ಇನ್ನು ಕೊನೆಯದಾಗಿ ಆಸ್ಪತ್ರೆಯಲ್ಲಿ ಈ ಮೊದಲು ಇಂತಹ ಅಲಕ್ಷ ವಹಿಸಿದ ಹಲವು ಪ್ರಕರಣಗಳು ಆಗಿಹೋಗಿವೆ ಎಂದೆಲ್ಲ ಸಾಕಷ್ಟು ಜನರ ಮಾತಾಗಿದೆ. ಅದು ಎಷ್ಟರ ಮಟ್ಟಿಗೆ ಎನ್ನುವುದು ಇಲ್ಲಿ ವಸ್ತು ವಿಷಯವಲ್ಲ. ಆದರೆ ಇಷ್ಟೆಲ್ಲ ಆಗಿರುವುದು ಅಲಕ್ಷದ ವಿಚಾರಕ್ಕೆ ಎಂಬುದನ್ನು ಮರೆಯುವಂತಿಲ್ಲ. ಅದೇ ತರಹ ಇವರೂ ಸಹ ವಿವಾದಾತ್ಮಕ ಸಂಸದ ಎಂದು ಗುರುತಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಪ್ರಕರಣವು ರಾಜಿ ಸಂಧಾನದಲ್ಲಿ ಮುಗಿದಿರುವಾಗ ಕ್ಷೇತ್ರದ ಮತ್ತು ರಾಜ್ಯದ ಜನತೆ ತಲೆಬಿಸಿಮಾಡಿಕೊಂಡಿದ್ದು ಸ್ವಲ್ಪ ಜನತೆಯ ಜವಾಬ್ದಾರಿಯನ್ನು ತೋರಿಸುತ್ತದೆ. ಒಬ್ಬ ಜನಪ್ರತಿನಿಧಿ ಅಥವಾ ಸಮಾಜದ ಯಾವುದಾದರೂ ಜನೋಪಯೋಗಿ ಸಂಘ-ಸಂಸ್ಥೆ ಎಡವಿದಾಗ ಅಂತವರನ್ನು ಎಚ್ಚರಿಸುವ ಕೆಲಸ ಜವಾಬ್ದಾರಿ ಪ್ರಜೆ ಖಂಡಿತವಾಗಿಯೂ ಮಾಡಬೇಕಾಗುತ್ತದೆ. ಆದರೆ ಅದು ಕೇವಲ ವಯಕ್ತಿಕ ದ್ವೇಷ ಅಥವಾ ರಾಜಕೀಯ ಕಾರಣಗಳಿಗಾದರೆ ಅಲ್ಲಿಗೆ ಆ ಪ್ರಜೆಯ ಸಾಮಾಜಿಕ ಕಳಕಳಿ ಸಾಯುತ್ತದೆ. ಈಗ ಒಂದು ಕಡೆ ಸಂಸದರ ನಡೆಯನ್ನು ವಿರೋಧಿಸುವ ಬಣವಾದರೆ, ಇನ್ನೊಂದೆಡೆ ಆಸ್ಪತ್ರೆಯ ನಿರ್ಲಕ್ಷ್ಯವನ್ನು ಪ್ರಶ್ನಿಸುವವರ ಬಣ. ಇವರಿಬ್ಬರ ಮಧ್ಯೆ ಯಾರು ಏನು ಬೇಕಾದರೂ ಮಾಡಿಕೊಳ್ಳಲಿ, ನಮ್ಮ ಕೆಲಸಕ್ಕೆ ಅಡ್ಡಿಯಿಲ್ಲ ಎನ್ನುವವರದ್ದೊಂದು ಒಣಾ ಬಣ. ಜಿಲ್ಲೆಯ ಮತ್ತು ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಸಾಗಬೇಕಾದ ಅವಶ್ಯಕತೆ ಎಲ್ಲರ ಮುಂದಿದೆ. ಆ ನಿಟ್ಟಿನಲ್ಲಿ ಸ್ವಾಸ್ಥ ಸಮಾಜದ ನಿರ್ಮಾಣದಲ್ಲಿ ನಾವೇ ಮೊದಲಿಗರಾಗಿ ಸದೃಢ ದೇಶವನ್ನು ನಿರ್ಮಿಸಬೇಕಿದೆ.

 

ಆದರೂ ಒಂದು ಕಡೆ ‘ಆತ ಸಂಸದನಾಗುವ ಮುನ್ನ ತಾಯಿಗೆ ಮಗನಾಗಿದ್ದ’ ಎಂದು ಹಿರಿಯರೊಬ್ಬರು ಹೇಳಿದ ಮಾತು ಕಿವಿಯಲ್ಲಿ ಈಗಲೂ ಗುಂಯ್ ಎಂದು ಸದ್ದು ಮಾಡುತ್ತಿದೆ…

– ಗುರುಪ್ರಸಾದ ಶಾಸ್ತ್ರಿ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post