ಚಿತ್ರ : ಪಿಲಿಬೈಲ್ ಯಮುನಕ್ಕ
ತಾರಾಗಣ : ಪ್ರಥ್ವಿ ಅಂಬರ್, ಸೋನಾಲ್, ನವೀನ್ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜುರ್, ಸತೀಶ್ ಬಂದಲೆ ಮತ್ತಿತರರು.
ನಿರ್ದೇಶನ : ಸೂರಜ್ ಶೆಟ್ಟಿ
******
ಹಿಂದಿನ ಎಕ್ಕಸಕ್ಕದ ಯಶಸ್ಸಿನ ಹಿನ್ನಲೆಯಿಟ್ಟುಕೊಂಡು ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ತೆರೆಗೆ ಬಂದ ‘ಪಿಲಿಬೈಲ್ ಯಮುನಕ್ಕ’, ಹಳೇ ಮಲಯಾಳಂ ಚಿತ್ರಗಳ ತುಳುವೀಕರಣಕ್ಕೆ ಹೈರಾಣಾದ ಪ್ರೇಕ್ಷಕನಿಗೆ ಹೊಸತನದ ಫೀಲ್’ನೊಂದಿಗೆ ಮನೋರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ.
ಪಿಲಿಬೈಲು ಯಮುನಕ್ಕ ಎಂಬ ಗುತ್ತಿನ ಗತ್ತಿನ ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದ ಕತೆ ಹೊಸತನದ ಸ್ಪರ್ಶ ಹೊಂದಿದ್ದು ಎಲ್ಲಿಯೂ ಬೋರ್ ಹೊಡೆಸದೆ ನೋಡಿಸಿಕೊಂಡು ಸಾಗುತ್ತದೆ. ಚಿಕ್ಕಪುಟ್ಟ ಕಳ್ಳತನ ಮಾಡುತ್ತಾ ಗೆಳೆಯರ ಜತೆ ಬದುಕುವ ನಾಯಕನಿಗೆ ಪಿಲಿಬೈಲು ಯಮುನಕ್ಕನ ಮೊಮ್ಮಗಳ ಜತೆ ಪ್ರೇಮಾಂಕುರವಾಗುತ್ತದೆ. ಹಾಸ್ಯದ ಜತೆ ಜತೆಗೆ ಸಾಗುವ ಇವರ ಪ್ರೀತಿ ಮುಂದೆ ಯಮುನಕ್ಕನ ಅರಿವಿಗೆ ಬಂದು ಕತೆ ತಿರುವು ಪಡೆದುಕೊಳ್ಳುತ್ತದೆ. ಮುಂದೆ ಯಮುನಕ್ಕ ಯಾರು? ಆಕೆಯ ಹಿನ್ನೆಲೆಯೇನು ಎಂಬುದಕ್ಕೆ ಕ್ಲೈ ಮ್ಯಾಕ್ಸ್ ವರೆಗೆ ಕಾಯಬೇಕು.
ಚಿತ್ರದ ಆರಂಭ ಕೊಂಚ ನಿಧಾನ ಅನಿಸಿದರೂ ಮುಂದೆ ‘ಏರೆಗಾವುಯೇ ಕಿರಿ ಕಿರಿ’ ಹಾಡಿನ ನಂತರ ವೇಗ ಪಡೆದುಕೊಳ್ಳುತ್ತದೆ. ಚಿತ್ರದಲ್ಲಿ ಹಾಸ್ಯವೇ ನಾಯಕ ಎನ್ನಬಹುದು. ಪರಿಸ್ಥಿತಿಗೆ ತಕ್ಕಂತೆ ವೇಷ ಬದಲಾಯಿಸುವ ನವೀನ್ ಪಡೀಲ್, ಮಂಜು ರೈ , ನಾಯಕ ಅಂಬರ್ ಅವರದು ಒಂದು ತಂಡವಾದರೆ ಆಸ್ತಿ ಕಬಳಿಸಲು ವಿವಿಧ ಸರ್ಕಸ್ ಮಾಡುವ ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಸತೀಶ್ ಬಂದಲೆ ಇವರದ್ದು ಮತ್ತೊಂದು ತಂಡ. ಇವರ ಮಧ್ಯೆ ಚಿತ್ರದುದ್ದಕ್ಕೂ ವಿಸ್ಮಯ ಸೃಷ್ಟಿಸಿದ ವಿಸ್ಮಯ್ ವಿನಾಯಕ್ ಅವರ ಹಾಸ್ಯದ್ದು ಬೇರೆಯದೇ ತೂಕ. ರಂಗ್ ಚಿತ್ರದ ಬಳಿಕ ವಿನಾಯಕ್ ಅವರನ್ನು ಮಿಸ್ ಮಾಡಿಕೊಂಡವರಿಗೆ ಇಲ್ಲಿ ಪೂರ್ಣ ಪ್ರಮಾಣದ ಹಾಸ್ಯದೌತಣವಿದೆ. ಜತೆಗೆ ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಉಮೇಶ್ ಮಿಜಾರ್ ಚಿತ್ರದ ಕಳೆ ಹೆಚ್ಚಿಸಿದ್ದಾರೆ. ಬಾಹುಬಲಿ ಪ್ರಭಾಸ್ ರೀತಿಯಲ್ಲಿ ಎಂಟ್ರಿಯಾಗುವ ಅರವಿಂದ್ ಬೋಳಾರ್ ದೆವ್ವದ ಹಾಗು ನಾಗವಲ್ಲಿ ವೇಷಧಾರಿಯಾಗಿ ಬಿದ್ದು ಬಿದ್ದು ನಗುವಂತೆ ಮಾಡುತ್ತಾರೆ. ಸದಾ ಕುಡುಕನ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದ ಮಂಜು ರೈ ಇಲ್ಲಿ ಹಾಡಿನ ದೃಶ್ಯ ಒಂದನ್ನು ಹೊರತುಪಡಿಸಿ ಉಳಿದಂತೆ ಕುಡಿತದಿಂದ ಹೊರ ಬಂದು ಸ್ಟೈಲಿಶ್ ಆಗಿ ಕಾಣುತ್ತಾರೆ. ಇಡೀ ದಿನ ಕ್ಯಾಂಡಿ ಕ್ರಶ್ ಆಡುವ ಯುವ ಸಮುದಾಯಕ್ಕೆ ನಿರ್ದೇಶಕರು ಟಾಂಗ್ ಕೊಟ್ಟಿರುವ ರೀತಿ ನಗು ತರಿಸುತ್ತದೆ..
ಯಮುನಕ್ಕ ಪಾತ್ರಧಾರಿ ಚಂದ್ರಕಲಾ ಮೋಹನ್ ಬಗ್ಗೆ ಇಲ್ಲಿ ಹೇಳಲೇಬೇಕು.. ಚಂದ್ರಕಲಾ ಅವರನ್ನು ನೋಡಿ ಈ ಪಾತ್ರ ರಚಿಸಿದರೇ ಅನ್ನುವಷ್ಟರ ಮಟ್ಟಿಗೆ ಯಮುನಕ್ಕ ಪಾತ್ರದಲ್ಲಿ ತಲ್ಲೀನರಾಗಿ ನಟಿಸಿದ್ದಾರೆ. ನಟಿಸಿದ್ದಾರೆ ಅನ್ನುವುದಕ್ಕಿಂತ ಪಾತ್ರವೇ ಅವರಾಗಿದ್ದಾರೆ ಅನ್ನಬಹುದು. ಮುಖದಲ್ಲಿನ ಆ ದರ್ಪ, ಆ ಗತ್ತು, ಕಣ್ಣಲ್ಲೇ ಗದರುವ ರೀತಿ ಮನೋಜ್ಞ.
ನಾಯಕ ಪ್ರಥ್ವಿ ಅಂಬರ್ ‘ಬರ್ಕೆ’ ಚಿತ್ರದ ನಂತರ ದೊರೆತ ಅವಕಾಶವನ್ನು ಇಲ್ಲಿ ಪ್ರಾಮಾಣಿಕವಾಗಿ ಬಳಸಿಕೊಂಡಿದ್ದಾರೆ. ಅಭಿನಯ, ಡೈಲಾಗ್ ಡೆಲಿವರಿ, ನೃತ್ಯ, ಸಾಹಸ ಎಲ್ಲದರಲ್ಲೂ ವಾವ್ ಅನಿಸಿಕೊಳ್ಳುತ್ತಾರೆ. ನಾಯಕಿ ಸೋನಾಲ್ ತನ್ನ ಮುದ್ದಾದ ಅಭಿನಯ ಹಾಗು ನಗುವಿನಿಂದ ಮನಸಿಗೆ ಮತ್ತಷ್ಟು ಹತ್ತಿರವಾಗುತ್ತಾರೆ.
ತಾಂತ್ರಿಕ ವಿಭಾಗದಲ್ಲಿ ಛಾಯಾಗ್ರಹಣ, ಹಿನ್ನಲೆ ಸಂಗೀತ, ಕಲೆ ಹಾಗು ಬೆಳಕಿನ ನಿರ್ವಹಣೆ (ಲೈಟಿಂಗ್ಸ್) ಚಿತ್ರದ ಪ್ರಮುಖ ಹೈಲೈಟ್’ಗಳು. ಮೊದಲ ಬಾರಿ ಪೂರ್ಣ ಪ್ರಮಾಣದ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ ಕೀರ್ತನ್ ಪೂಜಾರಿಗೆ ಉತ್ತಮ ಭವಿಷ್ಯವಿದೆ.
ಒಟ್ಟಿನಲ್ಲಿ ನಿರ್ದೇಶಕರು ಚಿತ್ರವನ್ನು ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ರೀತಿಯಲ್ಲಿ ಉಣಬಡಿಸಿದ್ದಾರೆ. ಕೆಲವೆಡೆ ದೃಶ್ಯಗಳು ಅನಿರೀಕ್ಷಿತವಾಗಿ ಬಂದಂತೆ ಭಾಸವಾಗುವ ಕಾರಣ ಚಿತ್ರಕಥೆಯನ್ನು ಮತ್ತಷ್ಟು ಫೈನ್- ಟ್ಯೂನ್ ಮಾಡಬಹುದಿತ್ತು ಮತ್ತು ಕ್ಲೈ-ಮ್ಯಾಕ್ಸ್ ಅನ್ನು ಇನ್ನೂ ಉತ್ತಮ ರೀತಿಯಲ್ಲಿ ತರಬಹುದಿತ್ತು ಅನ್ನುವ ಕೆಲ ಚಿಕ್ಕ ಅಂಶಗಳನ್ನು ಬಿಟ್ಟರೆ ಚಿತ್ರದಲ್ಲಿ ನೋಟ್ ಮಾಡಿಕೊಳ್ಳುವಂತಹ ನ್ಯೂನತೆಗಳು ಕಂಡು ಬರುವುದಿಲ್ಲ. ಹಾಗಾಗಿ ಪಿಲಿಬಯ್ಲಿಗೆ ಹೋಗಲು ಅಡ್ಡಿಯೇನಿಲ್ಲ.
Facebook ಕಾಮೆಂಟ್ಸ್