X

ಕಾಲಾಯ ತಸ್ಮೈ ನಮಃ!

ಇದು ಸ್ಮಾರ್ಟ್‍ಫೋನ್ ಯುಗ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹಲವು ತಯಾರಕರಿರುವುದರಿಂದ, ಅವರವರ ಬಜೆಟ್ಟಿಗೆ ತಕ್ಕಂತೆ, ಕೈಗೆಟಕುವ ದರದಲ್ಲಿ ಸ್ಮಾರ್ಟ್‍ಫೋನ್‍ಗಳು ದೊರೆಯುತ್ತಿವೆ. ಪರಿಣಾಮವಾಗಿ ಎಲ್ಲರ ಕೈಯಲ್ಲಿಯೂ ವಿಭಿನ್ನ ಸಾಮರ್ಥ್ಯದ ಸ್ಮಾರ್ಟ್‍ಫೋನ್‍ಗಳು ರಾರಾಜಿಸುತ್ತಿವೆ. ವಿಶೇಷವೆಂದರೆ, ಇಂತಿಪ್ಪ ಸ್ಮಾರ್ಟ್‍ಫೋನ್‍ಗಳನ್ನು ಉಪಯೋಗಿಸಲು, ಉಪಯೋಗಿಸುವ ವ್ಯಕ್ತಿಗಳು ಸ್ಮಾರ್ಟ್ ಅಗಿರಬೇಕೇನೆಂದು ಇಲ್ಲ. ಅಂತಹ ಷರತ್ತನ್ನು ಅದರ ತಯಾರಕರೂ ವಿಧಿಸಿಲ್ಲ.

ಸ್ಮಾರ್ಟ್ ಫೋನಿನ ನಿಜವಾದ ಸಾಮರ್ಥ್ಯದ ಪರಿಚಯವಾಗಬೇಕೆಂದರೆ, ಅದರ ಕಿರು ತಂತ್ರಾಂಶಗಳು(apps) ದೊರೆಯುವ ತಾಣವಾದ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್‌ಗೆ ಒಮ್ಮೆ ಭೇಟಿ ಕೊಡಬೇಕು. ಅಲ್ಲಿ ಯಾವ ತರಹದ ತಂತ್ರಾಂಶಗಳು(apps) ಇವೆ ಎನ್ನುವ ಬದಲು ಯಾವುದೆಲ್ಲಾ ಇಲ್ಲಾ, ಎನ್ನುವ ಪಟ್ಟಿ ಸಣ್ಣದಾಗಬಹುದೇನೋ? ನಮ್ಮನ್ನು ಬೆಳಿಗ್ಗೆ ಏಳಿಸುವುದೇ ಅಲರಾಂಗಳು(Wake up call) . ಯಾವ ರೀತಿ ಹಲ್ಲುಜ್ಜಬೇಕು ಎಂದು ಸಲಹೆ ಕೊಡಲು ’ಕ್ವಿಕ್ ಬ್ರಷ್’(Quick Brush) ಆಪ್. ಕೆಲವು ಫಿಟ್‍ನೆಸ್ ಆಪ್ಸ್(Fitness Apps)‌ಗಳು ಹೇಳುವ  ಪ್ರಕಾರ ಕುಳಿತಲ್ಲೇ ಜಾಗಿಂಗ್ ವ್ಯಾಯಾಮ ಮಾಡಬಹುದಂತೆ. ಈದಿನ ಮಾಡಬೇಕಾದ ಕೆಲಸ ಕಾರ್ಯಗಳೇನು ಎಂದು ಸ್ಮಾರ್ಟ್‍ಫೋನ್ ’ರಿಮೈಂಡರ್ಸ್’ ಗಳ ಮೂಲಕ ನಮಗೆ ಆಜ್ಞಾಪಿಸುತ್ತದೆ . ಶಿರಸಾವಹಿಸಿ ಪಾಲಿಸುವುದಷ್ಟೇ ನಮ್ಮ ಕೆಲಸ. ದಾರಿ ಯಾವುದಯ್ಯಾ? ಎಂದು ತೋರಿಸಲು ಗೂಗಲ್ ಮ್ಯಾಪ್ಸ್, ನಾವಿಗೇಶನ್’ಗಳಿವೆ. ಎಷ್ಟು ತಿನ್ನಬೇಕು ಎಂದು ಸೂಚಿಸಲು ’ಡಯೆಟ್ ಟ್ರಾಕರ್’(Diet Tracker) ಆಪ್ ಇದೆ. ಆರೋಗ್ಯ, ಹೃದಯ ಬಡಿತವನ್ನು ಲೆಕ್ಕ ಹಾಕಲು ಸ್ಮಾರ್ಟ್ ವಾಚ್‌ಗಳು ಬರುತ್ತಿವೆ. ಅಪರೂಪಕ್ಕೆ ಸಮಯ ಸಿಕ್ಕಾಗ ಆಟವಾಡಲೆಂದು ಲೆಕ್ಕವಿಲ್ಲದಷ್ಟು ಗೇಮ್ಸ್’ಗಳಿವೆ. ದಿನಕ್ಕೆ ಹಲವು ತಂತ್ರಾಂಶಗಳನ್ನು ಇದಕ್ಕೆ ಸೇರ್ಪಡೆಗೊಳಿಸುತ್ತಲೇ ಇದ್ದಾರೆ ಇ-ಜ್ಞಾನಿಗಳು.

ಸ್ಮಾರ್ಟ್‍ಫೋನ್‍ಗಳು ಹಲವು ರೀತಿಯಲ್ಲಿ ನಮ್ಮ ಕೆಲಸ ಕಾರ್ಯಗಳಿಗೆ, ದಿನ ನಿತ್ಯ ಉಪಯೋಗವಾಗುತ್ತಿದೆ ನಿಜ. ಮನುಷ್ಯನ ಜ್ಞಾಪಕ ಶಕ್ತಿ, ಯೋಚನಾ ಶಕ್ತಿಯನ್ನು ಬೇಡುವ ಹಲವು ಕಾರ್ಯವನ್ನು ಅದೇ ನಿರ್ವಹಿಸುತ್ತಿದೆ. ಇದೇ ರೀತಿ ಮುಂದುವರಿದರೆ ’ಹೋಮೋಸೆಫಿಯನ್ಸ್’ ವರ್ಗದ ವಿಶಿಷ್ಟ ಲಕ್ಷಣವಾದ ’ಯೋಚನಾ ಶಕ್ತಿ’ಯನ್ನು ಕಡಿಮೆಗೊಳಿಸಿ, ಮನುಷ್ಯನನ್ನು ಸಾಮಾನ್ಯ ಪ್ರಾಣಿಯಂತಾಗಿಸಬಹುದೆನೋ! ಈ ಸ್ಮಾರ್ಟ್‍ಫೋನ್‍ಗಳು ಮುಂದೆ ಭವಿಷ್ಯದಲ್ಲಿ. ಸೋಶಿಯಲ್ ನೆಟ್‍ವರ್ಕಿಂಗ್‍ ಸೈಟುಗಳಂತೂ ಉಪಯೋಗಕ್ಕಿಂತಲೂ ಹೆಚ್ಚಾಗಿ ಸಮಯವನ್ನು ಕೊಲ್ಲುವ ತಾಣಗಳಾಗಿ ಮಾರ್ಪಟ್ಟಿವೆ. ಹಳೆಯ ಸ್ನೇಹಿತ ಎದುರಿಗೆ ಸಿಕ್ಕಾಗ ಕೆಲವೊಮ್ಮೆ ಮುಖ ತಿರುಗಿಸಿಕೊಂಡು ಹೋಗುವ ನಾವು, ಯಾರೋ ಪರಿಚಯವಿಲ್ಲದವನಿಗೆ ’ಸ್ನೇಹಿತ ವಿನಂತಿ’(Friend Request) ಕಳುಹಿಸುತ್ತೇವೆ. ಪಕ್ಕದ ಮನೆ ಅಜ್ಜಿ ಎದುರು ಸಿಕ್ಕಾಗ ಮುಗುಳ್ನಗೆ ಬೀರದೆ ಮುಖ ಸಿಂಡರಿಸಿಕೊಂಡು ಹೋಗುವ ಹುಡುಗಿ, ಸ್ಮಾರ್ಟ್‍ಫೋನಿನೆದುರು ಸ್ವಂತೀ(Selfie)ಗೆ ಒಬ್ಬಳೇ ಹಲ್ಲು ಕಿಸಿಯುತ್ತಾಳೆ. ಕಾಲಾಯ ತಸ್ಮೈ ನಮಃ!

ತಂತ್ರಜ್ಞಾನದೊಟ್ಟಿಗೆ ನಮ್ಮ ಸ್ವಂತ ಯೋಚನಾ ಶಕ್ತಿಯನ್ನೂ ದಿನ ನಿತ್ಯದ ಕಾರ್ಯದಲ್ಲಿ ಬಳಸಿಕೊಳ್ಳಬೇಕಿದೆ. ಸ್ಮಾರ್ಟ್‍ಫೋನ್‍ ಬಳಸುವುದರ ಜೊತೆಗೆ, ಅದನ್ನು ಉಪಯೋಗಿಸುವ ನಾವೂ ಸ್ಮಾರ್ಟ್ ಆಗಿರಲು ಯತ್ನಿಸೋಣ.

*****
ಅಭಿಜಿತ್ ಎಸ್ಸಾರ್
ಅಡ್ಯನಡ್ಕ

abhijithsr3@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post