ಕಾಶ್ಮೀರವೆಂಬುದು ಬಗೆಹರಿಯಲಾರದ ಕಗ್ಗಂಟೇನೂ ಆಗಿರಲಿಲ್ಲ. ಆದರೆ ನಾವು ಇತಿಹಾಸವನ್ನು ಕೆದಕಿ ನೋಡಿದಾಗ ಆಗಷ್ಟ ೧೫ ,೧೯೪೭ ರಿಂದ ಜನವರಿ ೧,೧೯೪೮ ರವರೆಗೆ ಪ್ರತಿದಿನವೂ ಅಲ್ಲಿ ಕೆಲವು ಗಮನಾರ್ಹ ಘಟನೆಗಳು ನಡೆಯುತ್ತಲೇ ಬಂದವು. ಯಾವಾಗ ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ಸೇರದೆ ಮಹರಾಜ ಹರಿಸಿಂಗ್ ತಟಸ್ಥನಾಗಿರುತ್ತಾನೋ ಅಲ್ಲಿವರೆಗೂ ತೆರೆಮರೆಯಲ್ಲಿ ಪಾಕಿಸ್ತಾನವು ಕಾಶ್ಮೀರವನ್ನು ಪಡೆಯುವ ಹೊಂಚು ನಡೆಸುತ್ತಲೇ ಇತ್ತು. ಅದಕ್ಕಿಂತಲೂ ಹೆಚ್ಚಾಗಿ ನೆಹರೂ ಇಟ್ಟ ಕೆಲವು ತಪ್ಪು ಹೆಜ್ಜೆಗಳಿಂದ ಕಾಶ್ಮೀರ ಇವತ್ತಿಗೂ ಪ್ರಶ್ನೆಯಾಗಿಯೇ ಉಳಿದಿದೆ.
ಜುನಾಗಢದ ವಿಲೀನದ ನಂತರ ಜಿನ್ನಾಗೆ ಬುದ್ಧಿ ಕಲಿಸಲೇಬೇಕೆಂದು ಪಟೇಲರು ಕಾಶ್ಮೀರದ ಕಡೆಗೆ ಗಮನ ನೆಟ್ಟರು. ಆದರೆ ನೆಹರೂ ತಾನೇ ಅದರ ಉಸ್ತುವಾರಿ ತೆಗೆದುಕೊಳ್ಳುವುದಾಗಿ ಹೇಳಿದ ಮೇಲೆ ಸುಮ್ಮನಾದರು. ನೆಹರೂ ತಮ್ಮ ಆಪ್ತ(?) ಶೇಕ್ ಅಬ್ದುಲ್ಲಾನನ್ನು ಕಾಶ್ಮೀರದ ಮುಖ್ಯಸ್ಥನನ್ನಾಗಿ ನೇಮಿಸುತ್ತಾರೆ. ಆ ವ್ಯಕ್ತಿ ನ್ಯಾಷನಲ್ ಕಾನ್ಫರೆನ್ಸ್ ಎಂಬ ಪಾರ್ಟಿಯನ್ನು ಹುಟ್ಟುಹಾಕಿ ಮಹಾರಾಜರಿಗೆ ಕಾಶ್ಮೀರ ಬಿಟ್ಟು ತೊಲಗಿ ಎಂಬ ಆದೇಶವನ್ನೊಳಗೊಂಡ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದ. ರಾಜದ್ರೋಹದ ಆಪಾದನೆಯ ಮೇಲೆ ಅವನನ್ನು ಬಂಧಿಸಲಾಯಿತು. ಅಬ್ದುಲ್ಲಾ ಬಂಧನ ಖಂಡಿಸಿ ಗಡಿಗಳನ್ನು ಲೆಕ್ಕಿಸದೇ ನೆಹರೂ ಪ್ರತಿಭಟಿಸುತ್ತಾ ಕಾಶ್ಮೀರದೊಳಕ್ಕೆ ನುಗ್ಗಿದರು. ಆಗ ನೆಹರೂ ಅವರನ್ನು ಬಂಧಿಸಲಾಯ್ತು. ಕಾಂಗ್ರೆಸ್ ಹಿರಿಯ ಅಧಿಕಾರಿಗಳ ಬೆಂಬಲದ ಮೇರೆಗೆ ನೆಹರು ಬಂಧನದಿಂದ ಮುಕ್ತರಾದರು. ದೇಶದ ಪ್ರಧಾನಿಗೆ ಬಗ್ಗದ ರಾಜ ನನಗೆ ಬಗ್ಗಲಾರ ಎಂದರಿತ ಅಬ್ದುಲ್ಲಾ ಕ್ಷಮಾಪಣೆ ಪತ್ರವಿತ್ತನು.
ರಾಜನಿಗೆ ತಾಯ್ನೆಲದ ಹಂಬಲ ಎಳೆಯುತ್ತಿತ್ತು. ಇಡೀ ಭಾರತವನ್ನು ಕಾಶ್ಮೀರದೊಂದಿಗೆ ಬೆಸೆಯುವ ಗುರುದಾಸಪುರದ ಮೂಲಕ ಹಾಯ್ದು ಹೋಗುವ ರಸ್ತೆಯೊಂದೇ ಇತ್ತು. ಜಮ್ಮುವಿನ ಮೂಲಕ ಕಾಶ್ಮೀರ ಸೇರುವ ದಾರಿಯದು.ಆದರೆ ರಸ್ತೆ ತುಂಬಾ ಕೆಟ್ಟದಾಗಿತ್ತು. ಪಾಕಿಸ್ತಾನದ ಮೂಲಕ ಎರಡು ಸಣ್ಣ ದಾರಿಗಳು ಕಾಶ್ಮೀರವನ್ನು ಸೇರುತ್ತಿದ್ದವು. ಆ ದಾರಿಯನ್ನು ಮತ್ತು ಕಾಶ್ಮೀರಕ್ಕೆ ಹೋಗುತ್ತಿದ್ದ ಸರಕುಗಳನ್ನು ಜಿನ್ನಾ ಸ್ಥಗಿತಗೊಳಿಸಿದ .ನೆಹರೂ ಆಗಿನ ಕಾಲದ ಕೇಜ್ರಿವಾಲನಂತೆ ವಿಮಾನದ ಮೂಲಕ ಸರಬರಾಜು ಶುರುಮಾಡಿದರು. ಆದರೆ ಇದನ್ನು ಮೊದಲೇ ಅರಿತಿದ್ದ ಪಟೇಲರು ಪಟಾನ್ ಕೋಟ್ ಇಂದ ಜಮ್ಮುವರೆಗೆ ಒಟ್ಟು ೧೧೨ ಕಿ.ಮೀ ಉದ್ದದ ದಾರಿಯನ್ನು ಬಹುಬೇಗ ಮುಗಿಸಿಬಿಟ್ಟರು. ಇದನ್ನು ಕಾಶ್ಮೀರದವರೆಗೆ ತೆಗೆದುಕೊಂಡು ಹೋಗುವ ಹಕ್ಕು ಅವರಿಗಿರಲಿಲ್ಲ. ಯಾಕೆಂದರೆ ಕಾಶ್ಮೀರದ ಉಸ್ತುವಾರಿ ನೆಹರೂ ಕೈಗೆತ್ತಿಕೊಂಡಿದ್ದರು. ಇದೇ ನಡೆದಿದ್ದು ಕಾಶ್ಮೀರವೇನಾದರೂ ಪಟೇಲರ ಸಂಪೂರ್ಣ ಉಸ್ತುವಾರಿಯಲ್ಲಿದ್ದಿದ್ದರೆ ಇವತ್ತು ಈ ಕಷ್ಟವೇ ಇರುತ್ತಿರಲಿಲ್ಲ. ಪ್ರತಿ ಹೆಜ್ಜೆಯಲ್ಲೂ ನೆಹರು ತಪ್ಪೆಸಗುವುದು ಅದನ್ನು ಪಟೇಲರು ಸರಿಪಡಿಸಿ ಮತ್ತೆ ತೆರೆಮರೆಗೆ ಸರಿದು ಬಿಡುವುದು. ಹೀಗಾಗಿಯೇ ಕಾಶ್ಮೀರ ಕಗ್ಗಂಟಾಗಿಯೇ ಉಳಿದುಬಿಟ್ಟಿತು.
ದಾರಿ ಬಂದ್ ಮಾಡಿದ್ದೂ ಅಲ್ಲದೆ ಬ್ಯಾಟನ್ ಅವರನ್ನು ಮುಂದೆ ನಿಲ್ಲಿಸಿ ಹರಿಸಿಂಗ್ ಮೇಲೆ ಜಿನ್ನಾ ಒತ್ತಡ ಹೇರುತ್ತಲೇ ಇದ್ದ. ಇದೆಲ್ಲವೂ ಅಂತ್ಯವಾಗಿ ಯುದ್ಧದ ದಿನ ಬಂದೇ ಬಿಟ್ಟಿತು. ೧೯೪೭ ಅಕ್ಟೋಬರ್ ೨೧ ಅಂದರೆ ದೇಶವಿಂಗಡನೆಯಾಗಿ ಎರಡೇ ತಿಂಗಳಲ್ಲಿ ಪಾಕಿಸ್ತಾನ ಭಾರತದ ಮೇಲೆ ಆಕ್ರಮಣ ಮಾಡುತ್ತದೆ. ರಾವಲ್ಪಿಂಡಿಯಿಂದ ಮುಜಾಪ್ಫರಬಾದ್’ವರೆಗೆ ೫೦೦೦ ಜನರಿರುವ ಸೈನ್ಯ ಮುನ್ನುಗ್ಗುತ್ತದೆ .
ಅಕ್ಟೋಬರ್ ೨೨ ರಂದು ರಾಜೇಂದ್ರಸಿಂಗ್ ೧೫೦ ಜನರ ಪಡೆ ಪ್ರತಿದಾಳಿ ಮಾಡಿದ್ದಕ್ಕೆ ಎದುರಾಳಿ ಸೇನೆ ಶ್ರೀನಗರದತ್ತ ಬರುತ್ತಿದ್ದ ವೇಗ ಸ್ವಲ್ಪ ಕುಂಠಿತವಾಗುತ್ತದೆ. ಮೊಹ್ರಾ ವಿದ್ಯುತ್ ಸ್ಥಾವರವನ್ನು ನಿರ್ನಾಮ ಮಾಡಿದ ಸೇನೆ ಇಡಿಯ ಶ್ರೀನಗರವನ್ನು ಕಗ್ಗತ್ತಲಿಗೆ ತಳ್ಳುತ್ತದೆ. ೨೪ ರ ರಾತ್ರಿ ಬಾರಾಮುಲ್ಲಾ (ಶ್ರೀ ನಗರದಿಂದ ೪೦ ಮೈಲಿ ದೂರದ)ಗೆ ಸೈನ್ಯ ಸಮೀಪಿಸಿರುತ್ತದೆ. ಬಿಗಡಾಯಿಸಿದ ಪರಿಸ್ಥಿತಿಯಲ್ಲಿ ಬೇರೆ ದಾರಿಯೇ ಕಾಣದೇ ರಾಜ ೨೪ ರ ರಾತ್ರಿ ಭಾರತದ ಸಹಾಯ ಕೋರಿ ಪತ್ರ ಬರೆಯುತ್ತಾನೆ. ನೆಹರೂ ಕೈಗೆ ಕಾಶ್ಮೀರವನ್ನು ಒಪ್ಪಿಸಿದ್ದರೂ ಪಟೇಲರು ಮಹಾಜನ್ ಎಂಬ ತಮ್ಮ ವ್ಯಕ್ತಿಯನ್ನು ಬಿಟ್ಟು ಪ್ರತಿಕ್ಷಣದ ಮಾಹಿತಿಯನ್ನು ಪಡೆಯುತ್ತಲೇ ಇದ್ದರು.
೨೫ ರ ಬೆಳಿಗ್ಗೆ ನೆಹರೂ ಮೌಂಟ್ ಬ್ಯಾಟನ್ ಮತ್ತು ಪಟೇಲರ ಮಧ್ಯೆ ಒಂದು ಸಭೆ ನಡೆಯುತ್ತದೆ. ಅದರ ಉದ್ದೇಶವೆಂದರೆ ಪಟೇಲರಿಗೆ ನಿಜವಾಗಲೂ ನೆಹರು ಮತ್ತು ಬ್ಯಾಟನ್ ಅವರ ಮನದಿಂಗಿತ ಅರಿಯುವ ಹಂಬಲವಿರುತ್ತಷ್ಟೆ. ೨೬ ರ ಬೆಳಿಗ್ಗೆ ಬಹುಮಹತ್ವದ ಮತ್ತೊಂದು ಸಭೆ ನಡೆಯುತ್ತದೆ. ಅದರಲ್ಲಿ ಮಹಾಜನ್ ಕೂಡಾ ಸೇರ್ಪಡೆಗೊಂಡಿರುತ್ತಾರೆ. “ಒಂದು ವೇಳೆ ಭಾರತ ಕಾಶ್ಮೀರಕ್ಕೆ ಸಹಾಯಹಸ್ತ ಚಾಚದಿದ್ದರೆ ನಾವು ಪಾಕಿಸ್ತಾನದ ಮೊರೆಹೋಗಬೇಕಾಗುತ್ತದೆ” ಎಂದು ಸ್ಪಷ್ಟವಾಗಿ ಮಹಾಜನ್ ಹೇಳುತ್ತಾನೆ. ಆದರೆ ನೆಹರೂ ಅದಕ್ಕೊಪ್ಪದೇ ” ತಾವಿನ್ನು ಹೋಗಬಹುದು .” ಎಂದಾಗ ಎದ್ದು ನಿಂತ ಮಹಾಜನ್ ಅವರನ್ನು ತಡೆದು ಪಟೇಲರು ಸೈನ್ಯ ಕಳಿಸುವುದಾಗಿ ಹೇಳುತ್ತಾರೆ. ಆದರೆ ಬ್ಯಾಟನ್ ಮೂಗುತೂರಿಸಿ ರಾಜನ ಒಪ್ಪಿಗೆ ಪತ್ರದ ಹೊರತು ಸೈನ್ಯ ಕಳಿಸುವುದು ಸಲ್ಲ ಎನ್ನುತ್ತಾನೆ. ಪಟೇಲರು ಒಲ್ಲದ ಮನಸ್ಸಿಂದ ಒಪ್ಪಿಕೊಳ್ಳುತ್ತಾರೆ . ಭಾರತ ಪಾಕಿಸ್ತಾನ ಎರಡೂ ಪಡೆಗಳಲ್ಲಿ ಬ್ರಿಟಿಷ್ ಸೈನಿಕರ ಬಹುಪಾಲು ಹಂಚಿಹೋಗಿರುತ್ತದೆ. ಅದರ ಜುಟ್ಟು ಬ್ಯಾಟನ್ ಕೈಯಲ್ಲಿರುತ್ತದೆ. ಈಗ ವಿರೋಧಿಸಿದರೆ ಮುಂದೆ ಒದಗಬಹುದಾದಂತ ಕಷ್ಟವನ್ನರಿತು ಪಟೇಲರು ತಲೆಯಾಡಿಸುತ್ತಾರೆ. ಆದರೆ ತುಂಬಾ ವಿಳಂಬ ಮಾಡುವ ಪರಿಸ್ಥಿತಿ ಇರೋಲ್ಲ. ಕೂಡಲೇ ವ್ಹಿ.ಪಿ.ಮೆನನ್ ಮತ್ತು ಮಾಣಿಕ್ ಷಾ ಅವರನ್ನು ವಿಮಾನದಲ್ಲಿ ಕಳುಹಿಸಿ ರಾಜನ ಕಡೆಯಿಂದ ಪತ್ರ(Instrument of accession)ವನ್ನು ಬರೆಸಿಕೊಂಡು ಬರುತ್ತಾರೆ. ಪಟೇಲರು ೨೬ ರ ಬೆಳಿಗ್ಗೆ ನಡೆದ ಸಭೆಯಲ್ಲಿ ತೆಗೆದುಕೊಂಡ ರಾಜನ ಪತ್ರ ಪಡೆಯುವ ನಿರ್ಧಾರವನ್ನು ೨೬ ರ ಸಂಜೆಯೇ ಕಾರ್ಯರೂಪಕ್ಕೆ ತಂದುಬಿಟ್ಟಿರುತ್ತಾರೆ. ಈ ವಿಷಯವಾಗಿ “ಇಂಥದ್ದೊಂದು ಉದಾಹರಣೆ ಭಾರತವಷ್ಟೇ ಅಲ್ಲ ಇಡೀ ಪ್ರಪಂಚದ ಇತಿಹಾಸದಲ್ಲೆ ಮತ್ತೊಂದಿಲ್ಲ ” ಅಂಥ ಬಾಬು ರಾಜೇಂದ್ರ ಪ್ರಸಾದರು ಶ್ಲಾಘಿಸುತ್ತಾರೆ. ಆದರೆ ಅದೇ ೨೬ ರ ಹೊತ್ತಿಗೆ ಬಾರಾಮುಲ್ಲಾ ಪಠಾಣ್ ಮತ್ತು ಮೇಜರ್ ಜನರಲ್ ಅಕ್ಬರ್’ಖಾನ್’ರ ಸೈನ್ಯ ಶ್ರೀನಗರದತ್ತ ನಡೆದಿರುತ್ತದೆ ಬಾರಾಮುಲ್ಲಾ ವ್ಯಾಪ್ತಿಯಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರಗಳು ವ್ಯಾಪಕವಾಗಿ ನಡೆದು ಹೋದವು. ಒಂದು ಉಲ್ಲೇಖದ ಪ್ರಕಾರ ೧೧೦೦೦-೧೪೦೦೦ ಸ್ಥಳೀಯರ (ಬಾರಾಮುಲ್ಲಾ ಮತ್ತು ಸುತ್ತಲಿನ ಪ್ರದೇಶಗಳ) ಮಾರಣಹೋಮ ನಡೆಯಿತು.
ಆದರೆ ಅದರ ಮರುದಿನವೇ ಅಂದರೆ ೨೭ನೇ ತಾರೀಖು ಬೆಳಿಗ್ಗೆ ಮೊದಲು ಸ್ವಲ್ಪ ವಿಮಾನಗಳು ಶ್ರೀನಗರ ತಲುಪಿ ಆ ಜಾಗ ಪಾಕಿಗಳ ಪಾಲಾಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಂಡು ಬರುತ್ತವೆ. ಅದಿನ್ನೂ ಆಕ್ರಮಣಕ್ಕೊಳಗಾಗಿಲ್ಲ ಎಂದು ಅರಿತ ತಕ್ಷಣವೇ ಇನ್ನೂ ಹೆಚ್ಚು ವಿಮಾನಗಳು ಇಳಿಯುತ್ತವೆ. ಮೊದಲ ದಿನ ಪಾಕಿಗಳ ಕೈಮೇಲಾದರೂ ಪರಿಸ್ಥಿತಿಯನ್ನರಿತ ಪಟೇಲರು ಮರುದಿನ ೨೦೦೦ ಸೈನಿಕರನ್ನು ಕಳಿಸುತ್ತಾರೆ. ಅದೇ ದಿನ ಬಾರಾಮುಲ್ಲಾ ಭಾರತದ ತೆಕ್ಕೆಗೆ ಬರುತ್ತದೆ. ಶ್ರೀನಗರದಲ್ಲಿ ಭಾರತದ ಸೈನ್ಯವಿಳಿದ ಸುದ್ದಿ ಕೇಳುತ್ತಿದ್ದಂತೆ ಜಿನ್ನಾ ಅಂದಿನ ಪಾಕ್ ಸೈನ್ಯದ ಜನರಲ್ ಡಾಗ್ಲಸ್ ಗ್ರೇಸಿಗೆ ” ರಾವಲ್ಪಿಂಡಿ ಶ್ರೀನಗರ ರೋಡ್ ಮೂಲಕ ಹೊಕ್ಕು ಬನ್ಹಿಹಾಲ್ ಪಾಸ್ ಕಡೆ ಹೊರಡಿ ಆ ಮೂಲಕ ಕಾಶ್ಮೀರವನ್ನು ಜಮ್ಮುವಿನಿಂದ ಮತ್ತು ಇಡಿಯ ಭಾರತದಿಂದ ತುಂಡರಿಸಿಬಿಡಿ.” ಎಂದು ಆದೇಶ ಹೊರಡಿಸುತ್ತಾನೆ. ಆದರೆ ‘ಗ್ರೆಸಿ’ ತಿರಸ್ಕರಿಸುತ್ತಾನೆ ಪಟೇಲರು ಬ್ಯಾಟನ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡದ್ದರಿಂದ ಆದ ಲಾಭದಲ್ಲಿ ಇದೂ ಒಂದು. ಅದಲ್ಲದೆ ಹಲವು ಪಾಕ್ ಸೇನೆಯಲ್ಲಿದ್ದ ಬ್ರಿಟಿಷ್ ಸೈನಿಕರು ಯುದ್ಧಕ್ಕೆ ಸಹಕರಿಸಲಿಲ್ಲ ಇದು ಪಟೇಲರ ದೂರಾಲೋಚನೆಯ ಫಲವೇ ಸರಿ. ಎರಡೇ ವಾರದಲ್ಲಿ ಜಮ್ಮು ಕಾಶ್ಮೀರದ ಬಹುಪಾಲನ್ನು ಭಾರತೀಯರು ವಶಪಡಿಸಿಕೊಂಡಿರುತ್ತಾರೆ.
ನವ್ಹೆಂಬರ್ ಮಧ್ಯದ ದಿನಗಳು ಬರುವ ಹೊತ್ತಿಗೆ ಉರಿಯವರೆಗೆ ಸೇನೆ ಹಬ್ಬಿರುತ್ತದೆ. ಕೆಲವೇ ದಿನಗಳಲ್ಲಿ ರಜೌರಿ, ಪೂಂಛ್ ವಶಪಡಿಸಿಕೊಳ್ಳಲಾಗುತ್ತದೆ. ಡಿಸೆಂಬರ್ ಮೊದಲೆರಡು ವಾರಗಳ ಹೊತ್ತಿಗೆ ಇಡಿಯ ಕಾಶ್ಮೀರ ಭಾರತದ ಭೂಪಟಕ್ಕೆ ಸೀಮಿತವಾಗುವ ಲಕ್ಷಣಗಳು ಕಾಣುತ್ತಿರುತ್ತವೆ. ಏತನ್ಮಧ್ಯೆ ನೆಹರೂ ಕಾಶ್ಮೀರ ವಿಚಾರ ತಮಗೆ ಬಿಟ್ಟುಬಿಡುವಂತೆ ಕೇಳುತ್ತಲೇ ಇರುತ್ತಾನೆ. ಅದನ್ನು ಅವರ ಕೈಗಿಟ್ಟು ಕೈಸುಟ್ಟುಕೊಂಡಾಗಲೆಲ್ಲಾ ಪಟೇಲರು ಬಗೆಹರಿಸುತ್ತಿರುತ್ತಾರೆ. ಇನ್ನೂ ಎರಡೇ ವಾರ ನೆಹರೂ ಸುಮ್ಮನಿದ್ದರೆ ಎಲ್ಲವೂ ಸರಿ ಹೋಗಿಬಿಡುತ್ತಿತ್ತು. ಆದರೆ ನೆಹರೂ ಜನವರಿ ೧ ೧೯೪೮ ರಂದು ಕಾಶ್ಮೀರವನ್ನು ವಿಶ್ವಸಂಸ್ಥೆಯ ಅಂಗಳಕ್ಕೆ ಎಸೆಯುತ್ತಾರೆ. ರಾಜಾ ಹರಿಸಿಂಗ್ ಅಧಿಕೃತ ಪತ್ರ ಬರೆದಿದ್ದ ಕಾರಣ “ನಮ್ಮ ಜಾಗದ ಮೇಲೆ ಪಾಕಿಸ್ತಾನಿಯರ ದಾಳಿಯಾಗಿದೆ” ಎಂದು ಹೇಳುವ ಹಕ್ಕು ಭಾರತೀಯರಿಗಿತ್ತು. ಆದರೆ ನೆಹರೂ ಅದನ್ನು ಕಾಶ್ಮೀರಕ್ಕಾಗಿ ಭಾರತ ಪಾಕಿಸ್ತಾನದ ಮಧ್ಯೆ ಯುದ್ಧ ನಡೆಯುತ್ತಿದೆ ಎಂದು ಹೇಳಿಬಿಡುತ್ತಾರೆ. ಸಮಸ್ಯೆಯನ್ನು ಯಾವುದೇ ನ್ಯಾಯಾಲಯದಲ್ಲಿ ನಾವು ಪ್ರಸ್ತಾಪಿಸುವದರ ಮೇಲೆ ನ್ಯಾಯಾಲಯದ ನಿರ್ಧಾರ ಅವಲಂಬಿಸಿರುತ್ತದೆ. ಇತ್ತೀಚೆಗೆ ಕಾವೇರಿ ವಿವಾದದಲ್ಲಿ ಕರ್ನಾಟಕ ಪರವಾದ ವಕೀಲ ಮಾಡಿದ ತಪ್ಪೂ ಇದೇ. ಇದರ ಪರಿಣಾಮ ಕಾಶ್ಮೀರ ಇನ್ನೂ ಬಗೆಹರಿಯದ ಸಮಸ್ಯೆಯಾಗಿದೆ. ಕಾಶ್ಮೀರದಲ್ಲೊಂದು ಪಾಕ್ ಆಕ್ರಮಿತ ಪ್ರದೇಶವಿದೆ.
ನೆಹರೂ ಪಟೇಲರ ಕೈಗೆ ಎಲ್ಲವನ್ನೂ ಇತ್ತು ಸುಮ್ಮನಾಗಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಈಗ ಆಜಾದಿ ಎಂದು ಬೊಗಳುತ್ತಿರುವವರೆಲ್ಲ ತಮ್ಮನ್ನು ಸಮರ್ಥಿಸಿಕೊಳ್ಳುವುದು ವಿಶ್ವಸಂಸ್ಥೆಯ ನಿರ್ಧಾರದಿಂದಲೇ. ಆದರೇ ಆಗಷ್ಟ ೧೫ ೧೯೪೭ ರಿಂದ ಜನವರಿ ೧,೧೯೪೮ ರವರೆಗೆ ನಡೆದ ಘಟನೆಗಳ ಆಧಾರವಾಗಿ ವಿಶ್ವಸಂಸ್ಥೆಯ ನಿರ್ಧಾರದ ಮೊದಲೇ ಕಾಶ್ಮೀರ ಜಾಗದ ಹಕ್ಕುದಾರನಾದ ಹರಿಸಿಂಗನು ಅಧಿಕೃತ ಪತ್ರ ಒಪ್ಪಸಿದ್ದ. ಆದರೆ ಆಜಾದಿ ಗ್ಯಾಂಗ್ ಅದನ್ನೆಲ್ಲ ಮರೆತು ವಿಶ್ವಸಂಸ್ಥೆಯ ನಿರ್ಧಾರವನ್ನೇ ಪುಷ್ಟಿಕರಿಸಿ ತಾವು ಹೇಳುವುದೇ ಸರಿ ಎಂಬ ಅರ್ಥಹೀನ ವಾದಕ್ಕಿಳಿಯುತ್ತದೆ. ಇತಿಹಾಸದಲ್ಲಿ ತಮಗೆ ಬೇಕಾದ ಭಾಗಗಳನ್ನು ಮಾತ್ರ ಆಯ್ದಕೊಂಡು ಬೇಡದರೆಡೆಗೆ ಜಾಣಮೌನಕ್ಕೆ ಮೊರೆಹೋಗುವ ಜನ ಇವತ್ತಿಗೂ ಕಾಶ್ಮೀರದ ಬಗ್ಗೆ ಜನಮತಗಣನೆ ಮಾಡಬೇಕೆಂದು ಹೇಳುವುದು ಹಾಸ್ಯಾಸ್ಪದ.
ನೆಹರೂ ಎಂಬ ಪುಣ್ಯಾತ್ಮ ಕಾಶ್ಮೀರವನ್ನು ಮೂರು ಭಾಗಗೊಳಿಸಿದ. ಅದರಲ್ಲಿ ೪೫ ಪ್ರತಿಶತ ಭಾರತದ ಅಧಿನದಲ್ಲಿದ್ದರೆ, ಇನ್ನುಳಿದಿದ್ದರಲ್ಲಿ ೩೫ ಪ್ರತಿಶತ ಪಾಕ್ ಮತ್ತು ೨೦ ಪ್ರತಿಶತ ಚೀನಾದ ಪಾಲಾಗಿದೆ. ಚೀನಾದ ಕುರಿತು ಮುಂದೆ ಒದಗಬಹುದಾದ ಆತಂಕವನ್ನೂ ಪಟೇಲರು ನೆಹರೂಗೆ ೧೯೫೦ ನವೆಂಬರ್ ೭ ರಂದು ಬರೆದ ಪತ್ರವೊಂದರಲ್ಲಿ ಹೇಳಿದ್ದರು. ಆದರೂ ನೆಹರೂವಿನ ದಿವ್ಯ ನಿರ್ಲಕ್ಷ್ಯದಿಂದ ಚೀನಾದಾಳಿಯಲ್ಲಿ ಭಾರತದ ಕೆಲವು ಭಾಗಗಳನ್ನು ಕಳೆದುಕೊಳ್ಳಬೇಕಾಯಿತು. ಕಾಶ್ಮೀರ ವಿಚಾರ ಬಂದಾಗ ಪಟೇಲರು ಮಾಡಿದ ಚಾಣಾಕ್ಷತನಕ್ಕಿಂತ ನೆಹರುವಿನ ದಡ್ಡತನಗಳೇ ಹೆಚ್ಚಾಗಿ ಕಾಣುತ್ತವೆ. ಅದಕ್ಕೆ ಈ ಲೇಖನದಲ್ಲಿ ಪಟೇಲರು ತಮ್ಮ ಮೌಲ್ಯಯುತವಾದ ಅಸ್ತಿತ್ವವನ್ನು ಅಲ್ಲಲ್ಲಿ ತೋರಿಸಿಕೊಂಡಿದ್ದಾರಷ್ಟೆ. ಉಳಿದಂತೆ ಎಲ್ಲವೂ ನೆಹರೂಮಯವೇ. ಕಾಶ್ಮೀರ ವಿಚಾರವಾಗಿ ಹೀಗಾದಾಗ ಹೈದ್ರಾಬಾದ್ ವಿಚಾರಕ್ಕೆ ಪಟೇಲರು ತಾವೇ ಮುಂದಾಳುವಾಗಿ ಅದನ್ನೊಂದು ಗೊಂದಲ ಮುಕ್ತ ಪ್ರದೇಶವಾಗಿಸಿದರು. ಅದನ್ನು ಮುಂದಿನ ಭಾಗದಲ್ಲಿ ತಿಳಿಯೋಣ.
Facebook ಕಾಮೆಂಟ್ಸ್