ಭಾಜಪ ಎಂದರೆ ಅದು ಶಿಸ್ತಿನ ಪಕ್ಷ ..! ಅದರಲ್ಲಿ ಎರಡು ಮಾತೇ ಇಲ್ಲ. ಇದು ಕೇಳಿ ಬರುತ್ತಿದ್ದದ್ದು ಭಾಜಪ ಕಟ್ಟಿದಾಗಿನಿಂದ. ದೇಶಾದ್ಯಂತವೂ ಈ ಮಾತು ಪ್ರಚಲಿತದಲ್ಲಿದೆ. ಆರೆಸ್ಸಸ್ ನ ಸೂಚನೆಯಂತೆ ನಡೆದುಕೊಳ್ಳುವ ಪಕ್ಷ ಅದು. ಆರೆಸ್ಸಸ್ ಹಾಗೂ ಭಾಜಪಕ್ಕೆ ನೇರವಾಗಿ ಸಂಬಂಧವಿಲ್ಲದಿದ್ದರೂ ಭಾಜಪದ ಬೆನ್ನ ಹಿಂದೆ ನಿಂತು ಬೆಳೆಸುತ್ತಾ ಬಂದಿದೆ . ಹೌದು ಭಾಜಪಕ್ಕೆ ಪೋಷಕರು ಯಾರೆಂದರೆ ಅದು ಆರೆಸ್ಸಸ್ ಬಿಟ್ಟರೆ ಇನ್ಯಾವುದು ಅಲ್ಲ. ಆರೆಸ್ಸಸ್ ಗೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಧ್ಯವಿಲ್ಲದ್ದರಿಂದ ಒಂದು ಶಿಸ್ತುಬದ್ಧ ಪಕ್ಷವನ್ನು ಸ್ಥಾಪಿಸಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. NDA ಯಲ್ಲೂ ಬಹಳ ಶಿಸ್ತಿತ್ತು. ಎಲ್ಲರೂ ವಾಜಪೇಯಿಯವರನ್ನು ಯಾವುದೇ ಶರತ್ತಿಲ್ಲದೆ ಬೆಂಬಲಿಸಿದ್ದರು. ಅದಕ್ಕೆ ಕಾರಣ ವಾಜಪೇಯಿಯವರ ಗುಣನಡತೆ ಮತ್ತು ಭಾಜಪದ ಶಿಸ್ತು.
ಅಂತೆಯೇ ಕರ್ನಾಟಕದಲ್ಲಿಯೂ ಕೂಡ ಯಡ್ಯೂರಪ್ಪ ಎಂದರೆ ಸಾಕು ಭಾಜಪದವರಿಗೆಲ್ಲಾ ಹೆಮ್ಮೆ. ಯಡ್ಯೂರಪ್ಪ ಬಿಟ್ಟರೆ ನಮಗೆ ಯಾರಿಲ್ಲ.. ಅವರೇ ಎಲ್ಲಾ… ಎನ್ನುತ್ತಿದ್ದರು. ರೈತ ಪರ ಹೋರಾಟ ಮಾಡಿ ತಮ್ಮ ಗೌರವವನ್ನು ಹೆಚ್ಚಿಸಿಕೊಂಡು ಸರ್ಕಾರದ ವಿರುದ್ಧ ತನ್ನ ಹರಿತವಾದ ಮಾತಿನಿಂದಲೇ ಬೆಂಕಿಯ ಚೆಂಡಾಗಿ ದಾಳಿ ಮಾಡುತ್ತಿದ್ದವರು. ಅನೇಕ ರೈತಪರ ಹೋರಾಟ ಮಾಡಿಯೇ ಅಧಿಕಾರವನ್ನು ಗಿಟ್ಟಿಸಿಕೊಂಡವರು. ರಾಜ್ಯದ ಮುಖ್ಯಮಂತ್ರಿಯೂ ಆದರು . ವಿರೋಧ ಪಕ್ಷದ ನಾಯಕತ್ವಕ್ಕೆ ಯಡ್ಯೂರಪ್ಪ ಬಿಟ್ಟರೆ ಇನ್ನೊಬ್ಬರಿಲ್ಲ ಎನ್ನುತ್ತಿದ್ದರು ಹಲವರು.
ಅಂತೂ ಹಲವು ವರ್ಷಗಳ ನಂತರ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಭಾಜಪದ ಸರ್ಕಾರ ಕರ್ನಾಟಕ ದಲ್ಲಿ ಬಂತು. ಇನ್ನೆಲ್ಲಾ ಸರಿ ಹೋಯಿತು. ರಾಜ್ಯದ ಜನರ ಕಷ್ಟನಷ್ಟಗಳೆಲ್ಲಾ ದೂರವಾಯಿತು ಎಂದೇ ಜನ ಮಾನಸದಲ್ಲಿ ಹುಟ್ಟಿಕೊಂಡಿತ್ತು. ಅದೇಕೋ ಭಾಜಪದ ದುರಾದೃಷ್ಟವೋ ತಿಳಿಯದು ಅಧಿಕಾರಕ್ಕೇರಲು ಮೂರು ಸೀಟಿನ ಕೊರತೆ . ಪಕ್ಷೇತರರ ಕಾಲಿಗೆ ಬಿದ್ದು ಅಂತೂ ಅಧಿಕಾರವನ್ನು ಧಕ್ಕಿಸಿಕೊಂಡವರು ಯಡ್ಯೂರಪ್ಪ. ಸಮಯ ಕಳೆಯುತ್ತಿದ್ದಂತೆ ಪಕ್ಷೇತರರು ಕಾಲೆಳೆಯುವುದನ್ನು ಶುರು ಮಾಡಿಬಿಟ್ಟರು. ಅಲ್ಲಿಯ ವರೆಗೆ ಸಂಭ್ರಮದಲ್ಲಿದ್ದ ಯಡ್ಯೂರಪ್ಪರಿಗೆ ಚಿಂತೆ ಶುರುವಾಯಿತು. ಯಾರು ಕೊಟ್ಟ ಸಲಹೆ ತಿಳಿಯೇ, ಆಪರೇಶನ್ ಕಮಲ ಎನ್ನುವ ಯುದ್ಧಕ್ಕೆ ನಿಂತೇ ಬಿಟ್ಟರು. ಪೂರ್ಣಾವಧಿ ಸರ್ಕಾರಕ್ಕಾಗಿ ಎನ್ನುವ ಕಾರಣ ನೀಡಿ ವಿರೋಧ ಪಕ್ಷದಲ್ಲಿದ್ದ ಕೆಲವರನ್ನು ಆಡಳಿತ ಪಕ್ಷಕ್ಕೆ ತೆಗೆದುಕೊಂಡು ಬಹುಮತದ ಸರ್ಕಾರ ಮಾಡಿಕೊಂಡರು. ಆಗ ಶುರುವಾಯಿತು ಪಕ್ಷದೊಳಗೆ ಭಿನ್ನಮತದ ಹೊಗೆ. ಯಡ್ಯೂರಪ್ಪನವರ ವಿರುದ್ಧವೇ ಪಕ್ಷದೊಳಗಿನವರೇ ಕತ್ತಿ ಮಸೆದು ಮುಖ್ಯಮಂತ್ರಿ ಪಟ್ಟದಿಂದ ಕೆಳಕ್ಕಿಳಿಸಿದರು. ತನ್ನ ಪರಮಾಪ್ತನನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರು. ಅವರೇ ಸದಾನಂದ ಗೌಡರು. ಅವರು ಅಷ್ಟೇ ಯಡ್ಯೂರಪ್ಪನವರ ಕನಸನ್ನು ಹುಸಿಗೊಳಿಸಿದರು ಇದರಿಂದ ಬೇಸತ್ತು ಯಡ್ಯೂರಪ್ಪನವರೇ ಮುತುವರ್ಜಿ ವಹಿಸಿ ಬೆಳೆಸಿದ ಭಾಜಪವನ್ನು ಬಿಟ್ಟು ತಮ್ಮದೇ ಒಂದು ಪಕ್ಷ ಕಟ್ಟುವಂತಹ ಪರಿಸ್ಥಿತಿ ಎದುರಾಯಿತು. ಯಡ್ಯೂರಪ್ಪ ಒಂದು ದಿಕ್ಕಿಗೆ ಹೋದರೇ ಗಣಿಧಣಿಗಳು ಇನ್ನೊಂದು ದಿಕ್ಕಿನತ್ತ ಸಾಗಿದರು . ಅಲ್ಲಿಗೆ ಭಾಜಪ ಮೂರು ಭಾಗವಾಯಿತು. ಇದು ಭಾಜಪವೇ ಎಂದು ಜನರು ತಮ್ಮ ತಮ್ಮಲ್ಲಿ ಪ್ರಶ್ನಿಸುವಂತೆ ಮಾಡಿತ್ತು ಭಾಜಪದ ಅಶಿಸ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪವು ಹೀನಾಯವಾಗಿ ಸೋತಿತ್ತು.. ಭಾಜಪಕ್ಕೆ ಇನ್ನು ರಾಜ್ಯದಲ್ಲಿ ಭವಿಷ್ಯವೇ ಇಲ್ಲವೇನೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಪ್ರಾರಂಭಿಸಿದ್ದು ಭಾಜಪದಿಂದ ಪ್ರಧಾನಿಯ ಪಟ್ಟಕ್ಕೆ ನಾಮ ನಿರ್ದೇಶಿಸಿದ್ದ ಮೋದಿಯವರ ಹೆಸರು. ಆಗ ಯಡ್ಯೂರಪ್ಪನವರು ಕಜಪ ಬಿಟ್ಟು ಮರಳಿ ಮಾತೃ ಪಕ್ಷ ಭಾಜಪಕ್ಕೆ ಬಂದರು. ಭಾಜಪಕ್ಕೂ ಯಡ್ಯೂರಪ್ಪ ಬೇಕಿತ್ತು ಯಡ್ಯೂರಪ್ಪರಿಗೂ ಭಾಜಪ ಬೇಕಿತ್ತು. ಇಲ್ಲವಾದರೇ ರಾಜ್ಯ ಭಾಜಪಕ್ಕೆ ಆಯುಷ್ಯವೇ ಇಲ್ಲದಾಗಿ ಹೋಗುತ್ತಿತ್ತೇನೋ?
ಮೋದಿಯವರ ಅಲೆ ಇಡೀ ದೇಶದ ರಾಜಕೀಯ ಕ್ಷೇತ್ರದಲ್ಲಿ ತ್ಸುನಾಮಿಯನ್ನೇ ಸೃಷ್ಟಿಸಿತ್ತು. ಮೋದಿಯವರ ತಂಡದಲ್ಲಿ ಭಿನ್ನಮತವಿರದಿರಲು ಕಾರಣವಿದೆ. ಶೇ 99ರಷ್ಟು ಸಂಸದರು ಜಯಗಳಿಸಿದ್ದು ಮೋದಿಯವರ ಅಲೆಯಲ್ಲಿಯೇ…!!! ಯಾರಿಗೂ ಮೋದಿಯವರನ್ನು ಎದುರು ಹಾಕಿಕೊಂಡು ಚುನಾವಣೆಯಲ್ಲಿ ಜಯ ಗಳಿಸುವ ಸಾಮರ್ಥ್ಯವೇ ಇಲ್ಲ. ಕರ್ನಾಟದಲ್ಲೂ ಎಲ್ಲಾ ಸಂಸದರು ಗೆದ್ದು ಸಂಭ್ರಮಿಸಿದ್ದು ಇದೇ ಮೋದಿ ಅಲೆಯಲ್ಲಿಯೇ. ಆದರೆ ಒಬ್ಬರನ್ನು ಬಿಟ್ಟು .!!! ಆ ಒಬ್ಬರು ಯಾರಿರಬಹುದು ಎನ್ನುವ ಕುತೂಹಲಕಾರಿ ಪ್ರಶ್ನೆಯು ಮೂಡದೆ ಇರಲಾರದು. ಅವರೇ ಬೆಂಕಿಯ ಚೆಂಡು ಎಂದೇ ಕರೆಯಲ್ಪಡುವ ಈಗಿನ ಭಾಜಪದ ರಾಜ್ಯ ಅಧ್ಯಕ್ಷರಾದಂತಹ ಯಡ್ಯೂರಪ್ಪ…! ತನ್ನ ಕ್ಷೇತ್ರದಲ್ಲಿ ಅದು ಎಷ್ಟೇ ಪ್ರಬಲ ವ್ಯಕ್ತಿ ಎದುರಾಳಿಯಾಗಿ ಸ್ಪರ್ಧಿಸಲಿ ಗೆಲುವು ಮಾತ್ರ ಯಡ್ಯೂರಪ್ಪರವನದ್ದೇ.!!! ಮೋದಿ ಅಲೆಯಲ್ಲಿ ಕೊಂಚ ಮತದಾನದಲ್ಲಿ ಶೇಕಡಾವಾರು ಹೆಚ್ಚಾಯಿತಾದರೂ ಯಡ್ಯೂರಪ್ಪ ಜಯ ಗಳಿಸುವಷ್ಟು ತಮ್ಮ ಕ್ಷೇತ್ರದ ಜನರನ್ನು ಹಿಡಿದಿಟ್ಟುಕೊಂಡಿದ್ದಾರೆ. ಅದರಲ್ಲಿ ಎರಡೂ ಮಾತೇ ಇಲ್ಲ. ತಮ್ಮ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿದಾಯಕ ಕೆಲಸ ಮಾಡಿಕೊಟ್ಟಿದ್ದಾರೆ ಅವರು ಮುಖ್ಯಮಂತ್ರಿಯಾಗಿದ್ದಾಗ. ಅದೆಷ್ಟೇ ಭಿನ್ನಮತದ ಸವಾಲು ಎದುರಾದಾಗಲು ಅಭಿವೃದ್ಧಿ ಕಾರ್ಯದಲ್ಲಿ ಕುಂಟಿತವಾಗಲಿಲ್ಲ..
ಈ ಯಡ್ಯೂರಪ್ಪ ಮತ್ತು ಈಶ್ವರಪ್ಪ ಹಲವು ವರ್ಷದಿಂದ ಒಟ್ಟಿಗೆ ಇದ್ದು ಕರ್ನಾಟಕದಲ್ಲಿ ಭಾಜಪವನ್ನು ಕಟ್ಟಿ ಬೆಳೆಸಿದವರು. ಸುಮಾರು 25 ವರ್ಷಗಳಿಂದ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದವರು. ಇಬ್ಬರೂ ಕಷ್ಟ ಪಟ್ಟೇ ಉನ್ನತ ಸ್ಥಾನಕ್ಕೇರಿದವರು. ವಜ್ರದಲ್ಲಿನ ಇಂಗಾಲದ ಬಂಧದಂತೆ ಇತ್ತು ಅವರಿಬ್ಬರ ಗೆಳೆತನ. ಅದೆಲ್ಲಿ ಯಡ್ಯೂರಪ್ಪ ನವರು ಭಾಜಪ ಬಿಟ್ಟು ಕಜಪ ಕಟ್ಟಿದರೋ ಇವರಿಬ್ಬರೂ ಹಾವು ಮುಂಗುಸಿಗಳಾದರು. ರಾಜಕೀಯದಲ್ಲಿ ಯಾರ ಮಿತ್ರತ್ವವೂ ಶಾಶ್ವತವಲ್ಲ ಎನ್ನುವುದಕ್ಕೆ ಇವರಿಬ್ಬರೇ ಸಾಕ್ಷಿ. ಮೋದಿಯವರು ಪ್ರಧಾನಿಯಾಗಿ ಎರಡೂವರೆ ವರ್ಷ ಆಗುತ್ತಾ ಇದೆ. ಮರಳಿ ಬಂದ ಯಡ್ಯೂರಪ್ಪ ರಾಜ್ಯ ಭಾಜಪದ ಅಧ್ಯಕ್ಷರಾದರು. ನೋಡ ನೋಡುತ್ತಿದ್ದಂತೆಯೇ ಯಡ್ಯೂರಪ್ಪ ಭಾಜಪದಲ್ಲಿ ಮೊದಲಿಗಿಂತಲೂ ಮಿಂಚಲಾರಂಭಿಸಿದರು. ಇದು ಈಶ್ವರಪ್ಪನವರಿಗೆ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅರೆ. ಎಲ್ಲವೂ ಯಡ್ಯೂರಪ್ಪನವರಿಗೆ ಹೋಗುತ್ತಿದೆ. ನಾನು ಪಕ್ಷ ಸಂಕಷ್ಟದಲ್ಲಿದ್ದಾಗಲೂ ಇದ್ದೆ. ಪಕ್ಷಕ್ಕಾಗಿ ಅಷ್ಟೆಲ್ಲಾ ದುಡಿದಿದ್ದೇನೆ. ಹಗಲಿರುಳು ಶ್ರಮಿಸಿದ್ದೇನೆ. ಊಟ ನಿದ್ದೆ ಬಿಟ್ಟಿದ್ದೇನೆ. ಆದರೂ ಪಕ್ಷದಿಂದ ನನಗೇನೂ ಸಿಕ್ಕಿಲ್ಲ ಎನ್ನುವ ಕೊರಗು ಈಶ್ವರಪ್ಪನವರನ್ನು ಸದಾ ಕಾಡುತ್ತಲೇ ಇದೆ.
ಸುಮಾರು ಎರಡು ತಿಂಗಳ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎನ್ನುವ ಹೆಸರಲ್ಲಿ ದಲಿತರನ್ನು ಸಂಘಟಿಸಿ ಅದರಲ್ಲಿ ತಾನು ಪಕ್ಷದಲ್ಲಿ ಉನ್ನತ ಸ್ಥಾನಕ್ಕೇರಲು ಕಾರ್ಯಕ್ರಮ ಮಾಡುವ ಸಿದ್ಧತೆಯಲ್ಲಿದ್ದರು. ಯಡ್ಯೂರಪ್ಪನವರಿಗೆ ಸಡ್ಡು ಹೊಡೆಯಲು ಭಾರಿ ಸಿದ್ಧತೆ ಮಾಡಿದ್ದರು. ಹೈಕಮಾಂಡ್’ನಿಂದ ಯಾವುದೇ ಹರಿಸು ನಿಶಾನೆ ಸಿಗದೆ ಒದ್ದಾಡಿ ಕೊನೆಗೆ ತಕ್ಕ ಮಟ್ಟಿಗೆ ಕಾರ್ಯಕ್ರಮ ಆಯೋಜಿಸಿ ಅಂತೂ ತಮ್ಮ ಹಠ ಸಾಧಿಸಿಬಿಟ್ಟರು. ತಕ್ಷಣವೇ ಹೈಕಮಾಂಡ್ ದೆಹಲಿಗೆ ಕರೆಸಿ ಎಚ್ಚರಿಕೆ ಕೊಟ್ಟು ಕಳುಹಿಸಿದರು. ಕೆಲ ಸಮಯ ಯಾರ ಕಣ್ಣಿಗೂ ಬೀಳಲಿಲ್ಲ. ಈ ಈಶ್ವರಪ್ಪನವರ ಬಾಯಿ ಸ್ವಲ್ಪ ಅವರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅನೇಕ ಬಾರಿ ವಿವಾದಾತ್ಮಕ ಪದ ಬಳಕೆ ಮಾಡಿ ಎಲ್ಲರಿಂದಲೂ ಮಂಗಳಾರತಿ ಮಾಡಿಸಿಕೊಂಡಿದ್ದವರು.
ಇದರಿಂದ ಅವರ ವರ್ಚಸ್ಸಿಗೆ ಬಾರಿ ಹೊಡೆತ ಬಿತ್ತು. ಎಲ್ಲರೂ ಅವರನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು. ಅದರಲ್ಲಿ ಯಡ್ಯೂರಪ್ಪನವರೂ ಒಬ್ಬರು. ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಭಾಜಪದಲ್ಲಿ ಈಶ್ವರಪ್ಪನವರಿಗೆ ಉತ್ತಮ ಭವಿಷ್ಯವಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ದಲಿತ ಸಮಾವೇಶದಲ್ಲಿ ಎಲ್ಲರೂ ಒಟ್ಟಾಗಿ ಒಗ್ಗಟ್ಟಿದೆ ನಮ್ಮ ಪಕ್ಷದಲ್ಲಿ ಎನ್ನುವುದನ್ನು ಎಲ್ಲಾ ಜನರ ಮುಂದೆ ಸಾಬೀತು ಮಾಡಿದ್ದೇವೆ ಎಂದು ತಾತ್ಕಾಲಿಕವಾಗಿ ಎಲ್ಲಾ ಭಿನ್ನಮತಗಳಿಗೆ ಕೊನೆ ಹಾಡಿದ್ದಾರೆ. ಮುಂದಿನ ಮುಖ್ಯಮಂತ್ರಿ ಯಡ್ಯೂರಪ್ಪನವರೇ ಎಂದು ಘೋಷಿಸಿದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ. ಇದೆಲ್ಲಾ ಸಾಮಾನ್ಯನ ಕಣ್ಣಿಗೆ ಮಣ್ಣೆರಚುವ ತಂತ್ರವಷ್ಟೆ. ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ ಯಡ್ಯೂರಪ್ಪ ಹಾಗೂ ಈಶ್ವರಪ್ಪರ ಸಂಬಂಧ. ಯಾವಾಗ ಜ್ವಾಲಾಮುಖಿಯಾಗಿ ಹೊರಬರುತ್ತದೋ ಗೊತ್ತಿಲ್ಲ. ಸದ್ಯಕ್ಕೆ ಈಶ್ವರಪ್ಪರನ್ನು ತಟಸ್ಥವಾಗಿ ಕೂರಿಸಿ ಬಿಟ್ಟಿದ್ದಾರೆ ಭಾಜಪದ ಹೈಕಮಾಂಡ್. ಇನ್ನು ಯಾವಾಗ ಯಡ್ಯೂರಪ್ಪನವರ ಕಾಲೆಳೆಯುತ್ತಾರೋ ? ಅವರೇ ಬಲ್ಲರು.
ರಾಜಕೀಯದಲ್ಲಿರುವ ಅಧಿಕಾರದ ಆಸೆ ಸ್ನೇಹಕ್ಕೆ ಕತ್ತರಿ ಹಾಕಿಸಿದ್ದಂತು ಸತ್ಯ. ಅದೆಷ್ಟೇ ಸರ್ಜರಿ ಮಾಡಿದರೂ ಒಡೆದ ಕನ್ನಡಿ ಪುನಃ ಜೋಡಿಸಲು ಸಾಧ್ಯವೇ?
Facebook ಕಾಮೆಂಟ್ಸ್