ಅಪ್ಪನೆಂಬ ಅದ್ಭುತದೊಡನೆ ಸಾಗುವ ಮಗಳ ಮಧುರ ಯಾನವೇ ಈ ‘ಪುಷ್ಪಕ ವಿಮಾನ’. ಅನಂತರಾಮಯ್ಯ ಎಂಬ ಬುದ್ಧಿಮಾಂದ್ಯ ಅಪ್ಪ- ಅವನ ಮುದ್ದು ಮಗಳು ಪುಟ್ಟಲಕ್ಷ್ಮಿಯ ಮುದ್ದಾದ ಮಮತೆಯೊಡನೆ ಶುರುವಾಗುವ ಈ ಭಾವಯಾನ, ಅಪ್ಪ-ಮಗಳ ಸುಮಧುರ ಸುಗಂಧದ ಆಹ್ಲಾದವನ್ನು ಕೊಡುವುದರ ಜೊತಗೆ,ಮುಗ್ಧ ಅಪ್ಪ ಅರಿವಿಲ್ಲದ ಜಾಲದಲ್ಲಿ ಸಿಕ್ಕಿ ಒದ್ದಾಡುವಾಗ ಸಂಕಟವನ್ನೂ ಕೊಡುತ್ತದೆ.
ರಮೇಶ್ ಅರವಿಂದರ ನೂರನೇ ಚಿತ್ರ ಅವರ ಸಿನಿಜೀವನದ ಮೈಲಿಗಲ್ಲು.ಅದ್ಭುತ ಮ್ಯಾನರಿಸಂ ನ ಮೂಲಕ ಅಮೋಘ ಅಭಿನಯವನ್ನು ಶಬ್ದಗಳಲ್ಲಿ ಹಿಡಿದುಡುವ ಪ್ರಯತ್ನ ಮಾಡಿದರೇ ಬಹುಶಃ ನಮ್ಮ ಮೂರ್ಖತನವಾದೀತು.ಇನ್ನು ಅಪ್ಪನ ಮುದ್ದು ಕಣ್ಣಾಗಿ ಪುಟ್ಟುವಿನ ಪಾತ್ರ ನಿರ್ವಹಿಸಿದ ಯುವಿನಾ ನಿಜಕ್ಕೂ ಮನಮುಟ್ಟುತ್ತಾಳೆ. ಅಡ್ವೋಕೇಟ್ ಆಗಿ ಪಾತ್ರ ನಿಭಾಯಿಸಿದ ರಚಿತಾ ರಾಮ್ ತಮ್ಮ ಉಳಿದೆಲ್ಲಾ ಚಿತ್ರಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.ನವಿರಾದ ಹಾಸ್ಯ-ಭಾವನಾತ್ಮಕವಾದ ಸಂಭಾಷಣೆಯಿಂದ ಕಥೆಗೆ ಗಟ್ಟಿತನ ನೀಡಿದ್ದು ಗುರುಪ್ರಸಾದ್ ಕಶ್ಯಪ್.ಮನಮುಟ್ಟುವ ಸಂಗೀತದಿಂದ ಸಿನಿಮಾವನ್ನೂ ಬೇರೊಂದು ಲೋಕಕ್ಕೆ ಕೊಂಡೊಯ್ದಿದ್ದು ಚರಣ್ ರಾಜ್.. ಈ ಚಿತ್ರವನ್ನ ಸುಂದರವಾಗಿ ಸೆರೆಹಿಡಿದದ್ದು ಗೌತಮ್ ಗೌಡ ಎಂಬ ಯುವಪ್ರತಿಭೆ..ಜೈಲರ ಪಾತ್ರದಲ್ಲಿ ರವಿಕಾಳೆ ನಟನೆ ಜಬರ್ ದಸ್ತ್ . ಇನ್ನು ಖೈದಿಗಳಾಗಿ ಸಾಥ್ ನೀಡುವ ಪ್ರದೀಪ್ ಪೂಜಾರಿ, ಮಂಜುನಾಥ್, ವಿರಾಜ್, ನಿಶಾಂತ್ ಗುಡಿಹಳ್ಳಿ, ಹಾಗೂ ರಾಕ್ ಲೈನ್ ಸುಧಾಕರ ಅವರೂ ಮನಕ್ಕೆ ಹತ್ತಿರವಾಗುತ್ತಾರೆ. ‘ಮಿರಾಕಲ್ ಇನ್ ಸೆಲ್ ನಂ.7’ ಎಂಬ ಕೊರಿಯನ್ ಭಾಷೆಯ ಚಿತ್ರವನ್ನು ಸ್ಪೂರ್ತಿಯಾಗಿಟ್ಟುಕೊಂಡು ಶ್ರೀಯುತ ಎಸ್.ರವೀಂದ್ರನಾಥ್ ಅವರು ಈ ಕಥೆಗೆ ಜೀವತುಂಬಿದ್ದಾರೆ.
‘ಮುಗಿಲು ಬೆಳ್ಮುಗಿಲು-ನನ್ನಾ ಈ ಮಗಳು’, ‘ಜನುಮವೇ ಇದ್ದರೇ ನನಗೆ’ ಎಂಬೆರಡು ಗೀತೆಗಳು ನಿಮ್ಮನ್ನು ಅಪ್ಪ-ಮಗಳ ವಾತ್ಸಲ್ಯ-ಮಮತೆಗೆ ಸಾಕ್ಷಿಯಾಗಿಸುತ್ತಾ ನಿಮ್ಮ ಮನದಂಗಳದೀ ಮನೆಮಾಡುತ್ತದೆ..ಮಾಡದ ತಪ್ಪಿಗೆ ಶಿಕ್ಷೆಗೆ ಗುರಿಯಾಗುವ ಅಪ್ಪನೆಂಬ ಮುಗ್ಧ ಜೀವಿ,ತಾನು ಒದೆ ತಿನ್ನುತ್ತಿದ್ದರೂ ಮಳೆಯಲ್ಲಿ ನೆನೆಯುತ್ತಾ ಬಂದ ಮಗಳ ಕಂಡು ‘ಪುಟ್ಟೂ!!ಮಳೇಲಿ ನೆನೀಬೇಡ.ನಿಂಗೆ ಶೀತವಾಗುತ್ತೆ ಮನೆಗೆ ಹೋಗು,ನಾನು ಬೇಗ ಮನೆಗೆ ಬರುತ್ತಿನಿ’ ಅನ್ನೋ ಮಾತಿದೆಯಲ್ಲ ನಿಮ್ಮ ಕರುಳನ್ನ ಹಿಂಡಿಹಾಕುತ್ತದೆ..
ಅಪ್ಪನಿಗೆ ಮಗಳೇ ಪ್ರಪಂಚ,ಮಗಳಿಗೆ ಅಪ್ಪನೇ ಸರ್ವಸ್ವ ಎಂಬಂತಿದ್ದ ಜೀವನದಲ್ಲಿ ಕಾರ್ಮೋಡ ಕವಿದಾಗ ಹೇಗೇ ಜೀವನ ಯಾನ ಸಾಗುತ್ತದೇ ಎಂಬ ಕೂತುಹಲ ಕೊನೆತನಕ ಹಿಡಿದಿಡುತ್ತದೆ. ‘ಬಾನ ತೋರೆದು ನೀಲಿ ಮರೆಯಾಯಿತೇತಕೇ? ಕರಗೀತೇ ಈ ಮೊಡ ನಿಟ್ಟುಸಿರ ಶಾಖಕ್ಕೆ’ ಎಂಬ ಮನಮಿಡಿಯುವ ಗೀತೆ ಮನೆಗೆ ಬಂದರೂ ಮಿಡಿಯುವದನ್ನ ನಿಲ್ಲಿಸಿರಲ್ಲ.. ಭಾಷೆಯ ಹಿಡಿತವೇ ಇಲ್ಲದ ಎಲ್ಲಾ ಭಾಷೀಗರನ್ನೂ ಮತ್ತೆ ಮತ್ತೆ ನೋಡುವಂತೆ ಮಾಡಬಲ್ಲ ತಾಕತ್ತು ಈ ಚಿತ್ರಕ್ಕಿದೆ.
-ಶುಭಶ್ರೀ ಭಟ್ಟ
<shubha.bhat2@gmail.com>
—
Facebook ಕಾಮೆಂಟ್ಸ್