X
    Categories: ಕಥೆ

ಜೊತೆ ಜೊತೆಯಲಿ -1

ಸಂಜೆಯ ಹೊತ್ತು..ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಹೊರಟು ಹೋಗಿದ್ದ…ಯುದ್ಧ ಮುಗಿದ ನಂತರ ರಣರಂಗದಲ್ಲಿ ಹೇಗೆ ನೆತ್ತರು ಹರಡಿರುತ್ತದೋ ಹಾಗೆ ಭಾನು ತುಂಬ ಕೆಂಬಣ್ಣ ಹರಡಿಕೊಂಡಿತ್ತು..ಹಕ್ಕಿಗಳ ಕಲರವ ಕಿವಿಗೆ ಕೇಳಲು ಹಿತವೆನಿಸುತ್ತಿತ್ತು..ತಣ್ಣನೆ ಬೀಸುವ ಕುಳಿರ್ಗಾಳಿ ಚಳಿಯಿಂದ ನಡುಗುವಂತೆ ಮಾಡುತ್ತಿತ್ತು!!..ಅದು ಮಲ್ಪೆ ಕಡಲ ತೀರ..!!ಎಲ್ಲಿ ನೋಡಿದರಲ್ಲಿ ಜನವೋ ಜನ..!!ಭಾರೀ ಗಾತ್ರದ ಅಲೆಗಳು ಉತ್ಸಾಹದಿಂದ ಮುನ್ನುಗ್ಗಿ ಬಂದವು ತೀರಕ್ಕೆ ಬರುತ್ತಿದ್ದಂತೆ ಸುಸ್ತಾಗಿ ಬಿಡುತ್ತಿದ್ದವು..ಅವುಗಳೊಂದಿಗೆ ಆಟವಾಡುವ ಮಕ್ಕಳು,ಯುವಕ-ಯುವತಿಯರು!!,ಕೆಲವರು ಇವರ ಆಟಗಳನ್ನು ನೋಡುತ್ತಾ ಹಾಯಾಗಿ ಮರಳಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು..ಅಲ್ಲಲ್ಲಿ ಇಹ ಲೋಕದ ಅರಿವೆಯೇ ಇಲ್ಲದಂತೆ ಕೆಲವು ಜೋಡಿಗಳ ಸರಸ ಸಲ್ಲಾಪಗಳು ಕಾಣಿಸುತ್ತಿದ್ದವು..ಅಲೆಗಳ ಆರ್ಭಟದ ನಿನಾದ!! ಸಂಜೆಯ ವಾತಾವರಣ ಎಲ್ಲವೂ ಮನಸ್ಸಿಗೆ ಮುದ ನೀಡುವಂತ್ತಿದ್ದವು!!! ಇದನ್ನೆಲ್ಲ ನೋಡುತ್ತಿದ್ದ ಅವನು..!! ಪ್ರತಿ ದಿನ ಸಂಜೆ ಬರುತ್ತಿದ್ದವನು ಇಂದು ಕೂಡಾ ಬಂದಿದ್ದ..ಅವನ ಮುಖದಲ್ಲಿ ಸಂತೋಷ ಕಾಣಿಸುತ್ತಿಲ್ಲ..!! ಏನೋ ದೀರ್ಫವಾದ ಆಲೋಚನೆಯಲ್ಲಿ ಮುಳುಗಿದ್ದಂತೆ  ಕಾಣಿಸುತ್ತಿತ್ತು..ಮೊದಲು ಹೇಗಿದ್ದೆ..ಈಗ ಹೇಗಾಯಿತು ನನ್ನ ಜೀವನ..!? ಏನೂ ಮಾಡಲಾಗದ ಸ್ಥಿತಿ..!! ಆಲೋಚಿಸುತ್ತಿದ್ದವನ ಬಳಿ ಬಂದ  ಎತ್ತರದ ಅಲೆಯೊಂದು ಹಾಗೇ ಮರಳಲ್ಲಿದ್ದ ಎಲ್ಲವನ್ನೂ ಕೊಚ್ಚಿಕೊಂಡು ಇಳಿದು ಹೋಯಿತು..ಕಷ್ಟ-ಸುಖ,ನೋವು-ನಲಿವು ಎಲ್ಲವೂ ಸಮುದ್ರದ ಅಲೆಗಳ ಏರಿಳಿತದ ರೀತಿ..!! ಒಮ್ಮೆ ಬರುತ್ತೆ..ಹೋಗುತ್ತೆ..ಎಲ್ಲರೂ ಅದನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿ ಬದುಕನ್ನು ನಡೆಸುತ್ತಾರೆ..!!

 “ಹಲೋ ಸಾರ್..” ಎಂದು ಹತ್ತಿರದಲ್ಲಿ ಮಧುರ ಹೆಣ್ಣು ಧ್ವನಿ ಕೇಳಿಸಿತ್ತು..ಆಲೋಚನೆಯಿಂದ ಹೊರ ಬಂದವ ಧ್ವನಿ ಕೇಳಿಸಿದತ್ತ ನೋಡಿದ..ಸುಂದರ ಯುವತಿಯೊಬ್ಬಳು ನಿಂತಿದ್ದಳು..ಗಿಳಿ ವರ್ಣದ ಚೂಡಿದಾರ ಧರಿಸಿದ್ದವಳು ನೋಡಲು ಮುದ್ದಾಗಿದ್ದಳು..ಬೆನ್ನಿಗೆ ಬ್ಯಾಗ್,ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದವಳು ಕಾಲೇಜು ಓದುವ ಹುಡುಗಿಯ ತರಹ ಕಾಣಿಸಿದ್ದಳು..”ಸಾರ್ ನೀವು ಮನು ಪ್ರಕಾಶ್ ಅಲ್ವಾ..” ಒಂಥರಾ ಎಗ್ಸೈಟ್  ಆಗಿದ್ದಳು..

“ಹೌದು..” ಎಂದ ಅವಳ ಕಡೆ ಅಯೋಮಯದಿಂದ ನೋಡಿದ..”ನಿಮ್ಮ ಎಲ್ಲ ಕಥೆ,ಕಾದಂಬರಿಗಳನ್ನು ಓದಿದ್ದೇನೆ..ಎಲ್ಲವೂ ಸೂಪರ್ ಸಾರ್..ಅದರಲ್ಲೂ ‘ಜೊತೆ ಜೊತೆಯಲಿ’ ಸ್ಟೋರಿ ಇದೆಯಲ್ಲ..ಅದು ನನ್ನ ತುಂಬ ಇಂಪ್ರೆಸ್ ಮಾಡ್ತು..ಸೂಪರ್ ಸಾರ್..” ಅವನಿಗೆ ಮಾತನಾಡಲು ಅವಕಾಶಕೊಡದಂತೆ ಬಡಬಡಿಸಿದಳು..”ಥಾಂಕ್..ಯೂ..” ಎಂದವ “ನಿಮ್ಮ ಹೆಸರು..?!” ಪ್ರಶ್ನಿಸಿದ..”ಇಂಚರ ಸಾರ್..ಡಿಗ್ರಿ ಓದುತ್ತಿದ್ದೇನೆ..!!” ಎಂದು ನುಲಿಯುತ್ತಾ ಹೇಳಿದಳು..ಪುನ: ಕಥೆಯ ಬಗ್ಗೆನೇ ಮಾತನಾಡತೊಡಗಿದಳು..ಆದರೆ ಅವನು ಅವಳ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ..ಪುನ: ಹಳೆ ನೆನಪುಗಳ ಅಲೆಗಳ ಜತೆ ಸಾಗತೊಡಗಿದ್ದ.

                             ***********************************************

ಮೆಲ್ಲನೆ ಕಣ್ತೆರೆದು ನೋಡಿದ ಮನು..ಮೇಲೆ ಗರ ಗರನೆ ತಿರುಗುತ್ತಿರುವ ಫ್ಯಾನ್ ಕಾಣಿಸಿತ್ತು..ತಾನೆಲ್ಲಿದ್ದೇನೆಂದು ಆ ಕ್ಷಣ ತಿಳಿಯಲಿಲ್ಲ..ಸ್ವಲ್ಪ ದೂರದಲ್ಲಿ ಚೇರ್ ಮೇಲೆ ನರ್ಸೊಬ್ಬಳು ಕುಳಿತಿದ್ದು ತೂಕಡಿಸುತ್ತಿರುವುದು ಕಾಣಿಸಿತ್ತು..ಅಂದರೆ ತಾನು ಆಸ್ಪತ್ರೆಯಲ್ಲಿದ್ದೇನೆಯೇ..ಯಾಕೆ..!? ನನಗೇನಾಗಿದೆ!!? ಎಷ್ಟು ಯೋಚಿಸಿದರೂ ಅವನಿಗೆ ನೆನಪಾಗಲಿಲ್ಲ..ಆಗ ಗಮನಿಸಿದವನಿಗೆ ಗಾಬರಿಯಾಗಿತ್ತು..ಯಾಕೆಂದರೆ ಕೈ ಕಾಲುಗಳು..ಮೈ ತುಂಬ ಬ್ಯಾಂಡೇಜ್ಗಳು..!!ಮಲಗಿದ್ದಲ್ಲಿಂದ ಏಳಲು ಹೋದ..ಮೈ ಕೈಯೆಲ್ಲ ಅಸಾಧ್ಯ ನೋವು!! ಮನು ನರ್ಸನ್ನು ಕೂಗಿ ಕರೆದು ಎಬ್ಬಿಸಲು ನೋಡಿದ..”ಸಿಸ್ಟರ್!! ಸಿಸ್ಟರ್!!” ಅವಳು ಏಳುವ ಲಕ್ಷಣ ಕಾಣಿಸಲಿಲ್ಲ..ಪುನ: ತನಗೇನಾಗಿದೆಂದು ಒಂದೊಂದಾಗಿ ನೆನಪಿಸಿಕೊಳ್ಳತೊಡಗಿದ..

      ಅದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ 129 ಕಿಲೋ ಮೀಟರ್ ದೂರದ ವಾಯುವ್ಯ ಭಾಗದಲ್ಲಿರುವ ಚುರುಂದಾ ಗ್ರಾಮದಲ್ಲಿನ ಭಾರತ-ಪಾಕಿಸ್ತಾನ ಬಾರ್ಡರ್..!! ರಾತ್ರಿ ಗಂಟೆ ಸುಮಾರು ಹನ್ನೊಂದೋ ಹನ್ನೆರಡೋ ಆಗಿರಬಹುದು..ಅಮವಾಸ್ಯೆ ಬೇರೆ..!! ಚಂದ್ರನಿಲ್ಲದ ಖುಷಿಯಿಂದ ಅಂಧಕಾರ ತನ್ನ ಸಾಮ್ರಾಜ್ಯವನ್ನು ಬೇಗನೆ ಸ್ತಾಪಿಸಿತ್ತು..ಗಾಳಿ ಮೆಲ್ಲನೆ ಬೀಸುತ್ತಿತ್ತು..!! ತಣ್ಣಗೆ ಮೈ ಕೊರೆಯುವ ಚಳಿ..!! ಹತ್ತಿರದಲ್ಲೆಲ್ಲೊ ಕೇಳಿಸುವ ಕಾಡು ಪ್ರಾಣಿಗಳ ಶಬ್ಧದ ಹೊರತು ಮತ್ತೇನಿಲ್ಲ..ನೀರವ ಮೌನ..!! ನಿಶ್ಶಬ್ಧ ವಾತಾವರಣ..!! ಇಡೀ ಚುರುಂದಾ ಗ್ರಾಮದ ನಿವಾಸಿಗಳು ನಿದ್ದೆಗೆ ಜಾರಿದ್ದ ಆ ಸಮಯ..ಭದ್ರತಾ ಪಡೆಯ ಯೋಧರು ಗಡಿ ಕಾಯುತ್ತಿದ್ದ ಆ ಕ್ಷಣ..!! ಅಲ್ಲಿ ಸಣ್ಣ ಕದಲಿಕೆ ಉಂಟಾಗಿತ್ತು..!! ಗುಸು ಗುಸು ಮಿಸು ಮಾತು ಗಡಿ ಭಾಗದಲ್ಲಿ ಕೇಳಿಸತೊಡಗಿತ್ತು..”ರವಿ..ಅಲ್ಲಿ ಏನೋ ಸದ್ದು..” ಮನು ತನ್ನ ಗೆಳೆಯ ರವಿರಾಜ್’ಗೆ ತಿಳಿಸುವ ಅದೇ ಸಮಯದಲ್ಲಿ ಒಮ್ಮಿಂದೊಮ್ಮೆಲೇ ಗುಂಡಿನ ಆಕ್ರಮಣ ನಡೆದಿತ್ತು..”ಮನು..” ಎಂದು ಕಿರುಚಿ ಎಚ್ಚರಿಸಿದ ರವಿಯ ಕೈಯಲ್ಲಿದ್ದ ರೈಫಲ್ ಎದುರಿನ ಗುಂಡಿನ ದಾಳಿಗೆ ಪ್ರತ್ಯುತ್ತರ ಕೊಡತೊಡಗಿತು..ಮನು ತಡ ಮಾಡಲಿಲ್ಲ..!!ತಾನೂ ಬಂದೂಕಿನಿಂದ ಫೈರ್ ಮಾಡತೊಡಗಿದ..ಉಳಿದ ಯೋಧರೂ ಇವರಿಗೆ ಸಾತ್ ಕೊಟ್ಟರು..ಆ ಇಡೀ ಪ್ರದೇಶ ಗುಂಡಿನ ಸದ್ದಿನಿಂದ ನಡುಗಿ ಹೋಗಿತ್ತು..ಒಂದೇ ಸಮನೆ ಎರಡೂ ಕಡೆಯಿಂದ ಫೈಯರಿಂಗ್..!!

ಪ್ರಶಾಂತವಾಗಿದ್ದ ವಾತಾವರಣ ಒಮ್ಮಿಂದೊಮ್ಮೆಲೇ ಭೀಭತ್ಸವಾಗಿ ಹೋಯಿತು..!! ಉಗ್ರರು ಎಷ್ಟು ಜನರಿದ್ದಾರೆ..ಗೊತ್ತಿಲ್ಲ..?!..ಯಾರಿಗೆ ಏನಾಯಿತು..ಯಾರ್ಯಾರು ಸತ್ತರು..!? ಎಂಬುದೇ ತಿಳಿಯುತ್ತಿಲ್ಲ..!! ಗುಂಡಿನ ಸದ್ದಿನ ಜೊತೆ “ಜೈ ಭಾರತ್ ಮಾತಾಕಿ ಜೈ..ವಂದೇ ಮಾತರಂ” ಎಂಬ ಆವೇಶದ ಧ್ವನಿಗಳು ಕಿವಿಗೆ ಜೋರಾಗಿ ಕೇಳಿಸುತ್ತಿದ್ದವು..ಸೈನಿಕರಿಗೆ ಆವೇಶ..ಆಕ್ರೋಶ..!! ಪದೇ ಪದೇ ತೊಂದರೆ ಕೊಡುವ ಒಬ್ಬರನ್ನೂ ಬಿಡಬಾರದು..ಎಂಬ ಹಠ..!! ದೇಶದ ಮೇಲಿನ ಅವರ ಅಪಾರ ಭಕ್ತಿ..ಗಡಿ ರಕ್ಷಣೆಯ ಹೊಣೆ,ಕರ್ತವ್ಯ..ಸಾವಿನ ಭಯವನ್ನು ಮೆಟ್ಟಿ ನಿಂತಿತ್ತು..ಮನು, “ವಂದೇ ಮಾತರಂ” ಎಂದು ಜೋರಾಗಿ ಕೂಗುತ್ತಾ ಆವೇಶದಿಂದ ಗುಂಡಿನ ಮಳೆಗಯ್ಯುತ್ತಿದ್ದ..ಅವನ ಆಕ್ರೋಶದ ಗುಂಡೇಟಿಗೆ ಅದೆಷ್ಟು ಉಗ್ರರು ಬಿದ್ದರೋ ಗೊತ್ತಿಲ್ಲ..ನೋವಿನ ಆಕ್ರಂದನ ಜೋರಾಗಿ ಕೇಳಿಸುತ್ತಿತ್ತು..!! ಹೀಗಿರಬೇಕಾದರೆ ಅಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದು ಹೋಗಿತ್ತು..ದೊಡ್ಡದಾಗಿ ಸ್ಪೋಟ ಉಂಟಾಗಿತ್ತು..!! ಬೆಂಕಿಯ ಕೆನ್ನಾಲೆಗಳು ಬಿಡುಗಡೆಗೊಂಡು ಖುಷಿಯಿಂದ ಎಲ್ಲವನ್ನೂ ಆಕ್ರಮಿಸತೊಡಗಿದವು..ಮನುವಿಗೆ ಏನಾಯಿತೆಂದು ತಿಳಿಯಲಿಲ್ಲ..ಕಣ್ಣುಗಳಿಗೆ ಏನೂ ಕಾಣಿಸುತ್ತಿಲ್ಲ..ಬೊಬ್ಬೆ..ಆಕ್ರಂದನ ಮಾತ್ರ ಕಿವಿಗಳಿಗೆ ಕೇಳಿಸುತ್ತಿತ್ತು..ಎಲ್ಲಿಗೋ ಹೋಗಿ ಬಿದ್ದಿದ್ದು ಮಾತ್ರ ನೆನಪಿತ್ತು..ಆಮೇಲಿಂದೇನೂ ತಿಳಿಯಲಿಲ್ಲ..!!

      “ಅಮ್ಮಾ..” ಎಂದು ಜೋರಾಗಿ ಕಿರುಚಿದ ಮನು..ಕೈ ನೋವಿನಿಂದ ನಡುಗತೊಡಗಿತ್ತು..ಅವನ ಕೂಗಿಗೆ ತೂಕಡಿಸುತ್ತಿದ್ದ ನರ್ಸ್ ಎಚ್ಚರಗೊಂಡು ಗಾಬರಿಯಿಂದ ಓಡಿಕೊಂಡು ಬಂದಳು..

“ಏನಾಯಿತು..!?” ಹಿಂದಿಯಲ್ಲಿ ಕೇಳಿದಳು ಅವಳು..!! ಮನು ಮಾತನಾಡಲು ಬಾಯಿ ತೆರೆಯುತ್ತಿದ್ದಂತೆಯೇ ಡಾಕ್ಟರ್ ಬಂದಿದ್ದರು..”ಹಲೋ..ಯಂಗ್ ಬೋಯ್..!! ಹೌ ಆರ್ ಯೂ..?!” ಎಂದು ನಗುತ್ತಾ ಕೇಳಿದರು ಡಾಕ್ಟರ್

ಸುಧಾಕರ್ ಶೆಟ್ಟಿ..!! ” ಮೈ ಕೈಯೆಲ್ಲ ನೋವು..ಕಾಲುಗಳನ್ನಂತೂ ಅಲುಗಾಡಿಸಲು ಕೂಡಾ ಆಗ್ತಿಲ್ಲ..ಡಾಕ್ಟರ್..ಏನಾಗಿದೆ ನಂಗೆ..?!” ಕುತೂಹಲದಿಂದ ಪ್ರಶ್ನಿಸಿದ ಮನುವಿನ ಕಣ್ಣುಗಳಲ್ಲಿ ಆತಂಕವನ್ನು ಗುರುತಿಸಿದರು ಡಾಕ್ಟರ್..

“ನಥಿಂಗ್…ಕೈ ಕಾಲುಗಳು ಸ್ವಲ್ಪ ಫ್ರಾಕ್ಚರ್ ಆಗಿದೆಯಷ್ಟೆ..ಬೇರೇನು ಆಗಿಲ್ಲ..ನೀವು ಗಾಬರಿಯಾಗುಂತದ್ದು ಏನೂ ಇಲ್ಲ..ಓ.ಕೆ”  ಅವರ ಮಾತಿಗೆ ಮನುವಿಗೆ ಸಮಾಧಾನವಾದರೂ ಡಾಕ್ಟರ್ ಸುಳ್ಳು ಹೇಳುತ್ತಿದ್ದಾರೇನೋ ಅಂತ ಅನಿಸಿತ್ತು..ಆಗ ಮೇಲಾಧಿಕಾರಿ ಮೇಜರ್ ಶಿವರಾಮ್ ಬಂದರು..ಸುಮಾರು ಐವತ್ತು ವರುಷದ ಐದೂವರೆ ಆರಡಿ ಎತ್ತರದ ಧೃಢ ಶರೀರ.. ದಪ್ಪ ಮೀಸೆ..ತಲೆಯಲ್ಲಿ ಬೆಳ್ಳಿ ಕೂದಲುಗಳು..ಮುಖದಲ್ಲಿನ ನಗು ಎಲ್ಲವೂ ಅವರ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತಿತ್ತು..ಅವರೂ ಕನ್ನಡಿಗರೇ..!! ” ಹೇಗಿದ್ದಿಯಾ..ಮನು..?!” ಕಳಕಳಿಯಿಂದ ಪ್ರಶ್ನಿಸಿದರು..”ಚೆನ್ನಾಗಿದ್ದೀನಿ ಸಾರ್..ಅಂದ ಹಾಗೆ ರವಿ ಎಲ್ಲಿ ಸಾರ್..ಕಾಣಿಸ್ತಿಲ್ಲ..ಅವನಿಗೇನು ಆಗಿಲ್ಲ ತಾನೇ.” ಮನುವಿನ ಧ್ವನಿಯಲ್ಲಿ ಗಾಬರಿಯಿತ್ತು..”ಅದು ಮನು.. ರವಿ ಮತ್ತು ಇನ್ನು ಐವರು..” ಎಂದು ನಿಧಾನವಾಗಿ ಶಿವರಾಂ ಹೇಳತೊಡಗಿದಂತೆ ಅವನಿಗೆ ಅರ್ಥವಾಗಿತ್ತು..”ಗೊತ್ತಾಯ್ತು..ಸಾರ್..ಇನ್ನು ಏನೂ ಹೇಳ್ಬೇಡಿ..” ಎಂದವನ ಧ್ವನಿಯಲ್ಲಿ ನೋವು ತುಂಬಿತ್ತು..ಮತ್ತೇನೂ ಮಾತನಾಡದೆ ಕಣ್ಮುಚ್ಚಿದ ಕೂಡಲೇ ಇನ್ನು ನನ್ನಿಂದ ಅಡಗಲು ಸಾಧ್ಯವಿಲ್ಲವೆಂದು ಹೊರ ಬಂದ ಕಣ್ಣೀರು ಕೆನ್ನೆಯನ್ನು ಸ್ಪರ್ಶಿಸಿ ಬೆಡ್ ಮೇಲೆ ಬಿತ್ತು..!! ದೇವರೇ ಹೀಗೇಕೆ ಮಾಡಿದೆ..?! ಯಾರೂ ಇಲ್ಲದ ಅನಾಥನಾದ ನನ್ನನ್ನು ಬದುಕಿಸಿ,ಹೆಂಡತಿ ಮಕ್ಕಳು ಕುಟುಂಬ ಎಲ್ಲವೂ ಇರುವ ಮಿತ್ರರನ್ನು ಯಾಕೆ ಕರೆಸಿಕೊಂಡೆ..?! ಪಾಪ..!! ಅವರ ಕುಟುಂಬ ಎಷ್ಟು ನೋವು ಅನುಭವಿಸುತ್ತಿರಬಹುದು..!!

ಉಳಿದ ಸೈನಿಕ ಮಿತ್ರರ ನಡುವೆ ಸ್ವಲ್ಪ ಹೆಚ್ಚು ಕ್ಲೋಸ್ ಆಗಿದ್ದವ ರವಿರಾಜ್..!! ಅವನಿಗೆ ಆರು ತಿಂಗಳ ಹಿಂದೆ ಮದುವೆಯಾಗಿತ್ತಷ್ಟೆ..ಅವನ ಮನೆಯ,ಹೆಂಡತಿಯ ಪರಿಸ್ಥಿಯೇನು..!? ನೆನೆದು ದು:ಖವಾಗಿತ್ತು..ಮನುವನ್ನು  ಪರೀಕ್ಷಿಸಿ ಡಾಕ್ಟರ್ ಸುಧಾಕರ್ ಶೆಟ್ಟಿ ಹೋದ ಮೇಲೆ ಸ್ವಲ್ಪ ಹೊತ್ತು ಇದ್ದು ಮನುವಿನೊಡನೆ ಮಾತನಾಡಿ ಸಮಾಧಾನ ಮಾಡಿ ಧೈರ್ಯ ಹೇಳಿ ಹೋದರು ಮೇಜರ್ ಶಿವರಾಂ..!! ತುಂಬ ಹೊತ್ತು ಬೇಸರದಲ್ಲೇ ಇದ್ದವನು ಡಾಕ್ಟರ್ ಕೊಟ್ಟ ಇಂಜೆಕ್ಷನ್ನ ಪ್ರಭಾವದಿಂದ ನಿದ್ದೆಗೆ ಜಾರಿದ..

   ರಾತ್ರಿ ಎಂಟು ಗಂಟೆಯಾಗಿತ್ತು..ಬಾಗಿಲಿಗೆ ಬೆನ್ನು ಹಾಕಿ ಮಲಗಿದ್ದ ಮನುಗೆ ನರ್ಸ್ ಬಂದಿದ್ದು ತಿಳಿಯಲಿಲ್ಲ..!! ಬಂದವಳು ತಂದಿದ್ದ ಊಟ ಮತ್ತು ಕೊಡಬೇಕಾದ ಔಷಧಿಗಳನ್ನೂ ಟೇಬಲ್ ಮೇಲಿರಿಸಿ ಅವನ ಕಡೆ ತಿರುಗಿ ಎಬ್ಬಿಸಲು ನೋಡಿದಳು..ಆವತ್ತು ದಿನಾ ಬರುವ ನರ್ಸ್ ರಜೆ ಹಾಕಿದ್ದರಿಂದ ಇನ್ನೊಬ್ಬಳು ಬಂದಿದ್ದಳು..!! “ಹಲೋ ಸಾರ್..” ಅವಳ ಮಧುರ ಧ್ವನಿಗೆ ಆಲೋಚಿಸುತ್ತಾ ಮಲಗಿದ್ದ ಮನು ತಿರುಗಿ ನೋಡಿದ..ಅವಳು..

ಅನುಪಮ ನಿಂತಿದ್ದಳು..!! ಅವನಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ..!! ಅಲ್ಲಿ ಅನುಪಮಳ ಸ್ಥಿತಿನೂ ಅದೇ..!! ಇಲ್ಲಿ ಇರುವವರು ಇನ್ಯಾರೋ ಅಂದುಕೊಂಡರೆ..ಮನು ಪ್ರಕಾಶ್..!! “ನೀವು ಇಲ್ಲಿ..?!” ಅಚ್ಚರಿಯಿಂದ ಪ್ರಶ್ನಿಸಿದಳು..ಅನುಪಮಳ ಮುದ್ದು ಮುಖವನ್ನು ನೋಡುತ್ತಾ “ಯಾಕೆ ಇಲ್ಲಿ ಇರಬಾರದಾ..?!” ತುಂಟತನದಿಂದ ಕೇಳಿದ..ಅವನ ಮಾತಿಗೆ ಅವಳು ಗಲಿಬಿಲಿಗೊಂಡು ಅವನ ಕಡೆ ನೋಡಿದಳು..ಮನು ನಗುತ್ತಿದ್ದ..!! ಇದೇ ನಗುವಲ್ಲವೇ ನನಗೆ ಸಿಟ್ಟು ತರಿಸಿದ್ದು..!! ಅವನನ್ನು ದುರುಗುಟ್ಟಿಕೊಂಡು ನೋಡಿದಳು..ಇದೇ ಸಿಟ್ಟು ಅಲ್ಲವೇ ನನ್ನನ್ನು ಸುಟ್ಟುಬಿಡುವಂತೆ ನೋಡಿದ್ದು..!! ಮನು ಮತ್ತು ಅನುಪಮ ಹಿಂದಿನ ಘಟನೆಗಳ ನೆನಪುಗಳತ್ತ ವಾಲಿದರು..

    ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣ ಜನರಿಂದ ತುಂಬಿ ಹೋಗಿತ್ತು..ಎಲ್ಲರೂ ಬರುವ ಟ್ರೈನ್ಗಾಗಿ ಕಾಯುತ್ತಿದ್ದರು..ಮನು ಆಗತಾನೆ ತನ್ನ ಲಗೇಜುಗಳೊಂದಿಗೆ ಸ್ಟೇಶನ್ ತಲುಪಿದವ ಅಲ್ಲೇ ಇದ್ದ ಕಲ್ಲಿನ ಬೆಂಚಿನ ಮೇಲೆ ಕುಳಿತುಕೊಂಡ..ಟೈಮ್ ನೋಡಿದ..ಇನ್ನು ಐದು ನಿಮಿಷದಲ್ಲಿ  ಟ್ರೈನ್ ಬರುವುದರಲ್ಲಿತ್ತು..ಹೀಗೆ ಸ್ಟೇಶನ್ನ ಸುತ್ತ ಒಮ್ಮೆ ಕಣ್ಣಾಡಿಸಿದ..ಆಗ ಕಾಣಿಸಿದಳು ಅವಳು..!! ಸ್ವಲ್ಪ ಮೈ ಬಣ್ಣ ಕಪ್ಪೆನಿಸಿದರೂ ಲಕ್ಷಣವಾದ ಮುಖ..

ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವ ಏನೋ ಒಂಥರಾ ಆಕರ್ಷಣೆ..!! ಹಣೆಗೆ ಮುತ್ತಿಡುವ ಮುಂಗುರುಳನ್ನ ಸರಿಸುತ್ತಾ ಒಮ್ಮೆ ಟೈಮ್ ಕಡೆ ನೋಡಿದರೆ ಮತ್ತೊಮ್ಮೆ ಸ್ಟೇಶನ್ಗೆ ಬರುವ ದಾರಿಯ ಕಡೆ ನೋಡುತ್ತಿದ್ದಳು..ಅವಳ ಸುಂದರ ಮುಖದಲ್ಲಿ ಟೆನ್ಶನ್,ಭಯಾನೋ..ಎದ್ದು ಕಾಣಿಸುತ್ತಿತ್ತು..!! ಏನಾಗಿರಬಹುದಪ್ಪಾ..?! ಎಂದು ಆಲೋಚಿಸುತ್ತಿರಬೇಕಾದರೆ ಟ್ರಾಕ್ನಲ್ಲಿ ಟ್ರೈನ್ ಬರುತ್ತಿರುವುದು ಕಾಣಿಸಿತ್ತು..ಟಿ.ಟಿ ಕೆಂಪು ಮತ್ತು ಹಸಿರು ಬಾವುಟಗಳನ್ನು ಹಿಡಿದುಕೊಂಡು ರೆಡಿಯಾಗಿ ನಿಂತಿದ್ದ..ಟ್ರೈನ್ ಸ್ಲೋ ಆಗತೊಡಗಿತ್ತು..ತಮ್ಮ ತಮ್ಮ ಬರ್ತ್’ಗಾಗಿ ಜನರ ನೂಕು ನುಗ್ಗಲು ಶುರುವಾಗಿತ್ತು..ಮನು ತನ್ನ ಲಗೇಜುಗಳನ್ನು ಹಿಡಿದುಕೊಂಡು ತನ್ನ ಬರ್ತ್ ಹುಡುಕಿ ಟ್ರೈನ್ ಏರಿದ..ತಾನು ರಿಸರ್ವ್ ಮಾಡಿದ ಸೀಟಿನಲ್ಲಿ ಕುಳಿತವ ಧೀರ್ಘವಾಗಿ ನಿಟ್ಟುಸಿರು ಬಿಟ್ಟ..!! ಯಾರದೋ ಕಾಮತೃಷೆಗೆ ಹುಟ್ಟಿದವನೋ ಏನೋ..ಆಮೇಲೆ ಹೆತ್ತವರಿಗೆ ಬೇಡವಾಗಿ ಕಸದ ತೊಟ್ಟಿಯಲ್ಲಿ ಸಿಕ್ಕಿದ ಅನಾಥನಾದ ಮನುವನ್ನು ಸಾಕಿ ಸಲಹಿದ್ದು ಎಲ್ಲ ರಂಗನಾಥರಾವ್!! ತಮ್ಮ ‘ಕಾರುಣ್ಯ’ ಅನಾಥಾಲಯದಲ್ಲಿ ಅವನನ್ನು ಸಾಕಿ ದೊಡ್ಡದು ಮಾಡಿದ್ದರು..ಎಳವೆಯಿಂದಲೇ ಮಹಾತ್ಮ ಗಾಂಧಿ,ಭಗತ್ ಸಿಂಗ್,ಸುಭಾಷ್ ಚಂದ್ರ ಬೋಸ್ ಮುಂತಾದ ಮಹಾನ್ ಹೋರಾಟಗಾರರ ಜೀವನ ಚರಿತ್ರೆ ಕೇಳಿಕೊಂಡು ಬೆಳೆದವವನು..ದೇಶದ ಮೇಲೆ ಅಪಾರ ಭಕ್ತಿ..!! ತಾನೂ ಅವರ ಹಾಗೆ ದೇಶ ಸೇವೆ ಮಾಡಬೇಕೆಂದವನಿಗೆ ಭದ್ರತಾ ಪಡೆಯ ಸೈನಿಕನಾಗಿ ಉದ್ಯೋಗ ದೊರೆತಿದ್ದು ಹೇಳತೀರದಷ್ಟು ಸಂತಸ ಉಂಟಾಗಿತ್ತು..ರಂಗನಾಥರಾವ್ ಈ ಸುದ್ದಿ ಕೇಳಿ ಖುಷಿ ಪಟ್ಟಿದ್ದರು..”ದೇಶ ರಕ್ಷಣೆಯಲ್ಲಿ ಯಾವತ್ತೂ ಹಿಂಜರಿಬೇಡ..ಧೈರ್ಯದಿಂದ ಮುನ್ನುಗ್ಗು..ಒಳ್ಳೆಯದಾಗಲಿ..”ಎಂದು ಹೇಳಿದವರು ಹರಸಿದ್ದರು ಕೂಡ..ಆ ನಂತರ ಕಾಶ್ಮೀರಕ್ಕೆ ಹೋದವನು ರಜೆಯ ಮೇಲೆ ಬಂದವನು ಎಲ್ಲರೊಡನೆ ಬೆರೆತು ಮಾತನಾಡಿಸಿ ಪುನಃ ಹೋಗುತ್ತಿದ್ದ..ಹೃದಯಾಪಘಾತದಿಂದ ರಂಗನಾಥರಾವ್ ತೀರಿಕೊಂಡಿದ್ದು ಅದೇ ಸಮಯದಲ್ಲಿ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು ರಜೆ ಸಿಗಲಿಲ್ಲ..!! ಸೋ ಈ ಸಲ ರಜೆಯ ಮೇಲೆ ಬಂದವನಿಗೆ ಹೆತ್ತವರ ಸ್ಥಾನದಲ್ಲಿದ್ದ ರಂಗನಾಥರಾವ್ ಇಲ್ಲದ್ದು ಅವನಿಗೆ ದುಃಖವನ್ನು ಮಾಡಿತ್ತು..ಹೀಗೆ ಸ್ವಲ್ಪ ದಿವಸ ಇದ್ದವನು ರಜೆ ಮುಗಿದಿದ್ದರಿಂದ ಪುನಃ ತಿರುಗಿ ಹೊರಟಿದ್ದ..

   “ಹಲೋ ಎಕ್ಸ್’ಕ್ಯೂಸ್ ಮಿ..ಕಾಲನ್ನು ತೆಗೀತೀರಾ..?!” ಮಧುರ ಧ್ವನಿ ಕೇಳಿಸಿ ನೋಡಿದ..ಅದೇ ಕಪ್ಪು ಸುಂದರಿ..!! ಮುಂದಿನ ಸೀಟಿನ ಮೇಲೆ ಇಟ್ಟಿದ್ದ ಕಾಲನ್ನು ಕೆಳಗಿಟ್ಟು..”ಸಾರಿ..” ಎಂದು ಹೇಳಿ ಮುಗುಳ್ನಕ್ಕ..

“ಇಟ್ಸ್..ಓಕೆ..” ಎಂದವಳು ಎದುರಿನ ಸೀಟಲ್ಲಿ ಕುಳಿತಳು..ರೈಲಿನ ಹೊರ ಬದಿಯಿಂದ ಕಿಟಿಕಿಯ ಮೂಲಕ ಇನ್ನೊಬ್ಬಾಕೆ ಕಾಣಿಸಿಕೊಂಡವಳು ಹೇಳಿದ್ದಳು..”ಅನುಪಮ..!! ಸೇಫಾಗಿ ಮುಂಬೈ ತಲುಪಿ ಅವನು ಸಿಕ್ಕಿದ ಮೇಲೆ ನಂಗೆ ಕಾಲ್ ಮಾಡು..ಮರೀಬೇಡ..” ಅನುಪಮ..!! ವಾವ್..ಅವಳ ತರಾನೇ ಎಷ್ಟು ಮುದ್ದಾದ ಹೆಸರು..!! “ಗೀತಾ..ಅದು ಬಿಡು ಕಾಲ್ ಮಾಡ್ತೀನಿ..ಆದರೆ ನನಗೆ ಚಿಂತೆ ಅಪ್ಪ ಅಮ್ಮಂದೇ..ಅವರೇನು ಮಾಡ್ತಾರೋ..ಅಣ್ಣ ಏನ್ ಮಾಡ್ತಾನೋ ಏನೋ..” ಗಾಬರಿಯಿಂದ ಹೇಳಿದ್ದಳು..ಗೀತ,”ಅದು ಬಿಡು..ನಾನು ಎಲ್ಲ ಮ್ಯಾನೇಜ್ ಮಾಡ್ತೀನಿ..ಡೋಂಟ್ ವರಿ..” ಸಮಾಧಾನ ಮಾಡಿದಳು..ರೈಲು ಹೊರಟಿತು..ಗೀತ ಕಣ್ಣಿಂದ ಮರೆಯಾಗುವವರೆಗೆ ಕೈಯಾಡಿಸುತ್ತಾ ಇದ್ದಳು ಅನುಪಮ..ಉಕ್ಕಿ ಬಂದ ಕಣ್ಣೀರನ್ನು ಒರೆಸಿಕೊಂಡಳು..ಇದನ್ನೆಲ್ಲ ಗಮನಿಸುತ್ತಾ ಇದ್ದ ಮನು..!!

“ಏನಾಯಿತು..?! ಯಾಕೆ ಅಳ್ತಿದ್ದೀರಾ..?!” ಕುತೂಹಲ ತಾಳಲಾರದೆ ಕೇಳಿಯೇ ಬಿಟ್ಟ..ಅವಳು ಸಿಟ್ಟಿನಿಂದ ನೋಡಿದಳು..”ನಿಮಗೆ ಇಷ್ಟವಿಲ್ಲ ಅಂದ್ರೆ ಬೇಡ ಬಿಡಿ” ಎಂದವನು ಹೊರಗಿನ ಸುಂದರ ಪ್ರಕೃತಿಯನ್ನು ನೋಡತೊಡಗಿದ..ಅನುಪಮ ತಾನೂ ಏನೂ ಮಾತನಾಡದೆ ಸುಮ್ಮನೆ ಕುಳಿತಳು..ಇವರಿದ್ದ ಕಂಪಾರ್ಟ್’ಮೆಂಟ್ನಲ್ಲಿ ಜನರ ಗದ್ದಲ ಜೋರಾಗಿಯೇ ಇತ್ತು..ಹೆಚ್ಚಿನವರು ಮಾತನಾಡುವಲ್ಲಿ ಬ್ಯುಸಿಯಾಗಿದ್ದರೆ ಕೆಲವರು ಮಾತ್ರ ಪೇಪರ್,ಮ್ಯಾಗಜಿನ್ ಅಂತ ಓದುವುದರಲ್ಲಿ ಮಗ್ನರಾಗಿದ್ದರು..!! ಮನು ಹಾಗೇ ಸೀಟಿಗೆ ಒರಗಿದವನು ಕಣ್ಮುಚ್ಚಿದ..ಎಷ್ಟು ಹೊತ್ತು ಮಲಗಿದ್ನೋ..ಟ್ರೈನ್ ನಿಂತ ಅನುಭವವಾಗಿ ಎಚ್ಚರಗೊಂಡು ನೋಡಿದ..ಯಾವುದೋ ಸ್ಟೇಶನ್ನಲ್ಲಿ ರೈಲು ನಿಂತಿತ್ತು..ಅನುಪಮ ಗಾಬರಿಯಿಂದ ಏನೂ ತಿಳಿಯದೆ ಆಚೆ ಈಚೆ ನೋಡುತ್ತಿರುವುದು ಕಾಣಿಸಿತ್ತು..ಜೊತೆಗೆ ಯಾರೂ ಇಲ್ಲ..!! ಒಬ್ಬಳೇ ಮುಂಬೈಗೆ ಹೊರಟಿದ್ದಾಳೆ..ನೋಡುವಾಗ ತುಂಬ ಮುಗ್ದೆಯ ತರಹ ಕಾಣಿಸುತ್ತಾಳೆ..!! ಮನಸ್ಸಿಗೆ ಅಯ್ಯೋ ಅನಿಸಿತು..”ಟೀ..ಕಾಫಿ..” ಎಂದು ಕೂಗುತ್ತಾ ಬಂದ ಹುಡುಗನೊಬ್ಬ ಬಂದ..ಅವನಿಂದ ಎರಡು ಕಾಫಿಯನ್ನು ಪಡೆದು ಒಂದನ್ನು ಅವಳಿಗೆ ನೀಡಿದ..ಮೊದಲು ತೆಗೆದುಕೊಳ್ಳಲು ಹಿಂಜರಿದಳೂ ಮನುವಿನ ಒತ್ತಾಯದಿಂದ ತೆಗೆದುಕೊಂಡಳು..”ಥಾಂಕ್ಸ್..!!” ಎಂದಳು ಕಾಫಿ ಹೀರುತ್ತಾ..ಮುಗುಳ್ನಕ್ಕವನು ತಾನೂ ಕಾಫಿಯನ್ನು ಹೀರುತ್ತಾ ಕೇಳಿದ, “ಮುಂಬೈಯಲ್ಲಿ ರಿಲೇಷನ್ ಮನೆಗೆ ಹೊರಟ್ರಾ..?!” ಕೇಳಿದ..

“ಅಲ್ಲ..” “ಮತ್ತೆ..” “ಅದು..” ಎಂದು ಹೇಳಲು ಹೊರಟ ಅನುಪಮ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಮನುವಿನ ಮುಖವನ್ನು ನೋಡಿದವಳು ಮಾತು ಮುಂದುವರಿಸಿದಳು..”ನಾನು ಮದುವೆಯಾಗುವವನನ್ನು ಭೇಟಿಯಾಗಲು ಹೋಗ್ತಿದ್ದೇನೆ..” “ಓಹ್..ಯಾವಾಗ ಮದುವೆ..?! ಎಲ್ಲಿ ನಿಮ್ಮ ಮನೆಯವರು ಯಾರೂ ಬರ್ತಿಲ್ವಾ..?!” ಅನುಪಮ ಗೀತಳೊಡನೆ ಮಾತನಾಡಿದ್ದನ್ನು ಜ್ಞಾಪಿಸಿಕೊಂಡವನು ಕೇಳಿದ..”ಇಲ್ಲ..ಅವರಿಗೆ ಈ ವಿಷಯ ಗೊತ್ತಿಲ್ಲ..” ಎಂದಳು ಮೆಲ್ಲಗೆ “ಹೋ..ಅಂದ್ರೆ ಮನೆ ಬಿಟ್ಟು ಬಂದಿದ್ದೀರಾ..!!” “ಹುಂ..!!” ಎಂದಳು.. “ವಿವರವಾಗಿ ಹೇಳಿ..” ಕುತೂಹಲ ತಾಳಲಾರದೆ ಒತ್ತಾಯ ಮಾಡಿದ..ಅನುಪಮ ಹೇಳತೊಡಗಿದಳು..”ಸಮೀರ್ ಅಂತ ಹೆಸರು..ಫೇಸ್ಬುಕ್ನಲ್ಲಿ ಪರಿಚಯವಾದವನು..ಇಲ್ಲೇ ಮಂಗಳೂರಿನವನು..ರಿಯಲ್ ಎಸ್ಟೇಟ್ ಬಿಸ್ನ್ನೆಸ್ ಅವನಿಗೆ..!!” “ಇಂಟ್ರೆಸ್ಟಿಂಗ್..!!ಅವನನ್ನು ಈವರೆಗೆ ನೋಡೇ ಇಲ್ವಾ..?!” “ನೋಡಿದ್ದೀನಿ..ತುಂಬ ಸಲ ಭೇಟಿ ಕೂಡ

ಮಾಡಿದ್ದೀನಿ..ಅವನು ತುಂಬಾ ಒಳೆಯವ್ನು..” ನಾಚುತ್ತಾ ಹೇಳಿದಳು..ಮನಸ್ಸಿಗೆ ಬೇಸರವೆನಿಸಿದರೂ “ಒಳ್ಳೆಯದು..ಅವ್ನು ಮಂಗಳೂರಲ್ಲಿ ಇರಬೇಕಾದರೆ ಮುಂಬೈಗೆ ಯಾಕೆ..?!” ಪ್ರಶ್ನಿಸಿದ ಮನು..” ನಾಳೆ ಅಪ್ಪನ ಫ್ರೆಂಡ್ ಮಗನ ಜೊತೆ ಎಂಗೇಜ್ಮೆಂಟ್ ಇದೆ..ಇದನ್ನು ಸಮೀರ್’ಗೆ ಹೇಳಿದೆ ಅವನು ಮುಂಬೈಯಲ್ಲಿದ್ದುದರಿಂದ ಅಲ್ಲಿಗೆ ಬರಲು ಹೇಳಿದ..ಸೋ  ಎಂಗೇಜ್ಮೆಂಟ್ನಿಂದ ತಪ್ಪಿಸಲು ಈ ಮುಂಬೈ ಪಯಣ..” “ಮನೆಯಲ್ಲಿ ನಿಮ್ಮ ಲವ್ ವಿಷಯವನ್ನು ಹೇಳಬಹುದಲ್ವಾ..?!” “ಸಮೀರ್’ನ ಜಾತಿ ಬೇರೆಯಾದ್ದರಿಂದ ಹೇಳಲು ಹೆದರಿಕೆ..!!” “ಮುಂದೆ..?!” “ಮುಂದೇನು..ಮುಂಬೈ ತಲುಪಿದ ಮೇಲೆ ಸರಳವಾಗಿ ಮದುವೆಯಾಗುವುದಾಗಿ ಹೇಳಿದ್ದಾನೆ..”

ಮನುವಿಗೇಕೋ ಅದು ಸರಿಯೆನಿಸಲಿಲ್ಲ..ಸಾಕಿ ಸಲಹಿದ ಪ್ರೀತಿಯ ಹೆತ್ತವರಿಂದ ನಿನ್ನೆ ಮೊನ್ನೆ ಪರಿಚಯವಾಗಿ ಪ್ರೀತಿ ತೋರಿಸಿದ ಹುಡುಗ ಹೆಚ್ಚಾದನೇ..?! ಮನಸ್ಸು ಅನುಪಮಳಿಗೆ ಬುದ್ಧಿ ಹೇಳಬೇಕೆಂದರೂ ಬಾಯಿ ಬಿಡಲಿಲ್ಲ..ವಿಷ್ ಮಾಡಿದ..ಅನುಪಮ ಸ್ವಭಾವತಃ ಮಾತುಗಾತಿಯಾಗಿದ್ದರಿಂದ ಅವನೊಡನೆ ಮನಬಿಚ್ಚಿ ಮುಂಬೈ ತಲಪುವರೆಗೆ ಮಾತನಾಡಿದಳು..ಅವನೂ ಅಷ್ಟೇ..!! ಇಬ್ಬರೂ ಸಿಕ್ಕ ಸ್ವಲ್ಪ ಸಮಯದಲ್ಲಿ ಫ್ರೆಂಡ್ಸ್’ಗಳಾಗಿಬಿಟ್ಟಿದ್ದರು..

ಮುಂಬೈ ತಲುಪಿದ ನಂತರ ಇಬ್ಬರೂ ಬೇರೆ ಬೇರೆ ದಾರಿ ಹಿಡಿದಿದ್ದರು..ಆಮೇಲೆ ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಮನುವಿಗೆ ಒಮ್ಮೊಮ್ಮೆ ಅವಳ ನೆನಪಾಗುತ್ತಿದ್ದಳಷ್ಟೇ…

“ಅನುಪಮವ್ರೇ..ಎಲ್ಲಿ ನಿಮ್ಮ ಹಸ್ಬೆಂಡ್..?!” ಮನುವಿನ ಪ್ರಶ್ನೆಗೆ ಅನುಪಮ ಸಿಟ್ಟಿನಿಂದ ಉತ್ತರಿಸಿದಳು..”ನಂಗೆ ಅವನ ಹೆಸರು ಕೇಳೋಕೆ ಇಷ್ಟವಿಲ್ಲ..ಪ್ಲೀಸ್..!!” ಅವಳ ಕಂಗಳಲ್ಲಿ ಕಣ್ಣೀರು ಇಣುಕಿತ್ತು..

“ಯಾಕೆ ಏನಾಯಿತು..?!” “ಅದು..ಅದು..ಅವನು ನಂಗೆ ಮೋಸ ಮಾಡ್ಬಿಟ್ಟ..” ಎಂದು ಕಣ್ಣೀರನ್ನು ಒರೆಸುತ್ತಾ ಹೇಳಿದಳು..”ನಾನು ಮುಂಬೈ ಹೋದ ಮೇಲೆ ಅವನ ಅಸಲಿ ಮುಖದ ಪರಿಚಯವಾಗಿದ್ದು..ಹುಡುಗಿಯರನ್ನು ಆಕರ್ಷಿಸಿ ತನ್ನತ್ತ ಸೆಳೆದು ಅವರನ್ನು ದೊಡ್ಡ ಮೊತ್ತಕ್ಕೆ ಮಾರುವ ಒಬ್ಬ ಫ್ರಾಡ್ ಅವನು..!!” “ಹೌದಾ..ಮತ್ತೆ..ನೀವು..!!” ಮನುವಿಗೆ ಶಾಕ್ ಆಗಿತ್ತು..”ದೇವರ ದಯೆ..ನನಗೇನು ಆಗಿಲ್ಲ..ಸಮೀರ್’ನ ಜೊತೆ ಹೋಟೆಲ್ ತಲುಪಿದಾಗ ಅವನ ಕ್ರೂರ ಮುಖದ ಅರಿವಾಗಿದ್ದು..!!ಆಗಲೇ ಅವನಿಂದ ತಪ್ಪಿಸಿಕೊಂಡು ಪೋಲಿಸರಿಗೆ ಕಂಪ್ಲೇಟ್ ಕೊಟ್ಟೆ..ಆದರೆ ಏನೂ ಪ್ರಯೋಜನವಾಗಲಿಲ್ಲ..ಆ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದೆ ಬರುತ್ತಿರಬೇಕಾದೆ ದೇವರ ತರಹ ಡಾಕ್ಟರ್ ಸುಧಾಕರ್ ಶೆಟ್ಟಿ ಸಿಕ್ಕಿದರು..ಅವರ ಜೊತೆ ನನ್ನ ಕಥೆಯನ್ನು ಹೇಳಿಕೊಂಡೆ..ನನ್ನ ಅವಸ್ಥೆಗೆ ಮರುಕಗೊಂಡವರು ಈ ಆಸ್ಪತ್ರೆಗೆ ಕರೆದುಕೊಂಡು ಬಂದರು..ಸ್ವಲ್ಪ ದಿವಸಗಳಲ್ಲಿ ಅವರ ಗರಡಿಯಲ್ಲಿ ಪಳಗಿ ನರ್ಸ್ ಕೆಲಸಕ್ಕೆ ಬಡ್ತಿ ಪಡೆದೆ..” “ಮನೆಗೆ ಹೋಗಬೇಕಿತ್ತು..?!” “ಅದಾಗಲೇ ನಾನು ಮನೆಯವರ ಪಾಲಿಗೆ ಸತ್ತು ಹೋಗಿದ್ದೆ..ಮತ್ತೆ ಹೇಗೆ ಅಲ್ಲಿಗೆ ಹೋಗಿ ಮುಖ ತೋರಿಸಲಿ..!!” ಎಂದವಳು ಬಿಕ್ಕತೊಡಗಿದಳು..”ಅಯ್ಯೋ..ಅಳ್ಬೇಡ್ರೀ..ಸ್ಸಾರಿ..ನಿಮ್ಮ ಹಳೆಯ ಕಥೆಯನ್ನು ನೆನಪಿಸಿದ್ದಕ್ಕೆ..” ಎಂದ ಮನು ಏನು ಮಾಡಬೇಕೆಂದು ತಿಳಿಯದೆ..”ಪರವಾಗಿಲ್ಲ ಬಿಡಿ..ಇದೆಲ್ಲ ನನಗೆ ಅಭ್ಯಾಸವಾಗಿ ಹೋಗಿದೆ..” ಎಂದ ಅನುಪಮ ಬೆಡ್’ನ ಒಂದು ಬದಿಗೆ ಅವನನ್ನು ಒರಗಿಸಿ ಊಟವನ್ನು ನೀಡಿದಳು..ಮನು ಊಟ ಮಾಡಿದವನು ಅವಳು ನೀಡಿದ ಮಾತ್ರೆಗಳನ್ನು ನುಂಗಿದ..ತನ್ನ ಕೆಲಸ ಮುಗಿಸಿದ ಅನುಪಮ ಹೊರಟು ಹೋದ ಮೇಲೂ ಅವಳ ಬಗ್ಗೆಯೇ ಆಲೋಚಿಸಿಸುತ್ತಾ ಮಲಗಿದ..

  ಅನುಪಮ ಡಾಕ್ಟರ್ ಸುಧಾಕರ ಶೆಟ್ಟಿಯವರ ಬಳಿ ಮನುವಿನ ಕಂಡೀಷನ್ ಬಗ್ಗೆ ವಿಚಾರಿಸಿದಳು..ಅವಳು ನರ್ಸ್ ಆಗಿದ್ದರಿಂದ ಎಲ್ಲ ವಿಷಯವನ್ನು ಹೇಳಿದರು..” ಆ ಸ್ಪೋಟದ ಪರಿಣಾಮ ಮನು ಅವರ ಕಾಲುಗಳು ತನ್ನ ಶಕ್ತಿಯನ್ನು ಕಳೆದುಕೊಂಡಿದೆ..ಸೋ ಹಾಗಾಗಿ ಅವರಿಗೆ ಇನ್ನು ಮುಂದೆ ನಡೆಯಲು ಸಾಧ್ಯವಿಲ್ಲಮ್ಮ..ಈ ವಿಷಯವನ್ನು ಅವರಿಗೆ ಹೇಗೆ ಹೇಳಬೇಕೆಂದೇ ತಿಳಿಯುತ್ತಿಲ್ಲ..” ಅವಳಿಗೆ ಶಾಕ್ ಆಗಿತ್ತು..!! ಮನುವಿನ ತುಂಟತನದ ಸುಂದರ ವದನ ಅವಳ ಕಣ್ಮುಂದೆ ಬಂತು..!! ಆದರೆ ಎಂದಾದರೊಮ್ಮೆ ಈ ಸತ್ಯ ತಿಳಿಯದೆ ಹೋಗಲ್ಲ..ಅದಕ್ಕಿಂತ ಈಗಲೇ ಹೇಳುವುದು ಸೂಕ್ತವೆನಿಸಿತು..!!

“ನಾನೇ ಹೇಳುತ್ತೇನೆ ಡಾಕ್ಟರ್..!!” ಎಂದಳು..”ಓಕೆ..” ಎಂದು ಒಪ್ಪಿಗೆ ನೀಡಿದರು..ಪುನಃ ವಾರ್ಡ್’ಗೆ ಬಂದಾಗ ಮನು ನಿದ್ದೆಯಲ್ಲಿದ್ದ..ಅಲ್ಲೇ ಇದ್ದ ಚೇರಲ್ಲಿ ಕುಳಿತವಳು ಅವನ ಮುಖವನ್ನು ನೋಡುತ್ತಾ ಡಾಕ್ಟರ್ ಹೇಳಿದ ವಿಷಯವನ್ನು ಆಲೋಚಿಸುತ್ತಾ ಇದ್ದಳು ತಡ ರಾತ್ರಿಯವರಿಗೆ..!!

ಮುಂದುವರಿಯುವುದು….

Facebook ಕಾಮೆಂಟ್ಸ್

Vinod Krishna: ಸಾಫ್ಟ್’ವೇರ್ ಕಂಪೆನಿಯಲ್ಲಿ ಉದ್ಯೋಗದ ನಡುವಿನ ಬಿಡುವು..ಆ ಸಮಯದಿ ಬರವಣಿಗೆಯತ್ತ ಹೆಚ್ಚು ಒಲವು.. ತನ್ನದೇ ಶೈಲಿಯಲ್ಲಿ ಗೀಜಿ ರಚಿಸಲ್ಪಟ್ಟ ಕಥೆಗಳು ಹಲವು..ಅವುಗಳಲ್ಲಿ ಕಿರುಚಿತ್ರವಾದವುಗಳು ಕೆಲವು.. ಮಿಕ್ಕಂತೆ ಒಳ್ಳೆಯ ಪುಸ್ತಕಗಳನ್ನು ಓದುವುದು,ಸಿನೆಮಾ ವೀಕ್ಷಣೆ,ಹಾಡನ್ನು ಕೇಳುವುದು ಇತರ ಹವ್ಯಾಸಗಳು.. ದೇವರ ಸ್ವಂತ ನಾಡಿನ ಕಾಸರಗೋಡು ಜಿಲ್ಲೆಯ ಕುಂಟಂಗೇರಡ್ಕ ಎಂಬ ಪುಟ್ಟ ಊರು ಹುಟ್ಟೂರು.
Related Post