ಇಂದು ನಮ್ಮ ಯುವ ಜನಾಂಗದ ಕುರಿತು ಮಾತನಾಡಲು ಸೂಕ್ತವಾದ ಸಮಯ ಅಂದುಕೊಳ್ಳುತ್ತೇನೆ. ದೇಶದಲ್ಲಿ ಯುವಕರಿಗಾಗಿಯೇ ಹಲವಾರು ಉದ್ಯೋಗಗಳು ಸೃಷ್ಠಿಯಾಗುತ್ತಿವೆ. ವಿದೇಶಿ ಕಂಪನಿಗಳಾಗಿರಬಹುದು ಆದರೆ ಅದರ ಸಂಪೂರ್ಣ ಉಪಯೋಗವನ್ನು ಪಡೆಯುತ್ತಿರುವವರು ಮಾತ್ರ ಭಾರತಿಯರಲ್ಲವೇ. ಹಾಗಾಗಿ ಇತಂಹ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ನಮಗೆ ಬಿಟ್ಟಿರುವ ವಿಷಯ. ನಾವು ಒಂದು ಕ್ಷಣ ಯೋಚಿಸುವ ಅಗತ್ಯವಿದೆ. ಇದು 21ನೇ ಶತಮಾನ ಎಲ್ಲವೂ ತಂತ್ರಜ್ಞಾನದಿಂದಲೇ ಕಾರ್ಯವನ್ನು ನಿರ್ವಹಿಸುತ್ತಿದ್ದೇವೆ. ನಮಗೆ ಸ್ವಾತಂತ್ರ್ಯ ಬಂದು ಸುಮಾರು 61 ವರ್ಷ ಕಳೆದರೂ ನಾವು ಇನ್ನು ಅಭಿವೃದ್ದಿ ಶೀಲ ರಾಷ್ಟ್ರವಾಗಿಯೇ ಉಳಿದಿದ್ದೇವೆ. ನಮ್ಮ ದೇಶವು ಅಭಿವೃದ್ದಿ ಹೊಂದಿದ ದೇಶಗಳ ಸಾಲಿಗೆ ಸೇರಬೇಕಿದೆ. ದೇಶವು ಉನ್ನತಿಯತ್ತ ಧಾವಿಸಬೇಕಿದೆ. ಇದಕ್ಕೆ ನಮ್ಮ ನಿಮ್ಮ ಕೊಡುಗೆಯನ್ನು ನೀಡುವ ಅವಶ್ಯಕತೆ ಇದೆ. ಆಗ ಮಾತ್ರ ನಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುತ್ತದೆ.
ಜೀವನದಲ್ಲಿ ಮಹತ್ವದ ಕಾಲ ಯೌವನ, ಇಂತಹ ಪ್ರಬುದ್ಧವಾದ ವಯಸ್ಸಿನಲ್ಲಿ ಯುವಕರು ಏನು ಮಾಡುತ್ತಿದ್ದಾರೆ ಎನ್ನುವುದು ಅವರ ಜೀವನವನ್ನು ನಿರ್ಧರಿಸುತ್ತದೆ. ಹಾಗೆಯೇ ಅವರಿಂದ ದೇಶವು ಯಾವುದನ್ನೊ ಬಯಸುತ್ತಿರುತ್ತದೆ ಎನ್ನುವುದನ್ನು ಯುವಕರು ಮರೆಯಬಾರದು. ಈ ಯವಶಕ್ತಿ ರಾಷ್ಟ್ರದ ಬಹುದೊಡ್ಡ ಆಸ್ತಿ. ಇವರನ್ನು ರಾಷ್ಟ್ರದ ಶಕ್ತಿ ಎಂದು ಪರಿಗಣಿಸಬೇಕಾಗುತ್ತದೆ. ಹಾಗಾಗಿ ಯುವಕರು ಇಂತಹ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಹೆಜ್ಜೆ ಇಡಬೇಕಾಗಿದೆ. ಇವರಿಗೆ ಎಲ್ಲಾ ಪೋಷಕರು ಸಹಕಾರ ಮತ್ತು ಪ್ರೋತ್ಸಾಹ ನೀಡಿದರೆ, ದೇಶದ ಅಭಿವೃದ್ದಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ.
ಅಂದು ವಿವೇಕಾನಂದರು ಹೀಗೆ ಹೇಳಿದ್ದರು “ಕಬ್ಬಿಣದ ಸ್ನಾಯುಗಳಿರುವ, ಉಕ್ಕಿನ ನರಮಂಡಲವಿರುವ ಯುವಕರು ಕೂಡಿದರೆ ಇಡೀ ದೇಶದ ಭವಿಷ್ಯವನ್ನು ಬದಲಾಯಿಸಿ ಬಿಡುತ್ತೇನೆ” ಎಂದಿರುವುದನ್ನು ಕೇಳಿದರೆ ನಿಮಗೆ ಅರಿವಾಗುತ್ತದೆ ಯುವಕರಲ್ಲಿ ಅಂತಹ ಶಕ್ತಿ ಮತ್ತು ಎದೆಗಾರಿಕೆ ಇರುತ್ತದೆ ಎನ್ನುವುದು ತಿಳಿದು ಬರುತ್ತದೆ. ಇಂತಹ ಶಕ್ತಿಯನ್ನು ಇಂದು ನಮ್ಮ ಯುವಜನತೆ ಎಂತಹ ಕಾರ್ಯಕ್ಕೆ ಉಪಯೋಗಿಸುತ್ತಾರೆ ಎನ್ನುವುದರಲ್ಲಿ ದೇಶದ ಭವಿಷ್ಯ ನಿಂತಿದೆ. ಹಾಗಾಗಿ ಇಂದಿನ ಯುವಜನತೆಯನ್ನು ಹೆಚ್ಚು ದೇಶದ ಕಾರ್ಯಕ್ಕೆ ಬಳಸಿಕೊಳ್ಳಬೇಕಾಗಿದೆ. ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಿ ಮುಂದುವರಿದ ದೇಶವಾಗಲು ಸಾದ್ಯ.
ಆದರೆ ಇಂದು ಯುವಜನತೆ ದೇಶದ ಬಗ್ಗೆ ಕಾಳಜಿ ಇರಲಿ ತಮ್ಮ ಜೀವನದ ಕುರಿತಾಗಿಯೇ ಯೋಚಿಸದಂತಹ ಸ್ಥಿತಿಗೆ ಬಂದಿದ್ದಾರೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ, ಇಂದಿನ ದಿನಗಳಲ್ಲಿ ಅನೇಕ ಯುವಜನತೆ ತಮ್ಮ ಯೌವನಾವಸ್ಥೆಯಲ್ಲಿಯೇ ತಮ್ಮ ಕನಸುಗಳನ್ನೂ, ಮನಸ್ಸುಗಳನ್ನೂ ಕಳೆದುಕೊಂಡು ಜೀವನದಲ್ಲಿ ಯಾವ ಆಶಯವನ್ನೂ ಇಟ್ಟುಕೊಳ್ಳದೆ, ಮಾದಕ ವಸ್ತುಗಳಿಗೆ ದಾಸರಾಗಿ, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇನ್ನು ಕೆಲವರು ತಾವು ಇಂತಹ ಚಟಗಳಿಗೆ ಬಲಿಯಾಗುವುದರ ಜತೆಗೆ ಇತರರನ್ನು ಇದರ ದಾಸರನ್ನಾಗಿ ಮಾಡುತ್ತಿದ್ದಾರೆ. ಹೀಗೆ ಅನೇಕ ಯುವಕರು ಇಂತಹ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿದರೆ ಸುಮಾರು 20ರಿಂದ 30 ವರ್ಷ ವಯಸ್ಸಿನ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ.
ಹೀಗಿರುವಾಗ ನಾವು ನಮ್ಮ ಭಾರತದ ಬಗ್ಗೆ ಯೋಚಿಸುವ ಅನಿವಾರ್ಯತೆ ನಮಗೆ ಇದೆ. ಏಕೆಂದರೆ ಇಂದಿನ ದಿನಗಳಲ್ಲಿ ಹೆಚ್ಚು ಸಮಸ್ಯೆಯನ್ನು ತಂದುಕೊಡುತ್ತಿರುವವರು ಯುವಜನತೆಯೇ. ಆದರೆ ಎಲ್ಲಾ ಯುವಜನತೆ ಕೆಟ್ಟ ಕೆಲಸವನ್ನು ಮಾಡುತ್ತಾರೆ ಎಂದು ಹೆಳಲು ಆಗುವುದಿಲ್ಲ, ಏಕೆಂದರೆ ನಿಮಗೆ ತಿಳಿದಿರಬಹುದು ಸರ್ಜಿಕಲ್ ದಾಳಿ ಮಾಡಿದವರು ಎಲ್ಲರೂ ಯುವಕರೆ, ಸೈನ್ಯದಲ್ಲಿ ಇರುವವರು ಹೆಚ್ಚು ಯುವಕರೆ, ಈಗಿನ ದಿನಗಳಲ್ಲಿ ರಾಜಕೀಯದಲ್ಲಿಯೂ ತೊಡಗಿಸಿಕೊಳ್ಳುತ್ತಿರುವುದು ಹೆಚ್ಚು ಯವಕರೆ. ಇಷ್ಟೆ ಅಲ್ಲ ಯುದ್ದ ಸಮಯದಲ್ಲಿ ಎಲ್ಲವನ್ನು ಮೆಟ್ಟಿ ನಿಂತು ಹೋರಾಡಿರುವ ಹಲವಾರು ಯುವ ಸೈನಕರು (ಯೋಧರು) ಇದ್ದಾರೆ ಅಂದ ಮೇಲೆ ದೇಶವನ್ನು ಉನ್ನತಿಯಡೆಗೆ ಹಾಗೂ ಅವನತಿಯೆಡೆಗೆ ಕೊಂಡೊಯ್ಯವ ಶಕ್ತಿ ಯುವಕರಲ್ಲಿ ಇದೆ.
ಹಾಗಾಗಿ ಯುವಕರು ಅಥವಾ ಯುವಜನತೆ ತಮ್ಮಲ್ಲಿರುವ ಶಕ್ತಿಯನ್ನು ದೇಶದ ಹಿತಕ್ಕಾಗಿ ಬಳಸಿ, ಭಾರತದ ಉನ್ನತಿಗೆ ಕಾರಣರಾದಾಗ ಯುವ ಶಕ್ತಿ ರಾಷ್ಟ್ರದ ಬಹುದೊಡ್ಡ ಶಕ್ತಿಯಾಗಿ ಕಂಗೊಳಿಸುತ್ತದೆ. ಹೀಗಿರುವಾಗ ಭಾರತದ ಮುಂದೆ ಇರುವಂತಹ ಹಲವಾರು ಸಮಸ್ಯೆಗಳಿವೆ. ಆ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸುನ್ನು ನಮ್ಮ ಯುವಜನತೆ ತೋರಿಸಬೇಕಿದೆ. ಯುವ ಸಂಘಟನೆಗಳು ಹೊಸ ಹೊಸ ವಿಚಾರಗಳತ್ತ ಒಲವು ತೋರಿಸಿ, ಜನರಲ್ಲಿ ಹೊಸ ಪ್ರಜೆಯನ್ನು ಬೆಳೆಸಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆಗೆ ಸಹಕಾರಿಯಾಗಬೇಕು. ಇಂದಿನ ಶಿಕ್ಷಣ ಕೇವಲ ಮಾರ್ಕ್ಸ್’ಗಾಗಿ ಮಾತ್ರ ಓದುತ್ತಿದ್ದಾರೆಯೇ ವಿನಃ ಜ್ಞಾನ ಸಂಪಾದನೆಗಾಗಿ ಯಾರು ಶಿಕ್ಷಣವನ್ನು ಪಡೆಯುತ್ತಿಲ್ಲ. ಇಂದಿನ ದಿನಗಳಲ್ಲಿ ಶಿಕ್ಷಣ ಕಲಿಕೆಯಲ್ಲಿ ಬದಲಾವಣೆ ಹೊಂದಿ ದೇಶದ ಬಗ್ಗೆ ಹಾಗೂ ಮಾನವಿಯ ಗುಣಗಳನ್ನು ಕಲಿಸಿಕೊಡುವಂತಹ ಶಿಕ್ಷಣವನ್ನು ನೀಡುವುದು ಸೂಕ್ತವಾಗಿದೆ. ಆಗ ದೇಶದ ಕುರಿತು ಸಮಾಜದ ಒಳಿತಿಗಾಗಿ ಯೋಚಿಸುತ್ತಾರೆ ಇದುವೇ ರಾಷ್ಟ್ರ ಸೇವೆ. ಇದೇ ರಾಷ್ಟ್ರಶಕ್ತಿ.
ಇಂತಹ ಚಿಂತನೆಗಳನ್ನು ಯುವಕರು ಮೈಗೂಡಿಸಿಕೊಂಡರೆ ಭಾರತವು ಪ್ರಪಂಚದಲ್ಲಿ ಒಂದು ಬೃಹತ್ ಶಕ್ತಿಯಾಗಿ ಮಾರ್ಪಡುತ್ತದೆ. ದೇಶವಾಗಿರಬಹುದು ಅಥವಾ ಜಗತ್ತಿನಲ್ಲಿ ಕಾಲಕಾಲಕ್ಕೂ ಆಗಿರುವ ಎಲ್ಲಾ ಬದಲಾವಣೆಯ ಹಿಂದೆ ಯುವಕರ ಪಾತ್ರವಿರುವುದನ್ನು ನಾವು ನೋಡಬಹುದು. ಉತ್ಸಾಹ, ಕಲ್ಪನಾ ಶಕ್ತಿ ಹಾಗೂ ಕ್ರಿಯಾಶೀಲತೆ ಇವುಗಳು ಯೌವನದ ಮುಖ್ಯ ಲಕ್ಷಣಗಳು. ನಮ್ಮ ದೇಶಲ್ಲಿ ಸುಮಾರು 65% ಯುವಕರಿಂದ ಕೂಡಿದೆ ಆದರೆ ಯಾಕೆ ನಮ್ಮ ದೇಶದಲ್ಲಿ ಯುವಕರು ದೇಶದ ಅಬಿವೃದ್ಧಿಗೆ ನೆರವಾಗುತ್ತಿಲ್ಲ ಎನ್ನುವುದು ಕುತುಹಲಕಾರಿ ಸಂಗತಿಯಾಗಿದೆ. ಇಂತಹ ಶಕ್ತಿ ಇಂದು ಒಗ್ಗೂಡಬೇಕಿದೆ ದೇಶದ ಏಳಿಗೆಗೆ ಎಲ್ಲರೂ ಮಾಹಾ ಕಾರ್ಯವನ್ನು ಮಾಡದಿದ್ದರು ಚಿಕ್ಕ ಕಾರ್ಯವನ್ನು ಮಾಡುವ ಮೂಲಕವಾದರು ದೇಶದ ಉನ್ನತಿಗೆ ಎಲ್ಲರೂ ಶ್ರಮಿಸೋಣ ಭವ್ಯ ಭಾರತದ ಕನಸನ್ನು ಕಾಣುತ್ತ ಅದನ್ನು ನೆರೆವೇಸೋಣ ಎನ್ನುವುದೇ ನನ್ನ ಒಂದು ಆಶಯ.
ಪವನ್ ಎಂ.ಸಿ
ದ್ವಿತೀಯ ಎಂ.ಸಿ.ಜೆ
ಎಸ್.ಡಿ.ಎಂ. ಕಾಲೇಜು ಉಜಿರೆ.
Facebook ಕಾಮೆಂಟ್ಸ್