“ಹಲೋ ಅನುಪಮವ್ರೇ..!!” ಧ್ವನಿಗೆ ತೂಕಡಿಸುತ್ತಿದ್ದವಳಿಗೆ ಎಚ್ಚರವಾಗಿತ್ತು..ಮನು ಮುಗುಳ್ನಗುತ್ತಾ ನೋಡುತ್ತಿದ್ದ..!! ವಾರ್ಡ್’ನಲ್ಲಿ ತೆರೆದಿಟ್ಟ ಕಿಟಿಕಿಯ ಮೂಲಕ ಹುಣ್ಣಿಮೆ ಚಂದ್ರನ ಬೆಳದಿಂಗಳು ಒಳಗೆ ತೂರಿ ಬರುತ್ತಿದ್ದವು..ತಣ್ಣಗೆ ಗಾಳಿ ಬೀಸುತ್ತಿದ್ದು ಮನಸ್ಸಿಗೆ ಏನೋ ಒಂಥರಾ ಖುಷಿ ನೀಡುತ್ತಿತ್ತು..”ಏನಾದರೂ ಬೇಕಿತ್ತಾ..?!” ಮುಗುಳ್ನಗುತ್ತಾ ಕೇಳಿದಳು..”ನೀರು ಬೇಕಿತ್ತು..ಅದಕ್ಕೆ ನಿಮ್ಮನ್ನು ಎಬ್ಬಿಸಿದೆ..ಸ್ಸಾರಿ..” “ಅಯ್ಯೋ..ಅದಕ್ಕೆಲ್ಲ ಯಾಕೆ ಸ್ಸಾರಿ ಕೇಳ್ತೀರಾ..ಇದು ನನ್ನ ಡ್ಯೂಟಿ ತಾನೇ..” ಎಂದವಳು ಕುಡಿಯಲು ನೀರು ತಂದು ಕೊಟ್ಟಳು..ನೀರು ಕುಡಿದವನು ಬೆಡ್’ಗೆ ಒರಗಿ ಕುಳಿತ..ಮೈ ಕೈ ನೋವು ಕಾಣಿಸಿ ನರಳಿದ..
“ಏನಾಯಿತು..?!” ಎಂದು ಗ್ಲಾಸನ್ನು ಟೇಬಲ್ ಮೇಲೆ ಇರಿಸಿದವಳು ಗಾಬರಿಯಿಂದ ಹತ್ತಿರ ಬಂದಳು..”ಮೈ ಕೈಯೆಲ್ಲ ವಿಪರೀತ ನೋವು..!! ಇದೆಲ್ಲ ಯಾವಾಗ ಗುಣವಾಗುತ್ತೋ..ನಾನಿನ್ನು ಯಾವಾಗ ಕೆಲಸಕ್ಕೆ ಜಾಯಿನ್ ಆಗ್ತೀನೋ..” ಎಂದುತ್ತರಿಸಿದ..ಅನುಪಮಳಿಗೆ ಅವನ ಸ್ಥತಿ ನೋಡಿ ಅಯ್ಯೋ ಅನಿಸಿತು..ಈಗಲೇ ಕೆಲಸಕ್ಕೆ ಹೋಗಲು ಎಷ್ಟೊಂದು ಹಂಬಲಿಸುತ್ತಿದ್ದಾರೆ..ಆದರೆ ಇನ್ನು ಮುಂದೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ ಎಂದು ತಿಳಿದರೆ ಹೇಗೆ ಸಹಿಸಿಯಾರು..?! ಅವಳಿಂದ ಅದನ್ನು ಊಹಿಸಿಕೊಳ್ಳಲು ಅಸಾಧ್ಯವೆನಿಸಿತು..!! ಈಗಲೇ ಸತ್ಯ ಹೇಳಿ ಬಿಡ್ಲಾ..?! “ಹಲೋ..ಏನಾಯಿತು..ಏನು ಯೋಚಿಸ್ತಿದ್ದೀರಾ..?!” ಅವಳ ಮೌನಕ್ಕೆ ಪ್ರಶ್ನಿಸಿದ..”ಅದು..ಅದು..” ಹೇಳಲಾಗದೆ ತಡವರಿಸಿದಳು ಅನುಪಮ..”ಹೇಳ್ರೀ..ಏನಾಯಿತೂಂತ..ಏನೀ ಪ್ರಾಬ್ಲಂ..?!” “ನಿಮಗೆ ಈ ಸತ್ಯವನ್ನು ಹೇಗೆ ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ..” “ಅದೇನು ಸತ್ಯಾಂತ ಬಾಯಿಯಿಂದಲೇ ಹೇಳ್ರೀ..!!” ಅವಳ ಚಡಪಡಿಕೆ ನೋಡಿ ತಮಾಷೆ ಮಾಡಿದ ಮನು..ಅವನ ಕಡೆ ಅನುಕಂಪದಿಂದ ನೋಡಿದವಳು ಸತ್ಯವನ್ನು ಒಂದೇ ಉಸಿರಿಗೆ ಒದರಿ ಬಿಟ್ಟಳು..”ಈ ವಿಷಯವನ್ನು ಡಾಕ್ಟರ್ ನಿಮಗೆ ಹೇಳಲಾಗದೆ ಒದ್ದಾಡುತ್ತಿದ್ದಾರೆ..ಅದೇನೂಂದ್ರೆ ನಿಮಗೆ..ನಿಮಗೆ ಇನ್ನು ಮುಂದೆ ನಡೆಯಲು ಸಾಧ್ಯವಿಲ್ಲವಂತೆ..!!” ಮನು ಶುಷ್ಕ ನಗೆ ಬೀರಿದ..”ಕಾಲುಗಳಿಗೆ ನೋವಿನ ಅನುಭವವಾಗದೆ ವಶವಿಲ್ಲದ ತರಹ ಇದ್ದಾಗಲೇ ಅಂದುಕೊಂಡೆ..ಹೀಗೇನಾದರೂ ಇರಬಹುದೆಂದು..ಆದರೂ ಸಣ್ಣ ಹೋಪ್ಸ್ ಇತ್ತು..ಇನ್ನು ಅದೂ ಇಲ್ಲದಾಯಿತು..”
” ಸ್ಸಾರೀ..ನಿಮಗೆ ನೋವುಂಟು ಮಾಡಬೇಕೆಂಬ ಉದ್ದೇಶದಿಂದ ಈ ಸುದ್ದಿ ತಿಳಿಸಲಿಲ್ಲ..!!” ಎಂದಳು ಬೇಸರದಿಂದ..”ಅದಕ್ಯಾಕೆ ನೀವು ಸ್ಸಾರಿ ಕೇಳ್ತಿದ್ದೀರಾ..ಇದರಲ್ಲಿ ನಿಮ್ಮ ತಪ್ಪು ಏನಿದೆ..?! ಎಲ್ಲ ವಿಧಿಬರಹ..!!” ಎಂದ ಸಮಾಧಾನವಾಗಿಯೇ ನುಡಿದ..ಇದಾದ ಮೇಲೆ ಮನು ಮತ್ತು ಅನುಪಮ ಇನ್ನಷ್ಟು ಹತ್ತಿರವಾದರು..ದಿನಾ ಬರುವಳು..ಅವನ ಕಷ್ಟ ಕೆಲಸಗಳಿಗೆ ತಾನೇ ಹೆಲ್ಪ್ ಮಾಡುವಳು..ಹರಟೆ ತಮಾಷೆಗಳು..ಇನ್ನೂ ಜಾಸ್ತಿಯಾದುವು..ಸಮಯದ ಅರಿವೆಯೇ ತಿಳಿಯುತ್ತಿರಲಿಲ್ಲ..ಇಬ್ಬರಿಗೂ ಜೀವನದಲ್ಲಿ ಹೊಸ ಉತ್ಸಾಹ ಮೂಡಿತ್ತು..ಅನುಪಮ ತನಗೆ ಹತಿರವಾಗ್ತಿದ್ದಾಳೆಂದು ಅನಿಸಿದ ಮನುವಿಗೆ ಅವಳಿಂದ ಆದಷ್ಟು ದೂರವಿರಲು ಪ್ರಯತ್ನಿಸಿದರೂ ಆಗಲಿಲ್ಲ..ಮನಸ್ಸು ಮತ್ತೆ ಮತ್ತೆ ಅವಳತ್ತ ಸೆಳೆಯುವಂತೆ ಮಾಡಿತ್ತು….ದಿನಾ ವೀಲ್ ಚೇರಲ್ಲಿ ಕುಳ್ಳಿರಿಸಿ ಹೊರಗೆಲ್ಲ ಸುತ್ತಾಡಿಸುವಳು..ಇದು ಅವನಿಗೆ ಖುಷಿ ನೀಡುತ್ತಿತ್ತು..ಕೆಲವೇ ದಿನಗಳಲ್ಲಿ ಮನು ಅನುಪಮ ಮತ್ತಷ್ಟು ಹತ್ತಿರವಾದರು..ಕೆಲವು ದಿನಗಳು ಕಳೆದವು..
ಅಂದು ಬೆಳಗಿನ ಹೊತ್ತು..ಸೂರ್ಯನಿಗೆ ಹೆದರಿ ಅಂಧಕಾರ ಓಡಿ ಹೋಗಿತ್ತು..ಹೊರಗಿನಿಂದ ಹಕ್ಕಿಗಳ ಮಧುರ ಕಲರವದ ಜೊತೆಗೆ ಕಾಗೆಗಳ ಕರ್ಕಶ ಧ್ವನಿಯೂ ಕೇಳಿಸುತ್ತಿತ್ತು..ಆಸ್ಪತ್ರೆಯಲ್ಲಿ ಡಾಕ್ಟರ್,ನರ್ಸ್’ಗಳು,ರೋಗಿಗಳ ಬಂಧು ಮಿತ್ರರ ಓಡಾಟ ಜೋರಾಗಿಯೇ ಇತ್ತು..ಅನುಪಮ ವೇಗವಾಗಿ ಮನುವಿದ್ದ ವಾರ್ಡ್’ನತ್ತ ಹೆಜ್ಜೆ ಹಾಕುತ್ತಿದ್ದವಳು ಇದ್ದಕ್ಕಿದ್ದಂತೆ ರಿಸೆಪ್ಷನ್ ಕಡೆಗೆ ನೋಡಿದವಳು ಬೆಚ್ಚಿ ಬಿದ್ದಳು..ಸಮೀರ್..!! ರಿಸೆಪ್ಷನಿಸ್ಟ್’ನೊಡನೆ ಮಾತನಾಡುತ್ತಿರುವುದು ಕಾಣಿಸಿತ್ತು..ಹೆದರಿಕೆಯಿಂದ ಕೈ ಕಾಲುಗಳಲ್ಲಿ ನಡುಕ ಶುರುವಾಗಿತ್ತು..!! ಇಲ್ಲ..ಅವನ ಕಣ್ಣಿಗೆ ಬೀಳಬಾರದು..ಅಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಎರಡು ಹೆಜ್ಜೆ ಹಿಂದಿರಿಸಿದವಳು ತಿರುಗಿ ಕಾಲಿಗೆ ಬುದ್ಧಿ ಹೇಳಿದಳು..ಎದುರು ಬಂದವರನ್ನು ತಳ್ಳುತ್ತಾ ಕಾರಿಡಾರಿನ ಕೊನೆಗೆ ಬಂದು ನಿಂತು ತಿರುಗಿ ನೋಡಿದಳು..ಸಮೀರ್ ಕಾಣಿಸಲಿಲ್ಲ..!! ಅವನು ತನ್ನ ನೋಡಿಲ್ಲವೆಂದು ಸಮಾಧಾನದ ನಿಟ್ಟುಸಿರು ಬಿಟ್ಟಳು..
ಆದರೆ ಹತ್ತಿರದಲ್ಲಿ ಕೇಳಿಸಿತ್ತು ಪರಿಚಯದ ಗಡುಸು ಧ್ವನಿ..!! “ಅನುಪಮ..” ನೋಡಿದರೆ ಎದುರು ಸಮೀರ್ ಹಲ್ಲು ಗಿಂಜುತ್ತಾ ನಿಂತಿದ್ದ..!! ಅವಳ ಎದೆ ಧಸಕ್ಕೆಂದಿತ್ತು..!! ಹೆದರಿಕೆಯಿಂದ ಕೈ ಕಾಲುಗಳು ನಡುಗತೊಡಗಿದವು..ಕಿರುಚಲು ಬಾಯಿ ತೆರೆದರೂ ಗಂಟಲಿನಿಂದ ಧ್ವನಿ ಹೊರ ಬರಲಿಲ್ಲ..”ನೀನು ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನುಪಮ..ನಾನು ನಿನಗೆ ಆವತ್ತೇ ಹೇಳಿದ್ದೆ..ಎಲ್ಲಿ ಹೋದ್ರೂ ನಿನ್ನ ಕಂಡು ಹಿಡಿಯುವೆ ಅಂತ..ಈಗ ತಿಳಿಯಿತಾ..?!” ವಿಚಿತ್ರವಾಗಿ ನಕ್ಕ..”ನನ್ನ ಬಿಟ್ಬಿಡು..ಪ್ಲೀಸ್..” ಎಂದರೂ ಸ್ವರ ಹೊರ ಬರದೆ ಮುಖದಲ್ಲಿ ಪ್ರಕಟಗೊಂಡಿತ್ತು….ಅವಳ ಕೈ ಹಿಡಿದು ಎಳೆದು ಕರೆದುಕೊಂಡು ಹೋಗಲು ಮುಂದಾದ..ಏಯ್..ನನ್ನ ಕೈ ಬಿಡು..” ಎಂದು ಕಿರುಚಿದವಳು ಸಮೀರ್’ನ ಬಲಿಷ್ಠ ಹಸ್ತಗಳಿಂದ ತಪ್ಪಿಸಲು ಹೆಣಗಾಡಿದಳು..ಕೊನೆಗೆ ಅವನ ಕೈ ಕಚ್ಚಿದಳು..”ಅಮ್ಮಾ..” ಎಂದವ ಅವಳ ಕೈಯನ್ನು ಬಿಟ್ಟ..ಅದೇ ಕ್ಷಣ ಅನುಪಮ ಅಲ್ಲಿಂದ ತಪ್ಪಿಸಿಕೊಂಡು ಓಡಿದಳು..ಅವನು ಹಿಂಬಾಲಿಸಿಕೊಂಡು ಅವಳನ್ನು ಹಿಂಬಾಲಿಸಿಕೊಂಡು ಬಂದ..ಓಡುತ್ತ ಹೋದವಳು ಮನುವಿದ್ದ ವಾರ್ಡ್ ಹೊಕ್ಕಳು..ಅವಳ ಗಾಬರಿಯನ್ನು ಕಂಡ ಮನು “ಏನಾಯಿತು..?!” ಎಂದು ಅಚ್ಚರಿಯಿಂದ ಪ್ರಶ್ನಿಸಿದ..ಏನೂ ಮಾತನಾಡದೆ ಅವನಿದ್ದ ಬೆಡ್’ನ ಹಿಂಬದಿ ಅಡಗಿ ಕುಳಿತಳು..ಮನು ಗಾಬರಿಗೊಂಡು ಬಾಗಿಲ ಕಡೆ ನೋಡಿ ಅವಳನ್ನು ಮೆಲು ದನಿಯಲ್ಲಿ ಕೇಳಿದ..”ಏನಾಯಿತು..ಯಾಕೆ ಹೀಗೆ ಓಡಿ ಬಂದಿದ್ದೀರಾ..?!” ಅದಕ್ಕವಳು ಪಿಸು ದನಿಯಲ್ಲಿ ನುಡಿದಳು..”ಸಮೀರ್ ಇಲ್ಲಿಗೂ ಬಂದ..” ಅವಳ ದನಿಯಲ್ಲಿ ನಡುಕವಿತ್ತು..ಕಣ್ಣುಗಳು ಭಯದಿಂದ ಪದೇ ಪದೇ ಬಾಗಿಲತ್ತ ನೋಡುತ್ತಿದ್ದವು..”ಯಾರು..ಸಮೀರ..” ಎಂದು ಪ್ರಶ್ನಿಸಿದವ “ಓ..ನಿಮ್ಮ ಮಾಜಿ ಲವ್ವರ್..” ನೆನಪಿಸಿಕೊಂಡವ ಹೇಳಿದ..ಅನುಪಮ ಅವನ ಕಡೆ ದುರುಗುಟ್ಟಿ ನೋಡಿದಳು..!! “ಅಯ್ಯೋ ಯಾಕೆ ಹಾಗೆ ನೋಡ್ತಿದ್ದೀರಾ..?! ನಾನು ಇರುವ ವಿಷಯ ತಾನೇ ಹೇಳಿದೆ..?!” ಎಂದ ತಮಾಷೆಯಿಂದ..”ಅಲ್ಲ..ನಾನು ಇಲ್ಲಿ ಹೆದರಿಕೆಯಿಂದ ಸಾಯ್ತಿದ್ದರೆ ನಿಮಗೆ ತಮಾಷೆನಾ..?!” ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು..ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಿರಬೇಕಾದೆ ಬಾಗಿಲ ಬಳಿ ಸದ್ದು ಕೇಳಿಸಿ ಅತ್ತ ನೋಡಿದ..!! ವಾರ್ಡ್’ನಲ್ಲಿ ಬೆಳಗಿದ್ದ ಟ್ಯೂಬ್ಲೈಟ್ ಬೆಳಕಲ್ಲಿ ಅವನ ಕಣ್ಣಿಗೆ ಒಬ್ಬ ಸುಮಾರು ಆರಡಿ ಎತ್ತರದ ಆಜಾನುಬಾಹು ಸುಂದರ ಯುವಕ ಕಾಣಿಸಿದ..ಸಮೀರ್ ಒಳಗೆ ಹೆಜ್ಜೆಯಿಟ್ಟ..!! ಟಕ್ ಟಕ್..!! ಅವನ ಬೂಟಿನ ಸದ್ದು ಆ ಕೋಣೆಯಲ್ಲಿನ ನಿಶ್ಶಬ್ಧ ವಾತಾವರಣದಲ್ಲಿ ಕಿವಿಗೆ ಸ್ಪಷ್ಟವಾಗಿ ಕೇಳಿಸಿತ್ತು..ಅನುಪಮ ಹೆದರಿಕೆಯಿಂದ ಇನ್ನೂ ಹಿಂದಕ್ಕೆ ಸರಿದು ಕುಳಿತುಕೊಂಡಳು..ಮನು ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೆ ಬಿದ್ದ..ಏನು ಮಾಡುವುದು ಈಗ..?!
ಅನುಮಪಳನ್ನು ಕಾಪಾಡುವುದು ಹೇಗೆ..?! ತನ್ನ ಸೆಕ್ಯೂರಿಟಿಗೋಸ್ಕರ ನೇಮಿಸಲ್ಪಟ್ಟ ಪೋಲಿಸರೆಲ್ಲಿ..ಅವರೂ ಕಾಣಿಸ್ತಿಲ್ಲ..?! ಛೆ! ಕಷ್ಟಕ್ಕೆ ಸಿಲುಕಿಕೊಂಡೆನಲ್ಲಾ..ಕೈ ಕೈ ಹಿಸುಕಿಕೊಂಡ.. “ಅನುಪಮ ಎಲ್ಲಿ..?!” ನೇರವಾಗಿ ತನ್ನ ಕೀರಲು ಧ್ವನಿಯಲ್ಲಿ ಪ್ರಶ್ನಿಸಿದ ಸಮೀರ್..”ಇಲ್ಲಿ ಯಾರೂ ಇಲ್ಲ..” ಮನು ಕೂಲಾಗಿ ಉತ್ತರಿಸಿದ..”ಸುಳ್ಯಾಕೆ ಹೇಳ್ತಿಯಾ..?!” ಎಂದ ಸಮೀರ್ ಬೆಡ್ ಸಮೀಪ ಬಂದವ ಸುತ್ತಲೂ ಕಣ್ಣಾಡಿಸಿದ..ಅದೇ ಅವನು ಮಾಡಿದ ತಪ್ಪು..!! ಮನುವಿನ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಿದ್ದ..!! ಕುಳಿತಲ್ಲಿಂದ ಮುಂದಕ್ಕೆ ಬಗ್ಗಿದ ಮನು ಸಮೀರ್ನ ಕಾಲುಗಳನ್ನು ಹಿಡಿದು ಎಳೆದ..ಅದನ್ನು ನಿರೀಕ್ಷಿಸದ ಸಮೀರ್ ಆಯ ತಪ್ಪಿ ಬಿದ್ದು ಬಿಟ್ಟ..ಕ್ಷಣಾರ್ಧದಲ್ಲಿ ನಡೆದು ಹೋಗಿತ್ತು ಈ ಘಟನೆ..!! ಮೈ ಕೈಯೆಲ್ಲ ನೋವಿದ್ದರೂ ಲೆಕ್ಕಿಸದೆ ಸಮೀರ್ ಮೇಲೆ ಬಿದ್ದು ಮೇಲೇಳದಂತೆ ಹೊಡೆದ ಮನು..”ಅನುಪಮವ್ರೇ ಕೈಗಳನ್ನು ಹಿಡಿದುಕೊಳ್ಳಿ..” ಎಂದು ಏನಾಯಿತೆಂದು ತಿಳಿಯದೆ ಕಕ್ಕಾಬಿಕ್ಕಿಯಾಗಿಯೇ ಕುಳಿತಿದ್ದವಳಿಗೆ ಎಚ್ಚರಿಸಿದ..ಅನುಪಮ ಕುಳಿತಲ್ಲಿಂದ ಎದ್ದವಳು ಓಡಿ ಹೋಗಿ ಸಮೀರ್’ನ ಕೈಗಳನ್ನು ಹಿಡಿದುಕೊಂಡಳು..ಆಗಲೇ ಹೊರಗಿನಿಂದ ಪೋಲೀಸರು ಓಡುತ್ತಾ ಬಂದವರಿಗೆ ಒಳಗಿನ ಪರಿಸ್ಥಿತಿ ಅರ್ಥವಾಗಿತ್ತು..!!
ಸಮೀರನನ್ನು ಹಿಡಿದು ತಪ್ಪಿಸಿಕೊಂಡು ಹೋಗದಂತೆ ಬಂಧಿಸಿದರು..”ನನ್ನ ಬಿಡಿ..ಇವಳು ನನ್ನ ಹೆಂಡ್ತಿ..ಅವಳನ್ನು ಕರೆದುಕೊಂಡು ಹೋಗುವುದು ತಪ್ಪೇ..” ಎಂದು ಎಲ್ಲರೆದುರು ಸುಳ್ಳು ಹೇಳಿ ತನ್ನನ್ನು ಸಮರ್ಥಿಸಿ ಅಲ್ಲಿಂದ ಎಸ್ಕೇಪ್ ಆಗಲು ನೋಡಿದ..ಆದರೆ ಆಗಲೇ ಆಸ್ಪತ್ರೆಯ ಸಿಬ್ಬಂದಿ ವರ್ಗ,ಡಾಕ್ಟರ್,ನರ್ಸ್’ಗಳು, ಇನ್ನೂ ಅನೇಕರು ಅಲ್ಲಿ ಜಮಾಯಿಸಿದ್ದರು..ಹಾಗಾಗಿ ತಪ್ಪಿಸಿಕೊಳ್ಳಲಾಗಲಿಲ್ಲ..ಪೋಲೀಸರು ಬಂದವರು ಅರೆಸ್ಟ್ ಮಾಡಿ ಹೊರಗೆ ಎಳೆದುಕೊಂಡು ಹೋದರು..ಸಮೀರ್’ನನ್ನು ವಿಚಾರಣೆಗೆ ಒಳ ಪಡಿಸಿದರು..!! ಮೊದಲು ಬಾಯಿ ಬಿಡದಿದ್ದರೂ ಕೊನೆಗೆ ಪೋಲೀಸರ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಸಹಿಸಲಾಗದೆ ಎಲ್ಲವನ್ನೂ ಹೇಳಲೇಬೇಕಾಯಿತು..ಅವನ ಮೂಲಕ ಮುಗ್ಧ ಹುಡುಗಿಯರನ್ನು ಆಕರ್ಷಿಸಿ ಪ್ರೀತಿ ಮಾಡುವ ನಾಟಕವಾಡಿ ಅವರನ್ನು ದೊಡ್ಡ ಮೊತ್ತಕ್ಕೆ ಮಾರುವ ಧಂಧೆ ಬೆಳಕಿಗೆ ಬಂತು..!! ಅದರ ಅಡ್ಡಕ್ಕೆ ಪೋಲೀಸರು ಅಟ್ಯಾಕ್ ಮಾಡಿದರು..ಇನ್ನು ಹಲವರು ಸಿಕ್ಕಿ ಬಿದ್ದರು..!! ಅಲ್ಲಿ ಸಿಲುಕಿಕೊಂಡಿದ್ದ ಹಲವು ಹುಡುಗಿಯರನ್ನು ರಕ್ಷಿಸಲಾಯಿತು..!! ಅನುಪಮ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಳು..!! ಮನುವಿಗೂ ಅಪಾಯದಿಂದ ಅವಳು ಪಾರಾಗಿದ್ದು ಸಮಾಧಾನ ತಂದಿತ್ತು..”ಥಾಂಕ್ಯೂ ನನ್ನ ಕಾಪಾಡಿದ್ದಕ್ಕೆ..” ಎಂದಳು ಅನುಪಮ..ಅದಕ್ಕವನು ಅವಳ ಕಡೆ ನೋಡಿ ಕಣ್ಣು ಹೊಡೆದು ಹೇಳಿದ..”ಬರೇ ಥಾಂಕ್ಸ್ ಮಾತ್ರಾನಾ..?!” “ಮತ್ತೇನು..?!” ಎನ್ನುತ್ತಿದ್ದಂತೆ ನೆನಪಾಗಿತ್ತು ಅವಳಿಗೆ..”ಈ ಗಡಿಬಿಡಿಯಲ್ಲಿ ನಿಮಗೆ ಒಂದು ಶುಭ ಸುದ್ಧಿ ಹೇಳುವುದನ್ನು ಮರೆತೆ..” ಎಂದಳು..”ಏನು ಶುಭ ಸುದ್ಧಿನಾ..?!..ನನ್ನ ಕಾಲುಗಳು ಸರಿಯಾಗುತ್ತಾ ಹೇಗೆ..?!” ನಗುತ್ತಾ ಕೇಳಿದ..”ಅದಲ್ಲ..” ಎಂದವಳು ತನ್ನ ಮೊಬೈಲ್ ಫೋನ್ ತೆಗೆದು ಬಂದಂತಹ ನ್ಯೂಸೊಂದನ್ನು ತೋರಿಸಿದಳು..”ಕಾಶ್ಮೀರ ದಾಳಿಗೆ ಪ್ರತಿರೋಧವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಯ ಮೇಲೆ ಭಾರತೀಯ ಸೇನೆಯ ಸರ್ಜಿಕಲ್ ದಾಳಿ..!! ನಲವತ್ತರ ಮೇಲೆ ಉಗ್ರರ ಮಾರಣಹೋಮ..!!”
ತಾನೇ ಯುದ್ಧ ಮಾಡಿ ಗೆದ್ದ ಮೇಲೆ ಉಂಟಾಗುವ ಸಂಭ್ರಮ,ಸಂತಸ ಉಂಟಾಗಿತ್ತು ಮನುನಿಗೆ..ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದರೆ ಈ ತರಹದ ಸರ್ಜಿಕಲ್ ದಾಳಿಯ ಅಗತ್ಯವಿತ್ತು..!! ಅದು ಈಗ ನಡೆದಿದೆ..!! ತನ್ನೊಂದಿಗಿದ್ದ ಹುತಾತ್ಮರಾದ ರವಿರಾಜ್ ಮತ್ತು ಇತರ ಸಹೋದ್ಯೋಗಿಗಳ ಆತ್ಮಕ್ಕೆ ಈವತ್ತು ಶಾಂತಿ ದೊರೆತಿರಬಹುದು..!! ಮನಸ್ಸಿಗೆ ಖುಷಿಯೆನಿಸಿತು..”ಸರ್ಜಿಕಲ್ ದಾಳಿ ಅಂದರೆ ಏನು..?! ಹೇಗೆ ನಡೆಸ್ತಾರೆ..?!” ಕುತೂಹಲದಿಂದ ಪ್ರಶ್ನಸಿದಳು ಅನುಪಮ..ಅದಕ್ಕವನು ಉತ್ತರಿಸಿದ..”ಮೊದಲೇ ಪ್ಲಾನ್ ಮಾಡಿ ಸುತ್ತ ಮುತ್ತಲ ಪ್ರದೇಶಗಳಿಗೆ ಅಲ್ಲಿನ ನಾಗರಿಕರಿಗೆ ತಿಳಿಯದಂತೆ ಅವಕ್ಕೆ ಸ್ವಲ್ಪವೂ ಹಾನಿಯಾಗದಂತೆ ನಿರ್ದಿಷ್ಟ ಗುರಿ ಹೊಂದಿದ ಪ್ರದೇಶದ ಮೇಲೆ ಅವರಿಗೂ ತಿಳಿಯದಂತೆ ನಡೆಸುವ ದಾಳಿ ಸರ್ಜಿಕಲ್ ದಾಳಿ..!!” “ಆ ಸಮಯದಲ್ಲಿ ನಾನು ಅಲ್ಲಿ ಇರಬೇಕಿತ್ತು..ಮಿಸ್ ಮಾಡ್ಕೊಂಡೆ..” ಎಂದವನ ಮಾತಲ್ಲಿ ಬೇಸರದ
ಛಾಯೆ ಕಾಣಿಸಿತ್ತು..”ಪರವಾಗಿಲ್ಲ..ಬಿಡಿ..ಇಂತಹ ಒಳ್ಳೆಯ ಸುದ್ಧಿ ಹೇಳಿದ್ದಕ್ಕೆ..ಥಾಂಕ್ಯೂ ಅನುಪಮವ್ರೇ..” ಎಂದು ಉಂಟಾದ ಬೇಸರವನ್ನು ಮರೆ ಮಾಚಿದ..ಅವಳು ಹೂ ನಗೆ ಚೆಲ್ಲಿದಳು..”ನಿಮ್ಮ ಈ ನಗುವೇ ನನ್ನಲ್ಲಿ ಹೊಸ ಚೈತನ್ಯವನ್ನುಂಟು ಮಾಡುತ್ತಿದೆ..ಇನ್ನೂ ಬದುಕಿನ ಮೇಲೆ ಆಸೆ ಹುಟ್ಟುವಂತೆ ಮಾಡುತ್ತಿದೆ..” “ನನ್ನ ಅಷ್ಟು ಲವ್ ಮಾಡ್ತೀರಾ..?!” “ಅದು..ಅದು” “ನನಗೆ ಗೊತ್ತು ನೀವು ನನ್ನ ಎಷ್ಟು ಇಷ್ಟ ಪಡ್ತಿದ್ದೀರಾ ಅಂತ..ನಂಗೂ ನೀವೆಂದರೆ ಇಷ್ಟಾನೇ..” ಎನ್ನುವಾಗ ಅವಳ ಗುಲಾಬಿ ಕೆನ್ನೆಗಳು ನಾಚಿಕೆಯಿಂದ ಅರಳಿದವು..”ಅಲ್ಲ..ಅದೂ ನನ್ನ ಸ್ಥಿತಿ ನಿಮಗೆ ಗೊತ್ತು ತಾನೇ..ಆದರೂ..” ಅವನ ಮಾತನ್ನು ಅರ್ಧದಲ್ಲೇ ತಡೆದವಳು, “ಯಾಕೆ ನಿಮಗೇನಾಗಿದೆ..?! ಕಾಲಿನ ವಿಷಯ ಬಿಟ್ಟರೆ ಚೆನ್ನಾಗಿದ್ದೀರಲ್ಲಾ..” “ಅಲ್ಲ ನನ್ನಿಂದ ನಿಮಗೆಷ್ಟು ತೊಂದರೆ..?! ಇದೆಲ್ಲ ಬೇಕಾ..?!” ಎಂದವನ ಧ್ವನಿಯಲ್ಲಿ ನೋವು ತುಂಬಿತ್ತು..”ಏನು ತೊಂದರೆ ಬಂತು..ಮದುವೆಯಾದ ಮೇಲೆ ಎಲ್ಲಿಯಾದರೂ ಈ ರೀತಿ ಆಗಿದ್ರೆ..ಆಗಲೂ ಇದೇ ಮಾತು ಬರುತ್ತಿತ್ತಾ..ಇಲ್ಲ ತಾನೆ..ಈಗಲೂ ಅಷ್ಟೇ..ನೀವು ಹೇಗಿದ್ದರೂ ನನಗೆ ಇಷ್ಟಾನೇ..ಐ ಲವ್ ಯೂ..” ಎಂದ ಅನುಪಮಳ ಕಂಗಳಲ್ಲಿ ಮಿಂಚು..!! “” ಮನು ಅವಳ ನುಣುಪಾದ ಅಂಗೈಯನ್ನು ತೆಗೆದುಕೊಂಡವ ತನ್ನ ತುಟಿಗೊತ್ತಿಗೊಂಡ..ಅನುಪಮಳ ಮುಖ ಲಜ್ಜೆಯಿಂದ ಅರಳಿದ ಕೆಂದಾವರೆಯಾದರೆ ಕಣ್ರೆಪ್ಪೆಗಳು ಆ ಹಿತವಾದ ಚುಂಬನಕ್ಕೆ ಪುಳಕಿತಗೊಂಡಂತೆ ತನ್ನಿಂತಾನೇ ಮುಚ್ಚಿಕೊಂಡವು..ಈ ಸುಂದರ ಜೋಡಿಯನ್ನು ತದೇಕ ದೃಷ್ಟಿಯಿಂದ ಆಸ್ಪತ್ರೆಯ ಕಿಟಿಕಿಯ ಮೂಲಕ ನೋಡುತ್ತಾ ಮೈಮರೆತಿದ್ದ ಸೂರ್ಯನಿಗೆ ಮೋಡಗಳು ಅಡ್ಡ ಬಂದು ತೊಂದರೆ ನೀಡಿದುವು..ಬೇಸರದಿಂದಲೇ ಮರೆಯಾದ..!!
***********************************************
“ಸಾರ್..ಎಲ್ಲಿದ್ದೀರಾ..?! ನಾನು ಹೇಳಿದ್ದು ಕೇಳಿಸ್ತಾ..?!” ಎಂದು ಇಂಚರಳ ಸ್ವರಕ್ಕೆ ಹಳೆಯ ನೆನಪುಗಳ ಜೊತೆ ಸಾಗಿದವನು ಹಿಂತಿರುಗಿ ಬಂದ..”ಏನು ಹೇಳಿದ್ರಿ..?!” ಕೇಳಿದ..ಇಂಚರ “ಜೊತೆ ಜೊತೆಯಲಿ..” ಎನ್ನುತ್ತಿರಬೇಕಾದರೆ ಅಲ್ಲಿ ಬಳೆಗಳ ಸದ್ದು ಕೇಳಿಸಿದಂತಾಗಿ ಇಬ್ಬರೂ ನೋಡಿದರು..ಕೃಷ್ಣ ವರ್ಣದ ಚೆಲುವೆ..!! ಅವಳುಟ್ಟಿದ್ದ ನಸು ನೀಲಿ ಬಣ್ಣದ ಸೀರೆ,ಅದಕ್ಕೆ ಇನ್ನೂ ಅಂದ ಕೊಡಲು ಸಕತ್ ಮ್ಯಾಚಿಂಗ್ ನೀಲಿ ಬಣ್ಣದ ರವಿಕೆ..!! ಕೊರಳಲ್ಲಿ ಹೊರಗೆ ಎದ್ದು ಕಾಣುತ್ತಿರುವ ಮಾಂಗಲ್ಯ..!! ಹಣೆಯಲ್ಲಿನ ಕುಂಕುಮ..ಕಿವಿಗಳಲ್ಲಿ ಓಲಾಡುತ್ತಿರುವ ಚಿನ್ನದ ಕಿವಿಯೋಲೆ..ಮೂಗಲ್ಲಿನ ಚಿಕ್ಕ ಮೂಗುತ್ತಿ..ಕೈಗಳಲ್ಲಿನ ಗಾಜಿನ ಬಳೆಗಳು..ಎಲ್ಲವೂ ಅವಳ ಅಂದವನ್ನು ಇನ್ನೂ ಹೆಚ್ಚುವಂತೆ ಮಾಡಿತ್ತು..ಅವಳ ಕಡೆ ನೋಡಿದವನು ನಸು ನಕ್ಕ..
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಮನುವಿಗೆ ಮೇಜರ್ ಶಿವರಾಂ ಜೀವನಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದರು..ಮನೆ ಬಿಟ್ಟ ಮೇಲೆ ಮೊದಲ ಬಾರಿಗೆ ಮನುವಿನ ಆಸೆಯ ಮೇರೆಗೆ ತನ್ನ ತವರು ಮನೆಗೆ ಬಂದಿದ್ದಳು ಅನುಪಮ..ಅವಳ ನೆನಪಲ್ಲೇ ಹಾಸಿಗೆ ಹಿಡಿದಿದ್ದ ಅಮ್ಮ..!! ಸದಾ ಲವಲವಿಕೆಯಿಂದ ಗಟ್ಟಿಮುಟ್ಟಾಗಿ ಇದ್ದ ಅಪ್ಪನನ್ನೇ ಗುರುತಿಸಲೇ ಅವಳಿಗೆ ಕಷ್ಟವಾಗಿತ್ತು..ಅಷ್ಟು ನೋವಿನಿಂದ ಇಳಿದು ಹೋಗಿದ್ದರು..!! ಅಣ್ಣನಂತೂ ಜೀವನದಲ್ಲಿ ಉತ್ಸಾಹನೇ ಇಲ್ಲದಂತಿದ್ದ..!! ಇದನ್ನೆಲ್ಲ ನೋಡಿದ ಅವಳ ಕರುಳು ಚುರುಕ್ಕೆಂದಿತ್ತು..ತನ್ನನ್ನು ಹೆತ್ತು ಹೊತ್ತು ಸಾಕಿ ಸಲಹಿದವರಿಗೆ ತಾನು ಎಂತಹ ನೋವು ಕೊಟ್ಟೆ..!! ಅವರ ಫನತೆ ಗೌರವ ಎಲ್ಲವನ್ನೂ ಮಣ್ಣು ಮಾಡಿ ಬಿಟ್ಟೆನಲ್ಲಾ..!! ತಾನು ಎಂತಹ ತಪ್ಪು ಮಾಡಿದೆ ಎಂದು ಈಗ ಅರ್ಥವಾಗಿದೆ..!! ಕಂಗಳಲ್ಲಿ ಕಂಡೂ ಕಾಣದಂತೆ ಇಣುಕಿತ್ತು ಕಣ್ಣೀರು..!! ಅದನ್ನು ಅವರಾರಿಗೂ ಕಾಣಿಸದಂತೆ ಒರಸಿಕೊಳ್ಳುತ್ತಾ ಮುಖದಲ್ಲಿ ನಗು ತಂದುಕೊಂಡಿದ್ದಳು..ಅನುಪಮ ವಾಪಾಸು ಬಂದಿದ್ದು ಅಪ್ಪ,ಅಮ್ಮ,ಅಣ್ಣ ಎಲ್ಲರಿಗೂ ಖುಷಿ ತಂದಿತ್ತು..ಎಲ್ಲರೊಡನೆ ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿದಳು..ಎಲ್ಲವೂ ಸುಖಾಂತ್ಯವಾಗಿತ್ತು..ಅವಳು ಮೊದಲು ಇರಬೇಕಾದರೆ ಇದ್ದ ಸಂತಸದ ವಾತಾವರಣ ಪುನಃ ಉಂಟಾಗಿತ್ತು..ಮನುವನ್ನು ಮನೆವರಿಗೆಲ್ಲರಿಗೂ ಪರಿಚಯಿಸಿದ್ದಳು..ಅವರು ಅವನನ್ನು ನೋಡಿ ಖುಷಿ ಪಟ್ಟರು..ಕೆಲವು ತಿಂಗಳುಗಳಲ್ಲಿ ಮನು ಮತ್ತು ಅನುಪಮಳ ಮದುವೆ ಸರಳವಾಗಿ ನಡೆದಿತ್ತು..ಮೇಜರ್ ಶಿವರಾಂ ಮತ್ತು ಇನ್ನು ಕೆಲವು ಉನ್ನತಾಧಿಕಾರಿಗಳು,ಡಾಕ್ಟರ್ ಸುಧಾಕರ್ ಶೆಟ್ಟಿ,ಆಸ್ಪತ್ರೆಯ ಉಳಿದ ಡಾಕ್ಟರ್ ನರ್ಸ್,ಇನ್ನಿತರ ಸಿಬ್ಬಂದಿಗಳು ಈ ಮದುವೆಗೆ ಬಂದು ಹರಸಿದ್ದರು..ಅನುಪಮಳ ಅಪ್ಪ,ಅಮ್ಮ ಮತ್ತು ಅಣ್ಣನ ಒತ್ತಾಯದ ಮೇರೆಗೆ ಅಲ್ಲಿಯೇ ಉಳಿದುಕೊಂಡಿದ್ದರು..
“ರೀ ಇವಳ್ಯಾರು..?!” ಎಂದವಳ ಧ್ವನಿ ಏರಿತ್ತು..”ಅನುಪಮ..ಇವಳು ನನ್ನ ಅಭಿಮಾನಿ..ಇಂಚರ ಅಂತ..ನನ್ನ ಎಲ್ಲ ಸ್ಟೋರಿ, ನಾವೆಲ್’ಗಳನ್ನು ಓದಿದ್ದಾಳಂತೆ” ಎಂದು ಹೆಮ್ಮೆಯಿಂದ ಹೇಳಿದ ಮನು..ಇಂಚರ ಅಚ್ಚರಿಯಿಂದ ಅನುಪಮಳ ಕಡೆ ನೋಡಿದಳು “ಇಂಚರ ಇವರು ನನ್ನ ಧರ್ಮಪತ್ನಿ ಅನುಪಮ..” ಎಂದು ಪರಿಚಯ ಮಾಡಿಸಿದ.. ಅನುಪಮ ಕೈ ನೀಡಿ..”ಹಲೋ..” ಎಂದಳು..”ಹಲೋ..ಮ್ಯಾಮ್” ಎಂದು ಮುಗುಳ್ನಗುತ್ತಾ ಇಂಚರ ಹ್ಯಾಂಡ್ ಶೇಕ್ ಮಾಡಿದಳು..”ಇನ್ನು ಹೋಗೋಣ್ವಾ..?!” ಎಂದು ಮನುವಿನ ಕಡೆ ನೋಡಿ ಹೇಳಿದಳು ಅನುಪಮ..ಮನು ತಲೆಯಲ್ಲಾಡಿಸಿದ..ಆಗಲೇ ಮನುವನ್ನು ಕಂಡ ಇಂಚರಳಿಗೆ ಶಾಕ್ ಆಗಿತ್ತು..!! ಅವನನ್ನು ಕಂಡ ಖುಷಿಗೋ ಏನೋ ಇಂಚರ ಆಗ ಸರಿಯಾಗಿ ಗಮನಿಸಿರಲಿಲ್ಲ..ಮನು ವೀಲ್ಚೇರಲ್ಲಿ ಕುಳಿತಿದ್ದಾನೆ..!! ಅವಳು ಅಚ್ಚರಿಗೊಂಡಳು..ಅಂದ್ರೆ ಇವರಿಗೆ ನಡೆಯೋಕೆ ಆಗಲ್ವಾ..ಹಾಗಾದ್ರೆ ಅವರು ಬರೆದ ಕಥೆ ನಿಜವಾಗ್ಲೂ ನಡೆದಿದೆಯಾ..?! ಗರಬಡಿದಂತೆ ನಿಂತಿದ್ದವಳನ್ನು ಮನು ಎಚ್ಚರಿಸಿದ..”ನಿಮ್ಮನ್ನು ಭೇಟಿಯಾಗಿ ಮಾತನಾಡಿದ್ದು ತುಂಬಾನೇ ಖುಷಿಯಾಯ್ತು..ಇಂಚರ..ನಿಮ್ಮಂತಹ ಓದುಗರು ಹೆಚ್ಚು ಹೆಚ್ಚು ಎನ್ಕರೇಜ್ ಮಾಡಿದ್ರೇನೇ ನಮ್ಮಂತಹ ಬರಹಗಾರರಿಗೆ ಇನ್ನೂ ಹೆಚ್ಚು ಬರೆಯುವ ಉತ್ಸಾಹ,ಹುರುಪು ಸಿಗುತ್ತೆ..ಥಾಂಕ್..ಯೂ ಒನ್ಸ್ ಎಗೈನ್..!!” ಎಂದವ “ಬರ್ತೀವಿ ಇಂಚರ..ಈಗಲೇ ತುಂಬ ಹೊತ್ತಾಯಿತು..” ಎಂದು ಅಲ್ಲಿಂದ ಹೊರಡುವ ಸೂಚನೆ ನೀಡಿದ..
ಕತ್ತಲು ತನ್ನ ಸಾಮ್ರಾಜ್ಯವನ್ನು ಅದಾಗಲೇ ಸ್ಥಾಪಿಸಿತ್ತು..ಅದನ್ನು ಆದಷ್ಟು ಹೊಡೆದೋಡಿಸಲು ಕಡಲ ಕಿನಾರೆ ಸಮೀಪ ಹಾಕಲಾಗಿದ್ದ ರಸ್ತೆ ದೀಪಗಳು ಪ್ರಯತ್ನಿಸುತ್ತಿದ್ದವು.. “ಸಾರ್..ಪ್ಲೀಸ್..ನಿಮ್ಮ ಜೊತೆ ಒಂದು ಸೆಲ್ಫೀ..ಬೇಕಿತ್ತು..” ಎಂದಳು ಇಂಚರ..ಅವನು ಸಮ್ಮತಿಸಿದ..ರಸ್ತೆ ದೀಪಗಳ ಬೆಳಕಲ್ಲಿ ಮನು,ಅನುಪಮ ಮತ್ತು ಇಂಚರ ಸೆಲ್ಪಿ ತೆಗೆದುಕೊಂಡರು..ಮತ್ತೊಮ್ಮೆ ಬಾಯ್ ಹೇಳಿ ಮನು ಮತ್ತು ಅನುಪಮ ಅಲ್ಲಿಂದ ಹೊರಟರು..
ವೀಲ್ ಚೇರನ್ನು ನಡೆಸುತ್ತಾ ಅನುಪಮ ಸಾಗುತ್ತಿದ್ದಳು..ಮನು ಅವಳ ಕೆನ್ನೆ ಹಿಂಡಿದ್ದು ಅದಕ್ಕವಳು ಹುಸಿ ಮುನಿಸಿನಿಂದ ಅವನ ಬೆನ್ನಿಗೆ ಮೆಲ್ಲಗೆ ಒಂದೇಟು ಹೊಡೆದಿದ್ದು..ಅದಕ್ಕೆ ಮನು ಜೋರಾಗಿ ನಗುತ್ತಿದ್ದಿದ್ದು ಎಲ್ಲವೂ ಕಾಣಿಸಿತ್ತು..”ನಿಮ್ಮ ಈ ಪ್ರೀತಿ,ತಮಾಷೆ,ನಗು ಎಲ್ಲವೂ ಸದಾ ಹೀಗೆ ಇರಲಿ..ಎಲ್ಲರಿಗೂ ಮಾದರಿಯಾಗಿರಿ..” ಎಂದು ಬಯಸಿದ ಇಂಚರ ಈ ಅಪರೂಪದ ಜೋಡಿ ಕಣ್ಣಿಂದ ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದಳು..!!
ಇದೇ ಸಮಯದಲ್ಲಿ ಅವಳ ಸಮೀಪದಲ್ಲೇ ಹಾದು ಹೋದ ವ್ಯಕ್ತಿಯೊಬ್ಬನ ಮೊಬೈಲ್ “ಜೊತೆ ಜೊತೆಯಲಿ..ಪ್ರೀತಿ ಜೊತೆಯಲಿ..!!” ಹಾಡು ಸಣ್ಣದಾಗಿ ಗುನುಗುತ್ತಿರುವುದು ಕೇಳಿಸಿತ್ತು..!! ಇದನ್ನೆಲ್ಲ ಶುಭ್ರವಾದ ಆಗಸದಲ್ಲಿ ತಾರೆಗಳ ಜೊತೆಗೆ ಆಗ ತಾನೇ ಕಾಣಿಸಿಕೊಂಡಿದ್ದ ಚಂದ್ರ ನೋಡುತ್ತಾ ಕಣ್ತುಂಬಿಕೊಂಡಿದ್ದ.
Facebook ಕಾಮೆಂಟ್ಸ್