ರಾಜಕೀಯ ಈ ಮಟ್ಟಕ್ಕೆ ಇಳಿಯಬಾರದಿತ್ತು. ಸಾವಿನ ಮನೆಯನ್ನೇ ರಾಜಕೀಯಕ್ಕೆ ಬಳಸಿಕೊಳ್ಳುವಂತ ನಾಯಕರು ನಮ್ಮ ನೆಲದಲ್ಲಿ ಹುಟ್ಟಬಾರದಿತ್ತು. ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ವಿರೋಧ ಪಕ್ಷಗಳು ಏನು ಮಾಡುತ್ತಿವೆ ಎಂದು ಯಾರಾದರೂ ಕೇಳಿದರೆ, ಅದಕ್ಕೆ ಒಂದೇ ಮಾತಿನಲ್ಲಿ ಉತ್ತರ ಹೇಳುವುದಾದರೆ ಅದು – ಸಾವಿನ ರಾಜಕೀಯ. ದಾದ್ರಿಯಾಯಿತು, ವೇಮುಲಾ ಆಯಿತು, ಉತ್ತರ ಪ್ರದೇಶದ ಘಟನೆ ಆಯಿತು, ಆಪ್ rally ಯಲ್ಲಿನ ರೈತನ ಆತ್ಮಹತ್ಯೆಯಾಯಿತು, ಗುಜರಾತಿನ ದಲಿತರ ಸಾವಿನ ಘಟನೆ ಆಯಿತು, ಈಗ ದೆಹಲಿಯ ಯೋಧನ ಆತ್ಮಹತ್ಯೆಯ ವಿಷಯ – ಇವರಿಗೆ ರಾಜಕೀಯ ಮಾಡಲು ಸಾವಿನ ಮನೆಯೇ ಬೇಕೆ? ಅದೂ ಎಲ್ಲ ಕಡೆಯೂ ಅಲ್ಲ ಕೇವಲ ಎಲ್ಲಿ ರಾಜಕೀಯ ಲಾಭವಿದೆಯೋ ಅಲ್ಲಿ ಮಾತ್ರ! ಕರ್ನಾಟಕದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರು, ಅವರ ಕುಟುಂಬವನ್ನು ಸಂತೈಸಲು ಯಾವ ರಾಹುಲ್ ಗಾಂಧಿ ಬಂದಿದ್ದರು? ಯಾವ ಅರವಿಂದ ಕೇಜ್ರಿವಾಲ ಬಂದಿದ್ದರು? ಉರಿಯಲ್ಲಿ, ಪಠಾಣ ಕೋಟ್ ದಲ್ಲಿ ನಮ್ಮ ಯೋಧರು ಹುತಾತ್ಮರಾದರು. ಆ ಯೋಧರ ಕುಟುಂಬವನ್ನು ಸಂತೈಸಲು ಯಾವ ಪಾರ್ಟಿ, ಯಾವ ನಾಯಕರು ಹೋಗಿದ್ದರು ಹೇಳಿ ನೋಡೋಣ? ಅವರಿಗೆ ಗೊತ್ತು, ಹುತಾತ್ಮ ಯೋಧರ ಮನೆಗೆ ಹೋದರೆ ವೋಟ್ ಬ್ಯಾಂಕ್ ಪೊಲಿಟಿಕ್ಸ್ ಗೆ ಏನೂ ಸಿಗುವುದಿಲ್ಲ ಎಂದು. ಇವರಿಗೆ ಒಂದು ಶವ ಬೇಕು ಅಷ್ಟೇ. ಯಾವ ತರಹದ ಶವ ಅಂದರೆ ಅದು ರಾಜಕೀಯಕ್ಕೆ ಪೂರಕವಾಗಿರಬೇಕು, ವೋಟ್ ಬ್ಯಾಂಕಿಗೆ ಠೇವಣಿ ಆಗಿರಬೇಕು. ಇಂತಹ ಒಂದು ಶವ ಬೀಳಲು ಕಾಯುತ್ತಿರುತ್ತಾರೆ.
ಇಂದು ಒಬ್ಬ ಯೋಧನ ಆತ್ಮಹತ್ಯೆಯನ್ನು ಇವರು ತಮ್ಮ ರಾಜಕೀಯ ನಾಟಕಕ್ಕೆ ಸ್ಟೇಜ್ ಆಗಿ ಮಾಡಿಕೊಂಡರಲ್ಲ ಇದಕ್ಕಿಂತ ಕೆಳಮಟ್ಟದ ರಾಜಕೀಯ ಏನು ಉಳಿದಿದೆ? ಸಾವು ಯಾರದ್ದೇ ಆಗಲಿ ಆ ನೋವು ಕಲ್ಪನಾತೀತ. ಆ ನೋವು ಏನು ಅಂತ ತಮ್ಮ ಆಪ್ತರನ್ನು ಕಳೆದುಕೊಂಡವರಿಗೇ ಗೊತ್ತು. ಅಂತಹ ಸಂದರ್ಭದಲ್ಲಿ ಹೋಗಿ ತಮ್ಮ ರಾಜಕೀಯ ಭಾವುಟ ಹಾರಿಸಿ ಭಾಷಣ ಮಾಡುವುದು ಯಾವ ಮನ? ಜಾತಿ, ಮತ, ಧರ್ಮದ ಹೆಸರಲ್ಲಿ ಇಷ್ಟು ವರ್ಷ ರಾಜಕೀಯ ಮಾಡಿದ್ದಾಯಿತು. ಯೋಧರ ರಕ್ತ ಪವಿತ್ರವಾದದ್ದು, ಅವರನ್ನೂ ರಾಜಕೀಯಕ್ಕೆ ಎಳೆದು ಅವರ ರಕ್ತ ಕೆದಕುವ ಹುಚ್ಚು ಯಾಕೆ ಈ ಮೂರ್ಖ ನಾಯಕರಿಗೆ? LoC ಯಲ್ಲಿ ಪ್ರತಿ ದಿನವೂ ಸಾಮಾನ್ಯ ನಾಗರೀಕರು ಸಾಯುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಧ್ವನಿ ಎತ್ತಲು ಗಂಡೆದೆಯ ನಾಯಕತ್ವ ಈ ನಾಯಕರಿಗೆ ಇದೆಯೇ? ನಮ್ಮ ಯೋಧರು ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದಕರನ್ನು ಮುಗಿಸಿದಾಗ ಅವರನ್ನು ಹೊಗಳುವ ಬದಲು ಇದೇ ಕೇಜ್ರಿವಾಲ್ ಅದಕ್ಕೆ ಸಾಕ್ಷಿ ಕೇಳಿದ್ದು, ಇದೇ ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಸಂಶಯ ವ್ಯಕ್ತ ಪಡಿಸಿದ್ದು. ಇವರಿಗೆ ಇಂದು ಯೋಧನ ಮನೆಯ ಮುಂದೆ ಬಂದು ನಿಲ್ಲಲು ಯಾವ ನೈತಿಕವಾದ ಹಕ್ಕು ಇದೆ? ರಾಮ್ ಕಿಶನ್ ಆತ್ಮಹತ್ಯೆ OROP ಯೇ ಕಾರಣ ಆಗಿದ್ದರೆ ಅದಕ್ಕೆ ಮೊದಲ ಹೊಣೆಗಾರ ರಾಹುಲ್ ಗಾಂಧಿ. ಅಜ್ಜಿ OROP ಯ ಪ್ರಸ್ತಾಪವನ್ನೇ ಕಿತ್ತೊಗೆದಿದ್ದಳು, ತಂದೆ ಎಂದೂ OROP ಬಗ್ಗೆ ಮಾತಾಡಲೇ ಇಲ್ಲ, ತಾಯಿ ಹತ್ತು ವರ್ಷಗಳ ಯುಪಿಎ ಸರ್ಕಾರದ ಸಮಯದಲ್ಲಿ ಎರಡೆರಡು ಬಾರಿ OROP ಕೊಡುವುದು ಸಾಧ್ಯವೇ ಇಲ್ಲವೆಂದು ನಿವೃತ್ತ ಸೈನಿಕರನ್ನು ಸತಾಯಿಸಿ ವಾಪಾಸ್ಸು ಕಳುಹಿಸಿ ಬಿಟ್ಟಿದ್ದಳು. ಇಷ್ಟೆಲ್ಲ ಆದಮೇಲೂ ರಾಹುಲ್ ಗಾಂಧಿ OROP ಹೆಸರಲ್ಲಿ ಒಬ್ಬ ದೇಶದ ಯೋಧನ ಸಾವಿನ ಹಿಂದೆ ರಾಜಕೀಯ ಮಾಡುವುದಕ್ಕೆ ಮನಸ್ಸು ಮಾಡುತ್ತಾರಲ್ಲ…ಅಬ್ಬಾ ಯಾವ ಮಟ್ಟಕ್ಕೆ ಇಳಿದಿದೆ ನೀಚತನ ಎನಿಸಿಬಿಟ್ಟಿತು!
ಆಮ್ ಆದಮಿ ಪಾರ್ಟಿಯಾಗಲಿ, ಕಾಂಗ್ರೆಸ್ ಆಗಲಿ ಇವರೆಲ್ಲ ಯಾರದೋ ಮನೆಯ ಸೂರ್ಯಾಸ್ತದಲ್ಲಿ ತಮ್ಮ ಸೂರ್ಯೋದಯವನ್ನು ಕಂಡುಕೊಳ್ಳುವ ರಾಜಕೀಯ ದಲಾಲರು. ಇವರಿಗೆ ಭಾರತ ಇಂದು ಪಾಕಿಸ್ತಾನವನ್ನು ಅಂತರಾಷ್ಟ್ರೀಯ ಹೇಗೆ ಮೂಲೆಗುಂಪಾಗಿ ಮಾಡಿದೆಯಲ್ಲ ಅದನ್ನು ಸಹಿಸಲಾಗುತ್ತಿಲ್ಲ. ಕಾಶ್ಮೀರ ಸಮಸ್ಯೆ ನಿಧಾನವಾಗಿ ಬಗೆಹರಿಯುತ್ತಿರುವುದನ್ನು ನೋಡಲಾಗುತ್ತಿಲ್ಲ. ಕಾಂಗ್ರೆಸ್ ವಕ್ತಾರ ಸುರ್ಜೆವಾಲ ಎನೆನ್ನುತ್ತಾರೆ ಗೊತ್ತಾ? ” ನೀವು ಎಷ್ಟೇ ಸರ್ಜಿಕಲ್ ದಾಳಿ ನಡೆಸಿ, ಯೋಧರ ಬಗ್ಗೆ ಕಾಳಜಿ ತೋರುವುದನ್ನು ನಿಲ್ಲಿಸದಿರಿ”. ಯೋಧನ ಆತ್ಮಹತ್ಯೆಗೂ ಸರ್ಜಿಕಲ್ ಸ್ಟ್ರೈಕ್ ಗೂ ಏನು ಸಂಬಂಧ ಬಾಸ್? ಇವತ್ತು ಕಾನೂನನ್ನು ಮೀರಿ, ಅನುಮತಿ ಪಡೆಯದೆ, ಜನರ ದಿನನಿತ್ಯದ ಜೀವನವನ್ನು ಅಸ್ತವ್ಯಸ್ತ ಮಾಡಿ ರಾಜಧಾನಿಯಲ್ಲಿ ಕ್ಯಾಂಡಲ್ ಮಾರ್ಚ್ ಮಾಡುತ್ತಿದ್ದಾರೆ. ಜೈಲಿಗೆ ಹೋಗುವ ಹೆಸರಿನಲ್ಲಿ ಹೀರೋಗಿರಿ ಮೆರೆಯುತ್ತಿದ್ದಾರೆ. 1984ರ ದಂಗೆಯಲ್ಲಿ ಸಾವಿರಾರು ಸಿಖ್ಖರು ಹತ್ಯೆಗೊಳಗಾದಾಗ ಇವರು ಎಲ್ಲಿ ಹೋಗಿದ್ದರು? 26/11 ಮುಂಬೈನಲ್ಲಾದ ಭಯೋತ್ಪಾದಕರ ದಾಳಿಯಲ್ಲಿ ಹತರಾದ ನಾಗರೀಕರ ಮನೆಗೆ ಯಾವುದೇ ಕಾಂಗ್ರೆಸ್ ನಾಯಕರು ಹೋದ ದಾಖಲೆ ಇದೆಯೇ ಅಥವಾ ಕ್ಯಾಂಡಲ್ ಲೈಟ್ ಮಾರ್ಚ್ ನೆಡೆಸಿದ್ದರೆ? ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಆತ್ಮಹತ್ಯೆ ಮಾಡಿಕೊಂಡ ರಾಮ್ ಕಿಶನನ್ನು ಶಹೀದ್ ಭಗತ್ ಸಿಂಗ್ ಗೆ ಹೋಲಿಸುತ್ತಾನೆ. ಮೂರ್ಖತನಕ್ಕೆ ಮಿತಿಯೇ ಇಲ್ಲವೇ? ಸತ್ತಿರುವವರು ಅಪ್ಪನೋ ಅಥವಾ ಮಗನೋ ಎನ್ನುವುದು ಗೊತ್ತಿಲ್ಲದೇ ಹೋರಾಟದ ನಾಟಕವಾಡುವ ರಾಹುಲ್ ಗಾಂಧಿಯನ್ನು ನಂಬಬೇಕೇ? ಸಾವಿನ ಮನೆಯ ಮುಂದೆ ಹೋಗಿ ನಿಂತು ನಗುತ್ತಾ, ಫೋನಿನಲ್ಲಿ ಮಾತನಾಡುತ್ತಾ, ಜಾಲಿಯಾಗಿ ಖುಷಿ ಖುಷಿಯಲಿ ಪತ್ರಕರ್ತರಿಗೆ ಉತ್ತರಿಸುವ ಮುಟ್ಟಾಳರನ್ನು ನೋಡಿ ಸಹಿಸಿಕೊಳ್ಳಬೇಕೆ? ಆಸ್ಪತ್ರೆಯ ಯಾವ ಜಾಗದಲ್ಲಿ ಪ್ರವೇಶ ನಿರ್ಬಂಧಿತವಾಗಿದೆಯೋ ಅದೇ ಜಾಗಕ್ಕೆ ಹೋಗಬೇಕು ಎನ್ನುತ್ತಾ ದರ್ಪ ತೋರುವವಂತಹ ಕೇಜ್ರಿವಾಲರಂತವರನ್ನು ಸುಮ್ಮನೆ ಬಿಡಬೇಕೆ? ಬಿಟ್ಟರೂ ಹೋಗದೆ ಪೋಲಿಸ್ ಸ್ಟೆಷನ್ ನಲ್ಲಿ ಕೂತು ಟ್ಟಿಟ್ ಮಾಡುವ ಸುಳ್ಳು, ಕಪಟಿ ನಾಯಕರನ್ನು ಮತ್ತೆ ಮತ್ತೆ ಗೆಲ್ಲಿಸಿ ತರಬೇಕೆ?
ಆತ್ಮಹತ್ಯೆಗೆ ಶರಣಾದ ಯೋಧನ ಕುಟುಂಬಕ್ಕೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ಕೋಟಿ ರೂಪಾಯಿ ಪರಿಹಾರ ಕೊಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಇರಲಿ, ಆದರೆ ಇದೇ ಆಪ್ ಧರಣಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರಾಜಸ್ಥಾನದ ರೈತ ಗಜೇಂದ್ರ ಸಿಂಗ್ ರಜಪೂತ್ ಅವರ ಕುಟುಂಬಕ್ಕೆ ಆಪ್ ಸರ್ಕಾರ ಎಷ್ಟು ಪರಿಹಾರ ನೀಡಿದೆ? ಅವನದ್ದೂ ಕೂಡ ಜೀವ ಅಲ್ಲವೇ? ಸರ್ಕಾರದ ವೈಫಲ್ಯದಿಂದ ದೆಹಲಿಯಲ್ಲಿ ಹಬ್ಬಿದ ಡೆಂಗ್ಯೂ ಹಾಗೂ ಮಲೇರಿಯಾದಲ್ಲಿ ಸತ್ತವರಿಗೆ ಎಷ್ಟು ಪರಿಹಾರ ಧನ ಕೊಟ್ಟಿದ್ದೀರಿ? ದೀಪಾವಳಿಯ ನಂತರ ದೆಹಲಿಯ ವಾಯುಮಾಲಿನ್ಯದ ಸ್ಥಿತಿಗತಿ ಮುಖ್ಯಮಂತ್ರಿಗೆ ತಿಳಿದಿಲ್ಲ. ಜಗತ್ತಿನಲ್ಲೇ ಹೆಚ್ಚು ಕುಲುಷಿತ ಹವಾಮಾನ ದೆಹಲಿಯ ವಾತಾವರಣದಲ್ಲಿದೆ. ಅದರಿಂದ ಪ್ರತಿ ದಿನ ಎಷ್ಟು ಮಂದಿ ಸಾಯುತ್ತಾರೋ ಲೆಕ್ಕವಿಲ್ಲ. ಆ ವಿಷಪೂರಿತ ಗಾಳಿಯನ್ನು ಸೇವಿಸುತ್ತಿರುವ ಹಸುಳೆಗಳು ಮಾಡಿದ ತಪ್ಪಾದರೂ ಏನು? ಇವರ ಬಗ್ಗೆ ಒಮ್ಮೆಯಾದರೂ ಅರವಿಂದ್ ಕೇಜ್ರಿವಾಲ್ ಆಗಲಿ, ರಾಹುಲ್ ಗಾಂಧಿ ಆಗಲಿ ವಿಚಾರ ಮಾಡಿದ್ದಾರೆಯೆ? ಅವರಿಗೆ ಪರಿಹಾರ ಕೊಡಲು ಮುಂದು ಬಂದಿದ್ದಾರೆಯೆ? ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದಾರೆಯೇ? ಇಂದು ರಾಹುಲ್ ಗಾಂಧಿ, ಅರವಿಂದ ಕೆಜ್ರಿವಾಲ್ ನಂತಹ ನಾಯಕರು ನಮ್ಮ ಮುಂದೆ ದೊಡ್ಡ ಸವಾಲಾಗಿ ನಿಂತಿದ್ದಾರೆ. ನೆನಪಿರಲಿ, ಅವರು ನಮ್ಮ ಒಗ್ಗಟ್ಟನ್ನು ಒಡೆಯಲು ಯಾವ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು. ತಮ್ಮ ರಾಜಕೀಯ ಆಕಾಂಕ್ಷೆ ತೀರಿಸಿಕೊಳ್ಳಲು ಭಯೋತ್ಪಾದಕರನ್ನೂ ದೇಶಪ್ರೇಮಿಗಳು ಎನ್ನುತ್ತ ಜೆ ಎನ್ ಯು ಗೆ ಹೋಗಿ ಹೊಗಳಿ ಬಂದವರು ಇವರು. ತಮ್ಮ ಭವಿಷ್ಯಕ್ಕಾಗಿ ಇಡೀ ದೇಶದ ಯುವಕರ, ಹೆಂಗಸು-ಮಕ್ಕಳ, ವೃದ್ಧರ ಪ್ರಾಣವನ್ನು ಒತ್ತೆ ಇಡಲೂ ಹೇಸದವರು. ಇವರು ಏನು ಮಾಡಬಲ್ಲರೋ ಊಹಿಸಲು ಸಾಧ್ಯವಿಲ್ಲ. ಇದನ್ನು ಬೇಗ ಅರ್ಥ ಮಾಡಿಕೊಂಡಷ್ಟು ನಮಗೆಲ್ಲ ಒಳ್ಳೆಯದು. ದಾದ್ರಿಯ ಮಾಂಸದ ರಾಜಕೀಯ, ವೇಮುಲಾನ ಜಾತಿ ರಾಜಕೀಯ, ಗುಜರಾತಿನ ಧರ್ಮದ ರಾಜಕೀಯ, ಅಥವಾ ರಾಮ್ ಕಿಶನ್ ಆತ್ಮಹತ್ಯೆಯನ್ನು ಬಳಸಿಕೊಂಡ ಸೈನಿಕರೊಡನೆ ರಾಜಕೀಯ ನಮಗೆ ಬೇಡ. ನಮಗೆ ಬೇಕಾಗಿರುವುದು ವಿಕಾಸ. ಜಗತ್ತು ಮುಂದೆ ಹೋಗುತ್ತಿದೆ, ನಾವು ಮತ್ತೆ ಹಿಂದಕ್ಕೆ ಹೋಗುತ್ತಿದ್ದೇವೆ. ವಿಕಾಸದ ರಾಜಕೀಯ ಮಾಡೋಣ, ಅದರಲ್ಲಿ ನಮ್ಮೆಲರ ಹಿತವಿದೆ. ಯೋಧನ ಆತ್ಮಹತ್ಯೆಯ ಹಿಂದಿರುವ ಕಾರಣವನ್ನು ಅರಿಯಲು ಯೋಗ್ಯ ವಿಚಾರಣೆ ನಡೆಸಬೇಕಾಗಿದೆ ಆದರೆ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುವಷ್ಟು, ಅದೂ ಒಬ್ಬ ಯೋಧನ ಸಾವನ್ನು ರಾಜಕೀಯಕ್ಕೆ ಲಿಂಕ್ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಅತೀ ಖಂಡನೀಯವಾದುದ್ದು!
ಕಾರ್ಟೂನ್: ಮನೋಜ್ ಕುರೀಲ್
Facebook ಕಾಮೆಂಟ್ಸ್