‘ಪರೀಕ್ಷೆ ಸಮೀಪಿಸುತ್ತಿದ್ದಂತೆ, ಸಿನಿಮಾ ನೋಡಬೇಕು, ಕಥೆ, ಕಾದಂಬರಿಗಳನ್ನ ಓದಬೇಕೆಂಬ ಹಂಬಲ ಹೆಚ್ಚಾಗುತ್ತೆ’. ನ್ಯೂಟನ್, ಐನಸ್ಟೈನ್‍ರು ರಚಿಸದೆ ಬಿಟ್ಟಿರುವ ಈ ಪ್ರಮೇಯ ಬಹುಶಃ ಬಹುಪಾಲು ವಿದ್ಯಾರ್ಥಿಗಳಿಗೆ ಅನ್ವಯಿಸುತ್ತೆ. ‘ನನ್ನ ಲ್ಯಾಪಟಾಪ್ನಲ್ಲಿ ನೋಡದೆ ಇರೋ ಮೂವಿಗಳನ್ನೆಲ್ಲಾ ನೋಡಿ ಮುಗ್ಸುದು ಎಕ್ಷಾಮ್ ಟೈಮಲ್ಲೆ’ ಎಂದು ಗೆಳೆಯನಾಡಿದ ಮಾತು ಈ ಪ್ರಮೇಯಕ್ಕೆ ಪುರಾವೆಯೆ. ಇದಕ್ಕೆ ಇಂಬು ಕೊಡುವ ಹಾಗೆ, ಸರಿಯಾಗಿ ಪರೀಕ್ಷೆ ಶುರುವಾಗುವ ಹಿಂದಿನ ದಿನ ಶಿವರಾಮ ಕಾರಂತರ ‘ಕುಡಿಯರ ಕೂಸು’ ನನ್ನ ಕೈಸೇರಿತ್ತು. ಕೇವಲ ಚೇತನ್ ಭಗತ್‍ರ ‘ರಸ’ವತ್ತಾದ ಕಾದಂಬರಿಗಳ ರುಚಿ ಕಂಡಿದ್ದ ನನ್ನ ರೂಮ್’ಮೇಟ್’ಗೆ ಬಹುಶಃ ಕಾರಂತರ ಸ್ವಾದ ಹಿಡಿಸದೆ, ಕೇವಲ ಕಾಲುಭಾಗ ಓದಿ, ಹಾಗೆ ಇಟ್ಟದ್ದು ನನ್ನ ಕಣ್ಣಿಗೆ ಬಿತ್ತು. ‘ಸಿಲಬಸ್ ಓದಿ ಬೇಜಾರಾದಾಗ ಓದಿಲಿಕ್ಕಾಗುತ್ತೆ’ ಎಂದು ಪುಸ್ತಕವನ್ನು ಎತ್ತಿಕೊಂಡರೆ, ಕೊನೆಯಲ್ಲಿ ಆದದ್ದು ಪೂರ್ತಿ ಉಲ್ಟಾ!. ಕಾದಂಬರಿ ಓದಿ, ಆಮೇಲೆ ಬಿಡುವಾದಾಗ ಪರೀಕ್ಷೆಗೆ ಓದುವ ಪರಿಸ್ಥಿತಿ ನಿರ್ಮಾಣವಾಗಿ, ಕೊನೆಗೆ ಅದನ್ನ ಹತೋಟಿಗೆ ತರಬೇಕಾಯಿತು. ಇದರ ಪರಿಣಾಮವಾಗಿ ಯಾವುದೆ ಸಬ್ಜೆಕ್ಟ್’ನ ಸಿಲೆಬಸ್‍ನ್ನು ಸಂಪೂರ್ಣವಾಗಿ ಓದಿ ಮುಗಿಸದಿದ್ದರೂ, ಪರೀಕ್ಷೆ ಸರಿಯಾಗಿ ಮುಗಿಯುವ ಹೊತ್ತಿಗೆ ಕಾದಂಬರಿ ಓದಿ ಮುಗಿಸಿದ್ದೆ.
‘ಕುಡಿಯರ ಕೂಸು’, ಶಿವರಾಮ ಕಾರಂತರು ದಕ್ಷಿಣ ಕನ್ನಡದ ‘ಮಲೆಕುಡಿಯ’ ಜನಾಂಗದ ಕುರಿತಾಗಿ ಬರೆದಿರುವಂತಹ ಕಾದಂಬರಿ. ಅವರ ಜೀವನ ಶೈಲಿ, ಆಚಾರ-ವಿಚಾರ ಹಾಗು ಪರಿಸರದ ಸೊಬಗನ್ನ ಕಾರಂತರು ಮನಮುಟ್ಟುವ ರೀತಿ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಅಲ್ಲಿ ಬರುವ ಕೆಂಚ, ಕರಿಯ, ತಿಮ್ಮ, ಕಾಳ, ತುಕ್ರ, ಬೂದ, ಕೆಂಪಿ, ಗಿಡ್ಡಿ, ತಿರುಮಲ ಭಟ್ರು, ರಾಮಚಂದ್ರಯ್ಯ, ವಲ್ಲಿ ಹೀಗೆ ಹಲವಾರು ಪಾತ್ರಗಳು ಹಾಗು ಸನ್ನಿವೇಶಗಳು ನಮ್ಮನ್ನ ಕಾಡುತ್ತವೆ. ಇವುಗಳೊಂದಿಗೆ ನನ್ನನ್ನು ಮತ್ತಷ್ಟು ಕಾಡಿದ್ದು, ಭೂಮಂಡಲದ ಯಾವುದೋ ಒಂದು ಚಿಕ್ಕ ಪ್ರದೇಶದಲ್ಲಿ ಸಹಜ ರೀತಿಯಲ್ಲಿ ನಡೆಯುವ ವಿದ್ಯಾಮಾನದಲ್ಲಿ ಅಡಗಿರುವ ವೈವಿಧ್ಯತೆಯನ್ನು ಗುರುತಿಸಿ, ಅದರ ಸೌಂದರ್ಯವನ್ನು ಕಾಡಿಸಿಕೊಳ್ಳುವ ಕಲಾಕಾರನ ಮನಸ್ಸು ಹಾಗು ಅದರಿಂದ ಸೃಷ್ಟಿಸಲ್ಪಡುವ ಅದ್ಭುತವಾದ ಕಾವ್ಯ!. ಒಮ್ಮೆ ಆಲೋಚಿಸಿ ನೋಡಿ, ಜಗತ್ತಿನ ವಿದ್ಯಾಮಾನಗಳೆಲ್ಲವೂ ಯಾವುದೆ ವೈವಿಧ್ಯತೆಗಳಿಲ್ಲದೆ ಏಕರೀತಿಯಲ್ಲಿದ್ದಿದ್ದರೆ ಇಂಥಹ ಸುಂದರ ಕಾವ್ಯಗಳ ಸೃಷ್ಟಿ ಸಾಧ್ಯವಿತ್ತೇನು?. ನನ್ನ ಪ್ರಕಾರ ಈ ಜಗತ್ತಿನ ಸೌಂದರ್ಯದ ಗುಟ್ಟೆ ‘ವೈವಿಧ್ಯತೆ’ ಹಾಗು ಇದೆ ಅದರ ವೈಶಿಷ್ಟ್ಯ.
ಕಳೆದ ತಿಂಗಳು ಆಳ್ವಾಸ್ ನುಡಿಸಿರಿಗೆ ಹೋಗುವ ಅವಕಾಶ ದೊರೆಯಿತು. ಪ್ರತಿವರ್ಷವು “ಹೊಗಬೇಕು, ಹೋಗಬೇಕು” ಎಂದು ಬಾಯಲ್ಲೆ ಹೋಗಿ ಬಂದದ್ದು ಬಿಟ್ಟರೆ ಒಮ್ಮೆಯೂ ನುಡಿಸಿರಿಯ ವೈಭವವನ್ನು ಕಂಡಿರಲಿಲ್ಲ, ಹಾಗಾಗಿ ಈ ವರ್ಷ ಶತಾಯಗತಾಯ ಹೋಗಲೇಬೇಕೆಂದು ನಿರ್ಧರಿಸಿ ಹೊರಟಿದ್ದೆ. ಅಬ್ಬಾ! ಅದೆಷ್ಟು ವೈವಿಧ್ಯಮಯ, ವಿನೂತನ ಕಲಾಪ್ರಕಾರಗಳು!. ಕಲೆಯಲ್ಲಿರುವ ವೈವಿಧ್ಯತೆಯ ಸ್ವಾದವನ್ನು ಸವಿದು ಸಂಭ್ರಮಿಸುವವರಿಗೆ ಹೇಳಿ ಮಾಡಿಸಿದ ಜಾಗವದು. ಒಂದಕ್ಕಿಂತ ಒಂದು ವಿಭಿನ್ನ ಹಾಗು ವೈಶಿಷ್ಟ್ಯ. ಒಂದು ಕಡೆ ಹಿಂದುಸ್ತಾನಿ, ಕರ್ನಾಟಕ ಮುಂತಾದ ಶಾಸ್ತ್ರೀಯ ಹಾಡುಗಾರಿಕೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಇದ್ಯಾವುದನ್ನು ಅರಿಯದವ ಹಾರ್ಮೋನಿಯಂನ್ನು ಹೆಗಲಿಗೇರಿಸಿಕೊಂಡು ತನ್ನ ಸಂಗಡದವರೊಂದಿಗೆ ಜನರ ಮಧ್ಯೆ ಶುಶ್ರಾವ್ಯವಾಗಿ ಜಾನಪದವನ್ನು, ಲಾವಣಿಗಳನ್ನು ಹಾಡುತ್ತಿರುತ್ತಾನೆ. ಮಣಿಪುರ, ಶ್ರೀಲಂಕಾದ ಜಾನಪದ ನೃತ್ಯಗಳನ್ನು ಕೆಲವು ಮಂದಿ ಬೆರಗಿನಿಂದ ನೋಡಿದರೆ, ಇನ್ನು ಕೆಲವು ಮಂದಿ ತಮ್ಮ ಉಡುಗೆಯಿಂದಲೆ ಗಮನ ಸೆಳೆಯುವ ‘ಲಂಬಾಣಿ’ ಮಹಿಳೆಯರ ವೇಷ ಭೂಷಣಕ್ಕೆ ಮನಸೋತು, ಜತೆ ನಿಂತು ಫೋಟೋಗೆ ಪೋಸು ನೀಡುತ್ತಿರುತ್ತಾರೆ. ಒಟ್ಟಿನಲ್ಲಿ ವೈವಿಧ್ಯತೆಯಲ್ಲಿನ ವೈಶಿಷ್ಟ್ಯದ ಪ್ರದರ್ಶನವೆ ಆಳ್ವಾಸ್ ನುಡಿಸಿರಿಯ ವಿಶೇಷವೆನ್ನಬಹುದು.
ಇನ್ನು ಕಲೆಯ ಹೊರತಾಗಿ ವ್ಯಕ್ತಿತ್ವದಲ್ಲೂ ಅದೆಷ್ಟು ವೈವಿಧ್ಯತೆಗಳಿರುತ್ತೆ. ಇತ್ತೀಚೆಗೆ ಪೂರ್ಣಚಂದ್ರ ತೇಜಸ್ವಿಯವರ ಕುರಿತಾದ ‘ಮತ್ತೆ ಮತ್ತೆ ತೇಜಸ್ವಿ’ ಎಂಬ ಸಾಕ್ಷ್ಯಚಿತ್ರವನ್ನು ನೋಡುತ್ತಿದ್ದೆ. ಆ ಮನುಷ್ಯನಲ್ಲಾದರೂ ಅದೆಂತಹ ವೈವಿಧ್ಯತೆ!. ಓದಿದ್ದು, ಬೆಳೆದದ್ದು ಪೇಟೆಯಲ್ಲಾದರು, ಬಂದು ನೆಲೆಸಿದ್ದು ಕಾಡಿನಲ್ಲಿ. ಒಮ್ಮೆ ಹೊರ ಜಗತ್ತನ್ನೆ ಮರೆತು ಅಲೆಮಾರಿ ರಿತಿ ಕಾಡು ಸುತ್ತುತ್ತಾರೆ, ಇನ್ನೊಮ್ಮೆ ಜಗತ್ತಿನ ಯಾವುದೊ ಮೂಲೆಯಲ್ಲಾಗುವ ಅಪರೂಪದ ವಿದ್ಯಮಾನವನ್ನು ಬರವಣಿಗೆಯ ಮೂಲಕ ಜನರಿಗೆ ತಲುಪಿಸುತ್ತಾರೆ. ತಾಳ್ಮೆ ಬಯಸುವ ಫಿಶ್ಶಿಂಗ್, ಫೋಟೋಗ್ರಾಫಿ ಹವ್ಯಾಸವು ಉಂಟು, ಹಾಗೆಯೆ ಕಂಡದ್ದನ್ನು ರಿಪೇರಿ ಮಾಡುವ ಕುತೂಹಲವು ಉಂಟು. ಪೇಪರ್ ಹಾಕುವ, ಬಿರ್ಯಾನಿ ಮಾಡುವ ಸಾಮಾನ್ಯ ಜನರಿಂದ ಹಿಡಿದು ವಿಜ್ಞಾನಿಗಳು, ರಾಜಕಾರಣಿಗಳು, ಸಾಹಿತಿಗಳು ಎಲ್ಲರು ಸ್ನೇಹಿತರೆ. ರಸಋಷಿಯ ಮಗನಾದರು ಗುರುತಿಸಿಕೊಂಡದ್ದು ಸ್ವಸಾಮರ್ಥ್ಯದಿಂದಲೆ. ತೇಜಸ್ವಿ ವಿಶಿಷ್ಟರೆನಿಸುವುದು ಈ ‘ವೈವಿಧ್ಯತೆ’ಗೆ.
ಕಲೆ, ಸಾಹಿತ್ಯ, ವ್ಯಕ್ತಿತ್ವ, ನಾಡು-ನುಡಿ, ಆಚಾರ-ವಿಚಾರ, ಆಹಾರ ಹೀಗೆ ಜಗತ್ತಿನ ಪ್ರತಿಯೊಂದು ವಸ್ತುವಿನಲ್ಲು ವೈವಿಧ್ಯತೆ ಅಡಕವಾಗಿರುತ್ತೆ, ಆದರೆ ಅದನ್ನು ಕಾಣುವ ಕಣ್ಣಿರಬೇಕು, ಅಸ್ವಾದಿಸುವ ಮನಸ್ಸಿರಬೇಕಷ್ಟೆ. ವಿಚಿತ್ರವೆಂದರೆ ‘ಈ ಜಗತ್ತು ನನ್ನಂತೆ ಇರಬೇಕು, ನಾನಿದ್ದ ಹಾಗೆ ಇರಬೇಕು’ ಎಂಬುದಾಗಿ ಮನಸ್ಸು ಬಯಸುತ್ತೆ, ನಮಗಿಂತ ಭಿನ್ನವಾಗಿರುವುದನ್ನು ಮನಸ್ಸು ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ, ಸಹಜವಾಗಿಯೆ ‘ವೈವಿಧ್ಯತೆ’ ‘ವೈರುಧ್ಯ’ವಾಗಿಬಿಡುತ್ತೆ. ಉದಾಹರಣೆಗೆ ನಾವು ತುಂಬಾ ಶಾಂತ ಸ್ವಭಾವದವರಾಗಿದ್ದು, ಯಾರಾದರು ವಾಚಾಳಿಗಳು, ಗಡಿಬಿಡಿಯ ಸ್ವಭಾವುಳ್ಳವರು ಸಿಕ್ಕಿದರೆ ‘ಏನ್, ವಿಚಿತ್ರ ಮನುಷ್ಯನಪ್ಪಾ’ ಅಂಥ ಅವರ ಗುಣವನ್ನ ದೂಷಿಸುತ್ತೇವೆಯೆ ಹೊರತು ಇದು ಕೂಡ ಸೃಷ್ಟಿಯ ಒಂದು ವೈವಿಧ್ಯತೆ ಎಂದು ಭಾವಿಸುವುದು ತೀರಾ ಕಡಿಮೆ. ಇದೆ ಸಂಗತಿ ವಿಭಿನ್ನ ಸಂಪ್ರದಾಯಗಳು, ಆಚಾರ-ವಿಚಾರಗಳ ಕುರಿತಾಗಿ ಒಂದು ಋಣಾತ್ಮಕ ಭಾವನೆ ಮೂಡಲಿಕ್ಕೆ ಕಾರಣವಾಗುತ್ತೆ. ಹಾಗಾಗಿ ವೈವಿಧ್ಯತೆಯ ಸ್ವಾದ ಸವಿಯುವುದನ್ನ ನಾವು ಬೆಳೆಸಿಕೊಳ್ಳಬೇಕು, ಜತೆಗೆ ನಮ್ಮ ಮಕ್ಕಳಿಗೂ ಬೆಳೆಸಬೇಕಾದ್ದು ನಮ್ಮ ಹೊಣೆಗಾರಿಕೆ. ವೀಕೆಂಡಿಗೆ ಮಕ್ಕಳನ್ನ ಕೇವಲ ಮಾಲ್‍ಗಳಿಗೆ ಕರೆದುಕೊಂಡು ಹೋಗುವುದರ ಬದಲಾಗಿ ವಿವಿಧ ಉತ್ಸವಗಳಿಗೆ, ಊರ ಜಾತ್ರೆಗಳಿಗೆ, ಸಾಂಸ್ಕತಿಕ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿ ಈ ಜಗತ್ತಿನ ಅದರಲ್ಲೂ ಭಾರತದ ವೈವಿಧ್ಯತೆಯ ವೈಶಿಷ್ಟ್ಯವನ್ನ ಪರಿಚಯಿಸುವುದರ ಮೂಲಕ ವಿಭಿನ್ನತೆಯನ್ನು ಅಪ್ಪಿಕೊಳ್ಳುವ ಹಾಗು ವೈರುಧ್ಯತೆಯನ್ನು ಕಿತ್ತೆಸೆಯುವ ಒಂದು ಸುಂದರ ಮನಸ್ಸನ್ನು ರೂಪಿಸುವ ಅವಶ್ಯಕತೆ ಬಹಳಷ್ಟಿದೆ ಎಂಬುದು ನನ್ನ ಭಾವನೆ.
ನುಡಿಸಿರಿಯಲ್ಲಿ ಕಂಡುಬಂದದ್ದು ವೈವಿಧ್ಯತೆಯ ಒಂದು ಸಣ್ಣ ಅಂಶ ಮಾತ್ರ. ಇನ್ನು ಕಾಶ್ಮೀರದಿಂದ ಪ್ರಾರಂಭಗೊಂಡು ಈಶಾನ್ಯ ರಾಜ್ಯಗಳ ಮೂಲಕ, ಕನ್ಯಾಕುಮಾರಿಯನ್ನು ದಾಟಿ, ಗುಜರಾತ್, ರಾಜಸ್ತಾನ. ಹೀಗೆ ಈ ಔಟ್‍ಲೈನ ಒಳಗೆ ಅದೆಷ್ಟು ವೈವಿಧ್ಯತೆ ತುಂಬಿರಬೇಡ!. ನನ್ನ ಭಾರತ ವೈವಿಧ್ಯತೆಯ ಅನಂತತೆಯ ಪ್ರತೀಕ ಹಾಗು ಇದೆ ಅದರ ವೈಶಿಷ್ಟ್ಯ. ಹೌದು, ‘ವೈವಿಧ್ಯತೆ’ ಜಗತ್ತಿನ ಸೌಂದರ್ಯವರ್ಧಕವಾದರೆ, ಭಾರತ ಅದರ ‘ಮೇಕಪ್ ಕಿಟ್’.
Facebook ಕಾಮೆಂಟ್ಸ್