X
    Categories: ಕಥೆ

ಸೇಡು-೨

ಸೇಡು..

ಟ್ರೆಕ್ಕಿಂಗ್ ನಿಂದ ವಾಪಸ್ ಬೆಂಗಳೂರಿಗೆ ಬಂದ ಪ್ರಿಯಾಂಕ ಸಿಂಚನಾ ಸ್ನೇಹವನ್ನು ಇನ್ನಷ್ಟು ಹೆಚ್ಚಿಸಿಕೊಂಡಳು.ಅವರ ಮನೆಯ ಒಡನಾಟ ಜಾಸ್ತಿಯಾಯಿತು.ಸಿಂಚನಾಳು ಪ್ರಿಯಾಂಕಾ ಮನೆಗೆ ಬಂದಾಗ  ಅವಳು ಲೇಟಾಯಿತೆಂದು ಕರೆ ಮಾಡಿದಾಗ ರಾಹುಲ್ ಕರೆದೊಯ್ಯಲು ಬರುತ್ತಿದ್ದ.ಹೀಗೇ ಎರಡೂ ಕುಟುಂಬಗಳು ಆತ್ಮೀಯವಾಗಿದ್ದವು.ರಾಹುಲ್ ನನ್ನು ಕಂಡಾಗ ಬೆಂಕಿಯನ್ನು ಮೈಮೇಲೆ ಸುರಿದಂತಾಗುತ್ತಿತ್ತು ಪ್ರಿಯಾಂಕಳಿಗೆ..ಸೇಡು ತೀರಿಸಿಕೊಳ್ಳಲು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಳು.ಆ ದಿನವೂ ಬಂದಿತ್ತು.ಸಾಲು ಸರಕಾರಿ ರಜೆಗಳು ಬಂದಿದ್ದರಿಂದ ಎರಡೂ ಕುಟುಂಬಗಳು ಎಲ್ಲಿಯಾದರೂ ಹೋಗಿಬರಬಹುದೆಂದು ಪ್ರಿಯಾಂಕಾ ತಿಳಿಸಿದಾಗ ಕೆಲಸದ ಒತ್ತಡದಿಂದ ಸಾಕಾಗಿದ್ದ ನರಸಿಂಹ ದೇಸಾಯಿಯವರು ಒಪ್ಪಿದ್ದರು.ಪ್ರಿಯಾಂಕ ಸಿಂಚನಾಳೊಂದಿಗೆ “ಸಿಂಚು ಅವತ್ತು ಟ್ರೆಕ್ಕಿಂಗ್ ಹೋದಾಗ ಬಂಡಜ್ಜೆ ಅರಬಿ ಪಾಲ್ಸ್ ನಲ್ಲಿ ಯಾಕೋ ನಂಗೆ ಎಂಜಾಯ್ ಮಾಡೋಕೆ ಆಗಲಿಲ್ವೆ..ಹೇಗೂ ಎರಡುವದಿನ ರಜೆಗಳು ಬಂದಿದಾವೆ.ಭಾನುವಾರ ಬೇರೆ ಇದೆ.ನಮ್ಮ ಡ್ಯಾಡಿ ಮಮ್ಮಿನೂ ತುಂಬಾ ದಿನ ಆಯ್ತು.. ಎಲ್ಲಿಗೂ ಹೋಗಿಲ್ಲ.ಅವರನ್ನೂ ಒಪ್ಪಿಸ್ತಿನಿ‌.ನಿಮ್ ಡ್ಯಾಡಿನೂ ಒಪ್ಸು.ಎಲ್ರೂ ಹೋದ್ರೆ ಖುಷಿ ಇರತ್ತೆ ಕಣೇ.ಎಂಜಾಯ್ ಮಾಡಬಹುದು.ಮದನ್ ಗೂ ಹೇಳಿದೀನಿ.ಅವನು ಅಲ್ಲಿಯವನೇ ಅಲ್ವಾ..ಅವನಿದ್ರೆ ಅನುಕೂಲ.” ಎಂದಳು.ಈ ವಿಷಯ ಪ್ರಸ್ತಾಪಿಸಿದಾಗ ಸಿಂಚನಾ ಇನ್ನೂ ಖುಷಿಯಾಗಿದ್ದಳು.”ಆದ್ರೆ ಇನ್ನೂ ಒಬ್ರು ಬರ್ತಾರೆ “ಎಂದಾಗ ಪ್ರಿಯಾಂಕ ಪ್ರಶ್ನಾರ್ಥಕವಾಗಿ ನೋಡಿದಾಗ ” ಆನಂದ್ “ಎಂದಳು ಸಿಂಚನಾ..ಪ್ರಿಯಾಂಕಾಳ ಮುಖದಲ್ಲಿ ಮಂದಹಾಸ ಕಾಣಿಸಿತು.ಆನಂದ್ ತನ್ನ ಬಗ್ಗೆ ಪ್ರಿಯಾಂಕ ಅಭಿಪ್ರಾಯ ತಿಳಿಯಲು ಸಿಂಚನಾಳಿಗೆ ಹೇಳಿದ್ದ.ಅಂತೂ ಸರೋಜಮ್ಮ,ನರಸಿಂಹ ದೇಸಾಯಿ,ರಾಹುಲ್,ಸಿಂಚನಾ,ಪ್ರಿಯಾಂಕಾ,ಮದನ್ ,ಆನಂದ್ ಹೊರಡುವುದೆಂದು ತೀರ್ಮಾನವಾಯಿತು.ನರಸಿಂಹ ದೇಸಾಯಿಯವರು ರಾಹುಲ್ ಹತ್ತಿರ ಮಾತನಾಡಿದ್ದರು.ಅವರೂ ಒಪ್ಪಿದ್ದರು.ಆದರೆ ಹೋಗುತ್ತಿರುವುದು ಬಂಡಜ್ಜೆ  -ಅರಬಿ ಪಾಲ್ಸ್ ಎಂದು ತಿಳಿದಾಗ ರಾಹುಲ್ ಕಂಪಿಸಿದರು.ಅವನು ಆ ಘಟನೆಯ ನಂತರ ಅಲ್ಲಿಗೆ ಹೋಗಿರಲಿಲ್ಲ. ಮಗಳು ಸಿಂಚನಾ ಹಟಕ್ಕೆ ಮಣಿದು ಒಪ್ಪಿದನು.ಅವನಿಗೆ ಮಗಳೆಂದರೆ ಪ್ರಾಣ.ಅವಳ ಮೂಲಕ ಸುಲಭವಾಗಿ ಒಪ್ಪಿಸಬಹುದೆಂದು ತಿಳಿದಿದ್ದ ಪ್ರಿಯಾಂಕಾ ಸಿಂಚನಾಳನ್ನು ಛೂ ಬಿಟ್ಟಿದ್ದಳು.ಅಂತೂ ರಾಹುಲ್ ಒಪ್ಪಿದ.ಧರ್ಮಸ್ಥಳದ ರೂಟ್ ನಿಂದ ಹೋದರೆ ಉಳಿದವರಿಗೆ ದೂರ ದಾರಿ ನಡೆಯುವುದು ಕಷ್ಟವೆಂದು ಸಿಂಚನಾ, ಪ್ರಿಯಾಂಕಾ ,ಆನಂದ್ ಮದನ್ ಹೊರನಾಡಿನ ಕಡೆಯಿಂದ ಹೋಗುವುದೆಂದು ತೀರ್ಮಾನಿಸಿದರು.ಎಲ್ಲರೂ ಶನಿವಾರ ಸಂಜೆ ಹೊರಟು ಭಾನುವಾರ ಹೊರನಾಡನ್ನು ತಲುಪಿ ಅಲ್ಲಿ ತಮ್ಮ ನಿತ್ಯ ಕರ್ಮಾದಿಗಳನ್ನು ಮುಗಿಸಿ ತಾಯಿ ಅನ್ನಪೂರ್ಣೆಗೆ ನಮಿಸಿ ಅಲ್ಲಿಂದ ಸುಮಾರು ಮೂವತ್ತು ಕಿಲೋಮೀಟರ್ ಮೀಟರ್ ದೂರದಲ್ಲಿರುವ ಭೈರವೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಸ್ವಲ್ಪ ಹೊತ್ತು ಆಯಾಸ ಕಳೆದುಕೊಂಡರು.ಪ್ರಿಯಾಂಕಾ ರಾಹುಲ್ ಮುಖವನ್ನು ನೋಡುತ್ತಿದ್ದರೆ ಅವನು ಹಳೆಯ ನೆನಪುಗಳಿಂದ ಮಂಕಾಗಿದ್ದಾನೆ ಎನಿಸಿತು.ಅಲ್ಲಿಂದ ಮುಂದೆ ಹಸಿರು ಹುಲ್ಲು ಹಾಸಿನ ನಡುವೆ ಹೊಯ್ಸಳರ ಕಾಲದ ಬಳ್ಳರಾಯನ ದುರ್ಗ ಕೋಟೆಯ ಅಂದಕ್ಕೆ ಬೆರಗಾದರು.ಆದರೆ ಪ್ರಿಯಾಂಕಾ ಮತ್ತು ರಾಹುಲ್ ರಲ್ಲಿ ಎಲ್ಲರಿಗಿದ್ದ ಖುಷಿ ಇರಲಿಲ್ಲ.ಹಾಗೇ ಹುಲ್ಲುಗಾವಲಿನಲ್ಲಿ ನಡೆದು ಬಂಡಜ್ಜೆ -ಅರಬಿ ಪಾಲ್ಸ್ ತಲುಪಿದಾಗ ಎಲ್ಲರೂ ಸುಸ್ತಾಗಿದ್ದರು.ಪಾಲ್ಸ್ ನ ಪಕ್ಕದ ಹೊಂಡದಲ್ಲಿ ಕಾಲ್ತೊಳೆದು ತಂದಿದ್ದ ತಿಂಡಿಯನ್ನು ತಿಂದರು.ನಂತರ ತಮಗಿಷ್ಟ ಬಂದ ಹಾಗೆ ಫೋಟೋ ಕ್ಲಿಕ್ಕಿಸಿಕೊಂಡರು.ಪಕ್ಕದಲ್ಲಿ ಹರಿಯುವ ನೀರಿನ ಹೊಂಡದ ನೀರಿಗಿಳಿದ ಸಿಂಚನಾ ಎಲ್ಲರನ್ನೂ ಫೋಟೋಗೆ ಕರೆದು ಬೇಕಂತಲೇ ಎಲ್ಲರಿಗೂ ನೀರೆರೆಚಿದಳು.ಅವರವರ ಪಾಡಿಗೆ ಎಲ್ಲರೂ ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿದ್ದರು.”ಅಂಕಲ್ “ಎಂದು ಮೆಲ್ಲಗೇ ಕೂಗಿದಳು ಪ್ರಿಯಾಂಕಾ.ರಾಹುಲ್ ” ಏನಮ್ಮಾ “ಎಂದ.” ಬನ್ನಿ ಇಲ್ಲಿ ನನಗೆ ಒಂದು ಆಸೆ.ಈ ತುದಿಲಿ ನಿಂತು ಒಂದು ಫೋಟೋ ತೆಗೆಸಿಕೊಳ್ಳಬೇಕು.ಹೋದ ಸಾರಿ ಬಂದಾಗ ಆಗಲೇ ಇಲ್ಲ.ಪ್ಲೀಸ್ ಒಂದು ಪೋಟೋ ತೆಗಿರಿ  .ಡ್ಯಾಡಿ ಬರೋದ್ರೊಳಗೆ ,ನೋಡಿದ್ರೆ ಬೈತಾರೆ “,ಎಂದಳು.ರಾಹುಲ್ ಮಂಕಾಗಿದ್ದ.ತಾನು ಅಂಜಲಿಗೆ ಮಾಡಿದ ಅನ್ಯಾಯ ನೆನಪಿಸಿಕೊಂಡು ಮಂಕಾಗಿ ನಿಂತಿದ್ದ.ಪ್ರಿಯಾಂಕಾ ಫೊಟೋ ಕ್ಲಿಕ್ಕಿಸಲು ಕೇಳಿದಾಗ ” ಬೇಡಮ್ಮಾ ಅಲ್ಲಿ ,ಕಾಲು ಜಾರಿದರೆ ಮುಗೀತು..ಬೇಕಿದ್ದರೆ ಈ ಬಂಡೆ ಮೇಲೆ ಕುಳಿತುಕೋ,ನಿನಗೆ ಹೇಗೇ ಬೇಕೋ ಹಾಗೆ ಪೋಟೋ ತೆಗೆಯುತ್ತೇನೆ ಎಂದ.”ಪ್ಲಿಸ್ ಅಂಕಲ್  ,ಹುಶಾರಾಗಿ ನಿಲ್ತೀನಿ.ಪ್ಲೀಸ್ ಒಂದೇ ಒಂದು “ಎಂದು ರಾಗ ಎಳೆದಳು ಪ್ರಿಯಾಂಕಾ.ಆನಂದ್ ಸ್ವಲ್ಪ ದೂರದಲ್ಲಿ ಪ್ರಕೃತಿ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದ.ಸರೋಜಮ್ಮ ಮತ್ತು ನರಸಿಂಹ ದೇಸಾಯಿಯವರನ್ನು ನಿಲ್ಲಿಸಿ ಮದನ್ ಪೋಟೋ ಕ್ಲಿಕ್ಕಿಸುತ್ತಿದ್ದ. ಸಿಂಚನಾ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನಳಾಗಿದ್ದಳು.ಇದೇ ಒಳ್ಳೆಯ ಸಮಯವೆಂದರಿತ ಪ್ರಿಯಾಂಕ ರಾಹುಲ್ ನನ್ನು ಫೋಟೋ ಕ್ಲಿಕ್ಕಿಸಲು ಕರೆದಿದ್ದಳು.ರಾಹುಲ್ ಜಲಪಾತದ ತುದಿಯಲ್ಲಿ ನಿಂತ ಅವಳ ಫೋಟೋ ಕ್ಲಿಕ್ಕಿಸಿದ.ಪ್ರಿಯಾಂಕಾ ಖುಷಿಯಿಂದ ” ಥ್ಯಾಂಕ್ಯೂ ಅಂಕಲ್ “ಎಂದು ಸ್ವಲ್ಪ ಮುಂದೆ ಬಂದು ” ಅಂಕಲ್ ನೀವು ನಿಲ್ಲಿ ಅಲ್ಲಿ,ಎಷ್ಟು ಚೆನ್ನಾಗಿದೆ ನೋಡಿ “ಎಂದು ರಾಹುಲ್ ನನ್ನು ಜಲಪಾತದ ತುದಿಗೆ ನಿಲ್ಲಲು ಹೇಳಿದಳು.ರಾಹುಲ್ ಅನ್ಯಮನಸ್ಕನಾಗಿದ್ದ.ಅವನ ಮನದ ತುಂಬೆಲ್ಲ ಅಂಜಲಿಯನ್ನು ನೂಕಿದ್ದ ನೆನಪು ಕಾಡುತ್ತಿತ್ತು.ಪ್ರಿಯಾಂಕಾ ರಾಹುಲ್ ಗೆ ” ಪ್ಲೀಸ್ ಅಂಕಲ್ ನಾವಿಬ್ರೂ ಅಲ್ಲೊಂದ್ ಫೋಟೋ ತೆಗಸ್ಕೊಳೋಣ…ಬನ್ನಿ ..”ಎಂದು ಒತ್ತಾಯಿಸಿದಳು.ಮನಸಿಲ್ಲದ ಮನಸ್ಸಿನಿಂದ ರಾಹುಲ್ ಹುಷಾರಾಗಿ ಹೆಜ್ಜೆಯಿಡುತ್ತಾ ಬಂದು ಪ್ರಿಯಾಂಕಾ ಪಕ್ಕ ನಿಂತ.ಆನಂದ್ ತಮ್ಮ ಕಡೆಗೆ ನೋಡುತ್ತಿದ್ದನ್ನು ನೋಡಿ ಏನೋ ನೆನಪಾದವಳಂತೆ ಆನಂದ್ ನನ್ನು ಕೂಗಿ “ಆನಂದ್ ಸಿಂಚನಾನ್ನೂ ಕರಿ” ಎಂದಳು.ಆನಂದ್ ಸಿಂಚನಾಳನ್ನು ಕರೆಯಲು ಹೋದ.”ಅಂಕಲ್ ಅಲ್ಲಿ ನೋಡಿ “ಎಂದು ಅವನನ್ನು ಜಲಪಾತಕ್ಕೆ ಮುಖ ಮಾಡುವಂತೆ ತಿರಗಲು ಹೇಳಿದಳು.ತಾನು ಒಂದು ಹೆಜ್ಜೆ ಹಿಂದೆ ಸರಿದಳು.ಪ್ರಿಯಾಂಕ “ರಾಹುಲ್ ” ಎಂದಳು.ಅವನು ಬೆಚ್ಚಿದ.”ಅಂಜಲಿಯನ್ನು ಇದೇ ಜಾಗದಲ್ಲಿ ಅಲ್ವಾ ತಳ್ಳಿದ್ದು “ಎಂದಳು.ಅವನು ನಿಂತಲ್ಲೇ ಬೆವರಿದ್ದ.”ನಾನು ಅಂಜಲಿಯ ಪುನರ್ಜನ್ಮ “ಎಂದವಳೇ ಅವನನ್ನು ನೂಕಿ ಬಿಟ್ಟಳು.” “ಅಂಕಲ್ ..!”ಎಂದು ಜೋರಾಗಿ ಚೀರಿಕೊಂಡಳು.ಸಿಂಚನಾಳನ್ನು ಕರೆಯಲು ಹೋದ ಆನಂದ್ ಜೊತೆ ಸಿಂಚನಾ ಸೆಲ್ಫಿ  ಕ್ಲಿಕ್ಕಿಸಿಕೊಳ್ಳುತ್ತಿದ್ದಳು. ಮದನ್ ,ನರಸಿಂಹ ದೇಸಾಯಿ ಸರೋಜಮ್ಮನವರು ಸ್ವಲ್ಪ ಮುಂದೆ ಹೋಗಿ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದರು.ಪ್ರಿಯಾಂಕಾ ಚೀರಿದ್ದನ್ನು ಕಂಡು ಎಲ್ಲರೂ ಓಡಿ ಬಂದರು. ಪ್ರಿಯಾಂಕ “ಅಂಕಲ್ ಕಾಲು ಜಾರಿ ಬಿದ್ದು ಹೋದರು ಎಷ್ಟು ಹೇಳಿದರೂ ಕೇಳದೇ ತುದಿಯಲ್ಲಿ ನಿಂತು ಫೊಟೋ ತೆಗೆಸಿಕೊಳ್ಳೋಣ ಎಂದರು..ಈಗ ನೋಡಿದರೆ…”ಎಂದು ಜೋರಾಗಿ ಅಳತೊಡಗಿದಳು.ಸಿಂಚನಾಳ ದುಃಖ ಮುಗಿಲು ಮುಟ್ಟಿತ್ತು.ಅಂಜಲಿ ಪ್ರಿಯಾಂಕಾಳಾಗಿ ಸೇಡು ತೀರಿಸಿಕೊಂಡಿದ್ದಳು..ಆನಂದ್ ಮಾತ್ರ ಪ್ರಿಯಾಂಕಳತ್ತ ಆಶ್ಚರ್ಯದಿಂದ ನೋಡಿದ್ದ..ಯಾಕೆಂದರೆ ಪ್ರಿಯಾಂಕಾಳೇ ಅಲ್ಲಿ ನಿಲ್ಲಲು ರಾಹುಲ್ ರನ್ನು ಒತ್ತಾಯಿಸಿದ್ದನ್ನು ಕೇಳಿಸಿಕೊಂಡಿದ್ದ.ಈಗ ಈ ವಿಷಯವನ್ನು ಕೇಳುವುದು ಸರಿಯಲ್ಲವೆಂದು ಮೌನಿಯಾದ..ರಾಹುಲ್ ಗೆ ಮಾತ್ರ ಅಂಜಲಿಗೆ ತಾನು ಮಾಡಿದ ಅನ್ಯಾಯಕ್ಕೆ ತಕ್ಕ ಶಿಕ್ಷೆಯಾಗಿತ್ತು.ಹೆಣ ಶೋಧನೆಯಾದ ನಂತರ ಮರಣೋತ್ತರ ಕಾರ್ಯಗಳನ್ನು ನರಸಿಂಹ ದೇಸಾಯಿಯವರೇ ಸಿಂಚನಾಳ ಮೂಲಕ ಮಾಡಿ ಮುಗಿಸಿದ್ದರು.ಸಿಂಚನಾ ಯಾರೂ ಇಲ್ಲದೇ ಅನಾಥಳಾಗಿದ್ದಳು.ಪ್ರಿಯಾಂಕಾ ಅವಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಳು.ಇತ್ತೀಚೆಗೆ ಪ್ರಿಯಾಂಕ ಪೂರ್ಣ ಮೌನಿಯಾಗಿದ್ದಳು.ಪ್ರಿಯಾಂಕಾ ಪೂರ್ಣ ಅಂಜಲಿಯೇ ಆಗಿದ್ದಳು.ಅವಳಿಗೆ ಹಳೆಯ ನೆನಪುಗಳು ಚಿತ್ರಹಿಂಸೆ ಮಾಡುತ್ತಿದ್ದವು.ಅವಳಿಗೆ ತಾನು ಗರ್ಭಿಣಿ ಎನ್ನುವ ಭಾವನೆ ಕಾಡುತ್ತಿತ್ತು.ಅದೂ ಅಲ್ಲದೇ ಸಿಂಚನಾಳ ಸ್ಥಿತಿಗೆ ತಾನೇ ಕಾರಣ ಎನ್ನುವ ಅಪರಾಧಿ ಮನೋಭಾವ ಅವಳನ್ನು ಕಾಡುತ್ತಿತ್ತು.ಆನಂದ್ ನಿಗೆ ನಡೆದ ಸತ್ಯ ತಿಳಿಸಿ ಅದನ್ನು ಸಿಂಚನಾಗೆ ಹೇಳಬಾರದೆಂದು ಪ್ರಮಾಣ ಮಾಡಿಸಿಕೊಂಡಿದ್ದಳು.ಇದಕ್ಕೊಂದು ಕೊನೆ ಹಾಡಲು ನಿರ್ಧರಿಸಿ ಅವಳಪ್ಪನಿಗೆ ಎಲ್ಲ ತನ್ನ ಪುನರ್ಜನ್ಮ ದ ವಿವರಗಳನ್ನು ಒಳಗೊಂಡ ಒಂದು ಪತ್ರ ಬರೆದಿದ್ದಳು.ಸಿಂಚನಾಳನ್ನೇ ಇನ್ನು ಮುಂದೆ ಮಗಳೆಂದು ತಿಳಿಯಲು ತಿಳಿಸಿ ಆನಂದ್ ನೊಂದಿಗೆ ಅವಳ ಮದುವೆ ಮಾಡಲು ತಿಳಿಸಿದ್ದಳು.ಪತ್ರದಲ್ಲಿ ಸಿಂಚನಾ ಅಪ್ಪನನ್ನು ತಾನೇ ನೂಕಿದ್ದು ಎನ್ನುವ ಸತ್ಯವನ್ನು ಸಿಂಚನಾಗೆ ಹೇಳಬಾರದೆಂದೂ, ಅದನ್ನು ಕೊನೆಯವರೆಗೂ ತಮ್ಮಲ್ಲೇ ಉಳಿಸಿಕೊಳ್ಳಬೇಕೆಂದು ಅಪ್ಪನಿಗೆ ತಾಕೀತು ಮಾಡಿ ಬರೆದಿದ್ದಳು ..ಪ್ರಿಯಾಂಕಾ ಎಲ್ಲ ಮಾನಸಿಕ ತೊಳಲಾಟಗಳಿಂದ ಇತ್ತ ಅಂಜಲಿಯಾಗಿ,ಇತ್ತ ಪ್ರಿಯಾಂಕಾಳಾಗಿ ಬದುಕಲಾಗದೇ ನೇಣಿಗೆ ಶರಣಾಗಿದ್ದಳು.

ಸಿಂಚನಾ ಆನಂದ್ ದಂಪತಿಗಳಾಗಿದ್ದರು.ಪ್ರಿಯಾಂಕಳ ಸೇಡು ಪೂರ್ತಿಯಾಗಿತ್ತು..

ಚಿತ್ರಕೃಪೆ: tylershields .com

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post